ಬಾನುಲಿಯೆಂಬ ಚೆಂದದ ಅನುಭೂತಿ ಅಂದಿಗೂ, ಇಂದಿಗೂ...
ತುಂಬ ಜನ ಹೇಳ್ತಾರೆ ನಾವು ಬೆಳಗ್ಗೆ ರೇಡಿಯೋ ಇಟ್ಟರೆ ಗಡಿಯಾರವೇ ಬೇಡ. ಪ್ರದೇಶ ಸಮಾಚಾರ 7.05ಕ್ಕೆ, ವಾರ್ತೆಗಳು 7.35ಕ್ಕೆ, ಚಿತ್ರಗೀತೆ 7.45ಕ್ಕೆ, ಸಮಾಚಾರ್ ಪ್ರಭಾತ್ 8.00 ಗಂಟೆಗೆ ಹೀಗೆ... ಮತ್ತೆ ಕೆಲವರು ವಾರ್ತೆ ಕೇಳೋದಕ್ಕೆ, ಚಿತ್ರಗೀತೆ, ಕೇಳೋದಕ್ಕೆ, ತಾಳಮದ್ದಳೆ ಕೇಳುವುದಕ್ಕೆ... ಹೀಗೆ ದಶಕಗಳಿಂದ ರೇಡಿಯೋಗೆ ನಿಯತ್ತಿನ ಕೇಳುಗರಾಗಿರುವ ಮಂದಿಯ ಆಲಿಸುವಿಕೆಗೆ ಸಾಕಷ್ಟು ಕಾರಣಗಳಿರುತ್ತವೆ.
5ಜಿ ಯುಗದ ಹೊಸ್ತಿಲಲ್ಲಿರುವವರೂ ಸ್ಮಾರ್ಟ್ ಫೋನ್ ಕೈಯಲ್ಲಿ ಹಿಡ್ಕೊಂಡ್ರೂ ರೇಡಿಯೋ ಕೇಳುವುದು ಬಿಡದಿರುವುದರ ಹಿಂದಿನ ನಿಯತ್ತಿಗೆ ಕಾರಣ, ಅದೊಂದು ತವರು ಮನೆಯ ಬಾಂಧವ್ಯದ ಹಾಗೆ, ಪೇಪರು, ಟಿ.ವಿ., ಮೊಬೈಲು ಬಿಡಿ, ಕರೆಂಟೇ ಕಾಣದಿದ್ದ ಕಾಲದಲ್ಲೂ ಜಗತ್ತನ್ನು ತೋರಿಸಿಕೊಟ್ಟ ಪುಟ್ಟ ಪೆಟ್ಟಿಗೆ ಮಾತ್ರವಲ್ಲ, ಅದೊಂದು ಬ್ರಹ್ಮಾಂಡವೆಂಬ ಬಾಂಧವ್ಯ....
ಅಡುಗೆ ಕೋಣೆಯಲ್ಲಿ, ಅಂಗಳದಲ್ಲಿ, ಪಡಸಾಲೆಯಲ್ಲಿ, ಅಂಗಡಿಯಲ್ಲಿ, ಹೋಟೇಲಿನಲ್ಲಿ, ಕಾರಿನಲ್ಲಿ, ತೋಟದಲ್ಲಿ, ಮಂಚದ ಮಗ್ಗುಲಲ್ಲಿ, ಪೆಟ್ರೋಲ್ ಬಂಕುಗಳಲ್ಲಿ, ಬಸ್ಸುಗಳಲ್ಲಿ, ಟ್ಯಾಕ್ಸಿಗಳಲ್ಲಿ ರೇಡಿಯೋದ ನಾನಾ ಅವತಾರಗಳು ಅಂದಿಗೂ ಇದ್ದವು, ಇಂದಿಗೂ ಇವೆ.
ಸರಳವಾಗಿ, ಅನಾಮಧೇಯನಾಗಿ, ನಿನ್ನಷ್ಟಕ್ಕೇ ನೀನು ಸಹಜವಾಗಿ ಇದ್ದಾಗ ಸಂತೋಷದಿಂದಿರುತ್ತೀಯಾ ಅಂದಿದ್ದಾರಂತೆ ಜಿಡ್ಡು ಕೃಷ್ಣಮೂರ್ತಿ ಅವರು. ಈ ಮಾತು ಕೇಳಿದಾಗ ನೆನಪಾಗಿದ್ದು ರೇಡಿಯೋ.
ಹೌದಲ್ವೇ...
ಎಲ್ಲಿಯೋ ಇರುವ ಸ್ಟೇಷನ್, ಎಲ್ಲಿಯೋ ಇರುವ ಸ್ಟುಡಿಯೋ, ಇನ್ನೆಲ್ಲೋ ಇರುವ ಕೇಳುಗ, ಮುಖ ಕಾಣುವುದಿಲ್ಲ, ಚಿತ್ರ ಮೂಡುವುದಿಲ್ಲ, ಕೇವಲ ಧ್ವನಿ... ಧ್ವನಿ... ಧ್ವನಿ... ಧ್ವನಿಯಲ್ಲೇ ಎಲ್ಲವನ್ನೂ ಕಟ್ಟಿಕೊಡುವ ಈ ಸಾಮರ್ಥ್ಯ ತಲೆಮಾರುಗಳನ್ನೇ ದಾಟಿ ಬಂದಿದೆ. ಇಂದು ನಿನ್ನೆಯ ತಂತ್ರಜ್ನಾನವಲ್ಲ. ಎಲ್ಲಿಯೋ ಅಜ್ನಾತರಂತೆ ಮಾತನಾಡುವ ಧ್ವನಿಗಳು ಇನ್ನೆಲ್ಲಿಯೋ ಇರುವ ಲಕ್ಷ ಲಕ್ಷ ಮಂದಿಯನ್ನು ತಲಪುವ ಸರಳ ಸಾಧ್ಯತೆ... ವಿಶೇಷ.
ಬೇರೆ ಕೆಲಸಕ್ಕೆ ಅಡ್ಡಿ ಮಾಡುವುದಿಲ್ಲ, ಕರೆಂಟು ಹೋದರೆ ಮಾತು ನಿಲ್ಲಿಸುವುದಿಲ್ಲ, ವೈಭವ, ಉತ್ಪ್ರೇಕ್ಷೆಗಳಿಲ್ಲ. ಸಮಯವನ್ನು ಯಾವತ್ತೂ ಮೀರುವುದಿಲ್ಲ, ತಡವಾಗುವುದಿಲ್ಲ, ಬೇಗ ಮಾತು ಶುರು ಮಾಡುವುದಿಲ್ಲ ಎಂಬುದೇ ರೇಡಿಯೋದ ಹೆಗ್ಗಳಿಕೆ. ಪುಟ್ಟದಾದ ಎರಡು ಬ್ಯಾಟರಿ ಇದ್ದರೆ ತಿಂಗಳ ಕಾಲ ಕೇಳಬಹುದು, ನಿಮ್ಮ ಮೊಬೈಲಿನಲ್ಲೂ ಕಿವಿಗೊಡಬಹುದು, ಕಾರಿನಲ್ಲೂ ಪ್ಲೇ ಮಾಡಬಹುದು ಎಂಬುದು ಪ್ಲಸ್ ಪಾಯಿಂಟ್. ಈಗ ಆಕಾಶವಾಣಿಯ ಆಪ್ ಡೌನ್ ಲೋಡ್ ಮಾಡಿದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಭಾರತದ ಬಹುತೇಕ ಎಲ್ಲಾ ಆಕಾಶವಾಣಿಯ ಕೇಂದ್ರಗಳನ್ನೂ ಅದೇ ಸಮಯಕ್ಕೆ ನೇರವಾಗಿ ಆಲಿಸಬಹುದು ಎಂಬುದು ತಾಂತ್ರಿಕ ಸಮಕಾಲೀನತೆಗೆ ಸಾಕ್ಷಿಯೂ ಹೌದು.
....
ತುಂಬ ಮಂದಿಗೆ ರೇಡಿಯೋ ಕಾಡಲು ಕಾರಣ ಬಾಲ್ಯದ ನೆನಪುಗಳಿಗೆ ರೇಡಿಯೋ ಹಾಕಿಕೊಟ್ಟ ಕೊಂಡಿ. ಪುಟ್ಟ ಮಗು ಅಳುವಾಗಲೇ ರೇಡಿಯೋದಲ್ಲಿ ಬರುವ ಶಾಸ್ತ್ರೀಯ ಸಂಗೀತವೋ, ಚಿತ್ರಗೀತೆಗೋ ಅಳು ನಿಲ್ಲಿಸುವ ಶಕ್ತಿ ಇತ್ತು. ಮತ್ತೆ ದೊಡ್ಡದಾಗುತ್ತಾ ಬಂದ ಹಾಗೆ ಆ ಚಿತ್ರಗೀತೆ, ಕೋರಿಕೆ, ವಾರ್ತೆ, ಪ್ರದೇಶ ಸಮಾಚಾರ, ಸಂಸ್ಕೃತ ವಾರ್ತೆ, ರಸ ವಾರ್ತೆ.... ಹೀಗೆ ಇಂದಿಗೂ ಬದಲಾಗದ ಅದೇ ಶೀರ್ಷಿಕೆಗಳ ಕಾರ್ಯಕ್ರಮಗಳು ದೊಡ್ಡವರಾಗುತ್ತಾ ಬಂದ ಹಾಗೆ ನಮಗರಿವಿಲ್ಲದೇ ನಮ್ಮನ್ನು ಎಜುಕೇಟ್ ಮಾಡುತ್ತಾ ಬಂದವು.
ಮನೆಗೆ ಪೇಪರು ಹಾಕಿಸುತ್ತಿದ್ದ ಕಾಲವಲ್ಲ, ಮನೆಯಲ್ಲಿ ಟಿ.ವಿ. ವಗೈರೆ ಇರಲಿಲ್ಲ, ಕಾರಣ ಮನೆಗೆ ಕರೆಂಟಿನ ಸಂಪರ್ಕವೇ ಇರಲಿಲ್ಲ. ಹಳ್ಳಿಗಾಡಿನ ಗುಡ್ಡದ ಕೊರಕಲಿನ ತೋಟದ ನಡುವಿನ ಪುಟ್ಟ ಮನೆಗಳ ಹಜಾರಕ್ಕೆ ಹೊರ ಜಗತ್ತಿನ ಅಷ್ಟೂ ವರ್ತಮಾನಗಳನ್ನು ತಂದು ಸುಮಧುರವಾಗಿ ತಂದು ಕಟ್ಟಿಕೊಡುತ್ತಿದ್ದ ಅಚ್ಚರಿಯ ಪೆಟ್ಟಿಗೆ ರೇಡಿಯೋ ಎಂಬ ಕಾರಣಕ್ಕೆ ಮತ್ತೆಷ್ಟೋ ವರ್ಷಗಳಾದರೂ ರೇಡಿಯೋ ಮರೆಯಲಾಗದೆ ಚಿತ್ತಭಿತ್ತಿಯಲ್ಲಿ ಗಟ್ಟಿಯಾಗಿ ಕುಳಿತಿರುವುದು....
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಡಾ.ರಾಜ್ ಕುಮಾರ್, ಪಿ.ಸುಶೀಲಾ, ಕೆ.ಜೆ.ಯೇಸುದಾಸ್... ಇವರೆಲ್ಲ ಅಕ್ಕಪಕ್ಕದ ಮನೆಯವರೇನೋ ಎಂಬಂತೆ ಪ್ರತಿನಿತ್ಯ ಇವರ ಹೆಸರುಗಳನ್ನು ಕೇಳ್ತಾ ಕೇಳ್ತಾ ಬೆಳೆದಾಗ ಇವರೆಲ್ಲ ಚಿಕ್ಕಂದಿನಿಂದಲೇ ನಮ್ಮ ಪರಿಚಿತರೇನೋ ಎಂಬಂತೆ ಭಾಸವಾಗುತ್ತದೆ... ಅದನ್ನು ಆಗಿಸಿದ್ದು ರೇಡಿಯೋ. ಈಗ ... ಚಿತ್ರದ ಗೀತೆ, ಸಾಹಿತ್ಯ ಚಿ.ಉದಯಶಂಕರ್, ಹಾಡಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಎಸ್.ಜಾನಕಿ, ಸಂಗೀತ ಇಳಯರಾಜಾ... ಹೀಗೆ ಅದೆಷ್ಟು ಸಾವಿರ ಬಾರಿ ಇಂತಹ ಉದ್ಘೋಷಣೆ ಕೇಳಿರಬಹುದೋ ನೆನಪಿಲ್ಲ. ಬಾಲ್ದಯದಲ್ಲಿ ಕೇಳಿದ ಆ ಧ್ವನಿಗಳು... ಈ ಮಾಹಿತಿಗಳು ಬಲವಾಗಿ ನೆನಪಿನಲ್ಲಿ ಉಳಿಯುವುದಕ್ಕೆ ಕಾರಣ ರೇಡಿಯೋ...
.....
ಸಾಹಿತಿ ಕೆ.ಟಿ.ಗಟ್ಟಿ ಅವರು ಒಂದೊಮ್ಮೆ ಹೇಳಿದ್ದರು ಕಲಿಕೆಯಲ್ಲಿ ನೋಡುವುದಕ್ಕಿಂತಲೂ, ಓದುವುದಕ್ಕಿಂತಲೂ ಕೇಳಿದ್ದು ಹೆಚ್ಚು ಗಾಢವಾಗಿ ನೆನಪಿನಲ್ಲಿ ಉಳಿಯುತ್ತದಂತೆ, ಕೇಳಿದ ವಿಚಾರಗಳು ಮನಸ್ಸಿನಲ್ಲಿ ತುಂಬ ಪರಿಣಾಮಕಾರಿಯಾಗಿ ಅಚ್ಚೊತ್ತುತ್ತದಂತೆ. ಇದಕ್ಕೆ ಇರಬೇಕು ರೇಡಿಯೋದಲ್ಲಿ ಕೇಳಿದ್ದು ತುಂಬ ಆಪ್ತವಾಗಿ, ಪರಿಣಾಮಕಾರಿಯಾಗಿ ನೆನಪಿನಲ್ಲಿರೋದು...
ವಿಶೇಷ ಏನು ಗೊತ್ತಾ... ಆಕಾಶವಾಣಿ ಆಪ್ತವಾಗಲು ಕಾರಣ ದಶಕಗಳ ನಂತರವೂ ಆಕಾಶವಾಣಿಯ ಬಹುತೇಕ ಕಾರ್ಯಕ್ರಮಗಳು ಇಂದಿಗೂ ಅದೇ ಸಮಯಕ್ಕೆ ಪ್ರಸಾರವಾಗುತ್ತವೆ, ಮತ್ತು ಅದೇ ಸಿಗ್ನೇಚರ್ ಟ್ಯೂನ್ ಗಳನ್ನುಹೊಂದಿವೆ. ಬೆಳಗ್ಗೆ 6.05ಕ್ಕೆ ವಂದನಾ, ನಂತರ ಚಿಂತನ, ರೈತರಿಗೆ ಸಲಹೆ, 6.55ಕ್ಕೆ ಸಂಸ್ಕೃತದಲ್ಲಿ ವಾರ್ತೆ, 7 ಗಂಟೆಗೆ ಇಂದಿನ ಕಾರ್ಯಕ್ರಮ ವಿವರ, 7.05ಕ್ಕೆ ಪ್ರದೇಶ ಸಮಾಚಾರ (ರಾಜ್ಯದ ಸುದ್ದಿಗಳು), 7.35ಕ್ಕೆ ವಾರ್ತೆಗಳು (ರಾಷ್ಟ್ರ, ಅಂತಾರಾಷ್ಟ್ರೀಯ ಸುದ್ದಿಗಳು), 7.45ಕ್ಕೆ ಚಿತ್ರಗೀತೆಗಳು, ಮಧ್ಯಾಹ್ನ 1.10ಕ್ಕೆ ವಾರ್ತೆಗಳು, ರಾತ್ರಿ 7.45ಕ್ಕೆ ವಾರ್ತೆಗಳು, 8.45ಕ್ಕೆ ಹಿಂದಿ ವಾರ್ತೆ, 9 ಗಂಟೆಗೆ ಇಂಗ್ಲಿಷಿನಲ್ಲಿ ವಾರ್ತೆ, ರಾತ್ರಿ 11.00 ಗಂಟೆಗೆ ದಿನದ ಕೊನೆಯ ಬುಲೆಟಿನ್ ಇಂಗ್ಲಿಷಿನಲ್ಲಿ.... ಸಂಜೆ 6.50ಕ್ಕೆ ಕೃಷಿರಂಗ (ಕಿಸಾನ್ ವಾಣಿ), ರಾತ್ರಿ 8 ಗಂಟೆಗೆ ಯುವವಾಣಿ... ಹೀಗೆ... ನನ್ನ ಎಳವೆಯಿಂದ ಶುರುವಾಗಿ ಇಂದಿನ ವರೆಗೂ ಆಕಾಶವಾಣಿಯ ಈ ಶೆಡ್ಯೂಲ್ ಗಳು ಬದಲಾಗಿಯೇ ಇಲ್ಲ. ಇವತ್ತಿಗೂ ರಾತ್ರಿ 8 ಗಂಟೆಗೆ ಅಕಾಶವಾಣಿ ಟ್ಯೂನ್ ಮಾಡಿದರೆ ಯುವವಾಣಿಯ ಅದೇ ಸಿಗ್ನೇಚರ್ ಟ್ಯೂನ್ ಕೇಳಿಸುತ್ತದೆ... ಇದೊಂದೇ ಸಾಕು.. ಆ ದಿನಗಳನ್ನು ನೆನಪಿಸಲು.
ಚಿಕ್ಕಂದಿನಲ್ಲಿ ಇಂಗ್ಲಿಷ್, ಹಿಂದಿ ವಾರ್ತೆಗಳು ಅರ್ಥ ಆಗುತ್ತಿರಲಿಲ್ಲ. ಆದರೆ "ದಿಸೀಸ್ ಆಲಿಂಡಿಯಾ ರೇಡಿಯೋ.. ದಿ ನ್ಯೂಸ್ ರೆಡ್ ಬೈ..." ಅನ್ನುವುದು, "ಆಕಾಶವಾಣಿ... ಸಂಪ್ರತಿ ವಾರ್ತಾಹ ಶ್ರುಯಂತಾಮ್" (ಹಾಗೆ ಕೇಳಿಸುತ್ತಿತ್ತು, ಸರಿಯಾದ ಉಚ್ಛಾರ ಸ್ಪಷ್ಟ ಇಲ್ಲ) ಎಂಬ ಸಂಸ್ಕೃತ ವಾರ್ತೆಯ ಆರಂಭಿಕ ಸಾಲುಗಳು... ಮಾತ್ರ ಬಾಯಿ ಪಾಠ ಬರುತ್ತಿತ್ತು. ಆಕಾಶವಾಣಿಯಲ್ಲಿ ಸಮಯ ಹೇಳುವುದು ಕೇಳಿದ್ದೀರಲ್ವ... "ಈಗ ಸಮಯ 7 ಗಂಟೆ 56 ನಿಮಿಷ 40 ಸೆಕೆಂಡುಗಳು..." ಇಂದಿಗೂ ಹಾಗೆಯೇ ಹೇಳುತ್ತಾರೆ. ಅಷ್ಟು ಕರಾರುವಕ್ಕು ಸಮಯ ಪಾಲನೆ. ಎಂದಿಗೂ ರೇಡಿಯೋದ ಸಮಯ ತಡವಾಗಿದ್ದಿಲ್ಲ... ಅದೇ ವಿಶೇಷತೆ.
.......
ಆಗೆಲ್ಲ ಇಂಟರ್ ನೆಟ್ಟು, ಜಾಲ ತಾಣಗಳೆಲ್ಲ ಇರಲಿಲ್ಲ. ರೇಡಿಯೋ ಎಂಬುದೊಂದು ಪೆಟ್ಟಿಗೆ ಅಂತ ಮಾತ್ರ ಕುಳಿತಿತ್ತು. ಚಿಕ್ಕವರಿದ್ದಾಗ ಅದರೊಳಗೆ ಯಾರೋ ಕುಳಿತು ಮಾತನಾಡುತ್ತಾರೆ ಎಂಬ ನಂಬಿಕೆಯೂ ಇತ್ತು. ಮತ್ತೆ ಗೊತ್ತಾಯ್ತು, ಆಕಾಶವಾಣಿ ಅಂತ ಸ್ಟೇಷನ್ ಇರ್ತದೆ, ಅಲ್ಲಿಂದ ಮಾತನಾಡ್ತಾ ರೆ ಅಂತ. ಆದರೆ, ಅಲ್ಲಿಗೆ ಹೇಗೆ ಹೋಗೋದು, ಅವರನ್ನು ಸಂಪರ್ಕಿಸುವುದು ಅದೆಲ್ಲ ಗೊತ್ತಿರಲಿಲ್ಲ. ನಾಲ್ಕಾಣೆಯ ಪೋಸ್ಟ್ ಕಾರ್ಡಿನಲ್ಲಿ ಕೋರಿಕೆ ಕಾರ್ಯಕ್ರಮಕ್ಕೆ ಪತ್ರ ಬರೆದರೆ, ಅಥವಾ ಪತ್ರೋತ್ತರಕ್ಕೆ ಪತ್ರ ಬರೆದರೆ ನಮ್ಮ ಹೆಸರನ್ನೂ ಓದುತ್ತಿದ್ದರು ರೇಡಿಯೋದಲ್ಲಿ. ರೇಡಿಯೋದಲ್ಲಿ ಹೆಸರೇ ಕೇಳುವುದೇ ಒಂದು ಹೆಮ್ಮೆಯ ಸಂಗತಿ ಆಗಿತ್ತು.
ಆಗಿನ ಉದ್ಘೋಷಕರೂ ಅಷ್ಟೇ ಒಂಥರಾ ಸೆಲೆಬ್ರಿಟಿಗಳು... ಕೆ.ಆರ್. ರೈ, ಶಂಕರ್ ಭಟ್ ಕಡತೋಕ, ನಾರಾಯಣಿ ದಾಮೋದರ್, ಶಕುಂತಳಾ ಆರ್. ಕಿಣಿ, ಮುದ್ದು ಮೂಡುಬೆಳ್ಳೆ,. ಇವರ್ಯಾರದ್ದೂ ಮುಖ ನೋಡಿರಲಿಲ್ಲ, ಯಾರು, ಎಲ್ಲಿಯವರು ಅಂತ ಗೊತ್ತಿರಲಿಲ್ಲ. ಧ್ವನಿಯನ್ನು ಮಾತ್ರ ಎಲ್ಲಿ ಕೇಳಿದರೂ ಗುರುತು ಹಿಡಿಯುವಷ್ಟು ಪರಿಚಯ ಇತ್ತು. ವೇಷ ಮರೆಸಿ ಬಂದು ಅವರು ಮಾತನಾಡಿದರೂ ಗೊತ್ತಾಗಬಹುದು, ಅಷ್ಟೊಂದು ಅಚ್ಚಾಗಿತ್ತು ಅವರ ಧ್ವನಿಗಳು. ಆದರೆ ಎದುರಿಗೆ ಬಂದು ನಿಂತರೂ ಅವರನ್ನು ಗುರುತು ಹಿಡಿಯಲು ಸಾಧ್ಯ ಇರಲಿಲ್ಲ.
ಇವರೆಷ್ಟು ನಿರರ್ಗಳವಾಗಿ ಮಾತನಾಡ್ತಾರೆ, ಒಂದು ವಾಕ್ಯದಲ್ಲೂ ತಡವರಿಸುವುದಿಲ್ಲ, ಕನ್ನಡ ಎಷ್ಟು ಚಂದವಾಗಿ ಹೊರ ಹೊಮ್ಮುತ್ತದೆ ಅಂತ ಆಶ್ಚರ್ಯವಾಗುತ್ತಿತ್ತು. ಇವರು ನೋಡುವುದಕ್ಕೆ ಹೇಗಿರಬಹುದು, ನಾವು ಆಕಾಶವಾಣಿಗೆ ಹೋದರೆ ನಮ್ಮ ಜೊತೆ ಮಾತನಾಡಿಯಾರೇ... ಅವರಿಗೆ ತುಂಬ ವಿಷಯಗಳು ಗೊತ್ತಿರಬಹುದಲ್ವ... ಹೀಗೆ ಬಾಲ್ಯದ ಚಿಂತನೆಗಳು, ಕಲ್ಪನೆಗಳು. ಈ ಉದ್ಘೋಷಕರನ್ನು ಕಾಣಬೇಕು, ಮಾತನಾಡಬೇಕು ಅಂತ ತುಂಬ ಆಸೆ ಇತ್ತು... ಧ್ವನಿಯೊಂದು ಕಟ್ಟಿಕೊಡುವ ಕಲ್ಪನೆಗಳಿಗೆ ಮಿತಿಯಿಲ್ಲ ತಾನೆ.
ವಿಶೇಷ ಎಂದರೆ ಮೇಲೆ ಉಲ್ಲೇಖಿಸಿದ ಇಷ್ಟೂ ಮಂದಿ ದುಡಿದು ನಿವೃತ್ತರಾಗುವ ತನಕ ಸೋಶಿಯಲ್ ಮೀಡಿಯಾ, ಮೊಬೈಲು ಅಷ್ಟೊಂದು ಪ್ರಚಾರದಲ್ಲಿ ಇಲ್ಲದ ಕಾರಣ ಅವರು ಧ್ವನಿಯಿಂದ ಸೆಲೆಬ್ರಿಟಿಗಳಾದರೆ ವಿನಹ ಈಗಿನ ರೇಡಿಯೋ ಆರ್.ಜೆ.ಗಳ ಹಾಗೆ ಫೋಟೋ, ವಿಡಿಯೋ, ಫೇಸ್ ಬುಕ್, ಇನ್ ಸ್ಟಾಗಳಲ್ಲಿ ಯಾವತ್ತೂ ಸೆಲೆಬ್ರಿಟಿಗಳಾಗಲೇ ಇಲ್ಲ. ಮೂರು ದಶಕಗಳಿಗೂ ಮಿಕ್ಕಿ ಧ್ವನಿ ನೀಡಿ ನಿವೃತ್ತರಾದರೂ ತುಂಬ ಮಂದಿ ಕೇಳುಗರು ಅವರನ್ನು ಪ್ರತ್ಯಕ್ಷ ಕಾಣಲೇ ಇಲ್ಲ. ರೇಡಿಯೋ ವಿಶೇಷ ಎಂದರೆ, ನಿವೃತ್ತರಾದ ಬಳಿಕ ಇಷ್ಟೂ ಮಂದಿಯನ್ನು ನೀವು ಮಾತನಾಡಿಸಿದರೂ ಅದೇ ಧ್ವನಿ, ಅದೇ ಧಾಟಿ, ಅದೇ ಮಾತಿನ ಓಘ ವಯಸ್ಸಿನ ಹಂಗನ್ನು ದಾಟಿ ಹೋಗುತ್ತದೆ...
.....
ವಾರದ ಕಾರ್ಯಕ್ರಮದ ವಿವರ ನೀಡುವ ಮುನ್ನೋಟ, ಬುಧವಾರ ರಾತ್ರಿ 9.30ರ ಯಕ್ಷಗಾನ ತಾಳಮದ್ದಳೆ, ಭಾನುವಾರದ ಕೃಷಿ ರಂಗದಲ್ಲಿ ಬರುತ್ತಿದ್ದ ಯಕ್ಷಗಾನದ ಹಾಡುಗಳು, ರಾಷ್ಟ್ರೀಯ ನಾಟಕ, ಭಾನುವಾರ ಅಪರಾಹ್ನ 2.30ಕ್ಕೆ ಬರುತ್ತಿದ್ದ ಕನ್ನಡ ಚಲನಚಿತ್ರ ಧ್ವನಿವಾಹಿನಿ (ಸಿನಿಮಾದ ಧ್ವನಿಮುದ್ಕಿಕೆಯನ್ನು ಒಂದು ಗಂಟೆಗೆ ಭಟ್ಟಿ ಇಳಿಸಿ ಕೇಳಿಸುತ್ತಿದ್ದುದು), ಬೆಳಗ್ಗೆ ಗೀತಲಹರಿ, ಚಿಂತನ, ವನಿತಾವಾಣಿ, ಚಿಲಿಪಿಲಿ, ಬಾಲವೃಂದ, ಮಾತುಕತೆ ಕನ್ನಡ ಕೌಟುಂಬಿಕ ಸಂಭಾಷಣೆ, ಕೆಂಚನ ಕುರ್ಲರಿ, ಶೇವಂತ್ಯಾ ಪಾಂತಿ (ಕೊಂಕಣಿ), ಗುಬ್ಬಿದ ಗೂಡು (ತುಳು), ಪಾಶ್ಚಾತ್ಯ ಲಘು ಸಂಗೀತ (ಲೋಯೋಲೋ ಲೋಬೋ ಪ್ರಭು)... ಹೀಗೆ ಬಹಳಷ್ಟು ಕಾರ್ಯಕ್ರಮಗಳು ಸುಮಾರು ಮೂರು ದಶಕಗಳ ಬಳಿಕವೂ ನೆನಪಿದೆ...
ಧಾರಾವಾಹಿ, ಬ್ರೇಕಿಂಗ್ ನ್ಯೂಸ್, ಸಿನಿಮಾ ಯಾವುದೂ ಇಲ್ಲದ ಕಾಲದಲ್ಲಿ ಶಿಕ್ಷಣ, ಮನರಂಜನೆ, ಮಾಹಿತಿಯೆಂಬ ತ್ರಿವಿಧ ಧ್ಯೇಯದೊಂದಿಗೆ ನನ್ನನ್ನು ಬೆಳೆಸಿದ್ದು ರೇಡಿಯೋ... ಅದು ಅರಿವಿಲ್ಲದೆ ನನ್ನೊಳಗಿನ ಜ್ನಾನ ಭಂಡಾರಕ್ಕೆ ನೀರೆಯುತ್ತಲೇ ಇತ್ತು. ಆಗಿನ ಪ್ರಧಾನಿ, ಮುಖ್ಯಮಂತ್ರಿ ಹೆಸರುಗಳು, ಬಜೆಟ್ಟು, ಕ್ರಿಕೆಟ್ ಕಮೆಂಟ್ರಿ, ಚುನಾವಣಾ ಫಲಿತಾಂಶ, ಅಡಿಕೆ ರೇಟು ಮಾಹಿತಿ, ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ವಿವರಗಳು, ನಾಳೆಯ ರಜೆಯ ವಿವರ, ಹವಾಮಾನ ವರದಿ, ಚಂಡಮಾರುತದ ಮುನ್ನೆಚ್ಚರಿಕೆ... ಎಲ್ಲವೂ ಗೊತ್ತಾಗುತ್ತಿದ್ದದ್ದು ರೇಡಿಯೋದಿಂದ... ಈಗಿನವರಿಗೆ ಅದರ ವ್ಯಾಪ್ತಿ ಅರ್ಥವಾಗಲಿಕ್ಕಿಲ್ಲ....
.....
ಆಗಿನ ನಮ್ಮ ಮನೆಯ ರೇಡಿಯೋದಲ್ಲಿ ಎಫ್.ಎಂ. ಬ್ಯಾಂಡ್ ಇರಲಿಲ್ಲ. ಮಂಗಳೂರು ಆಕಾಶವಾಣಿ ಎಫ್.ಎಫ್.ಆಗಿದ್ದೇ ಬಹುಷ 2000ನೇ ಇಸವಿ ನಂತರ. ಮೀಡಿಯಂ ವೇವ್, ಶಾರ್ಟ್ ವೇವ್1, ಶಾರ್ಟ್ ವೇವ್2 ಅಂತ ಬ್ಯಾಂಡುಗಳಿದ್ದವು. ಬ್ಯಾಂಡ್ ಚೇಂಜ್ ಮಾಡಿ ವಿವಿಧ್ ಭಾರತಿ ಕೇಳುವ ಹುಚ್ಚು ಜೋರಿತ್ತು. ಮನೆಯ ಮಾಡಿಗೆ ತಂತಿಯೊಂದನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ರೇಡಿಯೋಗೆ ತಾಗಿಸಿ ರೇಡಿಯೋ ಆನ್ ಮಾಡಿದಾಗ ಶಾರ್ಟ್ ವೇವ್ ಸ್ಟೇಷನ್ ಗಳು ಸುಸ್ಪಷ್ಟವಾಗಿ ಕೇಳಿಸುತ್ತಿತ್ತು. ಆ ಥರ ರೇಡಿಯೋವನ್ನು ಚಂದ ಕೇಳಲು ಹೋಗಿ ರೇಡಿಯೋವನ್ನು ಬಿಚ್ಚಿ ಹಾಳಾಗಿ ಮತ್ತೆ ರಿಪೇರಿಗೆ ಕೊಟ್ಟದ್ದೂ ಇದೆ...
ಬೆಳಗ್ಗೆ 8 ಗಂಟೆಯ ಹೊತ್ತಿಗೆ ವಿವಿಧ್ ಭಾರತಿಯಲ್ಲಿ ಹೊಸ ಹೊಸ ಹಿಂದಿ ಹಾಡುಗಳು ಬರ್ತಾ ಇದ್ದವು. ರಾತ್ರಿ ಜಯ್ ಮಾಲಾ ಮತ್ತಿತರ ಕಾರ್ಯಕ್ರಮಗಳು, ಮಧ್ಯಾಹ್ನ ಸಿಲೋನ್ ಸ್ಟೇಷನ್ ನಿಂದ ಬರುತ್ತಿದ್ದ ವಿಚಿತ್ರ ಕನ್ನಡ ಉಚ್ಛಾರಣೆಯ ಚಿತ್ರಗೀತೆಯ ಕಾರ್ಯಕ್ರಮಗಳು ಮಸುಕು ಮಸುಕಾದ ನೆನಪುಗಳು...
ಬಿಬಿಸಿ, ಮತ್ತೆ ಧಾರವಾಡ, ಬೆಂಗಳೂರು, ಗುಲ್ಬರ್ಗ, ಭದ್ರಾವತಿ ಸ್ಟೇಷನ್ ಗಳು, ಆಮೇಲೆ ಬಂದ ಮಡಿಕೇರಿ ಎಫ್.ಎಂ. ಸ್ಟೇಷನ್ನುಗಳು ನಮ್ಮ ಕಡೆ ಸಿಗ್ತಾ ಇತ್ತು. ಮೀಡಿಯಂ ವೇವ್ ಸ್ಟೇಷನ್ನಿನ ವಿಶೇಷವೆಂದರೆ ಆಕಾಶವಾಣಿಯ ನಿಲಯವಿರುವ ಕಡೆಗೆ ರೇಡಿಯೋ ತಿರುಗಿಸಿ ಇಟ್ಟಾಗ ಮಾತ್ರ ರೇಡಿಯೋ ಸ್ಪಷ್ಟವಾಗಿ ಕೇಳ್ತಾ ಇದ್ದದ್ದು... ಎಫ್.ಎಂ. ಆದ ಬಳಿಕ ಈ ಸಮಸ್ಯೆ ಇಲ್ಲ. ಗುಡುಗು ಸಿಡಿಲು ಬರುವಾಗ ರೇಡಿಯೋ ಗರ ಗರ ಆಗುತ್ತಿದ್ದದ್ದು ಇನ್ನೊಂದು ನೆನಪು. ಅರ್ಥವಾಗದ ಇಂಗ್ಲಿಷ್ ವಾರ್ತೆ ಬಂದಾಗ ರೇಡಿಯೋ ಆಫ್ ಮಾಡುವುದು, ರಾತ್ರಿ 9.30ರ ಯಕ್ಷಗಾನ ತಾಳಮದ್ದಳೆ ಕೇಳಲು ಕಾದು ಕುಳಿತು ಕೊನೆಯ ಕ್ಷಣದಲ್ಲಿ ನಿದ್ರಾ ಪರವಶನಾಗುತ್ತಿದ್ದದ್ದು... ಕೂಡಾ ಮರೆಯಲಾಗದ ನೆನಪಗಳು...
ರಾತ್ರಿ ಚಾಪೆಯ ಪಕ್ಕ ಹಾಡು ಕೇಳುತ್ತಾ ನಿದ್ರೆ ಬಂದು ರೇಡಿಯೋ ಆಫ್ ಮಾಡಲು ಬಾಕಿ ಆಗಿ 11.05ಕ್ಕೆ ವಂದನೆಗಳು ಹೇಳಿದ ಬಳಿಕವೂ ರೇಡಿಯೋ ಆನ್ ಇದ್ದದ್ದೂ ಇದೆ...
.....
ತುಸು ದೊಡ್ಡವನಾದ ಬಳಿಕ ರೇಡಿಯೋಗೆ ಬರೆಯುವ ಹುಚ್ಚು. ಯುವವಾಣಿ ತುಂಬ ಇಷ್ಟದ ಕಾರ್ಯಕ್ರಮ. ಅಬ್ದುಲ್ ರಷೀದ್ ಅವರ ಕಾರ್ಯಕ್ರಮ ತುಂಬ ಇಷ್ಟ. ಕಾಲೇಜು ದಿನಗಳಲ್ಲಿ ಬರ್ತಾ ಇದ್ದ ನನ್ನ ಊರು ನನ್ನ ಕನಸು, ಪ್ರೀತಿ ಪಾತ್ರ ಮತ್ತಿತರ ಕಾರ್ಯಕ್ರಮಗಳಿಗೆ ಬರೆಯುತ್ತಿದ್ದ ನೆನಪು. ನನ್ನ ಊರು, ನನ್ನ ಕನಸು ಕಾರ್ಯಕ್ರಮಕ್ಕೆ ಉದ್ದದ ಲೇಖನ ಬರೆದು ಅದು ಪ್ರಸಾರವಾಗ್ತದ ಅಂತ ತಿಂಗಳು ಗಟ್ಟಲೆ ಕಾದು ಪ್ರತಿ ಕಾರ್ಯಕ್ರಮ ಇಡೀ ಕೇಳುತ್ತಿದ್ದೆ, ಕೊನೆಯ ವರೆಗೂ ನನ್ನ ಪತ್ರ ಪ್ರಸಾರವಾಗದೇ ನಿರಾಸೆಯಾಗಿದ್ದೂ ನೆನಪಿದೆ. ಕೊನೆಗೂ ನನ್ನ ಪತ್ರ ಪ್ರಸಾರ ಆಗಲೇ ಇಲ್ಲ....
ಮತ್ತೊಬ್ಬರು ಉದ್ಘೋಷಕರು ಯಾವಾಗಲೂ ಪಿ.ಬಿ.ಶ್ರೀನಿವಾಸ್ ಚಿತ್ರಗೀತೆಗಳನ್ನು ಮಾತ್ರ ಪ್ರಸಾರ ಮಾಡ್ತಾರೆ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಪ್ರಸಾರ ಮಾಡುವುದೇ ಇಲ್ಲ ಅಂತ ಸಿಟ್ಟಿನಲ್ಲಿ ಪತ್ರೋತ್ತರಕ್ಕೆ ಬೈದು ಬರೆದ ಪತ್ರ ಪ್ರಸಾರ ಆಗಲೇ ಇಲ್ಲ...
------
ಕೊಣಾಜೆಯಲ್ಲಿ ಕಲಿಯುತ್ತಿದ್ದಾಗ ಮೊದಲ ಬಾರಿಗೆ ರೇಡಿಯೋದಲ್ಲಿ ಕಾರ್ಯಕ್ರಮ ಕೊಡುವ ಅವಕಾಶ ಸಿಕ್ಕಿದ್ದು. "ನನ್ನ ಸ್ಫೂರ್ತಿಯ ಸೆಲೆ" ಅನ್ನುವ ಶೀರ್ಷಿಕೆಯಲ್ಲಿ ಸುಮಾರು 10 ನಿಮಿಷದ ಭಾಷಣ ಮಾಡಲು ಪತ್ರ ಬಂದಿತ್ತು (ನನ್ನೂರು ನನ್ನ ಕನಸಿಗೆ ಬರೆದ ಲೇಖನದ ಆಧಾರದಲ್ಲಿ ಕರೆದರು ಅಂತ ನಂತರ ಗೊತ್ತಾಗಿದ್ದು). ಧ್ವನಿ ಮುದ್ರಣ ಮಾಡಿದವರು ನನ್ನ ಮೆಚ್ಚಿನ ಕಾರ್ಯಕ್ರಮ ನಿರ್ವಾಹಕರಾಗಿದ್ದ ಅಬ್ದುಲ್ ರಷೀದ್ ಅವರು. ನಾನು "ನನ್ನ ಸ್ಫೂರ್ತಿಯ ಸೆಲೆ ಕ್ವೋಟ್ಸ್ ಗಳು" ಅಂತ ಬಾಷಣ ರೆಡಿ ಮಾಡಿ ಹೋಗಿದ್ದೆ....
ಆ ಗಂಭೀರ ಸ್ಟುಡಿಯೋ, ವಾತಾನುಕೂಲಿ ಕೊಠಡಿಗಳು, ಗಾಜಿನ ಪರದೆಯಾಚೆ ರೆಕಾರ್ಡ್ ಮಾಡುವ ಗಂಭೀರ ವದನರು, ಮಂದ ಬೆಳಕು... ಅಲ್ಲಿನ ಸೆಟಪ್ ನೋಡಿಯೇ ಬೆವರಿ ಹೋಗಿತ್ತು. ಇಲ್ಲಿ ಕುಳಿತುಕೊಂಡು ಹೇಗೆ ಮಾತನಾಡುತ್ತಾರೆ ಅಂತಾನೇ ಅರ್ಥ ಆಗಿರಲಿಲ್ಲ. ತಡವರಿಸಿ ಓದಿ ಮುಗಿಸಿ ಬಂದಿದ್ದೆ, ಹೇಗ್ಹೇಗೋ ಆಗಿತ್ತು. ಆದರೆ ಧ್ವನಿಮುದ್ರಣ ಮಾಡುವಾಗ ಆಕಾಶವಾಣಿ ಸಿಬ್ಬಂದಿ ತುಂಬ ಸಪೋರ್ಟ್ ಮಾಡಿದ್ದಂತೂ ನೆನಪಿದೆ. ಆ ಆತ್ಮೀಯತೆಯಿಂದಾಗಿಯೇ ಸ್ವಲ್ಪ ಕಡಿಮೆ ನರ್ವಸ್ ಆಗಿದ್ದೆ. ಆ ಭಾಷಣವನ್ನು ರೇಡಿಯೋದಲ್ಲಿ ಕೇಳಲು ಕಾದಿದ್ದೇ ಕಾದಿದ್ದು. ರೇಡಿಯೋದಲ್ಲಿ ಹೆಸರು ಹೇಳುವಾಗ ಆದ ಖುಷಿ ವರ್ಣಿಸಲು ಅಸದಳ...
ನಂತರ ಮತ್ತೊಮ್ಮೆ ಕಾಲೇಜಿನಲ್ಲಿ ನಡೆದ ಸೆಮಿನಾರ್ ಕುರಿತು ಬಾನುಲಿ ವರದಿ ಮಾಡಲು ನಮ್ಮ ಉಪನ್ಯಾಸಕರು ಕಳುಹಿಸಿದ್ದರು. ಕಾರ್ಯಕ್ರಮ ನಿರ್ವಾಹಕರಾದ ಶ್ರೀನಿವಾಸ್ ಪ್ರಸಾದ್ ಅವರು (ಈಗ ನಿವೃತ್ತರು) ಅದನ್ನು ಧ್ವನಿಮುದ್ರಿಸಿದ್ದರು, ಶ್ರೀಯುತ ಸಿ.ಯು.ಬೆಳ್ಳಕ್ಕಿ ಅವರು ನಿಲಯ ನಿರ್ದೇಶಕರಾಗಿದ್ದರು. ಪ್ರಸಾದಣ್ಣ ಅವರು ಧ್ವನಿಮುದ್ರಿಸುವಾಗ... "ಎರಡು ಲೈನ್ ಓದಿ ಲೆವೆಲ್ ನೋಡ್ತೇನೆ.."ಅಂದಿದ್ದರು, ಓದಿದೆ. ನಂತರ "ಮುಂದುವರಿಸಿ" ಅಂದರು, ನಾನು ಓದುತ್ತಲೇ ಹೋದೆ. ನನಗದು ರೆಕಾರ್ಡಿಂಗ್ ಆಗ್ತಿದೆ ಅಂತ ಗೊತ್ತಾಗಲೇ ಇಲ್ಲ. ಎಲ್ಲ ಆದ ಮೇಲೆ, ಮುಗಿಯಿತು ಈಚೆ ಬನ್ನಿ ಅಂತ ಗಾಜಿನ ಪರದೆಯಿಂದೀಚೆ ಕರೆದರು. ಹೇಗೆ ಓದಿದ್ದೇನೋ ನನಗೇ ಗೊತ್ತಾಗಲಿಲ್ಲ....
ಇವೆರಡೂ ಧ್ವನಿಮುದ್ರಣಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ... ಅಲ್ಲಿ ನಾವು ಕೇಳಿದ ಧ್ವನಿಗಳಿಗೂ, ಪ್ರತ್ಯಕ್ಷ ಕಾಣುವ ಮುಖಗಳಿಗೂ ತಾಳಮೇಳವೇ ಇಲ್ಲ ಅನಿಸಿತ್ತು. ನಮ್ಮ ಕಲ್ಪನೆಯ ಮುಖಗಳಿಗೂ ಅಲ್ಲಿ ಕಾಣುವ ಮುಖಗಳಿಗೂ ಹೋಲಿಕೆ ಸಾಧ್ಯವಿರಲಿಲ್ಲ. ಆದರೆ "ನಾನು ನಿಮ್ಮ ಕಾರ್ಯಕ್ರಮ ಕೇಳಿತ್ತಿದ್ದೇನೆ ತುಂಬ ಸಮಯದಿಂದ ಅಂದಾಗ" (ಯಾರ್ಯಾರು ಸಿಕ್ಕಿದ್ದರು ಆಗ ಅಂತ ನೆನಪಿಲ್ಲ) ಅವರೆಲ್ಲ ಪ್ರೀತಿಯಿಂದ ಸ್ಪಂದಿಸಿದ್ದು ಮಾತ್ರ ತುಂಬ ಖುಷಿಯ ವಿಚಾರವಾಗಿತ್ತು....
......
ವಾಸ್ತವವಾಗಿ ಆಕಾಶವಾಣಿ ಸ್ಟುಡಿಯೋದಲ್ಲಿ ನಿರ್ಜೀವ ಮೈಕುಗಳಿರುತ್ತವೆ. ಭಯಂಕರ ನಿಶ್ಯಬ್ಧವಿರುತ್ತದೆ, ಎದುರಿಗೆ ಸಮಯ ಸೂಚಿಸುವ ಕೆಂಪು ಅಕ್ಷರಗಳ ಡಿಜಿಟಲ್ ಕ್ಲಾಕ್ ಇರುತ್ತದೆ. ಕೆಂಪು ಕಾರ್ಪೆಟ್ಟು, ಉದ್ದದ ಪಡಸಾಲೆ, ಮಂದ ಬೆಳಕು, ಮೈಕು, ಕಂಪ್ಯೂಟರ್, ಟೇಪುಗಳು, ಸಿ.ಡಿ.ಗಳು, ಗ್ರಾಮಾಫೋನ್ ಪ್ಲೇಯರ್ರು, ಈಗ ಹೊಸದಾಗಿ ಫೋನ್ ಇನ್ ಕನ್ಸೋಲ್ ಗಳು... ಹೀಗೆ ಯಂತ್ರಗಳ ನಡುವೆ ಕುಳಿತ ಮನುಷ್ಯ ತಾನು ಕೇಳುಗರನ್ನು ಊಹಿಸಿಕೊಂಡು ಮೈಕಿನಲ್ಲಿ ಮಾತನಾಡಬೇಕು. ಅದು ಲಕ್ಷಾಂತರ ಮಂದಿಯನ್ನು ತಲುಪಬೇಕು... ಆ ಮಾತುಗಳು ತನ್ನನ್ನೇ ಉದ್ದೇಶಿಸಿ ಮಾತನಾಡಿದ ಹಾಗೆ ಕೇಳುಗರಿಗೆ ಅನ್ನಿಸಬೇಕು. ಆ ಧ್ವನಿಯ ಏರಿಳಿತ, ಆ ಪಾಸ್ (ಮೌನ), ಉಚ್ಛಾರ, ಧಾಟಿ, ಮಾತಿನ ವೇಗ, ಓಘ ಎಲ್ಲವೂ ತಾಳ ಮೇಳದಿಂದ ಕೂಡಿರಬೇಕು, ತಪ್ಪಾಗಿ ಓದಿದರೆ ನೇರ ಪ್ರಸಾರದಲ್ಲಿ ಅದನ್ನು ಸರಿಪಡಿಸಲಾಗುವುದಿಲ್ಲ, ಕ್ಷಮಿಸಿ ಎಂದೇ ಹೇಳಬೇಕು. ಹೀಗಿದ್ದೂು ನಿರ್ಜೀವ ಸ್ಟುಡಿಯೋದಿಂದ ಹೊರಡುವ ಧ್ವನಿ ಕೇಳುಗರನ್ನು ಕಟ್ಟಿಕೊಡುವ ಪ್ರಕ್ರಿಯೆ ಇದೆಯಲ್ಲ ಅದ್ಭುತವೇ ಸರಿ.
......
ಆದರೆ ಸಾಮಾನ್ಯ ಕೇಳುಗನೊಬ್ಬನಿಗೆ ಈ ಸ್ಟುಡಿಯೋ, ಈ ಉದ್ಘೋಷಕರು, ಕಾರ್ಯಕ್ರಮ ನಿರ್ವಾಹಕರು, ಸರ್ಕಾರಿ ಕೆಲಸಗಳ ಶಿಷ್ಟಾಚಾರಗಳು, ನಿವೃತ್ತಿ,ಪ್ರಮೋಶನ್, ಶಿಫ್ಟ್ ವ್ಯವಸ್ಥೆ, ಕಾರ್ಯಕ್ರಮ ನೀಡುವವರು ತಾತ್ಕಾಲಿಕ ಸಿಬ್ಬಂದಿಯೋ, ಪರ್ಮನೆಂಟು ಸ್ಟಾಫೋ ಇದು ಯಾವುದೂ ಬೇಕಾಗುವುದಿಲ್ಲ, ಅವರಿಗೆ ಅದು ಅನಗತ್ಯ. ಕೇಳುಗರು ಆಕಾಶವಾಣಿ ಸ್ಟಾಫನ್ನು ತಮ್ಮ ಓರಗೆವರಂತೆಯೇ ಪ್ರೀತಿಸುತ್ತಾರೆ. ಆ ಧ್ವನಿಯ ಒಡೆಯ, ಒಡತಿ ಯಾರೇ ಇರಲಿ ಬಹುಕಾಲದ ಆಪ್ತರೆಂಬಂತೆ ಮಾತನಾಡುತ್ತಾರೆ. ಫೋನ್ ಇನ್ ಕಾರ್ಯಕ್ರಮಗಳಲ್ಲಿ ನಾವು ಗಮನಿಸಬಹುದು. ಲೈನ್ ಕನೆಕ್ಟ್ ಆದೊಡನೆ ಆ ಉದ್ವೇಗ, ಪ್ರೀತಿಯಿಂದ ಮಾತನಾಡಿಸುವ ಭಾಷೆ, ತಮ್ಮ ಮನೆಯವರಂತೆಯೇ ತರಾಟೆಗೆ ತೆಗೆದುಕೊಳ್ಳುವ ಸಲುಗೆ, ನನ್ನ ಪತ್ರಿ ನೀವು ಓದುವುದೇ ಇಲ್ಲ ಎಂಹ ಹುಸಿ ಮುನಿಸು.. ಇವೆಲ್ಲ ಎರಡು ಅಜ್ನಾತ ಮನಸ್ಸುಗಳ ನಡುವಿನ ಅವ್ಯಕ್ತ ಬಂಧದ ಪ್ರತೀಕ. ಆಕಾಶವಾಣಿ ಅದಕ್ಕೊಂದು ವಾಹಕ... ಧ್ವನಿಯೊಂದು ಕಟ್ಟಿಕೊಡುವ ಅನುಭೂತಿಯ ಪ್ರಭಾವ ಭಾಷೆಗೂ ನಿಲುಕದ್ದು...
......
ತಲೆಮಾರೇ ಬದಲಾಗಿದೆ. ಆಕಾಶವಾಣಿಯಲ್ಲೂ ಈಗ ಧ್ವನಿಮುದ್ರಣ ಟೇಪುಗಳಲ್ಲಿ ಆಗುತ್ತಿಲ್ಲ. ಎಲ್ಲ ಕಂಪ್ಯೂಟರ್ ಗಳು ಬಂದಿವೆ, ಧ್ವನಿಮುದ್ರಣ, ಎಡಿಟಿಂಗ್ ಎಲ್ಲ ಅದರಲ್ಲೇ ನಡೆಯುತ್ತದೆ. ಯಾವಾಗ ಬೇಕಾದರೂ ಫೋನ್ ಇನ್ ಮೂಲಕ ಕೇಳುಗರೊಡನೆ ಮಾತನಾಡಲು ಸಾಧ್ಯವಿದೆ. ಆದರೂ ಪತ್ರೋತ್ತರ ಎಂಬ ಕೇಳುಗರ ಪತ್ರಗಳನ್ನು ಆಧರಿಸಿದ ಕಾರ್ಯಕ್ರಮ ಇನ್ನೂ ಜೀವಂತವಾಗಿದೆ. ಎಸ್ಎಂಎಸ್ ಕಳುಹಿಸಿ ನಿಮಗೆ ಬೇಕಾದ ಹಾಡು ಕೇಳಲು ಈಗ ಅವಕಾಶ ಇದೆ. ಫೇಸ್ ಬುಕ್ಕು, ವಾಟ್ಸಪ್ಪುಗಳಲ್ಲಿ ಆಕಾಶವಾಣಿ ಕಾರ್ಯಕ್ರಮಗಳ ಪ್ರಚಾರಕ್ಕೆ ಪುಟಗಳು, ಗ್ರೂಪುಗಳೂ ಇವೆ. ಉದ್ಘೋಷಕರು ಯಾರು, ಅವರ ವಿವರವೇನು, ನಾಳೆ ಯಾವ ಕಾರ್ಯಕ್ರಮ ಪ್ರಸಾರವಾಗುತ್ತದೆ. ತಾಳಮದ್ದಳೆ ನೀಡುವ ತಂಡಗಲ್ಲಿ ಇರುವವರು ಯಾರು ಎಂಬಿತ್ಯಾದಿ ವಿವರಗಳು ಫೋಟೋ ಸಹಿತ ಜಾಲತಾಣಗಳಲ್ಲಿ ಸಿಕ್ಕುತ್ತವೆ.. ಹಾಗಾಗಿ ಇಂದು ಆಕಾಶವಾಣಿಯಲ್ಲಿ ಕೇಳುವ ಧ್ವನಿಗಳು ಅಜ್ನಾತವಾಗಿ ಉಳಿದಿಲ್ಲ, ಹಿಂದಿನ ಕುತೂಹಲಗಳು ಕೂಡಾ...
ಖಾಸಗಿ ಎಫ್.ಎಂ. ಸ್ಟೇಷನ್ನುಗಳು ಬಂದಿವೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ನ್ಯಾರೋ ಕಾಸ್ಟಿಂಗ್ ರೇಡಿಯೋ ಕೇಂದ್ರಗಳು ಬಂದಿವೆ... "ನ್ಯೂಸ್ ಆನ್ ಏರ್" ಎಂಬ ಆಪ್ ಮೂಲಕ ಯಾವುದೇ ಕಿರಿಕಿರಿ ಅಡೆತಡೆ ಇಲ್ಲದೆ ಭಾರತದಾದ್ಯಂತದ ರೇಡಿಯೋ ಕೇಂದ್ರಗಳನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕೇಳಲು ಸಾಧ್ಯವಾಗಿದೆ...
ಹಿಂದಿನ ಉದ್ಘೋಷಕರ ತಲೆಮಾರು ಈಗ ಮಂಗಳೂರು ಆಕಾಶವಾಣಿಯಲ್ಲಿ ಇಲ್ಲ... ಆದರೆ ಅದೇ ಚಿಂತನ, ರೈತರಿಗೆ ಸಲಹೆ, ಪ್ರದೇಶ ಸಮಾಚಾರ, ವಾರ್ತೆಗಳು, ಯುವವಾಣಿ ಇಂದಿಗೂ ಅಚ್ಚುಕಟ್ಟಾಗಿ ಅದೇ ಸಮಯಕ್ಕೆ ಪ್ರಸಾರವಾಗುತ್ತಲೇ ಇದೆ. ಕೇಳುಗರರಿಗೆ ವಯಸ್ಸಾಗಿರಬಹುದು, ಆಕಾಶವಾಣಿ ಸಿಬ್ಬಂದಿ ಬದಲಾಗಿರಬಹುದು. ಆದರೆ ಆ ಸಮಯ, ಆ ಧಾಟಿ, ಆ ಚಿಂತನೆ, ಆ ಬದ್ಧತೆ ಬದಲಾಗಿಲ್ಲ. ಜನ ರೇಡಿಯೋಗೆ ನೀಡುವ ಸಮಯ ಕಡಿಮೆ ಇರಬಹುದು. ಮಾಹಿತಿಗೋಸ್ಕರ ರೇಡಿಯೋವನ್ನು ಮಾತ್ರ ಅನುಸರಿಸದೇ ಇರಬಹುದು (ಎಲ್ಲರೂ ಅಲ್ಲ, ಕೆಲವರು), ಆದರೆ ತನ್ನ ಕರ್ತವ್ಯವನ್ನು ರೇಡಿಯೋ ಶ್ರದ್ಧೆಯಿಂದ ಮಾಡಿಕೊಂಡು ಬಂದಿದೆ.
....
ರೇಡಿಯೋ ಎಂದಿಗೂ ವಿಫಲನಾಗದ ಸ್ನೇಹಿತನಂತೆ, ಯಾರೋ ಮಹಾನುಭಾವರು ಹಾಗಂದಿದ್ದಾರೆ. ನಿಮ್ಮ ಯಾವ ಕೆಲಸಕ್ಕೂ ಅಡ್ಡಿಯಾಗದೆ, ನಿಮ್ಮ ಸಮಯ ತಿನ್ನದೆ, ಅಚ್ಚರಿಗಳ ಜೊತೆಗೆ ದಿನವಿಡೀ ಸಾಥ್ ನೀಡುವ, ಹಾಡಿ ಸಾಂತ್ವನ ಹೇಳುವ, ಮಾತುಗಳ ಮೂಲಕ ಆಪ್ತವಾಗುವ, ಸಂಗೀತದ ಮೂಲಕ ರಂಜಿಸುವ, ಕುತೂಹಲಗಳನ್ನು ಉಳಿಸುವ, ಬೆಳೆಸುವ, ಚಿಂತನೆಗಳಿಗೆ ಹಚ್ಚುವ ಬಾನ್ದನಿಯ ಸಂಗಾತಿ...
ಯಾರೂ ಸ್ನೇಹಿತರಿಲ್ಲದವರಿಗೂ ರೇಡಿಯೋ ಸ್ನೇಹಿತನಾಗಿದ್ದಾನೆ. ಅನೇಕ ನೋವುಗಳಿಗೆ, ಭಾವಗಳಿಗೆ ರೇಡಿಯೋ ಧ್ವನಿಯಾಗುತ್ತದೆಂದು ನಂಬಿ ಅದರಲ್ಲಿ ಖುಷಿ ಕಂಡವರಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನೂ ಶ್ರದ್ಧೆಯಿಂದ ಕೇಳಿ ಈಗಲೂ ಪತ್ರ ಬರೆಯುವವರಿದ್ದಾರೆ. ಶುಭಾಶಯ ಪತ್ರಗಳನ್ನು ಬರೆಯುವವರಿದ್ದಾರೆ. ರೇಡಿಯೋ ಕಾರ್ಯಕ್ರಮಗಳ ಬಗ್ಗೆ ಕಾಳಜಿಯಿಂದ ವಿಚಾರಿಸುವವರು, ತರಾಟೆಗೆ ತೆಗೆದುಕೊಳ್ಳುವವರು, ಈಗಿನ ಸಿಬ್ಬಂದಿಗಿಂತಲೂ ಹೆಚ್ಚು ವಯಸ್ಸಾದ ಅಭಿಮಾನಿ ಕೇಳುಗರಿದ್ದಾರೆ. ಇವರಿಂದಾಗಿಯೇ ಆಕಾಶವಾಣಿ ತುಂಬ ಸಶಕ್ತವಾಗಿ ಬೆಳೆದಿದೆ. ನಿಂತಿದೆ. ಇನ್ಯಾವುದೇ ಮಾಧ್ಯಮಕ್ಕಿಂತಲೂ ಹೆಚ್ಚಿನ ಆಪ್ತತೆಯನ್ನು ರೇಡಿಯೋ ಕಟ್ಟಿಕೊಟ್ಟಿದೆ, ಕೊಡುತ್ತಿದೆ.
ಭುವಿಯಿಂದ ಬಾನಿಗೆ ನೆಗೆದು, ಮತ್ತೆ ಭುವಿಗೆ ತಲುಪಿ ಕಿವಿ ಮೂಲಕ ಹೃದಯ ತಲಪುವ ಬಾನುಲಿ ಒಂದು ಚೆಂದ ಅನುಭೂತಿ ಅಂದಿಗೂ... ಇಂದಿಗೂ...
-ಕೃಷ್ಣಮೋಹನ ತಲೆಂಗಳ.
No comments:
Post a Comment