ಬಳಿ ಬಂದ ಕಡಲನ್ನು ಸ್ವಾಗತಿಸಿ, ಮುಟ್ಟುವ ಭ್ರಮೆ ಬೇಡ!

ಕಡಲ ತಡಿಗೆ ಹೋಗುವಾಗ, ಇನ್ನೇನು ಸಮುದ್ರ ಒಂದೇ ಕಿ.ಮೀ. ದೂರದಲ್ಲಿದೆ ಅನ್ನುವಾಗ ಧುತ್ತನೆ ಒಂದು ತಿರುವಿನ ಬಳಿಕ ಸಮುದ್ರದ ವಿರಾಟ್ ದರ್ಶನ ದೂರದಿಂದಲೇ ಆಗುತ್ತದೆ... ಆಲ್ವ? ಹತ್ತಿರ ಹತ್ತಿರ ವಾಹನ ಧಾವಿಸುತ್ತಿರುವ ಹಾಗೆಯೇ ಸಮುದ್ರವೇ ನಮ್ಮ ಬಳಿಗೆ ಬಂದ ಹಾಗೆ ಭಾಸ.. ದೊಡ್ಡದೊಂದು ಪರ್ವತವನ್ನು ಹತ್ತಿ ಇಳಿದು ಮರಳಿ ಊರಿಗೆ ಹೋಗುವಾಗ ಹಿಂತಿರುಗಿ ನೋಡಿದರೆ ಅಷ್ಟು ದೂರದ ತಿರುವಿನ ತನಕ ಬೆಟ್ಟವೇ ಬೆನ್ನತ್ತಿ ಬಂದ ಹಾಗೆ ಕಾಣಿಸುತ್ತದೆ...

...

ಚಾರಣ ಹೋಗುವಾಗಲೂ ಅಷ್ಟೇ... ಎರಡು ಕಿ.ಮೀ. ಏರಿದರೆ ಶಿಖರಾಗ್ರ ತಲಪುತ್ತೇವೆ ಅಂತ ಗೊತ್ತಿರುತ್ತದೆ.. ಅಷ್ಟು ಹತ್ತುವಷ್ಟರ ಮನಸ್ಸಿಗೆ ಮನಸ್ಸು ಸಿದ್ಧವಾಗಿರುತ್ತದೆ. ಎರಡು ಕಿ.ಮೀ. ಹತ್ತಿದ ಬಳಿಕವೂ ಮತ್ತೊಂದು ಶಿಖರ ಅದಕ್ಕಿಂತ ಮೇಲೆ ಗೋಚರಿಸಿದರೆ, ಇನ್ನೂ ಮೂರು ಕಿ.ಮೀ. ನಡೆಯಬೇಕಿದೆ ಅಂತ ಏಕಾಏಕಿ ತಿಳಿದುಬಂದರೆ ಅಸಾಧ್ಯ ಅನ್ನಿಸುತ್ತದೆ ಮನಸ್ಸಿಗೆ, ಸಹಕರಿಸುವುದೇ ಇಲ್ಲ ಕಾಲು!

ಬೆಟ್ಟದ ಶ್ರೇಣಿಗಳೇ ಹಾಗೆ, ಇಷ್ಟು ಹತ್ತಿದ ಬಳಿಕ ಮತ್ತೊಂದು, ಅದರ ಮೇಲೆ ಇನ್ನೊಂದು, ಪಕ್ಕದಲ್ಲಿ ಮಗದೊಂದು ಶಿಖರಗಳು ಕಾಣಿಸುತ್ತಲೇ ಇರುತ್ತವೆ. ಯಾವುದು ಮೇಲೆ, ಯಾವುದು ಕೆಳಗೆ ಅಂತ ಲೆಕ್ಕ ಹಾಕಲಾಗದಷ್ಟು ವಿಸ್ತಾರವಾಗಿ. ನಾವು ಇರಿಸಿದ ಗುರಿ ಮತ್ತು ನಮ್ಮ ಸಾಮರ್ಥ್ಯ ಅಷ್ಟಕ್ಕೇ ನಮ್ಮ ನಡಿಗೆ ಕೊನೆಗೊಳ್ಳುತ್ತದೆ. ಮರಳಿ ಬೆಟ್ಟ ಇಳಿಯಲು ಬೇಕಾದ ಅವಧಿ ಮತ್ತು ನಮ್ಮ ತನುವಿನಲ್ಲಿರುವ ಕಸುವು ಬೆಟ್ಟ ಇಳಿಯುವಷ್ಟರ ವರೆಗೆ ಲೆಕ್ಕ ಹಾಕಿಯೇ ಮನಸ್ಸು ಪ್ರೋಗ್ರಾಮಿಂಗ್ ಮಾಡಿರುತ್ತದೆ ಎಷ್ಟು ನಡೆಯಬೇಕು, ಎಲ್ಲಿಯ ವರೆಗೆ ನಡೆಯಬೇಕು ಅಂತ...

....

 

ಕಾಣಿಸಿದ್ದರ ಕುರಿತು ಅಥವಾ ನಾವಾಗಿ ಕಂಡುಕೊಂಡಿದ್ದರ ಕುರಿತು ಮನಸ್ಸು ನಿರ್ಧರಿಸುವ ಪ್ರಕ್ರಿಯೆ ಇದೆಯಲ್ಲ ಅದು ಮನಸ್ಸಿನ ಒಡೆಯರಿಗೇ ಬಹಳಷ್ಟು ಒಗಟು. ಬಹಳಷ್ಟು ಸಾರಿ ಅರಿವಿಲ್ಲದೇ ನಡೆಯುವ ಚಟುವಟಿಕೆ.. ನಮ್ಮ ಸಾಮರ್ಥ್ಯ, ಸಾಧ್ಯತೆ ಮತ್ತು ಮಿತಿಗಳನ್ನು ಮನಸ್ಸು ನಿರ್ಧರಿಸುವುದು ಕೆಲವೊಂದು ಸಾರಿ ಅಯಾಚಿತವಾಗಿ...

.....

ಕಡಲು ಬಳಿ ಬಂದಂತೆ ಕಾಣುವುದು ದೃಷ್ಟಿಗೆ ಗೋಚರವಾಗುವ ಭ್ರಮೆ, ಬೆಟ್ಟದ ಮೇಲೊಂದು ಬೆಟ್ಟ ಕಾಣಿಸುವುದು ಆ ಕ್ಷಣದಲ್ಲಿ ಗೋಚರವಾದ ಸಾಧ್ಯತೆಗಳು...

ನಮ್ಮ ಕನಸು, ಯೋಜನೆ, ರೋಷ, ಸಾಧನೆ ಎಲ್ಲ ಮೊದಲು ಜನಿಸುವುದು ಮತ್ತು ಪ್ರಸಾರವಾಗುವುದು ಮನಸ್ಸಿನಲ್ಲಿ. ಅದನ್ನು ಕಾರ್ಯರೂಪಕ್ಕೆ ಇಳಿಸುವುದು ದೇಹ ಅಷ್ಟೇ... ಅದೇ ಕಾರಣಕ್ಕೆ ಇದು ನನ್ನಿಂದ ಸಾಧ್ಯವ, ಇದು ನನಗೆ ಸಾಧ್ಯವಿಲ್ಲವ, ನಾನದನ್ನು ಮಾಡಿಯೇನ, ನಾನೀ ಕ್ಷಣ ಕುಸಿದು ಹೋದೇನು, ನಾನು ಸೋಲುವುದು ಖಂಡಿತ ಎಂಬಿತ್ಯಾದಿ ನಕಾರಾತ್ಮಕ ಯೋಚನೆಗಳು ಕ್ರಿಯೆಗಿಂತಲೂ ಮೊದಲೇ ಮನಸ್ಸಿನಲ್ಲಿ ಸ್ರವಿಸುತ್ತವೆ... ಅಲ್ವ..?. ಮನಸ್ಸೇ ಹಿಂದಡಿಯಿಟ್ಟ ಮೇಲೆ ದೇಹ ಏನು ತಾನೇ ಮಾಡೀತು...?

ನಮ್ಮದೇ ಮನಸ್ಸು ನಮ್ಮನ್ನು ಆಳುತ್ತದೆ. ಯೋಚನೆಗಳು ದುರ್ಬಲವಾದಾಗ, ಆತ್ಮವಿಶ್ವಾಸ ಕುಗ್ಗಿದಾಗ, ಮತ್ತು ನಕಾರಾತ್ಮಕ ಧೋರಣೆಗಳು ಬೆಳೆದಾಗ. ಅದು ನಮಗರಿವಿಲ್ಲದೇ ಒಳಮನಸ್ಸಿನಲ್ಲಿ ಮೀಟಿಂಗು ಮಾಡಿ ಹಿಂಜರಿಕೆಗಳನ್ನುಹೆಚ್ಚಿಸುತ್ತದೆ. ಅದೇ ಕಾರಣಕ್ಕೆ ಎರಡು ಕಿ.ಮೀ. ನಡೆಯಲು ಸನ್ನದ್ಧವಾಗಿದ್ದ ಮನಸ್ಸು ಏಕಾಏಕಿ ಮತ್ತೆರಡು ಕಿ.ಮೀ. ನಡೆಯಲು ಹಿಂಜರಿಯುತ್ತದೆ. ಅದರ ಬದಲು ಹೊರಡುವಾಗಲೇ ನಾಲ್ಕು ಕಿ.ಮೀ. ಗುರಿ ಇದ್ದಿದ್ದರೆ ಮನಸ್ಸು ಸರಾಗವಾಗಿ ಅದನ್ನು ಅಂಗೀಕರಿಸಿ ನಡೆಯಲು ಅನುವು ಮಾಡಿಕೊಡುತ್ತಿತ್ತು...

ಅನಿರೀಕ್ಷಿತ ನಷ್ಟಗಳು, ಹಿನ್ನಡೆ, ಅಪಮಾನ ಅಷ್ಟೇ ಯಾಕೆ ಸಾವು ಕೂಡಾ ಅಧೀರರಾಗಿಸುವುದು ಇದೇ ಕಾರಣಕ್ಕಲ್ವೇ... ಮನಸ್ಸು ಸಿದ್ಧವಾಗಿದ್ದರೆ ಪ್ರತಿಕ್ರಿಯಿಸುವುದಕ್ಕೂ, ಆಕಸ್ಮಿಕವಾಗಿ ಬಂದದ್ದಕ್ಕೆ ಪ್ರತಿಕ್ರಿಯಿಸುವುದಕ್ಕೂ ತುಂಬ ವ್ಯತ್ಯಾಸವಿದೆ.

....

ನಿಮ್ಮ ಸುತ್ತಮುತ್ತಲೇ ನೋಡಿ. ತುಂಬಾ ಲವಲವಿಕೆಯವರು, ಆತ್ಮವಿಶ್ವಾಸಿಗಳು, ವಸ್ತುನಿಷ್ಠರು ಆ ಕ್ಷಣಕ್ಕೆ ಬಂದದ್ದನ್ನು ಆ ಕ್ಷಣಕ್ಕೆ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ, ಬದಲಾವಣೆಗೆ ಸುಲಭವಾಗಿ ಒಗ್ಗಿಕೊಳ್ಳುತ್ತಾರೆ, ಬಂದದ್ದನ್ನು ಬಂದ ಹಾಗೆ ಸ್ವೀಕರಿಸುತ್ತಾರೆ, ಮತ್ತು ಸಿದ್ದ ಮನಃಸ್ಥಿತಿಯಲ್ಲಿ ಪರಿಸ್ಥಿತಿಗೆ ತಕ್ಕ ಹಾಗೆ ಬದಲಾಯಿಸಿಕೊಂಡು ಬದುಕುವ ದಾರಿ ಹುಡುಕುತ್ತಾರೆ. ಹಿಂಜರಿಕೆ ಉಳ್ಳವರು, ತುಂಬಾ ಯೋಚಿಸುತ್ತಲೇ ಕೂರುವವರು ಆಕಸ್ಮಿಕ ಪ್ರವಾಹವನ್ನು ನೋಡುತ್ತಲೇ ದಡದಲ್ಲಿ ಬಾಕಿ ಆಗುತ್ತಾನೆ....

 

...

 

ನೀವು ಮಾಡಿದ್ದು ಸರಿ, ಹೇಳಿದ್ದರಲ್ಲಿ ತಪ್ಪಿಲ್ಲ ಅಂತ ನಿಮಗೆ ಖಚಿತವಾಗಿ ಗೊತ್ತಿರುತ್ತದೆ. ಆದರೂ ಯಾರೋ ವಿಘ್ನ ಸಂತೋಷಿಗಳ ಮಾತು ನಿಮ್ಮನ್ನು ಚುಚ್ಚುತ್ತದೆ. ಪ್ರತಿಯೊಂದಕ್ಕೂ ತಲೆ ಕೆಡಿಸಬಾರದು, ವೃಥಾ ಆರೋಪಗಳಿಗೆ ಎದೆಗುಂದಬಾರದು ಎಂಬ ಥಿಯರಿ ಓದಿದ್ದರೂ ಆ ಕ್ಷಣಕ್ಕೆ ಚುಚ್ಚು ಮಾತುಗಳು ಇರಿಯುತ್ತವೆ. ನಿಮ್ಮ ಮೂಡು ಹಾಳಾಗುತ್ತದೆ. ಆ ಕ್ಷಣದ ಖುಷಿ ಕೆಡಿಸಲು ಮಾತನಾಡಿದ ವ್ಯಕ್ತಿ ಮುಂದಿನ ಕ್ಷಣ ಸಹಜವಾಗಿರುತ್ತಾನೆ ಮತ್ತು ಇನ್ನೊಬ್ಬರನ್ನು ಚುಚ್ಚಲು ತೆರಳಿರುತ್ತಾನೆ, ಆದರೆ ಅದರಿಂದ ವಿಚಲಿತರಾದ ನೀವು ಸಾವರಿಸಿಕೊಳ್ಳಲು ತುಂಬ ಹೊತ್ತು ಬೇಕಾಗುತ್ತದೆ... ಇಲ್ಲಿಯೂ ಮನಸ್ಸಿನದ್ದೇ ನಿರ್ಧಾರ....

.....

ಹೀಗಾಗಬಾರದು, ನಾನು ಹೀಗಿರುವುದಿಲ್ಲ ಎಂದು ನಿರ್ಧರಿಸಿದ್ದರೂ ಆ ಹೊತ್ತಿಗೆ ಅದೆಲ್ಲ ಮರೆಯುವುದು, ಆ ಹೊತ್ತಿಗೆ ಸಹನೆ ಕಳೆದುಕೊಳ್ಳುವುದು ಮತ್ತು ಆ ಹೊತ್ತಿಗೆ ವಿವೇಕ ಕೈಕೊಡುವುದು ಬಹುತೇಕರ ಬದುಕಿನಲ್ಲಿ ನಡೆಯುತ್ತಲೇ, ಮರುಕಳಿಸುತ್ತಲೇ ಇರುತ್ತದೆ... ಮನುಷ್ಯ ಅತಿ ಬುದ್ಧಿವಂತ, ಬೇರೆಯವರಿಗೆ ಹೇಳುವಷ್ಟು... ಆದರೆ ಸ್ವತಃ ಹೇಳಿದ್ದನ್ನೆಲ್ಲ ಪಾಲಿಸಲು ಪರದಾಡುತ್ತಿರುತ್ತಾನೆ. ಸಣ್ಣ ಸಣ್ಣ ಪಾಠಗಳು ಪರೀಕ್ಷೆಯ ಹೊತ್ತಿಗೆ ನೆನಪಿಗೇ ಬರುವುದಿಲ್ಲ!

ಮನಸ್ಸು ನಮ್ಮದೇ. ಆದರೆ ನಮ್ಮೊಳಗಿನ ಭಾವುಕತೆ ಅಥವಾ ಹಿಂಜರಿಕೆಗಳು ನಮ್ಮನ್ನೇ ಉಲ್ಲಂಘಿಸಿ ಆಳಿದ ಹಾಗೆ. ಇದು ಆತ್ಮ ಪರಮಾತ್ಮರ ಆಧ್ಯಾತ್ಮವಲ್ಲ. ಮನಸ್ಸು ಮನಸ್ಸುಗಳ ಮೇಲಾಟ...

.....

 

ದೃಷ್ಟಿ ಗ್ರಹಿಕೆಯ ಮೇಲೆ, ಗ್ರಹಿಕೆ ನಿರ್ಧಾರಗಳ ಮೇಲೆ, ನಿರ್ಧಾರಗಳು ಮುಂದಿನ ದಾರಿಯ ಮೇಲೆ, ಮುಂದಿನ ದಾರಿ ನಮ್ಮ ನಡವಳಿಕೆ ಮೇಲೆ ಪರಿಣಾಮ ಬೀರುತ್ತದೆ. ದೃಷ್ಟಿಗೆ ಗೋಚರವಾಗಿದ್ದನ್ನು ಗ್ರಹಿಸುವಲ್ಲಿ ವಿಫಲವಾದರೆ ಮುಂದಿನ ಎಲ್ಲ ತಂತುಗಳು ಅಸಹಜವಾಗಿ ಜೋಡುತ್ತಲೇ ಸಾಗುತ್ತವೆ. ವೈರಸ್ ಪೀಡಿತವಾದ ಕಂಪ್ಯೂಟರಿನ ಹಾಗೆ...

....

 

ಕಡಲು ಬಳಿ ಬಂದ ಹಾಗೆ ಕಂಡದ್ದನ್ನು, ಬೆಟ್ಟ ಬೆನ್ನತ್ತಿದ ಹಾಗೆ ಕಂಡದ್ದನ್ನು ಕಂಡು ಖುಷಿ ಪಡಬೇಕು, ಆದರೆ ಅದು ಭ್ರಮೆ ಎನ್ನುವುದು ತಿಳಿದಿರಬೇಕು. ಮತ್ತು ಅಂತಿಮ ನಿರ್ಧಾರ ನಮ್ಮ ವಿವೇಚನೆಯನ್ನು ಉಲ್ಲಂಘಿಸಿ ಹೋಗದಷ್ಟಾದರೂ ಜಾಗೃತಿ ಮನಸ್ಸಿಗೆ ಬೇಕು.... ಅಳವಡಿಸಲು ಸಾಧ್ಯವಾದರೆ ಮಾತ್ರ!!!

-ಕೃಷ್ಣಮೋಹನ ತಲೆಂಗಳ.

(23.01.2021)

No comments: