ಹೂಜಿಯಲ್ಲಿನ ನೀರು ಮತ್ತು ಖಾಲಿ ರಿಜಿಸ್ಟರು!

 (ಕಾಲ್ಪನಿಕ ಸಣ್ಣಕತೆ)

------

ಅದೊಂದು ನಾಲ್ಕು ರಸ್ತೆಗಳ ಸೇರುವ ವೃತ್ತ. ದಿನಾ ನೂರಾರು ಮಂದಿ ಓಡಾಡುತ್ತಿರುತ್ತಾರೆ. ಅಲ್ಲೊಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ನಾಲ್ಕಾರು ಜನಕ್ಕೆ ಪ್ರಯೋಜನ ಆದೀತು ಅಂತ ಭಾವಿಸಿ ಗುಂಡ ಒಂದು ದೊಡ್ಡ ನೀರಿನ ಹೂಜಿಯನ್ನು ವೃತ್ತದ ಪಕ್ಕ ಸ್ಥಾಪನೆ ಮಾಡಿದ. ಇದು ಉಚಿತ ಸೇವೆ, ಯಾರು ಬೇಕಾದರೂ ನೀರು ಕುಡಿಯಬಹುದು. ಆದರೆ, ದಯವಿಟ್ಟು ಪಕ್ಕದಲ್ಲೇ ಇರುವ ರಿಜಿಸ್ಟರ್ ಪುಸ್ತಕದಲ್ಲಿ ನಿಮ್ಮ ಹೆಸರು, ಸಹಿ ನಮೂದಿಸಿ, ಇದರಿಂದ ನನಗೆ ಪ್ರತಿದಿನ ಎಷ್ಟು ಮಂದಿ ಹೂಜಿಯ ಪ್ರಯೋಜನ ಪಡೆದರೆಂದು ತಿಳಿಯುತ್ತದೆ ಅಂತ ಫಲಕ ಬರೆಸಿ ಹಾಕಿದ....

 

ಜನರಿಗೆ ತುಂಬ ಖುಷಿಯಾಯಿತು. ಶುರುವಿನ ದಿನದಿಂದಲೇ ನೀರು ಕುಡಿಯಲು ಜನ ಬರತೊಡಗಿದರು. ದಿನಾ ಗುಂಡ ಮೂರು ನಾಲ್ಕು ಸಲ ಬಂದು ಹೂಜಿಗೆ ನೀರು ತುಂಬಿಸಿ ಹೋಗುತ್ತಿದ್ದ. ಹೂಜಿ ಸ್ಥಾಪಿಸಿದವರ ಹೆಸರು ಅಲ್ಲಿ ಎಲ್ಲಿಯೂ ಇಲ್ಲದ ಕಾರಣ, ಆತನೇ ಹೂಜಿ ಸ್ಥಾಪಿಸಿದವ ಅಂತ ಅಲ್ಲಿ ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಯಾರು ಕೂಡಾ ನೀರು ಕುಡಿದ ಬಳಿಕ ಅಲ್ಲಿದ್ದ ಫಲಕವನ್ನಾಗಲೀ ರಿಜಿಸ್ಟರ್ ಪುಸ್ತಕವನ್ನಾಗಲೀ ಗಮನಿಸುತ್ತಲೇ ಇರಲಿಲ್ಲ. ನೀರು ಕುಡಿದು ಹೋಗುತ್ತಾ ಇದ್ದರು. ಒಬ್ಬರು ಕೂಡಾ ರಿಜಿಸ್ಟರ್ ನಲ್ಲಿ ತಮ್ಮ ಹೆಸರು, ಸಹಿ ಬರೆಯಲೇ ಇಲ್ಲ. ಒಬ್ಬನಂತೂ ಹೆಸರು ಬರೆಯಲು ಇರಿಸಿದ್ದ ಪೆನ್ನನ್ನೇ ಜೇಬಿಗಿಳಿಸಿ ಹೊರಟುಹೋದ!!!

ಆದರೂ ನೀರು ಕುಡಿಯಲು ಜನ ಬರುತ್ತಲೇ ಇದ್ದರು. ಒಂದು ದಿನ ಪುರುಸೊತ್ತಿನಲ್ಲಿ ಬಂದ ಒಬ್ಬ ನೀರು ಕುಡಿದಾಗ ಪಕ್ಕದಲ್ಲೇ ಇದ್ದ ಪುಸ್ತಕ ಕಂಡಿತು. ಖಾಲಿ ಪುಸ್ತಕದಲ್ಲಿ ಬರೆದು ಹಾಕಿದ... ಪೇಯಿಂಗ್ ಗೆಸ್ಟ್ ಸೌಲಭ್ಯ ಇದೆ, ಬೇಕಾದವರು ವಿಚಾರಿಸಿ... ಪಕ್ಕದಲ್ಲೇ ತನ್ನ ನಂಬರ್ ಬರೆದ. ನಂತರ ಬಂದವ ಅದರ ಕೆಳಗೆ ಹಾಕಿದ ಪೇಯಿಂಗ್ ಗೆಸ್ಟ್ ಎಂದು ಹಾಕಿದರೆ ಸಾಕಾ, ಲೋಕೇಶನ್ ನಮೂದಿಸಿ... ಮತ್ತೊಬ್ಬ ಬರೆದು ಹಾಕಿದ ನಾಲ್ಕೇ ದಿನದಲ್ಲಿ ಕರಾಟೆ ಕಲಿಯಲು ಸಂಪರ್ಕಿಸಿ... ಹೀಗೆ ಜನ ಯಥಾಶಕ್ತಿ ತಮ್ಮ ಜಾಹೀರಾತುಗಳನ್ನು ಪ್ರಚಾರಗೊಳಿಸಲು ರಿಜಿಸ್ಟರ್ ನ್ನು ಬಳಸತೊಡಗಿದರು. ಯಾರೂ ಕೂಡಾ ಹಿಂದಿನ ಬರಹಗಳನ್ನು ಓದುತ್ತಿರಲಿಲ್ಲ. ತಮ್ಮದನ್ನು ಬರೆದು ಮುಂದೆ ಹೋಗುತ್ತಿದ್ದರು. ಒಬ್ಬ ಮೈಮೇಲೆ ಬಿದ್ದ ಹಕ್ಕಿ ಹಿಕ್ಕೆಯನ್ನು ಒರೆಸಲು ಪುಸ್ತಕದ ಹಾಳೆಯನ್ನೇ ಹರಿದು ಪೇಪರ್ ನ್ಯಾಪ್ಕಿನ್ ಆಗಿ ಬಳಸಿ ಸಮಯೋಚಿತ ಕೆಲಸ ಮಾಡಿದ!

 

ಸ್ವಲ್ಪ ದಿನದ ಬಳಿಕ ಒಬ್ಬ ತಾನು ನೀರು ಕುಡಿದಾದ ಮೇಲೆ ತನ್ನ ಬಾಟಲಿಯಲ್ಲಿ ನೀರು ತುಂಬಿಸಿ ಕೊಂಡು ಹೋದ. ನಂತರ ಇದು ಪರಿಪಾಠವಾಯಿತು. ಎಲ್ಲರೂ ಹೂಜಿಯಿಂದ ಯಥಾಶಕ್ತಿ ನೀರನ್ನು ಬಾಟಲಿಯಲ್ಲಿ ತುಂಬಿಸಿ ಕೊಂಡು ಹೋಗತೊಡಗಿದರು. ಯಾರೂ ಕೂಡಾ ಹೂಜಿ ಖಾಲಿಯಾದರೆ ನೀರು ತುಂಬಿಸುತ್ತಿರಲಿಲ್ಲ. ಒಬ್ಬನಂತೂ ನೀರಿನ ಹೂಜಿಯ ಕೆಳಗೇ ಕ್ಯಾಕರಿಸಿ ಉಗಿದು, ಮುಖ ತೊಳೆದು, ಬಾಯಿ ಮುಕ್ಕುಳಿಸಿ ಉಗಿದು ಮುಖವನ್ನು ಸ್ವಚ್ಛಗೊಳಿಸಿದ. ಆದರೂ ಕೂಡಾ ತಪ್ಪಿಯೂ ಯಾರೂ ಕೂಡಾ ರಿಜಿಸ್ಟರಿನಲ್ಲಿ ತಮ್ಮ ಹೆಸರು, ಸಹಿ ಹಾಕಲೇ ಇಲ್ಲ. ಯಾರಿಗೂ ಅದೊಂದು ಮಾಡಬೇಕಾದ ಕೆಲಸ ಅಂತ ಅನ್ನಿಸಲೇ ಇಲ್ಲ...!!!

ಮತ್ತೊಬ್ಬ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಹೂಜಿಗೆ ಸ್ಟಿಕ್ಕರ್ ಅಂಟಿಸಿದ ಶ್ರೀಮಾನ್ ಪುಢಾರಿಯವರು ನಾಳೆ ನಗರಕ್ಕೆ ಆಗಮಿಸುತ್ತಿದ್ದಾರೆ, ಎಲ್ಲರೂ ಆಗಮಿಸಿ ಸಹಕರಿಸಿ...” ಅದರ ಕೆಳಗೆ ಮತ್ತೊಂದು ಸ್ಟಿಕ್ಕರ್ ಸೇರ್ಪಡೆಯಾಯಿತು, ಯುಗಾದಿಗೆ ದರಕಡಿತದ ಮಾರಾಟ... ಕೂಡಲೇ ಸಂಪರ್ಕಿಸಿ... ನಾಲ್ಕು ದಿನ ಕಳೆಯುವಷ್ಟರಲ್ಲಿ ಹೂಜಿಯ ಮೇಲೆಲ್ಲ ಅವರವರ ಪ್ರಚಾರದ ಸ್ಟಿಕ್ಕರುಗಳೇ ತುಂಬಿ ಹೋಯಿತು... ಆದರೂ ಗುಂಡ ನಿರ್ಲಿಪ್ತವಾಗಿ ದಿನಾ ಹೂಜಿಗೆ ನೀರು ತುಂಬುತ್ತಲೇ ಇದ್ದ...

ಹೂಜಿಯ ನೀರು ಎಲ್ಲೆಲ್ಲಿಗೋ ರವಾನೆಯಾಗುತ್ತಿತ್ತು... ಹೂಜಿಯ ರಿಜಿಸ್ಟರಿನಲ್ಲಿ ಏನೇನೋ ಬರಹಗಳು ರಾರಾಜಿಸುತ್ತಿದ್ದವು, ಹೂಜಿಯ ದೇಹದ ಮೇಲೆಲ್ಲಾ ವಾಲ್ ಪೋಸ್ಟರುಗಳು, ಸ್ಟಿಕ್ಕರುಗಳು ವಕ್ರವಕ್ರವಾಗಿ ಕುಳಿತಿದ್ದವು...

ಅದೊಂದು ದಿನ ಗುಂಡ ಸ್ವಂತ ಕೆಲಸದಲ್ಲಿ ವ್ಯಸ್ತನಾಗಿದ್ದ. ಹೂಜಿಗೆ ನೀರು ತುಂಬಿಸಲು ಪುರುಸೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಹೂಜಿ ಖಾಲಿಯಾಯಿತು. ನೀರು ಕುಡಿಯಲು ಬಂದವರು ನಿರಾಶರಾದರು. ಕೆಲವರು ಬೇರೆ ಹೂಜಿ ಇದೆಯಾ ಅಂತ ಹುಡುಕುತ್ತಾ ಹೋದರು. ಒಂದಿಬ್ಬರು ನೇರವಾಗಿ ಬಯ್ಯತೊಡಗಿದರು- ಈ ನೀರು ತುಂಬಿಸುವವನಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ, ಹೊತ್ತಿಗೆ ಸರಿಯಾಗಿ ನೀರು ತುಂಬಿಸಬೇಕು ಅಂತ ಗೊತ್ತಿಲ್ವ... ಬೇಜವಾಬ್ದಾರಿ ಮನುಷ್ಯ ಅಂತ. ಮತ್ತೊಬ್ಬ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ರಿಜಿಸ್ಟರ್ ಪುಸ್ತಕದಲ್ಲಿ ಬರೆದ... ದೇಶದಲ್ಲಿ ಜನರಿಗೆ ಸಮಯ ಪ್ರಜ್ಞೆ, ಶಿಸ್ತು ಇಲ್ಲದಿದ್ದರೆ ಹೀಗೆಯೇ ಆಗುವುದು, ಹೂಜಿಗೆ ಹೊತ್ತು ಹೊತ್ತಿಗೆ ನೀರು ತುಂಬಿಸಬೇಕು ಅಂತ ಜವಾಬ್ದಾರಿ ಇಲ್ಲದ ಇದರ ನಿರ್ವಾಹಕನಿಗೆ ಧಿಕ್ಕಾರ...!!!”

ಮರುದಿನ ಎಂದಿನಂತೆ ನೀರು ತುಂಬಿಸಲು ಬಂದ ಗುಂಡನಿಗೆ ಅಲ್ಲಿನ ಬರಹಗಳನ್ನು ಕಂಡು ಅಚ್ಚರಿಯಾಯಿತು. ಬೇಸರವೂ ಆಯಿತು. ಒಂದು ನಿರ್ಧಾರಕ್ಕೆ ಬಂದ...

ಅದರ ಮರುದಿನ ಅಲ್ಲಿಂದ ಹೂಜಿ ಮಾಯವಾಯಿತು. ಗುಂಡನ ಬರುವಿಕೆಯೂ ನಿಂತಿತು. ಜನ ಪಕ್ಕದ ಗೂಡಂಗಡಿಯಿಂದ ದುಡ್ಡು ಕೊಟ್ಟು ನೀರು ಖರೀದಿಸಲು ಶುರು ಮಾಡಿದರು. ಆಗೊಮ್ಮೆ, ಈಗೊಮ್ಮೆ ಜನ ಆಡಿಕೊಳ್ಳುತ್ತಲೇ ಇದ್ದರು ಆ ಹೂಜಿಗೆ ನೀರು ತುಂಬಿಸುವವನಿಗೆ ಉದಾಸೀನ ಜಾಸ್ತಿ ಇರಬಹುದು, ಆತನಿಗೆ ಇದರಲ್ಲಿ ಏನೋ ಲಾಭ ಕಮ್ಮಿ ಆಗಿರಬಹುದು, ಆ ನೀರು ತುಂಬಿಸುವ ವ್ಯಕ್ತಿಗೆ ಕೊಬ್ಬು ಜಾಸ್ತಿಯಾಯಿತು.. ಸ್ವಾರ್ಥಿ.. ಹೀಗೆಲ್ಲ ಹೇಳುತ್ತಲೇ ಇದ್ದರು. ಯಾರೂ ಕೂಡಾ ಗುಂಡನನ್ನೂ, ಹೂಜಿಯನ್ನೂ ಹುಡುಕುವ ಪ್ರಯತ್ನ ಮಾಡಲಿಲ್ಲ. ಬದಲಾದ ಪರಿಸ್ಥಿತಿಗೆ ಎಲ್ಲರೂ ಹೊಂದಿಕೊಂಡಿದ್ದರು.

....

ನಾಲ್ಕು ದಿನದ ಬಳಿಕ ಅಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿ ಗುಂಡ ಅದೇ ಹೂಜಿಯನ್ನು ಸ್ವಚ್ಛಗೊಳಿಸಿ ಪುನಃ ಸ್ಥಾಪನೆ ಮಾಡಿದ್ದ, ಅದೇ ರೀತಿಯ ರಿಜಿಸ್ಟರ್ ಇರಿಸಿ ಫಲಕ ಹಾಕಿದ್ದ... ದಿನಾ ನೀರು ತುಂಬಿಸುತ್ತಿದ್ದ. ಗುಂಡ ಕಾಯುತ್ತಲೇ ಇದ್ದ, ಒಂದಲ್ಲ ಒಂದು ದಿನ ರಿಜಿಸ್ಟರಿನಲ್ಲಿ ಜನ ಶಿಸ್ತಿನಿಂದ ಹೆಸರು ಬರೆದು ಸಹಿ ಹಾಕಬಹುದು ಎಂದು.!!!

(ಈ ಬರಹವನ್ನು ಯಾರಾದರೂ ಕೊನೆಯ ತನಕ ಓದಿದ್ದರೆ ನೀರಿನ ಹೂಜಿಯನ್ನು ವಾಟ್ಸಪ್ ಗ್ರೂಪ್ ಎಂದೂ ನೀರನ್ನು ಮೆಸೇಜು ಎಂದೂ ಭಾವಿಸಿ ಇನ್ನೊಮ್ಮೆ ಓದಬಹುದು!)

-ಕೃಷ್ಣಮೋಹನ ತಲೆಂಗಳ (20.02.2021).