ಸಾವು ಸಿಂಗಲ್ ಕಾಲಂ ಸುದ್ದಿಗೆ ಸೀಮಿತವಲ್ಲ, ಇದು ಅಂತ್ಯವಿಲ್ಲದೆ ಕತೆ... ನಿರಾಕರಿಸಲಾಗದ ಸತ್ಯ!
ಸಾವಿನ ಸುದ್ದಿಗಳೆಲ್ಲ ಪತ್ರಿಕೆಗಳಲ್ಲಿ ಬಹುತೇಕ ಸಿಂಗಲ್ ಕಾಲಂ ವರದಿ ಹಾಗೂ
ಸಣ್ಣದೊಂದು ಫೋಟೋಗೆ ಮುಗಿದು ಬಿಡುತ್ತದೆ. ಬದುಕಿನಲ್ಲಿ ಇನ್ಯಾವತ್ತೂ ಸುದ್ದಿಯಾಗದಿದ್ದವರೂ
ಸಾವಿನ ಬಳಿಕವಾದರೂ ಸುದ್ದಿಯಾಗುತ್ತಾರೆ. ಆದರೆ ಸಾವು ಸಂಖ್ಯೆಯಲ್ಲ, ವೈಯಕ್ತಿಕವಾಗಿ ನೋಡುತ್ತಾ
ಹೋದರೆ ಪ್ರತಿ ಸಾವು ಕೂಡಾ ಒಂದು ಕಥೆ, ಅದೂ ಮುಕ್ತಾಯ ಕಾಣದ ಕಥನ... ಸತ್ತವರು ನಿರ್ಗಮಿಸಿದರೂ ಬದುಕಿದವರನ್ನು
ಕಾಡುವ ವೈರಾಗ್ಯ, ಹತಾಶ ಮನಃಸ್ಥಿತಿ ಮತ್ತು ಮನಸ್ಸನ್ನು ಬಂಡೆಯಾಗಿಸುವ ಪರಿಸ್ಥಿತಿ ಇವಿಷ್ಟೂ ಸಶೇಷ
ಕತೆಯಾಗಿದ್ದು ಯಾವ ಪತ್ರಿಕೆಗಳಲ್ಲೂ ಅವು ಸುದ್ದಿಗಳಾಗುವುದಿಲ್ಲ, ಜಾಲತಾಣಗಳಲ್ಲಿ ಮುಗಿದು ಹೋದ
ಬದುಕು ವೈರಲ್ ಬರಹವಾಗುವುದಿಲ್ಲ. ಅದು ಕಾಡುವುದು ತಲಪುವುದು ಸತ್ತವರ ಮನೆಯವರನ್ನು ಮತ್ತು
ಅವರನ್ನು ನಂಬಿದವರ ಮನಗಳನ್ನು ಮಾತ್ರ!
ಐವರು ಗಂಡು ಮಕ್ಕಳ ಪೈಕಿ ದೊಡ್ಡಪ್ಪಚ್ಚಿ (ದೊಡ್ಡ ಚಿಕ್ಕಪ್ಪ) ಮಧ್ಯಮದbರು. ಮಧ್ಯಮ ಪಾಂಡವನ ಹಾಗೆ ಅವರು ಶಾರೀರಿಕವಾಗಿಯೂ, ಅಂತಃಸತ್ವದಲ್ಲೂ ಗಟ್ಟಿ ಅಂತಲೇ ಲೆಕ್ಕ. ಇಹಲೋಕ ತ್ಯಜಿಸುವ ತನಕವೂ ಅವರನ್ನು ಬಿಪಿ, ಡಯಾಬಿಟಿಸ್, ಕೊರೋನಾ ಇವೆಲ್ಲ ಕಾಡಿದ್ದಿಲ್ಲ, ದಿನಗಟ್ಟಲೆ ಅನಾರೋಗ್ಯ ಅಂತ ಮಲಗಿದ್ದಿಲ್ಲ. ಬದುಕಿನಲ್ಲಿ ತೀವ್ರ ಸವಾಲುಗಳು, ಕಷ್ಟಗಳು ಕಾಡಿದಾಗಲೂ ಅವನ್ನು ಗಂಭೀರವಾಗಿ ತಲೆಗೆ ಹಚ್ಚಿಕೊಂಡು ಟೆನ್ಶನ್, ಡಿಪ್ರೆಶನ್ ಅಂತ ತೋರಿಸಿಕೊಂಡವರಲ್ಲ. ತಾನಾಯಿತು, ತನ್ನ ಇಷ್ಟದ ಯಕ್ಷಗಾನವಾಯಿತು ಅಂತ ಓಡಾಡಿಕೊಂಡಿದ್ದ ವ್ಯಕ್ತಿ ಮೊನ್ನೆ ಶುಕ್ರವಾರ ತಡರಾತ್ರಿ ದಿಢೀರನೆ ನಿರ್ಗಮಿಸಿದರು. ವಯಸ್ಸು 70ರ ಹತ್ತಿರ ತಲುಪಿತ್ತು. ಆದರೆ, ಸಾವು ಹೀಗೆ ಆವರಿಸಿಕೊಳ್ಳುತ್ತದೆ ಅಂತ ಅವರ ತೀರಾ ಆಪ್ತರೂ ಊಹಿಸಲೂ, ಕಂಡುಕೊಳ್ಳಲೂ ಸಾಧ್ಯವಾಗಲಿಲ್ಲ. ಸಾವೆಂಬುದು ಹೇಳಿ ಕೇಳಿ ಬರುತ್ತದೆ ಅಂತಲ್ಲ. ಆದರೂ ಸಂಜೆ 7ರ ತನಕ ಸಹಜವಾಗಿದ್ದ ವ್ಯಕ್ತಿ ಮಧ್ಯರಾತ್ರಿ ಇನ್ನಲ್ಲವಾಗಿ, ಬೆಳಗ್ಗೆ ಬಂಧು ಮಿತ್ರರು ಮೊಬೈಲ್ ನೋಡುವ ಹೊತ್ತಿಗೆ ಸಾವಿನಿಂದ ಸುದ್ದಿಯಾಗಿ ಮಧ್ಯಾಹ್ನದ ಹೊತ್ತಿಗೆ ಬೂದಿಯಾಗುವಷ್ಟರ ಮಟ್ಟಿಗೆ ಅವರು ನಿತ್ರಾಣರೂ, ದುರ್ಬಲರೂ ಆಗಿರಲಿಲ್ಲ. ಸಾವಿನ ಲೆಕ್ಕಾಚಾರಕ್ಕೆ ಯಾವುದೇ ತಾರ್ಕಿಕ ಕಾರಣಗಳು ಬೇಕಿಲ್ಲ ಎಂಬುದು ನಮ್ಮ ಹತ್ತಿರದವರ ಸಾವನ್ನು ಸಮೀಪದಿಂದ ಕಂಡಾಗ ಪ್ರತಿಯೊಬ್ಬನಿಗೂ ಅನ್ನಿಸುವ ವಿಷಯವೇ ಹೌದು.
ರಾಮಣ್ಣನೇ ಆಗಿದ್ದ ಚಿಕ್ಕಪ್ಪ....
ಚಿಕ್ಕಪ್ಪ ರಾಮಚಂದ್ರ ಭಟ್ಟರು ಮಾಷ್ಟ್ರು. ರಾಮಣ್ಣ ಅಂತಲೇ ಎಲ್ರೂ ಕರೆಯುತ್ತಿದ್ದದ್ದು. ಹುಟ್ಟಿದ್ದು ಬಾಯಾರು ತಲೆಂಗಳದಲ್ಲಿ (ಕಾಸರಗೋಡು ಜಿಲ್ಲೆ,ಕೇರಳ) ಆದರೂ ವೃತ್ತಿ ಬದುಕು ಕಟ್ಟಿಕೊಂಡದ್ದು ಮಂಜೇಶ್ವರ ತಾಲೂಕು ಉಕ್ಕಿನಡ್ಕ ಸಮೀಪದ ಬಣ್ಪುತ್ತಡ್ಕ (ಈಗಿನ ಕಾಸರಗೋಡು ಕೋವಿಡ್ ಆಸ್ಪತ್ರೆ ಸಮೀಪ) ಶಾಲೆಯಲ್ಲಿ ಒಟ್ಟು 33 ವರ್ಷ ಮೇಷ್ಟ್ರಾಗಿ, ಅದರಲ್ಲಿ ನಾಲ್ಕು ವರ್ಷ ಹೆಡ್ಮಾಷ್ಟ್ರಾಗಿ ದುಡಿದು ಯಶಸ್ವಿಯಾಗಿ ನಿವೃತ್ತರಾದರೂ. ಯಕ್ಷಗಾನವೆಂದರೆ ಪಂಚಪ್ರಾಣ. ತಲೆಂಗಳದ ಬೈಲಿನ ಎಲ್ಲ ಮನೆಗಳಲ್ಲೂ ಯಕ್ಷಗಾನದ ಹುಚ್ಚರೇ ಇರುವುದು. ಅದರಲ್ಲೂ ರಾಮಣ್ಣನಿಗೆ ಯಕ್ಷಗಾನವೆಂದರೆ ಬೇರೇನೂ ಬೇಡ. ಇದು ಅವರ ಆಪ್ತರಿಗೆಲ್ಲ ಗೊತ್ತು. ಹೊತ್ತು ಗೊತ್ತಿಲ್ಲದೆ, ದೂರದ ಪರಿವೆಯಿಲ್ಲದೆ ಅವರು ಆಟಗಳಿಗೆ ಹೋಗ್ತಾ ಇದ್ರು. ಕಲ್ಲುಗುಂಡಿ ಆಟ, ಕೈರಂಗಳ ಆಟದಿಂದ ತೊಡಗಿ ದೊಡ್ಡ ದೊಡ್ಡ ಆಟಗಳಲ್ಲಿ ಅವರ ಹಾಜರಾತಿ ಪಕ್ಕಾ ಆಗಿರ್ತಾ ಇತ್ತು. ಆಟದ ಕರಪತ್ರಗಳು, ಟಿಕೆಟುಗಳು, ಪ್ರಸಂಗ ಮಾಹಿತಿಗಳು ಅವರ ಹತ್ರ ಸದಾ ಇರ್ತಾ ಇತ್ತು.
ವೀಳ್ಯದೆಲೆ ತಿಂದು ಕೆಂಪಾದ ತುಟಿ, ದಪ್ಪ ಕನ್ನಡಕ, ಅಚ್ಚ ಬಿಳಿಯ ಮುಂಡು, ನೀಲಿ ಅಂಗಿ, ಕಡುಕಪ್ಪು ತಲೆಕೂದಲು, ಸ್ಲಿಪ್ಪರ್ ಚಪ್ಪಲಿ, ಗಿಡ್ಡವಾದರೂ ದೃಢ ದೇಹದ ದೊಡ್ಡಪ್ಪಚ್ಚಿ ಕೊನೆಯ ತನಕವೂ ಬದುಕನ್ನು ತೀರಾ ಗಂಭೀರವಾಗಿ ತೆಗೆದುಕೊಂಡು ಟೆನ್ಶನ್ ಮಾಡುತ್ತಾ ಕೂತವರಲ್ಲ, ಕುಶಾಲು ಮಾತನಾಡುತ್ತಲೇ, ಕೆಲವೊಮ್ಮೆ ನಿರ್ಲಿಪ್ತವಾಗಿರುತ್ತಲೇ, ಕೆಲವೊಮ್ಮೆ ಟೀಕೆಗಳು ಹಾಗೂ ಅವಹೇಳನಗಳನ್ನು ಕೇಳಿಯೂ ಕೇಳದಂತೆ ಸ್ಥಿತಪ್ರಜ್ಞರಾಗಿರುತ್ತಲೇ ಬಾಳದಾರಿಯಲ್ಲಿ ನಡೆಯುತ್ತಲೇ ಹೋದವರು...ಇವತ್ತು ತಿರುಗಿ ನೋಡದೆ ಸೀದಾ ನಡೆದಿದ್ದಾರೆ....
ಅವರ ಮರಣಾನಂತರ ಜಾಲತಾಣದಲ್ಲಿ ಇಬ್ಬರು ಮಹನೀಯರು ಅವರ ಕುರಿತು ಬರೆದ ಲೇಖನಗಳನ್ನು ಓದಿದಾಗ ಅವರು ಬಿಟ್ಟು ಹೋಗಿದ್ದು ಮತ್ತು ತನ್ನ ಆಪ್ತ ವಲಯವನ್ನು ಅವರೆಷ್ಟು ತಟ್ಟಿದ್ದರು ಎಂಬುದು ಮತ್ತಷ್ಟು ಸ್ಪಷ್ಟವಾಯಿತು. ತನ್ನ ಹವ್ಯಾಸಗಳು, ಪ್ರವೃತ್ತಿಗಳು ಅಥವಾ ವಿಶೇಷ ಆಸಕ್ತಿಗಳಿಂದ ಅಧಿಕಪ್ರಸಂಗಿಗಳಂತೆ, ಕಾಲಹರಣ ಮಾಡುವವರಂತೆ, ಬದುಕನ್ನು ಹಗುರವಾಗಿ ತೆಗೆದುಕೊಳ್ಳುವಂತೆ ಕಾಣಿಸಿಕೊಳ್ಳುವವರ ಪೈಕಿ ಹಲವರು ಸದ್ದಿಲ್ಲದೆ ಮಾಡಿದ ಕೆಲಸಗಳು ಬೃಹತ್ತಾಗಿ ಎದ್ದು ನಿಲ್ಲುವ ತನಕ ಅವರ ಕೆಲಸಗಳು ಅವರ ಸಮೀಪವರ್ತಿಗಳಿಗೆ, ಕುಟುಂಬಿಕರಿಗೆ ಮಹತ್ವದ್ದೆಂದು ಅನ್ನಿಸುವುದೇ ಇಲ್ಲ. ಅದೊಂದು ಚಿಲ್ಲರೆ, ನಗೆಪಾಟಲಿನ ವಿಚಾರದಂತೆಯೇ ಭಾಸವಾಗುತ್ತಿರುತ್ತದೆ, ಇದು ಲೋಕರೂಢಿಯೂ ಹೌದು.
ದೊಡ್ಡಪ್ಪಚ್ಚಿಯೂ ಹಾಗೆ. ಮಾಹಿತಿ ಸಂಗ್ರಹ ಅವರಿಗಿಷ್ಟದ ಹವ್ಯಾಸ. ಅವರಲ್ಲೊಂದು ಕಪ್ಪು ದೊಡ್ಡ ಬ್ಯಾಗು ಸದಾ ಹೆಗಲಲ್ಲಿ ಇದ್ದದ್ದೇ. ಅದರೊಳಗೆ ನಾಲ್ಕಾರು ಪುಸ್ತಕಗಳು, ಸಿಡಿಗಳು, ಕ್ಯಾಸೆಟ್ಟುಗಳು, ಕರಪತ್ರಗಳು, ಹಳೇ ಪುಸ್ತಕಗಳು ಇರ್ತಾ ಇದ್ದವು. ಅವುಗಳಲ್ಲಿ ಅವರು ಮಾಹಿತಿಗಳನ್ನು ದಾಖಲಿಸುತ್ತಲೇ ಇರ್ತಾ ಇದ್ರು. ಅವರ ಅಕ್ಷರ ತುಂಬ ಚೆಂದ. ಬರಹ ಅಚ್ಚುಕಟ್ಟು. ಅವರ ಬಣ್ಪುತ್ತಡ್ಕದ ಮನೆ (ಗುರುನಿಲಯ)ಯ ಮರದ ಕಪಾಟಿನಲ್ಲಿ ಮಾಹಿತಿಯುಕ್ತ ಪುಸ್ತಕಗಳು, ಮ್ಯಾಪುಗಳು ಇವೆಲ್ಲ ಚಿಕ್ಕಂದಿನಲ್ಲಿ ನಮ್ಮ ಆಸಕ್ತಿಯ ಕೇಂದ್ರವಾಗಿತ್ತು. ತುಂಬ ಸಮಯದ ವರೆಗೂ ನಮಗೆಲ್ಲ ಅವರೇನು ಬರೆಯುತ್ತಿದ್ದಾರೆ ಅಂತ ಗೊತ್ತಿರಲೇ ಇಲ್ಲ. ಅವರಿಗೆ ಹೃದಯಾಘಾತವಾಗುವ ಕೆಲವು ನಿಮಿಷಗಳ ಮೊದಲೂ ಅವರು ಎಂದಿನ ಹಾಗೆ ತನ್ನ ಪುಸ್ತಕದಲ್ಲಿ ಏನನ್ನೋ ಬರೆಯುತ್ತಲೇ ಇದ್ದರು ಅಂತ ಚಿಕ್ಕಮ್ಮ ಕಣ್ಣಾಲಿ ತುಂಬಿಕೊಂಡು ಹೇಳಿದಾಗ... ಸೂಚನೆಯೇ ನೀಡದೆ ಬರುವ ಸಾವೆಷ್ಟು ನಿರ್ದಯಿ ಅಂತ ಯೋಚಿಸಿದರೂ ಅದು ನಿರಾಕರಿಸಲಾಗದ ಸತ್ಯ ಅಂತ ನಿರ್ಲಿಪ್ತ ಪರಿಸ್ಥಿತಿ ಕೂಗಿ ಕೂಗಿ ಹೇಳ್ತಾ ಇದೆ ಅನ್ನಿಸಿತು.
ಅವರು ನೆಂಟರಿಷ್ಟರ ಹುಟ್ಟಿದ ದಿನ, ಮದುವೆಯಾದ ದಿನ, ಅವರ ವಿದ್ಯಾರ್ಹತೆ, ಕೆಲಸ, ವಿಳಾಸ ಇವನ್ನೆಲ್ಲ ದಾಖಲಿಸುತ್ತಾ ಹೋದರು. ಕ್ರಮೇಣ ಅದು ಹವ್ಯಾಸವಾಯಿತು... ಯಾವುದೇ ಗೊತ್ತು ಗುರಿ ಇಲ್ಲದೆ ಅವರು ಹೋದಲ್ಲೆಲ್ಲ ಬಂಧುಗಳನ್ನು, ಮಿತ್ರರನ್ನು ಮಾತನಾಡಿಸಿ ವಿವರಗಳನ್ನು ದಾಖಲಿಸುತ್ತಲೇ ಹೋದರು. ಅದನ್ನೆಲ್ಲ ಸಂಗ್ರಹಿಸಿದರೆ ದೊಡ್ಡ ಪುಸ್ತಕವಾದೀತು. ಹುಟ್ಟಿನಿಂದಲೇ ಯಕ್ಷಗಾನವೆಂದರೇ ಪ್ರಾಣ. ಎಷ್ಟು ದೂರವಾದರೂ ಆಟಕ್ಕೆ ಹೋಗಿಯೇ ಸೈ. ಬೆಳಗ್ಗಿನ ವರೆಗೂ ನೋಡಿಯೇ ಬರುವುದು. ಅರ್ಧದಲ್ಲಿ ಬರುವ ಪ್ರಶ್ನೆಯೇ ಇಲ್ಲ. ಈ ನಡುವೆ ದೊಡ್ಡಪ್ಪಚ್ಚಿಗೆ ಅದ್ಯಾವಾಗ ಯಕ್ಷಗಾನ ಮಾಹಿತಿ ಸಂಗ್ರಹ ಹವ್ಯಾಸ ಶುರುವಾಯ್ತೋ ನಮಗ್ಯಾರಿಗೂ ಗೊತ್ತಿಲ್ಲ. ತಾವು ಆಟಕ್ಕೆ ಹೋದಾಗಲೆಲ್ಲ, ಕಲಾವಿದರ ಭೇಟಿಯಾದಾಗಲೆಲ್ಲ ಅವರ ಮಾಹಿತಿ ಸಂಗ್ರಹ ಶುರು ಮಾಡಿದರು. ಹೆಸರು, ವಿಳಾಸ, ಫೋನ್ ಸಂಖ್ಯೆ, ಅನುಭವ (ಇನ್ನು ಏನೇನೋ ಇದೆಯೋ ನನಗೂ ಸರಿ ಗೊತ್ತಿಲ್ಲ) ಇತ್ಯಾದಿಗಳನ್ನು ತನ್ನ ನೋಟ್ ಪುಸ್ತಕದಲ್ಲಿ ಬರೆಯುತ್ತಾ ಹೋದರೂ. ಬಹುಶಃ ಸುಮಾರು 20-25 ವರ್ಷಗಳಿಂದ ಈ ಕೆಲಸ ಮಾಡುತ್ತಾ ಬಂದರು. ಅವರಿಗೆ ಕಂಪ್ಯೂಟರ್ ಜ್ಞಾನವಿರಲಿಲ್ಲ, ಸ್ಮಾರ್ಟ್ ಫೋನ್ ಬಳಕೆ ಗೊತ್ತಿರಲಿಲ್ಲ. ಆದರೂ ಒಂದು ಅಕಾಡೆಮಿ, ಒಂದು ವಿಶ್ವವಿದ್ಯಾನಿಲಯ ಮಾಡದ ಕೆಲಸವನ್ನು ಅವರು ತಿರುಗಾಡುತ್ತಲೇ ಮಾಡಿದರು. ಇವತ್ತು ಅವರ ಬ್ಯಾಗು ತೆರೆದು ನೋಡಿದರೆ ಅದರಲ್ಲಿ ಸಹಸ್ರಾರು ಕಲಾವಿದರ ಅಮೂಲ್ಯ ಮಾಹಿತಿಗಳು ಸಿಕ್ಕಾವು. ಇದರ ಜೊತೆಗೆ ಯಕ್ಷಗಾನದ ಆಡಿಯೋ, ವಿಡಿಯೋ ಸಿಡಿ, ಕ್ಯಾಸೆಟ್ ಸಂಗ್ರಹ ಶುರು ಮಾಡಿದರು.
ಕೇವಲ ಸಿಡಿ ಸಂಗ್ರಹ ಮಾತ್ರವಲ್ಲ ಅದರಲ್ಲಿ ಅಡಕವಾಗಿರುವ ಪ್ರಸಂಗದ ಮಾಹಿತಿ, ಇಸವಿ, ಕಲಾವಿದರ ಪರಿಚಯವನ್ನೂ ಅಚ್ಚುಕಟ್ಟಾಗಿ ಬರೆದಿಡುತ್ತಿದ್ದರು. ಪ್ರತ್ಯೇಕ ಪುಸ್ತಕದಲ್ಲಿ ಅವುಗಳ ಕೆಟಲಾಗ್ ಮಾಡುತ್ತಿದ್ದರು. ತನ್ನ ಪುತ್ರನ ಸಹಾಯದಿಂದ, ಆಪ್ತರ ನೆರವಿನಂದ ಅನೇಕ ಹಳೆ ಕ್ಯಾಸೆಟ್ಟುಗಳನ್ನು ಕಂಪ್ಯೂಟರಿಗೆ ಟ್ರಾನ್ಸ್ ಫರ್ ಮಾಡಿ ಹಾರ್ಡ್ ಡಿಸ್ಕಿನಲ್ಲಿ ಶೇಖರಿಸಿಡುವ ಪ್ರಯತ್ನ ಮಾಡಿದರು. ಒಂದಿಬ್ಬರು ಮಹನೀಯರು ಕ್ರಮೇಣ ಇವರ ಕಾರ್ಯವನ್ನು ಗಮನಿಸಿ, ಮನ್ನಿಸಿ ಅವರಿಗೆ ಸನ್ಮಾನ ಮಾಡಿ ಉಚಿತವಾಗಿ ಹಾರ್ಡ್ ಡಿಸ್ಕ್ ಕೊಡಿಸಿದರು. ಪತ್ರಿಕೆಗಳಲ್ಲೂ 2-3 ಲೇಖನಗಳು ಪ್ರಕಟವಾದವು. ಆದರೆ ಪ್ರಚಾರಕ್ಕೆ, ದುಡ್ಡಿಗೋಸ್ಕರ ಇದ್ಯಾವದೂ ಮಾಡಿರದ ದೊಡ್ಡಪ್ಪಚ್ಚಿ ತಾನಾಗಿ ಇವನ್ನು ಎಲ್ಲಿಯೂ ಪ್ರಚಾರ ಮಾಡಿಕೊಂಡು ಹೋಗಲಿಲ್ಲ. ಹಾಗಾಗಿ ಅವರನ್ನು ಹತ್ತಿರದಿಂದ ಬಲ್ಲ ಕೆಲವು ಮಂದಿಯನ್ನು ಬಿಟ್ಟು ಇಡೀ ಜಗತ್ತಿಗೆ ಅವರು ಸದ್ದಿಲದೆ ಮಾಡಿಟ್ಟ ಸಂಗ್ರಹದ ಅರಿವಿಲ್ಲದೇ ಹೋಯ್ತು.
ತಾನಾಗಿ ಮಾತನಾಡಿಸಿ ಅವರು ಮಾಹಿತಿ ಸಂಗ್ರಹಿಸುತ್ತಿದ್ದ ಕಾರಣ ಹಲವು ಬಾರಿಗೆ ನಗೆಪಾಟಲಿಗೀಡಾಗಿದ್ದು, ಹಗುರ ಮಾತುಗಳನ್ನು ಕೇಳಿಸಿಕೊಂಡದ್ದು ಇದೆ. ಆದರೆ ಯಾವುದನ್ನೂ ಗಂಭೀರವಾಗಿ ತಲೆಗೆ ಹಚ್ಚಿಕೊಳ್ಳದ ಅಪ್ಪಚ್ಚಿ ಒಮ್ಮೆ ಕಣ್ಣು ಮುಚ್ಚಿ ಮೀಸೆಯಡಿ ನಕ್ಕು ಮುಂದೆ ಹೋಗುತ್ತಿದ್ದದ್ದನ್ನು ಯಾವತ್ತೂ ಮರೆಯುವ ಹಾಗಿಲ್ಲ.
ಅದು ಹಾಗೆಯೇ...
ಹುಚ್ಚು ಹವ್ಯಾಸಗಳು, ಪ್ರತ್ಯೇಕವಾಗಿ ಮಾಡುವ ಸಾಹಸಗಳು ಒಂದು ಹಂತದ ವರೆಗೆ ಮನ್ನಣೆ ಗಳಿಸುವುದೇ ಇಲ್ಲ. ಫಲಿತಾಂಶ ಬಂದಾಗ, ಯಶಸ್ಸು ಸಿಕ್ಕಾಗ ಜನ ಒಪ್ಪುತ್ತಾರೆ, ಮೆಚ್ಚುತ್ತಾರೆ. ಆ ವರೆಗೆ ಎದುರಿಸಿದ ಕಷ್ಟಗಳು, ಹಿನ್ನಡೆಗಳಲ್ಲಿ ಸಾಧಕ ಒಂಟಿಯಾಗಿಯೇ ಇರುತ್ತಾನೆ. ಜಗತ್ತು ಅರ್ಥ ಮಾಡಿಕೊಳ್ಳುವುದಿಲ್ಲ. ಬಹುತೇಕ ಯಕ್ಷಗಾನ ಕಲಾವಿದರಿಗೆ ಚಿಕ್ಕಪ್ಪನ ಪರಿಚಯ ಇದೆ. ಅವರು ಸಭೆಯಲ್ಲಿ ಕುಳಿತು ಚೆಂಡೆ ಪೆಟ್ಟಿಗೆ ಆಕರ್ಷಿತರಾಗಿ ತಲ್ಲೀನನಾಗಿ ತಲೆ ಆಡಿಸುತ್ತಿದ್ದ ಶೈಲಿ ಹಲವರಿಗೆ ಗೊತ್ತಿದೆ. ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಯಕ್ಷಗಾನದ ಓರ್ವ ನಿಷ್ಠಾವಂತ ಪ್ರೇಕ್ಷಕನಾಗಿ ಅವರು ಯಕ್ಷಗಾನದ ಶೈಲಿ, ಕಲಾವಿದರ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು. ಆದರೆ ಅವರೆಂದೂ ಅವನ್ನೆಲ್ಲ ಎಲ್ಲೂ ಬರೆದುಕೊಂಡವರಲ್ಲ, ಹೇಳಿಕೊಂಡವರಲ್ಲ. ಕೇಳಿದರೆ ಎಷ್ಟೂ ಮಾತನಾಡುತ್ತಿದ್ದರು. ಹೇಳುತ್ತಿದ್ದರು. ಶುಭ ಸಮಾರಂಭಗಳಲ್ಲಿ ಊಟದ ವೇಳೆಗೆ ಹವ್ಯಕ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿರುವ ಚೂರ್ಣಿಕೆ ಹೇಳುವುದರಲ್ಲಿ ಅವರು ಎತ್ತಿದ ಕೈ. ಕಂಚಿನ ಕಂಠದಲ್ಲಿ ಶ್ಲೋಕಗಳನ್ನು ಹೇಳಿ ಗಮನ ಸೆಳೆಯುತ್ತಿದ್ದರು. ಇತರರ ಮಾತಿನ ಶೈಲಿಯನ್ನು ಅನುಕರಿಸುವ ಮಿಮಿಕ್ರಿಯ ಕೌಶಲ್ಯವೂ ಸಿದ್ಧಿಸಿತ್ತು.
ಚೆಂಡೆಯ ಪೆಟ್ಟು ಕೇಳಿದರೆ ಅವರ ಕಾಲು ಎದ್ದು ನಿಲ್ಲುತ್ತಿತ್ತು, ಮನೆಯಲ್ಲಿ
ಹುಚ್ಚುಕಟ್ಟಿ ಧಿಗಿಣ ಹಾಕುತ್ತಿದ್ದದ್ದೂ ಇದೆ. ಬಲಿಪರ ಪದ ಕೇಳಿದಾಗ ಭಾವುಕರಾಗುತ್ತಿದ್ದದ್ದೂ
ಹೌದು. ಯಾವುದೇ ಮೂಲೆಯಲ್ಲೂ ಯಕ್ಷಗಾನದ ಹಳೆ ಆಡಿಯೋ, ವಿಡಿಯೋ ಸಿಗುತ್ತದೆ ಎಂದಾದರೆ
ಅವರನ್ನು ಕಾಡಿ ಬೇಡಿಯಾದರೂ ಅವರು ಅದನ್ನು
ಸಂಗ್ರಹಿಸಿಯೇ ಸಂಗ್ರಹಿಸುತ್ತಿದ್ದರು. ಆ ಕುರಿತು ಮಾಹಿತಿ ಸಂಗ್ರಹ ಮಾಡುತ್ತಿದ್ದರು. ಅವರ
ಸಂಗ್ರಹದಲ್ಲಿ ಸಹಸ್ರಾರು ಯಕ್ಷಗಾನ ಪ್ರಸಂಗಗಳ ಆಡಿಯೋ, ವಿಡಿಯೋಗಳಿವೆ. ಎಲ್ಲವೂ ಡಿಜಿಟಲ್
ಆಗಿಲ್ಲ. ಎಲ್ಲಿಯೂ ಸಿಕ್ಕದ ಪ್ರಸಂಗಗಳ ಪ್ರತಿಗಳು ಅವರಲ್ಲಿವೆ. ಅಪರೂಪದ ದೃಶ್ಯ ವೈಭವಗಳ ಕಣಜ
ಇದೆ. ಅವರ ಪ್ರಯತ್ನಕ್ಕೆ ಅಕಾಡೆಮಿ ಅಥವಾ ವಿ.ವಿ.ಗಳ ಕಡೆಯಿಂತ ಸೂಕ್ತ ಹಣಕಾಸು ನೆರವು
ಸಿಕ್ಕಿದ್ದರೆ ಒಪ್ಪ ಓರಣವಾಗಿ ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವ ಸಾಧ್ಯತೆ ಇತ್ತು. ಅದು ಅವರ
ಜೀವತಾವಧಿಯಲ್ಲಿ ಆಗಬೇಕಿತ್ತು. ಇವತ್ತು ಅವರ ಸಂಗ್ರಹ ಅವರ ಹವ್ಯಾಸದ ಪ್ರತೀಕವಾಗಿ ಇದೆ. ಆದರೆ,
ಅವುಗಳ ಕುರಿತು ಹೇಳಲು, ಮಾತನಾಡಲು, ವಿವರಿಸಲು ಅವರೇ ಇಲ್ಲ!
ನಿವೃತ್ತ ಉದ್ಯೋಗಿಗಳ (ಪೆನ್ಶನ್ ಪಡೆಯುವವರ) ಸಂಬಳದ
ಲೆಕ್ಕಾಚಾರಕ್ಕೆ ನೆರವಾಗುತ್ತಿದ್ದರು. ಖಾರದ ಊಟ, ಮಜ್ಜಿಗೆ ನೀರು ಅವರಿಗಿಷ್ಟ. ಗಡಸು ಧ್ವನಿ,
ತೀಕ್ಷ್ಣ ಕಣ್ಣು, ಎಣ್ಣೆ ಹಚ್ಚಿದ ಕೂದಲು ಟಿಪಿಕಲ್ ದೊಡ್ಡಪ್ಪಚ್ಚಿಯ ಸ್ಟೈಲು.
ಮೊನ್ನೆ ಶುಕ್ರವಾರ ಸಂಜೆ (ಸೆ.3) 7 ಗಂಟೆ ಹೊತ್ತಿಗೆ
ಬಹುಶಃ ಅವರಿಗೆ ದಿಢೀರ್ ಹಾರ್ಟ್ ಅಟ್ಯಾಕ್ ಆಗಿತ್ತು. ಮೈ ಬೆವರಿತ್ತು. ಎದೆ ನೋವು ಅಂತ
ಹೇಳಿಬಿಟ್ಟರು. ಪ್ರಾಥಮಿಕ ಚಿಕಿತ್ಸೆಯಿಂದ ಗುಣವಾಗದಿದ್ದಾಗ ಮಗ ಹಾಗೂ ಭಾವ ಸೇರಿ ತಕ್ಷಣ ಕುಂಬಳೆಯ
ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಇಸಿಜಿ ವರದಿಯಲ್ಲೇ ಗೊತ್ತಾಗಿದ್ದು, ಹೃದಯದ ಸಮಸ್ಯೆ ಅಂತ.
ಆಗಲೂ ಅವರಿಗೆ ಪ್ರಜ್ಞೆ ಇತ್ತಂತೆ, ಮಾತನಾಡುತ್ತಿದ್ದರಂತೆ. ವಿಳಂಬವಿಲ್ಲದೆ ಕಾಸರಗೋಡಿನ ಖಾಸಗಿ
ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಯಿತು. ರಾತ್ರಿ 10 ಗಂಟೆ ವೇಳೆಗೆ ಅವರಲ್ಲಿ ಎರಡು ಬ್ಲಾಕ್
ಪತ್ತೆ ಹಚ್ಚಿನ ವೈದ್ಯರು ತಡಮಾಡದೆ ಎರಡು ಸ್ಟಂಟ್ ಅಳವಡಿಸಿದರು. ಸ್ಟಂಟ್ ಅಳವಡಿಕೆ
ಯಶಸ್ವಿಯಾಗಿತ್ತು. ಶೇ.80 ಬದುಕುಳಿಯುವ ಸಾಧ್ಯತೆಯನ್ನು ಆರಂಭದಲ್ಲಿ ವೈದ್ಯರು ನೀಡಿದ್ದರು.
ಸ್ಟಂಟ್ ಅಳವಡಿಸಿದ ಬಳಿಕ ಐಸಿಯುಗೆ ಕರೆತಂದು ಅವರಿಗೆ ಪ್ರಜ್ಞೆಯೂ ಬಂದಿತ್ತು. ಪುತ್ರನ ಜೊತೆ
ಮಾತನಾಡಿದ್ದರು. ಸಹಜವಾಗಿದ್ದರು, ಜ್ಯೂಸ್ ಕುಡಿದಿದ್ದರು. ಇದಾಗಿ ಸ್ವಲ್ಪ ಹೊತ್ತಿಗೆ ಬಿಪಿ
ಕುಸಿಯಲು ಆರಂಭವಾಗಿ ರಾತ್ರಿ 1 ಗಂಟೆಯ ವೇಳೆಗೆ ಸಾವು ಸಂಭವಿಸಿತು. ಸಾವು ಚಿಕ್ಕಪ್ಪನನ್ನು
ಬೆನ್ನಟ್ಟಿಕೊಂಡು ಬಂದಿದ್ದು ಹೀಗೆ...
ಮೊದಲೇ ಪರೀಕ್ಷೆ ಮಾಡಿದ್ದರೆ ಬ್ಲಾಕ್ ತಿಳಿಯುತ್ತಿತ್ತು,
ಜೋರಾಗುವ ಮೊದಲೇ ಆಂಜಿಯೋಪ್ಲಾಸ್ಟಿ ಮಾಡಿಸಿದ್ದರೆ ಉಳಿಯುತ್ತಿದ್ದರೇನೋ ಎಂಬಿತ್ಯಾದಿ ತರ್ಕಗಳು ಸತ್ತ
ಬಳಿಕ ಮಾತನಾಡಬಹುದಷ್ಟೇ ಹೊರತು, ಬಹುಶಃ ಬರುವ ಸಾವನ್ನು ತಪ್ಪಿಸಲು ಸಾಧ್ಯವಾಗದ ವಿಚಾರಗಳು. FATE DOESN’T CARE OUR PLANS ಅಲ್ವ? ಅತ್ತರೂ, ಅಂಗಲಾಚಿದರೂ, ಮತ್ತೊಂದು ಅವಕಾಶ ಕೊಡು ಎಂದುಕೊಂಡರೂ ಸಾವಿಗೆ ಕರುಣೆಯಿಲ್ಲ. ಅದರಿಂದ ತಪ್ಪಿಸಲೂ ಸಾಧ್ಯವಿಲ್ಲ... ಅದರ ತೀವ್ರತೆ ಅರಿವಾಗುವುದು ಸತ್ತ ಮೇಲೆಯೇ!
ಹಿಂದಿನ ದಿನ ಸಂಜೆಯ ವರೆಗೂ ಎಂದಿನಂತೇ ಇದ್ದ
ಚಿಕ್ಕಪ್ಪ ಸಂಜೆ 7ರ ಬಳಿಕ ಆಸ್ಪತ್ರೆಗೆ ಹೋಗಿ, ರಾತ್ರಿ 10ರ ಬಳಿಕ ಒಂದಷ್ಟು ಹೊತ್ತು ಆಸ್ಪತ್ರೆಯ
ಒಳರೋಗಿಯಾಗಿ, ರಾತ್ರಿ 1ರ ಹೊತ್ತಿಗೆ ಪಾರ್ಥಿವ ಶರೀರವಾಗಿ, ಮುಂಜಾನೆ 6ಕ್ಕೆ ನಿಸ್ತೇಜನಾಗಿ
ಮನೆಗೆ ಆಂಬುಲೆನ್ಸಿನಲ್ಲಿ ತಲುಪಿ, ಪೂರ್ವಾಹ್ನ 11ರ ಹೊತ್ತಿಗೆ ಪಂಚಭೂತಗಳಲ್ಲಿ ಲೀನವಾಗಿದ್ದು
ನಮ್ಮ ಪಾಲಿಗೆ ಸಿನಿಮೀಯವೇ ಹೌದು. ನಿನ್ನೆ ಸಂಜೆ ಇದ್ದ ಮನುಷ್ಯ ಇಂದು ಮಧ್ಯಾಹ್ನದ ಹೊತ್ತಿಗೆ
ಬೂದಿಯಾಗಿದ್ದು.... ತಡರಾತ್ರಿ ಅವರು ತೀರಿಕೊಂಡರಂತೆ ಎಂಬ ಕರೆಗಳು ಬಂದದ್ದು, ಅವರ ಸಾವಿನ ಸತ್ಯವನ್ನು
ಅರಗಿಸಿಕೊಳ್ಳಲು ಪರದಾಡಿದ್ದು, ಉಸಿರುನಿಂತರೂ ಅದೇ ಸ್ಥಿತಪ್ರಜ್ಞೆಯ ಮುಖಭಾವ ಹೊತ್ತು ಬಿಳಿ
ಬಟ್ಟೆ ಹೊದ್ದು ದರ್ಬೆಯ ಮೇಲೆ ಮಲಗಿದ್ದು, ಮಡದಿ, ಮಕ್ಕಳು, ಸಹೋದರ, ಸಹೋದರಿಯರ ಅಳುವಿಗೆ
ಕಿವುಡಾಗಿ, ಕುರುಡಾಗಿ ಮಲಗಿಯೇ ಇದ್ದದ್ದು... ನಿರಾಕರಿಸಲಾಗದ ಸತ್ಯಗಳನ್ನು ಮಡುಗಟ್ಟಿದ ದುಃಖದ
ಮೂಸೆಯಲ್ಲಿ ಬೇಯಿಸುತ್ತಿತ್ತು.
“ಅವ ಅದೃಷ್ಟವಂತ, ಹೆಚ್ಚು ನೋವಿಲ್ಲದೆ ಹೊರಟು ಹೋದ…” ಹೇಳ್ತಾರೆ. ಹೌದು. ಆದರೆ ಅವರ ಆಪ್ತರು, ನಂಬಿದವರು,
ಪ್ರೀತಿಸಿದವರು, ಇಷ್ಟಪಟ್ಟವರು ಇದೇ ಲೌಕಿಕದಲ್ಲಿ ತಮ್ಮ ಸರದಿಗೆ ಕಾಯುತ್ತಲೇ ಇರಬೇಕು. ಅದೇ
ಬದುಕು. ಸ್ಮಶಾನ ವೈರಾಗ್ಯವೇ ಹಾಗೆ. ಒಂದು ಕರಾಳ ಸತ್ಯವನ್ನು ಹಸಿಹಸಿಯಾಗಿ ತೆರೆದಿಡುತ್ತದೆ.
ಅಂತ್ಯಸಂಸ್ಕಾರದಲ್ಲಿ ಕಬ್ಬಿಣದ ಪೆಟ್ಟಿಗೆಯೊಳಗೆ ತೆಂಗಿನ ಚಿಪ್ಪುಗಳ ನಡುವೆ ಮಲಗಿಸಿದ ಪಾರ್ಥಿವ
ಶರೀರ ಹೊತ್ತಿ ಉರಿಯುವಾಗ ಅಲೆ ಅಲೆಯಾಗಿ ಮೇಲೇಳುವ ಹೊಗೆಯ ಹಾಗೆ.... ನನಗೆ ಎಲ್ಲ ತಿಳಿಯುತ್ತದೆ,
ನನ್ನನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂಬ ಧೈರ್ಯಗಳೆಲ್ಲ ಹುಸಿ ಎಂಬುದು ಸಾಯುವ ಕಾಲದ ವರೆಗೂ
ನಮಗೆ ತಿಳಿಯದೆ ದೇಹದೊಳಗೆ ರಕ್ತನಾಳ ಬ್ಲಾಕ್ ಆಗಿ, ಚಿಕಿತ್ಸೆಗೂ ಅವಕಾಶ ನೀಡದೆ ಯಮ ಕರೆದೊಯ್ಯುವ
ಹಾಗಾಗುವ ಭ್ರಮೆ ಎಂಬುದು ಅರಿವಿಗೆ ಬರುತ್ತದೆ... ಆಗಸ ತಲುಪಿದ ದಟ್ಟ ಬಿಳಿ ಹೊಗೆ ಮನಸ್ಸಿನ ಅನೇಕ
ಭ್ರಮೆಗಳಿಗೆ ಪೊರೆಯಾಗುತ್ತದೆ, ಕೊನೆಗುಳಿಯುವ ಅಸ್ಥಿಯ ತುಣುಕು, ಬೂದಿಯ ಹಾಗೆ ವಾಸ್ತವ ಇಷ್ಟೇ
ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ...
ಪ್ರತಿದಿನ ಸಾವಿನ ಸುದ್ದಿಗಳು ಬರುತ್ತಲೇ ಇರುತ್ತವೆ.
ವೃತ್ತಿಸಹಜವಾಗಿ ಅವುಗಳನ್ನೂ ಎಡಿಟ್ ಮಾಡುತ್ತೇವೆ. ಒಂದು ದಿನದಲ್ಲಿ ಎಷ್ಟೊಂದು ಹೃದಯಾಘಾತಗಳು,
ಆತ್ಮಹತ್ಯೆಗಳು, ಅಪಘಾತಗಳು, ಕೊಲೆಗಳು... ಓಹ್ ಎಷ್ಟೊಂದು ಸಾವುಗಳು. ಪತ್ರಿಕೆಗಳಲ್ಲಿ ಸಿಂಗಲ್
ಕಾಲಂ ಸುದ್ದಿ. ಆದರೆ ನಮ್ಮವರೇ ಸತ್ತಾಗ, ನಮ್ಮನ್ನು ಎತ್ತಿ, ಆಡಿಸಿ ಬೆಳೆಸಿದವರು ದಿಢೀರನೆ
ಎದ್ದು ಹೋದ ಹಾಗೆ ನಿರ್ಗಮಿಸಿದಾಗ ನೆನಪುಗಳು ಕಾಡುತ್ತವೆ, ಸುದ್ದಿ ಬರೆಯುವುವಾಗ ಪದಗಳು
ಸಿಗುವುದಿಲ್ಲ, ಜೀವನದ ಹತಾಶ ಸ್ಥಿತಿ, ಹೋಗುವವರನ್ನು ತಡೆಯಲಾಗದ, ಮತ್ತೊಮ್ಮೆ ಮಾತನಾಡಲಾಗದ ನಮ್ಮ
ದೌರ್ಬಲ್ಯ, ಸೀಮಿತ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಪ್ರತಿ ಸಾವಿನ ಹಿಂದೆಯೂ ಒಂದೊಂದು
ಕತೆಯಿರುತ್ತದೆ. ಅದು ಅಲ್ಲಿಗೇ ಮುಗಿಯುವುದಿಲ್ಲ... ಅವರ ಬಾಯಿಗೆ ಬಿಡುವ ತುಳಸಿ ನೀರು, ಕೊರಳಿಗೆ
ಹಾಕುವ ಮಾಲೆಗಳು ಬಹುಶಃ ಅವರನ್ನು ತಲಪುವುದಿಲ್ಲ. ಬದುಕಿದ್ದಾಗ ಹೇಳಿದ್ದು, ನೀಡಿದ್ದು, ಕಂಡದ್ದು
ಮಾತ್ರ ಅವರ ಪಾಲಿಗೆ ಸತ್ಯ ಅಷ್ಟೆ.
ಅವರೇನು, ಎಷ್ಟು, ಹೇಗಿದ್ದರು? ಅನ್ನುವುದು ಕಾಡುವುದು ಇಲ್ಲವಾದ ಬಳಿಕವೇ ತಾನೆ. ಇದ್ದಾಗ ತಿಳಿಯದ್ದು, ಇಲ್ಲದಾದಾಗ ಕಾಡುವ ಹಾಗೆ. ಜೊತೆಗೇ ಇದ್ದಾಗ ಲೆಕ್ಕಕ್ಕೆ ಸಿಕ್ಕದ್ದೆಲ್ಲ ಇಲ್ಲವಾದ ಮೇಲೆ ಅಚ್ಚುಕಟ್ಟಾಗಿ ಅರಿವಿಗೆ ಬರುತ್ತದೆ ಅಲ್ವ? ಅದಕ್ಕೇ ಶುರುವಿಗೇ ಹೇಳಿದ್ದು, ಉಸಿರು ನಿಂತಲ್ಲಿಗೇ ದೇಹದ ಚೈತನ್ಯ ನಿಂತಿತು. ಪಾರ್ಥಿವ ಶರೀರಕ್ಕೆ ಸಂಸ್ಕಾರ ಸಿಕ್ಕಾಗ ಭೌತಿಕ ಗೋಚರವೂ ಕಣ್ಮರೆಯಾಯಿತು. ಮತ್ತೆ ಉಳಿಯುವುದು ಅವರು ಮಾಡಿದ ಕೆಲಸ ಮತ್ತು ನೆನಪುಗಳು. ಸೂಚನೆಯೇ ಇಲ್ಲದೆ ಇನ್ನಿಲ್ಲವಾದವರಲ್ಲಿ ನನ್ನ ಚಿಕ್ಕಪ್ಪ ಮೊದಲಿಗರಲ್ಲ, ಕೊನೆಯವರೂ ಆಗುವುದಿಲ್ಲ. ಅವರೊಂದು ಸಾಂಕೇತಿಕ ಅಷ್ಟೇ... ನನ್ನ ಬಂಧುವಾದ ಕಾರಣಕ್ಕೆ ನನಗದು ಕಾಡುತ್ತದೆ... ನಿಮಗೂ ಅಷ್ಟೇ... ನಿಮ್ಮ ನೆನಪುಗಳು ಮತ್ತು ಅನುಭೂತಿಗಳು... ಸ್ಮಶಾನದಲ್ಲೆದ್ದ ಗಾಢ ಹೊಗೆಯ ಹಾಗೆ ಚದುರಿ... ಚದುರಿ... ಚದುರಿ ಕೊನೆಗೊಮ್ಮೆ ದಿಗಂತದಲ್ಲಿ ಲೀನವಾಗುವ ಹೇಳಲಾಗದ ಮಾತುಗಳು!!
-ಕೃಷ್ಣಮೋಹನ ತಲೆಂಗಳ (06.09.2021).
1 comment:
ಸಾವು ಒಂದೇ ನಿತ್ಯ ಸತ್ಯ
Post a Comment