365 ಖಾಲಿ ಹಾಳೆಗಳು ಪಟ ಪಟ್ಟ ಸದ್ದು ಮಾಡ್ತಿವೆ... ತುಂಬಿಸುವ ಉತ್ಸಾಹ ಇದೆ, ಸಿದ್ಧತೆ ಆಗಿದೆಯಾ?

ಮತ್ತೊಂದು ಹೊಸ ವರ್ಷದ ಗಡಿಬಿಡಿಯಲ್ಲಿದ್ದೇವೆ ಅಲ್ವ. ಇದರ ಹೆಸರು 2022. ಹಾಗೆ ನೋಡುವುದಕ್ಕೆ ಹೋದರೆ ಪ್ರತಿದಿನವೂ ಹೊಸತೇ, ಪ್ರತಿ ನಿಮಿಷ, ಸೆಕುಂಡೂ ಹೊಸತೇ. ಪ್ರತಿ ದಿನವನ್ನೂ ಹೊಸ ದಿನ ಅಂತ ಆಚರಿಸಿಕೊಂಡು, ಶುಭಾಶಯ ಕೋರಿಕೊಂಡು ಇರಬಹುದಿತ್ತು. ನಾವು ಹಾಗೆ ಮಾಡುವುದಿಲ್ಲ. ಕ್ಯಾಲೆಂಡರ್ ಬದಲಾಗುವ ದಿನವನ್ನು ಹೊಸ ಕಾಲಘಟ್ಟವೆಂದು ಸ್ವೀಕರಿಸಿ, ಹೊಸತೆಂಬ ಕಾಲವನ್ನು ನವೀಕರಿಸಿ ಇಸವಿಯಿಂದ ಇಸವಿಗೆ ಹಾರುವ ದಿನವನ್ನು ಸಂಭ್ರಮಿಸುತ್ತೇವೆ. ಹಾಗೆ ನೋಡುವುದಕ್ಕೆ ಹೋದರೆ ತಿರುಗುತ್ತಲೇ ಇರುವ ಕಾಲದ ಚಕ್ರದಲ್ಲಿ ಪ್ರತಿ ಕ್ಷಣವೂ ಹೊಸತೇ ಆಗಿರುವುದರಿಂದ, ಕಾಲವನ್ನು ರಿವೈಂಡ್ ಮಾಡಲು ಸಾಧ್ಯವೇ ಇಲ್ಲದಿರುವಾಗ ವರ್ಷ ಬದಲಾಗಿದೆ ಅಂದರೆ ಸಾಕು, ಹೊಸ ವರ್ಷ ಅಂತಲೇ ಯಾಕೆ ಕರೀಬೇಕು ಅಂತಲೂ ಅನ್ನಿಸುತ್ತದೆ. 365 ದಿನಗಳ ಗೊಂಚಲು ಕಟ್ಟಿ ಹೊಚ್ಚಹೊಸ ಗಂಟಿನೊಂದಿಗೆ ಕೈಗಿಟ್ಟು ಇದು ಹೊಸತು, ಇಲ್ಲಿ ಜೀವಿಸು, ನಿನ್ನ ದಿನಗಳನ್ನು ಇಲ್ಲಿ ಕಳೆ, 12 ಅಧ್ಯಾಯಗಳ 365 ಪುಟಗಳನ್ನು ನೀನೇ ತುಂಬಿಸು ಎಂಬ ಹಾಗೆ ಹೊಸ ಕ್ಯಾಲೆಂಡರಿನ ಮಾರ್ಗದರ್ಶನದಲ್ಲಿ ಘಮಘಮಿಸುವ ಪೇಪರಿನ ಪರಿಮಳದ ಹೊಸ ಡೈರಿಯನ್ನು ಪಡೆಯುತ್ತೇವೆ ಅಲ್ವ. ಈ ಪರ್ವವನ್ನು ತುಂಬ ಧನಾತ್ಮಕವಾಗಿಯೂ ವಿಶ್ಲೇಷಿಸಬಹುದು. ತೀರಾ ನಿರ್ಲಿಪ್ತವಾಗಿಯೂ ಸ್ವೀಕರಿಸಬಹುದು.

 


ಹೇಗಂತ ಕೇಳ್ತೀರ. ಅಯ್ಯೋ ಬಿಡ್ರಿ, ಅದೇ ಸೂರ್ಯೋದಯ, ಅದೇ ಪ್ರಾರಬ್ಧ, ಅದೇ ಕೆಲಸ, ಅದೇ ಸಮಸ್ಯೆಗಳು, ಅದೇ ಮಾರ್ಗ, ಅದೇ ಕಚೇರಿ, ಅದೇ ಮನೆ... ಅದೇ ಮನಸ್ಥಿತಿ... ಇನ್ನೇನು ಹೊಸತು. ಬದಲಾಗೋದು ಕ್ಯಾಲೆಂಡರು ಮಾತ್ರ ಅಂತ ಹೇಳುವವರಿದ್ದಾರೆ. ನಮಗೆ ಈ ಇಂಗ್ಲಿಷ್ ಕ್ಯಾಲೆಂಡರಿನ ದಿನ ಹೊಸ ವರ್ಷವಲ್ಲ, ನಕ್ಷತ್ರ, ತಿಥಿ ಆಧಾರದ ಬದಲಾವಣೆಯೇ ನಮ್ಮ ಪಾಲಿಗೆ ಹೊಸ ವರ್ಷ ಆದ್ದರಿಂದ ನಾನು ವಿಶ್ ಮಾಡೋದಿಲ್ಲ ಅಂತ ಮುಖ ತಿರುಗಿಸುವವರೂ ಇದ್ದಾರೆ. ಇವರಿಬ್ಬರಿಗಿಂತ ಧನಾತ್ಮಕವಾಗಿ ಯೋಚಿಸುವವರು, ಸದಾ ಖುಷಿಖುಷಿಯಾಗಿ ಇರುವವರು, ಜೀವನೋತ್ಸಾಹಿಗಳು ಹೇಳುವ ಮಾತೇ ಬೇರೆ. ಅಯ್ಯೋ ಯಾಕ್ರೀ ಸಿನಿಕರ ಥರ ಮಾತನಾಡ್ತೀರಿ... ನಮಗೆ ಸಂಭ್ರಮಿಸಲು, ಆಶಾವಾದಿಗಳಾಗಿರಲು, ನಾವು ಬದಲಾಗಬಹುದು, ಬದಲಾಗ್ತೇವೆ ಅಂತೆಲ್ಲ ಕನಸುಗಳನ್ನು ಕಟ್ಟಿಕೊಳ್ಳಲು ಸಿಗುವ ಅವಕಾಶವೇ ಜನವರಿ 1. ಯಾಕೆ ನಿರಾಶಾವಾದಿಗಳ ಥರ ಮಾತನಾಡ್ತೀರಿ. ಕ್ಯಾಲೆಂಡರ್ ಯಾವುದಾದರೇನು... ಕಾಲದ ಗತಿಗೆ ಹೆಸರು ಕೊಟ್ಟು ಕಾಲ ನಿರ್ಣಯ ಮಾಡುವವರು ನಾವೇ ಅಲ್ವ... ನೀರಸ, ನಿರ್ಲಿಪ್ತ, ಯಾಂತ್ರಿಕ ಅನ್ನಿಸಬಹುದಾದ ಬದುಕಿನ ಓಘದ ನಡುವೆ ತಡೆದು ನಿಲ್ಲಿಸಿ, ಸ್ವಯಂಖುಷಿ ಪಡಲು, ಕಸನಗಳನ್ನು ಕಟ್ಟಿಕೊಳ್ಳಲು, ಬದಲಾಗುವ ಮನಸ್ಥಿತಿಯನ್ನು ರೂಢಿಸಿಕೊಳ್ಳಲು ಹೊಸ ಕ್ಯಾಲೆಂಡರು ಪ್ರೋತ್ಸಾಹ ನೀಡುತ್ತದೆ. ಯಾಕೆ ಸಂಭ್ರಮಿಸಬಾರದು ಅಂತ ಕೇಳ್ತಾರೆ...

ಹೌದಲ್ವ...? ಎರಡೂ ನಿಜವೇ. ಆದರೆ, ಬದುಕಿಗೊಂದು ಉತ್ಸಾಹ ಬರ್ತದೆ, ಬದುಕು ಬದಲಾಗಲು ದಾರಿ ಕಾಣಿಸ್ತದೆ, ನಮ್ಮನ್ನು ನಾವೇ ಬದಲಾಯಿಸಲು ಬೆಳಕು ಸಿಗ್ತದೆ ಅಂತಾದ್ರೆ ಹೊಸ ವರ್ಷವೆಂದು ಕರೆಯುವ ಜನವರಿಯ ಹೊಸ್ತಿಲಿನಲ್ಲಿ ಕನಸುಗಳನ್ನು ಕಾಣುವುದು ತಪ್ಪೇನಲ್ಲ.

ಇಂಥದ್ದೊಂದು ಕಾಲನಿರ್ಣಯವೇ ಆಗಿರದಿದ್ದರೆ, ಇಂಥದ್ದೊಂದು ಕ್ಯಾಲೆಂಡರುಗಳು, ದಿನ, ವಾರ, ತಿಂಗಳು, ವರ್ಷಗಳ ಗಡುವು ಇಲ್ಲದಿದ್ದರೆ ಏನಾಗ್ತಾ ಇತ್ತು ಯಾಚಿಸಿ. ಬದುಕಿಗೆ ಗೊತ್ತು ಗುರಿ ಇರ್ತಾ ಇರಲಿಲ್ಲ, ಮಾಡಿದ ಪಾಪ ಪುಣ್ಯಗಳಿಗೆ ಸೀಮಾರೇಖೆ ಕಾಣುತ್ತಿರಲಿಲ್ಲ. ಜೂನಿಯರ್, ಸೀನಿಯರ್ ಗಳ ಲೆಕ್ಕಾಚಾರ ಸಿಗಲು ಕಷ್ಟ ಆಗ್ತಾ ಇತ್ತು. ಹಗಲು, ರಾತ್ರಿಗಳನ್ನು ಕಾಣುತ್ತಾ ಅವಧಿ, ಪರಿಧಿ, ಕ್ಷಣಗಳ ವ್ಯಾಪ್ತಿಯ ಅರಿವಿಲ್ಲದೆ ಒಂಥರಾ ಮೃಗೀಯವಾಗಿ, ಯಾಂತ್ರಿಕವಾಗಿ, ಗುರಿಯಿಲ್ಲದೇ ದಿನಗೂಡಬೇಕಾಗಿತ್ತು. ನಾಗರಿಕತೆ ಈ ಹಂತ ತಲುಪಿದ ಹಂತದಲ್ಲಿ ಅಂಥದ್ದೊಂದು ಬದುಕನ್ನು ಊಹಿಸಲೂ ಸಾಧ್ಯವಿಲ್ಲ.

ನಮ್ಮ ಜೀವನ ಶೈಲಿ ಹೇಗಿದೆ ಅಂತಂದ್ರೆ ನಮಗೆ ಡೆಡ್ ಲೈನ್ ಅಥವಾ ಗಡುವಿಲ್ಲದೆ ಬಹುತೇಕ ಸಂದರ್ಭ ಏನನ್ನೂ ಮಾಡಲು ಮೈಚಳಿ ಬಿಡುವುದಿಲ್ಲ. ಇಂಥ ದಿನ, ಇಂತಹ ತಾರೀಕು, ಇಷ್ಟು ಗಂಟೆಗೆ ಅಂತ ನಿಗದಿಯಾಗದಿದ್ದರೆ ಗುರಿ ಸಾಧಿಸಲು ಮುಹೂರ್ತ ಕೂಡಿ ಬರುವುದೇ ಇಲ್ಲ. ಹಾಗಿರುವಾಗ ದಿನಗಳ ಲೆಕ್ಕಾಚಾರದ ಈ ಕ್ಯಾಲೆಂಡರ್ ನಮ್ಮಲ್ಲೊಂದು ಎಚ್ಚರಿಕೆ ಮೂಡಿಸಿ, ನಮ್ಮ ವಯಸ್ಸನ್ನು ಆಗಾಗ ನೆನಪಿಸಿ, ಗಾಂಭೀರ್ಯವನ್ನೋ, ವೈರಾಗ್ಯವನ್ನೋ, ಕರ್ಮದ ಲೆಕ್ಕಾಚಾರವನ್ನೋ ನೀಡುತ್ತಾ ವರ್ತಮಾನವನ್ನು ಚುರುಕು ಮಾಡುವುದು ಸರಿ ತಾನೆ.

ಹೊಸ ವರ್ಷ ಬಂದಾಗ ಕ್ಯಾಲೆಂಡರ್ ಗಳ ಪುಟ ತುಂಬಿರುತ್ತದೆ, ದಿನ, ರಜೆ, ಹಬ್ಬಗಳ ವಿವರ ನಮೂದಾಗಿರುತ್ತದೆ. ಆದರೆ ಡೈರಿ ಸಿಕ್ಕಾಗ ಅದು ಖಾಲಿಯೇ ಆಗಿರುತ್ತದೆ. ಯಾಕೆ ಗೊತ್ತ? ನಾಳೆಯ, ನಾಡಿದ್ದಿನ, ಮುಂದಿನ ತಿಂಗಳ ತಾರೀಕುಗಳು ಮಾತ್ರವೇ ಮನುಷ್ಯನಿಗೆ ಗೊತ್ತು ಹೊರತು ಅಲ್ಲೇನು ನಡೆಯುತ್ತದೆ ಎಂಬುದನ್ನು ತಿಳಿಯುವ ಶಕ್ತಿ ದೇವರು ನಮಗೆ ಗೊತ್ತಿಲ್ಲ. ಹಾಗಾಗಿ ಆ ದಿನ ಕಳೆದ ಬಳಿಕವೇ ನಮಗೆ ಅಂದಿನ ಡೈರಿಯ ಪುಟ ತುಂಬಲು ಸಾಧ್ಯವಾಗುತ್ತದೆ. ನಮಗೆ ನಾವೇ ಸಕಲ ಕಲಾ ವಲ್ಲಭರು ಎಂಬ ಭ್ರಮೆಯಲ್ಲಿರುವ ನಮ್ಮ ಬಹುದೊಡ್ಡ ಮಿತಿ ಇದು. ನಾಳೆಯನ್ನು ಊಹಿಸಬಹುದೇ ವಿನಃ ನಾಳೆಯನ್ನು ಇತಮಿತ್ಥಂ ಅಂತ ಕಾಣಲಾಗದೇ ಹೋಗುವುದು. ಇದೇ ಕಾರಣಕ್ಕೆ ಹೊಸ ದಿನ ಹೊಸ ನಿರೀಕ್ಷೆ, ಕನಸು, ಕುತೂಹಲಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ನನ್ನನ್ನುಕಾಡುವ ಸಮಸ್ಯೆಗೆ ಕಾಣದ ನಾಳೆಯಲ್ಲ ಪರಿಹಾರ ಸಿಗಬಹುದು, ನೋಡದ ನಾಳೆ ನನಗೊಂದು ಅಚ್ಚರಿಯ ಅವಕಾಶ ಕಲ್ಪಿಸಬಹುದು, ನಾಳೆಯಾದರೂ ನನಗೆ ನನ್ನಲ್ಲೊಂದು ಬದಲಾವಣೆ ಕಾಣಲು ಸಾಧ್ಯವಾಗಬಹುದು, ನಾಳೆಯಿಂದ ನಾನು ಸರಿಯಾಗ್ತೇನೆ... ಹೀಗೆ ನೋಡದೇ ಇರುವ ನಾಳೆಯ ಮೇಲೆ ನಾವು ಬಹುದೊಡ್ಡ ಜವಾಬ್ದಾರಿಯನ್ನು ಹೊರಿಸುತ್ತೇವೆ. ಅದೇ ನಾಳೆಯನ್ನು ಹೊಕ್ಕು ನಾಡಿದ್ದಿಗೆ ನಾವು ಕಾಲಿಟ್ಟಮೇಲೆ. ನಾಳೆ ಎಂಬುದು ನಿನ್ನೆಯಾಗಿರುತ್ತದೆ. ನಿನ್ನೆಯನ್ನು ನಾವು ದಾಟಿ ಬಂದಿರುತ್ತೇವೆ. ನಾವು ಅಂದುಕೊಂಡದ್ದು ನಿನ್ನೆ ಆಗಿರದರಿದ್ದರೆ, ಇಂದೂ ಅದು ಆಗದೇ ಹೋದರೆ, ಮತ್ತೊಂದು ನಾಳೆ ನಮಗಾಗಿ ಕಾದಿರುತ್ತದೆ. ದಾಟಿ ಬಂದ ನಿನ್ನೆ, ದಾಟುತ್ತಿರುವ ಇಂದು, ದಾಟಲಿರುವ ನಾಳೆಯ ಮೇಲೆ ಮತ್ತೊಂದು ಕುತೂಹಲವನ್ನು ಕಟ್ಟಿಡುತ್ತದೆ.... ಇದು ನಿರಂತರ ಪ್ರಕ್ರಿಯೆ. 


ನಾವು ಶಾಶ್ವತವಲ್ಲ. ಆದರೆ ಜಗತ್ತಿನಲ್ಲಿ ನಾಳೆಗಳೂ ಬರುತ್ತಲೆ ಇರುತ್ತದೆ. ನಾವೆಷ್ಟು ಅದನ್ನು ಬಳಸುತ್ತೇವೆ. ಹೊಸ ಹೊಸತಾದ ನಾಳೆಗಳನ್ನು ಎಷ್ಟು ಬಳಸುತ್ತೇವೆ, ನಿನ್ನೆ ಮಾಡಿದ ತಪ್ಪು ನಾಳೆ ಸಂಭವಿಸಬಾರದು ಅಂತ ಹೇಗೆ ಜಾಗ್ರತೆ ಮಾಡುತ್ತೇವೆ, ಎಂಬುದು ನಮಗೆ ಬಿಟ್ಟದ್ದು. ಕಾಲವು ನಾಳೆಗಳನ್ನು ನೀಡುತ್ತಲೇ ಹೋಗುತ್ತದೆ, ಅದು ಸದುಪಯೋಗವೋ, ದುರುಪಯೋಗವೋ ಆದರೆ ಅದಕ್ಕೆ ನಾವೇ ಹೊಣೆ.

ನಿನ್ನೆಯ ತಪ್ಪುಗಳು, ನಿನ್ನೆಯ ಉದಾಸೀನ, ನಿನ್ನೆಯ ಬೇಜವಾಬ್ದಾರಿಗಳೇ ನಾಳೆಯೇ ಮುಂದುವರಿದರೆ ಅಲ್ಲಿನ ವೈಫಲ್ಯಗಳಿಗೆ ಕಾಲ ಹೊಣೆಯಲ್ಲ. ಕಾಲಕ್ಕೆ ಅಧೀನರಾದ ನಾವೇ ಹೊಣೆ. ಬದಲಾಗಲು ಪ್ರತಿದಿನ ಅವಕಾಶ ಸಿಕ್ಕಿಯೇ ಸಿಗುತ್ತದೆ. ನಾವದನ್ನು ಬಳಸುವುದಿಲ್ಲ ಅಷ್ಟೇ... ಇಂತಹ ನಾಳೆಗಳ ಗೊಂಚಲಿಗೇ ಕ್ಯಾಲೆಂಡರ್ ಅಂತ ಹೆಸರು. ಹೊಸ ವರ್ಷದ ದಿನವೆಂಬುದು ಅದಕ್ಕೊಂದು ಮುನ್ನುಡಿ ಅಷ್ಟೇ...

ಒಂದಂತೂ ನಿಜ. ಪರಿಸ್ಥಿತಿ ಹಾಗೂ ಮನಸ್ಥಿತಿ ಇವೆರಡೂ ಇಂದು ಮತ್ತು ನಾಳೆಗಳಲ್ಲಿ ನಮ್ಮ ಆಗುಹೋಗುಗಳ ಮೇಲೆ ಪ್ರಭಾವ ಬೀರುತ್ತವೆ. ಮತ್ತೆ ನಾಳೆಯಾದ ಬಳಿಕ ಆಗಿದ್ದರ ಫಲಿತಾಂಶ ನೀಡುತ್ತವೆ. ನಿನ್ನೆಯ ವೈಫಲ್ಯಗಳು ನಾಳೆಯೂ ಮರುಕಳಿಸಬಾರದು ಅಂತಾದರೆ ಇಂದು ನಮ್ಮಲ್ಲಿ ಲೋಪಗಳ, ದೋಷಗಳ ಪ್ರಜ್ಞೆ ಇರಬೇಕು. ಹಾಗಾದರೆ ನಾಳೆಯಾದರೂ ಸುಧಾರಿಸಲು ಸಾಧ್ಯ ಎಂಬ ಧೈರ್ಯ ಬರುತ್ತದೆ. ನಿನ್ನೆಯನ್ನು ಕಂಡೂ ಇಂದೂ ನಮ್ಮಲ್ಲಿ ಬದಲಾಗುವ ಧೋರಣೆ ಮೂಡದಿದ್ದರೆ, ನಾಳೆ ಹೊಸ ವರ್ಷ, ನಾಳೆಯಿಂದ ಚಮತ್ಕಾರದಂತೆ ಬದಲಾಗ್ತೇನೆ ಎಂಬ ಭ್ರಮೆಗೋ, ಉತ್ಸಾಹಕ್ಕೋ ಅರ್ಥವೇ ಇಲ್ಲ.

ಪರ್ವಗಳ ಬಗ್ಗೆ ನಿರೀಕ್ಷೆ, ಕುತೂಹಲ ಬೇಕು. ಆದರೆ ಅಲ್ಲೆಲ್ಲ ಪವಾಡದಿಂದಲೋ, ಚಮತ್ಕಾರದಿಂದಲೋ ಏನೂ ಬದಲಾಗುವುದಿಲ್ಲ. ಹೊಸ ವರ್ಷದ ಉತ್ಸಾಹ, ಆಸಕ್ತಿ ವಾಟ್ಸಪ್ ಸ್ಟೇಟಸ್ಸಿನ ಘೋಷಣೆಯ ಪ್ರದರ್ಶನಕ್ಕೆ ಸೀಮಿತವಾಗಿದ್ದರೆ ಕ್ಯಾಲೆಂಡರ್ ಬದಲಾಗಬಹುದು, ನಾವು ಬದಲಾಗುವುದಿಲ್ಲ, ಮುಂದಿನ ಡಿ.31ಕ್ಕೂ ಇಂಥದ್ದೇ ಪ್ರದರ್ಶನ ಮಾಡ್ತಾ ಇರ್ತೇವೆ ಅಷ್ಟೇ. ಪ್ರಯತ್ನ, ನಂಬಿಕೆ, ಇಚ್ಛಾಶಕ್ತಿಗಳಿದ್ದರೆ ಮಾತ್ರ ಬದಲಾಗಲು, ಹೊಸದಾಗಲು, ಹೊಸತಕ್ಕೆ ತೆರೆದುಕೊಳ್ಳಲು ಸಾಧ್ಯವಾಗುವುದು ಎಂಬ ನಿಷ್ಠುರ ಸತ್ಯ ತಿಳಿದಿರಬೇಕು. ಹಾಗಾದಾಗ ಮಾತ್ರ ವರ್ಷ ಹೊಸತಾಗಿಯೂ, ಕ್ಯಾಲೆಂಡರ್ ಆಪ್ಯಾಯಮಾನವಾಗಿಯೂ, ಜನವರಿ ತಿಂಗಳು ಚೆಂದದ ಒಂದು ರಸ್ತೆಯಾಗಿಯೂ ಕಂಡೀತು. ಬದಲಾಗಬೇಕಾಗಿದ್ದು ಕ್ಯಾಲೆಂಡರ್ ಮಾತ್ರವಲ್ಲ, ನಮಗೆ ಬದಲಾಗುವ ಆಸೆಯಿದ್ದರೆ ಮನಸ್ಥಿತಿ ಬದಲಾಗಬೇಕು, ಅದಕ್ಕೆ ಕ್ಯಾಲೆಂಡರ್ ಒಂದು ಟಾನಿಕ್ ಅಷ್ಟೆ.

-ಕೃಷ್ಣಮೋಹನ ತಲೆಂಗಳ.

No comments: