ಕಿಟಕಿಯಿಂದ ಜಗತ್ತನ್ನೇ ತೋರಿಸುವ ರೈಲು... ಒಂದು ಅನುಭೂತಿ!
ರೈಲು ಹತ್ತಿದ ತಕ್ಷಣಕ್ಕೆ ಅದೊಂದು ಇಕ್ಕಟ್ಟಾದ ಗೂಡೇನೋ ಎಂಬ ಹಾಗೆ ಭಾಸವಾಗುತ್ತದೆ. ಅದರಲ್ಲೂ ತಡರಾತ್ರಿಯೋ, ನಡುರಾತ್ರಿಯೋ ಮಧ್ಯದಾರಿಯ ಅರ್ಧದಲ್ಲಿ ಸ್ಟೇಷನಿನಲ್ಲಿ ಹತ್ತಿಕೊಂಡು ನಿಮ್ಮ ಸ್ಲೀಪರು ಸೀಟನ್ನು ಹುಡುಕುವಾಗ ಕೆಲವೊಮ್ಮೆ ಭಯಂಕರ ಪಾರ್ಕಿಂಗ್ ಜಾಗದಲ್ಲಿ ನಿಮ್ಮ ವಾಹನವನ್ನು ಹುಡುಕಿದಷ್ಟೇ ಕಷ್ಟ. ನೀವು ಕಾಯ್ದಿರಿಸಿದ ಸೀಟಿನಲ್ಲಿ ಮಲಗಿದವರನ್ನು ಎಬ್ಬಿಸಿ ಅವರಿಗೆ ನಿಮ್ಮ ಟೀಕೇಟು ತೋರಿಸಿ, ಪೆದಂಬು ಮಾತನಾಡಿದರೆ ನಾಲ್ಕು ಬಾಯಿ ಮಾತಿನ ಉಪಚಾರ ನೀಡಿ, ಲಗೇಜನ್ನು ಇಡುವಲ್ಲಿ ಇರಿಸಿ, ಚಪ್ಪಲಿ ಕಳಚಿಟ್ಟು, ಮಬ್ಬು ಬೆಳಕಿನಲ್ಲೇ ಉತ್ತರ, ದಕ್ಷಿಣ ಲೆಕ್ಕ ಹಾಕಿ ಮಲಗಲು ಅಡಿಯಿಟ್ಟಲ್ಲಿಗೆ ನೀವು ರೈಲಿಗೆ ಒಗ್ಗಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿದ್ದೀರಿ ಅಂತ ಅರ್ಥ...
ಸೀಟು ಹುಡುಕುವ ಟೆನ್ಶನ್ನು ಮುಗಿದ ಮೇಲಲ್ವ ನಿಮಗೆ ರೈಲಿನೊಳಗೆ ಹೇಗೇಗಿದೆ ಪರಿಸರ ಅಂತ ಅರ್ಥ ಆಗುವುದು? 24 ಗಂಟೆಯೂ ವಿಚಿತ್ರ ಸದ್ದಿನೊಂದಿಗೆ (ಹೋಗ್ತಾ ಹೋಗ್ತಾ ಒಗ್ಗಿಕೊಳ್ತೇವೆ) ತಿರುಗುವ ಭಾರಿ ಗಾತ್ರದ ನಾಲ್ಕು ಫ್ಯಾನುಗಳು, ಅದರ ಪಕ್ಕದಲ್ಲೇ ಅವಿಶ್ರಾಂತವಾಗಿ ಉರಿಯುವ ಬಿಳಿಯ ಕೊಳವೆ ದೀಪಗಳು, ಯಾವತ್ತಾದರೂ ಎಳೆಯಲು ಬೇಕಾದೀತು ಅಂತ ಅಳವಡಿಸಿರುವ ಸಣ್ಣದೊಂದು ಚೈನು, ಜನ ಕೂತು, ಕೂತು ಜಿಡ್ಡು ಹಿಡಿದಿರುವ ಆಕಾಶ ನೀಲಿ ಬಣ್ಣದ ದಪ್ಪನೆಯ ಸೀಟುಗಳು... ಲಟಪಟ ಅಂದರೂ ಮೇಲಕ್ಕೂ, ಕೆಳಕ್ಕೂ ಜಾರಬಲ್ಲ ಕಿಟಕಿಯ ಗಾಜುಗಳು... ಈ ರೈಲೇ ಹೀಗೆ... ಶತಮಾನಗಳಿಂದ ಬದಲಾಗಲೇ ಇಲ್ವೇನೋ ಎಂಬಂತೆ ಆಪ್ತವಾಗಿ, ಗಾಢವಾಗಿ ಕಾಡುವ ಗೆಳೆಯನಂತೆ ಕಾಣಿಸುವ ಒಂದು ನಿರ್ಜೀವಿ... ಎಲ್ಲ ಬದಲಾದ್ರೂ ರೈಲಿನ ಸೀಟು, ರೈಲಿನ ಫ್ಯಾನು, ರೈಲಿನ ಟಾಯ್ಲೆಟ್ಟು, ರೈಲಿನ ಬಾಗಿಲು, ರೈಲಿನ ಕೂಗು ಎಲ್ಲ ಹಾಗೆಯೇ ಇದೆ ಅಲ್ವ...? ಚಿಕ್ಕವರಾಗಿದ್ದಾಗಿನಿಂದ ನಾವು ನೋಡಿಕೊಂಡು ಬಂದ ಹಾಗೆ...
ಜೋಗುಳ ಹಾಡಿದಂತೆ ಲಯಬದ್ಧವಾಗಿ ಕೇಳಿಸುವ ರೈಲಿನ ಸದ್ದು... ಎಷ್ಟು ರಾತ್ರಿಯಾಗಿದ್ದರೂ ಕತ್ತಲೆಯ ಪರಿಧಿ ಲೆಕ್ಕಿಸದೆ ಮಂಜನ್ನೂ, ಕತ್ತಲನ್ನೂ, ಗಾಢ ನಿಶ್ಯಬ್ಧದ ಬೆಟ್ಟ ಗುಡ್ಡಗಳು, ಸೇತುವೆ, ಸುರಂಗಗಳನ್ನು ಭೇದಿಸಿ ದಣಿವೇ ಇಲ್ಲದವರಂತೆ ಮುಂದಕ್ಕೆ ಹೋಗುತ್ತಲೇ ಇರುವ ರೈಲು... ಮಳೆ, ಬಿಸಿಲು, ಚಂಡಮಾರುತಕ್ಕೂ ಜಗ್ಗದೆ ಸಾಗುವ ಉಕ್ಕಿನ ದೈತ್ಯ ರೈಲು...
ರೈಲಿನ ಆ ಗಾಂಭೀರ್ಯ, ನಿರ್ಲಿಪ್ತತೆ, ಅದೇ ಸುದೀರ್ಘ ದೇಹ, ಅಂಥದ್ದೇ ಪರಿಸರ, ಅಂಥದ್ದೇ ಮನಸ್ಥಿತಿಯ ಸಿಬ್ಬಂದಿ, ಮತ್ತದೇ ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಳು... ರೈಲು ರೈಲೇ... ರೈಲಿಗೆ ಪರ್ಯಾಯವೂ ರೈಲೇ ಎಂಬುದನ್ನು ಹೇಳುತ್ತಾ ಬಂದಿದೆ...
ರೈಲು ಒಂದು ಸಾಮಾಜಿಕ ಜಾಲತಾಣದ ಹಾಗೆ... ನಮ್ಮನ್ನು ಎಲ್ಲರೂ ಗಮನಿಸುತ್ತಾರೆ,
ಲೈಕು ಮಾಡ್ತಾರೆ ಎಂಬ ಭ್ರಮೆ. ಆದರೆ ಎಲ್ಲರೂ ಅವರವರ ಲೋಕದಲ್ಲೇ ಮುಳುಗಿದ್ದು ಯಾರಿಗೂ
ಗೊತ್ತಾಗುವುದೇ ಇಲ್ಲ. ಯಾರೆಷ್ಟು ಸಲ ತಿಂದರು, ಎದ್ದರು, ಟಾಯ್ಲೆಟ್ಟಿಗೆ ಹೋದರು, ಓದಿದರು?
ಇವನ್ನೆಲ್ಲ ಅಲ್ಲಿ ಯಾರೂ ಲೆಕ್ಕ ಇಡುವುದಿಲ್ಲ. ಅಷ್ಟೇ ಯಾಕೆ... ಅವರವರ ಪ್ರಯಾಣ ಮುಗಿದ ಮೇಲೆ
ರೈಲನ್ನು ಹಿಂದಿರುಗಿಯೂ ಯಾರೂ ನೋಡುವುದಿಲ್ಲ... ಮತ್ತೆ ಹೊರಗೆ ಹೋಗಿ ಆಟೋ ಹಿಡಿದು ನಮ್ಮ ನಮ್ಮ
ಮನೆ ತಲಪುವ ಆತುರ. ಗಂಟೆಗಟ್ಟಲೆ ಕೂತು ಬಂದ ರೈಲು ಮುಂದೆಲ್ಲಿಗೆ ಹೋಯಿತು ಎಂದು ನೋಡುವ ಅಗತ್ಯವೂ
ನಮಗಿಲ್ಲ, ನೋಡಿ ಆಗುವುದಕ್ಕೇನೂ ಇಲ್ಲ...!
ಜಾಲ ತಾಣಗಳೂ ಹಾಗೆಯೇ... ಅವರವರ ಅಗತ್ಯಕ್ಕೆ, ಪುರುಸೊತ್ತಿಗೆ ಮತ್ತು ಅನುಕೂಲಕ್ಕೆ ಅಷ್ಟೇ... ಇರ್ತಾರೆ, ಹೋಗ್ತಾರೆ ಎಂಬ ಹಾಗೆ.
ಒಳಗೆ ಸಾವಿರಗಟ್ಟಲೆ ಜನ ತಮ್ಮದೇ ಲೋಕದಲ್ಲಿ ಹರಟೆ ಹೊಡೆಯುತ್ತಾ ಇದ್ದರೂ ಚಾಯಾ
ವಾಲಾಗಳು ಚಾಯ್... ಚಾಯ್.. ಅಂತ ಘೋಷಿಸುತ್ತಾ ಓಡಾಡುತ್ತಿದ್ದರೂ, ರೈಲಿನ ಕಿಟಕಿಗೆ ತಲೆ ಇರಿಸಿ
ಸುಮ್ಮನೆ ಹೊರಗೆ ನೋಡಿದರೂ ಸಾಕು... ನಮಗೆ ಜಗತ್ತು ಕಾಣುತ್ತದೆ. ಜಗತ್ತಿಗೆ ನಾವೊಂದು ಪ್ರಯಾಣಿಕ
ಸಂಖ್ಯೆ ಅಷ್ಟೇ! ಅಲ್ಲೂ ಒಂದು ತತ್ವಜ್ಞಾನ ಇದೆ. ಕೇವಲ ಪ್ರಯಾಣಿಕರಾಗಿ ಹೊರಗೆ
ನೋಡಿದಾಗ ನಮಗೆ ಕಾಣುವ ಜಗತ್ತೇ ಬೇರೆ.. ಎಷ್ಟೊಂದು ಸಂಗತಿಗಳು ಕಾಣುತ್ತವೆ. ನಾವು ಬೆಚ್ಚಗೆ ನಮ್ಮ
ಸೀಟಿನಲ್ಲಿ ಕುಳಿತು ಹೊರ ನೋಡಿದಾರೆ ಮತ್ತೊಂದು ರೈಲಿಗೆ ಕಾಯುವವರ ಧಾವಂತ, ಕೈಯ್ಯಲ್ಲಿ ಮಣ ಭಾರದ
ಬ್ಯಾಗ್, ಸ್ಟೇಷನ್ನಿನಲ್ಲೇ ನಿದ್ರೆ ಹೋಗಬೇಕಾದ ಅನಿವಾರ್ಯತೆ, ತಮ್ಮ ಬೋಗಿ ಇನ್ನೆಲ್ಲಿ
ನಿಲ್ಲುತ್ತದೋ ಅಂತ ಮುಖದಲ್ಲೇ ಮಣಭಾರದ ಟೆನ್ಶನ್ನ್ ಹೊತ್ತು ನಿಂತವರ ಭಂಗಿ... ರೈಲು ನಿಂತ
ವೇಳೆಯಲ್ಲೇ ನಿತ್ಯದ ಬದುಕಿಗೆ ಸಂಪಾದಿಸಬೇಕಾದ ಅನಿವಾರ್ಯ ಇರುವ ಆಹಾರ ಮಾರುವವರು, ಮಾರಾಟವೇ
ಆಗ್ತಿಲ್ಲವೇನೋ ಎಂಬ ಹಾಗೆ ತೋರುವ ಸ್ಟೇಷನ್ನಿನ ಪೇಪರ್ ಅಂಗಡಿಯಲ್ಲಿ ತೂಗು ಹಾಕಿರುವ
ಮ್ಯಾಜಝಿನ್ನುಗಳು... ನೀರು ಬಾರದೆ ಒಣಗಿ ಹೋಗಿರುವ ನಳ್ಳಿ... ಒಂದು ಸ್ಟೇಷನನ್ನಿನಲ್ಲಿ ರೈಲು ನಿಂತರೆ
ಸಾವಿರ ವಿಚಾರಗಳನ್ನು ನಿಶ್ಯಬ್ಧವಾಗಿ ಗಮನಿಸಬಹುದು....
ಕ್ರಾಸಿಂಗಿನಲ್ಲಿ ಕಾಯುವ ವಾಹನಗಳು, ಪಕ್ಕದಲ್ಲೇ
ಘರ್ಜಿಸುತ್ತಾ ರೈಲು ಸಾಗಿದರೂ ಲೆಕ್ಕಿಸದೆ ಗದ್ದೆಯಲ್ಲಿ ಮೇಯುವ ಗೋವುಗಳು, ಗುಡಿಸಲಿನಿಂದ ಹೊರಡುವ
ಹೊಗೆ, ತನ್ನ ಪಾಡಿಗೆ ಮೇಲೆ ಬರ್ತಾ ಇರುವ ಸೂರ್ಯ, ನಮಗಿಂತ ಹತ್ತು ಪಟ್ಟು ಸ್ಪೀಡಿದೆಯೋ ಎಂಬ ಹಾಗೆ
ಝೇಂಕರಿಸುತ್ತಾ ಪಕ್ಕದಲ್ಲಿ ಸಾಗಿದ ದೆಹಲಿಗೆ ಹೋಗುವ ಎಕ್ಸೆ ಪ್ರೆಸ್ ರೈಲು.... ಹೀಗೆ ಬದುಕು
ಒಂದು ಚಿತ್ರಪಟದಂತೆ ರೈಲಿನ ಕಿಟಕಿಯ ಹೊರಗೆ ಕಾಣುತ್ತಲೇ ಇರುತ್ತದೆ. ಸ್ಟೇಟಸ್ ಮೆಸೇಜ್ ಸ್ವೈಪ್
ಮಾಡಿದರೆ ಕಾಣುವ ಬೇರೆಯದ್ದೇ ಲೋಕದ ಹಾಗೆ...! ರೈಲು ನಮಗೆ ತೋರಿಸುತ್ತದೆ. ಕಿಟಕಿ ನಮಗೆ ದಾರಿ
ಮಾಡಿಕೊಡುತ್ತದೆ, ನಾವು ಪ್ರೇಕ್ಷಕರು ಅಷ್ಟೇ... ಅಲ್ಲಿ ಪ್ರತಿಕ್ರಿಯೇಯೋ, ಲೈಕೋ, ಕಮೆಂಟೋ
ಬೇಕಾಗುವುದಿಲ್ಲ. ಮನಸ್ಸು ಸುಮ್ಮನೆ ಗಮನಿಸಲು ಬಯಸುತ್ತದೆ ಅಷ್ಟೇ...
ರೈಲು ಪ್ರಯಾಣ ಎಂಬುದು ಒಂದು ಸ್ಪೇಸ್... ನಿಮ್ಮದೇ
ಒಂದು ಸಮಯ. ನಿಮ್ಮದೇ ಒಂದು ಪುಟ್ಟ ಗೂಡು, ಪುಟ್ಟ ಸ್ಥಳ, ಪುಟ್ಟ ಸೀಟು, ಗಂಟೆಗಳ ಕಾಲ ಚಲಿಸುವ
ಯೋಚನೆಗಳ ಮೇಲಿದ್ದುಕೊಂಡೇ ಮೌನವಾಗಿ, ಗಾಢವಾಗಿ ಗಮನಿಸಬಹುದಾದ ಜಾಗ. ಅಲ್ಲಿ ನಿಮ್ಮ ಉಪಸ್ಥಿತಿಯೇ
ಮುಖ್ಯ ಅಲ್ಲ. ನೀವಿಲ್ಲದಿದ್ದರೂ ಆ ರೈಲು ಹೋಗುತ್ತದೆ. ದಿನಾ ಹೋಗುತ್ತದೆ, ನಿಮಗೆ ರೈಲು
ಕಾಯುವುದಿಲ್ಲ, ನೀವಿಳಿಯಲೆಂದೇ ಆ ರೈಲು ನಿಲ್ಲುವುದೂ ಅಲ್ಲ... “ಎಲ್ಲ ಕೇಳಲಿ…” ಅಂತ ರೈಲು ಹಾಡುವುದೂ ಅಲ್ಲ... ಅದೊಂದು
ವ್ಯವಸ್ಥೆ... ಅಲ್ಲಿ ನೀವೊಂದು ಭಾಗ ಅಷ್ಟೇ... ಆದರೆ ನಾವು ಹೋಗುವ ದಿನ ಬಿಟ್ಟರೆ
ಮತ್ಯಾವತ್ತಾದರೂ ನಾವು ಆ ರೈಲಿನ ಬಗ್ಗೆ ಮನೆಯಲ್ಲಿ ಕುಳಿತು ಯೋಚಿಸ್ತೇವಾ.... ಇಲ್ವಲ್ಲ...?!! ನಿನ್ನೆ ಇದೇ ಹೊತ್ತಿಗೆ ನಾನು ಹೋದ ರೈಲು ಈಗ ಎಲ್ಲಿಗೆ
ತಲುಪಿರಬಹುದು ಅಂತ.... ಇದು ನಮ್ಮ ಟಿಪಿಕಲ್ ಮಾನವ ಮನಸ್ಥಿತಿಗೊಂದು ರೂಪಕ ಅಷ್ಟೇ. ನಾವಿರುವುದೇ
ಹಾಗೆ.. ಇಳಿದ ಬಳಿಕ ರೈಲಿನ ಗೊಡವೆ ನಮಗಿಲ್ಲ... ಅಲ್ಲಿ ಕಂಡದ್ದು, ಕಾಣಿಸಿದ್ದು ಒಂದು
ಅನುಭೂತಿ... ಅದರ ತೀವ್ರತೆ ಇರುವಷ್ಟೂ ದಿನ ಸೂಕ್ಷ್ಮಸಂವೇದನೆಗೆ ಸ್ಪಂದಿಸಿ ಆ ನೆನಪುಗಳು
ಕಾಡಬಹುದು. ಬರಹಕ್ಕೂ, ವಿವರಣೆಗೂ ನಿಲುಕದ ಭಾವಗಳು ಮತ್ತೊಮ್ಮೆ ಕಾಡುವುದಕ್ಕೆ, ಕಾಡುವಂತೆ
ಮಾಡುವುದಕ್ಕೆ ಮತ್ತೊಮ್ಮೆ ರೈಲಿನಲ್ಲಿ ಹೋಗಲೇಬೇಕು... ನೆಟ್ವರ್ಕು, ಲೈಕು, ಕಮೆಂಟುಗಳೇ ಇಲ್ಲದ
ರೈಲು ಪ್ರಯಾಣ ಎಷ್ಟು ಚಂದ...!
-ಕೃಷ್ಣಮೋಹನ ತಲೆಂಗಳ (08.03.2022)
No comments:
Post a Comment