ಬಸ್ಸಿನಲ್ಲಿ ಸೀಟು ಹಿಡಿಯುವುದೆಂದರೆ ಅಂದಂದೇ ಡ್ರಾ... ಅಂದಂದೇ ಬಹುಮಾನ!
ಬಸ್ಸಿನಲ್ಲಿ ಪ್ರಯಾಣಿಸುವ ಒಂದಷ್ಟು ಹೊತ್ತು ಕ್ಷಣಿಕವೇ ಆಗಿದ್ದರೂ “ನನ್ನ ಸೀಟು” ಅಂತ ಹುಡುಕಲು, ಹಕ್ಕು ಸ್ಥಾಪಿಸಲು ಎಷ್ಟೊಂದು ಸರ್ಕಸ್ಸು ಮಾಡ್ತೇವೆ ಅಲ್ವ? ಭಯಂಕರ ರಶ್ಶಿರುವ ಬೆಳಗ್ಗೆ ಮತ್ತು ಸಂಜೆ ಬಸ್ಸಿಗೆ ಹತ್ತುವುದೇ ಮೊದಲ ಸಾಹಸ. ಮೊದಲು ಒಂದು ಕಾಲು ಬಾಗಿಲಿನೊಳಗೆ ಇರಿಸುವುದು, ಎರಡನೇ ಹಂತ ಮೆಟ್ಟಿಲಿನಿಂದ ಒಳಗಡೆ ನೂಕುನುಗ್ಗಲಿನ ನಡುವೆ ಅಯಾಚಿತವಾಗಿ ತಲಪುವುದು, ಮೂರನೇ ಹಂತ ಕಂಡಕ್ಟರ್ ಮಾಮನ ಪ್ರೋತ್ಸಾಹದಿಂದ “ಪಿರ ಪೋಲೆ ಪಿರ ಪೋಲೆ…” ಮಂತ್ರ ಜಪಿಸಿಕೊಂಡು ಒಳಗೊಳಗೆ ಸಾಗುತ್ತಾ ಒಂದು ಜಾಗದಲ್ಲಿ ಪ್ರತಿಷ್ಠಾಪನೆ ಆಗುವುದು. ಈ ನಡುವೆ ಬೆನ್ನಿನ ಬ್ಯಾಗನ್ನು ಧಸಕ್ಕನೆ ಸೀಟಿನಲ್ಲಿ ಕೂತವರ ಮಡಿಲಿಗೆ ಬಿಸಾಕಿ ನಿರಾಳರಾಗುವುದು!
ನಾನು ಕಂಡ ಹಾಗೆ ಸೀಟು ಹಿಡಿಯುವುದರಲ್ಲಿ ಭಯಂಕರ ವೈವಿಧ್ಯಮಯ ಆಯ್ಕೆಗಳಿರುತ್ತವೆ. ಜಗತ್ತಿನಲ್ಲಿ ಎಲ್ಲವನ್ನೂ ಕಳಕೊಂಡ ಹಾಗೆ, ಮಾತಿನಲ್ಲೂ ಆಸಕ್ತಿ ಇಲ್ಲದವರ ಹಾಗೆ ನಿರ್ಲಿಪ್ತರಾಗಿ ಹಿಂದಿನ ಸೀಟಿನಲ್ಲೇ ಹೋಗುವಾಗಲೂ, ಬರುವಾಗಲೂ ಕುಳಿತು, ಯಾವ ಜೋಕಿಗೂ ನಗಾಡದೆ, ಮಾತನಾಡದೆ, ಮೊಬೈಲನ್ನು ನೋಡದೆ ತಮ್ಮ ಪಾಡಿಗೆ ಹತ್ತಿ, ತಮ್ಮ ಪಾಡಿಗೆ ಇಳಿಯುವವರು, ಆಗಾಗ ತಲೆ ಬಾಚುತ್ತಾ ಡ್ರೈವರ್ ಎದುರಿನ ಅಡ್ಡ ಸೀಟಿನಲ್ಲಿ ಕುಳಿತು, ಹತ್ತಿದಾರಾಭ್ಯ ಇಳಿಯುವ ತನಕವೂ ಮಾತನಾಡುತ್ತಲೇ ಇದ್ದು, ಆಗಾಗ ತನ್ನನ್ನು ಯಾರೆಲ್ಲ ಗಮನಿಸಿದ್ದಾರೆ ಅಂದ ಕಳ್ಳ ನೋಟ ಬೀರುವವರು, ಶತಾಯಗತಾಯ ಮೊಣಗಂಟಿನಲ್ಲಿ ನೂಕಿಯಾದರೂ ಸರಿ, ಕಿಟಕಿ ಪಕ್ಕದ ಸೀಟನ್ನೇ ಹುಡುಕಿ ಕುಳಿತು ತಮ್ಮ ಪಾಡಿಗೆ ಗಾಳಿಗೆ ಮುಖವೊಡ್ಡಿ ಸುಖಿಸುವವರು, ಇನ್ನೊಂದು ಸ್ಟಾಪಿನಲ್ಲಿ ಹತ್ತಬಹುದಾದ ಅವನನ್ನೋ, ಅವಳನ್ನೋ ದೃಷ್ಟಿಯಲ್ಲಿರಿಸಿ ಎಂತೆಂತದ್ದೋ ತಿಪ್ಪರಲಾಗ ಹಾಕಿ ಅವರ ಪರ್ಮನೆಂಟಿನ ಪ್ರತಿದಿನದ ನಿಘಂಟಿನ ಸೀಟಿನಲ್ಲಿ “ಅಲ್ಲಿಯೇ ಕಾಕತಾಳೀಯವಾಗಿ” ಕುಳಿತರು ಎಂಬ ದೃಶ್ಯವನ್ನು ಸೃಷ್ಟಿಸಿ ಅಕ್ಕಪಕ್ಕ ಕುಳಿತು ಪಿಸಿಪಿಸಿ ಮಾತನಾಡುವವರು.... ಹೀಗೆ ವಿಧ ವಿಧದ ಮನಸ್ಥಿತಿಯ ಪ್ರಯಾಣಿಕರು ಎಲ್ಲೆಲ್ಲಿ ಕೂರುತ್ತಾರೆ ಎಂಬುದು ಕಂಡಕ್ಟ್ರು ಮಾಮನಿಗೆ ಸಾಮಾನ್ಯವಾಗಿ ಗೊತ್ತಿರುವ ಕಾರಣ ಅವನೇನೂ ಇಂತಹ ವಿಚಾರಗಳಿಗೆ ತಲೆ ಕೆಡಿಸುವುದಿಲ್ಲ.
ಸುಮಾರು 3 ದಶಕಗಳ ಹಿಂದೆ (ಈಗ ಹೇಗೋ ಗೊತ್ತಿಲ್ಲ)
ಮಡಿಕೇರಿ ಬಸ್ ನಿಲ್ದಾಣದಿಂದ ಮರಗೋಡಿನತ್ತ ತೆರಳುವ ಬಸ್ಸಿಗೆ ಹತ್ತುತ್ತಿದ್ದ ದೃಶ್ಯ ಈಗಲೂ
ಚೆನ್ನಾಗಿ ನೆನಪಿದೆ. ಬಸ್ಸು (ಪ್ರೈವೇಟ್) ಬಂದ ಕೂಡಲೇ ಮುಗಿಬೀಳುವ ಜನ ಬೊಬ್ಬೆ ಬಾಕಿ, ಪರಸ್ಪರ
ನೂಕಿ, ಧಾವಂತದಿಂದ ಬಾಗಿಲಿನತ್ತ ನುಗ್ಗುತ್ತಾರೆ. ಬಸ್ಸಿನಿಂದ ಇಳಿಯಲೂ ಬಿಡುವುದಿಲ್ಲ. ಭಯಂಕರ
ಎನರ್ಜಿ ಇರುವವರು ಹೈಜಂಪ್ ಮಾಡಿ ಕಿಟಕಿಯಿಂದಲೇ ಸೀಟಿಗೆ ಟವೆಲ್ಲು, ಕೊಡೆ, ಕೈಚೀಲ ಬಿಸಾಕಿ ಸೀಟು
ಬುಕ್ ಮಾಡುತ್ತಾರೆ... ಹೇಯ್, ಹೋಯ್ ಅಂತ ಓಡಾಟ ಕಂಡಾಗ ಮಂಗಳೂರಿನಿಂದ ಹೋದ ನಮಗೆ, ಈ ಬಸ್ಸಿನಲ್ಲಿ
ಸೀಟು ಬೇಡ, ಸುಮ್ಮನೆ ಕಾಲೂರಲು ಜಾಗ ಸಿಕ್ಕಿದರೆ ಸಾಕು ದೇವರೇ ಅಂತ ಪ್ರಾರ್ಥಿಸುವ ಹಾಗೆ ಆತಂಕ
ಆಗುತ್ತಿತ್ತು. ಆದರೆ, ಬಸ್ಸಿನಲ್ಲಿ ಬಂದ ಪ್ರಯಾಣಿಕರು ಇಳಿದ ಮೇಲೆ ಕೆಳಗಿದ್ದವರು ಬಸ್ಸು
ಹತ್ತಿದ್ದಾಗಲೇ ಗೊತ್ತಾಗ್ತಾ ಇದ್ದದ್ದು, ಅರ್ಧ ಬಸ್ ತುಂಬುವಷ್ಟು ಜನರೂ ಇರ್ತಾ ಇರಲಿಲ್ಲ! ಅಲ್ಲಿ ಆಗ ಪ್ರಯಾಣಿಕರು ಬಸ್ಸಿಗೆ ಹತ್ತಿ ಸೀಟು ಹಿಡಿಯುತ್ತಿದ್ದ
ಸ್ಟೈಲೇ ಹಾಗೆ ಅಂತ ಮತ್ತೆ ಗೊತ್ತಾಗಿದ್ದು...
ಅಲ್ಲಿ ಮಾತ್ರ ಅಲ್ಲ... ಮಂಗಳೂರು ಭಾಗದ ಕೆಲವು ಟಿಪಿಕಲ್ ಬಸ್ ನಿಲ್ದಾಣಗಳಾದ ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಬಿ.ಸಿ.ರೋಡ್ ಇಲ್ಲೆಲ್ಲ ನಾವು ಸಣ್ಣವರಿದ್ದಾಗ ಲೆಕ್ಕದ ಖಾಸಗಿ ಬಸ್ಸುಗಳು ಇದ್ದದ್ದು. ಗಂಟೆಗೊ, ಎರಡು ಗಂಟೆಗೋ ಒಂದೂರಿಗೆ ಬಸ್ಸಿರುವುದು. ಅದನ್ನು ತಪ್ಪಿಸಿದರೆ ಮತ್ತೆ ಆ ಊರಿಗೆ ಬಸ್ಸಿಲ್ಲ. ಹಾಗಾಗಿ ಸೀಟು ಉಂಟೋ, ಇಲ್ಲವೋ ಬಸ್ ಹತ್ತುವುದು ಹತ್ತುವುದೇ ಎಂಬ ಸನ್ನಿವೇಶ. ಹಾಗಾಗಿ ಬಸ್ ಸ್ಟ್ಯಾಂಡಿಗೆ ಬಸ್ ಬಂದು ತನ್ನ ನಿಗದಿತ ಸ್ಥಾನಕ್ಕೆ “ರಿವರ್ಸ್” ಹೋಗುವಾಗ ಶಕ್ತಿ ಸಾಮರ್ಥ್ಯ ಇರುವವರು ಬಸ್ಸಿನ ಹಿಂದೆಯೋ ಓಡುತ್ತಾ, ಆಗಾಗ ಜಿಗಿಯುತ್ತಾ, ಕಿಟಕಿಯಿಂದ (ಆಗ ಕಿಟಕಿಗೆ ಗ್ಲಾಸ್ ಗಳಿದ್ದಲ್ಲ, ಟಾರ್ಪಲಿನ್ ಪರದೆ ಇದ್ದದ್ದು) ಟವೆಲ್, ಕೊಡೆ ಬಿಸಾಡಿ ಸೀಟು ಬುಕ್ಕು ಮಾಡುವುದು, ನಂತರ ಬಾಗಿಲಿನಲ್ಲಿ ನೂಕಿ, ತುಳಿದು, ಭುಸುಗುಡುತ್ತಾ ಹತ್ತಿ ಟೆನ್ಶನ್ ಮಾಡ್ಕೊಂಡು ತಾವು ಹೊರಗಿನಿಂದ ಎಸೆದ ಸೀಟ್ ಬುಕ್ಕಿಂಗ್ ಸಾಧನಗಳು ಅಲ್ಲಿಯೇ ಇವೆಯಾ, ಯಾರಾದರೂ ನೂಕಿದ್ದಾರ ಅಂತ ಗಮನಿಸುವುದು, ಒಂದು ವೇಳೆ ತಾವು ಎಸೆದ ಟವೆಲ್ಲಿನ ಮೇಲೆ ಇನ್ಯಾರಾದರೂ ಕೂತಿದ್ದಾರೆ “ಸೀಟ್ಡ್ ದಾನೆ ಈರ್ನ ಪುದರ್ ಬರೆತಿಂಡ...” ಅಂತ ಮುದದಿಂದ ಜಗಳ ಶುರು ಮಾಡುವುದು... ಹೀಗೆ.... ಅಂಥದ್ದೊಂದು ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ.
ನಿಧಾನವಾಗಿ ಹಿಂದೆ ಹಿಂದೆ ಬರುವ ಬಸ್ಸಿನ ಸುತ್ತ ನೊಣಗಳ ಹಾಗೆ ಮುತ್ತಿಕ್ಕಿದ ಮಂದಿ ಸೀಟು ಹಿಡಿಯಲು ಹೊರಗಿನಿಂದಲೇ ಧಾವಂತ ಮಾಡುವುದು. ಪೀಪಿ ಊದುವ ಕಂಡಕ್ಟರು “ಜಪ್ಯೆರೆ ಬುಡ್ಲೆ ಅಣ್ಣ... ದಾದ ಸೈಯ್ಪರ...” ಅಂತ ಬಯ್ಯುವುದು... ಇವೆಲ್ಲ ನಿತ್ಯದ ದೃಶ್ಯಗಳು. ಅದರಲ್ಲೂ ಸಂಜೆ 4 ಗಂಟೆ ಹೊತ್ತಿಗೆ ಶಾಲೆ ಬಿಡುವಾಗ ವಿಟ್ಲ ಬಸ್ ಸ್ಟ್ಯಾಂಡಿನಲ್ಲಿ ಸೀಟು ಹಿಡಿಯುವುದು ಬಿಡಿ, ಬಸ್ಸಿಗೆ ಹತ್ತಿದರೆ ಸಾಕಪ್ಪ ಅಂತ ಹರಿಕೆ ಹೇಳುವಷ್ಟು ಜನದಟ್ಟಣೆ.... ಕೈಯ್ಯಲ್ಲಿರುವ ಭಾರದ ಚೀಲ, ಮಕ್ಕಳು, ಉದ್ದದ ಚಂಡಿ ಕೊಡೆ, ತರಕಾರಿ ಗಂಟು, ಪಾತ್ರೆ ಪಗಡಿ ಇವನ್ನೆಲ್ಲ ಹಿಡ್ಕೊಂಡು ಹೇಗಪ್ಪ ಬಸ್ ಹತ್ತುವುದು ಅಂತ ಟೆನ್ಶನ್ ಮಾಡ್ಕೊಂಡು ನಿಲ್ಲುತ್ತಿದ್ದ ದೃಶ್ಯಗಳು ಸದಾ ಹಸಿರು.
ಈ ನಡುವೆ ಮಹಿಳೆಯರು, ವೃದ್ಧರು, ಅನಾರೋಗ್ಯಪೀಡಿತರ ಸಂಕಟ ಹೇಳ ತೀರದು... ಆದರೂ ಜಾರಿಕೊಂಡು, ತೂರಿಕೊಂಡು ಬಸ್ಸು ಹತ್ತಿ... ಬಗಲಲ್ಲಿ ಮಕ್ಕಳಿದ್ದಾರೆಂದೋ, ಪ್ರಾಯವಾಗಿದೆ ಎಂದೋ, ಕೈಯಲ್ಲಿ ಭಾರದ ಚೀಲ ಇದೆಯೆಂದೋ ಮತ್ತಿತರ ಕಾರಣಕ್ಕೆ ಯಾರದ್ದಾದರೂ ಕರುಣಾದೃಷ್ಟಿಯಿಂದ ಸೀಟು ಸಿಕ್ಕಿದರೆ ಸ್ವರ್ಗವನ್ನೇ ತಲುಪಿದಷ್ಟು ಖುಷಿ... ಮತ್ತೂ ಒಂದು ಟೆನ್ಶನ್ ಇತ್ತು. ಬಸ್ಸಿನ ಮಧ್ಯದಲ್ಲಿ ಸೀಟು ಸಿಕ್ಕಿದರೆ, ಇಡೀ ಬಸ್ಸಿನಲ್ಲಿ ವಿಪರೀತ ರಶ್ಶಿದ್ದರೆ ಮಾರ್ಗ ಮಧ್ಯದಲ್ಲಿ ನನ್ನ ಸ್ಟಾಪಿನಲ್ಲಿ ನಾನು ಎದ್ದು ನಿಂತು ಆ ರಶ್ಶಿನಲ್ಲಿ ಬಾಗಿಲ ವರೆಗೆ ಹೋಗುವುದು ಹೇಗೆ? ನಾನು ಹಿಂದಿನ ಬಾಗಿಲ ವರೆಗೆ ತಲುಪಿದರೂ ಆ ಹೊತ್ತಿಗೆ ಕಂಡಕ್ಟ್ರು ಮುಂದಿನ ಬಾಗಿಲಿನಲ್ಲಿ ಟಿಕೆಟ್ ಕೊಡುವುದರಲ್ಲಿ ಮಗ್ನರಾಗಿದ್ದರೆ, ನಾನು ದೊಡ್ಡ ಸ್ವರದಲ್ಲಿ “ಜಪ್ಯರುಂಡೋ....” ಅಂತ ಕಿರುಚುವುದು ಹೇಗೆ? ಜೋರು ಮಳೆ ಬರ್ತಾ ಇದ್ರೆ, ಕೊಡೆ ಬಿಡಿಸುವುದು ಹೇಗೆ? ಎಂಬಿತ್ಯಾದಿ ಟೆನ್ಶನ್...
ಇದಕ್ಕೆಲ್ಲ ತಲೆ ಕೆಡಿಸದೆ ಫೂಟ್ ಬೋರ್ಡಿನಲ್ಲೇ
ನೇತಾಡುವ ಕೆಲ ಹುಡುಗರು, ಕೈಯಲ್ಲಿದ್ದ ನಾಲ್ಕು ಪುಸ್ತಕಗಳನ್ನು ಸೀಟಿನಲ್ಲಿ ಕೂತವರ ಮಡಿಲಿಗೆ
ಬೀಸಾಡಿ, ಪ್ರತಿ ಸ್ಟಾಪಿನಲ್ಲಿ ಇಳಿದು ಕ್ಲೀನರ್ ಕೆಲಸವನ್ನು ತಾವೇ ಮಾಡುತ್ತಾ ರೈಟ್ ಪೋಯಿ
ಅನ್ನುತ್ತಾ.... ತಮ್ಮ ಸ್ಟಾಪು ಬಂದಾಗ ತಾವೇ ತುಟಿ ನಡುವೆ ಬೆರಳಿಟ್ಟು ವಿಶಿಲ್ ಹಾಕಿ, ಬಸ್ಸು
ನಿಲ್ಲುವ ಮೊದಲೇ ಬಸ್ಸಿನಿಂದ ಹಾರಿ.. ಬಸ್ಸಿನ ವೇಗಕ್ಕೆ ಓಡುತ್ತಾ ಕ್ರಮೇಣ ವೇಗ ತಗ್ಗಿಸಿ ಇಳಿಯುವ
ಸಾಹಸ ಕಂಡಾಗ ಅವರೇ ಶಿವರಾಜ್ ಕುಮಾರ್, ಶಾರೂಖ್ ಖಾನ್ ಗಳೋ ಎಂಬಷ್ಟು ಹೀರೋಗಳ ಹಾಗೆ ಕಾಣ್ತಾ
ಇದ್ದದ್ದು ಸುಳ್ಳಲ್ಲ!
ಬಸ್ಸು ಹತ್ತುವ ವರೆಗೆ ಬಸ್ ತಪ್ಪದಿರಲಿ ಎಂಬ
ಪ್ರಾರ್ಥನೆ, ಹತ್ತಿದ ಬಳಿಕ ಸೀಟು ಸಿಕ್ಕಲಿ ಎಂಬ ಕೋರಿಕೆ, ಸೀಟು ಸಿಕ್ಕಿದರೆ ಕಿಟಕಿ ಪಕ್ಕವೇ
ಸಿಕ್ಕಲಿ ಎಂಬ ಆಸೆ, ಸೀಟು ಸಿಕ್ಕಿದ ಬಳಿಕ ಬಸ್ಸಿಳಿಯುವ ಹೊತ್ತಿಗೆ ಬಸ್ಸಿನ ರಶ್ಶು ತಗ್ಗಲಿ ಎಂಬ ಕೋರಿಕೆ...
ಹೀಗೆ ಆಯಾ ದಿನದ ಬೇಡಿಕೆಗಳು, ಆಯಾ ದಿನದ ಪರಿಸ್ಥಿತಿಗಳು, ಆಯಾ ದಿನದ ಫಲಿತಾಂಶಗಳು.. ಬಸ್ಸು
ಪ್ರಯಾಣದ ಅನುಭವ ಅಂದರೆ “ಅಂದದೇ ಡ್ರಾ... ಅಂದಂದೇ ಫಲಿತಾಂಶ” ಎಂಬ ಹಾಗೆ...
ಮಂಗಳೂರಿನ ಐಡಿಯಲ್ಲು, ಮರೋಳಿ, ನವದುರ್ಗಾಪ್ರಸಾದ್, ಗಣೇಶ್, ಉಡುಪಿಯ ಹನುಮಾನ್,
ಕುಂದಾಪುರ ದುರ್ಗಾಂಬಾ, ಮುಡಿಪ್ಪಿನ ಶ್ರೀದೇವಿ,
ದತ್ತಕೃಪಾ, ಪುತ್ತೂರು, ಕಾಸರಗೋಡು ಭಾಗದ ಕೆಬಿಟಿ, ಅನುರಾಧಾ, ಕೃಷ್ಣ ಬಸ್ಸು, ಅರುಣಾ, ಬದಿಯಡ್ಕದ
ಗುರುಗಣೇಶ್, ಗುರುವಾಯೂರಪ್ಪನ್, ಪೆರ್ಲದ ಗಣೇಶ್ ಪ್ರಸಾದ್, ಎಕೆಬಿಟಿ, ಖಂಡಿಗೆ, ವಿಕ್ರಂ,
ಬಿ.ಸಿ.ರೋಡಿನ ಶಾರದಾ, ಬಲ್ಲಾಳ್, ಅಂಬಿಕಾ, ಮಡಿಕೇರಿಯ ಭಗಂಡೇಶ್ವರ, ಎಸ್ ಆರ್ ಎಂಎಸ್, ಬಾಯಾರಿನ
ಶಂಕರ ವಿಠಲ್, ದುರ್ಗಾ, ಸನಾಂ, ಎಸ್ ಕೆಬಿಟಿ, .... ಕಡಬ, ಉಪ್ಪಿನಂಗಡಿ ಕಡೆ ಕೆಎಸ್ಸಾರ್ಟೀಸಿಯ
ಕೆಂಪು ಬಸ್ಸುಗಳು... ಹೀಗೆ ರಶ್ಶಿನ ಅನುಭವಗಳನ್ನು ಕಟ್ಟಿಕೊಟ್ಟ ಆ ಕಾಲದ ದಂತಕಥೆಗಳ ಬಸ್ಸುಗಳ
ಆಯ್ದ ಹೆಸರುಗಳಿವು.. ಈ ಬರಹ ಓದುತ್ತಿರುವ ನಿಮ್ಮಲ್ಲಿ ನನ್ನ ಸಮಕಾಲೀನ ಹಲವರು ಖಂಡಿತಾ ಈ ಪೈಕಿ
ಒಂದಾದರೂ ಬಸ್ಸಿನಲ್ಲಿ ಒಮ್ಮೆಯಾದರೂ ಹೋಗಿಯೇ ಹೋಗಿರುತ್ತೀರಿ... ಅಲ್ವ?
ಬೆಳಗ್ಗಿನ ಫಸ್ಟು ಬಸ್ಸಿನಲ್ಲಿ ಹೋಗುವಾಗ ಅಥವಾ
ರಾತ್ರಿಯ ಲಾಸ್ಟು ಬಸ್ಸಿನ ಆರಂಭದ ಸ್ಟಾಪಿನಲ್ಲಿ ಬಸ್ ಹತ್ತುವುದಾದರೆ ನಮಗೆ ಬೇಕಾದ ಸೀಟಿನಲ್ಲಿ
ಕೂರಬಹುದು... ಅಲ್ಲಿ ನಮ್ಮ ಟೇಸ್ಟು, ನಮ್ಮ ಆಯ್ಕೆ, ನಮ್ಮ ಅನುಕೂಲ, ನಮ್ಮ ಅಡ್ಜಸ್ಟುಮೆಂಟು
ಇತ್ಯಾದಿಗಳನ್ನು ಲೆಕ್ಕ ಹಾಕಿ ದಿನಾ ಒಂದೇ ಸೀಟಿನಲ್ಲಿ ಕೂರುವ ನೂರಾರು ಮಂದಿ ಇಂದಿಗೂ ಇದ್ದಾರೆ..
ಅವರಿಗೆ ಒಂದು ದಿನ ಆ ಸೀಟಿನಲ್ಲಿ ಬೇರೆಯವರು ಕೂತರೇ ಏನೋ ಸಿಡಿಮಿಡಿ, ಹೇಳಲಾಗದ ಅಸಹನೆ ಕಾಡುವುದು
ಸುಳ್ಳಲ್ಲ. ಸೀಟಿನಲ್ಲಿ ನಮ್ಮ ಹೆಸರು ಬರೆಯದಿದ್ದರೂ ಅದು ನನ್ನ ಸೀಟು ಎಂಬ ವಿಚಿತ್ರ ವ್ಯಾಮೋಹ...
ಭಾವನಾತ್ಮಕ ಸಂಬಂಧವೂ ಹೌದು...
ಕಷ್ಟು ಪಟ್ಟು ಸೀಟು ಗಿಟ್ಟಿಸಿದರೂ ನಂತರದ
ತಲೆಬಿಸಿಗಳು ಒಂದೆರಡಲ್ಲ. ಕೇರಳದ ಬಸ್ಸುಗಳಲ್ಲಿ ಬಾಗಿಲಿನ ಪಕ್ಕ ಕುಳಿತರೆ ಬಸ್ಸಿನಲ್ಲಿ
ರಶ್ಶಿದ್ದು ಕಂಡಕ್ಟರ್ ಮತ್ತೆಲ್ಲೋ ಇದ್ದರೆ ಪ್ರತಿ ಸ್ಟಾಪಿನಲ್ಲೂ ತೆರೆಯುವ ಬಾಗಿಲನ್ನು ನಾವೇ
ಮುಚ್ಚಬೇಕು!, ಕ್ಲೀನರ್ ಸಾಮಾನ್ಯವಾಗಿ ಹಿಂದಿನ ಡೋರಿನಲ್ಲಿರುವ ಕಾರಣ ಎದುರಿನ
ಡೋರಿನ ಪಕ್ಕ ನಾವು ಕೂತರೆ ಬಾಗಿಲು ಮುಚ್ಚುವ ಘನಂದಾರಿ ಕೆಲಸ ನಮ್ಮ ಪಾಲಿಗೆ! ಸೀಟು ಸಿಕ್ಕಿದ ಬಳಿಕ
ಯಾರಾದರೂ ಮಕ್ಕಳನ್ನು ಎತ್ತಿಕೊಂಡು ಹತ್ತಿದರೆ ಮಾನವೀಯ ದೃಷ್ಟಿಯಿಂದ ಸೀಟು ಬಿಟ್ಟು ಕೊಡಬೇಕು,
ತಮಗೆ ಸಿಕ್ಕಿದ ಮಕ್ಕಳ ಪಾಲಕರು, ಅಲ್ಲಿ ಕೂತ ಬಳಿಕ ಕೆಲವೊಮ್ಮೆ ಸೌಜನ್ಯವನ್ನೂ ಮರೆತು ತಾವು
ಇಳಿಯುವಾಗ ತಮ್ಮ ಸಂಬಂಧಿಕರನ್ನು ಅಲ್ಲಿ ಕೂರಿಸಿ, ಕನಿಷ್ಠ ಥ್ಯಾಂಕ್ಸೂ ಹೇಳದೆ ಕೊನೆವರೆಗೂ ನಾವು
ನಿಲ್ಲುವಂತೆ ಮಾಡುವ ಅನುಭವ ಕಹಿ ಎನಿಸಿದರೂ ಸತ್ಯ ಅಂದರೆ ನೀವೂ ಒಪ್ಪಪಹುದು. ಶಾಲಾ ಪೀಕ್
ಅವರಿನಲ್ಲಿ ಸೀಟು ಸಿಕ್ಕಿದರೆ ಬಸ್ಸು ಹತ್ತುವ ಮಕ್ಕಳೆಲ್ಲ ತಮ್ಮ ತಮ್ಮ ಬ್ಯಾಗುಗಳನ್ನು ತಂದು
ತಂದು ನಮ್ಮ ಮಡಿಲಿನಲ್ಲಿ ಹಾಕಿ, ಕೊನೆಗೆ ನಮ್ಮ ಬ್ಯಾಗು ಎಲ್ಲೆಂದು ಹುಡುಕುವ, ಮಕ್ಕಳಿಗಿಂತ
ಮೊದಲು ನಾವೇ ಬಸ್ಸಿನಿಂದ ಇಳಿಯುವವರಾದರೇ ಈ ಬ್ಯಾಗಿನ ಮಾಲೀಕರನ್ನು ಎಲ್ಲಿ ಹುಡುಕುವುದು ಎಂದು
ಟೆನ್ಶನ್ನು... “ಒಂತೇ ಅಂಚಿ ಕುಲ್ಲುಲೆ ಮಗ... ಯಾನ್ಲ ನಡುಟು ಕುಲ್ಲುವೇ...” ಅಂತ ಸೀಟಿನಲ್ಲಿ ಸ್ಥಳಾವಕಾಶ ಸೃಷ್ಟಿಸಿ ಸೊಂಟ ಊರಿದ ಬಳಿಕ
ನಮ್ಮನ್ನು ನೂಕಿ ಕೂರುವವರು, ಕೂತ ಬಳಿಕ ತಾವೇ ಪ್ರತಿಷ್ಠಾಪನೆಯಾಗಿ ನಮ್ಮನ್ನು ಇಕ್ಕಟ್ಟಿಗೆ
ಸಿಲುಕಿಸುವವರು, ಕುಡಿದು ಟೈಟಾಗಿ ಬಂದು ನಮ್ಮ ಹೆಗಲಿಗೆ ತಲೆ ಇಟ್ಟು ಆರಾಮದಿಂದ ನಿದ್ರೆ
ಮಾಡುವವರು, ದೊಡ್ಡದಾಗಿ ಮೊಬೈಲಿನಲ್ಲಿ ಹಾಡು ಹಾಕಿ ಇಡೀ ಬಸ್ಸಿಗೇ ಪುಕ್ಕಟೆ ಮನರಂಜನೆ ನೀಡುವವರು,
ಇಯರ್ ಪೋನ್ ಇದ್ದರೂ ಬಳಸದೆ ದೊಡ್ಡ ಸ್ವರದಲ್ಲಿ ಮೊಬೈಲಿನಲ್ಲಿ ಮಾತನಾಡುತ್ತಾ ತಮ್ಮ ಸಂಸಾರದ,
ವ್ಯವಹಾರದ ವಿಚಾರಗಳನ್ನು ಇಡೀ ಬಸ್ಸಿನ ಸಮುದಾಯಕ್ಕೆ ಹಂಚುವ ಉದಾರಿಗಳು...! ಹೀಗೆ ಎಷ್ಟೊಂದು ವಿಶೇಷವಾಗ ಜಗತ್ತು ಬಸ್ಸಿನ ಸೀಟಿನ ಸುತ್ತಮುತ್ತ
ಕಾಣಸಿಗುತ್ತವೆ ಅಲ್ವ?
ಒಂದು ರಶ್ಶಿನ ಪೀಕ್ ಅವರ್ ಧಾವಂತ, ಸುರಿಯುವ
ಧಾರಾಕಾರ ಮಳೆ, ತಕ್ಷಣಕ್ಕೆ ಮಡಿಚದೆ ಕೈಕೊಡುವ ಕೊಡೆ, ಕೈಯ್ಯಲ್ಲಿರುವ ಮಣ ಭಾರದ ಚೀಲ, ಕಿತ್ತು
ಜೋತಾಡುವ ಚಪಲಿ, ಚಂಡಿ ಪ್ಯಾಂಟು, ಬೆನ್ನಿನ ಸ್ಕೂಲ್ ಬ್ಯಾಗು, ಕಂಕುಳಲ್ಲಿರುವ ಪುಟ್ಟ ಮಗು,
ಮದುವೆಗೆ ಹೋಗಲೆಂದು ಸುತ್ತಿದ ರೇಶ್ಮೆ ಸೀರೆ, ನೀಟಾಗಿ ಬಾಚಿದ ತಲೆ ಕೂದಲು, ಬಸ್ಸು ಹತ್ತುವ
ವೇಳೆಗೇ ರಿಂಗಾಗುವ ಮೊಬೈಲು... ಇದರ ನಡುವೆ ಸೀಟು ಹುಡುಕುವ ಆತಂಕ.... ಹೀಗೆ ಒಂದು ವಿಚಿತ್ರವಾದ
ಸನ್ನಿವೇಶದಲ್ಲಿ, ಅರ್ಜೆಂಟಿನಲ್ಲಿ, ಆತಂಕದಲ್ಲಿ ಪ್ರತಿದಿನ ಬಸ್ ಹತ್ತಿ, ಸೀಟು ಹುಡುಕಿ, ಹತ್ತಿ
ಇಳಿಯುವ ಪ್ರಯಾಣ ಒಂದು ಹೊಸ ಬದುಕು... ಅಂದಂದಿನ ಮಟ್ಟಿಗೆ!
ನಾವು ಹೋಗುವಷ್ಟು ದಿನ ಮಾತ್ರ ಆ ಬಸ್ ನನ್ನದೆಂಬ
ಭಾವ, ಕೂರುವಷ್ಟು ಹೊತ್ತು ಮಾತ್ರ ಸೀಟಿನ ಮೇಲೆ ನಮ್ಮ ಅಧಿಕಾರ, ಮತ್ತೊಬ್ಬರು ಬರುವಷ್ಟು ಹೊತ್ತು
ಮಾತ್ರ ಅದು ನಮ್ಮ ಜಾಗ, ಮಳೆ ಸುರಿಯುವ ತನಕ ಮಾತ್ರ ಕಿಟಕಿಯಲ್ಲಿ ತೂರಿ ಬರುವ ಗಾಳಿ, ಪಕ್ಕದವರು
ಇಳಿದು ಹೋಗುವ ವರೆಗೆ ಮಾತ್ರ ಅವರೊಂದಿಗ ಪಟ್ಟಾಂಗ... ಬಸ್ ಪ್ರಯಾಣದ ಜೊತೆಗಿನ ಮರೆಯಲಾಗದ
ನೆನಪುಗಳು, ಅರ್ಜಂಟುಗಳು, ಅನುಭೂತಿಗಳು, ನಮ್ಮ ಸ್ಟಾಪು ಬಂದಾಗ, ನಮ್ಮ ಟೈಂ ಎಚ್ಚರಿಸಿದಾಗ ಇಳಿದು ಹೋಗಲೇಬೇಕು... ನಮ್ಮನ್ನು
ಕರೆ ತಂದ ಬಸ್ಸು ಕೂಡಾ ಅಷ್ಟೇ... ನಿರ್ಲಿಪ್ತವಾಗಿ ರೈಟ್ ಅಂತ ಹೋಗಿಯೇ ಬಿಡುತ್ತದೆ... ತಿರುಗಿ
ಸಹ ನೋಡುವುದಿಲ್ಲ!
-ಕೃಷ್ಣಮೋಹನ ತಲೆಂಗಳ (23.05.2022).
No comments:
Post a Comment