ಕೆಲಸಕ್ಕೆ ಬಾರದ ಚಿಂತನೆಯಿಂದ ಸಿಕ್ಕುವುದಾದರೂ ಏನು (ಎಂದೋ ಓದಿದ ಕಥೆಯ ಮೆಲುಕು)

ಒಂದು ಊರಿನಲ್ಲಿ ಒಬ್ಬ ಧನಿಕ ಸಾಹುಕಾರ ಇದ್ದನಂತೆ. ಅವನಿಗೆ ಸದಾ ಚಿಂತನೆಯಲ್ಲಿ ತೊಡಗಿರುವವರನ್ನು ಕಂಡರೆ ತುಂಬ ಇಷ್ಟವಿತ್ತಂತೆ. ಭಯಂಕರ ಚಿಂತಿಸುತ್ತಿರುವ ಚಿಂತಕರು ಅಪಾರ ಬುದ್ಧಿವಂತರು ಅಂತ ಅವನ ಭಾವನೆ ಆಗಿತ್ತಂತೆ. ಆ ಧನಿಕನ ಮನೆ ಕಾವಲು ಮಾಡಲು ಓರ್ವ ಕಾವಲುಗಾರನ ಅವಶ್ಯಕತೆ ಬಂತಂತೆ. ಹಾಗಾಗಿ ಅವನು ಸುಮಾರು ಮಂದಿಯನ್ನು ಇಂಟರ್ ವ್ಯೂ ಮಾಡಿದನಂತೆ. ಕಾವಲುಗಾರನ ಬುದ್ಧಿಶಕ್ತಿ, ಧೈರ್ಯ, ದೈಹಿಕ ಬಲ ಇವು ಯಾವುದನ್ನೂ ಯೋಚಿಸದ ಧನಿಕ ಸದಾ ಕಾಲ ಚಿಂತನೆಯಲ್ಲಿ ತೊಡಗಿರುವ ಓರ್ವ ವ್ಯಕ್ತಿಯನ್ನು ಕಾವಲುಗಾರನ ಹುದ್ದೆಗೆ ನೇಮಿಸಿದನಂತೆ.

ಈಜು ಬಾರದ ಪಂಡಿತನ ರೀತಿಯ ಚಿಂತಿನೆಯಲ್ಲಿ ತೊಡಗಿರುವುದು ಬಿಟ್ಟು ಇನ್ಯಾವುದೇ ಕಾರ್ಯಕ್ಕೂ ಪ್ರಯೋಜನವಿಲ್ಲದ ಆ ಮೈಗಳ್ಳ ಪ್ರಚಂಡ ಬುದ್ಧಿವಂತ ಎಂಬುದು ಧನಿಕನ ಭಾವನೆಯಾಗಿತ್ತು. ಅವನು ಮನೆ ಕಾವಲು ಮಾಡುವ ನೆಪದಲ್ಲಿ ಮೂರು ಹೊತ್ತು ಗಡದ್ದಾಗಿ ಊಟ ಮಾಡಿ ಚಿಂತನೆಯಲ್ಲಿ ತೊಡಗಿರುತ್ತಾ ಇದ್ದನಂತೆ. ಧನಿಕ ಆಗಾಗ ಅವನಲ್ಲಿ, ಈಗ ಏನು ಚಿಂತಿಸುತ್ತಾ ಇದ್ದೀಯಪ್ಪ?” ಎಂದು ಕೇಳಿದಾಗ ಆತ, ರಾಜ್ಯದ ಬಗ್ಗೆ, ದೇಶದ ಬಗ್ಗೆ, ಭವಿಷ್ಯದ ಬಗ್ಗೆ… ಅಂತೆಲ್ಲ ಉತ್ತರಗಳನ್ನು ಕೊಡುತ್ತಿದ್ದನಂತೆ. ಆತನ ಉತ್ತರಗಳನ್ನು ಕೇಳಿದ ಧನಿಕ, ಆಹಾ ಈತ ಅದೆಷ್ಟು ಬುದ್ಧಿವಂತ ಅಂತ ಹೆಮ್ಮೆಯಿಂದ ಬೀಗುತ್ತಿದ್ದನಂತೆ.

ಒಂದು ದಿನ ಮಧ್ಯರಾತ್ರಿ ಧನಿಕ ತುಂಬ ಸೆಕೆ ಅಂತ ತನ್ನ ಬೆಡ್ ರೂಮಿನಿಂದ ಹೊರಗೆ ಬಂದಾಗ, ಚಾವಡಿಯಲ್ಲಿ ಚಾಪೆಯಲ್ಲಿ ಎದ್ದು ಕುಳಿತ ಕಾವಲುಗಾರ ಏನನ್ನೋ ಯೋಚಿಸುತ್ತಿರುವುದನ್ನು ಕಂಡು... ಅಪ್ಪಾ ಇಷ್ಟು ಹೊತ್ತಿನಲ್ಲಿ ಅದೇನು ಯೋಚಿಸುತ್ತಿರುವೇ?” ಅಂತ ಕೇಳಿದನಂತೆ. ಅದಕ್ಕೆ ಕಾವಲುಗಾರ, ಸ್ವಾಮಿ ಜನರಿಗೆ ಮೈಮುರಿದು ಕೆಲಸ ಮಾಡಲು ಏನು ಧಾಡಿ, ಯಾಕೆ ಯಾರ್ಯಾರ ಮನೆಗೆ ಕನ್ನ ಹಾಕಿ ಕಳವು ಮಾಡುತ್ತಾರೆ?” ಅಂತ ಯೋಚಿಸುತ್ತಿದ್ದೆ ಎಂದನಂತೆ. ಅದಕ್ಕೆ ಖುಷಿಗೊಂಡ ಧನಿಕ, ಆಹಾ ಎಂತಹ ಭಯಂಕರ ಚಿಂತನೆ ಅಂತ ಖುಷಿಪಟ್ಟು ಒಳಗೆ ಹೋಗಿ ಮಲಗಿದನಂತೆ.

 

ಸ್ವಲ್ಪ ಹೊತ್ತು ಬಿಟ್ಟು ಪುನಃ ಹೊರಗೆ ಬಂದಾಗ, ಕಾವಲುಗಾರ ಪುನಃ ಚಾಪೆಯಲ್ಲಿ ಕುಳಿತು ಗಾಢವಾಗಿ ಚಿಂತಿಸುತ್ತಿರುವುದನ್ನು ಕಂಡು, ಧನಿಕ ಕೇಳಿದನಂತೆ, ಅಪ್ಪಾ, ಯಾಕೆ ಇನ್ನೂ ಮಲಗಿಲ್ಲ, ಈಗ ಏನು ಚಿಂತೆ?” ಅಂತ. ಅದಕ್ಕೆ, ಕಾವಲುಗಾರ, ಸ್ವಾಮೀ ಈ ಕಳ್ಳರು ಮಧ್ಯರಾತ್ರಿಯೇ ಯಾಕೆ ಕಳವು ಮಾಡುತ್ತಾರೆ?” ಅಂತ ಕಾರಣ ಹುಡುಕುತ್ತಿದ್ದೇನೆ ಅಂತ ಹೇಳಿದನಂತೆ. ಆಗ ಧನಿಕ, ಆಹಾ, ನಿದ್ರೆ ಬಿಟ್ಟು ಎಷ್ಟು ಗಾಢವಾಗಿ ಯೋಚಿಸುತ್ತಿದ್ದಾನೆ, ಇವನಿಗೆ ಭಯಂಕರ ಪ್ರಶಸ್ತಿ ಕೊಟ್ಟು ಸನ್ಮಾನಿಸಬೇಕು ಅಂತ ಮನಸ್ಸಿನಲ್ಲೇ ನಿರ್ಧರಿಸಿದನಂತೆ.

ಬೆಳಗ್ಗೆ ಕೋಳಿ ಕೂಗಿ ಎಚ್ಚರವಾಗಿ ಧನಿಕ ಹೊರಗೆ ಬಂದಾಗ, ಚಾವಡಿಯಲ್ಲಿ ಕಾವಲುಗಾರ ಅದೇ ರೀತಿ ಗಲ್ಲಕ್ಕೆ ಕೈಕೊಟ್ಟು ಚಿಂತಿಸುತ್ತಾ ಕುಳಿತಿದ್ದನಂತೆ. ಧನಿಕ ಕೇಳಿದನಂತೆ, ಪುಣ್ಯಾತ್ಮ, ನೀನು ಮಧ್ಯರಾತ್ರಿಯಿಂದ ನಿದ್ರಿಸಿಯೇ ಇಲ್ವ. ಈಗಲೂ ನಿನ್ನ ಚಿಂತನೆಗಳಿಗೆ ಉತ್ತರ ಸಿಕ್ಕಿಲ್ವ?” ಅಂತ. ಅದಕ್ಕೆ ಕಾವಲುಗಾರ ಶಾಂತವಾಗಿ ಉತ್ತರಿಸಿದನಂತೆ, ಸ್ವಾಮೀ ನಿನ್ನೆ ಮಧ್ಯರಾತ್ರಿ ನಿಮ್ಮ ಮನೆಗೆ ಕನ್ನ ಕೊರೆದು ಒಳಗೆ ಬಂದ ಕಳ್ಳರು ಪೂರ್ತಿ ನಗ, ನಾಣ್ಯ ಗಂಟು ಮೂಟೆ ಕಟ್ಟಿಕೊಂಡು ಹೋದರಲ್ಲ. ಅಷ್ಟು ದುಡ್ಡನ್ನು ಅವರು ಹೇಗೆ ತಾನೇ ಖರ್ಚು ಮಾಡಿಯಾರು ಅಂತ ಯೋಚಿಸುತ್ತಾ ಇದ್ದೇನೆಅಂತ!!!!!!!.

ಹೌಹಾರಿದ ಧನಿಕ ತಿಜೋರಿ ತೆರೆದು ನೋಡುತ್ತಾನಂತೆ, ಇಡೀ ತಿಜೋರಿ ಖಾಲಿಯಾಗಿದ್ದು, ಪಕ್ಕದ ಗೋಡೆಯಲ್ಲಿ ಕನ್ನ ಅಣಕಿಸುತ್ತಿತ್ತು....!!!!

ಇಲ್ಲಿಗೆ ಕಥೆ ಮುಗಿಯಿತು.

ನೀತಿ: ಅವರವರ ಭಾವಕ್ಕೆ, ಅವರವರ ಭಕುತಿಗೆ

(ನಾನು ಚಿಕ್ಕವನಿದ್ದಾಗ ಚಂದಮಾಮದಲ್ಲಿ ಓದಿದ ಕತೆ, ನೆನಪಿದ್ದ ಹಾಗೆ ಮತ್ತೆ ಬರೆದಿದ್ದೇನೆ, ವ್ಯತ್ಯಾಸಗಳಿರಬಹುದು)

-ಕೃಷ್ಣಮೋಹನ ತಲೆಂಗಳ (03.09.2022)

No comments: