ಚದುರಿದ ಚಿತ್ರಗಳು ಮತ್ತು ಚಿಗುರುವ ಪ್ರಕೃತಿಯ ಸಾಂತ್ವನ!

 






ಬದುಕಿನಲ್ಲಿ ಕೆಲವೊಂದು ಸಂಭವಗಳಿಗೆ, ಬೆಳವಣಿಗೆಗಳ ಗುಚ್ಛಗಳಿಗೆ ಪರಸ್ಪರ ತಾರ್ಕಿಕ ಕೊಂಡಿಗಳೇ ಸಿಗುವುದಿಲ್ಲ. ಸವಾಲು, ಸಮಸ್ಯೆ, ಸಿಕ್ಕುಗಟ್ಟಿದ ಪರಿಸ್ಥಿತಿಗಳು ಬೇರೆ ಬೇರೆಯಾಗಿ ಚದುರಿ ಹೋದ ಚಿತ್ರದ ತುಂಡುಗಳ ಹಾಗೆ... ಯಾರೋ ಬರೆದಿಟ್ಟ ಚಿತ್ರಕತೆಯ ಹಾಗೆ, ಇನ್ಯಾವುದೋ ಸಸ್ಪೆನ್ಸ್ ಕಾದಂಬರಿಯ ದೃಶ್ಯದ ಹಾಗೆ ಪರಸ್ಪರ ಕೊಂಡಿ ಕಳಚಿದ ದೃಶ್ಯಗಳ ಸರಮಾಲೆಯಂತೆ. ಪ್ರತಿಯೊಬ್ಬರ ಬದುಕಿನಲ್ಲೂ ಅನುಭವಕ್ಕೆ ಬರುವಂಥಹ ಸಂಗತಿಗಳಿವು. ಕೆಲವೊಂದು ಕಾಕತಾಳೀಯವಿರಬಹುದು, ಇನ್ನು ಕೆಲವು ಅತಾರ್ಕಿಕ ಚಿಂತನೆಗಳಿಂದ ಇರಬಹುದು, ಮತ್ತೊಂದಿಷ್ಟು ಚಿಂತೆಯ ಪರಿಣಾಮ ಹಳಿ ತಪ್ಪಿದ ಮನಸ್ಸು ಕೈಕೊಟ್ಟ ಕಾರಣಕ್ಕೂ ಇರಬಹುದು... ಬಹಳಷ್ಟು ಸಲ ಬೇರೆ ಬೇರೆ ಸಮಸ್ಯೆಗಳು ಹರಡಿಟ್ಟು ಅಸಹಾಕವಾಗಿ ಹೋದ ಆಟಿಕೆಗಳಂತೆ, ಜೋಡಿಸಲು ಹೊರಟರೆ ಅಚ್ಚುಕಟ್ಟಾಗಿ ಕೂರದೆ ಕಂಗೆಡಿಸುತ್ತವ... ಕಾರಣವೇ ಇಲ್ಲದೆ!

ಒತ್ತಡ, ಯಾಂತ್ರಿಕತೆ ಮತ್ತು ಪರಿಹಾರ ಕಾಣದ ಜಿಜ್ಞಾಸೆಗಳಿಗೆಲ್ಲ ಪ್ರಕೃತಿ ತುಂಬ ಚಂದದ ಉತ್ತರ, ಸಾಂತ್ವನ ಕೊಡಬಲ್ಲುದು ಅಂತ ನಿಮಗೆ ಅನ್ನಿಸುವುದಿಲ್ವ? ಮನಸ್ಸಿನ ಚಿತ್ರಪಟದಲ್ಲಿ ಚದುರಿ ಚದುರಿ ಕಾಡುವ ಒತ್ತಡಗಳನ್ನು ಒಟ್ಟು ಸೇರಿಸಿ ಪರಿಹಾರವಲ್ಲದಿದ್ದರೂ ತುಸು ನಿರಾಳತೆ ಕಂಡುಕೊಳ್ಳಲು ತಂಪು ತಂಪು ಪ್ರಕೃತಿ ಸಾಥ್ ನೀಡುತ್ತದೆ ಅಂತ ಯಾವತ್ತಾದರೂ ಕಾಡಿದ್ದು ಇದೆಯಾ?

ಒಂದು ನಿರ್ಜನ ರಸ್ತೆ, ಎರಡೂ ಪಕ್ಕ ಮರಗಳ ಸಾಲು, ಮೇಲೆ ಛಾವಣಿಯೋಪಾದಿಯಲ್ಲಿ ಹೆಣೆದ ರೆಂಬೆಗಳು, ಮರದ ಬುಡದ ತುಂಬ ಪಚ್ಚೆ ಪಚ್ಚೆ ಹುಲ್ಲುಗಾವಲು... ಸೋನೆ ಮಳೆ, ಗಾಢವಾಗಿ ಕವಿದ ಮಂಜು, ಎಷ್ಟು ಹೊತ್ತಾಯಿತು ಎಂದು ಕಂಡುಕೊಳ್ಳಲು ವಿಫಲವಾಗುವಷ್ಟರ ಮಟ್ಟಿಗಿನ ಮಬ್ಬು ಮಬ್ಬಾದ ಬೆಳಕು, ಕಾಣೆಯಾದ ಸೂರ್ಯ... ಬೀಸಿ ಬರುವ ತಂಪು ಗಾಳಿಗೆ ಸುಂಯ್ಯನೆ ಹಾದು ಹೋಗುವ ಮಂಜಿನ ಪದರದ ಸೋಂಕು... ನಡುವೆ ಒಂದು ಲಾಗು ಡ್ರೈವ್ ಅಥವಾ ಬೈಕಿನಲ್ಲಿ ಒಂದು ಸವಾರಿ... ಅದೂ ಅಲ್ಲದಿದ್ದರೆ ಜರ್ಕಿನ್ ಹಾಕಿಕೊಂಡು, ಛತ್ರಿ ಹಿಡ್ಕೊಂಡು ಉದ್ದಕ್ಕೆ ಒಂಟಿಯಾಗಿ ನಡೆದುಕೊಂಡು ಹೋಗುವುದು... ಒಂದು ಮನೆಯಿಲ್ಲ, ಅಂಗಡಿಯಿಲ್ಲ, ನೆಟ್ವರ್ಕ್ ಇಲ್ಲ, ಅಸಲಿಗೆ ಅಲ್ಲಿ ನಾಗರಿಕತೆ ಇದ್ದರೆ ಅದಕ್ಕೆ ಕೊಂಡಿ ಹೆಬ್ಬಾವಿನಂತೆ ಮಲಗಿದ ಡಾಂಬರು ರಸ್ತೆ ಮಾತ್ರ... ಅಂತಹ ಜಾಗದಲ್ಲಿ ಒಂದಷ್ಟು ಹೊತ್ತು ನಾಟ್ ರೀಚೇಬಲ್ ಆಗಿ ಬಂದರೆ ನಿಮ್ಮ ಚದುರಿದ ಹೋದ ಚಿಂತನೆಗಳ ಗುಂಗಿನಿಂದ ತುಸು ಹೊತ್ತು ಆಚೆ ಹೋಗಿ ಬಂದು ಸ್ವಲ್ಪ ರೀಚಾರ್ಜ್ ಆಗಿಬಿಡಬಹುದು ಅಂತ ಅನ್ನಿಸುವುದಿಲ್ವ?

ಈ ಲೈಕು, ಕಮೆಂಟು, ಶೇರು, ವ್ಯೂಸು, ಸ್ಟೇಟಸ್ಸು, ವಾಲು, ಸಬ್ ಸ್ಕ್ರೈಬು, ಟಾರ್ಗೆಟ್ಟು, ವೈರಲ್ಲು, ಹ್ಯಾಶ್ ಟ್ಯಾಗು... ಇವುಗಳ ಸದ್ದಿನಿಂದ ಒಂದಷ್ಟು ಗಂಟೆಗಳ ಕಾಲವಾದರೂ ದೂರ ಇದ್ದರೆ, ಅಂಥದ್ದೊಂದು ಭ್ರಮೆಯ ಗುಂಗಿನಿಂದ ಆಚೆ ಹೋಗಿ ಪ್ರಕೃತಿಗೆ ಹತ್ತಿರವಾದಷ್ಟೂ ಒಂದಿಷ್ಟು ಸಹಜತೆ, ಒಂದಿಷ್ಟು ನೀರವ ಮಾಧುರ್ಯ, ಒಂದಿಷ್ಟು ಪ್ರಶಾಂತ, ಸೌಮ್ಯ ಪರಿಸರದ ಭಾಗವಾಗಿರಲು, ಸೆಲ್ಫೀ, ರೀಲು, ಕ್ಯಾಂಡಿಡ್ಡುಗಳ ತಂಟೆಯಿಲ್ಲದೆ ಇದ್ದದ್ದು ಇದ್ದ ಹಾಗೆ ಕಂಡುಕೊಂಡು ಆ ಅನುಭೂತಿಯ ಸುಖ ಆಸ್ವಾದಿಸಲು ಸಾಧ್ಯವಾಗುತ್ತದೆ...

ಕೋಲು ಕೊಟ್ಟು ಹೊಡೆಸಿಕೊಂಡ ಹಾಗಿನ ಬದುಕು. ನಾವೇ ಸೃಷ್ಟಿಸುವ ವೈರಲ್ಲು, ನಾವೇ ಸೃಷ್ಟಿಸಿಕೊಳ್ಳುವ ಲೈಕು, ಶೇರು, ಕಮೆಂಟುಗಳ, ಸಬ್ ಸ್ಕ್ರೈಬು, ವ್ಯೂಸ್ ಅವರ್ ನಂತಹ ಲೆಕ್ಕಾಚಾರದ ಸಿದ್ಧಮಾದರಿಯ ಅಂಕಿ ಅಂಶಗಳನ್ನೇ ಸಾಧನೆ ಎನ್ನುವ ಜಗತ್ತಿನ ಆಚೆಗೆ... ಇದ್ದದ್ದನ್ನು ಇದ್ದ ಹಾಗೇ ಲೈಕುಗಳ ಹಂಗಿಲ್ಲದೆ ತೋರಿಸುವ ಪ್ರಕೃತಿ ಒಂದಿದೆ, ಅದು ನಾವಿದ್ದಷ್ಟೂ ಹೊತ್ತು ತುಸು ಸಾಂತ್ವನ ನೀಡುತ್ತದೆ ಎಂಬ ಭಾವ ಅತ್ತ ಕಡೆ ಹೋಗಿ ಬಂದರೆ ನಮಗೆ ಅನ್ನಿಸದೇ ಇರದು...

ಪ್ರಕೃತಿ ಒಂದು ಅನುಭೂತಿ. ಅದು ವರ್ಣನೆಗೆ ನಿಲುಕದ್ದು, ಅದು ಹೋಗಿ, ನೋಡಿ, ಕಂಡು ಬರುವಂಥದ್ದು. ತನ್ನಷ್ಟಕ್ಕೇ ತಾನಿರುವುದು ಅದು ಯಾವುದೇ ಇರಲಿ.... ಒಟ್ಟಿನಲ್ಲಿ ಸಹಜವಾಗಿರುವುದೇ ಚಂದ ಅಲ್ವ?

-ಕೃಷ್ಣಮೋಹನ ತಲೆಂಗಳ (13.09.2022)

No comments: