ಇಂತಹ ವರ್ತನೆಗಳು ನಿಮಗೆ ಅಸಹಜ ಅನ್ನಿಸುವುದಿಲ್ವ? ಇವನ್ನೆಲ್ಲ ನೀವು ನಾಗರಿಕತೆ ಅಂತ ಕರೆಯುತ್ತೀರ?!
ನಮ್ಮನ್ನು ನಾವು ನಾಗರಿಕರು ಅಂತ ಕರೆದುಕೊಳ್ಳುತ್ತೇವೆ. “ಕಾಡಿನ ಮೃಗಗಳು ನಾಡಿಗೆ ಬಂದು ದಾಂದಲೆ ಮಾಡಿದವು, ಅನಾಗರಿಕ ವರ್ತನೆ ತೋರಿದವು, ದುಷ್ಟ ಕೃತ್ಯದಲ್ಲಿ ತೊಡಗಿದವು ಅಂತ ಬಣ್ಣಿಸ್ತೇವೆ. ಆದರೆ, ನಿತ್ಯ ಬದುಕಿನಲ್ಲಿ ಸುಶಿಕ್ಷಿತರು, ತಿಳಿವಳಿಕೆ ಉಳ್ಳವರು, ಸಮಾಜದಲ್ಲಿ ಉನ್ನತ ಸ್ಥಿತಿಗತಿ (ಸ್ಟೇಟಸ್) ಹೊಂದಿದವರು ಅನ್ನಿಸಿಕೊಂಡ ನಮ್ಮೊಳಗೆ ಕೆಲವಷ್ಟು ಅನಾಗರಿಕ ವರ್ತನೆ ಹುದುಗಿರುವುದು ನಮಗೆ ತಿಳಿದಿರುವುದೇ ಇಲ್ಲ. ಇವೆಲ್ಲ ಭಯಂಕರ ದುಷ್ಟ ಕೃತ್ಯಗಳೇನಲ್ಲ, ಅಪರಾಧಿ ಕೆಲಸಗಳೂ ಅಲ್ಲ, ಸಂವಿಧಾನದಲ್ಲೋ, ಕಾನೂನು ಪುಸ್ತಕದಲ್ಲೋ ಇಂತಹ ನಡವಳಿಕೆ ನಿಷೇಧಿತ ಎಂದೋ, ಶಿಕ್ಷಾರ್ಹ ಎಂದೋ ಸಹಿತ ಉಲ್ಲೇಖಿಸಲಾಗಿಲ್ಲ. ತೀರಾ ಪುಟ್ಟ ಪುಟ್ಟ “ಅನಾಗರಿಕ ವರ್ತನೆ”ಗಳಿವು.
ಇಂತಹ ಪುಟ್ಟ ಪುಟ್ಟ ಅಸಹಜ ಸಂಗತಿಗಳು ಅಕ್ಕ
ಪಕ್ಕದವರನ್ನ, ಸುತ್ತಮುತ್ತಲಿನವರನ್ನು ಹಾಗೂ ಇಂತಹ ವರ್ತನೆ ತೋರುವವರ ಸಂಪರ್ಕಕ್ಕೆ ಬಂದವರನ್ನು
ಎಷ್ಟು ಬಾಧಿಸುತ್ತದೆ ಎಂಬ ಕಲ್ಪನೆಯೇ ಬಹುತೇಕ ಸಂದರ್ಭ ನಮಗೆ ಅಂದಾಜಾಗುವುದಿಲ್ಲ. ಒಂದು ವೇಳ
ಅಂದಾಜಾದರೂ ನಾವದನ್ನು ಗಂಭೀರವಾಗಿ ಪ್ರಶ್ನಿಸುವುದಿಲ್ಲ. ಒಂದು ವೇಳೆ ತಪ್ಪಿ ಪ್ರಶ್ನಿಸಿದರೂ
ಅದಕ್ಕೆ ಗಂಭೀರವಾದ ಸಮಾಧಾನವೋ, ಪ್ರತಿಕ್ರಿಯೆಯೋ ಸಿಕ್ಕುವುದಿಲ್ಲ.
“ಇವನೊಬ್ಬನೇ ಸಭ್ಯನೇ? ಇವನ ನಿರೀಕ್ಷೆಗಳು ಭಯಂಕರ ಆಯ್ತು, ನೀನು ಒಬ್ಬನೇ ಕಾಡಿಗೆ
ಹೋಗಿ ಬದುಕಲು ಕಲಿ” ಎಂಬಿತ್ಯಾದಿ ಪ್ರತಿಕ್ರಿಯೆಗಳು ಸಿಕ್ಕಿದರೂ ಸಿಕ್ಕೀತು... ನನಗೆ ಅಸಹಜ
ಅಂತ ಕಾಣಿಸಿದ ಕೆಲವು ಸಂಗತಿಗಳನ್ನು ನಾನು ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ. ಕೆಲವು ನನ್ನ
ವೈಯಕ್ತಿಕ ದೃಷ್ಟಿಕೋನದ ದೋಷ ಇದ್ದರೂ ಇದ್ದೀತು. ಇವೇ ಸರಿ, ಇವೇ ತಪ್ಪು ಅನ್ನುವುದು ನನ್ನ
ವಾದವಲ್ಲ. ಇವು ಸರಿ ಅನ್ನಿಸಿದರೆ ತಿಳಿಸಿ, ತಪ್ಪು ಅನ್ನಿಸಿದರೂ ಖಂಡಿತಾ ತಿಳಿಸಿ, ಇಂತಹ ವಿಚಾರ
ನಿಮ್ಮ ಗಮನಿಸುವಿಕೆಯಲ್ಲಿದ್ದರೆ ನೀವು ಈ ಪಟ್ಟಿಗೆ ಸೇರಿಸಿ.
1) ರಸ್ತೆಯಲ್ಲಿ ಟ್ರಾಫಿಕ್ ಜಾಂ ಇದೆ ಅಂತ ತಿಳಿದರೂ,
ಸಿಗ್ನಲ್ಲಿನಲ್ಲಿ ಕೆಂಪು ದೀಪ ಉರಿಯುತ್ತಿದ್ದರೂ, ಹಿಂದಿನ ವಾಹನದವರು ಸಿಕ್ಕಾಪಟ್ಟೆ ಕರ್ಕಶವಾಗಿ
ಹಾರನ್ ಬಾರಿಸುವುದು, ಬಾರಿಸುತ್ತಲೇ ಇರುವುದು.
2) ದೇವಸ್ಥಾನದಲ್ಲಿ ಗಂಧ ಪ್ರಸಾದ ಸ್ವೀಕರಿಸಿದ ಬಳಿಕ ಹಣೆಯಲ್ಲಿ
ಧರಿಸಿ ಉಳಿದ ಗಂಧವನ್ನು ಗೋಡೆಗೆ ಉಜ್ಜಿ ಕೈ ಶುಚಿಗೊಳಿಸುವುದು.
3) ಬಸ್ಸಿನಲ್ಲೋ, ಸಭೆ ಸಮಾರಂಭದಲ್ಲೋ ಅಕ್ಕಪಕ್ಕ ಯಾರಿದ್ದಾರೆ ಎಂಬ
ಪ್ರಜ್ಞೆ ಇಲ್ಲದೆ ಮೊಬೈಲಿನಲ್ಲಿ ದೊಡ್ಡ ಸ್ವರದಲ್ಲಿ ಸಂಭಾಷಣೆ ನಡೆಸುವುದು, ಅಥವಾ ಸ್ಪೀಕರ್ ಆನ್
ಇರಿಸಿ ಮಾತನಾಡುವುದು. ಯಾರದರೂ ಶ್ ಶ್ ಎಂದರೆ ಕೆಕ್ಕರಿಸಿ ನೋಡುವುದು.
4) ಬಸ್ಸಿನಲ್ಲಿ, ರೈಲಿನಲ್ಲಿ ತುಂಬ ಮಂದಿ ಪ್ರಯಾಣಿಕರಿದ್ದರೂ ಯಾರೋ
ಒಬ್ಬ ತನ್ನ ಮೊಬೈಲಿನಲ್ಲಿ ದೊಡ್ಡದಾಗಿ ತನಗಿಷ್ಟದ ಹಾಡನ್ನು ಉಚ್ಛಸ್ವರದಲ್ಲಿ ಪ್ಲೇ ಮಾಡಿ, ಇಹ
ಲೋಕದ ಪರಿವೆಯೇ ಇಲ್ಲದಂತೆ ವರ್ತಿಸುವುದು. ಅಥವಾ ಫೇಸ್ಬುಕ್ಕಿನ ರೀಲ್ಸ್ ಗಳನ್ನು, ವಿಡಿಯೋಗಳನ್ನು
ಯಾರ ಆತಂಕವೂ ಇಲ್ಲದೆ ದೊಡ್ಡ ಸ್ವರದಲ್ಲಿ ಪ್ಲೇ ಮಾಡುವುದು.
5) ಅರ್ಜೆಂಟಿಗೆ ಯಾವುದೋ ವಿಚಾರ ಕೇಳಲು ಅಂತ ಫೋನ್ ಕರೆ ಮಾಡಿ, ಪೂರ್ಣ
ವಿರಾಮವನ್ನೇ ನೀಡದೆ ಏನೇನೋ ಏನೇನೋ ಮಾತನಾಡಿ, ನಿಮಗೂ ಪೂರ್ಣ ವಿರಾಮ ಕೊಡಲು ಬಿಡದೆ ಅರ್ಧ ಗಂಟೆ
ತಲೆ ತಿನ್ನುವುದು, ಕೊನೇ....ಗೆ ನೀವು ಬಿಝಿ ಇದ್ರೇನೋ ಅಂತ ಸಹ ಸೌಜನ್ಯಕ್ಕೂ ಹೇಳದೆ ತನ್ನ
ಸಮಯವಾದ ತಕ್ಷಣ ಫೋನ್ ಇಡುವುದು.
6) ಯಾರೋ ಒಳ್ಳೆ ಉದ್ದೇಶಕ್ಕೆ ರಚಿಸಿದ ವಾಟ್ಸಪ್ ಗ್ರೂಪನಲ್ಲಿ
ಸೇರಿಕೊಂಡು ಗುಂಪಿಗೆ ಸಂಬಂಧಿಸಿದ ಯಾವುದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡದೆ, ಪ್ರತಿಕ್ರಿಯೆ
ನೀಡಬಾರದಲ್ಲೆಲ್ಲ ನೀಡುತ್ತಾ, ಜಗತ್ತಿನ ಎಲ್ಲ ವಾಟ್ಸಪ್ ಗ್ರೂಪುಗಳು ತನ್ನ ಪ್ರಚಾರಕ್ಕೆ ಮಾತ್ರ
ಇರುವುದು ಎಂಬ ವಿಶಾಲ ಕಲ್ಪನೆಯನ್ನು ಅನ್ವಯಿಸಿಕೊಂಡು, ತನ್ನ ವೈಯಕ್ತಿಕ ಫೋಟೋಗಳು, ತನ್ನ
ಕವನಗಳು, ತನಗೆ ಪ್ರಶಸ್ತಿ ಬಂದ ವಿಚಾರಗಳನ್ನು ಮಾತ್ರ ಆಗಿಂದಾಗ್ಗೆ ಪೋಸ್ಟ್ ಮಾಡುತ್ತಾ ಇರುವುದು.
7) ಸಣ್ಣ ಪುಟ್ಟ ಹೊಟೇಲ್ ಗಳಲ್ಲಿ ಊಟದ ಟೇಬಲ್ ಪಕ್ಕವೇ ಕೈತೊಳೆಯುವ
ಬೇಸಿನ್ ಇರುತ್ತದೆ. ಅಲ್ಲಿ ಕೈತೊಳೆಯುವಾಗ ವಿಕಾರವಾಗಿ ಕ್ಯಾಕರಿಸಿ ಉಗಿಯುವುದು, ಸಿಂಬಳ ತೆಗೆದು
ಹಾಕುವುದು ಮತ್ತು ಸಹಜವಾಗಿ ಬರುವ ತೇಗನ್ನು ವಿಕಾರವಾಗಿ ತೇಗಿ ಹೊಟ್ಟೆ ನೀವುತ್ತಾ ತೆರಳುವುದು. ಅಲ್ಲೇ
ಪಕ್ಕದ ಟೇಬಲ್ಲಿನಲ್ಲಿ ಇನ್ನೂ ಊಟ ಮುಗಿಸದೆ ಇರುವ ವ್ಯಕ್ತಿಯ ಬಗ್ಗೆ ಕಿಂಚಿತ್ತೂ ದಯೆ ತೋರದೆ
ತನ್ನ ದಾರಿ ಹಿಡಿಯುವುದು.
8) ಯಕ್ಷಗಾನ ಬಯಲಾಟದಲ್ಲಿ (ಅಥವಾ ಇನ್ಯಾವುದೇ ಸಾರ್ವಜನಿಕ
ಸ್ಥಳದಲ್ಲಿ) ಕಿಕ್ಕಿರಿದ ಸಭೆ ಮಧ್ಯೆ ಕುಳಿತುಕೊಂಡು ಬೀಡಿಯನ್ನೋ, ಸಿಗರೇಟನ್ನೋ ಹಚ್ಚಿ
ಪುಂಖಾನುಪುಂಖವಾಗಿ ಸೇದುತ್ತಾ ಹೊಗೆಯನ್ನು ನಿರ್ದಾಕ್ಷಿಣ್ಯವಾಗಿ ಅಕ್ಕಪಕ್ಕದವರ ಮುಖದ ಮೇಲೆ
ಬಿಡುವುದು.
9) ನಾನಾ ಕಾರಣಗಳಿಂದ ವೈಯಕ್ತಿಕ ಸಮಸ್ಯೆಗಳಲ್ಲಿ ಸಿಲುಕಿದವರು ನಮ್ಮ
ನಡುವೆ ಇರ್ತಾರೆ, ಅಥವಾ ನಾವೇ ಅಂತಹ ಪಟ್ಟಿಯಲ್ಲಿ ಇರಬಹುದು. ಇಂಥವರು ಸಿಕ್ಕಿದಾಗ
ಅವರಿಗಾಗಬಹುದಾದ ಮುಜುಗರ, ಸಂಧಿಗ್ಧತೆಗಳನ್ನು ಲೆಕ್ಕಿಸದೆ ಮದುವೆ ಆಗದವರಲ್ಲಿ “ನಿಮಗೆ ಎಲ್ಲಿಂದ ಮದುವೆ ಆದದ್ದು?” ಎಂದೂ, ಮಕ್ಕಳಾಗದವರಲ್ಲಿ “ನಿಮಗೆಷ್ಟು ಮಕ್ಕಳು?” ಎಂದೂ, ಒಂದೇ ಮಗು ಇರುವವರಲ್ಲಿ “ಎರಡನೆಯದ್ದು ಯಾವಾಗ?” ಎಂದೂ ಹತ್ತಾರು ಮಂದಿಯ ಎದುರು ನಿರ್ದಾಕ್ಷಿಣ್ಯವಾಗಿ
ಕೇಳುವುದು.
10) ಕೇಳಬಾರದ ಸ್ಥಳದಲ್ಲಿ, ಕೇಳಬಾರದ ವ್ಯಕ್ತಿಯಲ್ಲಿ ಕೇಳಬಾರದ
ವ್ಯಕ್ತಿ “ನಿಮಗೆಷ್ಟು ಸಂಬಳ?” ಅಂತ ನೇರವಾಗಿ ಕೇಳುವುದು. ತನ್ನ ವಿಚಾರಕ್ಕೆ ಬಂದಾಗ
ಮಾತ್ರ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ, ಹಾರಿಕೆಯ ಉತ್ತರ ನೀಡುತ್ತಾ ಹೋಗುವುದು.
11) ಜಾಲತಾಣದಲ್ಲಿ ಯಾರೋ ಬರಹಗಾರ ಬರೆದ ಸಾಲುಗಳನ್ನು ತಾನು ತನ್ನ
ಫೇಸ್ಬುಕ್ಕು ಗೋಡೆಯಲ್ಲೋ, ವಾಟ್ಸಪ್ ಸ್ಟೇಟಸ್ಸಿನಲ್ಲೋ ಆಕಸ್ಮಿಕ ಎಂಬ ಹಾಗೆ “ಅವರ ಹೆಸರು ಕ್ರಾಪ್ ಮಾಡಿ” ತನ್ನದೇ ಎಂಬ ಹಾಗೆ ಶೇರ್ ಮಾಡುವುದು, ಅಪ್ಪಿ ತಪ್ಪಿ
ಯಾರಾದರೂ (ಬಡಪಾಯಿ ಮೂಲ ಬರಹಗಾರ) ತಪ್ಪಿ ಪ್ರಶ್ನಿಸಿದರೆ “ಆಯ್ತು ಮಾರಾಯ್ರೇ ಯಾರಿಗೆ ಬೇಕು ನಿಮ್ಮ ಸ್ಟೇಟಸ್ಸು,
ಈಗಲೇ ತೆಗೀತೇನೆ ಆಯ್ತ, ನಿಮ್ಮದೇನು ದೊಡ್ಡಕುಂಬಳ ಕಾಯಿಯ?” ಅಂತ ಬೈದು ಡಿಲೀಟ್ ಮಾಡುವುದು, ತಪ್ಪಿ ಸಹ ತನ್ನ
ಕೃತ್ಯಕ್ಕೆ ಪಶ್ಚಾತ್ತಾಪ ಹೊಂದದೇ ಇರುವುದು.
12) ಫೇಸ್ ಬುಕ್ ಗೋಡೆಯಲ್ಲಿ, ವಾಟ್ಸಪ್ ಸ್ಟೇಟಸ್ಸಿನಲ್ಲಿ ಇಡೀ
ಜಗತ್ತಿಗೆ ಬೋಧಿಸುವ ರೀತಿಯಲ್ಲಿ ಮಹಾತ್ಮರ ಹಿತವಚನಗಳನ್ನು, ಸೂಕ್ತಿಗಳನ್ನು ಬೆಳಗ್ಗೆದ್ದ ಕೂಡಲೇ
ಶೇರ್ ಮಾಡುವುದು. ಫೇಸ್ಬುಕ್ಕಿನಲ್ಲಿ ಯಾವುದಾದರೂ ವಿಚಾರದಲ್ಲಿ ಅವಹೇಳನಕಾರಿಯಾದ ಚರ್ಚೆ ನಡೆದರೆ
ಹಿಗ್ಗಾಮುಗ್ಗಾ ಝಾಡಿಸಿ ಬರೆಯುವುದು. ಆದರೆ ಜಾಲತಾಣದ ಗಂಭೀರ ಗ್ರೂಪಿನಲ್ಲೋ, ಒಂದು ಅಭಿವೃದ್ಧಿ ಪರ
ಸಭೆಯಲ್ಲೋ, ಹೋರಾಟದ ಅಧಿವೇಶನದಲ್ಲೋ ಹತ್ತಾರು ಮಂದಿ ಒಟ್ಟು ಸೇರಿದಾಗ ಯಾವ ಅಭಿಪ್ರಾಯವನ್ನೂ
ನೀಡದೆ, ಯಾವ ಅನಿಸಿಕೆಯನ್ನೂ ವ್ಯಕ್ತಪಡಿಸದೆ, ಸಲಹೆಗಳನ್ನು ನೀಡದೆ ಯಾವುದೇ ಅಹಿತಕರ,ಅಸಹಜ
ವರ್ತನೆಗಳನ್ನು ಖಂಡಿಸದೆ, ಕೇವಲ ತನ್ನ ಸ್ಟೇಟಸ್ ಮೆಸೇಜುಗಳಿಂದ ಇಡೀ ಜಗತ್ತೇ ಬದಲಾಗುತ್ತದೆ ಎಂಬ
ವಿಚಿತ್ರ ಭ್ರಮೆಯಲ್ಲಿ ದಿನದೂಡುವುದು.
ಇವಿಷ್ಟು
ಸ್ಯಾಂಪಲ್ಲುಗಳು ಅಷ್ಟೇ... ಇಂತಹ ಅವೆಷ್ಟೋ ಸಣ್ಣ ಸಣ್ಣ... ಅತ್ಯಂತ ಕ್ಷುಲ್ಲಕ ಎನ್ನಿಸುವ
ವರ್ತನೆಗಳು ನಮ್ಮಹಾಗೂ ಪ್ರತಿಯೊಬ್ಬರ ಕಡೆಯಿಂದಲೂ ಆಗುತ್ತಲೇ ಇರುತ್ತವೆ. ಅದರ ಪರಿಣಾಮಗಳ ಬಗ್ಗೆ,
ಅದರಿಂದ ಇತರರಿಗೆ ಆಗುವ ಉಪದ್ರಗಳ ಬಗ್ಗೆ ನಾವು ಯೋಚಿಸುವುದೂ ಕಮ್ಮಿ, ಪ್ರಶ್ನಿಸುವುದೂ ಕಮ್ಮಿ...
ಆದರೂ ನಮಗೆ ಭಯಂಕರ ಹೆಮ್ಮೆ, ನಾವು ತುಂಬ ನಾಗರಿಕರು, ಬುದ್ಧಿವಂತರು ಹಾಗೂ ಎಲ್ಲರಿಗಿಂತ ಹೆಚ್ಚು
ಸಮಕಾಲೀನರು ಎಂಬ ಹಾಗೆ! ನೀವೇನು ಹೇಳ್ತೀರಿ?
-ಕೃಷ್ಣಮೋಹನ ತಲೆಂಗಳ (03.12.2022).
No comments:
Post a Comment