ಈ ಸಾವು ನ್ಯಾಯವೇ? ಅಷ್ಟಕ್ಕೂ ಪಾಪ-ಪುಣ್ಯ ನೋಡಿಯೇ ಸಾವು ಬರ್ತದ?!
ಸತ್ತ ಬಳಿಕ ನಾವು ಸತ್ತವರ ಕುರಿತು ಸಂತಾಪಗಳನ್ನು ಸೂಚಿಸಬಹುದು... ನಾಲ್ಕುಸಾಂತ್ವನದ ಮಾತುಗಳನ್ನು ಆಡಬಹುದು. ಆದರೆ ಗತಿಸಿದವರ ಪ್ರಾಣ ಮತ್ತೊಮ್ಮೆ ಬರುವುದಕ್ಕೆ ಸಾಧ್ಯವಿಲ್ಲ ಎಂಬುದು ಅತ್ಯಂತ ನಿರಾಕರಿಸಲಾಗದ ಸತ್ಯ. ಇದು ಅತಿ ಬುದ್ಧಿವಂತ ಎನ್ನಿಸಿಕೊಂಡ ಮನುಷ್ಯರ ಪಾಲಿನ ದೌರ್ಬಲ್ಯವೂ ಹೌದು.
ನಿನ್ನೆ ಸಂಜೆ ನಮ್ಮೂರಿನಲ್ಲೊಂದು ಅಪಘಾತ ಸಂಭವಿಸಿತು. 14 ವರ್ಷದ ಬಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ. ಆತನನ್ನು ಸಾವು ಹೇಗೆ ಕಬಳಿಸಿತು ಎಂಬುದು ತುಂಬ ಅಚ್ಚರಿ ಮೂಡಿಸುತ್ತದೆ.
ಘಟನೆ ನಡೆದದ್ದು ಹೀಗೆ: ಆತ ಮುಡಿಪು ಸರ್ಕಾರಿ ಪ.ಪೂ.ಕಾಲೇಜಿನ 8ನೇ ತರಗತಿ
ವಿದ್ಯಾರ್ಥಿ, ಹೆಸರು ಕಾರ್ತಿಕ್. ನಮ್ಮೂರಿನ ಹುಡುಗ, ಈ ವರ್ಷವಷ್ಟೇ ಹೈಸ್ಕೂಲಿಗೆ ಸೇರಿದ್ದ.
ಎಂದಿನಂತೆ ಸಂಜೆ ಶಾಲೆ ಬಿಟ್ಟಾಗ ಬಸ್ಸ್ ಹತ್ತಿ ಮನೆಗೆ ತೆರಳಲು (ಸುಮಾರು 3 ಕಿ.ಮೀ.ದೂರ)
ರಸ್ತೆಯತ್ತ ಬಂದಿದ್ದಾನೆ. ಆತ ಕನಿಷ್ಠ ರಸ್ತೆಯನ್ನು ದಾಟುವ ಅವಶ್ಯಕತೆಯೂ ಇರಲಿಲ್ಲ. ಆತ
ಶಾಲೆಯಿಂದ ಬಂದು ನಿಂತ ಬದಿಗೇ ಬಸ್ಸು ಆಗಮಿಸುತ್ತದೆ. ಆತನ ಪಕ್ಕ ಆಟೋವೊಂದು ನಿಂತಿತ್ತು. ಆತ
ಹೋಗಬೇಕಾದ ಬಸ್ ಬಂತು. ಇನ್ನು 15 ಸೆಕುಂಡು ಕಳೆದಿದ್ದರೆ, ಆತ ಬಸ್ ಏರಿ ಹೋಗಿ ಆಗ್ತಾ ಇತ್ತು.
ಇದರ ನಡುವೆ, ಅಪಘಾತ ಸಂಭವಿಸಿತು.
ಒಬ್ಬರು ವ್ಯಕ್ತಿಯ ಕಾರನ್ನು ಇನ್ನೊಬ್ರು ಟ್ರಯಲ್
ಡ್ರೈವಿಂಗ್ ಗೆ ಅಂತ ಪಡೆದುಕೊಂಡಿದ್ದರು. ಅವರು ಅದೇ ಹೊತ್ತಿಗೆ, ಅದೇ ರಸ್ತೆಯಲ್ಲಿ ತಮ್ಮ ಟ್ರಯಲ್
ಚಾಲನಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು. ಆ ಕಾರು ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದು, ಬಾಲಕನ
ಹಿಂದಿದ್ದ ಆಟೋಗೆ ಡಿಕ್ಕಿಯಾಯಿತು. ಆಟೋ ಆಯಾಚಿತವಾಗಿ ಬಾಲನಕನಿಗೆ ಗುದ್ದಿ ಆತನ ಮೇಲೆಯೇ
ಹರಿಯಿತು...ಆಸ್ಪತ್ರೆಗೆ ಕರೆದೊಯ್ಯುವ ಅವಶ್ಯಕತೆಯೂ ಇಲ್ಲದ ಹಾಗೆ ಸಾವು ಸಂಭವಿಸಿ ಆಗಿತ್ತು.
ಈ ಘಟನೆಯನ್ನು ಆ ಬಸ್ಸಿನಲ್ಲಿದ್ದ ಪ್ರಯಾಣಿಕರು,
ಅಕ್ಕಪಕ್ಕದಲ್ಲೇ ಇದ್ದ ಆತನ ನೂರಾರು ಸಹಪಾಠಿಗಳು, ಸಾರ್ವಜನಿಕರು ವೀಕ್ಷಿಸಿದ್ದಾರೆ. ಹತ್ತಾರು
ಶಾಲೆಗಳ ಸ್ಕೂಲ್ ಬಸ್ಸಿನಲ್ಲಿ ಮನೆಗೆ ಮರಳುವ ಮಕ್ಕಳೂ ಕಂಡಿದ್ದಾರೆ... ಸ್ವಲ್ಪ ಹೊತ್ತಿನ ಬಳಿಕ
ಸಿಸಿ ಟಿವಿ ಫೂಜೇಜ್ ಸಿಕ್ಕಿದಾಗಲೂ ಈ ಘಟನೆ ಹೇಗೆ ನಡೆಯಿತು ಎಂಬ ಮಾಹಿತಿ ಎಲ್ಲರಿಗೂ
ಗೊತ್ತಾಗಿದೆ.
ಅತ್ತ ಬಹುಶಃ ಏಕಮಾತ್ರ ಮಗ ಬರುವ ಹೊತ್ತಿಗೆ ಬಾರದೇ
ಇದ್ದಾಗ ಹೆತ್ತವರ ಪಾಡು ಏನಾಯಿತೋ ದೇವರಿಗೇ ಗೊತ್ತು. ಅವೆಲ್ಲ ಹೊರ ಜಗತ್ತಿಗೆ ತಿಳಿಯುವುದೂ ಇಲ್ಲ.
ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವಾಗ “ಅವಸರ ಮಾಡಬೇಡ, ರಸ್ತೆಯ ಒಂದು ಬದಿಯಲ್ಲೇ ನಡೆ, ಆಚೀಚೆ ನೋಡಿಕೊಂಡು
ಹೋಗು, ವಾಹನ ಬರುತ್ತಿರುವಾಗ ರಸ್ತೆ ದಾಟಬೇಡ…” ಎಂದೆಲ್ಲ ಹಿತವಚನ ಹೇಳಿ ಕಳುಹಿಸುತ್ತೇವೆ. ತುಂಬ
ಜಾಗ್ರತೆ ವಹಿಸಲು ಕಾಳಜಿ ತೋರುತ್ತೇವೆ. ನಿಧಾನವಾಗಿ ವಾಹನ ಚಲಾಯಿಸಲು, ಹೆಲ್ಮೆಟ್ ಧರಿಸಲು,
ಕುಡಿದು ವಾಹನ ಬಿಡದೇ ಇರಲು ಸಲಹೆಗಳನ್ನು ನೀಡುತ್ತೇವೆ.
ಆದರೆ, ಇಲ್ಲಿ ಈ ಬಾಲಕನ ತಪ್ಪು ಏನಿತ್ತು ಹೇಳಿ? ಏನೂ ಇರಲಿಲ್ಲ. ಪಾಪ, ಆತ 15 ಸೆಕೆಂಡು ಕಳೆದಿದ್ದರೆ ಜೀವಂತ ಮನೆಗೆ
ತಲಪುತ್ತಿದ್ದ. ಅಷ್ಟುಮಾತ್ರವಲ್ಲ... ನಮ್ಮೂರಿನ ಈ ರಸ್ತೆ ದ್ವಿಪಥವಾಗಿದೆ, ಅಗಲವಾಗಿದೆ,
ಮಾತ್ರವಲ್ಲ, ಶಾಲೆಯ ಎದುರು ವಾಹನಗಳು ವೇಗವಾಗಿ ಹೋಗದ ಹಾಗೆ ಪೊಲೀಸರು ವ್ಯವಸ್ಥಿತವಾಗಿ
ಬ್ಯಾರಿಕೇಡ್ ಕೂಡಾ ಅಳವಡಿಸಿದ್ದರು. ವಿಚಿತ್ರ ಅಂದ್ರೆ, ಈ ಯಮಸ್ವರೂಪಿ ಕಾರು ಆ ಬ್ಯಾರಿಕೇಡಿಗೇ
ಮೊದಲು ಗುದ್ದಿ, ನಂತರ ಆಟೋಗೆ ಗುದ್ದಿದೆ...!
ಹಾಗಿದ್ದರೆ ತಪ್ಪು ಯಾರದ್ದು? ನಮ್ಮ ಪಾಲಿನ ಎಲ್ಲ ಜಾಗ್ರತೆಗಳನ್ನು ಮಾಡಿಯೂ ಸಹ ಇಂತಹ ಅಪಘಾತ,
ಇಂತಹ ಸಾವು ಸಂಭವಿಸುತ್ತದೇ ಅಲ್ವ? ಯಾರಿಗೆ ಸಾವಿನ ಹೊಣೆ ಹೊರಿಸೋಣ. ಪರಿಚಿತನಿಗೆ ಕಾರು
ನೀಡಿದ ಕಾರಿನ ಮಾಲೀಕನಿಗ? ತನ್ನದಲ್ಲದ ಕಾರನ್ನು ಆ ರಸ್ತೆಯಲ್ಲಿ ಅಷ್ಟೊತ್ತಿಗೆ ಟೆಸ್ಟ್
ಡ್ರೈವ್ ಮಾಡ್ಲಿಕೆ ಹೊರಟ ಮಹನೀಯನಿಗಾ? ಸುಮಾರು 500ಕ್ಕೂ ಅಧಿಕ ಮಕ್ಕಳು ಕಲಿಯುವ
ಹೈಸ್ಕೂಲಿನಿಂದ ಆ ಹೊತ್ತಿಗೆ ನೂರಾರು ಮಕ್ಕಳು ಮನೆಗೆ ತೆರಳಲು ಬರುತ್ತಾರೆ. ಅಲ್ಲಿ ದ್ವಿಪಥ ಇದೆ,
ಡಿವೈಡರ್ ಇದೆ, ಬ್ಯಾರಿಕೇಡ್ ಇದೆ....ಅಂತಹ ಸಂದರ್ಭ, ಅದೇ ರಸ್ತೆಯಲ್ಲಿ ಅಮಾಯಕ ಬಾಲಕ ಅಪಘಾತಕ್ಕೆ
ಬಲಿಯಾಗಿದ್ದಾನೆ.
ಎಂತಹ ವಿಮರ್ಶೆಯೂ, ಎಂತಹ ಸಾಂತ್ವನವೂ ಹೋದ ಜೀವವನ್ನು
ಮರಳಿಸಲಾಗದು. ನಾನು ಕಲಿತ ಶಾಲೆಯ ಎದುರು, ನನ್ನೂರಿನ ಹುಡುಗನ ಪ್ರಾಣ ಈ ರೀತಿ ಹೋದಾಗ ನನಹೆ ತುಂಬ
ಕಾಡುತ್ತದೆ... ಬಹಳಷ್ಟು ಮಂದಿ ಆ ಅಪ್ಪ-ಅಮ್ಮನ ದುಃಖವನ್ನು ಗ್ರಹಿಸಿ ಹತಾಶರಾಗಿದ್ದಾರೆ. ನೀವು
ಅಂತಹ ಅನಾಹುತಗಳ ಸಂದರ್ಭ ಅಸಹಾಯಕರಂತೆ ಭಾವುಕರಾದ್ದಿರಬಹುದು. ಇಂತಹ ಅಪಘಾತಗಳು ಪ್ರತಿನಿತ್ಯ
ನಮ್ಮಲ್ಲಿ ವರದಿ ಆಗುತ್ತಲೇ ಇರುತ್ತವೆ. ಪ್ರತಿ ಅಪಘಾತಕ್ಕೂ ಒಂದೊಂದು ಕಾರಣಗಳು, ವಾದಗಳು,
ಪೋಸ್ಟ್ ಮಾರ್ಟಂ ವರದಿಗಳು, ಸಲಹೆಗಳು, ಸೂಚನೆಗಳು ಬರುತ್ತಲೇ ಇರ್ತವೆ. ಅಪಘಾತಗಳು ನಿಲ್ಲುವುದೇ
ಇಲ್ಲ. ಅಡಗಿ ಕುಳಿತಂಥಹ ಸಾವು ಈ ರೀತಿ ಭೀಕರವಾಗಿ ದಾಳಿ ಮಾಡಿದಾಗ ಮತ್ತೆ ಮತ್ತೆ ಕಾಡುವ ಪ್ರಶ್ನೆ
ಆ ಬಾಲಕ ಸಾಯುವಂಥಹ ತಪ್ಪು ಏನು ಮಾಡಿದ್ದಾನೆ? ಯಾಕೆ ಆತನ ಹೆತ್ತವರಿಗೆ ಇಂತಹ ಶಿಕ್ಷೆ? ದೇವರೆ...
-ಕೃಷ್ಣಮೋಹನ ತಲೆಂಗಳ (28.12.2022).
No comments:
Post a Comment