“ಸಾವಿರದ” ಸಾವುಗಳ ವೈರಾಗ್ಯಕ್ಕೆ ಉತ್ತರವಿಲ್ಲ... ಕಾರಣ, ಸತ್ತವರು ಮಾತನಾಡುವುದಿಲ್ಲ! | DEATH

 



ಸಾವಿನ ಬಗ್ಗೆ ಸಾವಿರ ಮಾತನಾಡುತ್ತೇವೆ. ಸಾವಿನ ಬಗ್ಗೆ ನಮಗೆಷ್ಟು ವಿಚಿತ್ರ ಕುತೂಹಲ. ಅವರು ಹೇಗೆ ಸತ್ತರಂತೆ? ಅವರಿಗೆ ವಯಸ್ಸೆಷ್ಟಾಗಿತ್ತು? ಕೊನೆಯದಾಗಿ ಎಂತ ಮಾತನಾಡಿದ್ರು? ಅವರು ಕೊನೆ ತನಕ ಆರೋಗ್ಯದಿಂದಲೇ ಇದ್ರ...? ಎಂಬಿತ್ಯಾದಿ ಪ್ರಶ್ನೆಗಳು. ಅಗಲಿದವರ ವಯಸ್ಸನ್ನು ತನ್ನ ವಯಸ್ಸಿನ ಜೊತೆ ಹೋಲಿಸಿ,  ತನ್ನದಿನ್ನು ಎಷ್ಟು ದಿನ?” ಎಂಬಂಥ ತುಲನೆಯೂ ಹೌದು.

ಪಾಪ ಹೇಗೆ ಸತ್ತರು, ಅವರದು ಎದ್ದು ಹೋದ ಹಾಗೆ ತೆರಳಿದರು, ಸುಖ ಮರಣ, ಒಂದಿಷ್ಟೂ ಸುಳಿವು ಕೊಡದೆ ಸಾವು ಕಾದಿತ್ತು... ಹೀಗೆ ಎಷ್ಟೊಂದು ವಿಶ್ಲೇಷಣೆಗಳು ಸಾವಿನ ಬಗ್ಗೆ...!

ಇತ್ತೀಚೆಗೆ ನಮ್ಮೂರಿನಲ್ಲಿ ಒಬ್ಬರು ಆಜಾತಶತ್ರು, ಸರಳ ಸಜ್ಜನಿಕೆಯ ವ್ಯಕ್ತಿತ್ವದವರು ತುಸು ಅನಾರೋಗ್ಯದಿಂದ ಅಕಾಲಿಕವೇ ಎಂಬ ಹಾಗೆ ತೀರಿ ಹೋದರು. ಅವರ ಸಾವನ್ನು ತಡೆಯುವುದು ಸಾಧ್ಯವೇ ಇರಲಿಲ್ಲ. ಕೈಮೀರಿದ ಅನಾರೋಗ್ಯದಿಂದ ಕಾಲ ಅವರನ್ನು ಸೆಳೆದಿತ್ತು. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಓರ್ವ ಸ್ವಯಂಘೋಷಿತ ಮುಖಂಡರು ಹೇಳಿದ ಮಾತುಗಳು... ಅವರ ಬದುಕಿನ ಆದರ್ಶ ನಮಗೆ ಅನುಕರಣೀಯ. ಅವರ ಹಾಗೆ ಸ್ವಲ್ಪವಾದರೂ ಬದುಕಿ ತೋರಿಸಿದರೆ ಸಾಕು, ಅವರಂತೆ ಆಗಲು ಪ್ರಯತ್ನಿಸಬೇಕು, ಅವರು ಹಾಕಿ ಕೊಟ್ಟ ಮಾರ್ಗ ಶ್ರೇಷ್ಠ.... ಇತ್ಯಾದಿ ಇತ್ಯಾದಿ...

ಅವರು ಪಾಪ, ಬದುಕಿದ್ದಷ್ಟೂ ದಿನ ಸಾರ್ವಜನಿಕವಾಗಿ ಅವರಿಗೆ ಅವಹೇಳನ ಮಾಡಿದವರು, ನಿಂದಿಸಿದವರು, ಪರೋಕ್ಷವಾಗಿ ಚುಚ್ಚಿ ಚುಚ್ಚಿ ಮಾತನಾಡಿದವರು, ಅವರ ಸಾತ್ವಿಕತೆಗೆ ಒಳಗೊಳಗೇ ಕರುಬಿದವರೂ ಸಹ, ಅವರು ಇನ್ನಿಲ್ಲವಾದ ಬಳಿಕ ಆದರ್ಶಗಳ ಬಗ್ಗೆ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ ಅಷ್ಟೇ.. ಅಗಲಿದವರ ಬಗ್ಗೆ ಸ್ವಲ್ಪವಾದರೂ ಆದರ, ಗೌರವ, ಪ್ರೀತಿ ಇದ್ದಿದ್ದರೆ ಬದುಕಿದ್ದಾಗಲೇ ಅವರಿಗೊಂದು ಚಂದದ ಮರ್ಯಾದೆ, ನಾಲ್ಕು ಒಳ್ಳೆಯ ಮಾತುಗಳಿಂದ ವ್ಯವಹರಿಸಿದ್ರೆ ಅವರು ಉಸಿರಿರುವಾಗಲೂ ಸಮಾಧಾನದಿಂದ ಇರುತ್ತಿದ್ದರೋ ಏನೋ... ಬದುಕಿದ್ದಾಗ ಕಣ್ಣೀರು ಹಾಕಿಸಿ, ಸತ್ತ ಬಳಿಕ ಫೋಟೋಗೆ ಮಾಲೆ ಹಾಕಿ ಅಸಹ್ಯವಾಗಿ ಹೊಗಳುವವರು, ಬದುಕಿದ್ದಾಗ ಮರ್ಯಾದೆ ಕೊಡದೆ, ಸತ್ತ ಮೇಲೆ ಹೊಗಳಿ ಹೊಗಳಿ ಫ್ಲೆಕ್ಸ್ ಹಾಕಿ, ಕೆಳಗೆ ಸತ್ತವನಿಗಿಂತ ದೊಡ್ಡದಾಗಿ ತನ್ನ ಹೆಸರು ಹಾಕಿ ಮೆರೆಯುವವರ ಸಂಖ್ಯೆಗೆ ಏನೂ ಕೊರತೆ ಇಲ್ಲ... ಇದು ಯಾವುದೇ ಕಾಲಕ್ಕೂ ಬದಲಾಗುವ ವ್ಯವಸ್ಥೆ ಅಲ್ಲ.

ಸತ್ತ ಬಳಿಕ ಸತ್ತ ವ್ಯಕ್ತಿತ್ವ ಇನ್ನಿಲ್ಲವಾಗುವುದಲ್ಲವೇ...? ಸತ್ತವರಿಗೆ ನಿಮ್ಮ ಅಶ್ರುತರ್ಪಣ, ನೀವು ಹಾಕಿದ ಬ್ಯಾನರ್, ಪುಷ್ಪನಮನ, ಹುಸಿ ಹೊಗಳಿಕೆ ಯಾವುದಾದರೂ ತಲಪುತ್ತದೆಯೇ...? ತಲುಪುತ್ತದೆಯೇ ಎಂದು ಸಾರ್ವಜನಿಕವಾಗಿ ಶ್ರದ್ಧಾಂಜಲಿ ಸೂಚಿಸುವವರಿಗೂ, ಪುಷ್ಪಾರ್ಚನೆ ಮಾಡುವವರಿಗೂ ಸರಿಯಾಗಿ ಗೊತ್ತಿಲ್ಲ.. ಆದರೆ ಮರುದಿನ ಪೇಪರಿನ ಮೂಲಕ ಓದುಗರನ್ನು ತಲುಪುತ್ತದೆ ಅಂತ ಗೊತ್ತು. ಆದರೂ ಸತ್ತವನ ಹೆಸರಿನಲ್ಲೂ ಬದುಕಿದವರು ಮೆರೆಯುವ ಸಂದರ್ಭವನ್ನು ಪ್ರಚಾರ ಪ್ರಿಯರು ಖಂಡಿತಾ ತಪ್ಪಿಸಿಕೊಳ್ಳುವುದಿಲ್ಲ. (ವಿ.ಸೂ.-ಶ್ರದ್ಧಾಂಜಲಿ ಸಭೆ, ಅಶ್ರುತರ್ಪಣ, ಪುಷ್ಪನಮನ ಎಲ್ಲ ಪ್ರದರ್ಶನಕ್ಕೆ, ಪ್ರಚಾರಕ್ಕೆ, ತೋರಿಕೆಗೆ ಎಂಬ ವಿತಂಡವಾದ ಖಂಡಿತಾ ನನ್ನದಲ್ಲ. ಮನಃಪೂರ್ವಕವಾಗಿ ಅಗಲಿದವರ ನೆನೆಯುವವರು ಹಲವರಿದ್ದಾರೆ. ಆದರೆ, ಸತ್ತವರ ಹೆಸರಲ್ಲೂ ಹುಸಿ ಕಂಬನಿ ಮಿಡಿದು ಪ್ರಚಾರ ಗಿಟ್ಟಿಸುವವರು ಇದ್ದಾರೆ ಎಂಬ ಅಂಶದ ಬಗ್ಗೆ ಗಮನ ಸೆಳೆಯುತ್ತಿದ್ದೇನೆ ಅಷ್ಟೇ).

ಹಾಗಾದರೆ, ನಿಸ್ವಾರ್ಥಿಗಳ ಒಳ್ಳೆಯತನ, ಸಾತ್ವಿಕತೆ, ಪರೋಪಕಾರ, ತ್ಯಾಗದ ಬದುಕು ಗೊತ್ತಾಗುವುದು ಮನುಷ್ಯ ಇನ್ನಿಲ್ಲವಾದ ಬಳಿಕವೆಯ?

ಸತ್ತವನಿಗೆ ಕೊನೆಯ ಘಳಿಗೆಯಲ್ಲಿ ಏನಾಯಿತು, ಸಾಯುತ್ತಿದ್ದೇನೆ ಅಂತ ಗೊತ್ತಾಗಿರಬಹುದೇ, ತನ್ನ ಸಾವನ್ನು ಆತ ನಿರೀಕ್ಷಿಸಿರಬಹುದೇ, ಸಾವನ್ನು ಸ್ವೀಕರಿಸುವಷ್ಟು ಪ್ರಬುದ್ಧತೆ ಇದ್ದಿರಬಹುದೇ... ಸತ್ತ ಬಳಿಕವೂ ಆ ಆತ್ಮಕ್ಕೆ ಈ ಜಗತ್ತಿನಲ್ಲಿ ಮುಂದುವರಿದ ದೃಶ್ಯಾವಳಿಗಳು ಕಾಣುತ್ತರಬಹುದೇ..  ಎಂಬಿತ್ಯಾದಿ ಪ್ರಶ್ನೆಗಳಿಗೆ ಸಾಕ್ಷಿ ಸಹಿತ ಉತ್ತರ ಸಿಗುವುದಿಲ್ಲ. ಯಾಕೆಂದರೆ ಸತ್ತವರು ಮತ್ತೆ ಮಾತನಾಡುವುದಿಲ್ಲ. ಮಾತನಾಡುವುದು ಏನೇ ಇದ್ದರೂ ಬದುಕಿದ್ದಾಗ ಮಾತ್ರ. ಒಂದು ಮರ್ಯಾದೆ, ಒಂದು ಪ್ರಶಸ್ತಿ, ಒಂದು ಸಾಂತ್ವನ, ಒಂದು ಭೇಟಿ, ನಾಲ್ಕು ಮಾತು ಏನಿದ್ದರೂ ಬದುಕಿದ್ದಾಗ ಮಾತ್ರ. ಅತ್ತು ಕರೆದರೂ ಸತ್ತವರು ಮತ್ತೆ ಬರುವುದಿಲ್ಲ ಅಂತ ಗೊತ್ತಿದ್ದರೂ ಪ್ರತಿ ಸಾವಿನ ಬಳಿಕವೂ ಮೂಡುವ ಸ್ಮಶಾನ ವೈರಾಗ್ಯ ನಮ್ಮನ್ನು ಬದಲಿಸುವುದಿಲ್ಲ.

ನಮ್ಮೊಳಗಿನ ಅಹಂ, ಕೆಟ್ಟ ಹಠ, ನನ್ನದೇ ದಾರಿ, ನನ್ನದೇ ಅಂತಿಮ ಮಾತು, ನನ್ನ ಪ್ರವೃತ್ತಿಯೇ ಶ್ರೇಷ್ಠ ಎಂಬ ಉದ್ಧಟತನ, ಚಿತ್ರವಿಚಿತ್ರ ಚರ್ಯೆಗಳು, ಮುಂಗೋಪ, ಅಸಹಕಾರ, ವಂಚಿಸಿ ಬದುಕುವ ಚಾಳಿ, ಬಣ್ಣದ ಮಾತುಗಳಿಂದ ಬಕೆಟ್ ಹಿಡಿಯುವ ಹವ್ಯಾಸ ಯಾವುದೂ ಬದಲಾಗುವುದಿಲ್ಲ... ಅದಕ್ಕೇ ಹಿಂದಿನವರು ಯೋಚಿಸಿಯೇ ಹೇಳಿದ್ದು, ಹುಟ್ಟು ಗುಣ ಸತ್ತರೂ ಹೋಗದು ಅಂತ. ಆ ಗುಣಗಳು ವೈರಾಗ್ಯ ಭಾವದಿಂದ ಬದಲಾಗುವಂಥದ್ದಲ್ಲ.

ಲೌಕಿಕದ ಶಕ್ತಿಯೇ ಅಂಥದ್ದು... ವೈರಾಗ್ಯವನ್ನು ಮತ್ತೆ ಅರಿಷಡ್ವರ್ಗದಲ್ಲಿ ವಿಲೀನಗೊಳಿಸಿ ಮತ್ತದೇ ಸ್ವಭಾವ, ಮತ್ತದೇ ನಮ್ಮತನದೊಂದಿಗೆ ಬದುಕುವುದು....

ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಕೇಳಿದಾಗಲೆಲ್ಲ, ಪಾಪ ಅವರಿಗೊಂದು ಕ್ಷಣದ ಸಾಂತ್ವನ ಸಿಕ್ಕಿದ್ದರೆ ನಿರ್ಧಾರ ಬದಲಿಸುತ್ತಿದ್ದರೇನೋ ಎಂಬಂಥ ಮರುಕ, ಅಪಘಾತದಲ್ಲಿ ಸತ್ತವರ ಕುರಿತು ಸ್ವಲ್ಪ ನಿಧಾನ ಹೋಗಿದ್ದರೆ ಏನಾಗ್ತಾ ಇತ್ತು, ಇವತ್ತೇ ಹಾಗೆ ಆಗಬೇಕ… ಎಂಬಿತ್ಯಾದಿ ಅನುಕಂಪ, ಅನಾರೋಗ್ಯದಿಂದ ಸತ್ತವರ ಬಗ್ಗೆ, ಅವರು ಛೆ ಬದುಕಿದ್ದಾಗಲೇ ಹೋಗಿ ಮಾತನಾಡಿಸುತ್ತಿದ್ದೆಠ ಎಂಬ ಪಶ್ಚಾತ್ತಾಪ... ಯಾರೋ ಕೊಂದು ಸತ್ತರೆ, ಕೊಂದವನ ಬಗ್ಗೆ ರೋಷ, ಸತ್ತವನ ಅಸಹಾಯಕತೆ ಬಗ್ಗೆ ಮರುಕ... ಎಷ್ಟೊಂದು ಸ್ಪಂದಿಸುತ್ತೇವೆ ಸಾವುಗಳ ಬಗ್ಗೆ ಅಲ್ವ?.

ಮಾಧ್ಯಮಗಳಲ್ಲೂ ಸಾವಿನ ಸುದ್ದಿ ಅತೀ ಹೆಚ್ಚು ಗಮನ ಸೆಳಯುತ್ತವೆ. ಜನ ಓದಿಯೇ ಓದುತ್ತಾರೆ. ಜನಸಾಮಾನ್ಯರು ಸತ್ತ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾದರೆ ಅದು ಆತನ ಬಗ್ಗೆ ನಾವು ಪ್ರಕಟಿಸಬಹುದಾದ ಕೊನೆಯ ಸುದ್ದಿ, ಕೊನೆಯ ಗೌರವ ಎಂಬ ಮಾತು ಸುದ್ದಿ ಮನೆಯಲ್ಲಿದೆ...

 

ಸ್ಪೀಕರ್ ಯು.ಟಿ.ಖಾದರ್ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದ ಮಾತುಗಳ ವೀಡಿಯೋ ವೈರಲ್ ಆಗ್ತಾ ಇದೆ. ಅಧಿಕಾರ, ಅಂತಸ್ತು, ಹಣ ಯಾವುದೂ ಶಾಶ್ವತವಲ್ಲ. ಬದುಕಿದ್ದಾಗ ಮಾತ್ರ ಮಂತ್ರಿ ಬಂದ್ರ, ಶಾಸಕ ಬಂದ್ರ, ಸಂಸದ ಬಂದ್ರ? ಅಂತ ಕೇಳ್ತಾರೆ, ಸತ್ತ ಬಳಿಕ ಯಾರೂ ಶಾಸಕ ಬಂದ್ರ ಅಂತ ಕೇಳುವುದಿಲ್ಲ, ಹೆಣ ಬಂತ, ಮರಣ ಬಂತ ಅಂತ ಪ್ರಶ್ನೆ ಕೇಳ್ತೇವೆ..!”. ಸತ್ತ ಮೇಲೆ ಅಷ್ಟೇ ಗುರುತಿಸುವಿಕೆ ಇರುವುದು. ಅದಕ್ಕೊಂದು ಅಂತ್ಯಸಂಸ್ಕಾರ ಕಲ್ಪಿಸಿದ ಬಳಿಕ ದೇಹವೂ ಇಲ್ಲವಾಗುತ್ತದೆ. ಉಳಿಯುವಂಥ ಕೆಲಸ ಮಾಡಿದ್ದರೆ ನೆನಪೊಂದು ಉಳಿದೀತು ಅಷ್ಟೇ..

ನಾವು ಬದುಕಿದ್ದಾಗ ಮಾಡುವ ಸಭೆ ಸಮಾರಂಭಗಳಿಗೆ ಎಷ್ಟು ಜನ ಸೇರ್ತಾರೆ ಎಂಬುದು ಮುಖ್ಯವಲ್ಲ, ಸತ್ತಮೇಲೆ ಅಂತ್ಯಸಂಸ್ಕಾರಕ್ಕೆ ನಮ್ಮನ್ನು ನೆನಪಿಟ್ಟು ಎಷ್ಟು ಮಂದಿ ಬರ್ತಾರೆ ಎಂಬುವುದು ಬದುಕಿದಾಗ ನಾವು ತೋರಿಸುವ ವರ್ತನೆಯಿಂದ ನಿರ್ಧಾರಾವಾಗುತ್ತದೆ ಎಂದು ಆ ವಿಡಿಯೋದಲ್ಲಿ ಸ್ಪೀಕರ್ ಹೇಳಿದ ಮಾತುಗಳು ತುಂಬ ಮಾರ್ಮಿಕವಾಗಿವೆ...

 

ಎಷ್ಟೇ ದುಡ್ಡಿದ್ದರೂ, ಎಷ್ಟೇ ಅಧಿಕಾರವಿದ್ದರೂ ಎಷ್ಟೇ ಅಭಿಮಾನಿಗಳಿದ್ದರೂ, ಎಷ್ಟೇ ವೈದ್ಯಕೀಯ ಸೌಲಭ್ಯಗಳಿದ್ದರೂ ಸಾವು ತಡೆಯಲ್ಪಡುವಂಥದ್ದಲ್ಲ, ಸಾವಿಗೆ ಯಾರ ಕುರಿತೂ ಬೇಧವಿಲ್ಲ, ಮಮಕಾರವಿಲ್ಲ, ಪಕ್ಷಪಾತವಿಲ್ಲ ಎಂಬುದು ಸಾವಿರಾರು ಸಲ ಸಾಬೀತಾಗಿದೆ. ಕಾಳಿಂಗ ನಾವಡರು, ಶಂಕರ್ ನಾಗ್, ಇತ್ತೀಚೆಗೆ ಅಗಲಿದ ಪುನೀತ್ ರಾಜ್ ಕುಮಾರ್, ಕೆಫೆ ಕಾಫಿ ಡೇ ಸಿದ್ಧಾರ್ಥ, ಅಪರ್ಣಾ ಹೀಗೆ ಸಾಲು ಸಾಲು ದಿಢೀರ್ ಸಾವುಗಳು ನಮ್ಮನ್ನು ಅಧೀರರನ್ನಾಗಿಸುತ್ತಲೇ ಇರುತ್ತದೆ. ಅನಪೇಕ್ಷಿತ ಸಾವು, ಎಷ್ಟೇ ದೊಡ್ಡ ವ್ಯಕ್ತಿಗಳನ್ನಾದರೂ ನಿರ್ಭಾವುಕವಾಗಿ ಇನ್ನಿಲ್ಲವಾಗಿಸುತ್ತದೆ ಎಂಬ ಕಠೋರ ಸತ್ಯ ಆ ಕ್ಷಣಕ್ಕೆ ದಿಗ್ಮೂಢರನ್ನಾಗಿಸುತ್ತದೆ. ಪುನೀತ್ ರಾಜ ಕುಮಾರ್, ಅಪರ್ಣಾ ವಸ್ತಾರೆಯಂತಹ ಪ್ರತಿಭೆಗಳು ನಿಧನರಾದಾಗ ಕರುನಾಡು ಮಮ್ಮಲ ಮರುಗಿತು. ಜಾಲತಾಣಗಳಲ್ಲಿ ಜನ ಸ್ವಯಂಪ್ರೇರಿತರಾಗಿ ವ್ಯಕ್ತಪಡಿಸಿದ ಸಂತಾಪ ಜನರೆಷ್ಟು ಶಾಕ್ ಗೆ ಒಳಗಾಗಿದ್ದರು ಎಂಬುದನ್ನು ತೋರಿಸಿದೆ...

ಇವತ್ತು ಅವರು, ನಾಳೆ ನಾನು ಸಹ... ಎಂಬ ವೈರಾಗ್ಯ, ಎಷ್ಟು ಮಾಡಿದರೇನು, ಎಷ್ಟು ಕಟ್ಟಿಟ್ಟರೇನು, ಕೊನೆಗೆ ನಾಲ್ಕು ಮಂದಿ ಹೊತ್ತುಕೊಂಡೇ ಹೋಗಬೇಕಾದ ದೇಹ ಎಂಬ ನಿರ್ಲಿಪ್ತತೆ... ಸ್ಮಶಾನದ ಕರಿ ಹಿಡಿದ ಗೋಡೆ ಮತ್ತು ಕಪ್ಪಗಾದ ಛಾವಣಿ, ನಿರ್ಜೀವ ಗೋಡೆಗಳು, ಮತ್ತು ಒಣಮರಗಳು ಕಾಂಪೌಂಡಿನಲ್ಲಿ ಬರೆಯಲಾದ ಪಾರಮಾರ್ಥಿಕ ಸಾಲುಗಳು ಸಹ ಬದುಕಿನ ನಶ್ವರತೆಯನ್ನು ಸಾರಿ ಹೇಳ್ತವೆ....

ಬೈಕಿನಲ್ಲಿ ಕೂತಿದ್ದ ಹಾಗೆ ಮುಂದೆ ಬಾಗಿ ಸತ್ತವರು, ವೇದಿಕೆಯಲ್ಲಿ ಪದ್ಯ ಹೇಳ್ತಾ ಕುಸಿದವರು, ಹೊಟೇಲಿನಲ್ಲಿ ಊಟ ಆರ್ಡರ್ ಮಾಡಿ ಮೊದಲ ತುತ್ತಿಗೆ ಬಟ್ಟಲಿಗೆ ಕೈ ಹಾಕಿ ಅಲ್ಲಿಗೇ ತಲೆ ವಾಲಿಸಿದವರು, ಯಕ್ಷಗಾನ ವೇದಿಕೆಯಿಂದಲೇ ಕುಸಿದವರು, ಮಲಗಿದಲ್ಲಿಂದ ಮೇಲೆಳದವರು... ಎಷ್ಟೊಂದು ವಿಡಿಯೋಗಳು, ಎಷ್ಟೊಂದು ಸುದ್ದಿಗಳು, ಎಷ್ಟೊಂದು ನಿದರ್ಶನಗಳು...

ಬದುಕೆಂದರೆ ಅಷ್ಟೇ ಅಲ್ಲ...

ಮೊನ್ನೆ ಮೊನ್ನೆ ತಾನೆ ವ್ಯಕ್ತಿಯೊಬ್ಬರಿಗೆ ಅನಾರೋಗ್ಯವಾಗಿತ್ತು, ಬಂಟ್ವಾಳ ಕಡೆಯವರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆ ತರುತ್ತಿದ್ದರು ಆಂಬುಲೆನ್ಸಿನಲ್ಲಿ. ಇನ್ನೇನು ಪಡೀಲು ಎಂಬಲ್ಲಿ ಹೆದ್ದಾರಿಗೆ ತಾಗಿದಂತೆಯೇ ಇರುವ ಆಸ್ಪತ್ರೆ ತಲುಪಿತು ಎಂಬಷ್ಟರಲ್ಲಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸೇ ಅಪಘಾತಕ್ಕೀಡಾಗಿ ರೋಗಿ ಮೃತಪಟ್ಟರು... ಹಾಗಾದರೆ ಅವರ ಹಣೆಬರಹದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಯೋಗವೇ ಇಲ್ಲವೆಂದು ಕಾಣುತ್ತದೆ...

ಮತ್ತೊಂದಷ್ಟು ದಿನಗಳ ಮೊದಲು ಮಂಗಳೂರು ಕೆಪಿಟಿ ಎಂಬಲ್ಲಿ ದೊಡ್ಡ ಲಾರಿಯೊಂದರ ಚಕ್ರದಡಿಗೆ ಬೈಕ್ ಸವಾರರೊಬ್ಬರು ಬೈಕ್ ಸಹಿತ ಬಿದ್ದು ಬಿಟ್ಟರು.. ಈ ವೀಡಿಯೋ ವೈರಲ್ ಆಯ್ತು. ಲಾರಿ ಇನ್ನೇನು ಅವರ ದೇಹದ ಮೇಲೆ ಹರಿಯಿತು ಎಂಬಂತೆ ಭಾಸವಾಯಿತು. ಇದರ ಸಿಸಿ ಟಿವಿ ದೃಶ್ಯ ನೋಡಿದವರು ಬೈಕ್ ಸವಾರ ಸತ್ತೇ ಹೋದರು ಎಂದ ಮರುಗಿದರು. ಆದರೆ, ಆ ಸವಾರನ ಆಯುಷ್ಯ ಮುಗಿದಿರಲಿಲ್ಲ... ಅವರ ಕೈ ಫ್ರಾಕ್ಚರ್ ಆಗಿತ್ತಷ್ಟೆ. ಬದುಕಿ ಬಂದರು...!

ಕಳೆದ ವಾರ ಕಾರ್ಕಳ ಪರಿಸರದಲ್ಲಿ ಒಂದೇ ಕುಟುಂಬದ ದಂಪತಿ ಮತ್ತು ಮೂವರು ಮಕ್ಕಳು ಬೈಕಿನಲ್ಲಿ ಬರ್ತಾ ಇದ್ರು. ಅಪಘಾತವಾಯಿತು. ಅಮ್ಮನನ್ನು ಬಿಟ್ಟು ಆಕೆಯ ಗಂಡ ಮತ್ತು ಮೂವರು ಮಕ್ಕಳು ಮೃತಪಟ್ಟರು... ಆಕೆ ಹಿಂಬದಿ ಸವಾರೆ ಆಗಿದ್ದರೂ ಆಕೆಯ ಜೀವ ಉಳಿಯಿತು...

ನಾವು ಬುದ್ಧಿವಂತ ಪ್ರಾಣಿ ಅನ್ನುತ್ತೇವೆ, ನಾನು ಏನು ಬೇಕಾದರೂ ಮಾಡಬಲ್ಲೆ ಎಂಬಂಥ ಅಹಂ ಹೊತ್ತಿರುತ್ತೇವೆ. ನನಗಿಷ್ಟ ಬಂದದ್ದೇ ಮಾಡುವುದು ಅಂತ ಧಿಮಾಕು ತೋರಿಸುತ್ತೇವೆ. ಆದರೆ ನಮ್ಮ ದೇಹದೊಳಗೆ ಬೆಳೆಯುವ  ಗಡ್ಡೆ, ಬ್ಲಾಕ್ ಆಗುವ ನರ, ಹುಟ್ಟಿಕೊಳ್ಳುವ ದುರ್ಮಾಂಸ, ಸದ್ದಿಲ್ಲದೆ ಪ್ರವೇಶಿಸಿದ ವೈರಸ್.... ಯಾವುದೂ ನಮಗೆ ಸಕಾಲದಲ್ಲಿ ಗೊತ್ತುಗುವುದಿಲ್ಲ... ನಾವು ಇಚ್ಚಾಮರಣಿಗಳೂ ಅಲ್ಲ. ಸಾಕಾಯ್ತು ಬದುಕು ಅಂದಾಗ ನಮಗೆ ದಿಢೀರ್ ಸಾಯಲೂ ಆಗುವುದಿಲ್ಲ (ಹಗ್ಗ ತಕ್ಕೊಂಡು ಆತ್ಮಹತ್ಯೆ ಮಾಡಲು ಹೊರಟವರೂ ಹಗ್ಗ ಕಡಿದು ಬದುಕಿದ ಉದಾಹರಣೆಗಳಿವೆ, ವಿಷ ತಿಂದೂ ಸಾಯದವರು ಇದ್ದಾರೆ), ಅಯ್ಯೋ ಇಷ್ಟು ಬೇಗ ಸಾಯುವುದಿಲ್ಲ, ಇನ್ನೂ ಬದುಕಬೇಕು ಅಂತ ಸಾವನ್ನು PAUSE ಮಾಡಲು, ಫಾರ್ವರ್ಡ್ ಮಾಡಲೂ ನಮಗೆ ಸಾಧ್ಯವಿಲ್ಲ... ಮತ್ತೆಂತ ನಾವು ಬುದ್ಧಿವಂತರು, ಸಬಲರು, ಬೇಕಾದ್ದು ಮಾಡಬಲ್ಲವರು...?!”

ಇಷ್ಟೊಂದು ಮಿತಿಗಳಿದ್ದೂ ನಮ್ಮ ತಿಕ್ಕಲುತನ, ವಂಚಕ ಬುದ್ಧಿ, ಅತಿಯಾದ ಹಗೆ, ಹಠ, ವಿನಾ ಕಾರಣದ ಮತ್ಸರ, ಕಾಲೆಳೆಯುವ ಕುತ್ಸಿತ ಬುದ್ಧಿ ಎಂಥದ್ದೂ ಕಡಿಮೆ ಆಗುವುದಿಲ್ಲ... 10 ರುಪಾಯಿ ಕೊಟ್ಟು ಲಕ್ಷ ರುಪಾಯಿ ಕೊಟ್ಟ ರೇಂಜಿನಲ್ಲಿ ಪ್ರಚಾರ ತಕ್ಕೊಳ್ಳಲು ನಮಗೆ ನಾಚಿಕೆಯೇ ಇಲ್ಲ... ಹಾಜಬ್ಬರು ಶಾಲೆ ಕಟ್ಟಲು ಚಪ್ಪಲಿ ಸವೆಸಿದ ದಿನಗಳಲ್ಲಿ ಅವರನ್ನು ಕ್ಯಾರೇ ಮಾಡದಿದ್ದರೂ ಸಹ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪಂದಾಗ ರೋಡು ರೋಡುಗಳಲ್ಲಿ ಫ್ಲಕ್ಸ್ ಹಾಕಿ ಶುಭಾಶಯ ಕೋರಿದ್ದೇವೆ... ಇದುವೇ ನಿಜವಾದ ನಾವು... ನಮ್ಮಲ್ಲಿರುವ ಸಮಯಸಾಧಕತನವನ್ನು ಯಾವ ವೈರಾಗ್ಯವೂ ಕೊಲ್ಲಲಾರದು...

ತಮ್ಮ ಪ್ರಸಿದ್ಧ ಕಾದಂಬರಿ ಕೆಂಪುಕಳವೆಯ ಕೊನೆಯ ಭಾಗದಲ್ಲಿ ಲೇಖಕ ಶ್ರೀ ಕೆ.ಟಿ.ಗಟ್ಟಿ ಅವರು ಕಾದಂಬರಿಯ ಪ್ರಧಾನ ಪಾತ್ರಧಾರಿ ಮಾನು ಮೂಲಕ ಸಾವಿನ ಬಗ್ಗೆ ಒಂದು ಮಾತು ಹೇಳಿಸಿದ್ದಾರೆ. ಈ ಬದುಕೇ ಸಾಕಾಯ್ತು, ದೇವರು ಒಮ್ಮೆ ಕರ್ಕೊಂಡು ಹೋದರೆ ಸಾಕು ಅಂತ ಜನ ವೈರಾಗ್ಯ ಬಂದಾಗಲೆಲ್ಲ ಹೇಳ್ತಾ ಇರ್ತಾರೆ, ಹಾಗೆ ಜನ ಬಯಸಿದಾಗಲೆಲ್ಲ ಸಾಯುವ ಮಾತಾಡಿದ ತಕ್ಷಣ ನಿಜವಾಗಿಯೂ ಸಾಯ್ತಾರೆ ಅಂತ ಆಗಿದ್ರೆ, ಯಾರೂ ಸಾಯುವ ಮಾತನ್ನೇ ಹೇಳ್ತಾ ಇರಲಿಲ್ಲ ಅಂತ...

ಹೌದಲ್ವ... ನಮಗೆ ಋಣಾತ್ಮಕ ವಿಚಾರಗಳೇ ಆಕರ್ಷಿಸುವುದು. ಅದು ಮಾನವ ಸೈಕಾಲಜಿ... ಸಾವನ್ನು ಗೆದ್ದವರು, ಬದುಕಿ ಬಂದವರು, ಸಾವಿನ ಕದ ತಟ್ಟಿ ಬಂದವರು, ಸಾಯುತ್ತೇವೆ ಅಂತ ಗೊತ್ತಿದ್ದೂ ತಮ್ಮ ಕರ್ತವ್ಯಗಳನ್ನು ಮರೆಯದ ಮಂದಿಯ ಅನುಭವಗಳು, ಆದರ್ಶಗಳು ಹೆಚ್ಚು ತಟ್ಟುವುದಿಲ್ಲ. ಸತ್ತವರು, ಸತ್ತುಕೊಂಡವರು, ಕೊಲ್ಲಲ್ಪಟ್ಟವರು, ಕೊಲ್ಲಿಸಿದವರು.. ಹೇಳದೇ ಕೇಳದೇ ನಿರ್ಗಮಿಸಿದವರ ಪ್ರಕರಣಗಳು ಮತ್ತೆ ಮತ್ತೆ ಕಾಡುತ್ತವೆ... ಮತ್ತೊಂದಿಷ್ಟು ಜಿಜ್ಞಾಸೆಗಳನ್ನು ಹುಟ್ಟು ಹಾಕುತ್ತವೆ.. ಆದರೆ ಇಲ್ಲೇ ಸುತ್ತಮುತ್ತಲೇ ಕಾಣುತ್ತಿರುವ ಸಾವುಗಳಿಂದ ನಾವು ಪಾಠ ಕಲಿಯುವುದಿಲ್ಲ... ಕಲಿಯುತ್ತೇವೆ ಅಂತಾಗಿದ್ರೆ ನಾವು... ಸೋ ಕಾಲ್ಡ್ ಸಮಾಜ ಇಷ್ಟೊಂದು ವೈರುಧ್ಯಗಳಿಂದ, ಸಂಕೀರ್ಣತೆಗಳಿಂದ ಕೂಡಿರುತ್ತಲೇ ಇರಲಿಲ್ಲ... ಏನಂತೀರಿ?

-ಕೃಷ್ಣಮೋಹನ ತಲೆಂಗಳ (09.10.2024)

1 comment:

ASHWANI BEJAI said...

Ego ಅನ್ನುವುದು ಬದುಕಿದ್ದಾಗ ಇದ್ದೇ ಇರುತ್ತದೆ..ಅಹಂ ಅನ್ನು ತ್ಯಜಿಸುವುದು ಸುಲಭವಲ್ಲ..ಸ್ಮಶಾನ ವೈರಾಗ್ಯದ ಬಗ್ಗೆ ನೀವು ಬರೆದ ಸಾಲು ಓದಿ ಈ ಯೋಚನೆ ಬಂತು..ತೀರಾ ಅಸಹಾಯಕರಾದಾಗ ಮಾತ್ರವೇ ನಮಗೆ ಬೇರೆಯವರ ಬೆಲೆ ತಿಳಿದೀತು. "ಮಾಕುರು ಧನಜನ ಯೌವನ ಗರ್ವಂ..ಹರತಿ ನಿಮೇಷಾತ್ ಕಾಲಃ ಸರ್ವಂ "ಎನ್ನುವುದು ನಿಜವಲ್ಲವೆ?