ಜಾಲತಾಣ ನಿರ್ವಾಹಕರಿಗೂ ವೇದಿಕೆ ಕಲ್ಪಿಸಿದ ಕಟೀಲು ಮೇಳ


PHOTO: SUNIL BANGERA YEKKARU



 

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಯಾವಾಗ ಆರಂಭವಾದದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಮಂಡಳಿಯ ಎರಡನೇ ಮೇಳ 1975ರಲ್ಲಿ, ಮೂರನೇ ಮೇಳ 1982ರಲ್ಲಿ, ನಾಲ್ಕನೇ ಮೇಳ 1993ರಲ್ಲಿ, ಐದನೇ ಮೇಳ 2010ರಲ್ಲಿ, ಆರನೇ ಮೇಳ 2013ರಲ್ಲಿ ಆರಂಭವಾಗಿತ್ತು. ಈಗ ವರ್ಷ ನ.16ರಿಂದ ಕಟೀಲು ಯಕ್ಷಗಾನ ಮಂಡಳಿ ಏಳನೇ ಮೇಳದ ಜೊತೆ ಈ ಸಾಲಿನ ದಿಗ್ವಿಜಯೋತ್ಸವಕ್ಕೆ ಹೊರಡಲಿದೆ. ಕಟೀಲು ಮೇಳದ ಆಟ ಆಡಿಸುವುದೂ ಹರಿಕೆ, ಸೇವೆ, ನೋಡುವುದೂ ಹರಿಕೆ, ಸೇವೆ ಎಂಬ ಭಾವ ಭಕ್ತರದ್ದು. ಕಟೀಲು ಮೇಳದ ಆಟಗಳು ಹರಿಕೆ ಆಟಗಳು. ದೇವಿಯೇ ತಮ್ಮೂರಿಗೆ ಬಂದು ಹರಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು, ಸೇವಾದಾರರದ್ದು. ಕಟೀಲು ಏಳನೇ ಮೇಳ ಆರಂಭದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಯಕ್ಷ ಸಪ್ತಾಹ ಹೆಸರಿನಲ್ಲಿ ನ.9 ಭಾನುವಾರದಿಂದ ಮುಂದಿನ ಶನಿವಾರದ ತನಕ ಯಕ್ಷಸಪ್ತಾಹ ಎಂಬ ಸರಣಿ ಕಾರ್ಯಕ್ರಮಗಳನ್ನು ಮೇಳ ಹಾಗೂ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

 

ಇದರ ಮೂರನೇ ಕಾರ್ಯಕ್ರಮ ನ.11 ಮಂಗಳವಾರ ಸಂಜೆ ಕಟೀಲು ಕುದ್ರು ಭ್ರಾಮರೀವನದಲ್ಲಿ ನಡೆಯಿತು.  “ಕಟೀಲು ಹಾಗೂ ಯಕ್ಷಗಾನ ಮೇಳಗಳ ಯೂಟ್ಯೂಬ್, ಫೇಸ್ಬುಕ್ ಪ್ರಸಾರಕರು, ಛಾಯಾಗ್ರಾಹಕರು, ವಾಟ್ಸಪ್ ವೇದಿಕೆಗಳ ಪ್ರಮುಖರು, ಪ್ರೇಕ್ಷಕರ ಸಮಾವೇಶ”. ಇವರನ್ನೆಲ್ಲ ಕರೆಸಿ ಅವರಿಂದ ಜಾಲತಾಣದ ಸಂವಹನದ ಬಗ್ಗೆ, ಮೇಳಗಳಿಂದ ಅವರ ನಿರೀಕ್ಷೆ, ಬದಲಾವಣೆ ಮತ್ತು ಸುಧಾರಣೆ ಬಗ್ಗೆ ಬಹಿರಂಗವಾಗಿ ಅನಿಸಿಕೆ ಸ್ವೀಕರಿಸಿ, ಅಭಿಪ್ರಾಯ ಮಂಡನೆಗೆ ಅವಕಾಶ ಕಲ್ಪಿಸುವುದು ಈ ಸಮಾವೇಶದ ಉದ್ದೇಶವಾಗಿತ್ತು. ಆಹ್ವಾನಿತರಾಗಿ ಬಂದ ಜಾಲತಾಣದ ಸಕ್ರಿಯರು ಸಮಾವೇಶದಲ್ಲಿ ಪಾಲ್ಗೊಂಡರು  ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ಸಂಪನ್ನಗೊಂಡಿತು ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

 

2014ರಿಂದ ಮೊದಲ್ಗೊಂಡು ಕಳೆದ 11 ವರ್ಷಗಳಿಂದ “ಬಲ್ಲಿರೇನಯ್ಯ” ಹೆಸರಿನ ಯಕ್ಷಗಾನ ವಾಟ್ಸಪ್ ಗ್ರೂಪಿನ ಸಂಚಾಲಕನಾಗಿ ನಾನಿರುವ ಹಿನ್ನೆಲೆಯಲ್ಲಿ ನನಗೂ ಕಾರ್ಯಕ್ರಮದಲ್ಲಿ ಈ ಗ್ರೂಪಿನ ಪ್ರತಿನಿಧಿಯಾಗಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಸಿಕ್ಕಿದ ಅವಕಾಶ ಬಳಸಿ ನಾನು ಆಸ್ರಣ್ಣ ಬಂಧುಗಳು ಹಾಗೂ ಮೇಳದ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿರಿಸಿದೆ.

1)      ಇತರ ಮೇಳಗಳಂತೆ ಕಟೀಲು ಮೇಳಗಳದ್ದೂ ಸೆಟ್ ವೈಸ್ ಕಲಾವಿದರ ಪಟ್ಟಿ ಸಿದ್ಧಪಡಿಸಬೇಕು, ಸೇವಾದಾರರು ಮುದ್ರಿಸುವ ಕರಪತ್ರದಲ್ಲಿ ಕಟೀಲು ಮೇಳದ ಹಿಮ್ಮೇಳ-ಮುಮ್ಮೇಳ ಕಲಾವಿದರ ಹೆಸರು ಇರಬೇಕು.

2)      ಈಗಾಗಲೇ ವಿ ಲವ್ ಕಟೀಲು ಮೇಳಾಸ್ ಗ್ರೂಪಿನವರ ಶ್ರಮದಿಂದ ಪ್ರತಿದಿನದ ಕಟೀಲು ಮೇಳಗಳ ಬಯಲಾಟ ಪ್ರಸಂಗ ವಿವರಗಳು ಜಾಲತಾಣಗಳ ಮೂಲಕ ಜನರನ್ನು ತಲುಪುತ್ತಿದೆ. ಇದರ ಮುಂದುವರಿದ ಭಾಗವಾಗಿ ಮೇಳಗಳ ವತಿಯಿಂದಲೇ ಅಧಿಕೃತವಾಗಿ ಆ ದಿನದ ಆಟದ ಪ್ರಸಂಗ, ಕಲಾವಿದರ ಪಾತ್ರ ಹಂಚಿಕೆ ಹಾಗೂ ಆಟದ ಲೊಕೇಶನನ್ನು ಸಿದ್ಧಪಡಿಸಿ (ಏಳೂ ಮೇಳಗಳದ್ದು) ವಿವಿಧ ಜಾಲತಾಣ ಪ್ರಮುಖರಿಗೆ ಕಳುಹಿಸಬೇಕು. ಜಾಲತಾಣ ವೇದಿಕೆಗಳ ಮೂಲಕ ಈ ಮಾಹಿತಿ ದೈನಂದಿನವಾಗಿ ಜನರನ್ನು ತಲುಪಬೇಕು.

3)      ಯುವ ಕಲಾವಿದರಲ್ಲಿ ಮಾತುಗಾರಿಕೆ ಅಭ್ಯಾಸದ ಹಿನ್ನೆಲೆಯಲ್ಲಿ ಕಟೀಲು ಮೇಳದ ಯುವ ಕಲಾವಿದರಿಗಾಗಿಯೇ ತಾಳಮದ್ದಳೆ ಕಾರ್ಯಾಗಾರ, ಕಮ್ಮಟ ಮತ್ತು ತಾಳಮದ್ದಳೆ ಪ್ರದರ್ಶನ ಏರ್ಪಡಿಸಬೇಕು.

4)      ಕಟೀಲು ಮೇಳದಲ್ಲಿ ಮಾತ್ರ ಕೋಡಂಗಿ ಹಾಗೂ ಪೀಠಿಕೆ ಸ್ತ್ರೀವೇಷಗಳನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಆದರೆ, ಕಟೀಲು ಮೇಳ ಕಾಲಮಿತಿಗೆ ಒಳಪಟ್ಟ ಬಳಿಕ ಪೀಠಿಕೆ ಸ್ತ್ರೀವೇಷ ಮೇಳ ಹೊರಡುವಾಗ ಮತ್ತು ಪತ್ತನಾಜೆ ದಿವಸ ಮಾತ್ರ ಪ್ರದರ್ಶನ ಕಾಣುತ್ತಿದೆ. ಮುಂದಿನ ಪೀಳಿಗೆಗೆ ಇದನ್ನು ತಲುಪಿಸುವ ದೃಷ್ಟಿಯಿಂದ ಈ ವೇಷಗಳನ್ನು ಎಷ್ಟೇ ಕಷ್ಟವಾದರೂ ಉಳಿಸಿಕೊಳ್ಳಬೇಕು.

 

ಇಷ್ಟು ಬೇಡಿಕೆಗಳಿಗೆ ದೇವಳದ ಆನುವಂಶಿಕ ಅರ್ಚಕರಾದ ಶ್ರೀಹರಿನಾರಾಯಣ ದಾಸ ಆಸ್ರಣ್ಣರು ಸ್ಪಂದಿಸಿದ್ದು, ಪ್ರತಿ ಬೇಡಿಕೆಗಳನ್ನೂ ಮೇಳದ ಯಜಮಾನರ ಜೊತೆ (ಅವರು ಉಪಸ್ಥಿತರಿದ್ದರು) ಚರ್ಚಿಸಿ ಜಾರಿಗೆ ತರುವ ಪೂರ್ಣ ಭರವಸೆ ನೀಡಿದ್ದಾರೆ. ಕಾಲಮಿತಿಗೆ ಒಳಪಟ್ಟು ವ್ಯವಹರಿಸಬೇಕಾದ ಅನಿವಾರ್ಯತೆಯನ್ನೂ ಅವರು ವಿವರಿಸಿದ್ದಾರೆ.

 

ಈ ಬೇಡಿಕೆಗಳ ಹೊರತು ನಾನು ಮಂಡಿಸಿದ ವಿಚಾರಗಳು

1)      ಜಾಲತಾಣಗಳಲ್ಲಿ ಅಡ್ಮಿನ್ ಗಳಾಗಿ ಗ್ರೂಪುಗಳಲ್ಲಿ ನಾವು ಹಂಚುವ ವಿಚಾರಗಳಲ್ಲಿ ನಮಗೆ ಬದ್ಧತೆ ಬೇಕು. ಅಸ್ಪಷ್ಟ, ಅಸತ್ಯ, ಸಂಗತಿಗಳನ್ನು ಶೇರ್ ಮಾಡಲೇಬಾರದು. ಅದು ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಫಾರ್ವರ್ಡ್ ಆಗುತ್ತವೆ ಎಂಬ ಪ್ರಜ್ಞೆ ಅಗತ್ಯ.

2)      ಯಾರೇ ಸೆರೆ ಹಿಡಿದ ಫೋಟೋ,ವಿಡಿಯೋ ತುಣುಕುಗಳನ್ನು ಮರು ಬಳಕೆ ಮಾಡುವಾಗ ಮೂಲ ಕರ್ತೃವಿಗೆ ಕೃತಜ್ಞತೆ ಸಲ್ಲಿಸಲೇಬೇಕು. ಅದು ಅವರ ಬೌದ್ಧಿಕ ಆಸ್ತಿ. ಬೇರೆಯವರ ಫೋಟೋ,ವೀಡಿಯೋ ಕದ್ದು ನಮ್ಮದೇ ಎಂಬಂತೆ ಬಿಂಬಿಸಿ ಬಳಸುವುದು ಸರ್ವಥಾ ಸರಿಯಲ್ಲ.

3)      ಲೈವ್ ಎಂಬುದು ಈ ಹೊತ್ತಿನ ಅನಿವಾರ್ಯತೆ. ನನ್ನಂತೆ ರಾತ್ರಿ ಆಟಗಳಿಗೆ ಹೋಗಲಾಗದ ಅಥವಾ ವಿದೇಶಗಳಲ್ಲಿರುವ ಮಂದಿಗೆ ಆಟದ ಜೊತೆ ಕನೆಕ್ಟೆಡ್ ಆಗಿರಲು ಲೈವ್ ಸಹಾಯ ಮಾಡುತ್ತದೆ. ಲೈವ್ ಇದೆ ಎಂಬ ಕಾರಣಕ್ಕೆ ಮಾತ್ರ ಆಟಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿರುವುದಲ್ಲ...

4)      ಯಕ್ಷಗಾನ ಯೂಟ್ಯೂಬ್ ವೀಡಿಯೋಗಳಿಗೆ ಬಳಸುವ ಥಂಬ್ ನೈಲ್ ನಲ್ಲಿನ ಅಸಂಬಂಧ ಶೀರ್ಷಿಕೆ, ಅಪ್ರಸ್ತುತ ವಾಕ್ಯಗಳನ್ನು ಬಳಸುವುದು ಖಂಡಿತಾ ಸಭ್ಯತೆ ಅಲ್ಲ.

ನನ್ನ ಹೊರತು ಹಿರಿಯರಾದ ಮನೋಹರ ಕುಂದರ್, ಸತೀಶ್ ಮಂಜೇಶ್ವರ, ಸಿತ್ಲ ರಂಗನಾಥ ರಾವ್, ದುರ್ಗಾಪ್ರಸಾದ ದಿವಾಣ, ಉದಯ ಕಂಬಾರು, ನಾಗೇಶ ಆಚಾರ್ಯ, ಹರಿಪ್ರಸಾದ್ ಶೆಟ್ಟಿ, ಆತ್ಮರಂಜನ್ ಶೆಟ್ಟಿ, ಯಕ್ಷಮಾಧವ ಸಹಿತ ಅನೇಕರು ಮುಕ್ತವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಪ್ರತಿ ಜಿಜ್ಞಾಸೆಗೂ ಹರಿನಾರಾಯಣದಾಸ ಆಸ್ರಣ್ಣರು ಹಾಗೂ ಕಮಲಾದೇವಿ ಪ್ರಸಾದ ಆಸ್ರಣ್ಣರು ಸೂಕ್ತ ಉತ್ತರ ಹಾಗೂ ಸ್ಪಷ್ಟೀಕರಣ ಕೊಟ್ಟಿದ್ದು, ಹಲವು ಬೇಡಿಕೆಗಳನ್ನು ಸಭೆಯಲ್ಲೇ ಮೇಳದ ಸಂಚಾಲಕರಿಗೆ ಮನದಟ್ಟು ಮಾಡಿಸಿದ್ದಾರೆ. (ಇದರ ವೀಡಿಯೋ ತುಣುಕುಗಳನ್ನು ನಾನು ಈಗಾಗಲೇ ಗ್ರೂಪಿನಲ್ಲಿ ಶೇರ್ ಮಾಡಿದ್ದೇನೆ).

ಮೇಳದ ವೇಷಗಳಲ್ಲಿ ಆಗಬೇಕಾದ ಸುಧಾರಣೆ, ಯೂಟ್ಯೂಬ್ ಲೈವ್ ವೇಳೆ ಕಾಣಿಸಿಕೊಳ್ಳುವ ಅಸಭ್ಯ, ಅಸಂಬದ್ಧ ಕಮೆಂಟುಗಳು, ರಂಗಸ್ಥಳ ಸಂರಚನೆ, ಕಿರೀಟಗಳ ಅನಿವಾರ್ಯತೆ, ಹಾಸ್ಯಗಾರರು ಬಳಸುವ ಕೆಲವು ಪದಗಳ ಕುರಿತು ಆಕ್ಷೇಪ ಸೇರಿದಂತೆ ಅನೇಕ ವಿಚಾರಗಳು ಸಂವಾದದಲ್ಲಿ ಬೆಳಕಿಗೆ ಬಂದವು.

 

ಕ್ಷೇತ್ರದ ಆನುವಂಶಿಕ ಅರ್ಚಕರಾದ ವಾಸುದೇವ ಆಸ್ರಣ್ಣರು, ಶ್ರೀ ಶ್ರೀನಿವಾಸ ಆಸ್ರಣ್ಣರು, ಹಿರಿಯ ಯೂಟ್ಯೂಬರ್ ಶ್ರೀ ರಾಧಾಕೃಷ್ಣ ಭಟ್-ಉಮಾ ಕೊಂಗೋಟ್ ದಂಪತಿ ಮತ್ತಿತರರು ಉಪಸ್ಥಿತರಿದ್ದರು. ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಶ್ರೀ ಲೀಲಾಕ್ಷ ಕರ್ಕೇರ ಸಮಾವೇಶ ಉದ್ಘಾಟಿಸಿ, ಶುಭ ಹಾರೈಸಿದರು.

 

ಯಕ್ಷಗಾನದ ಸಾಮಾನ್ಯ ಪ್ರೇಕ್ಷಕರಾಗಿ ಓರ್ವ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿರುವವರನ್ನೂ ಕ್ಷೇತ್ರಕ್ಕೆ ಕರೆಸಿ, ನಮ್ಮ ಸಲಹೆಗಳಿಗೆ ಸಹನೆಯಿಂದ ಕಿವಿಗೊಟ್ಟು, ಅದಕ್ಕೆ ಸೂಕ್ತ ಉತ್ತರವನ್ನೂ ನೀಡಿ ಗೌರವಿಸಿದ ಕಟೀಲು ಮೇಳದ ಆಡಳಿತ ಮಂಡಳಿ,ಕ್ಷೇತ್ರದ ಆಸ್ರಣ್ಣ ಬಂಧುಗಳು, ಕಾರ್ಯಕ್ರಮದ ಹಿಂದೆ ಸಕ್ರಿಯರಾಗಿ ದುಡಿಯುತ್ತಿರುವ ಗೆಳೆಯ ಮಿಥುನ್ ಕೊಡೆತ್ತೂರು, ಯಕ್ಷಪ್ರಭ ಸಹ ಸಂಪಾದಕ, ಹಿರಿಯ ಕಲಾವಿದ ಡಾ.ಶ್ರುತಕೀರ್ತಿ ಸಹಿತ ಎಲ್ಲರಿಗೂ ನಮ್ಮ ಬಲ್ಲಿರೇನಯ್ಯ ಯಕ್ಷಕೂಟದ ಪರವಾಗಿ ಅವಕಾಶಕ್ಕೆ ಧನ್ಯವಾದಗಳು.

ಸುಧಾರಣೆಗಳು, ಅಪಸವ್ಯಗಳ ಬಗ್ಗೆ ಎಲ್ಲೆಲ್ಲೋ ಕೂತು ಮಾತನಾಡುವ ಬದಲು ಸಿಕ್ಕಿದ ಅಧಿಕೃತ ವೇದಿಕೆಯಲ್ಲಿ ಸಂವಾದ ನಡೆದರೆ ಫಲಿತಾಂಶದ ನಿರೀಕ್ಷೆ ಜಾಸ್ತಿ ಎಂಬುದು ನನ್ನ ನಂಬಿಕೆ.



 

-ಕೃಷ್ಣಮೋಹನ ತಲೆಂಗಳ, ಅಡ್ಮಿನ್, ಬಲ್ಲಿರೇನಯ್ಯ ಯಕ್ಷಕೂಟ ವಾಟ್ಸಪ್ ಬಳಗ (SINCE 2014).

No comments:

Popular Posts