ಮೈ ಆಟೋಗ್ರಾಫ್...
ಕಾಲೇಜ್ ಬಿಟ್ಟು ಹೋಗುವ ಘಳಿಗೆಯಲ್ಲಿ ಆಟೋಗ್ರಾಫ್ ಹಿಡ್ಕೊಂಡು ಸುತ್ತಾಡುವ ಕಾಲ ಹೋಯ್ತು ಅನ್ನಿಸ್ತದೆ. ಅಸಲಿಗೆ ಆಟೋಗ್ರಾಫ್ ಎಂಬ ಕೆಲವು ಗಾಂಧಿವಾದಿ ವಿದ್ಯಾರ್ಥಿಗಳ ಪಾಲಿನ ಭಗವದ್ಗೀತೆ ಅರ್ಥ ಕಳೆದುಕೊಂಡಿದೆ ಅನ್ಸಲ್ವ...
ಇಷ್ಟಕ್ಕೂ ಕಾಲೇಜ್ ಬಿಟ್ಟ ಕೂಡಲೇ ದೇಹ ದೂರ ದೂರ ಹೋಗಬಹುದಲ್ಲದೆ, ಸಂಪರ್ಕ, ಸಮನ್ವಯ, ಮಾನಸಿಕ ಸಾಮಿಪ್ಯ ಎಲ್ಲಿಗೂ ಹೋಗಲ್ಲ. ಅಲ್ವೇನ್ರೀ...
ಅದು ಹೇಗೆ ದೂರವಾಗ್ತಾರೆ ಹೇಳಿ...ವಾಟ್ಸಾಪ್ ಒಂದಿದ್ದರೆ ಸಾಕಲ್ವ...ಕ್ಷಣ ಕ್ಷಣದ ಮಾಹಿತಿಯನ್ನು ನೇರ-ದಿಟ್ಟ-ನಿರಂತರ ನೀವು ಕುಳಿತಲ್ಲಿ, ಮಲಗಿದಲ್ಲಿಗೆ ತಲುಪಿಸುವಾಗ, ಫೇಸ್ ಬುಕ್ನಲ್ಲಿ ಘಳಿಗೆ ಘಳಿಗೆಯ ಫೋಟೊಗಳು ಅಪ್ ಲೋಡ್ ಆಗ್ತಾ ಇರಬೇಕಾದರೆ, ಗೂಗಲ್ ಹ್ಯಾಂಗೌಟ್ ದಿನಪೂರ್ತಿ ಆನ್ ಲೈನ್ ನಲ್ಲಿ ಇರುವಾಗ ಇನ್ನು ಈ ಆಟೋಗ್ರಾಫ್ ಹಿಡ್ಕೊಂಡು ಏನು ಮಾಡ್ತೀರಪ್ಪ...
10 ವರ್ಷಗಳ ಹಿಂದೆ ಗ್ಲೋಬಲ್ ವಿಲೇಜ್ ಎಂದು ಬೊಬ್ಬೆ ಕೇಳಿ ಬರುತ್ತಿದ್ದಾಗ ಅದರ ಅರ್ಥ ನನಗೆ ಅಷ್ಟು ಆಗಿರಲಿಲ್ಲ. ಈಗಂತೂ ಸಾಕ್ಷಾತ್ಕಾರವಾಗಿದೆ. ನನ್ನ ಪಕ್ಕದಲ್ಲಿ ಕೂರವವನೋ, ಆಚೆ ಮನೆಯಲ್ಲಿ ಇರುವವನಿಗಿಂತ ಹೆಚ್ಚಿನ ಸಂಪರ್ಕ ಗಲ್ಫ್ ನಲ್ಲಿ ಇರುವ ನನ್ನ ಸ್ನೇಹಿತನ ಜೊತೆ ವಾಟ್ಸಪ್ ನಲ್ಲಿ ಸಾಧ್ಯವಾಗಿದೆ. ಆ ಗೆಳೆಯ ಎಲ್ಲೇ ಇದ್ದರೂ ಅವನ ಚಿತ್ರವನ್ನು, ಮಾತನ್ನು, ಕಮೆಂಟ್ಸನ್ನು, ಕವನಗಳ ಸಾಲನ್ನೂ ಆ ಕ್ಷಣಕ್ಕೇ ನಾನಿಲ್ಲಿ ಕುಳಿತು ಓದಲು ಸಾಧ್ಯ...ಮತ್ತೆ ಅವನು ದೂರವಾಗುವ ಪ್ರಶ್ನೆ ಎಲ್ಲಿ ಬಂತು. ಅವನ ವಿಳಾಸ, ಲ್ಯಾಂಡ್ ಲೈನ್ ಸಂಖ್ಯೆಯನ್ನು ಆಟೋಗ್ರಾಫ್ ಪುಸ್ತಕದಲ್ಲಿ ಸಂಗ್ರಹಿಸುವ ಇನ್ನು ಅಗತ್ಯವೇ ಇಲ್ಲ.
ವಾಸ್ತವವಾಗಿ ಯಾರು ಯಾರಿಂದಲೂ ದೂರವಾಗುವ ಪ್ರಶ್ನೆಯೇ ಈಗಿಲ್ಲ. ಆ ಕಾಲ ಕಳೆದು ಹೋಯ್ತು. ದೂರವಾಗಿರುವ ಈ ತಂತ್ರಜ್ಞಾನಗಳು ಬಿಡುವುದಿಲ್ಲ. ಮಾನಸಿಕವಾಗಿ ಹತ್ತಿರ-ದೂರವಿರೋದು ಅವರವರ ನಡವಳಿಕೆ, ಇಷ್ಟಾನಿಷ್ಟಗಳಿಗೆ ಬಿಟ್ಟ ವಿಚಾರ.
ನಾನು ಪಿಯುಸಿ, ಡಿಗ್ರಿ ಓದುತ್ತಿದ್ದ ದಿನಗಳಲ್ಲಿ ಆಟೋಗ್ರಾಫ್ ಪುಸ್ತಕವನ್ನು ಮೇಷ್ಟ್ರುಗಳು, ಸ್ನೇಹಿತರಿಂದ ತುಂಬಿಸುವ ಮಹಾನ್ ಕಾರ್ಯ ಬಹಳ ಎಕ್ಸೈಟಿಂಗ್ ಇರ್ತಿತ್ತು. ಫೆಬ್ರವರಿ ಬಂದ ಕೂಡಲೇ ಡೈರಿ ಪುಸ್ತಕವೊಂದನ್ನು ತಗೊಳ್ಳುವುದು...ಅದರ ಮುಖಪುಟದಲ್ಲಿ ಚಂದದ ಅಕ್ಷರ ಇರೋರ ಕೈನಲ್ಲಿ ನಮ್ಮ ಹೆಸರನ್ನು ಕಲಾತ್ಮಾಕವಾಗಿ ಬರ್ಸೋದು...ನಂತರ ಮೊದಲು ಮೇಷ್ಟ್ರುಗಳಿಗೆ ಪಸ್ತಕ ಕೊಡೋದು (ಯಾಕಂದ್ರೆ ಸ್ನೇಹಿತರು ಬರೆದ ನಂತರ ಮೇಷ್ಟ್ರಗೆ ಕೊಟ್ರೆ, ಅವರೆಲ್ಲಾದರೂ ಓದಿದರೆ ಅಂತ ಭಯ...ಮೇಷ್ಟ್ರುಗಳೂ ಅಷ್ಟೇ, ಮಧ್ಯಾಹ್ನ ಬಂದು ಕಲೆಕ್ಟ್ ಮಾಡ್ಕೊಳ್ಳಿ ಅಂತ ಮೇಜಿನಲ್ಲಿ ಇಡ್ತಿದ್ರು. ಸಂಜೆ ಬಂದು ಕುತೂಹಲದಿಂದ ಅವರೇನು ಬರ್ದಿದ್ದಾರೆ ಅಂತ ನೋಡಿದ್ರೆ, ಮಣ್ಣಾಂಗಟ್ಟಿಯೂ ಇಲ್ಲ. ವೈದ್ಯರ ಪ್ರಿಸ್ಕ್ರಿಪ್ಶನ್ ಥರ ಆಲ್ ದ ಬೆಸ್ಟ್ ಅಂತ ಅರ್ಥವಾಗದ ಇಂಗ್ಲಿಷ್ನಲ್ಲಿ ನಾಲ್ಕು ಸಾಲು ಗೀಚಿಡುತ್ತಿದ್ದರು. (ಅವರಾದ್ರೂ ಪಾಪ ಏನು ಮಾಡಿಯಾರು, 50-60 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರತ್ಯೇಕ ಏನು ತಾನೆ ಬರೆದಾರು)...
ಎಲ್ಲಾ ಮೇಷ್ಟ್ರುಆಟೋಗ್ರಾಫ್ ಕೊಟ್ಟಾದ ಮೇಲೆ ಸ್ನೇಹಿತರ ಸರದಿ. ಅದರಲ್ಲೂ ಒಂದು ವಿಶೇಷವಿದೆ. ಮನಸ್ಸಿಗೆ ಹತ್ತಿರವಾದ ನಾಲ್ಕೈದು ಮಂದಿ ಸ್ನೇಹಿತರು ತಮ್ಮ ವಿಶಿಷ್ಟ ಅನುಭವಾಮೃತ ಬರೆಯಲು ನಾಲ್ಕೈದು ಪುಟಗಳನ್ನು ರಿಸರ್ವ್ ಮಾಡಿ ಇಡುತ್ತಿದ್ದರು. ಅಲ್ಲಿ ಬೇರೆ ಯಾರೂ ಬರೆಯುವ ಹಾಗಿಲ್ಲ. ಪರುಸೊತ್ತಲ್ಲಿ ಮನೆಗೆ ಆಟೋಗ್ರಾಫ್ ಪುಸ್ತಕ ಕೊಂಡು ಹೋಗುವುದೇನು...ಅದಕ್ಕೆ ಬೇರೆ ಬೇರೆ ಸ್ಟಿಕರ್ಸ್ ಅಂಟಿಸುವುದೇನು...ಯಾರ್ಯಾರದ್ದೋ ಕವನಗಳ ಸಾಲು ಕದ್ದು ಬರೆಯವುದೇನು....ಹೀಗೆ ತುಂಬಾ ಹೃದಯಂಗಮವಾಗಿರುತ್ತಿತ್ತು. ಅವನ್ನೆಲ್ಲಾ ಮತ್ತೆ ಕುಳಿತು ಓದಿದರೆ ಎಂದಿಗೂ ಬೋರು ಎನಿಸಲಾರದು. ಮತ್ತೆ ಡೈರಿಯ ಪುಟದಲ್ಲಿ ತಮ್ಮ ಹುಟ್ಟಿದ ದಿನದಂದು ಆ ತಾರೀಕಿಗೆ ರೌಂಡಪ್ ಮಾಡಿ ಮೈ ಫಸ್ಟ್ ಕ್ರೈ ಅಂತ ಬರೆಯಲು ಮರೆಯುತ್ತಿರಲಿಲ್ಲ. ಅಂದಾದರೂ ವಿಷ್ ಮಾಡಲಿ ಅನ್ನುವ ಸ್ವಾರ್ಥ ಇತ್ತರೂ ಇದ್ದೀತು...
ಆಟೋಗ್ರಾಫ್ ಕೊನೆಗೆ ಪ್ಲೀಸ್ ಸೆಂಡ್ ಯುವರ್ ವೆಡ್ಡಿಂಗ್ ಕಾರ್ಡ್ ಅಂತ ತಪ್ಪು ತಪ್ಪು ಸ್ಪೆಲ್ಲಿಂಗ್ ನಲ್ಲಿ (ನಮ್ಮದೆಲ್ಲ ಇಂಗ್ಲಿಷ್ ವೀಕು) ಬರೆಯುವುದು ಇನ್ನೊಂದು ವಿಶೇಷ ಆಕರ್ಷಣೆಗಳಲ್ಲಿ ಒಂದು.
ಮತ್ತೆ ಕ್ಲಾಸಿನಲ್ಲಿ ಮಹಿಳಾ ಸಹಪಾಠಿಗಳಲ್ಲಿ ಮಾತನಾಡುತ್ತಿದ್ದುದೇ ಕಡಿಮೆ (ಹಳ್ಳಿ ಕಾಲೇಜ್). ಕಷ್ಟಪಟ್ಟು ಆಟೋಗ್ರಾಫ್ ಪುಸ್ತಕ ಕೊಟ್ಟರೆ, ನಾಲ್ಕೈದು ಹುಡುಗಿಯರು ಸೇರಿ ಬರೆದ ಆಟೋಗ್ರಾಫ್ ದಯಪಾಲಿಸುತ್ತಿದ್ದರು.. ಮತ್ತೆ ಅವರೇನು ಬರೆದಿದ್ದಾರೆ ಎಂದು ಓದುವ ಪುಳಕ. ಬಹಳಷ್ಟು ಹುಡುಗಿಯರು ಯಾಕೆ ಅಂತ ಗೊತ್ತಿಲ್ಲ, ಪ್ರೀತಿಯ ಸಹೋದರ.... ಅಂತ ಶುರು ಮಾಡುತ್ತಿದ್ದರು, ಅದು ಬಹುಶಃ ಪರಂಪರೆ ಇದ್ದೀತು. ಡಿಯರ್ ಫ್ರೆಂಡ್ ಅಂತ ಯಾರಾದ್ರೂ ಬರೆದರೆ ಆಕೆ ತುಂಬಾ ಬೋಲ್ಡ್ ಅಂತ ಅರ್ಥ. (ಪೇಟೆ ಕಾಲೇಜು ಮಂದಿಗೆ ಈ ಸ್ವಾರಸ್ಯ ಅರ್ಥ ಆಗ್ಲಿಕಿಲ್ಲ....
ಮತ್ತೆ ಬಾಳೊಂದು ಜೀವನ.ಅನುರಾಗ ಬಂಧನ...ಇತ್ಯಾದಿ ಕ್ಲೀಷೆ ಹಿಡಿದ ವಾಕ್ಯಗಳನ್ನೇ ಬರೆದಿದ್ದನ್ನೇ ಬರೆಯುವವರೂ ಇದ್ದರು....ಒಟ್ಟಿನಲ್ಲಿ ಸುಮಾರು ಎರಡು ತಿಂಗಳ ಕಾಲ ಸತತವಾಗಿ ಎಲ್ಲರಿಂದಲೂ ಬರೆಸಿ, ಭಾವನೆಗಳೊಂದಿಗೆ ಭಾರವಾದ ಪುಸ್ತಕದೊಂದಿಗೆ ಕಾಲೇಜಿನಿಂದ ಹೊರ ಬಂದಾಗ ಮತ್ತೆ ಅವರು ಬದುಕಿನಲ್ಲಿ ಸಿಗುತ್ತಾರೆಂಬ ಯಾವ ಗ್ಯಾರಂಟಿಯೂ ಇರಲಿಲ್ಲ. (ಇಂದಿಗೂ ಕೆಲವರು ಎಲ್ಲಿದ್ದಾರೆಂದೇ ಗೊತ್ತಿಲ್ಲ). ಆ ಕಾಲಕ್ಕೆ ಮೊಬೈಲ್, ಇಂಟರ್ನೆಟ್ ಎರಡೂ ಇರಲಿಲ್ಲ). ಸೋ, ಅಲ್ಲಿ ಕೊನೆಗೆ ಅವರು ಬರೆದಿರಬಹುದ ಅಂಚೆ ವಿಳಾಸ, ಫೋನ್ ಇದ್ದ ಕೆಲವೇ ಮಂದಿಯ ಲ್ಯಾಂಡ್ ಲೈನ್ ಸಂಖ್ಯೆಯಷ್ಟೇ ಅವರ ಜಾತಕ ಅಷ್ಟೆ.
ಈಗ ಕುಳಿತು ಆ ಆಟೋಗ್ರಾಪ್ ಪುಸ್ತಕ ಓದುವಾಗ ಆ ದಿನಗಳ ನೆನಪಾಗುತ್ತದೆ, ಹಳೆಯ ಸಿನಿಮಾ ರೀಲಿನ ಹಾಗೆ, ಎಲ್ಲರ ಮುಖ ನೆನಪಿಗೆ ಬರುತ್ತದೆ. ಈ ಆಟಗ್ರಾಫ್ ಪುಸ್ತಕದ ಸುಖ ಬಹುಶಃ ಇಂದು ಕಾಲೇಜುು ಬಿಡುವ ಮಂದಿಗೆ ಸಿಗಲಾರದು ಎಂದುಕೊಂಡಿದ್ದೇನೆ. ಯಾಕೆಂದರೆ ವಾಟ್ಸಪ್, ಹೈಕ್, ಹ್ಯಾಂಗೌಟ್, ಎಫ್ವಿ ಮೆಸೆಂಜರ್ ಎಲ್ಲಾ ಇದ್ದೂ...ಹೌ ಆರ್ ಯೂ ಅಂತ ಮೆಸೇಜ್ ಕಳುಹಿಸಿದರೂ ಉತ್ತರ ಕೊಡಲು ಪುರುಸೊತ್ತಿಲ್ಲದ ಮೇಲೆ ಇವಕ್ಕೆಲ್ಲಾ ಸಮಯ ಎಲ್ಲಿ ಸಿಕ್ಕೀತು..
ಒಂದಂತೂ ಖುಷಿ ಈಗಿನ ಸ್ನೇಹಿತರು ದೂರ ದೂರವಾಗುವ ಪ್ರಶ್ನೆಯೇ ಇಲ್ಲ. ಚಾಟ್ ಮಾಡಲು ಸಮಯ ಸಿಕ್ಕರೆ ಸಾಕು ಅಷ್ಟು..ನಿಮ್ಮಲ್ಲೂ ಹಳೆ ಆಟೋಗ್ರಾಫ್ ಪುಸ್ತಕ ಇದ್ದರೆ ಧೂಳು ಕೊಡವಿ ಒಮ್ಮೆ ಓದಿ ರಿಫ್ರೆಶ್ ಆಗಿ, ಅದು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಒಂದು ಸಾಧನವೂ ಹೌದು!!!!
No comments:
Post a Comment