ಹರ್ ದಿಲ್ ಜೋ... ಪ್ಯಾರ್ ಕರೇಗಾ...


ವಿದಾಯವನ್ನೂ, ವಿಷಾದವನ್ನೂನಿಶ್ಯಬ್ದದಷ್ಟು ಪರಿಣಾಮಕಾರಿಯಾಗಿ ಇನ್ಯಾವುದೂ ಸಂವನಿಹಸಲಾರದಂತೆ. ಹೇಳದೆ, ಕೇಳದೆ ಸಹಜವಾಗಿ ಹುಟ್ಟುವ ಪ್ರೀತಿಯೂ ಹಾಗೆಯೇ ಅಲ್ವ...
ಪ್ರೀತಿ (ಯಾರ ನಡುವೆಯೇ ಇರಲಿ) ನಿಶ್ಯಬ್ಧ ಅನುಭೂತಿಯೋ ಅಥವಾ ಸಾರ್ವಜನಿಕ ಪ್ರದರ್ಶನಕ್ಕೋ ಅನ್ನುವ ಜಿಜ್ಞಾಸೆಯೂ ಬಹಳ ಸಲ ಕಾಡುವುದಿದೆ. ನಿಮ್ಮೊಳಗಿನ ಪ್ರೀತಯ ಒರತೆ ಅವನಿಗೆ, ಅವಳಿಗೆ, ಅಥವಾ ಅವರಿಗೆ (ನೀವು ಗೌರವಿಸುವ ಯಾವುದೇ ಜೀವ) ಕಾಣುವ ಅಂತರ್ ಗಂಗೆಯಾಗಿ ತಂಪು ನೀಡಿದರೆ ಸಾಲದೇ ಅಥವಾ...ಘಳಿಗೆಗೊಮ್ಮೆ ಐ ಮಿಸ್ ಯೂ...ಎನ್ನುತ್ತಲೋ, ಕೈ ಕೈ ಬೆಸೆದು, ಸುತ್ತಾಡಿ, ಅವರಿವರಿಗೆಲ್ಲ ನಿಮ್ಮ ಪ್ರೀತಿಯ ಆಳ ಅಗಾಧತೆ ಗೊತ್ತಾದ ಬಳಿಕ ಕ್ಷುಲ್ಲಕ ಕಾರಣಕ್ಕೆ ಬೇರ್ಪಡಬೇಕು ಅಂದುಕೊಳ್ಳುವುದು ಪ್ರೀತಿಯೋ... ಗೊತ್ತಿಲ್ಲ.

ಪ್ರೀತಿ ಫಾರ್ಮುಲಾ ಇಟ್ಕೊಂಡು ಮಾಡುವುದಲ್ಲವಲ್ಲ, ಹುಟ್ಟಿಕೊಳ್ಳುವುದು ಅನ್ನುವುದು ಸಹಜ ತಾನೆ, ಅದು ತಪ್ಪಲ್ಲವಲ್ಲ...ಆದರೆ ಅದನ್ನು ಹೇಗೆ ಪಾಲಿಸುತ್ತೀರಿ, ಹೇಗೆ ಜೋಪಾನವಾಗಿ ಕಾಪಿಡುತ್ತೀರಿ... ಹೇಗೆ ನಿರ್ವಹಿಸುತ್ತೀರಿ...ಹಾಗೂ ಹೇಗೆ ನವೀಕರಿಸುತ್ತೀರಿ (ನಿತ್ಯ ನೂತನ) ಅನ್ನುವುದು ಹೃದಯಗಳಿಗೆ ಬಿಟ್ಟ ವಿಚಾರ ಅಲ್ವೇ...

ಪ್ರೀತಿಯ ವಿಚಾರ ಬಿಟ್ಬಿಡೋಣ... ಅಸಲಿಗೆ ಅಕ್ಕಪಕ್ಕದವರು, ಒಡನಾಡಿಗಳು, ಸ್ನೇಹಿತರು, ಸಂಬಂಧಿಗಳ ಜೊತೆಗೆ ಹತ್ತು ಹಲವು ರೀತಿಯ ಸಂಬಂಧ, ಸಹಕಾರ, ಸಲುಗೆಗೆ ನಾವು ಪಾತ್ರಧಾರಿಗಳಾಗಿರುತ್ತೇವೆ. ಈ ಸಂಬಂಧದ ಬಂಧದೊಳಗೆ ಎಷ್ಟು ಮಂದಿಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ... ಸುಮ್ಮನೆ ಲೆಕ್ಕ ಹಾಕಿ ನೋಡಿ. ಸುಮಾರು ಶೇ.10 ಮಂದಿ ನಮಗೆ ಸರಿಯಾಗ ಅರ್ಥವಾಗಿರಲೂ ಸಾಕು. ಕೆಲವರು ಬೇಕೆಂದೇ ಒಗಟಾಗಿದ್ದರೆ, ಇನ್ನು ಕೆಲವರು ಅರ್ಥವಾದರು ಎಂಬಲ್ಲಿಗೆ ಅಪಾರ್ಥಕ್ಕೆ ಎಡೆ ಮಾಡಿರುತ್ತಾರೆ. ಮತ್ತೊಬ್ಬರ ಜೊತೆ 364 ದಿನಗಳ ಒಡನಾಟದ ಬಳಿಕ 365ನೇ ದಿನ ಏನೋ ಜಟಾಪಟಿ ಆದ ಮೇಲೆ ಹೇಳ್ತೀರಿ.... ಆ ಜನ ಹಾಗೆ ಅಂತ ಗೊತ್ತಿರ್ಲಿಲ್ಲ, ಇಷ್ಟು ದಿನ ಒಟ್ಟಗೆ ಇದ್ದೂ ನನ್ನ ಹತ್ರ ಏನೂ ಹೇಳಲಿಲ್ಲ ಅಂತ...

ಯಾಕೆ ಹೀಗೆ....

ನನಗನ್ನಿಸುವುದೇನೆಂದರೆ, ಯಾವುದೇ ಸಂಬಂಧ ಇರಲಿ...ಅದರ ಅರ್ಧಪಾಲು ಅಪಾರ್ಥಗಳಿಗೆ ಕಾರಣವಾಗುವುದು ನಮ್ಮ ನಿರೀಕ್ಷೆ. ನಮ್ಮಲ್ಲಿ ಬಹುಪಾಲು ಮಂದಿ ಒಂದು ಪೂರ್ವಾಗ್ರಹ ಇಟ್ಟುಕೊಂಡೇ ಸಂಬಂಧವನ್ನು ಬೆಳೆಸುತ್ತೇವೆ. ಅದರಲ್ಲಿ ನಮಗೇ ಅರಿವಿಲ್ಲದ ಸ್ವಾರ್ಥ, ಹೆಚ್ಚೇ ಆಗಬಹುದಾದ ನಿರೀಕ್ಷೆ, ಮತ್ತು ರುಚಿಗೆ ತಕ್ಕಷ್ಟು ತಪ್ಪು ಕಲ್ಪನೆಗಳು ಸೇರಿ ಕೊನೆಗೊಂದು ಅಪಾರ್ಥದ ಗೋಡೆ ಹುಟ್ಟಿಕೊಳ್ಳುತ್ತದೆ, ಹಾಗಂತ ನಿಮಗೆ ಅನ್ಸಲ್ವ...

ವ್ಯಕ್ತಿಯಿಂದ ವ್ಯಕ್ತಿಗೆ ನಡವಳಿಕೆ, ನಂಬಿಕೆ, ಪ್ರತಿಕ್ರಿಯೆ, ಯೋಚನಾ ಲಹರಿ ಭಿನ್ನ...ಪ್ರತಿಯೊಬ್ಬರಿಗೂ ತಮ್ಮ ನಡವಳಿಗೆ ಸರಿಯೆಂಬೇ ಹಮ್ಮು ಇರುವುದು ಸಹಜ. ನಾವು ವಿನಾ ಕಾರಣ ಹುಟ್ಟಿಕೊಳ್ಳುವ ಸಲುಗೆ, ಪ್ರೀತಿ, ಸ್ನೇಹವನ್ನು ವಿನಾಕಾರಣ, ನಿರೀಕ್ಷೆ ರಹಿತರಾಗಿ ಪಾಲಿಸುತ್ತಾ ಬಂದರೆ ಬಹುಷಃ ಆ ಬುನಾದಿ ಗಟ್ಟಿಯಾಗಿರುತ್ತದೆ.



ಸಮಸ್ಯೆ ಏನೆಂದರೆ, ನಾವು ಸ್ನೇಹಿಸುವವರು, ಪ್ರೀತಿಸುವವರು, ಪ್ರೀತಿಸಲ್ಪಡುವವರು ನಮ್ಮ ಮೂಗಿನ ನೇರಕ್ಕೆ, ನಮ್ಮ ನಿರೀಕ್ಷೆಗಳಿಗೆ, ನಮ್ಮ ಆದೇಶದಂತೆ, ನಮ್ಮ ನಡವಳಿಕೆಗೆ ಪೂರಕವಾಗಿ ಇರಬೇಕು (ಅದು ಸಹಜ ಮನೋಭಾವ) ಇರಬೇಕು ಎಂದು ನಿರೀಕ್ಷಿಸುತ್ತೇವೆ....ಈ ನಿರೀಕ್ಷೆಯೇ ಸಂಬಂಧವನ್ನು ಒಡೆಯುವುದು. ನೀನು ಜನ ಹೀಗೆಂದು ನಿರೀಕ್ಷಿಸಿರಲಿಲ್ಲ...ಎಂಬಲ್ಲಿಗೆ, ನಿರೀಕ್ಷೆ ಇರಿಸಿದವರು ನಾವೇ ಎಂಬುದು ಸ್ಪಷ್ಟ ತಾನೆ. ಹಾಗಾಗಿ ಅವರವರ ಇಷ್ಟದಂತೆ ಬದುಕುವ ಹಕ್ಕು, ಸ್ವಾತಂತ್ರ್ಯ ಅವರವರವರಿಗಿದೆ....ಅಲ್ಲಿ ಪ್ರೀತಿ, ಸ್ನೇಹ ಮಣಭಾರದ ಹೊರೆ ಹೊರಿಸುವ ಪೊಸೆಸಿವ್ ನೆಸ್ ಆದ ಕೂಡಲೇ ಸಂಬಂಧದ ಹಾಯಿ..ದಿಕ್ಕು ತಪ್ಪುತ್ತದೆ...ಅಂತ ನನ್ನ ಅನಿಸಿಕೆ.

ಹಾಗಾದ್ರೆ ನಮ್ಮ ಪ್ರೀತಿಪಾತ್ರರ ಮೇಲೆ ನಮಗೆ ಹಕ್ಕಿಲ್ವ...

ಖಂಡಿತಾ ಇರುತ್ತದೆ, ಆದರೆ ಅವರಿಗೂ ಒಂದು ಮನಸು, ಇಷ್ಟು ವರ್ಷ ಕಟ್ಟಿಕೊಂಡು ಬಂದ ಬದುಕು, ನಂಬಿಕೆ, ಕೌಟುಂಬಿಕ ಹಿನ್ನೆಲೆ ಎಲ್ಲಾ ಇರುತ್ತಲ್ವ...ಅದಕ್ಕನುಗುಣವಾಗಿ ಬೆಳೆಗಿರುತ್ತಾರೆ. ಸೋ...ಅವರ ಒಡನಾಟದಲ್ಲಿ ನಾವು ಕಟ್ಟಿಕೊಳ್ಳುವ ನಿರೀಕ್ಷೆ ಅಷ್ಟಕ್ಕೆ ಸೀಮಿತವಾಗಿದ್ದರೆ ಅದು ಆಪ್ಯಾಯಮಾನವೂ ಆಗಬಹುದೇನೋ...
ಹುಟ್ಟಿಕೊಂಡ ಪ್ರೀತಿ, ಗೌರವ ಯಾವುದು ತೋರಿಕೆಯ ಪ್ರೀತಿ (ಬಕೆಟ್ ಹಿಡಿಯುವುದು ಃ) ಯಾವುದು ಎಂಬದನ್ನು ಸಹೃದಯರೂ ಯಾರೂ ಗುರುತಿಸಬಹುದು. ತಮ್ಮ ಕೆಲಸವಾಗಬೇಕೆಂದು ಬಕೆಟ್ ಹಿಡಿದು ಮಾತನಾಡುವವರ ಮಾತಿನ ಮೋಡಿಗೆ ಸಿಲುಕಿ ಉಬ್ಬಿದರೆ ಬಹುಷಃ ಕೆಲಸ ಕೆಡಬಹುದೇ ವಿನಃ ನೈಜ ಪ್ರೀತಿಯ ಹಿಂದೆ ಸ್ವಾರ್ಥವಾಗಲಿ, ಮತ್ಸರವಾಗಲಿ, ಸ್ಪರ್ಧಾತ್ಮಕ ಧೋರಣೆಯಾಗಲಿ ಇರಬೇಕಿಲ್ಲ ಅಲ್ವೆ....

ಪ್ರೀತಿಪಾತ್ರರ ಸಾಧನೆ ನೋಡಿ ಮೌನವಾಗಿ ಆನಂದಿಸಬಲ್ಲ ಮನಸ್ಸು ನಿಮ್ಮೊಳಗಿದ್ದರೆ ಅಷ್ಟು ಸಾಕು.... ಸಾಧನೆಯ ಬಳಿಕ ಅದೊಂದು ಕೊರೆಯುವ ಕೀಟವಾಗಿ, ಸಣ್ಣದಾದ ಕೀಳರಿಮೆ, ಮತ್ಸರದ ಹೊಗೆ ನಿಮ್ಮೊಳಗೆ ಹುಟ್ಟು ಹಾಕಿದರೆ ನಿಮ್ಮ ಪ್ರೀತಿಯ ತಳಪಾಯವನ್ನು ಒರೆಸಿ ಕ್ಲೀನ್ ಮಾಡುವುದು ಒಳಿತು...
ಅಷ್ಟು ಮಾತ್ರವಲ್ಲ, ನಿಮ್ಮ ಪ್ರೀತಿಪಾತ್ರರ ಸಾಧನೆಯನ್ನು ಬಾಚಿ ತಬ್ಬಿ ಎತ್ತಿ ಹಿಡಿದು ಕಿಸ್ ಕೊಟ್ಟು ಅಭಿನಂದಿಸಿದಲ್ಲಿಗೆ ಅದು ಗಾಢತೆಯನ್ನು ಹೇಳಬೇಕಿಲ್ಲ. ಅದು ಪ್ರೀತಿಯ ತೋರಿಕೆಯ ಒಂದು ಮಾರ್ಗವಿರಬಹುದು. ಆದರೆ, ಈ ಜಗತ್ತಿನಲ್ಲಿ ಸಾರ್ವಜನಿಕವಾಗಿ ತೋರಿಕೆಗೆ ನಡೆಯುವ ಸಹಸ್ರ ಸಹಸ್ರ ವ್ಯವಹಾರಗಳಿಗೆ ನೇಪಥ್ಯದಲ್ಲಿ ಬೇರೆಯೇ ಮುಖವಿರುತ್ತದೆ. ಮಾರ್ಗದಲ್ಲಿ ಕೈ ಕೈ ಹಿಡಿದು ಓಡುವ ಜೋಡಿ ಮನೆಯಲ್ಲೂ ಹಾಗೆಯೇ ಇರುತ್ತಾರ, ಪರಸ್ಪರ ಗೌರವಿಸುತ್ತಾರಾ ಎಂಬುದು ಪ್ರಶ್ನೆ...
ಪ್ರೀತಿಯ ನಿವೇದನೆ ಆಗಬೇಕು, ಅದನ್ನು ತೋರ್ಪಡಿಸದೆ, ಬಾಯಿ ಬಿಟ್ಟು ಹೇಳದೆ ಕೆಲವರಿಗೆ ಅದು ಅರ್ಥವೂ ಆಗದು. ಆದರೆ, ಪ್ರೀತಿ ತೋರ್ಪಡಿಕೆಗೆ ಸೀಮಿತವಾಗದಿರಲಿ ಅಷ್ಟೆ....


ತುಂಬಾ ಗಾಢ ಸಂಬಂಧ ಹೇಗೆಂದರೆ, ಎಷ್ಟೋ ವರ್ಷದ ಬಳಿಕ ಪರಸ್ಪರ ಭೇಟಿಯಾಗುವ ಎರಡು ಜೀವ ಅರ್ಧಗಂಟೆ ಮೌನವಾಗಿ ಅಕ್ಕಪಕ್ಕ ಕುಳಿತು ಮತ್ತೆ ತಮ್ಮ ಪಾಡಿಗೆ ತೆರಳಿದರೂ ತುಂಬಾ ಮಾತನಾಡಿದಂತಹ ಫೀಲ್ ಪಡೆಯುವುದಂತೆ, ಎಲ್ಲೋ ಓದಿದ ಸಾಲು...

ಇದು ಅತಿಶಯೋಕ್ತಿ ಅಂತ ನಿಮಗೆ ಅನ್ನಿಸಲೂ ಬಹುದು, ಅದರೆ ತೋರಿಕೆಯಷ್ಟೇ ಮೌನಕ್ಕೂ ಪ್ರೀತಿಯನ್ನು ಪಾಲಿಸುವ ಶಕ್ತಿಯಿದೆ....
ಐ ಮಿಸ್ ಯೂ... ಅಂತ ದಿನಕ್ಕೆ 200 ಬಾರಿ ಮೇಸೇಜ್ ಮಾಡಿದಲ್ಲಿಗೆ, ಆತನನ್ನು, ಆಕೆಯನ್ನು ಶಾಪಿಂಗಿಗೆ, ಸಿನಿಮಾಗೆ ಬೈಕಿನಲ್ಲಿ ಕರಕೊಂಡು ಹೋದಲ್ಲಿಗೆ, ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಸೆಲ್ಫೀ ಫೋಟೊ ಹಾಕಿದಲ್ಲಿಗೆ ಪ್ರೀತಿಯ ಆಳ ನಿರ್ಧಾರ ಆಗಬೇಕಿಲ್ಲ. ನಡವಳಿಕೆ, ಪ್ರತಿಕ್ರಿಯೆ, ಗೌರವ ನೀಡಿಕೆಯಲ್ಲಿ ಪ್ರೀತಿಯನ್ನು ಪಾಲಿಸುವುದಕ್ಕೂ ನಾಲ್ಕು ಮಂದಿ ಎದುರು ಪ್ರೀತಿಯನ್ನು ತೋರಿಸುವುದಕ್ಕೂ ವ್ಯತ್ಯಾಸವಿದೆ ಅನ್ಸುತ್ತೆ...
ಅಷ್ಟಕ್ಕೂ ಪ್ರೀತಿ ಇರುವುದು ಆಂತರ್ಯದಲ್ಲಿ ಅದು ನಿಮ್ಮ ಹೇರ್ ಸ್ಟೈಲ್, ಮುಂಗುರುಳು, ನಿಮ್ಮ ಉದ್ದ ನಿಲುವುದು, ಸಲ್ಮಾನ್ ಖಾನ್ ಲುಕ್, ದುಬಾರಿ ಕಾರನ್ನು ಕಂಡು ಹುಟ್ಟಿಕೊಂಡಿದ್ದಾ ಅಥವಾ ಹೇಳದೇ ಕೇಳದೆ ಬಂದಿದ್ದ ಅಂತ ಯೋಚಿಸಿದರೆ ಈ ಪ್ರಶ್ನೆಗೆ ಉತ್ತರ ಸಿಗಬಹುದು...

ಬರಹದ ಶೀರ್ಷಿಕೆ ಹಾಗೇಯೇ ಇದೇ.. ಹರ್ ದಿಲ್ ಜೋ ಪ್ಯಾರ್ ಕರೇಗ.... ಜಗತ್ತಿನಲ್ಲಿ ಪ್ರೀತಿಗೆ ಸಿಲುಕದವರು ಯಾರಿದ್ದಾರೆ ಹೇಳಿ...ಕೆಲವರು ಹೇಳಿಕೊಂಡಿರಬಹುದು, ಕೆಲವರು ಮೌನವಾಗಿ ನುಂಗಿರಬಹುದು, ಕೆಲವರು ಪ್ರೀತಿಸಿದವರನ್ನು ಪಡೆದು ಒಟ್ಟೊಟ್ಟಿಗೆ ಬದುಕಬಹುದು, ಹಲವರು ಪಡೆಯಲಾಗದೆ ದೂರ ಉಳಿದಿರಬಹುದು, ಪ್ರೀತಿಗಾಗಿ ಇದ್ದ ಸ್ನೇಹವನ್ನೂ ಕಳೆದು ನೊಂದಿರಬಹುದು... ಹಾಗಂತ ಎಲ್ಲರೂ ಪ್ರೀತಿಸಿದವರೇ.. ಅದರೆ ಅಭಿವ್ಯಕ್ತಿ, ಇದರ ಪರಿಣಾಮದಲ್ಲಿ ಅದರ ದೊರಕುವಿಕೆ, ಕಳೆದುಕೊಳ್ಳುವುದರಲ್ಲಿ ವ್ಯತ್ಯಾಸ ಅಷ್ಟೇ... ಅದು ಮನಸ್ಸಿಗೆ ಸಂಬಂಧಿಸಿದ್ದು ಹಾಗೂ ವೈಯಕ್ತಿಕ ಕೂಡಾ....

ಒಳ್ಳೆ ಸಂಬಂಧ ವೃದ್ಧಿಸಲು ನಿಷ್ಕಲ್ಮಶ ನಗು ಸಾಕು.... ಸಾಷ್ಟಾಂಗ ನಮಸ್ಕಾರ, ಸಾರ್ ಸಾರ್ ಅನ್ನೋ ಅತಿ ವಿನಯ (ಅನಗತ್ಯ ಸಂದರ್ಭಗಳಲ್ಲಿ), ಸಾಷ್ಟಾಂಗ ನಮಸ್ಕಾರ, ಗಂಟೆಗಟ್ಟಲೆ ಹರಟೆ, ಏನೂ ಬೇಕಾಗಿಲ್ಲ. ಒಂದು ನಗು ಕಮ್ಯೂನಿಕೇಟ್ ಮಾಡುತ್ತೆ ನಮ್ಮ ಆತ್ಮೀಯತೆಯನ್ನು. ಅದು ಬಿಟ್ಟು ತೋರಿಕೆಯ ವಿನಯ, ತೋರಿಕೆಯ ಗೌರವ, ಪ್ರೀತಿಗೆಲ್ಲ ಅಷ್ಟೇ ಆಯುಸ್ಸು...
ಹೀಗಾಗಿ ಪ್ರೀತಿಯನ್ನು ತೋರಿಸದವನು ಮಾತ್ರ ಪ್ರೀತಿಸದವ, ಪ್ರೀತಿಗೆ ಯೋಗ್ಯ, ಲವೇಬಲ್...., ಸಮರ್ಥ, ಮೇರು ಅಂತೆನು ಅಲ್ಲ, ಬಾಯಿಬಿಟ್ಟು ಹೇಳದಿದ್ದರೂ ಪ್ರೀತಿ ಕಮ್ಯೂನಿಕೇಟ್ ಆಗುತ್ತದೆ, ಆಗಲೇ ಬೇಕು. 

ಗೌರವವೂ ಅಷ್ಟೇ.ದಿನಕ್ಕೆಷ್ಟು ಬಾರಿ ನಿಮಗೆ ಮಿಸ್ ಯೂ ಡಿಯರ್ ಅಂತ ಮೆಸೇಜ್ ಹಾಕ್ತಾರೆ, ಎಷ್ಟು ಗಂಟೆ ಫೋನ್ ಮಾಡಿ ಮಾತನಾಡ್ತಾರೆ, ಎಷ್ಟು ಬಾರಿ ಶಾಪಿಂಗಿಗೆ ಹೋಗ್ತೀರಿ ಅನ್ನುವುದರ ಮೇಲೆ ಪ್ರೀತಿ ನಿರ್ಧಾರ ಆಗುವುದಾದರೆ ಅದಕ್ಕೆ ಬೇರೆಯೇ ಹೆಸರಿಡುವುದು ಲೇಸು. ಏಕೆಂದರೆ, ಪ್ರೀತಿ ಹುಟ್ಟುವುದು ಮನಸ್ಸಿನಲ್ಲಿ, ಪೋಷಣೆಯಾಗುವುದೂ ಮನಸ್ಸಿನಲ್ಲಿ, ತೋರಿಕೆಯೆಂಬುದು ಒಂದು ಸಂಹವನ ಮಾಧ್ಯಮವಷ್ಟೇ ಅದೇ ಪ್ರೀತಿ ಅಳೆಯುವ ತೂಕದ ಕಲ್ಲುಗಳಲ್ಲವಲ್ಲ... ದುಡ್ಡು ಇಂದು ಬಂದು, ನಾಳೆ ಕಳೆದು ಹೋದೀತು, ಹಾಗಂದು ದುಡ್ಡು ಗಳಿಸುವ ಮನಸ್ಸು, ಶಕ್ತಿ, ಆತ್ಮನಂಬಿಕೆ ದುಡ್ಡಿಗಿಂತಲೂ ಮುಖ್ಯ. ಹಾಗಾಗಿ ತೋರ್ಪಡಿಕೆಯಾಗಿದ್ದು ಪ್ರೀತಿ, ಉಳಿದದ್ದು ಗೌಣ ಅನ್ನುವುದು ಮೊಂಡು ವಾದ ಅಷ್ಟೇ...

ಪ್ರೀತಿಸಿದವರೆಲ್ಲ ಪರಸ್ಪರ ಅದನ್ನು ಹೇಳಿಕೊಳ್ಳದೇ ಬದುಕು ಸವೆಸಿರಬಹುದು, ಅಥವಾ ಬಾಯಿ ಬಟ್ಟು ಹೇಳಿಯೂ ಪ್ರೀತಿಸಿದವರು ದಕ್ಕದೇ ಹೋಗಬಹುದು... ಬಾಯಿ ಬಿಟ್ಟು ಹೇಳಿದ ತಪ್ಪಿಗೆ ಒಂದು ಒಳ್ಳೆ ಸ್ನೇಹ ಸಂಬಂಧವೇ ಕಡಿದು ಹೋಗಿರಲೂ ಬಹುದು...

ಆದರೆ,
ಪ್ರೀತಿ ಖುಷಿಯನ್ನೂ ಕೋಡುತ್ತದೆ, ವೇದನೆಯನ್ನು ಸಹ.... ಬಟ್ ಅದು ದುರಂತಗಳಿಗೆ ದಾರಿಯಾಗದಿರಲಿ...ಪ್ರೀತಿಸಿದವರು ಸಿಗಲಿಲ್ಲ ಎಂಬ ಕಾರಣಕ್ಕೆ ಬದುಕನ್ನೇ ದುರಂತಕ್ಕೀಡು ಮಾಡಿ ನಿಮ್ಮನ್ನು ಮತ್ತಷ್ಟು ಪ್ರೀತಿಸುವ ಮಂದಿಗೆ ಆಘಾತ, ನಿರಾಸೆ ಕೊಡಬೇಡಿ. ಇಷ್ಟಕ್ಕೂ ನಿಮ್ಮ ಪ್ರೀತಿ ಪಾತ್ರರು ಖುಷಿಯಾಗಿ, ದೃಢವಾಗಿ, ನೂರು ಕಾಲ ಬಾಳಲಿ ಅಂತ ತಾನೆ ನೀವು ಬಯಸೋದು.... ಹಾಗಿದ್ದ ಮೇಲೆ ಪ್ರೀತಿ ಬದುಕಲು ದಾರಿಯಾಗಬೇಕೆ ವಿನಃ ಪತನಕ್ಕೆ ಹೇತುವಾಗದಿರಲಿ. ಪ್ರೀತಿಸದವರು, ಪ್ರೀತಿಸಲ್ಪಟ್ಟವರು ಎಲ್ಲೇ ಇದ್ದರೂ ಸುಖವಾಗಿರಲಿ ಎಂಬ ಕನಿಷ್ಠ ಪ್ರಜ್ಞೆಯಾದರೂ ಜೊತೆಗಿರಲಿ... ಬಯಸಿದ್ದೆಲ್ಲಾ ಸಿಗದು ಬಾಳಲಿ... ಎಂಬುದು ವಾಸ್ತವವಾಗಿರುವಾಗ ವಾಸ್ತವ ಅರಗಿಸಿಕೊಳ್ಳುವ ಸ್ಥಿತಪ್ರಜ್ಞೆ ಇದ್ದರಷ್ಟೇ ಸಹಜ ಬದುಕು ಸಾಗಿಸಲು ಸಾಧ್ಯ....
ಪ್ರೀತಿ ಮನಸ್ಸಿಗೊಂದು ಆಹ್ಲಾದಕತೆ, ನಿರಾಳತೆ, ಉತ್ತಮ ಮೂಡ್ ಸೃಷ್ಟಿಸುವ ಸೆಲೆ ಆಗಬೇಕು... 



ಪ್ರೀತಿಪಾತ್ರರ ನೆನಪೇ ಟೆನ್ಶನ್ ಓಡಿಸಿ ನಗು ತರುವಂತಿರಬೇಕು.... ಪಾಸಿಟಿವ್, ಪಾಸಿಟಿವ್, ಪಾಸಿಟಿವ್ ಆಗಿರಬೇಕು. ದುರಂತ ಖಂಡಿತಾ ಬೇಡ. ಜಗತ್ತಿನ ಯಾವುದೇ ಮೂಲೆಯಲ್ಲಿ ನಿಮ್ಮನ್ನು ಪ್ರೀತಿಸುವವರು, ಮೆಚ್ಚುವವರು ಖಂಡಿತಾ ಇದ್ದಾರೆ ಎಂಬ ಪಾಸಿಟಿವ್ ಯೋಚನೆ ಇದ್ದರೆ ಮಾತ್ರ ಆಹ್ಲಾದಕರ ಬದುಕು ಸಾಧ್ಯ. ಪ್ರೀತಿಸಿದವರು ಜೊತೆಗಿಲ್ಲದಿದ್ದರೆ ಪ್ರೀತಿಯೇ ಇಲ್ಲ, ಅವರ ನೆನಪೇ ಇಲ್ಲ, ಬದುಕೇ ಇಲ್ಲ ಅಂದುಕೊಳ್ಳುವ ಬದಲು ಅವರಿಂದ ಪಡೆದ ಪಾಸಿಟಿವ್ ಎನರ್ಜಿ, ಆಹ್ಲಾದಕತೆಯನೆನಪು ಬದುಕು ಮುನ್ನಡೆಸುವ ಎನರ್ಜಿಯಾಗಲಿ... ಮೌನವಾಗಿ ಅವರಿಗೂ ಒಂದು ವಿಶ್ ಮಾಡಿ..... ಯಾಕೆಂದರೆ,
ಹರ್ ದಿಲ್ ಜೋ... ಪ್ಯಾರ್ ಕರೇಗಾ...



















2 comments:

VENU VINOD said...

very good one...keep writing Krishna...i like ur style of expression

KRISHNA said...

thanku:)