ಅಚ್ಚರಿಗೂ, ಕುತೂಹಲಕ್ಕೂ ಇದು ಕಾಲವಲ್ಲ!


ಕಾಲ ಬದಲಾದಂತೆ ತಾಂತ್ರಿಕ ಔನ್ನತ್ಯ ನಿರೀಕ್ಷಿತ ಹಾಗೂ ಸಹಜ ಕೂಡಾ. ಅದರಿಂದ ‘ಜಗತ್ತು ಹಾಳಾಯಿತು’ ಎಂಬ ವಾದವಲ್ಲ. ಆದರೆ ಜಗತ್ತಿನಲ್ಲಿ ಸಹಜ ಬೆಳವಣಿಗೆ, ಸಹಜ ನಡವಳಿಕೆ, ಸಹಜ ಏರಿಳಿತಗಳ ಮೇಲೆ ಹತೋಟಿ ಸಾಧಿಸುವ ಯಂತ್ರಗಳು ಬದುಕಿನ ಭಾವನೆಗಳ ಮೇಲೂ ಸವಾರಿ ಮಾಡುತ್ತದೆ. ದಿನದ ೨೪ ಗಂಟೆಗಳ ನಡುವೆಯೊಂದು ಮಾಯಾ ಜಾಲ ನಿರ್ಮಿಸಿ, ಯಾವುದಕ್ಕೂ ಪುರುಸೊತ್ತಿಲ್ಲವೆಂಬಂಥಹ ಭ್ರಮೆ ಸೃಷ್ಟಿಸುತ್ತವೆ. ಮೊಬೈಲು, ವಾಟ್ಸಾಪ್ಪು, ನಗದು ರಹಿತ ವ್ಯವಹಾರಗಳು, ವರ್ಚುವಲ್ ರಿಯಾಲಿಟಿ ಸಾಧನಗಳೆಲ್ಲ ಬರ ಬರುತ್ತಾ ಮನುಷ್ಯ ಸಂಬಂಧದ ಭಾವನೆಗಳನ್ನು ಕಿರಿದುಗೊಳಿಸುತ್ತಿವೆ ಎಂಬುದು ಹಳೆಯ ರಾಗ. ಆದರೆ ಬದುಕಿನ ಸೂಕ್ಷ್ಮತೆಯನ್ನೂ ಕಸಿದುಕೊಂಡು ಅಚ್ಚರಿ ಪಡುವ, ಕುತೂಹಲ ಆಸ್ವಾದಿಸುವ ರಸ ಘಳಿಗೆಗಳನ್ನೇ ಕಸಿಯುತ್ತಿವೆ!
---------------
ಒಂದು ಕಾಲವಿತ್ತು... ಟೆಲಿವಿಷನ್‌ನಲ್ಲಿ ಒಂದೇ ಚಾನೆಲ್ ಇದ್ದಿದ್ದು, ವಾರಕ್ಕೆ ಒಂದೇ ಹಿಂದಿ ಸಿನಿಮಾ, ಒಂದೇ ಪ್ರಾದೇಶಿಕ ಭಾಷೆಯ ಸಿನಿಮಾ, ಒಂದು ಚಿತ್ರಹಾರ್, ಒಂದೇ ಒಂದು ಚಿತ್ರಮಂಜರಿ, ರಾಮಾಯಣ, ಮಹಾಭಾರತ್‌ನಂತಹ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ಯಾರ‌್ಯಾರ ಮನೆಗೆ ಹೋಗಿ ಕಿಟಕಿಯಲ್ಲಿ ಇಣುಕಿ ಟಿ.ವಿ. ನೋಡ್ತಾ ಇದ್ದಿದ್ದು, ರಾಮಾಯಣ ಪ್ರಸಾರವಾಗ್ತಾ ಇದ್ದಾಗ ಟಿ.ವಿ.ಗೇ ಊದುಬತ್ತಿ ಹಚ್ಚಿ ಪೂಜೆ ಮಾಡ್ತಾ ಇದ್ದ ಜನಗಳು, ಅದನ್ನೂ ನೋಡೋದು ಬ್ಲಾಕ್ ಆಂಡ್ ವೈಟ್ ಚಾನೆಲ್‌ನಲ್ಲಿ!


ಇಂದು ಟಿ.ವಿ. ಬಿಡಿ, ಅದರಲ್ಲಿ ಸಾವಿರಾರು ಚಾನೆಲ್‌ಗಳು ಬರ್ತಾ ಇರೋದು ಬಿಡಿ, ಕೈಯಲ್ಲಿರೋ ಸ್ಮಾರ್ಟ್‌ಫೋನ್‌ನಲ್ಲೇ ಸಿನಿಮಾ, ಧಾರಾವಾಹಿ, ಚಿತ್ರಗೀತೆ ಯಾವುದನ್ನು ಬೇಕಾದರೂ ದಿನಪೂರ್ತಿ ಆನ್‌ಲೈನ್/ಆಫ್‌ಲೈನ್‌ನಲ್ಲಿ ನೋಡಬಹುದು, ಒಂದು ಚಿತ್ರಗೀತೆ ಕೇಳಬೇಕಾದರೆ ರೇಡಿಯೋಗೆ ಪತ್ರ ಬರೆದು ಕೋರಿಕೆ ಕಾರ್ಯಕ್ರಮ ಬರುವ ತನಕ ಕಿವಿ ನೆಟ್ಟಗೆ ಮಾಡಿ ಕಾಯಬೇಕಿಲ್ಲ. ನಿಮ್ಮ ಮೊಬೈಲ್‌ನಲ್ಲಿ ಅಜ್ಜನ ಕಾಲದಿಂದ ಹಿಡಿದು ಇನ್ನೂ ಬಿಡುಗಡೆಯಾಗದ ಚಿತ್ರದ ಹಾಡನ್ನೂ ಹುಡುಕಿ ಹುಡುಕಿ ಕೇಳಬಹುದು, ಯಾರಿಗೋ ಪ್ರಪೋಸ್ ಮಾಡಲು ಕದ್ದುಮುಚ್ಚಿ ಪತ್ರ ಬರೆದು, ಪೋಸ್ಟ್ ಮಾಡಿ ಅದರ ಉತ್ತರ ಬರುವ ತನಕ ಕಾಯಬೇಕಾಗಿಲ್ಲ. ‘ಡು ಯೂ ಲವ್ ಮೀ’ ಅನ್ನುವ ಪುಟ್ಟ ಮೆಸೇಜ್  ವಾಟ್ಸಪ್‌ನಲ್ಲೋ, ಎಸ್‌ಎಂಎಸ್‌ನಲ್ಲೋ ಕಳ್ಸಿದ್ರೆ ಪಾಸಾ/ಫೇಲಾ ಅನ್ನೋದು ಆಗಿಂದಾಗ್ಗೆ ಗೊತ್ತಾಗಿ ಬಿಡುತ್ತದೆ!


ಸುದ್ದಿ ಆದ ಕೂಡಲೇ ಪ್ರಸಿದ್ಧಿ!: ಇಂದು ಪೇಪರ್ನೋರು, ಟಿ.ವಿ.ಯೋರಿಗಿಂತ ಮೊದಲೇ ಜನಸಾಮಾನ್ಯರಿಗೇ ಸುದ್ದಿಗಳು, ಅಪಘಾತದ ವರದಿಗಳು, ಹಗರಣಗಳು, ಪ್ರಧಾನಿ ಭಾಷಣಗಳು ಎಲ್ಲಾ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಸಿಕ್ಕಿರುತ್ತದೆ. ಟಿ.ವಿ.ಯವರು ಲೈವ್ ಕೊಡುವ ಮೊದಲೇ, ಪೇಪರ್‌ನೋರು ಮುಖಪುಟದಲ್ಲಿ ಸುದ್ದಿ ಲೀಡ್ ಮಾಡುವ ಗಂಟೆಗಳ ಮೊದಲೇ ಸಾಮಾನ್ಯ ಓದುಗನ ಮೊಬೈಲ್‌ನಲ್ಲಿ ಆ ಸುದ್ದಿ ವಿಡಿಯೋ ಸಹಿತ ಬಂದು ಬೆಚ್ಚಗೆ ಕುಳಿತಿರುತ್ತದೆ! ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುವ ಹೊತ್ತಿಗೆ ಹಳತಾಗಿರುತ್ತದೆ, ಜನರಲ್ಲಿ ಕುತೂಹಲವೇ ಉಳಿದಿರುವುದಿಲ್ಲ!


ಕಳೆದ ಎರಡು ದಶಕಗಳಲ್ಲಿ ಬದಲಾವಣೆ ತಂದಿರುವ ತಂತ್ರಜ್ಞಾನ ರಂಗ ನಮ್ಮ ನಿಮ್ಮ ಬದುಕಿನಲ್ಲಿ ಅಚ್ಚರಿ, ಕುತೂಹಗಳನ್ನೇ ಕಸಿದುಕೊಳ್ತಾ ಇದೆ. ಇನ್‌ಲ್ಯಾಂಡ್ ಲೆಟರ್, ಬ್ಲಾಕ್ ಆಂಟ್ ವೈಟ್ ಟಿ.ವಿ., ಟೈಪ್‌ರೈಟರ್, ಬ್ಯಾಟರಿ ಹಾಕುವ ರೇಡಿಯೋ, ಸೀಮೆಎಣ್ಣೆಯ ಲಾಟೀನು, ಊರಿಗೊಂದೇ ಪತ್ರಿಕೆ, ಟಿ.ವಿ.ಗೊಂದೇ ಚಾನೆಲ್ಲು, ಊರಲ್ಲಿ ಒಬ್ಬರದದ್ದೇ ಮನೆಯಲ್ಲಿ ಇರುವ ಲ್ಯಾಂಡ್‌ಲೈನ್ ಫೋನ್, ಪರವೂರಿನಲ್ಲಿರುವವ ಸಂಪರ್ಕಿಸಲು ಇದ್ದ ಟೆಲಿಗ್ರಾಂ, ವಿದೇಶದಲ್ಲಿದ್ದರೆ ಉದ್ದದ, ದಪ್ಪ ಸ್ಟಾಂಪ್ ಹಚ್ಚುವ ಕವರ್‌ನೊಳಗೆ ಬರೆಯುವ ಲೆಟರ್... ಎಲ್ಲ ಈಗ ಅಪರೂಪದ ವಸ್ತುಗಳಾಗಿವೆ. ಸಂಪರ್ಕ, ಸಂವಹನ, ತಲಪುವಿಕೆ ಈಗ ಗಾಳಿ/ಬೆಳಕಿನಷ್ಟೇ ವೇಗ.
ಮಾತ್ರವಲ್ಲ ತಂತ್ರಜ್ಞಾನಕ್ಕಿಂತ ವೇಗವಾಗಿ ಜನರ ನಿರೀಕ್ಷೆ ನಂಬಿಕೆಗಳೂ ಬದಲಾಗಿವೆ. ಈಗ ಕೈಗೆ ಸಿಕ್ಕ ಸೌಕರ್ಯ ಸಾಲದು, ಇನ್ನಷ್ಟು ಬೇಕೆಂಬ ತುಡಿತ, ಆತುರ, ಕಾತರ. ೩ಜಿ ಫೋನ್ ಸಿಕ್ಕವನಿಗೆ ೪ಜಿಗೆ ಅಪ್‌ಡೇಟ್ ಆಗುವ ಆಸೆ, ೪ಜಿ ಸಿಕ್ಕವನಿಗೆ ಅದಕ್ಕಿಂತ ಲೇಟೆಸ್ಟ್ ತಂತ್ರಜ್ಞಾನ ಏನಿದೆ ಎಂದು ಹುಡುಕುವ ಓಡಾಟ....


ಯಾವುದೂ ಹೊಸತಲ್ಲ, ಎಲ್ಲ ನಿರೀಕ್ಷಿತ!:
ಹೀಗೆ, ತಾಂತ್ರಿಕವಾಗಿ ಎಷ್ಟೇ ದೊಡ್ಡ ಅನ್ವೇಷಣೆಯಾದರೂ ‘ಇನ್ನೇನು ಬರುತ್ತದೆ’ ಎಂಬ ವಿಚಿತ್ರ ನಿರೀಕ್ಷೆಯಲ್ಲಿರುವ ಜನರಿಗೆ ಯಾವುದು ಹೊಸದಾಗಿ ಬಂದರೂ, ಏನೇ ಹೊಸ ಸುದ್ದಿ ಸಿಕ್ಕರೂ ಅದು ಅಚ್ಚರಿ ತರುವುದಿಲ್ಲ. ಎಂತಹ ದುರಂತ, ಎಂತಹ ಹಗರಣ, ಎಂತಹ ವೈಫಲ್ಯದ ಸುದ್ದಿ ಬಂದಾಗಲೂ ‘ಏನಂತೆ, ಎಷ್ಟಂತೆ?’ ಎಂಬ ಉದಾಸೀನ ಭಾವವೇ ಹೊರತು ಅದಕ್ಕೆ ಪ್ರತಿಕ್ರಿಯಿಸಬೇಕಾದ ಆತಂಕ, ಅಚ್ಚರಿ, ಉದ್ವೇಗವನ್ನು ವ್ಯಕ್ತಪಡಿಸುವ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ ಅನಿಸುತ್ತಿದೆ. ನಮಗೋಸ್ಕರ ಯಂತ್ರಗಳೋ, ಯಂತ್ರಗಳ ಕೈಯ್ಯಲ್ಲಿ ನಾವೋ ಎಂಬಂತಹ ಯಾಂತ್ರಿಕ ಜಗತ್ತಿಗೆ ಹಳ್ಳಿಗರೂ ಸಿಲುಕಿ ಒದ್ದಾಡುತ್ತಿರುವುದು ಇದೇ ಅಭಿಪ್ರಾಯವನ್ನು ಸಾರಿ ಸಾರಿ ಹೇಳುತ್ತಿವೆ.


೨೦-೩೦ ವರ್ಷಗಳ ಹಿಂದೆ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಹೊಸದೊಂದು ಗಿಡ, ಹೊಸದೊಂದು ಹೂವು, ರಸ್ತೆ ಬದಿಯ ಹಳ್ಳದಲ್ಲಿ ಕಾಲು ಮುಳುಗಿಸಿ ನೀರು ಚಿಮುಕಿಸುವ ಪುಳಕ, ಗೂಡಂಗಡಿ ಪಕ್ಕದಲ್ಲಿರುವ ನಾಯಿ ಮರಿ ಇಂದೆಷ್ಟು ದೊಡ್ಡದಾಗಿದೆ ಎಂದು ನೋಡುವ ಆಸಕ್ತಿ ಎಲ್ಲ ಇತ್ತು.
ಇಂದು, ಮನೆ ಬಾಗಿಲಿನಿಂದ ಕರೆದೊಯ್ಯುವ ಸ್ಕೂಲ್ ಬಸ್ಸುಗಳಲ್ಲಿ, ಮಣಭಾರದ ಬ್ಯಾಗ್‌ಗಳನ್ನು ಹೊತ್ತು ಹೋಗುವ ಮಕ್ಕಳಿಗೆ ಅಸೈನ್‌ಮೆಂಟ್, ಪ್ರಾಜೆಕ್ಟ್‌ಗಳಿಗಿಂತ ಪ್ರಕೃತಿಯ ವಿಸ್ಮಯಗಳೆಲ್ಲ ಅಚ್ಚರಿ ತರುವುದಿಲ್ಲ. ಮೊಬೈಲ್ ರಿಂಗ್‌ಟೋನ್‌ಗೆ ಅಳುವನ್ನ್ನೇ ನಿಲ್ಲಿಸುವ ಹಸುಳೆ ಬರ ಬರುತ್ತಾ ನಾಲ್ಕೈದು ವರ್ಷದ ಹೊತ್ತಿಗೆ ಮೊಬೈಲ್ ಅನ್‌ಲಾಕ್ ಮಾಡಿ ತಾನೇ ಸೆಲ್ಫೀ ಹೊಡೆದು ಅಮ್ಮನಿಗೆ ತೋರಿಸುವಷ್ಟು ಕಲಿತಿರುತ್ತದೆ. ಮನೆಯೊಳಗಿನ ಟಿ.ವಿ., ಕಂಪ್ಯೂಟರ್‌ನಲ್ಲಿರುವ ಗೂಗಲ್ ಎಂಬ ಹುಡುಕಾಟದ ದೈತ್ಯ, ವೀಕೆಂಡ್‌ನಲ್ಲಿ ಹೋಗುವ ಎಕ್ಸಿಬಿಷನ್, ಅಲ್ಲಿನ ಕೃತಕ ಕಾಡು, ಮೃಗಾಲಯದಲ್ಲಿ ನೋಡುವ ಪ್ರಾಣಿಗಳು ಎಲ್ಲವನ್ನೂ ಕಲಿಸುತ್ತವೆ! ಪ್ರಶ್ನೆಗಳಿಗೆಲ್ಲಾ ಗೂಗಲ್ಲೇ ಉತ್ತರ ಕೊಡುವಾಗ ಇನ್ನು ಅಚ್ಚರಿ ಪಡಲು ಪುರುಸೊತ್ತಾದರೂ ಎಲ್ಲಿದೆ? ಅಲ್ವ.


ಒಂದು ಶಾಲೆಗೆ ಹೋಗುವ ಅನುಭವ ಇರಲಿ, ಮೊದಲ ಬಾರಿ ಟಾಕೀಸ್‌ಗೆ ಹೋಗಿ ಸಿನಿಮಾ ನೋಡುವುದಿರಲಿ, ಪಾರ್ಲರ್‌ನಲ್ಲಿ ಐಸ್‌ಕ್ರೀಂ ತಿನ್ನುವುದಿರಲಿ, ಹುಡುಗ ಹುಡುಗಿ ಮೊದಲ ಬಾರಿಗೆ ತೆರೆ ಸರಿಸಿದಾಗ ಪರಸ್ಪರ ನೋಡಿಕೊಂಡು ವಿವಾಹ ಬಂಧನಕ್ಕೊಳಗಾಗುವುದಿರಲಿ... ಯಾವುದರಲ್ಲೂ ಯಾರಿಗೂ ಕುತೂಹಲಗಳು ಉಳಿದಿಲ್ಲ. ಎಲ್ಲವೂ ಪೂರ್ವನಿಗದಿಯಂತೆಯೋ, ಈ ಮೊದಲೇ ಗೊತ್ತಿರುವಂತೆಯೋ ನಡೆದಿರುತ್ತವೆ. ಯಾವುದನ್ನೂ ಮುಚ್ಚಿಡಲು, ರಹಸ್ಯವೆಂಬಂತೆ ಬಚ್ಚಿಡಲು, ದಿಢೀರ್ ಅಚ್ಚರಿ ನೀಡಲು ಏನೂ ಉಳಿದಿಲ್ಲವೆಂಬಂತಹ ತಂತ್ರಜ್ಞಾನ, ಜೀವನ ಶೈಲಿ ಜೊತೆಯಾಗುತ್ತಿದೆ.
ತಿಂಗಳುಗಟ್ಟಲೆ ಬರುವ ಧಾರಾವಾಹಿಯ ಮುಂದಿನ ಸಂಚಿಕೆ ಏನೆಂಬುದು ತಿಳಿದಂತೆ, ಚರ್ವಿತಚರ್ವಣವಾಗಿ ಬರುವ ಕಮರ್ಷಿಯಲ್ ಸಿನಿಮಾದ ಕ್ಲೈಮಾಕ್ಸ್ ಏನೆಂದು ಮೊದಲೇ ಕಂಡು ಹಿಡಿಯಲು ಸಾಧ್ಯವಾಗುವಂತೆ ಬದುಕಿನ ಮುಂದಿನ ಮಗ್ಗುಲ ಬಗ್ಗೆ, ತಿರುವಿನ ಬಗ್ಗೆ, ಹೊಸತೆಂದು ಅಂದುಕೊಳ್ಳುವದರ ಬಗ್ಗೆ ಮೊದಲೇ ಊಹಿಸಬಲ್ಲ, ಚಿಂತಿಸಬಲ್ಲ, ಅದನ್ನು ಸಾಮಾನ್ಯವೆಂಬಂತೆ ಅನುಭವಿಸವಲ್ಲ, ಅನುಭವಿಸಬೇಕಾದ ಅನಿವಾರ್ಯತೆಯನ್ನೂ, ತಾಂತ್ರಿಕ ಹೆಗ್ಗಳಿಕೆಯನ್ನು ಹೊಗಳಬೇಕೋ, ಯಾಂತ್ರಿಕತೆಗೆ ಒಗ್ಗಬೇಕೋ ಎಂಬ ವ್ಯಾಪಕ ಗೊಂದಲ ದಾಸರಲ್ಲಿ ನಾವೂ ಒಬ್ಬರು ಅಷ್ಟೇ... ಏನೇ ಹೇಳಿ. ಅಚ್ಚರಿಗೂ, ಕುತೂಹಲಕ್ಕೂ ಇದು ಕಾಲವಲ್ಲವಯ್ಯ! ಅಲ್ವ?





No comments: