ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡಿದ ಇಸ್ರೋ
ಈ ಮಧ್ಯೆ ಇಸ್ರೋ
ಸದ್ದಿಲ್ಲದೆ ಮತ್ತೆರಡು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸೌರಮಂಡಲದಲ್ಲಿ ಎರಡನೇ
ಗ್ರಹವಾಗಿರುವ ಶುಕ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಆ ಗ್ರಹದ ಕುರಿತು
ಅತ್ಯಮೂಲ್ಯ ಮಾಹಿತಿಯನ್ನು ಹೆಕ್ಕುವ ಉದ್ದೇಶದಿಂದ ಶುಕ್ರ ಗ್ರಹಕ್ಕೆ ಉಪಗ್ರಹ ಯಾತ್ರೆ
ಕೈಗೊಳ್ಳಲು ಇಸ್ರೋ ಮುಂದಾಗಿದೆ. 2013ರಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ
ಕೈಗೊಂಡು ವಿಶ್ವವಿಖ್ಯಾತವಾಗಿದ್ದ ಇಸ್ರೋ, ಮತ್ತೊಮ್ಮೆ ಮಂಗಳಯಾನ ಕೈಗೊಳ್ಳಲು
ಸಿದ್ಧತೆಯಲ್ಲಿ ತೊಡಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆ ಮತ್ತು ಭವಿಷ್ಯದ ನೋಟ ಆಕಾಶಕ್ಕೆ ರಾಕೆಟ್, ಕ್ಷಿಪಣಿಗಳ ಉಡ್ಡಯನಕ್ಕೆ ಕೋಟಿಗಟ್ಟಲೆ ದುಡ್ಡು ಸುರಿದು ಏನು ಮಾಡಲಿಕ್ಕಿದೆ ಎನ್ನುವವರ ಉಡಾಫೆಯ ಮಾತುಗಳಿಗೆ ಇಸ್ರೋ ಮತ್ತೊಮ್ಮೆ ಹೀಗೊಂದು ಸಮರ್ಪಕ ಉತ್ತರ ಕೊಟ್ಟಿದೆ, ತನ್ನ ವರ್ಚಸ್ಸನ್ನು ಆಗಸದಲ್ಲಿ ಮಿನುಗಿಸಿದೆ. ಈ ಮೂಲಕ ಭಾರತ ಭವಿಷ್ಯದಲ್ಲಿ ಉಪಗ್ರಹಗಳ ಉಡ್ಡಯನಕ್ಕೆ ಹೆಬ್ಬಾಗಿಲಾಗಿ ತೆರೆದುಕೊಂಡಿದೆ.
ಹೌದು, ಒಂದೇ ಉಡಾವಣಾ ವಾಹಕದ ಮೂಲಕ ಭಾರತದ ಹೆಮ್ಮೆಯ ಇಸ್ರೋ (ಇಂಡಿಯನ್ ಸ್ಪೇಸ್ ರಿಸಚ್‌ರ್ ಆರ್ಗನೈಸೇಶನ್) ಉಡ್ಡಯನ ನೌಕೆ (ಪಿಎಸ್‌ಎಲ್‌ವಿ-37) ದಾಖಲೆಯ 104 ಉಪಗ್ರಹಗಳನ್ನು ಬುಧವಾರ ಮುಂಜಾನೆ ಯಶಸ್ವಿಯಾಗಿ ಉಡ್ಡಯನ ಮಾಡಿತು. 2014ರಲ್ಲಿ ರಷ್ಯಾ ಒಂದೇ ರಾಕೆಟಿನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೆ ಈವರೆಗಿನ ದಾಖಲೆಯಾಗಿತ್ತು. ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲೇ ಯಾವುದೇ ದೇಶ ಒಂದೇ ಉಡಾವಣೆಯಲ್ಲಿ ಶತಕ ಬಾರಿಸಿಲ್ಲ. ಈ ಹಿಂದೆ 2015ರಲ್ಲಿ ಏಕಕಾಲಕ್ಕೆ 23 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿತ್ತು ಎಂಬುದು ಕೂಡ ಗಮನಾರ್ಹ. ಇದು ಇಸ್ರೋದ ಸತತ 38ನೇ ಉಡ್ಡಯನ.
ಬುಧವಾರ ಕಕ್ಷೆಯತ್ತ ಚಿಮ್ಮಿದ 104 ಉಪಗ್ರಹಗಳಲ್ಲಿ ಮೂರು ಮಾತ್ರ ಭಾರತದ್ದು, 101 ವಿದೇಶದ್ದು. ಈ ಪೈಕಿ ಅಮೆರಿಕದ 96 ಉಪಗ್ರಹಗಳೂ ಸೇರಿವೆ ಎಂಬುದು ವಿಶೇಷ. ಇಸ್ರೇಲ…, ಕಜಕಿಸ್ತಾನ, ನೆದರ್ಲೆಂಡ್, ಸ್ವಿಝರ್ಲೆಂಡ್, ಯುಎಇಯ ಉಪಗ್ರಹಗಳೂ ಈ ಗುಂಪಿನಲ್ಲಿ ಇದ್ದವು. ಇಷ್ಟುಮಾತ್ರವಲ್ಲ, ಒಮ್ಮೆಲೇ 400 ನ್ಯಾನೋ ಉಪಗ್ರಹಗಳನ್ನು ಚಿಮ್ಮಿಸುವ ಸಾಮರ್ಥ್ಯ ಇಸ್ರೋಗೆ ಇದೆ ಎಂದು ನಿವೃತ್ತ ಬಾಹ್ಯಾಕಾಶ ವಿಜ್ಞಾನಿ ಜಿ.ಮಾಧವನ್ ನಾಯರ್ ಹೇಳಿರುವುದು ಭವಿಷ್ಯದ ಇಸ್ರೋದ ತಾಕತ್ತನ್ನು ಕಟ್ಟಿಕೊಟ್ಟಿದೆ. ಮುಂಬರುವ ಮಾಚ್‌ರ್‍ನಲ್ಲಿ ಸಾರ್ಕ್ ದೇಶಗಳಿಗೆ ಅನುಕೂಲವಾಗುವ ವಿಶೇಷ ಉಪಗ್ರಹ ಉಡಾವಣೆಯೂ ಇಸ್ರೋ ಮೂಲಕ ನಡೆಯಲಿದೆ. ಒಟ್ಟು ಎರಡು ಉಪಗ್ರಹಗಳು ಈ ಸಂದರ್ಭದಲ್ಲಿ ನಭೋಮಂಡಲ ತಲುಪುವ ನಿರೀಕ್ಷೆ ಇದೆ.
ಅಮೆರಿಕ, ರಷ್ಯಾ, ಚೀನಾ, ಐರೋಪ್ಯ ಒಕ್ಕೂಟಗಳಿಗೂ ಉಪಗ್ರಹ ಉಡಾವಣೆ ಸಾಮರ್ಥ್ಯವಿದೆ. ಆದರೆ ಇಸ್ರೋದ ಉಡಾವಣೆಯ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳು ಉಪಗ್ರಹ ಉಡಾವಣೆಗೆ ಭಾರತವನ್ನೇ ನೆಚ್ಚಿಕೊಳ್ಳುತ್ತಿವೆ. ಫೆ.15ರ ಪ್ರಾಜೆಕ್ಟಿಗೆ ಇಸ್ರೋ ಮಾಡಿದ ಖರ್ಚು .100 ಕೋಟಿ. ಇದೇ ಉಡಾವಣೆ ಅಮೆರಿಕದ ಸ್ಪೇಸ್ ಎಕ್ಸ್ ಮೂಲಕ ಆಗಿದ್ದರೆ, .400 ಕೋಟಿ, ನಾಸಾ ಮೂಲಕ ಆಗಿದ್ದರೆ .669 ಕೋಟಿ ವೆಚ್ಚವಾಗುತ್ತಿತ್ತು. ಇಸ್ರೋದ ಮಿತವ್ಯಯದ ಕಾರ್ಯಾಚರಣೆಯ ಜೊತೆಗೆ ಯಶಸ್ವಿ ಫಲಿತಾಂಶ ಜಾಗತಿಕ ಮಟ್ಟದಲ್ಲಿ ಉಪಗ್ರಹ ಉಡಾವಣೆ, ರಾಕೆಟ್ ತಂತ್ರಜ್ಞಾನದಲ್ಲಿ ಅವಕಾಶಗಳ ಮಹಾಪೂರ ದೇಶಕ್ಕೆ ಹರಿದುಬರಲಿದೆ. ಮುಂಬರುವ ಐದು ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಉಪಗ್ರಹಗಳು ಜಾಗತಿಕವಾಗಿ ಉಡಾವಣೆಯಾಗುವ ನಿರೀಕ್ಷೆಯಿದೆ. ಇದೀಗ ಅನೇಕ ದೇಶಗಳು ತಮ್ಮ ಉಪಗ್ರಹಗಳ ಉಡಾವಣೆಗಾಗಿ ಭಾರತದತ್ತ ಮುಖ ಮಾಡಲಿದ್ದು, ಇದು ಆರ್ಥಿಕವಾಗಿಯೂ ದೇಶಕ್ಕೆ ಲಾಭ ತಂದು ಕೊಡಬಲ್ಲ ವ್ಯವಹಾರವಾಗಿದೆ.
48 ವರ್ಷಗಳ ಇತಿಹಾಸವಿರುವ, 1969ರಲ್ಲಿ ಸ್ಥಾಪನೆಯಾದ ಇಸ್ರೋ ಭಾರತದ ಬಾಹ್ಯಾಕಾಶ ಏಜೆನ್ಸಿ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ‘ರಾಷ್ಟಾ್ರಭ್ಯುದಯಕ್ಕೆ ಬಾಹ್ಯಾಕಾಶ ತಂತ್ರಜ್ಞಾನ' ಇದರ ಧ್ಯೇಯ. ಬಾಹ್ಯಾಕಾಶ ಇಲಾಖೆ ನಿರ್ವಹಿಸುವ ಇಸ್ರೋದ ಚಟುವಟಿಕೆಗಳ ವರದಿಗಳು ನೇರವಾಗಿ ದೇಶದ ಪ್ರಧಾನಿಯನ್ನು ತಲಪುತ್ತವೆ. ಸೋವಿಯಟ್ ಯೂನಿಯನ್‌ನಿಂದ 1975ರಲ್ಲಿ ಉಡಾವಣೆಯಾದ ಆರ್ಯಭಟ, ಇಸ್ರೋ ನಿರ್ಮಿಸಿದ ಪ್ರಥಮ ಉಪಗ್ರಹ. 80ರ ದಶಕದ ತನಕ ಉಪಗ್ರಹ ಉಡಾವಣೆಗೆ ವಿದೇಶಿ ಉಡ್ಡಯನ ಕೇಂದ್ರಗಳ ಮೇಲೆ ಭಾರತದ ಅವಲಂಬಿಸಿತ್ತು. ಬಳಿಕ, ರಾಕೆಟ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಿ 1980ರಲ್ಲಿ ಪ್ರಥಮ ಬಾರಿಗೆ ಭಾರತದಲ್ಲೇ ತಯಾರಿಸಿದ ಎಸ್‌ಎಲ್‌ವಿ-3 ಉಡಾವಣಾ ವಾಹನ ಮೂಲಕ ರೋಹಿಣಿ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಲಾಯಿತು. ನಂತರದ ದಿನಗಳಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಹಾಗೂ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ) ರಾಕೆಟ್‌ಗಳನ್ನು ಉಪಗ್ರಹ ಉಡಾವಣೆಗಾಗಿ ಇಸ್ರೋ ಅಭಿವೃದ್ಧಿಪಡಿಸಿತು. ಈ ರಾಕೆಟ್‌ಗಳ ಸಹಾಯದಿಂದ ಸಾಕಷ್ಟುಸಂವಹನ ಆಧಾರಿತ ಹಾಗೂ ಭೂವೀಕ್ಷಕ ಉಪಗ್ರಹಗಳನ್ನು ಉಡಾಯಿಸಲಾಗಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ರಿಸಚ್‌ರ್ ಸೆಂಟರ್ ರಾಕೆಟ್ ಉಡ್ಡಯನ ಕೇಂದ್ರ ಇಸ್ರೋದ ಬಹುದೊಡ್ಡ ಆಸ್ತಿ. 2005ರಲ್ಲಿ ಇಲ್ಲಿ ಎರಡನೇ ಲಾಂಚ್ ಪ್ಯಾಡ್ ಸ್ಥಾಪನೆಯಾಯಿತು. 145 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಈ ದ್ವೀಪ ಕೇಂದ್ರ 27 ಕಿ.ಮೀ.ಯಷ್ಟುಕಡಲತಡಿಯನ್ನು ಆವರಿಸಿದೆ. 1971ರ ಅ.9ರಂದು ಮೊದಲ ಪ್ರಯತ್ನದಲ್ಲಿ ರೋಹಿಣಿ 215 ಹೆಸರಿನ ಉಪಗ್ರಹದ ಉಡ್ಡಯನ ನಡೆಯಿತು. ಇಸ್ರೋ ಈ ತನಕ 226 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಈ ಪೈಕಿ 179 ವಿದೇಶಿ ಉಪಗ್ರಹಗಳಾಗಿವೆ.
ಇಸ್ರೋ 2008ರ ಅ.22ರಂದು ಉಡಾಯಿಸಿದ ಚಂದ್ರ ಕಕ್ಷಾಗಾಮಿ ‘ಚಂದ್ರಯಾನ 1' ಹಾಗೂ 2014 ಸೆ.24ರಂದು ಕಳುಹಿಸಿದ ‘ಮಂಗಳಯಾನ' ಕಕ್ಷಾಗಾಮಿ ಉಪಗ್ರಹಗಳ ಯಶಸ್ವಿ ಉಡಾವಣೆ ಇಸ್ರೋ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು. ಈ ಮೂಲಕ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಮಂಗಳಯಾನ ಕೈಗೊಂಡ ಏಷ್ಯಾದ ಮೊದಲನೇ ದೇಶ, ವಿಶ್ವದ ನಾಲ್ಕನೇ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಇಸ್ರೋ ಗಳಿಸಿದೆ. 2016ರ ಜೂ.18ರಂದು ಸಿಂಗಲ್ ಪ್ಲೇಬೋರ್ಡ್‌ನಲ್ಲಿ 20 ಉಪಗ್ರಹ ಉಡಾಯಿಸಿದ್ದು ಭಾರತೀಯ ಉಡ್ಡಯನದ ಪುಟಗಳಲ್ಲಿ ಹೊಸ ಇತಿಹಾಸ ಬರೆಯಿತು. ಇದೀಗ ಫೆ.15ರಂದು ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಏಕಕಾಲದಲ್ಲಿ 104 ಉಪಗ್ರಹ ಉಡಾಯಿಸಿದ್ದು ವಿಶ್ವದಾಖಲೆಯಾಗಿದೆ.
ಚಂದ್ರಯಾನ 1 ಚಂದ್ರನ ಮೇಲೆ ಭಾರತದ ಮೊದಲ ಪ್ರಯೋಗವಾಗಿದೆ. 2008ರ ಅ.22ರಂದು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷಕ ಕೇಂದ್ರದಿಂದ ನಭೋಮಂಡಲಕ್ಕೆ ಪಿಎಸ್‌ಎಲ್‌ವಿ ಸಹಾಯದಿಂದ ಜಿಗಿದ ಚಂದ್ರ ಕಕ್ಷಾಗಾಮಿ 2008 ನ.8ರಂದು ಗಮ್ಯ ತಲುಪಿತು. ಹೈರೆಸೊಲ್ಯೂಶನ್ ರಿಮೋಟ್ ಸೆನ್ಸಿಂಗ್, ಇನ್‌ಫ್ರಾರೆಡ್, ಎಕ್ಸ್‌ರೇ ಫ್ರೀಕ್ವೆನ್ಸಸ್ ಇತ್ಯಾದಿ ಅತ್ಯಾಧುನಿಕ ಪರೀಕ್ಷಾರ್ಥ ಸೌಲಭ್ಯಗಳನ್ನು ಈ ಉಪಗ್ರಹ ಹೊಂದಿದೆ. ಚಂದ್ರನ ಮೇಲೆ ನೀರಿರಬಹುದಾದ ಸಾಧ್ಯತೆಯನ್ನು ಪತ್ತೆ ಹಚ್ಚಿದ ಮೊದಲ ಚಂದ್ರಯಾನ ಮಿಷನ್ ಇದು. ಮಂಗಳಯಾನ ಹೆಸರಿನ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) ಬಾಹ್ಯಾಕಾಶ ನೌಕೆ ಮಂಗಳ ಗ್ರಹ ಅಧ್ಯಯನ ಉದ್ದೇಶದಿಂದ 2013ರ ನ.5ರಂದು ಇಸ್ರೋದಿಂದ ಉಡಾವಣೆಯಾಗಿದೆ. 2014ರ ಸೆ.24ರಂದು ಗಮ್ಯ ತಲಪುವ ಮೂಲಕ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾದ ಮಂಗಳ ಗ್ರಹ ಪ್ರಾಜೆಕ್ಟ್ ಎಂಬ ಹೆಗ್ಗಳಿಕೆ ಗಳಿಸಿತು. ಈ ಯೋಜನೆಯು ದಾಖಲೆಯ 74 ಮಿಲಿಯನ್ ಡಾಲರ್ನಷ್ಟುಅಲ್ಪ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
2012-17ರ ಅವಧಿಯಲ್ಲಿ ಇಸ್ರೋ 58 ಬಾಹ್ಯಾಕಾಶ ಯೋಜನೆಗಳನ್ನು ಪೂರೈಸುವ ಉದ್ದೇಶ ಹೊಂದಿದೆ. ಮುಂದಿನ ಎರಡು ವರ್ಷಗಳಲ್ಲಿ 33 ಉಪಗ್ರಹ ಹಾಗೂ ಆ ಬಳಿಕ 25 ಲಾಂಚ್ ವೆಹಿಕಲ್ ಮಿಷನ್‌ಗಳನ್ನು ಪೂರೈಸುವ ಗುರಿ ಇರಿಸಿಕೊಂಡಿದೆ. ಇವುಗಳ ಅಂದಾಜು ವೆಚ್ಚ ಮೂರು ಬಿಲಿಯನ್ ಯುಎಸ್ ಡಾಲರ್‌ಗಳು.
ಈ ಮಧ್ಯೆ ಇಸ್ರೋ ಸದ್ದಿಲ್ಲದೆ ಮತ್ತೆರಡು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸೌರಮಂಡಲದಲ್ಲಿ 2ನೇ ಗ್ರಹವಾಗಿರುವ ಶುಕ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಆ ಗ್ರಹದ ಕುರಿತು ಅತ್ಯಮೂಲ್ಯ ಮಾಹಿತಿಯನ್ನು ಹೆಕ್ಕುವ ಉದ್ದೇಶದಿಂದ ಶುಕ್ರ ಗ್ರಹಕ್ಕೆ ಉಪಗ್ರಹ ಯಾತ್ರೆ ಕೈಗೊಳ್ಳಲು ಇಸ್ರೋ ಮುಂದಾಗಿದೆ. 2013ರಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಂಡು ವಿಶ್ವವಿಖ್ಯಾತವಾಗಿದ್ದ ಇಸ್ರೋ, ಮತ್ತೊಮ್ಮೆ ಮಂಗಳಯಾನ ಕೈಗೊಳ್ಳಲು ಸಿದ್ಧತೆಯಲ್ಲಿ ತೊಡಗಿದೆ. ಈ ಎರಡೂ ಯೋಜನೆಗಳ ಕುರಿತು ಫೆ.1ರಂದು ಮಂಡನೆಯಾದ ಕೇಂದ್ರ ಬಜೆಟ್ನಲ್ಲಿ ಮಾಹಿತಿ ಇದೆ. ಈ ಬಾರಿಯ ಬಜೆಟ್ನಲ್ಲಿ ಬಾಹ್ಯಾಕಾಶ ಇಲಾಖೆಗೆ ಶೇ.23 ಹೆಚ್ಚು ಅನುದಾನವನ್ನು ವಿತ್ತ ಸಚಿವ ಜೇಟ್ಲಿ ಘೋಷಿಸಿದ್ದಾರೆ. ಬಾಹ್ಯಾಕಾಶ ವಿಜ್ಞಾನ ಎಂಬ ವಿಭಾಗದಲ್ಲಿ ಮಂಗಳಯಾನ- 2 ಹಾಗೂ ಶುಕ್ರ ಗ್ರಹ ಯಾನದ ಕುರಿತು ಪ್ರಸ್ತಾಪಗಳಿವೆ. ಈ ಬಾರಿ ಮಂಗಳ ಗ್ರಹದಲ್ಲಿ ರೊಬೋಟ್‌ನ್ನು ಇಳಿಸುವ ಉದ್ದೇಶವನ್ನು ಇಸ್ರೋ ಹೊಂದಿದೆ. ಇದಕ್ಕಾಗಿ ಈ ಬಾರಿ ಫ್ರಾನ್ಸ್‌ನ ಕಂಪನಿ ಜತೆ ಇಸ್ರೋ ಒಡಂಬಡಿಕೆ ಮಾಡಿಕೊಂಡಿದೆ. ಮಂಗಳಯಾನ ನೌಕೆಯನ್ನು ಆ ಕಂಪನಿ ಜತೆಗೂಡಿ ಇಳಿಸಲಿದೆ. ಮತ್ತೊಂದೆಡೆ ಗ್ರಹಕ್ಕೆ ಮೊದಲ ಬಾರಿ ಯಾನ ಕೈಗೊಳ್ಳಲು ಇಸ್ರೋ ಮುಂದಾಗಲಿದೆ.
ಬಾಹ್ಯಾಕಾಶ ತಂತ್ರಜ್ಞಾನ ಇಂದು ದುಡ್ಡು ಹಾಕಿ ನಾಳೆ ಫಸಲು ತೆಗೆಯುವ ವ್ಯವಹಾರವಲ್ಲ. ಹಾಕಿದ ದುಡ್ಡು ಪೈಸೆ ಪೈಸೆಗೆ ಸಮೇತ ವಸೂಲಿಯಾಗಬೇಕೆಂಬ ಹಠ ತಕ್ಷಣಕ್ಕೆ ಈಡೇರದು. ದೇಶಕ್ಕೊಂದು ಭವ್ಯ ವರ್ಚಸ್ಸು ಕಲ್ಪಿಸುವ, ರಕ್ಷಣೆ, ಸಂವಹನ, ಹವಾಮಾನ ರಂಗದಲ್ಲಿ ಸ್ವಾವಲಂಬನೆ ಸಾಧಿಸುವ, ರಾಕೆಟ್ ಉಡ್ಡಯನ ರಂಗದಲ್ಲಿ ಮಿತವ್ಯಯದ ಸಾಧ್ಯತೆ ತೋರಿಸಿಕೊಟ್ಟು ಜಾಗತಿಕ ಮಾರುಕಟ್ಟೆಕಲ್ಪಿಸಿಕೊಟ್ಟು ದೀರ್ಘಾವಧಿಯಲ್ಲೊಂದು ಬಾಹ್ಯಾಕಾಶ ಪವರ್ ಸೆಂಟರ್ ಆಗಬಲ್ಲ ಕ್ಷೇತ್ರವಿದು. ದೂರದೃಷ್ಟಿಯಿಂದ ಕೆಲಸ ಮಾಡಿದರೆ ಯಾವ ವರ್ಚಸ್ಸು ಬರುತ್ತದೆ ಎಂಬುದಕ್ಕೆ ಫೆ.15ರ ಉಡ್ಡಯನ ಸೆಂಚುರಿಯೇ ಸಾಕ್ಷಿ.
(KANNADAPRABHA PAGE 6 -17/02.2017)
No comments:
Post a Comment