ಆಗದೇ ಸರಿದ ಘಳಿಗೆಗಳು....

ದೊಡ್ಡ ದುರಂತ, ಬೃಹತ್ ಹಾನಿ, ಭಾರಿ ಕಷ್ಟ ನಷ್ಟ ಸಂಭವಿಸಿದಾಗ ಮಾತ್ರ ಅದು ಸುದ್ದಿಯಾಗ್ತದೆ. ಸಣ್ಣದರಲ್ಲೇ ತಪ್ಪಿ ಹೋದ ನಷ್ಟಗಳು, ಸಂಭಾವ್ಯ ದುರಂತಗಳು ನಡೆಯದೇ ಅಲ್ಲಿಂದಲ್ಲಿಗೆ ನಿಯಂತ್ರಣವಾದಾಗ ಅದು ಯಾರನ್ನೂ ತಟ್ಟುವುದಿಲ್ಲ, ದುರಂತದಲ್ಲಿ ಪಾರಾದವನನ್ನು ಬಿಟ್ಟು...

ಬೈಕಲ್ಲಿ ಹೋಗ್ತಾ ಇದ್ದೀರಿ... ಕಡಿಮೆ ವಾಹನ ಸಂಚಾರವಿರುವಲ್ಲಿ, ಸಮತಟ್ಟು ಪ್ರದೇಶದಲ್ಲಿ, ವಾಹನದ ವೇಗ ಕಡಿಮೆಯಾಗಿ ಹೋಗ್ತಾ ಇರುವಾಗ ಏಕಾಏಕಿ ದೊಡ್ಡ ಸದ್ದಿನೊಂದಿಗೆ ಬೈಕಿನ ಬ್ರೇಕು ತುಂಡಾಗುತ್ತದೆ. ತುಂಡಾಗಿದ್ದು ನಿಮ್ಮ ಅರಿವಿಗೆ ಬಂದಿದೆ. ಎಷ್ಟು ಅದುಮಿದರೂ ಬ್ರೇಕ್ ಕೆಲಸ ಮಾಡುತ್ತಿಲ್ಲ... ಸಾವರಿಸಿಕೊಂಡು ವಾಹನವನ್ನು ನಿಯಂತ್ರಿಸಿ ರಸ್ತೆ ಪಕ್ಕಕ್ಕೆ ಹಾಕುತ್ತೀರಿ, ನಿಲ್ಲಿಸುತ್ತೀರಿ. ನಿಮಗೇನೋ ಆಗಿರುವುದಿಲ್ಲ. ಅದೃಷ್ಟವಶಾತ್ ಸೂಕ್ತ ಮೆಕ್ಯಾನಿಕ್ ಸಿಕ್ಕಿ ವಾಹನನಕ್ಕೆ ಬೇಕಾದ ಪಾರ್ಟುಗಳನ್ನು ಹಾಕಿ ದುರಸ್ತಿ ಮಾಡಿಸಿಕೊಳ್ತೀರಿ...
ಆದರೆ...
ಕ್ಷಣಮಾತ್ರದಲ್ಲಿ ನಡೆದ ಆ ಘಟನೆ ಹುಟ್ಟಿಸಬಲ್ಲ ಶಾಕ್ ಗಳಾದರೂ ಏನೇನೂ...?


  1. ಒಂದು ವೇಳೆ ಇಳಿಜಾರು ರಸ್ತೆಯಲ್ಲಿ ಬ್ರೇಕು ತುಂಡಾದರೆ ಏನು ಮಾಡೇಕು? (ದೇವರೇ ಗತಿ, ಇನ್ಯಾರೂ ಕಾಪಾಡಲಾರರು)
  2.  
    ಬ್ರೇಕು ತುಂಡಾಗುವ ವೇಳೆ ಎದುರೆಯೋ, ಹಿಂದೆಯೋ ಇನ್ನೊಂದು ವಾಹನ ಬರ್ತಾ ಇದ್ದಿದ್ರೇ ಪರಿಸ್ಥಿತಿ ಏನಾಗ್ತಾ ಇತ್ತು?

  3. ನಡು ಪೇಟೆಯ ವ್ಯಸ್ತ ಟ್ರಾಫಿಕ್ ನಡುವೆ ಬ್ರೇಕು ತುಂಡಾದರೆ ಏನಾಗ್ತಾ ಇತ್ತು?

  4. ಅಥವಾ ರಾತ್ರಿ ವೇಳೆ ನಿರ್ಜನ ರಸ್ತೆಯಲ್ಲಿ ಹೋಗ್ತಾ ಇರುವಾಗ ಬ್ರೇಕು ತುಂಡಾದರೆ ಮಾಡುವುದಾದರೂ ಏನು...?

ಹೀಗೆ ಹತ್ತಾರು ಗಂಭೀರ ಸಾಧ್ಯತೆಗಳು ಮನಸ್ಸನ್ನು ಕೆದಕದೇ ಇರುವುದಿಲ್ಲ.
ಬ್ರೇಕು ತುಂಡಾಗಿದೆ ಎಂಬ ಸಣ್ಣ ಪ್ರಕರಣವೊಂದು ದೊಡ್ಡದೊಂದು ಶಾಕ್ ಹುಟ್ಟಿಸುವುದು ಮಾತ್ರವಲ್ಲ. ನಾವು ಭಾರಿ ಅಪಾಯವೊಂದರಿಂದ ತಪ್ಪಿಸಿಕೊಂಡಿದ್ದೇವೆ ಮಾತ್ರವಲ್ಲ, ದೊಡ್ಡದಾಗಿ ಆಗಬಹುದಾಗಿದ್ದ ತೊಂದರೆ ಸಣ್ಣದರಲ್ಲಿ ತಪ್ಪಿ ಹೋಯಿತು ಅಂತ ಸಮಾಧಾನವನ್ನು ತರಬಲ್ಲುದು ಅಲ್ವ?


ಮಾತ್ರವಲ್ಲ,


ಭಾರಿ ದುರಂತ ಇಷ್ಟರಲ್ಲೇ ಹೋಗಿದೆ ಎಚ್ಚರಿಕೆಯಿಂದಿರು ಅಂತ ದೇವರು ಸೂಚಿಸಿರಬಹುದೇ?
ವಾಹನವನ್ನು ನಿರ್ವಹಣೆ ಮಾಡುವುದು ಸಾಲುತ್ತಿಲ್ಲ, ಇನ್ನೂ ಜಾಗರೂಕನಾಗಿರು ಅಂತ ಪರಿಸ್ಥಿತಿ ಹೇಳುತ್ತಿರಬಹುದೇ?
ನಿನ್ನದು ಮಾತ್ರವಲ್ಲ, ನಿನ್ನ ಹಿಂದೆ ಮುಂದೆ ಹೋಗುವ ವಾಹನದವರ ಅದೃಷ್ಟವೂ ಚೆನ್ನಾಗಿತ್ತು. ಮುಂದೆಯೂ ಹಾಗೆಯೇ ಇದ್ದರೆ ಬದುಕುತ್ತೀಯ ಅಂತ ಕಿವಿಮಾತು ಹೇಳಬಹುದು ವಿಧಿ.
ನಿನಗೆ ಇನ್ನೂ ದೊಡ್ಡ ಅಪಾಯ ಬರಲಿದೆ, ಅದರ ಮುನ್ಸೂಚನೆ ಇದು ಅಂತ ಋಣಾತ್ಮಕ ಚಿಂತನೆ ಚುಚ್ಚಬಹುದು.
ನಿನ್ನ ಪುಣ್ಯ ಕಡಿಮೆ ವಾಹನ ಸಂಚಾರ ಇದ್ದಾಗ, ಹಗಲಿನ ವೇಳೆಯೇ ವಾಹನ ಕೈಕೊಟ್ಟಿದೆ. ಸೂಕ್ತ ಸಮಯಕ್ಕೆ ಮೆಕ್ಯಾನಿಕ್ಕೂ ಸಿಕ್ಕಿದ್ದಾನೆ. ಸುಲಭದಲ್ಲಿ ರಿಪೇರಿಯಾಯಿತು. ಸದ್ಯ ಇಷ್ಟಕ್ಕೆ ನಿಂತಿತಲ್ಲ ಅಂತ ಸಮಾಧಾನ ಮಾಡಿಕೊಳ್ಳಬಹುದು.


ಆದರೂ ಕಷ್ಟಗಳು ಯಾಕೆ ಬರುತ್ತೆ ಅಂತ ಯಾವುದೇ ಮನಸ್ಸು ವಿಶ್ಲೇಷಣೆ ಮಾಡದೇ ಇರುವುದಿಲ್ಲ. ನಿರ್ಲಕ್ಷ್ಯವೋ, ಅವಸರವೋ, ಬೇರೆಯವರ ತಪ್ಪಿನಿಂದಲೋ, ಪೂರ್ವಜನ್ಮದ ಪಾಪವೋ, ದೇವರಿಗೆ ತನ್ನ ಮೇಲೆ ಕೋಪವೋ, ತನ್ನ ಗ್ರಹಚಾರವೇ ಸರಿ ಇಲ್ಲವೋ, ಅಥವಾ ವೃಥಾ ಅಲೆದಾಡುವುದೆಂದು ತನ್ನ ಹಣೆಯಲ್ಲಿ ಬರೆದಿದೆಯೋ, ಅಷ್ಟೊಂದು ಟೆನ್ಶನ್ನು ಅನುಭವಿಸಲೇಬೇಕಿತ್ತೇನೋ.... ಹೀಗೆ ಸಾಧ್ಯಾಸಾಧ್ಯತೆಗಳ ಬಗ್ಗೆ ಸಂತ್ರಸ್ತ ಪಾರ್ಟಿ ಯೋಚಿಸಿಯೇ ಯೋಚಿಸ್ತದೆ.
ಎಷ್ಟೋ ಬಾರಿ ಅದಕ್ಕೆ ಸೂಕ್ತ ಉತ್ತರ ಸಿಗುವುದಿಲ್ಲ. ಅಥವಾ ನಿಖರವಾಗಿ ಕಂಡುಕೊಳ್ಳಲಾಗುವುದಿಲ್ಲ. ಆಸ್ತಿಕರು, ನಾಸ್ತಿಕರು, ವಿಚಾರವಾದಿಗಳು, ಧರ್ಮಬೀರುಗಳು, ವಾಸ್ತವಿಕ ಪ್ರಜ್ಞೆ ಹೊಂದಿದವರು ಅವರದ್ದೇ ಆದ ರೀತಿಯಲ್ಲಿ ಯೋಚಿಸುತ್ತಾರೆ. ಅವರದ್ದೇ ಆದ ನಿರ್ಧಾರಗಳಿಗೆ ಬರುತ್ತಾರೆ. 


ಏನೇ ಇರಲಿ
ದುರಂತವೊಂದು ತಪ್ಪಿದಾಗ ಅದು ತಪ್ಪುಗಳನ್ನು ತಿದ್ದಿಕೊಳ್ಳಲು, ಮತ್ತಷ್ಟು ಜಾಗ್ರತೆಯಿಂದಿರಲು, ಮೇಲೆರಿದವರನ್ನು ಮತ್ತೆ ಕೆಳಗಿಳಿಸಿ ಕೆಳಗಿನಿಂದ ಮತ್ತೆ ನಡೆಸಲು, ಒಂದಷ್ಟು ಚಿಂತನೆಗಳನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ಆಗಲೇ ಹೇಳಿದೆ ಹಾಗೆ
ದುರಂತ ತಪ್ಪಿದಾಗ ಅದು ಬೇರೆಯವರಿಗೆ ದೊಡ್ಡ ಸಂಗತಿಯಾಗುವುದಿಲ್ಲ. ತಪ್ಪಿಸಿಕೊಂಡವನಿಗೆ ಮಾತ್ರ ಗೊತ್ತಿರುತ್ತದೆ, ಮೃತ್ಯುವಿನ ಬಾಯಿಯ ಹತ್ರ ಹೋಗಿ ಬಂದಾಗ ಹೇಗೆ ಮನಸ್ಸು ಸ್ಪಂದಿಸುತ್ತದೆ... ಎಷ್ಟು ವಿಚಲಿತವಾಗುತ್ತದೆ. ಎಂತಹದ್ದೇ ಗಟ್ಟಿ ಮನಸ್ಸಿನವರಲ್ಲೂ ಏನೇನೋ ಯೋಚನೆಗಳು ಹೇಗೆ ಬರುತ್ತವೆ ಎಂಬುದು ಸ್ವತ ಅವರವರಿಗೇ ಗೊತ್ತಾಗ್ತದೆ. ಅಷ್ಟೇ ಯಾಕೆ... ಇನ್ನೊಂದು ಬಾರಿ ಬೈಕು ಸಂಚರಿಸುತ್ತಿರುವಾಗಲೇ ಬ್ರೇಕು ತುಂಡಾದರೆ ಏನು ಮಾಡಬೇಕು ಅಂತಾದರೂ ತಿಳಿದುಕೊಳ್ಳಲು ಸವಾರ ಪ್ರಯತ್ನ ಮಾಡಿಯೇ ಮಾಡುತ್ತಾನೆ.
ಬದುಕಿನಲ್ಲಿ ಅವಕಾಶಗಳು ಎರಡನೇ ಬಾರಿ ಕದ ತಟ್ಟುವುದಿಲ್ಲ ಅನ್ನುತ್ತಾರೆ. ಅದಕ್ಕೆ ಹೊರತಾದ ಸಂದರ್ಭಗಳೂ ಇರಬಹುದೇನೋ...!

-KM

No comments: