ಮಾತು ಬಾರದ ಗೆಳೆಯರು...

ಆಗೀಗ, ವ್ಯಕ್ತಿಗಳಿಗೂ ಮಿಕ್ಕಿ ವಸ್ತುಗಳೇ
ದೀರ್ಘ ಸಂಗಾತಿಯಾಗುವುದಿಲ್ವೇ?
ಪೆನ್ನೂ, ಬೈಕು, ಕಾಲಿನಲ್ಲಿರುವ ಚಪ್ಪಲಿ
ಕಾರಿನಲ್ಲಿರುವ ರೇಡಿಯೋ
ಮಲಗುವಾಗಲೂ ಪಕ್ಕಕ್ಕಿರುವ ಮೊಬೈಲು
ಹಳತಾಗಿ ಹರಿದು ಹೋದ ಪರ್ಸು
ಜೀವವಿಲ್ಲದಿದ್ದರೇನು...
ಭಾವಯಾನದಲ್ಲಿ ಜೊತೆಗೀರೋದಿಲ್ವೇನು?
 

ಬೇಸರವಾಗೋದಿಲ್ವೇ?
ಹಳೆ ಪೆನ್ನು ಮುರಿದಾಗ,
ಬೈಕು ಗ್ಯಾರೇಜಿಗೆ ಹೋದಾಗ
ಬ್ಯಾಟರಿ ಮುಗಿದ ರೇಡಿಯೋ ಮೌನವಾದಾಗ
ಮೊಬೈಲಿನ ಆಯುಷ್ಯ ತೀರಿ ಹೊಸದೊಂದು ಬೇಕೆನಿಸಿದಾಗ
ಹಳೆ ಉಡುಪು ಹರಿದು ಮೈಗವಚಿಕೊಳ್ಳಲಾರದಾಗ
ಅಷ್ಟೂ ವರ್ಷ ಒಟ್ಟಿಗಿದ್ದು, ಕನಿಷ್ಠ ಕೃತಜ್ಞತೆ ಕೇಳಿಸಿಕೊಳ್ಳಗಾದೆ
ತಣ್ಣನೆ ಅಗಲಿದಾಗ, ಮೂಲೆ ಸೇರಿದಾಗ?

ಅಚ್ಚರಿಗೂ, ಖುಷಿಗೂ, ಅಳುವಿಗೂ
ಮೂಕ ಸಾಕ್ಷಿಗಳಲ್ವೇ, ಜೀವವಿಲ್ಲದ ಸಂಗಾತಿಗಳು
ಮಾತು ಬಾರದಿದ್ದರೇನು...ಕಷ್ಟದಲ್ಲಿ ಸಂತಸದಲ್ಲಿ
ಸಮಯ ಹಂಚಿಕೊಂಡಿಲ್ಲವೇನು, ಮೌನ ಸಾಂತ್ವನ ನೀಡಿಲ್ಲವೇನು?
ಜಗಳವಿಲ್ಲ, ಪ್ರಶ್ನೆಗಳಿಲ್ಲ, ಅಪಾರ್ಥಗಳಿಲ್ಲ
ಅಸಲಿಗೆ ಮಾತೇ ಆಡೋದಿಲ್ಲ. ಆದರೂ...
ಎಂದೂ ಕೈಕೊಡದೆ, ಮತ್ತೆಂದೂ ಕೈಬಿಡದೆ
ಹೋದಲ್ಲೆಲ್ಲಾ ಜೊತೆಗೇ ಬಂದ, ಬಂಧುಗಳನ್ನೂ ಮೀರಿದ ಮಿತ್ರರು!


ಹಳತಾದಾಗ, ಬದಲಾದಾಗಲೆಲ್ಲ
ಎಸೆಯದೇ ಪೆಟ್ಟಿಗೆಯಲ್ಲಿಟ್ಟು ಪುಟ್ಟದೊಂದು ಥ್ಯಾಂಕ್ಸು
ಹೇಳುವವರ ಕಂಡು ನಗಬೇಡಿ ಜಿಪುಣರೆಂದು...
ಮನುಷ್ಯ ಸಂಬಂಧಕ್ಕೂ ವಸ್ತುಪ್ರಧಾನ ಬದುಕು ದೊಡ್ದದಲ್ಲ
ಆದರೂ... ಜೀವನಸಾಮಿಪ್ಯದ ಸಾಂಗತ್ಯಕ್ಕೊಂದು
ಶೃತಿ ಸೇರಿಸಿದವುಗಳ ಜೊತೆಗೂ ಪ್ರೀತಿ ಹುಟ್ಟುತ್ತದಲ್ವ
ಲೆಕ್ಕ ಹಾಕಿದರೆ ಗೊತ್ತಾದೀತು...ಕೆಲವೊಮ್ಮೆ
ವ್ಯಕ್ತಿಗಳಿಂತಲೂ ಹೆಚ್ಚು ವಸ್ತುಗಳ ಒಡನಾಟದ ಅವಧಿ ದೀರ್ಘ...!!
-KM

No comments:

Popular Posts