ನಿಶಾಚರಿ


ಗಾಢ ರಾತ್ರಿಗೆ ಮಂದ ಬೆಳಕಿನ ಬೀದಿ ದೀಪ
ಆಗಷ್ಟೇ ಶುರುವಾದ ಮಳೆ,
ಆವರಿಸಿದ ಮಂಜು, ಥರಗುಟ್ಟಿಸುವ ಕುಳಿರ್ಗಾಳಿ
ರಸ್ತೆ ಹೊಂಡವ ತುಂಬಿ ಎರಚುವ ಕೆಸರುನೀರು
ಒರಸುವ ವೈಪರ್ ಕೈಗಳ ಮೀರಿದ ಮುಸಲಧಾರೆ
ಕ್ಷೀಣವಾಗಿ ರಸ್ತೆ ತೋರುವಲ್ಲಿ ಬಳಲಿದ ಹೆಡ್ ಲೈಟು

ಸರ್ರನೆ ಹಿಂದಿಕ್ಕಿ ಅದೆಲ್ಲಿಗೋ ಹೋಗುವ ಗಾಡಿಗಳು
ಕ್ಷಣಮಾತ್ರದಲ್ಲಿ ದಿಗಂತ ತಲುಪಿ ಅಲ್ಲಿಂದಲೂ
ಮರೆಯಾಗಿ ಕೊನೆಗೆ ಕಾಣುವ ಕೆಂಪುದೀಪವೂ ಮಾಯ
ಅಲ್ಲಲ್ಲಿ ಉಬ್ಬಿನ ಮಾರ್ಗ, ವೇಗಕ್ಕೆ ಬ್ರೇಕು
ನರರ ಸುಳಿವೇ ಇಲ್ಲ, ಕಂಡರೂ ವಿರಳ
ಏಕಾಂಗಿ ರಸ್ತೆ ಮೇಲೆ ಒಂಟಿ ಪಯಣವೇ ದಿನವಿಶೇಷ!


ಅಲ್ಲಿ ಮಾತು ಆಡುವವರಿಲ್ಲ, ಆಡಿದರೂ ಕೇಳುವುದಿಲ್ಲ
ಗಂಟಲಿಗೆ ಬಂದದ್ದು ಉಗುಳಲು ಜಾಗವಿಲ್ಲ
ದಟ್ಟ ಇರುಳಿನ ವೇಳೆಯಲ್ಲಿ ಚಾಲಕನ ಬಿಟ್ಟು
ಮತ್ತೆಲ್ಲರೂ ವ್ಯಸ್ತರು...ನಿದ್ರೆಯ ಸುಖದಲ್ಲಿ ನಿಶ್ಚಲರು...
ಅದೇ ದಾರಿ, ಅದೇ ಹೊತ್ತು, ತಪ್ಪಿಸುವಂತಿಲ್ಲ,
ಗಮ್ಯ ತಲಪುವ ವೇಳೆ ನಿರ್ದಿಷ್ಟವಿಲ್ಲ, ಸ್ಪಷ್ಟ ಗೋಚರವಲ್ಲ...

ಊರೆಲ್ಲ ಖಾಲಿಯಿರುವಾಗ ಚಾಲಕ ಮಾತ್ರ ಕಾರ್ಯನಿರತ
ಕೆಲಸ ಮುಗಿದು ಕುಳಿದಾಗ ಸಹಚರರು ನಿಶ್ಯಬ್ಧ
ಹಗಲಿಗೂ ಇರುಳಿಗೂ ಭೇದ ಕಲ್ಪಿಸದೆ
ಊಟಕ್ಕೆ ಓಟಕ್ಕೂ ಸಮಯ ರೂಪಿಸದೆ
ತನ್ನ ತಾನು ಪ್ರಸ್ತುತಪಡಿಸಲಾಗದೆ
ವಿಸ್ತೃತ ಹೇಳಲಾಗದೆ...ನಿರ್ಲಿಪ್ತ ಓಡುವ ಗಾಡಿಯ ಹಾಗೆ!


ಮಬ್ಬು ಮಬ್ಬಾದ ಕನ್ನಡಿ, ಅಸ್ಪಷ್ಟ ಡಾಂಬರು ಮಾರ್ಗ
ಪ್ರತಿಫಲಿಸಿ ಹೊಳೆವ ವಿಭಜಕವಿದ್ದರೂ ಕಾಣದ ಗುಂಡಿ
ರಾಚಿ ಎರಚುವ ಕೆಸರು, ಹಳ್ಳಬಿಟ್ಟು ರಸ್ತೆ ಬರುವ ಪ್ರವಾಹ
ಕಾರಣವೇ ಇಲ್ಲದೆ ಅಟ್ಟಿಸುವ ನಾಯಿ ಹಿಂಡು
ಹೊತ್ತಿಗೆ ತಲುಪಿದರೂ, ಬಾಕಿಯಾದರೂ ಸಾಕ್ಷಿಯೇ ಇಲ್ಲ!
ಇದು, ಸಲೀಸು ಮಾರ್ಗದ ವಿಚಿತ್ರ ಓಟದ ನಿಶಾಚರಿಯ ಸ್ವಗತ...

No comments: