ರಂಗದಿಂದ ನಿರ್ಗಮಿಸಿದ ಬಳಿಕ...
ತೆಂಕುತಿಟ್ಟು ಯಕ್ಷರಂಗದ ಹಿರಿಯ ಭಾಗವತ ಕುಬಣೂರು ಶ್ರೀಧರ ರಾಯರು ಕಳೆದ ವಾರ ಗತಿಸಿದರು. ತುಂಬಲಾರದ ನಷ್ಟ, ಅಗಲಿದ ಚೇತನ ಇತ್ಯಾದಿ ಬಳಕೆಗಳು ಬಹಳಷ್ಟು ಕ್ಲೀಷೆಗಳಾಗಿ ಬಿಟ್ಟೀತು ಅವರ ಬಗ್ಗೆ. ನಾನಿಲ್ಲಿ ಶ್ರೀಧರ ರಾಯರ ಬದುಕಿನ ಬಗ್ಗೆಯೋ ಅವರ ಸಾಧನೆಗಳ ಬಗ್ಗೆಯೋ ಹೇಳುವುದಲ್ಲ, ಅಷ್ಟು ತಿಳಿದವನೂ ಅಲ್ಲ. ಆದರೆ, ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಜೀವವೊಂದು ಏಕಾಏಕಿ ಸಕ್ರಿಯ ತಿರುಗಾಟದಲ್ಲಿರುವಾಗಲೇ ನಿರ್ಗಮಿಸಿದರೆ ಅದರಿಂದ ರಂಗ ಮತ್ತು ಕಲಾಭಿಮಾನಿಗಳು ಎಷ್ಟೊಂದು ಕಳೆದುಕೊಳ್ಳುತ್ತಾರೆ ಎಂಬ ಬಗ್ಗೆ ಯೋಚಿಸ್ತಾ ಇದ್ದೆ...
ಮೂರು, ನಾಲ್ಕು, ಐದು ದಶಕಗಳನ್ನು ರಂಗಸ್ಥಳದಲ್ಲೇ ಕಳೆದ ಇಂತಹ ಹಿರಿಯ ಕಲಾವಿದರು ಬದುಕಿನಲ್ಲಿ ಆರ್ಜಿಸಿದ್ದು, ಕಂಡದ್ದು, ಕಲಿಸಿದ್ದು, ಮೌನವಾಗಿ ವೀಕ್ಷಿಸಿದ್ದು, ಮತ್ತ ಇದಮಿತ್ಥಂ ಅಂತ ಹೇಳುವ ಮಟ್ಟಿಗೆ ಬೆಳೆದು ನಿಂತದ್ದು ಕಾಣುವಾಗಲೆಲ್ಲಾ ಇವರೆಲ್ಲ ಯಕ್ಷಗಾನದ ವಿಶ್ವವಿದ್ಯಾನಿಲಯಗಳಲ್ವೇ? ಅನಿಸುವುದಿದೆ. ಸುಮಾರು ಐದು ದಶಕಗಳನ್ನು ರಂಗಸ್ಥಳದಲ್ಲೇ ಕಳೆದು ಈಗಲೂ ಸಕ್ರಿಯರಾಗಿ, ಸಮರ್ಥರಾಗಿ ಪಾತ್ರಗಳನ್ನು ನಿರ್ವಿಹಿಸುವ ಹಲವು ಕಲಾವಿದರೂ ಈಗಲೂ ನಮ್ಮ ನಡುವೆ ಇದ್ದಾರೆ ಎಂಬುದು ಸಮಾಧಾನದ ಸಂಗತಿ. ಅವರಲ್ಲಿ ಬಹುತೇಕರ ವಿದ್ವತ್, ಅನುಭವ ಬೆಲೆ ಕಟ್ಟಲಾಗದ್ದು. ಆದರೆ ಅವರ ನಿಗರ್ವಿ ವ್ಯಕ್ತಿತ್ವ, ಸರಳತೆ, ಪ್ರಚಾರದಿಂದ ದೂರು ಉಳಿಯುವ ನಿರ್ಲಿಪ್ತತೆ, ಆರ್ಥಿಕವಾಗಿ ಬಹಳಷ್ಟು ಗಳಿಸದಿದ್ದರೂ, ಉಸಿರು ಇರುವ ತನಕ ರಂಗಸ್ಥಳದಲ್ಲೇ ದುಡಿಯುತ್ತೇನೆ ಎಂಬ ಹುಮ್ಮಸ್ಸು ಕಂಡಾಗ ಆಶ್ಚರ್ಯವಾಗುತ್ತದೆ.
ಒಬ್ಬನ ವಯಸ್ಸಿನಷ್ಟು ಅವಧಿಯನ್ನು ರಂಗದಲ್ಲೇ ಕಳೆದ ಅವರು ಕಲಿತದ್ದು ಹಾಗೂ ಸುಮಾರು ಎರಡು ಮೂರು ತಲೆಮಾರುಗಳ ನಡುವಿನ ವ್ಯತ್ಯಾಸಗಳಿಗೆ ಸಾಕ್ಷಿಗಳಾಗಿ ಉಳಿದುಬೆಳೆದದ್ದು ದೊಡ್ಡದೊಂದು ಅಚ್ಚರಿ ಮಾತ್ರವಲ್ಲ. ಅಷ್ಟೆಲ್ಲ ಇದ್ದೂ ಮಾಗಿದ ಫಲಗಳಂತಿರುವ ಅವರ ಸಾತ್ವಿಕತೆ, ಯಕ್ಷರಂಗದಲ್ಲಿ ಅನಿವಾರ್ಯತೆ ಸೃಷ್ಟಿಸುವಂತೆ ಅವರೆಲ್ಲ ಸೃಷ್ಟಿಸಿದ ಜಾಗಗಳು ಕೂಡಾ ಸಾಧನೆಗೆ ನಿದರ್ಶನವೇ ಆಗಿದೆ.
ಯಕ್ಷಗಾನ ಆರ್ಥಿಕವಾಗಿ ಏನೇನೂ ನೀಡದಂಥ ಕಾಲದಲ್ಲೇ ಸಕ್ರಿಯರಾಗಿದ್ದು ಬಂದ ಬಹುತೇಕ ಹಿರಿಯ ಕಲಾವಿದರು ಇಂದಿಗೂ ತೀರಾ ಜನಪ್ರಿಯರಾಗಿ ದಿನದಲ್ಲಿ ಎರಡು ಮೂರು ಕಡೆಗಳಿಗೆ ಹೋಗಿ ದುಡಿಯುವಷ್ಟು ಶಕ್ತರಾಗಿ ಉಳಿದಿಲ್ಲ. ದೈಹಿಕ ಸ್ಥಿತಿ ಹಾಗೂ ಆರೋಗ್ಯ ಪರಿಸ್ಥಿತಿಯೂ ಅವರಿಗೆ ಸಹಕಾರ ನೀಡಲಿಕ್ಕಿಲ್ಲ. ಆರ್ಥಿಕವಾಗಿ ದೊಡ್ಡ ಸಂಪಾದನೆ ಆಗದಿದ್ದರೂ ದಿನದ ಕೊನೆಗೆ ಅಭಿಮಾನಿಗಳಿಂದ ಸಿಗುವ ಒಂದು ಅಭಿಮಾನದ ನುಡಿ, ಪಾತ್ರ ಚಂದವಾದರೆ ಉಂಟಾಗುವ ಸಾರ್ಥಕ್ಯದ ಭಾವವೇ ಬಹಳಷ್ಟು ಕಲಾವಿದರನ್ನು ಮತ್ತೆ ಮತ್ತೆ ರಂಗದಲ್ಲೇ ಉಳಿಯುವಂತೆ ಪ್ರೇರೇಪಿಸುವುದು.
ಕುಬಣೂರು, ಗೇರುಕಟ್ಟೆಯವರಂಥಹ ಕಲಾವಿದರು ಏಕಾಏಕಿ ರಂಗದಿಂದ ನಿರ್ಗಮಿಸಿದರೆ ಆ ಪಾತ್ರವನ್ನು, ಆ ಜಾಗವನ್ನು ಇನ್ನೊಬ್ಬರು ತುಂಬಬಹುದು. ಆದರೆ, ಆ ಶೂನ್ಯತೆಯನ್ನು ಕಟ್ಟಿಕೊಡುವುದಕ್ಕಾಗುತ್ತದೆಯೇ...? ವರ್ಷಗಳ ಕಾಲ ದೇವಿಮಹಾತ್ಮೆ ಪ್ರಸಂಗದಲ್ಲಿ ಕುಬಣೂರರ ಹಾಡಿಗೆ ಅನುಗುಣವಾಗಿ ಅಭಿನಯಿಸುತ್ತಿದ್ದ ಕೌಶಿಕೆಯೋ, ರಕ್ತಬೀಜನೋ, ಚಂಡಮುಂಡರೋ ಅವರಿಗೆ ಮುಂದಿನ ತಿರುಗಾಟದಲ್ಲಿ ಕುಬಣೂರರ ಜೊತೆಗಿನ ಆ ಅವಿನಾಭಾವದ ಕೆಮಿಸ್ಟ್ರಿ ತಪ್ಪಿ ಹೋಗಿದೆ ಎಂದು ಅನ್ನಿಸಲಕ್ಕಿಲ್ಲವೇ? ಆ ಸಹ ಕಲಾವಿದರೆಲ್ಲ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಗಲಿದ ಹಿರಿಯ ಜೀವವನ್ನು ಮಿಸ್ ಮಾಡಿಕೊಳ್ಳಬಹುದು?
ಕಲಾವಿದರ ಜಾಗಕ್ಕೆ ಇನ್ನೊಬ್ಬ ಕಲಾವಿದರು ಬರುತ್ತಾರೆ ನಿಜ. ಆದರೆ ಅವರು ಸೃಷ್ಟಿಸಿದ ಈ ವಿಶಿಷ್ಟ ಪ್ರಭಾವಳಿಯ ಜಾಗವನ್ನು ಅವರ ಹಾಗೆ ಇನ್ನೊಬ್ಬರು ಅವರಂಥಾಗಿ ತುಂಬಿಸಲು ಅಸಾಧ್ಯ. ಕಟೀಲು ಮೇಳವನ್ನು ಬಲಿಪರ ಸೆಟ್, ಕುರಿಯರ ಸೆಟ್, ಕುಬಣೂರರ ಸೆಟ, ಪೂಂಜರ ಸೆಟ್, ಪಟ್ಲರ ಸೆಟ್ ಹೀಗೆಲ್ಲ ಮೇಳದ ಅಭಿಮಾನಿಗಳು ಗುರುತಿಸುತ್ತಾರೆ (೧ನೇ, ೨ನೇ, ೩ನೇ.... ಎನ್ನುವ ಬದಲಿಗೆ). ಹೀಗಿರುವಾಗ ಆ ಮೇಳಕ್ಕೊಂದು ಗುರುತಿಸುವಿಕೆ ತಂದುಕೊಂಡ ಜೀವ ಅವರು. ಅವರ ಶೈಲಿಯೋ, ಅವರ ಗುಣವೋ, ಅವರು ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ರೀತಿಯೋ ಇವೆಲ್ಲಾ ಕಳೆದ ಎರಡು ಮೂರು ದಶಕಗಳಿಂದ ಪ್ರೇಕ್ಷಕರಿಗೆ ಚಿರಪರಿಚಿತ. ಆಟಗಳನ್ನು ನೋಡಿದವನೇ ನೋಡುವುದು. ಎಲ್ಲರಿಗೂ ಗೊತ್ತು. ಆದರೂ ಅರಸಿ ಅರಸಿ ತಮ್ಮ ಇಷ್ಟದ ಕಲಾವಿದರಿರುವ ಮೇಳಗಳ, ಪ್ರಸಂಗಗಳ ಆಟವನ್ನೇ ಅಭಿಮಾನಿಗಳು ಹುಡುಕಿ ಬಂದು ನೋಡುತ್ತಾರೆ. ಯಾಕೆ ಹೇಳಿ...?
ಅದೊಂದು ಖುಷಿ, ಅವರಿಂದ ಪಡೆಯುವುದರಲ್ಲಿ, ಅವರನ್ನು ನೋಡುವುದರಲ್ಲಿ, ಅವರ ಉಪಸ್ಥಿತಿಯಲ್ಲಿ ಕಂಡುಕೊಳ್ಳುವ ಅನುಭೂತಿಯಲ್ಲಿ, ರಂಗದಲ್ಲಿ ಸೃಷ್ಟಿಯಾಗುವ ಒಂದು ಭಿನ್ನವಾದ ಎನರ್ಜಿ ಕೊಡುವ ಸನ್ನಿವೇಶದಲ್ಲಿ ತನ್ನನ್ನು ತಾನು ತಲ್ಲೀನನಾಗಿಸುವ ಹುಡುಕಾಟ ಪ್ರೇಕ್ಷಕನದ್ದು. ಹಾಗಾಗಿ ವರುಷಗಳಿಂದ ಕಂಡುಕೊಂಡು ಬಂದ ಕಲಾವಿದ ಇನ್ನಿಲ್ಲ ಎಂಬುದು ಪ್ರೇಕ್ಷಕರನ್ನು, ಸಹ ಕಲಾವಿದರನ್ನು ಸಿಕ್ಕಾಪಟ್ಟೆ ಕಾಡುತ್ತದೆ. ಅವರಿಲ್ಲದ ನಂತರ ಅವರ ಅನುಪಸ್ಥಿತಿ ದೊಡ್ಡ ಮಟ್ಟದಲ್ಲಿ ಎದ್ದು ಕಾಣುವುದು. ಅವರ ಶೈಲಿಯನ್ನು ಇನ್ಯಾರೋ ಅನುಕರಿಸಬಹುದು, ಅವರಿಗಿಂತ ಚೆನ್ನಾಗಿ ಹಾಡಬಹುದು. ಆದರೆ ಅವರು ಅವರಾಗಲಾರರು ಅಲ್ಲವೇ?
೪೦-೫೦ ವರ್ಷಗಳನ್ನು ಯಕ್ಷಗಾನ ತಿರುಗಾಟದಲ್ಲೇ ತೊಡಗಿಸಿಕೊಂಡವರು, ತಮ್ಮ ಸ್ವಂತ ಖುಷಿಯ ಬಗ್ಗೆ, ಕುಟುಂಬದವರ ಜೊತೆ ಹಾಯಾಗಿರುವ ಬಗ್ಗೆ, ತಮ್ಮ ಆರೋಗ್ಯವನ್ನು ಸ್ವಲ್ಪವೂ ಕೆಡದಂತೆ ಜಾಗರೂಕವಾಗಿರಿಸುವ ಬಗ್ಗೆ ಎಷ್ಟರ ಮಟ್ಟಿಗೆ ಚಿಂತಿಸಿರಬಹುದು? ಅದಕ್ಕೆ ಅವರಿಗೆ ಅವಕಾಶ ಸಿಕ್ಕಿದ್ದೀತೇ? ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು, ಗೌರವವನ್ನು, ಕಲೆಯ ಕುರಿತ ಜ್ಞಾನವನ್ನು ಪಡೆದ ಕಲಾವಿದರೂ ಸ್ವಂತ ಬದುಕಿನಲ್ಲಿ ಅಷ್ಟೇ ಸಂಪತ್ತನ್ನು, ನೆಮ್ಮದಿಯನ್ನೂ, ಪ್ರಚಾರವನ್ನೂ ಗಳಿಸಿಡಲು ಶಕ್ತರಾಗಿದ್ದಿರಬಹುದೇ...
ಒಂದೆರಡು ಶಾಟ್‌ಗಳಲ್ಲಿ ಓಕೆಯಾಗುವ ಸಿನಿಮಾಗಳಲ್ಲಿ ನಟಿಸಿ ಅದು ೧೦೦, ೨೦೦ ದಿನ ಓಡಿದರೆ ದೊಡ್ಡ ಸುದ್ದಿ, ಅವರಿಗೆ ಲಕ್ಷ, ಕೋಟಿಗಳಲ್ಲಿ ರಾಯಧನ ನೀಡಿಕೆ, ಸಿಟ್ಟಾಪಟ್ಟೆ ಸಂದರ್ಶನಗಳು, ಐಶಾರಾಮಿ ಬದುಕು... ಓಹ್, ಎಷ್ಟೊಂದು ಮರ್ಯಾದೆ? ಎಷ್ಟೊಂದು ವೈಭವ? ಎಷ್ಟೊಂದು ಗಳಿಕೆ ಅಲ್ಲವೇ?
ಅದೇ ೪೦-೫೦ ವರ್ಷಗಳಿಂದ ಪ್ರತಿ ರಾತ್ರಿ ನಿದ್ದೆಗೆಟ್ಟು ಪ್ರತಿ ಪ್ರದರ್ಶನವನ್ನೂ ಲೈವ್ ಆಗಿಯೇ ನೀಡಿ, ತಾನೇ ಸ್ವತಃ ಮೇಕಪ್ ಮಾಡಿಕೊಂಡು, ಟೆಂಟಿನ ಮೂಲೆಯ ಬಟ್ಟೆಯ ಗಂಟಿನ ಮೇಲೆ ಮಲಗಿ ನಿದ್ರೆ ಮಾಡಿ, ಊರಿಂದ ಊರಿಗೆ ಬಸ್ಸಿನಲ್ಲೇ ಹೋಗಿ, ವರ್ಷಗಳನ್ನು ನೂಕಿದ ಯಕ್ಷಗಾನ ಕಲಾವಿದರ ಬದುಕಿಗೂ ಎಷ್ಟೊಂದು ವ್ಯತ್ಯಾಸ? ಎಷ್ಟೋ ಯಕ್ಷಗಾನ ಕಲಾವಿದರು ಗತಿಸಿದ್ದು ಕನಿಷ್ಠ ರಾಜ್ಯಮಟ್ಟದ ಸುದ್ದಿಯೂ ಆಗುವುದಿಲ್ಲ. ಅಂತಹ ದೊಡ್ಡ ಶಕ್ತಿ, ಜ್ಞಾನದ ಗಣಿ ಇನ್ನಿಲ್ಲವೆಂಬ ಸುದ್ದಿ ದೊಡ್ಡ ಸಂಗತಿಯೇ ಆಗಿರುವುದಿಲ್ಲ. ಅವರ ಊರಿನಲ್ಲಿ, ಅಭಿಮಾನಿಗಳ ವಲಯದಲ್ಲಿ ಮಾತ್ರ ಸದ್ದಾಗುತ್ತದೆ. ಇತ್ತೀಚೆಗೆ ಗಂಗಯ್ಯ ಶೆಟ್ಟರು ರಂಗದಲ್ಲೇ ಕುಸಿದು ಬಿದ್ದ ದೃಶ್ಯಗಳು ದೊಡ್ಡ ಪ್ರಮಾಣದಲ್ಲಿ ವಾಹಿನಿಗಳಿಗೆ ಸುದ್ದಿಯಾಯಿತೇ ವಿನಃ ಅವರು ದಶಕಗಳಿಂದ ಮಾಡುತ್ತಾ ಬಂದ ಕಲಾಸೇವೆ ಒಂದು ಚರ್ಚೆಯ ವಿಚಾರವಾಗಲಿಲ್ಲ. ೩-೪ ಸಿನಿಮಾಗಳೇ ಗೆದ್ದರೆ ದೊಡ್ಡ ಸುದ್ದಿಯಾಗುವ ಕಾಲದಲ್ಲಿ ೩-೪ ದಶಕಗಳನ್ನು ಕಳೆದು ೭೦ ಕಳೆದರೂ ವಯಸ್ಸನ್ನೇ ನಾಚಿಸುವಂಥೆ ಕುಣಿಯುವ, ವಯಸ್ಸನ್ನು ಪ್ರದರ್ಶನದಲ್ಲಿ ಕಾಣಗೊಡದ ಕಲಾವಿದರು, ಭಾಗವತರು ಇಂದಿಗೂ ತೀರಾ ಸರಳರು, ನಿರ್ಲಿಪ್ತರು ಹಾಗೂ ಎಷ್ಟೋ ಬಾರಿ ಅಪೇಕ್ಷೆಗಳನ್ನೇ ಹೊಂದದವರು ಅನ್ನಿಸುವುದಿದೆ. ಅವರ ಧ್ವನಿ, ಸಂಗ್ರಹದಲ್ಲಿದ್ದರೆ ಅವರ ಪ್ರಸ್ತುತಿಗಳ ವಿಡಿಯೋಗಳು ಮಾತ್ರವಲ್ಲ, ವರುಷಗಳಿಂದ ಹತ್ತಿರದಿಂದಲೋ, ದೂರದಿಂದಲೋ ಅವರನ್ನು ಕಂಡು, ಮೆಚ್ಚಿ, ಪ್ರೋತ್ಸಾಹಿಸಿದ ಆಶ್ರಯದಾತರು, ಅಭಿಮಾನಿಗಳೇ ಅವರ ಪಾಲಿನ ಪ್ರಪಂಚ, ಅವರು ಬಿಟ್ಟು ಹೋದ ಶೂನ್ಯತೆಯನ್ನು ಕಾಣಬಲ್ಲವರು...
ಸಾವಿರ ಸಾವಿರ ಇರುಳುಗಳ ಬಣ್ಣದ ಬೆಳಕಿನ ರಾತ್ರಿಗಳಲ್ಲಿ ರಂಜನೆ ನೀಡಿ ಸ್ವತಃ ಇಲ್ಲವಾದ ಮೇಲೆ ಕಾಡುವುದು ಧ್ವನಿ ಮತ್ತು ಬೆಳಕು... ಮತ್ತೆ ಇನ್ನೂ ಅವರಿರಬಾರದಿತ್ತೇ ಅನ್ನಿಸುವ ಭಾವ ಮಾತ್ರ.

No comments:
Post a Comment