ಹೊಸದೊಂದು ಯಕ್ಷಋತುವಿನೊಂದಿಗೆ...




ಮತ್ತೊಂದು ಯಕ್ಷಋತು ಶುರುವಾಗಿದೆ.
ಮಳೆಗಾಲದಲ್ಲಿ ಅಲ್ಲಲ್ಲಿ, ಸಭಾಂಗಣಗಳಲ್ಲಿ, ಸಭೆ ಸಮಾರಂಭಗಳಲ್ಲಿ ನಡೆಯುತ್ತಿದ್ದ ಆಟಗಳನ್ನು ಇನ್ನು ಮುಂದಿನ ಪತ್ತನಾಜೆ ವರೆಗೆ ಮೇಳಗಳ ಬ್ಯಾನರುಗಳಲ್ಲಿ ಬಯಲಲ್ಲೇ ಕುಳಿತು ಆಸ್ವಾದಿಸಬಹುದು. ಮೇಳಗಳೆಲ್ಲ ಮತ್ತೆ ಎಡಿಟ್ ಆಗಿ, ಪರಿಷ್ಕೃತಗಳಾಗಿ, ರಿನೇಮ್ ಹೊಂದಿ, ಕೂಡಿಸುವಿಕೆ, ಕಳೆಯುವಿಗೆಗಳನ್ನು ದಾಟಿ ಬಂದು ಸಜ್ಜಾಗಿವೆ. ಟೆಂಟು ಮೇಳಗಳು, ಹರಿಕೆ ಮೇಳಗಳ ಚೆಂಡೆಯ ಪೆಟ್ಟಿನ ಸದ್ದು ಝೇಂಕರಿಸಲು ಶುರುವಾಗಿ ವಾರವೇ ಕಳೆಯಿತು.


ಯಾಕೋ ಈ ಬಾರಿ ಯಕ್ಷಗಾನ ಮಾಧ್ಯಮಗಳಲ್ಲಿ ವಿವಿಧ ಕಾರಣಗಳಿಗೆ ಸುದ್ದಿಯಾಗಿದೆ. ಬಯಲಾಟಗಳಿಗೆ ಇರುವ ಬೇಡಿಕೆಗಳು, ಕಲಾವಿದರ ಆಯ್ಕೆ ಗೊಂದಲಗಳು, ಪ್ರದರ್ಶನದಲ್ಲಾದ ಎಡವಟ್ಟುಗಳು, ರಂಗದಲ್ಲೇ ಪ್ರಾಣ ತ್ಯಜಿಸಿದ ಕಲಾವಿದರು, ಅಕಾಲದಲ್ಲಿ ಅಗಲಿದ ಹಿರಿಯರು...
ಹೀಗೆ ಯಕ್ಷಗಾನ ಸುದ್ದಿಗಳು ಈ ಬಾರಿ ಹೆಚ್ಚೇ ಸದ್ದು ಮಾಡಿವೆ...
ಹಳೆ ಬೇರು, ಹೊಸ ಚಿಗುರುಗಳ ಸಂಗಮದಲ್ಲಿ 2017 18ನೇ ಸಾಲಿನ ಯಕ್ಷಗಾನ ತಿರುಗಾಟ ಆರಂಭವಾಗಿದೆ.



ಈಗ ಪರಿಷ್ಕೃತ ಮೊಬೈಲುಗಳು ಯಕ್ಷಪ್ರೇಮಿಗಳ ಕೈಯ್ಯಲ್ಲೂ ಇವೆ, 4ಜಿ ನೆಟ್ ವರ್ಕು, ಬಲಿಷ್ಠ ಬ್ಯಾಟರಿ ವ್ಯವಸ್ಥೆಗಳೂ ಇವೆ. ಎಲ್ಲೋ ಮೂಲೆಯಲ್ಲಿ ಆಗುವ ಆಟವೂ ಈಗ ಮೊಬೈಲುಗಳ ಮೂಲಕ ಜಗಜ್ಜಾಹೀರು. ಆಟಕ್ಕೆ ಸರಾಗವಾಗಿ ಹೋಗಲು ಅವಕಾಶವಿರುವ ಅದೃಷ್ಟಶಾಲಿಗಳು, ಎಲ್ಲಿಯೋ ಕುಳಿತು ವಾಟ್ಸಪು ಗ್ರೂಪುಗಳಲ್ಲಿ ಬರುವ ಆಟಗಳ ದೃಶ್ಯಗಳನ್ನು ಕಂಡು ಬರಿದೇ ಮರುಗುವವರು, ಲೈಕು ಕೊಟ್ಟು ಸುಮ್ಮನಾಗುವವರು, ನೋಡಿಯೂ ಮಾತನಾಡದವರು ಈಗ ಮೈಕೊಡವಿ ಎದ್ದಿದ್ದಾರೆ. ಯಾವ ಮೇಳಕ್ಕೆ ಯಾರಂತೆ, ಭಾಗವತರು ಎಲ್ಲಿಗೆ ಹೋದರಂತೆ, ಕಾಲಮಿತಿಯಾ... ಹೀಗೆಲ್ಲಾ ಚರ್ಚೆಗಳು ಶುರುವಾಗಿದೆ. ಟಿ.ವಿ.ಗಳು, ಧಾರಾವಾಹಿಗಳು, ವಾಟ್ಸಪ್ಪುಗಳು ಸಂಸ್ಕೃತಿಯನ್ನು ಕೊಲ್ಲುತ್ತಿವೆ ಎಂಬ ಬೊಬ್ಬೆ ನಡುವೆಯೂ ಯಕ್ಷಗಾನ ಮೇಳಗಳಲ್ಲಿನ ಕಲಾವಿದರ ಬದಲಾವಣೆ ಬಗ್ಗೆ ಎಷ್ಟೊಂದು ಚರ್ಚೆಗಳು ನಡೆಯುತ್ತಿವೆಯಲ್ಲ ಎಂದು ಆಶ್ಚರ್ಯ ಆಗುತ್ತಿದೆ. ಬಹುಷಹ ತಂತ್ರಜ್ಞಾನ ಎಷ್ಟೇ ಬದಲಾದರೂ ಯಕ್ಷಗಾನ ಅವನ್ನು ಬಳಸಿಕೊಂಡಿದೆ ಹೊರತು ಅದರಿಂದ ಪೆಟ್ಟು ತಿಂದಿಲ್ಲ. ಹಾಗೆ ನೋಡಲು ಹೋದರೆ ಸ್ಮಾರ್ಟ್ ಫೋನ್ ಜನಪ್ರಿಯವಾದಂತೆ ಕಲಾವಿದ, ಪ್ರೇಕ್ಷಕರ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಆಟಕ್ಕೆ ಹೋಗುವ ಆಟಪ್ರಿಯರೆಲ್ಲಾ ಗುಂಪುಗಳನ್ನು ಕಟ್ಟಿಕೊಂಡು ಒಂದಾಗುತ್ತಿದ್ದಾರೆ. ಆ ತಮಗೆ ಬೇಕಾದ ಪ್ರಸಂಗಗಳನ್ನು ಆಯ್ದು ಆಟಗಳನ್ನು ಆಡಿಸುತ್ತಿದ್ದಾರೆ, ಆಟಕ್ಕೆ ಹೋಗುವ ಯುವಕರ ಸಂಖ್ಯೆ ಜಾಸ್ತಿಯಾಗಿದೆ. ರಂಗದಲ್ಲಿ ಸರಿ ಕಾಣದ್ದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಡುತ್ತಿದ್ದಾರೆ....
ಹಾಗಾಗಿ ಈ ಯುಗ ತಂತ್ರಜ್ಞಾನದ್ದೇ ಕಾರುಬಾರು. ಪ್ರೇಕ್ಷಕರೆಲ್ಲಾ ಫೋಟೊಗ್ರಾಫರುಗಳು, ರಂಗದಲ್ಲಿ ಕಂಡದನ್ನು ಆಗಿಂದಾಗ್ಗೆ ಸೆರೆ ಹಿಡಿದು ಆಟಕ್ಕೆ ಬಾರದವರಿಗೆ ತೋರಿಸುವ ಹಪಹಪಿಕೆ ಉಳ್ಳವರು.


ಯಕ್ಷಗಾನವೇ ಇರಲಿ, ಕ್ರಿಕೆಟ್ಟೇ ಇರಲಿ... ತಮಗೆ ಇಷ್ಟವಾದದ್ದನ್ನು ಮತ್ತೆ ನಾಲ್ಕು ಜನರಿಗೆ ಹಂಚಿ ಅಧರ ಬಗ್ಗೆ ಚರ್ಚೆ ಮಾಡುವುದು ಅದರ ಗೀಳು (ಅಭಿಮಾನ) ಅಂಟಿಸಿಕೊಂಡವರಿಗೆ ಇಷ್ಟದ ವಿಚಾರವೇ ಸರಿ. ಇದೇ ಫಾರ್ಮುಲಾ ಬಳಸಿಯೇ ಯಕ್ಷಗಾನದ ವಾಟ್ಸಪ್ ಗ್ರೂಪುಗಳು ಸಕ್ರಿಯವಾಗಿರುವುದು. ಅಷ್ಟೇ ಅಲ್ಲ, ಹೊಸ ಕಲಾವಿದರು, ಹೊಸ ಮೇಳಗಳ ಬಗ್ಗೆಯೂ ಮಾಹಿತಿ ವಿನಿಮಯ ಆಟಕ್ಕೆ ಹೋಗದವರನ್ನೂ ಹೋಗಿಸುವ ಹಾಗೆ ಮಾಡುತ್ತದೆ...

ರಾತ್ರಿ ಊಟ ಮುಗಿಸಿ, ಸೂಟೆ ಹಿಡಿದು ಕಾಡುವ ಚಳಿ ನಡುವೆ ಶಾಲು ಹೊದ್ದು ಮೈಲುಗಟ್ಟಲೆ ಆಟಕ್ಕೆ ಹೋಗುವ ದೃಶ್ಯಗಳು ಈಗ ಅಪರೂಪ. ಸಂಜೆ ಹೊತ್ತಿಗೇ ಶುರುವಾಗುವ ಆಟಕ್ಕೆ ಹೋಗುವ ಮಂದಿ ರಾತ್ರಿ 11, 12ರ ವೇಳೆಗೆ ಆಟ ಮುಗಿಸಿ ಮನೆ ತಲುಪಿ ಮಲಗಿರುತ್ತಾರೆ. ಕಾಲಮಿತಿಯ ಮಹಿಮೆ. ಆಟವೆಲ್ಲಿದೆ ಎಂದು ಚೆಂಡೆ ಪೆಟ್ಟಿನ ಸದ್ದು ಕೇಳಿ ದಿಕ್ಕು ಗುರುತಿಸಿ ಅಲೆಯಬೇಕಾದ ಪ್ರಮೇಯವಿಲ್ಲ. ವಾಟ್ಸಪು ಗ್ರೂಪುಗಳಲ್ಲಿ ಮಾಹಿತಿ ಲಭ್ಯ.
ಮುಂಜಾನೆ ಅಲರಾಂ ಇಟ್ಟು ಆಟಕ್ಕೆ ಹೋಗುವ ವರ್ಗವೇ ಬೇರೆ. ಇಷ್ಟದ ಭಾಗವತ, ಇಷ್ಟದ ಕಲಾವಿದ, ಇಷ್ಟದ ಮೇಳ, ಇಷ್ಟದ ಪ್ರಸಂಗಗಳ ಕೆಟಗರಿ ಮಾಡಿ ಬೇಕು ಬೇಕಾದ ಹಾಗೆ ಆಟಕ್ಕೆ ಹೋಗಬಲ್ಲವರು ಅದೃಷ್ಟಶಾಲಿಗಳು...ಹೋಗಲಾಗದವರು ಕೂತದಲ್ಲಿಯೇ ಆಟದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುವ ಕಾರಣ ಅವರೂ ಅದೃಷ್ಟಶಾಲಿಗಳು...ಅಲ್ವೇ...

ಈ ಋತುವಿನಲ್ಲೂ ಆಟಗಳು ವಿಜೃಂಭಿಸಲಿ, ಒಳ್ಳೆ ಕಾರಣಕ್ಕೆ ಸುದ್ದಿಯಾಗಲಿ... ನಭೂತೋ ಎಂಬಂತೆ ಮೆರೆಯಲಿ...
ಯಕ್ಷಗಾನಂ ಗೆಲ್ಗೆ.

-ಕೆಎಂ, (ಬಲ್ಲಿರೇನಯ್ಯ, ಯಕ್ಷಕೂಟ, ವಾಟ್ಸಪ್ ಬಳಗ).




No comments: