ದಾರಿಯೇ ಕರೆದೊಯ್ಯುವ ಅಚ್ಚರಿ ....

ಒಂದು ದಾರಿಯನ್ನು ನಾವೇ ಆರಿಸಿಕೊಂಡು ಹೋಗುವುದಕ್ಕೂ, ದಾರಿಯೇ ನಮ್ಮನ್ನು ಕರೆದೊಯ್ಯುವುದಕ್ಕೂ ವ್ಯತ್ಯಾಸವಿದೆ. ದಾರಿ ಮತ್ತು ಗುರಿ ನಿರ್ಧಾರವಾಗುವುದು ಅವರವರ ಸಾಧನೆ, ಅದೃಷ್ಟ, ಹಣೆಬರಹ ಎಲ್ಲದರ ಮೇಲೆ... ಬಹಳಷ್ಟು ಅನುಭವಗಳು ಸಿಗುವುದು ನಡೆಯುತ್ತಾ ಹೋದ ಹಾಗೆ. ನಡೆಯುವದಕ್ಕೂ ಮೊದಲು ಯಾರೂ ಚೆಂದದ ಪುಸ್ತಕ ರಚಿಸಿ ಕೊಟ್ಟಿರುವುದಿಲ್ಲ. ಈ ದಾರಿಯಲ್ಲಿ ಹೀಗೆ ಹೋದರೆ ಹೀಗಾಗುತ್ತದೆ ಎಂಬ ಹಾಗೆ. ದಾರಿಯುದ್ದಕ್ಕೂ ಅನುಭವಗಳ ಮೂಟೆಗಳು ರಾಶಿ ರಾಶಿ ಸಿಗುತ್ತವೆ. ಅವನ್ನು ಗ್ರಹಿಸಿಯೇ ಪಥಿಕ ಮತ್ತೊಂದು ಪುಸ್ತಕ ಬರೆಯಬಹುದೇನೋ... ಆದರೆ, ದಾರಿ ಮುಗಿಯುವಷ್ಟರಲ್ಲಿ ಸಿಕ್ಕಿದ ಅನುಭವಗಳಷ್ಟೂ ಪಥಿಕನನ್ನು ಪ್ರೌಢನನ್ನಾಗಿಸುತ್ತವೆ, ಚಿಂತಕನನ್ನಾಗಿಸಲೂ ಬಹುದು. ಅನುಭವದ ಪಾಠಶಾಲೆಯಲ್ಲಿ ಮಾಗಿದ ಮನಸ್ಸು ಮತ್ತಷ್ಟು ಹುರಿಗೊಳ್ಳಬಹುದು... 

ವಿಪರ್ಯಾಸವೆಂದರೆ ಬಹಳಷ್ಟು ಪಾಠಗಳು ಸಿಲಬಸ್ ರೂಪದಲ್ಲಿ ಅರ್ಥವಾಗಿ ಕೈಗೆ ಸಿಕ್ಕುವಾಗ ನಾವು ಆ ತರಗತಿ ದಾಟಿ ಆಗಿರುತ್ತದೆ. ಅದಕ್ಕೇ ಹೇಳುವುದು ಅನುಭವದ ಪಾಠ ಶಾಲೆಯಲ್ಲಿ ಕಲಿತ ಪಾಠ ಶಾಶ್ವತ ಆದರೆ ಅದು ದುಬಾರಿ ಅಂತ. ಸಾಧನೆ, ಪರಿಶ್ರಮ, ಕಲಿಕೆ, ಏಕಾಗ್ರತೆ, ಚಿಂತನೆ ಎಲ್ಲದಕ್ಕೂ ಮಿಗಲಾದ ಒಂದು ವಿಧಿ ಬದುಕಿನುದ್ದಕ್ಕೂ ಸುತ್ತಮುತ್ತ ಕೇಕೆ ಹಾಕಿ ಜೊತೆಗೇ ಕಂಡೂ ಕಾಣದಂತೆ ಬರುತ್ತಲೇ ಇರುತ್ತದೆ. ಲೆಕ್ಕಪುಸ್ತಕದ ಖಾತೆಗಳ ಹಾಗೆ ವಿಶಿಷ್ಟ ಅನುಭವಗಳು, ಪಡೆದುಕೊಂಡದ್ದು, ಬಿಟ್ಟು ಹೋದದ್ದು ಎಲ್ಲದರ ಲೆಕ್ಕಾಚಾರಗಳು ಆ ಪುಸ್ತಕದಲ್ಲಿ ದಾಖಲಾಗಿರುತ್ತವೆ. ಆಯುಷ್ಯ ಕಳೆದುಕೊಂಡು ಹೋದಂತೆ ಲೆಕ್ಕಾಚಾರದ ಪುಸ್ತಕದಲ್ಲಿ ರಾಶಿ ರಾಶಿ ಅನುಭವಗಳು ದಾಖಲಾಗಿರುತ್ತವೆ. 


ಆದರೆ.... ಒಬ್ಬನ ಲೆಕ್ಕಾಚಾರದ ಬದುಕನ್ನು ಓದಿ ಮತ್ತೊಬ್ಬನ ಬದುಕು ಹೋಗಲು ಸಾಧ್ಯವಿಲ್ಲ. ಯಾಕಂದರೆ ಪ್ರತಿ ಬದುಕಿನ ಪಾಠಶಾಲೆಯ ಸಿಲಬಸ್ ಕೂಡಾ ಬೇರೆ ಬೇರೆ.. ಅವರವರೇ ದಾರಿಯಲ್ಲಿ ನಡೆಯಬೇಕು... ಅವರವರೇ ಪಾಠ ಕಲಿಯಬೇಕು.... ಆಯುಷ್ಯ ತೀರಿದ ಬಳಿಕ ಇಲ್ಲವಾಗುವ ವ್ಯಕ್ತಿಯನ್ನು ಮತ್ತೆ ಯಾರೂ ಸಂದರ್ಶನ ಮಾಡಿ ಕೇಳಲು ಸಾಧ್ಯವಾಗುವುದಿಲ್ಲ. ನಿಮ್ಮ ಬದುಕು ತೃಪ್ತಿದಾಯಕವಾಗಿತ್ತೇ, ಬದುಕಲ್ಲಿ ಏನೆಲ್ಲ ಕಲಿತಿರಿ ಎಂದು ಪ್ರಶ್ನಿಸಿ ಉತ್ತರ ಪಡೆಯಲು ಸಾಧ್ಯವೇ ಇಲ್ಲ. ಭೌತಿಕವಾಗಿಯೋ, ಮಾನಸಿಕವಾಗಿಯೋ ಇಲ್ಲವಾಗುವುದೂ ಎರಡೂ ಒಂದೇ.... ಚಿಂತನೆಯಿಲ್ಲದೆ ಭೌತಿಕ ಅಸ್ತಿತ್ವಕ್ಕೂ ಬೆಲೆಯೇ ಇಲ್ಲ.. 


ವಯಸ್ಸಾಗುವುದು ದೇಹಕ್ಕೆ ಎನ್ನುತ್ತಾರೆ.... ಹೌದು.. ಆದರೆ ಮನಸ್ಸೂ ಪಕ್ವವಾಗುತ್ತದೆ. ವಯಸ್ಸು ದೈಹಿಕವಾಗಿ ದೇಹವನ್ನು ಆವರಿಸಿಕೊಳ್ಳುವುದು ಮಾತ್ರವಲ್ಲ, ಜವಾಬ್ದಾರಿಗಳು, ಆಸಕ್ತಿಗಳು, ಹವ್ಯಾಸಗಳು, ಅನಿವಾರ್ಯ ಕರ್ಮಗಳು ಎಲ್ಲವೂ ಮನಸ್ಸು ಮತ್ತು ದೇಹವನ್ನು ದಂಡಿಸುತ್ತದೆ. ಬೇಕೆಂದೋ, ಬೇಡವೆಂದರೂ ಕಟ್ಟಿಕೊಂಡ ಬದುಕನ್ನು ಅಚ್ಚುಕಟ್ಟಾಗಿ ಸಾಗಿಸುವಲ್ಲಿ ಕೆಲವನ್ನು ಪಡೆಯುವುದು, ಕೆಲವನ್ನು ಬಿಡುವುದು, ಕೆಲವನ್ನು ಹೊಂದಿಸಿಕೊಂಡು ಹೋಗಬೇಕಾದ್ದು.. ಅನಿವಾರ್ಯ ಮಾತ್ರವಲ್ಲ, ಕಡೆಗಣಿಸಲಾಗದ ಸತ್ಯವೂ ಹೌದು....


ಜೀವಿತಾವಧಿಯಲ್ಲಿ ನಾವು ಸಾಧಕರಾಗಿದ್ದೇವೆಯೋ, ಚಿಂತಕರಾಗಿದ್ದೇವೆಯೋ, ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗಿದ್ದೇವೆಯೋ, ಖುಷಿ ಖುಷಿಯಾಗಿ ಬದುಕಿದ್ದೇವೆಯೋ, ಚಿಂತೆಯಲ್ಲೇ ದಿನ ದೂಡಿದ್ದೇವೆಯೋ, ಪರೋಪಕರಾಗಿಯಾಗಿದ್ದವೋ, ಲೋಕಕಂಟಕರಾಗಿ ಬಾಳಿದ್ದೇವೆಯೋ ಇದನ್ನೆಲ್ಲ ನಮ್ಮ ಸುತ್ತಮುತ್ತಲು ಕುಳಿತು, ಪರಾಮರ್ಶಿಸಿ ಅಂಕಗಳನ್ನು ನೀಡಿ ಲೇಬಲ್ ಹಚ್ಚಲು ಸಾಕಷ್ಟು ಮಂದಿ ಇರುತ್ತಾರೆ. ನಮಗೇ ಅಚ್ಚರಿ ಆಗುವ ಮಟ್ಟಿಗೆ ನಮ್ಮನ್ನು ವಿಮರ್ಶಿಸಬಲ್ಲ ಬುದ್ಧಿವಂತರು. ಎಲ್ಲದಕ್ಕೂ ಮಿಗಿಲಾದದ್ದು ಮನಸ್ಶಾಕ್ಷಿ. ಆತ್ಮತೃಪ್ತಿ ಮತ್ತು ತನ್ನ ಮೇಲೆ ತನಗಿರುವ ನಂಬಿಕೆ. ಇವನ್ನು ಕಳೆದುಕೊಂಡ ಬಳಿಕ ಮತ್ಯಾವುದೂ ಮನಸ್ಸಿಗೆ ಸಮಾಧಾನ ಕೊಡಲಾರದು. ಎಷ್ಟೋ ಬಾರಿ ನಮಗೆ ಪರರಿಗೆ ಉಪಕಾರ ಮಾಡಲು ಆಗದೇ ಇರಬಹುದು. ಅಂತರ ಸಂದರ್ಭಗಳಲ್ಲೆಲ್ಲ ಉಪದ್ರ ಮಾಡದಿರುವುದೇ ನಾವು ಮಾಡಬಹುದಾದ ಉಪಕಾರ. ಎಷ್ಟೋ ಬಾರಿ ಏನನ್ನೂ ಹೇಳಲಾಗದೇ ಹೋಗಬಹುದು. ಅಂತಹ ಸಂದರ್ಭ ಮೌನವಾಗಿರಬಹುದಾದ್ದೇ ನಮ್ಮಿಂದ ಆಗಬಹುದಾದ ದೇಶಸೇವೆ. ಏನೂ ಮಾಡಲಾಗಲಿಲ್ಲ ಎಂದು ಏನನ್ನೋ ಮಾಡಲು ಹೋಗಿ... ಏನೇನೋ ಆಗಿ... ಏನೂ ಇಲ್ಲದ್ದಕ್ಕೆ ಏನೇನನ್ನೆಲ್ಲ ಮಾಡಿದ ಎಂದು ಲೋಕ ದೂಷಿಸುವ ಹಾಗೆ ಆಗುವುದಕ್ಕಿಂತ ತನ್ನ ಪಾಡಿಗೆ ತಾನಿದ್ದರೂ ಪರರಿಗೆ ಅದರಿಂದ ಉಪದ್ರ ಏನೂ ಇಲ್ಲ ಎಂಬುದು ಅತ್ಯಂತ ಸರಳವಾದ ಸತ್ಯ. 


ಕಾಲವನ್ನು ತಡೆಯಲು, ಹಿಂದಿಕ್ಕಲು, ಹಿಂದೆ ಹೋಗಲು ಆಗುವುದಿಲ್ಲ. ನಮ್ಮ ಮೂಡನ್ನು ನೋಡಿ ಕಾಲ ಚಲಿಸುವುದಲ್ಲ. ಕಾಲದ ಪ್ರವಾಹದಲ್ಲಿ ನಾವು ಅಣುಗಳು ಮಾತ್ರ. ನಮ್ಮ ಮನಸ್ಥಿತಿ, ಕನಸುಗಳನ್ನು ಕಟ್ಟಿಕೊಂಡು ಕಾಲಕ್ಕೆ ಏನೂ ಆಗಬೇಕಾದ್ದಿಲ್ಲ. ಆಯುಷ್ಯದ ಜೊತೆ ಜೊತೆಗೇ ಸಾಗುವ ಕಾಲವನ್ನು ಹೇಗೆ, ಎಲ್ಲಿ, ಎಷ್ಟು ಸದುಪಯೋಗ ಮಾಡಬಹುದು ಎಂಬುದಷ್ಟೇ ನಮಗಿರುವ ಆಯ್ಕೆ. ಮತ್ತೆ ಸಾಧನೆ, ಶ್ರೇಷ್ಠತೆ, ಬುದ್ಧಿವಂತಿಕೆ, ಸೋಲು, ಗೆಲವು ಎಲ್ಲ ಅದಕ್ಕೆ ಸಿಗುವ ಪ್ರಚಾರ, ಸ್ವೀಕರಿಸುವ ರೀತಿ, ಬೇರೆಯವರು ನೋಡುವ ದೃಷ್ಟಿಕೋನವನ್ನೂ ಅವಲಂಬಿಸಿರುತ್ತದೆ. 


ಎಲ್ಲಿಯೂ ಸುದ್ದಿಯಾಗದೆ, ಪ್ರಚಾರ ಸಿಕ್ಕದೆ ಗುಡ್ಡದ ಮೇಲಿನ ಗಿಡ ಮರಗಳಿಗೆ ಸ್ವಾರ್ಥರಹಿತವಾಗಿ ನೀರು ಹೊತ್ತು ಎರೆಯುವ ಬಡ ರೈತ, ಯಾವುದೇ ಅನಾಮಧೇಯ ವಿದ್ಯಾರ್ಥಿಯ ಕಲಿಕೆಗೆ ಸದ್ದಿಲ್ಲದೆ ನೀಡಿದ ದುಡ್ಡು, ಗುರುತು ಪರಿಚಯ ಇಲ್ಲದೆ ಆಸ್ಪತ್ರೆಯಲ್ಲಿ ಮಲಗಿದ ರೋಗಿಗೆ ಹೋಗಿ ನೀಡಿ ಬಂದ ರಕ್ತದಾನ.... ಇಂತಹ ಸಾವಿರ ಸಾವಿರ ಸಾಧಕರು ನಮ್ಮ ಸುತ್ತಮುತ್ತಲೂ ಸದ್ದಿಲ್ಲದೆ ಸೇವೆ ಮಾಡುತ್ತಲೇ ಬಂದಿದ್ದಾರೆ. ಹಾಗಗಿ ಸತ್ಯ, ಸುಳ್ಳು, ಶ್ರೇಷ್ಠತೆ... ಇವಕೆಲ್ಲ ಲೇಬಲ್ ಗಳ ಅಗತ್ಯವಿಲ್ಲ, ಮನಸ್ಸಿಗೆ ಗೊತ್ತಿದ್ದರೆ ಸಾಕು. ನಾವು ಹೋಗುವ ದಾರಿ ಸರಿ ಇದೆಯಾ... ಇಲ್ಲವಾ ಎಂಬುದಾಗಿ... ಕಳೆದುಕೊಂಡ ಆಯುಷ್ಯ ಮತ್ತು ಸವೆಸಿದ ದಾರಿ ಇದೇ ಪಾಠ ಕಲಿಸುವುದು ಮತ್ತು ಉಸಿರಿನ ಕೊನೆಯ ತನಕ... ಕಲಿಸುತ್ತಲೇ ಇರುವುದು...




 -ಕೃಷ್ಣಮೋಹನ ತಲೆಂಗಳ, (03-03-2020)              

No comments: