ಮಾಧ್ಯಮದವ್ರು ಸರಿ ಇಲ್ವೇ? ಸುಳ್ಳು ಸುದ್ದಿಗಳನ್ಬು ಬೇಜಾಬ್ದಾರಿಯಿಂದ ಜಾಲತಾಣಗಳಲ್ಲಿ ವೈರಲ್ ಮಾಡೋದು ಸರಿಯೇ?

TVಯವ್ರು ಸುಮ್ನೆ ಕಿರುಚ್ತೀರಿ, ಪೇಪರಿನವರು ಬಾಯಿಗೆ ಬಂದ ಹಾಗೆ ಬರೀತೀರಿ. TRPಗೋಸ್ಕರ ಏನೂ ಮಾಡ್ತೀರಿ. ಕೊರೋನಾ ಕೂಡಾ ನೀವು ಪೇಪರಿನೋರು ದೊಡ್ಡದು ಮಾಡಿ ಬರೆದ ವಿಷಯ ಅಂತ ಕಳೆದ ವಾರವಷ್ಟೇ ಒಬ್ರು ಸದ್ಗೃಹಸ್ಥ ಸುಶಿಕ್ಷಿತರು ನೇರವಾಗಿ ನನ್ನಲ್ಲಿ ಹೇಳಿದ್ರು. ಆಯ್ತು ಪೇಪರ್ ನವ್ರು ಕಾಪಿ ಜಾಸ್ತಿ ಮಾಡ್ಕೊಳ್ಳೋಕೆ, ಟಿ.ವಿ.ಯವರು TRP ಜಾಸ್ತಿ ಮಾಡೋಕೆ ಏನೂ ಮಾಡ್ತಾರೆ ಅನ್ನುವ ಆರೋಪಕ್ಕೆ ನಾನು ಏನೂ ಹೇಳೋದಿಲ್ಲ. ಕಾಲ ಮತ್ತು ಪರಿಸ್ಥಿತಿ ಇದಕ್ಕೆ ಉತ್ತರ ಕೊಟ್ಟಿದೆ, ಕೊಡುತ್ತದೆ. 



ಒಂದು ಸಣ್ಣ ವಿಷಯ. ನಿನ್ನೆ ಕರಾವಳಿ ಭಾಗದಲ್ಲಿ ವಾಟ್ಸಪ್ ನಲ್ಲಿ ಕಾಪುವಿನ ಕಾರಣಿಕ ಕ್ಷೇತ್ರವೊಂದರ ಹೆಸರಿನಲ್ಲಿ "ಚಹಾ ಕುಡಿದರೆ ಕೊರೋನಾಗೆ ಪರಿಹಾರ" ಎಂಬ ಹೆಸರಿನ ನಕಲಿ ಸಂದೇಶ ವೇಗವಾಗಿ ಹರಡಿತು. ನೆನಪಿಡಿ: ಯಾವ ಪ್ರಧಾನವಾಹಿನಿಯ ಮಾಧ್ಯಮಗಳೂ ಈ ಥರ ಸುದ್ದಿ ಪ್ರಸಾರ ಮಾಡಿರಲಿಲ್ಲ. ನೂರಾರು (ಬಹುಷಃ ಸಾವಿರಾರು) ಮಂದಿ ವಾಟ್ಸಪ್ ಬಳಸುವ ಸುಶಿಕ್ಷಿತರು ಇದನ್ನ ಮುಗ್ಧವಾಗಿ ನಂಬಿ ಚಹಾ ಮಾಡಿ ಕುಡಿದದ್ದೇ ಕುಡಿದದ್ದು. ಬೇರೆಯವರಿಗೂ forward ಮಾಡಿ ಖುಷಿ ಪಟ್ಟದ್ದೇ ಪಟ್ಟದ್ದು. ಸಂಜೆ ಆ ಕ್ಷೇತ್ರದಿಂದ ಅಧಿಕೃತ ಪ್ರಕಟಣೆ ಬಂತು... ಅದು ಸುಳ್ಳು ಸುದ್ದಿ ಅಂತ. ಜನ ಪೆಚ್ಚಾದರು, ಮಾಧ್ಯಮ ಪ್ರತಿನಿಧಿಗಳಲ್ಲಿ ಕೇಳಿದ್ರು. ಹೌದಾ ಸುಳ್ಳ ಅಂತ. (ಕುಡಿಯುವಾಗ ಕೇಳಲಿಲ್ಲ). ರಾತ್ರಿ ಆ ಸುಳ್ಳು ಸುದ್ದಿ ಸೃಷ್ಟಿಸಿದಾತನನ್ನು ಕ್ಷೇತ್ರಕ್ಕೆ ಕರೆಸಿ ಕ್ಷಮೆ ಕೇಳಿದ ವೀಡಿಯೋವೂ ಮತ್ತೆ ವೈರಲ್ ಆಯ್ತು.

ನಾಳೆಯಿಂದ ಅಂತರ್ಜಾಲ ಸೇವೆ ಸ್ಥಗಿತ ಅಂತ ನಕಲಿ ಪೋಸ್ಟ್ TV9 ಹೆಸರಲ್ಲಿ ಬಂತು. ಅದನ್ನೂ ಜನ ನಂಬಿದ್ರು.....

ಈ ಎರಡೂ ಅಪಪ್ರಚಾರ ನಡೆದದ್ದು ಮಾಧ್ಯಮಗಳಲ್ಲಿ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ. 

ಇವತ್ತು ನಾವು ಪತ್ರಿಕೆಗಳಲ್ಲಿ ನಿಜ ವಿಷಯವನ್ನು ಪ್ರಕಟಿಸಿದ್ದೇವೆ. ದುರಂತ ಅಂದ್ರೆ ಸತ್ಯ ವಿಷಯಗಳು ಜನರ ಗಮನ ಸೆಳೆಯೋದೇ ಇಲ್ಲ, ರಂಗುರಂಗಿನ ವದಂತಿಗಳನ್ನು ಯಾರಲ್ಲೂ ಕೇಳದೆ ನಂಬ್ತಾರೆ, ಕಂಡ ಕಂಡ ಗ್ರೂಪುಗಳಿಗೆ ದೂಡ್ತಾರೆ, ಇನ್ನಷ್ಟು ಜನರನ್ನು ಮೂರ್ಖರಾಗಿಸ್ತಾರೆ. ಇದರ ಸತ್ಯಾಸತ್ಯತೆ ಅರಿಯಲು ಮಾಧ್ಯಮ ಮಿತ್ರರು ಇತರ ಮುಖ್ಯ ಅಸೈನ್ ಮೆಂಟುಗಳನ್ನು ಬದಿಗಿರಿಸಿ ಹೆಣಗಾಡುವುದು ನಮ್ಮ ಕಚೇರಿಗಳಲ್ಲಿ  ನಿತ್ಯದ ದೃಶ್ಯವಾಗಿಬಿಟ್ಟಿದೆ, ವೈರಲ್ ಚೆಕ್ ನಿತ್ಯದ ಕೆಲಸದ ಭಾಗವೂ ಆಗಿದೆ....

ಈ ಆತಂಕದ ಸನ್ನಿವೇಶದಲ್ಲಿ ನಾವು ಮಾಧ್ಯಮದವರು ಕೆಲಸ ಮಾಡುವುದು ಶೋಕಿಗಾಗಿ ಅಲ್ಲ.ನಮಗೂ ಸ್ಚಾಭಿಮಾನ ಇದೆ, ನಮಗೂ ವೃತ್ತಿಧರ್ಮ ಇದೆ. ನಮಗೂ ಒಂದು ಕುಟುಂಬ ಅಂತ ಇದೆ. ಹೌದು. ಪ್ರಸಾರ ಮತ್ತು TRP ಮಾಧ್ಯಮ ಸಂಸ್ಥೆಗಳಿಗೆ ಬೇಕು. ಯಾಕೆ? ಇತರ ಉದ್ಯಮಗಳಿಗೂ ವ್ಯವಹಾರ ದೃಷ್ಟಿ ಇಲ್ಲವೇ? ಆದಾಗ್ಯೂ ಮಾಧ್ಯಮದ ಎಲ್ಲ ಆಗುಹೋಗುಗಳೂ TRP, ಪ್ರಸಾರ ಸಂಖ್ಯೆಯನ್ನೇ ದೃಷ್ಟಿಯಲ್ಲಿರಿಸಿ ನಡೆಯುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳುವ ಸಹನೆ ಬಹುತೇಕರಲ್ಲಿ ಕಾಣುತ್ತಿಲ್ಲ.

ಇವೆಲ್ಲದರ ನಡುವೆ ನಮಗೆ ವಹಿಸಿದ ಕರ್ತವ್ಯವನ್ನು ನಿಭಾಯಿಸಿದಲ್ಲಿಗೆ ನಮಗೊಂದು ಆತ್ಮತೃಪ್ತಿಯೂ ಇರುತ್ತದೆ, ಸತ್ಯ ಸುದ್ದಿಗಳನ್ನು ಕ್ಲಪ್ತ ಸಮಯಕ್ಮೆ ತಲುಪಿಸುತ್ತಿದ್ದೇವೆ ಅಂತ. ಸಂಬಳ ನಮ್ಮ ಬದುಕಿಗೆ ಬೇಕು. ಜೊತೆಗೆ ನಮಗೆ ಆತ್ಮಗೌರವ, ವೃತ್ತಿ ಬದುಕಿನ ಸಾರ್ಥಕತೆಯ ಪ್ರಜ್ಞೆಯೂ ಇದೆ. ನಮ್ಮ ವರದಿಗಾರರು, ಕ್ಯಾಮೆರಾ ಮೆನ್ ಗಳು, ಆಂಕರ್ ಗಳು, ಸಂಪಾದಕೀಯ ವರ್ಗ ಇವರೆಲ್ಲರು ಕೆಲಸದ ಶಿಫ್ಟ್ ಟೈಮಿಂಗ್ಸ್, ಆಹಾರ, ನಿದ್ರೆ ಟೈಮಿಂಗ್ಸ್, ಹೊರಗಡೆ ಓಡಾಟ, ಪೊಲೀಸರ ತಪಾಸಣೆ ಇವೆಲ್ಲವನ್ನು ನಿಭಾಯಿಸಬೇಕು‌ ಜೊತೆಗೂ ವೈಯಕ್ತಿಕವಾಗಿ ನಮ್ಮ ಕುಟುಂಬದ ಹೊಣೆ ಇವೆಲ್ಲ ನಮಗೂ ಇದೆ ನಿಮ್ಮ ಹಾಗೆ.

ಮನೆಯಲ್ಲಿ ಸುರಕ್ಷಿತವಾಗಿ ಕುಳಿತು ಸುಳ್ಳು ಸುದ್ದಿಗಳನ್ನು ನಂಬುವುದು ಮತ್ತು forward ಮಾಡಿ ಇತರರನ್ನು ಮೂರ್ಖರನ್ನಾಗಿಸುವುದು.... ಈ ಥರ ಉದ್ದದ ಬರಹಗಳನ್ನು ಬರೆದಾಗ ಕೊನೆಗೆ ಇರುವ ಬರೆದ ಬಡಪಾಯಿಯ ಹೆಸರನ್ನು ಕಟ್ ಮಾಡಿ, ಕ್ರಾಪ್ ಮಾಡಿ ಶೇರ್ ಮಾಡುವ ಪುಣ್ಯಾತ್ಮರಿಗೆ ತಾವು ಮಾಡ್ತಾ ಇರೋದು ತಪ್ಪು ಅಂತ ಅನ್ನಿಸುವುದೇ ಇಲ್ಲ!!!!

ಮಾಧ್ಯಮ ಸರಿ ಇಲ್ಲ ಅಂತ ಫರ್ಮಾನು ಹೊರಡಿಸ್ತಾರೆ. ಈ ಮನಸ್ಥಿತಿಗೆ ಬಹುಷಃ ಮದ್ದಿಲ್ಲ. ನಿನ್ನೆ ಪ್ರಧಾನಿ ಸಹಿತ ಹಲವು ಗಣ್ಯರು ನಮ್ಮ ಕರ್ತವ್ಯವನ್ನು (ಸೇವೆ ಅಂತ ನಾನು ಹೇಳುವುದಿಲ್ಲ) ಗುರುತಿಸಿ ಒಳ್ಳೆ ಮಾತು ಹೇಳಿದ್ದಾರೆ. ನಮ್ಮ ಕೆಲಸವನ್ನು ಗುರುತಿಸುವ ಸಹೃದಯಿಗಳೂ ಇದ್ದಾರೆ. ಅವರಿಗೆ ಧನ್ಯವಾದಗಳು. ನಾವು ಯಾರ ಒತ್ತಡದಿಂದಲೂ ದುಡಿಯುವುದಲ್ಲ. ಇಂತಹ ಪರಿಸ್ಥಿತಿಯಲ್ಲೂ ಮಾಧ್ಯಮ ಸಂಸ್ಥೆಯಲ್ಲಿ ದುಡಿಯುತ್ತಿರುವುದಕ್ಕೆ, ನನ್ನ ವೃತ್ತಿ ಬಗ್ಗೆ ನನಗೆ ಹೆಮ್ಮೆ ಇದೆ.

ಲೂಸ್ ಟಾಕ್ ಮಾಡುವುದಕ್ಕೂ, ಫೀಲ್ಡಿಗೆ ಇಳಿದು ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ

ಈ ಪರಿಸ್ಥಿತಿಯಲ್ಲಿ ದುಡಿಯುತ್ತಿರುವ ಎಲ್ಲ ಪತ್ರಕರ್ತ ಮಿತ್ರರಿಗೂ ಅಭಿನಂದನೆಗಳು. ಎಲ್ಲರ ಬದುಕೂ ಸುರಕ್ಷಿತವಾಗಿರಲಿ. 

-ಕೃಷ್ಣಮೋಹನ, ಕನ್ನಡಪ್ರಭ.

1 comment:

Unknown said...

Yes. I fully agree

Popular Posts