ಎಲ್ಲರೂ ಫ್ಲಶ್ ಮಾಡಿದರೆ ಸಾರ್ವಜನಿಕ ಶೌಚಾಲಯವೂ ಸ್ವಚ್ಛವಾಗಿರುತ್ತದೆ. ನಮಗ್ಯಾಕೆ ಅರ್ಥ ಆಗ್ತಿಲ್ಲ... ಛೆ

ನಾವು ಹೆಸರಿಗೆ ಸುಶಿಕ್ಷಿತರು. ತಂತ್ರಜ್ಞಾನದಲ್ಲಿ ಇಷ್ಟೊಂದು ಮುಂದುವರಿದಿದ್ದೇವೆ. ಕೈಲೊಂದು ಮೊಬೈಲು, ಅದಕ್ಕೆ ಇಂಟರ್ನೆಟ್ ಸಂಪರ್ಕ ಸಿಕ್ಕರೆ ಸಾಕು. ಬೆರಳ ತುದಿಯಲ್ಲಿ ವಿಶ್ವವನ್ನೇ ಕ್ಷಣಾರ್ಧದಲ್ಲಿ ತಲುಪಿ ಮೇಲೆ ಕೆಳಗೆ ಮಾಡಬಹುದಾದ ತಾಕತ್ತು, ವೇಗದ ಸಂಪರ್ಕ ಸಾಧ್ಯತೆ ನಮ್ಮ ಕೈಲಿದೆ. 


ಆದರೂ... 

ಯಾಕೆ ಹೀಗೆ? ಫೇಸ್ಬುಕ್ಕು ಪರಿಚಯವಾಗಿ ಹತ್ತಿರ ಹತ್ತಿರ ದಶಕವೇ ಆಗ್ತೋ ಬಂತೇನೋ... ವಾಟ್ಸಪ್ಪು ಭಾರತೀಯರಿಗೆ ಪರಿಚಯ ಆಗಿ ಅಂದಾಜು ಐದಾರು ವರ್ಷ ಕಳೆಯಿತು. ಆದರೂ.... ನಮಗೆ ಜಾಲತಾಣಗಳನ್ನು ಹೇಗೆ ಶಿಸ್ತುಬದ್ಧವಾಗಿ, ಹೊರೆಯಾಗದಂತೆ ಬಳಸಬೇಕೆಂಬ ಅರಿವಿಲ್ಲ. ಅಥವಾ ಅರಿವಿದ್ದರೂ ಅರಿವಿಲ್ಲದವರಂತೆ ವರ್ತಿಸುತ್ತಿದ್ದೇವೆ. 

ಮನುಷ್ಯನ ಚಿಂತನಾ ಸಾಮರ್ಥ್ಯದ ಮಿತಿಗಳೇನು? ಮನುಷ್ಯನ ದೈನಂದಿನ ಕೆಲಸ ಕಾರ್ಯಗಳ ಒತ್ತಡಗಳೇನು? ಮನುಷ್ಯ ಒಂದು ದಿನಕ್ಕೆ ಎಷ್ಟು ಮೆಸೇಜುಗಳನ್ನು ಓದಿ ಅರಗಿಸಿಕೊಳ್ಳಬಹುದು? ನಿಜವಾಗಿ ಮನುಷ್ಯನಿಗೆ ದಿನವೊಂದಕ್ಕೆ ಅಷ್ಟೊಂದು ಮಾಹಿತಿಗಳ ಭಾರವನ್ನು ಹೊರಿಸಬೇಕಾದ ಅಗತ್ಯ ಇದೆಯೇ? ಇದ್ಯಾವುದನ್ನೂ ಯೋಚಿಸದೆ ನಾವು ವಾಟ್ಸಪ್ಪು, ಫೇಸ್ ಬುಕ್ಕುಗಳಲ್ಲಿ ಫಾರ್ವರ್ಡ್ ಮಾಡುತ್ತಲೇ ಇದ್ದೇವೆ... ನಿರ್ಲಿಪ್ತರಾಗಿ, ನಿರ್ಭಯರಾಗಿ ಹಾಗೂ ನಿರ್ವಿಕಾರರಾಗಿ!!


ಕೊನೆಯ ಪದ ಯಾಕೆ ಬಳಸಿದೆನೆಂದರೆ: ನಾನು ಗಮನಿಸಿದ ಹಾಗೆ ಪದೇ ಪದೇ ಕಂಡ ಕಂಡ ಗ್ರೂಪುಗಳಿಗೆ ಬೇಕಾಬಿಟ್ಟಿ ಮೆಸೇಜುಗಳನ್ನು ಫಾರ್ವರ್ಡ್ ಮಾಡುವ ಹವ್ಯಾಸ ಬೆಳೆಸಿಕೊಂಡವರ ಪೈಕಿ ಬಹುತೇಕರು ಮೂಲ ಮೆಸೇಜುಗಳನ್ನು ಓದಿಯೇ ಇರುವುದಿಲ್ಲ, ಅಥವಾ ಓದಿದರೂ ಸಂಪೂರ್ಣ ಅರಗಿಸಿಕೊಂಡಿರುವುದಿಲ್ಲ, ಸುಮ್ಮನೇ ತಮ್ಮ ಇನ್ ಬಾಕ್ಸಿಗೆ ಬಂದದ್ದನ್ನು ಹಾಗೆಯೇ ಗ್ರೂಪಿಗೆ ದೂಡಿ ಬಿಡುತ್ತಾರೆ. ಈ ಹಿಂದೆ ಅದೇ ಗ್ರೂಪಿಗೆ ಅದೇ ಮೆಸೇಜನ್ನು ಯಾರಾದರೂ ಹಾಕಿದ್ದಾರೆಯೇ ಎಂದು ಪರಿಶೀಲಿಸುವ ವ್ಯವಧಾನ ಅವರಿಗಿರುವುದಿಲ್ಲ, ಮಾತ್ರವಲ್ಲ. ಮುಂದೂಡಿದ ಮೆಸೇಜಿಗೆ ಗ್ರೂಪಿನಲ್ಲಿ ಏನು ಪ್ರತಿಕ್ರಿಯೆ ಬಂದಿದೆ ಎಂದು ಗಮನಿಸುವ ಪುರುಸೊತ್ತು ಅವರಿಗೆ ಇರುವುದಿಲ್ಲ. ಅದಕ್ಕೇ ಹೇಳಿದ್ದು ನಿರ್ವಿಕಾರ ಅಂತ. 

ನನಗಿನ್ನೂ ಅರ್ಥ ಆಗ್ತಿಲ್ಲ. ನಾವು ನಮ್ಮ ಮನೆಯನ್ನು ಸ್ವಚ್ಛವಾಗಿರಿಸುತ್ತೇವೆ, ಗುಡಿಸುತ್ತೇವೆ, ಮನೆಯ ಟಾಯ್ಲೆಟ್ಟಿಗೆ ಸರಿಯಾಗೇ ಫ್ಲಶ್ ಮಾಡುತ್ತೇವೆ. ಆದರೆ ರಸ್ತೆಯಲ್ಲಿ, ಬಸ್ಸಿನಲ್ಲಿ, ಬಸ್ ನಿಲ್ದಾಣಗಳಲ್ಲಿ ಅದೇ ಕಾಳಜಿ ತೋರುವುದಿಲ್ಲ. ಬೇಕಾಬಿಟ್ಟಿ ಕಸ ಎಸೆಯೋದು, ಟಾಯ್ಲೆಟ್ಟಿಗೆ ನೀರು ಹಾಕದೆ ಬರುವುದು, ಸೀಟಿನ ಮೇಲೆ ಕಾಲು ಹಾಕಿ ಕೂರುವುದು, ಸಿನಿಮಾ ಥಿಯೇಟರ್ ಒಳಗೇ ಉಗಿಯೋದು, ಯಾರಪ್ಪನ ಗಂಟು ಎಂಬ ಹಾಗೆ ಬಸ್ಸಿನಲ್ಲೇ ಸಿಗರೇಟ್ ಎಳೆಯುವುದು.... ಎಲ್ಲ ಮಾಡುತ್ತೇವೆ ಅಥವಾ ಮಾಡುವವರೂ ಇದ್ದಾರೆ. ಇದೇ ಸಿದ್ಧಾಂತ ಜಾಲ ತಾಣಗಳ ಗುಂಪಿಗೂ ಅನ್ವಯಿಸುತ್ತದೆ....



ನಮಗೆ ಬೇಕಾದ್ದನ್ನು ಬರೆಯಲು, ಹೇಳಲು, ಪ್ರಕಟಿಸಲು ಜಾಲ ತಾಣದಲ್ಲಿ ಬಿಂದಾಸ್ ಅವಕಾಶಗಳಿವೆ. ಫೇಸು ಬುಕ್ ಗೋಡೆಗಳಿವೆ, ವಾಟ್ಸಪ್ಪಿನ ಸ್ಟೇಟಸ್ ಜಾಗವಿದೆ, ವೈಯಕ್ತಿಕ ಬ್ಲಾಗಿಂಗ್ ಮಾಡಬಹುದು, ವೆಬ್ ಸೈಟ್ ನಡೆಸಬಹುದು. ಇವೆಲ್ಲ ಸ್ವಂತ ಜಾಗಗಳು, ಇಲ್ಲಿ ನೀವು ನಿಮಗಿಷ್ಟ ಬಂದ ಹಾಗೆ ಅನಿಸಿದ್ದನ್ನು ಹೇಳಲು, ಹಂಚಿಕೊಳ್ಳಲು ಜಾಗವಿದೆ. 

ಆದರೂ... 

ನಮಗೆ ಅಜೀರ್ಣವಾಗಿದನ್ನು ಉಗಿಯಲು ಯಾರೋ ಕಟ್ಟಿ ಬೆಳೆಸಿದ ವಾಟ್ಸಪ್ಪು ಗ್ರೂಪೇ ಬೇಕು, ಯಾರೋ ಯಾವುದೋ ಉದ್ದೇಶಕ್ಕೆ ಹತ್ತಾರು ಜನರನ್ನು ಸೇರಿಸಿ ಮಾಡಿ ಫೇಸ್ಬುಕ್ಕು ಗುಂಪೇ ಆಗಬೇಕು. ಯಾವ ಗ್ರೂಪು? ಯಾರ ಗ್ರೂಪು? ಯಾವುದಕ್ಕೋಸ್ಕರ ಗ್ರೂಪು ಕಟ್ಟಿದ್ದಾರೆ? ಗ್ರೂಪಿನಲ್ಲಿ ಎಷ್ಟು ಮಂದಿ ಇದ್ದಾರೆ? ಗ್ರೂಪಿನಲ್ಲಿ ಇರುವವರು ಯಾರ್ಯಾರು? ಅವರೆಲ್ಲ ನನ್ನ ಹಾಗೆಯೇ ಮನುಷ್ಯರೇ? ಅವರಿಗೂ ಒತ್ತಡದ ಬದುಕು ಇರುತ್ತದೆಯೇ? ನಾನು ಮುಂದೂಡುವ ಮೆಸೇಜನ್ನು ಗ್ರೂಪಿನಲ್ಲಿರುವ ಅಷ್ಟೂ ಮಂದಿ ಓದುತ್ತಾರೆಯೇ? ಇದ್ಯಾವುದರದ್ದೂ ಪರಿವೆಯಿರುವುದಿಲ್ಲ ಫಾರ್ವರ್ಡ್ ಶೂರರಿಗೆ. 

ಮತ್ತೊಂದು ವಿಶೇಷವೆಂದರೆ ಇಂತಹ ಮಹಾತ್ಮರಿಗೆ ಫಾರ್ವರ್ಡ್ ಮಾಡಬೇಡ ಎಂದರೆ ಅಪಮಾನವಾಗುತ್ತದೆ. ಗುಂಪಿನಲ್ಲಿ ಒಂದು ದಿನವೂ ಗುಂಪಿನ ವಿಚಾರಕ್ಕೆ ಸ್ಪಂದಿಸದ, ಪ್ರೋತ್ಸಾಹಿಸದ, ಮಾತನಾಡಲು ಪುರುಸೊತ್ತಿಲ್ಲದ ಇಂಥವರು ತಾವು ಫಾರ್ವರ್ಡ್ ಮಾಡಲೇ ಹುಟ್ಟಿದವರಂತೆ ವರ್ತಿಸುತ್ತಾರೆ. ಸೂಕ್ಷ್ಮತೆ ಕಳೆದುಕೊಂಡವರು, ತನ್ನ ಜಾಗದಲ್ಲಿ ಇತರರನ್ನು ಕಲ್ಪಿಸಲು ಸಾಧ್ಯವಾಗದವರು, ಯಾವುದೋ ವಿಚಾರಕ್ಕೆ ಭ್ರಮನಿರಸನಗೊಂಡವರು, ಪ್ರಚಾರದ, ಬೇಗ ಜನಪ್ರಿಯರಾಗುವ ಹುಚ್ಚು ಆತುರ ಹೊಂದಿದವರು ಮಾಡುವ ಕೆಲಸವಿದು ನನ್ನ ಪ್ರಕಾರ.


ಏನಾಗಿದೆ ಗೊತ್ತ? ಎಲ್ಲರಿಗೂ ಹೇಳುವ ಆತುರ, ಕೈಗೆ ಸಿಕ್ಕಿದ್ದನ್ನು ಆ ಕ್ಷಣಕ್ಕೆ ಮುಂದೂಡುವ ಹಂಬಲ, ನಾನೇ ಮೊದಲು ಎಲ್ಲರಿಗೂ ತಿಳಿಸಿದ್ದು ಎಂದು ಘೋಷಿಸಿಕೊಳ್ಳುವ ಚಪಲ. ಕೇಳಿಸಿಕೊಳ್ಳುವ ತಾಳ್ಮೆ ಬಹುತೇಕರಿಗಿಲ್ಲ! ಆದರೆ, ಮನುಷ್ಯ ಮಾತ್ರರಾದ ನಮ್ಮಲ್ಲಿ ಹಲವರಿಗೆ ಇಂಥದ್ದೇ ತುಡಿತಗಳಿರುತ್ತವೆ ಎಂಬುದನ್ನು ಮರೆಯುವ ನಾವು ಗುಂಪಿನಲ್ಲಿ ಗೋವಿಂದರಾಗಿ ಮುಂದೂಡತ್ತಲೇ ಇರುತ್ತೇವೆ. ಯಾರು ಓದದಿದ್ದರೂ, ಒಪ್ಪದಿದ್ದರೂ, ಆಕ್ಷೇಪಿಸಿದರೂ ಕಿವಿಗೆ ಹಾಕದೇ ಮುಂದೂಡುತ್ತಲೇ ಇರುತ್ತೇವೆ. ಹಿಟ್ ಆಂಡ್ ರನ್ ಪ್ರಕರಣಗಳ ಹಾಗೆ. 

ಯಾಕಪ್ಪಾ ಫಾರ್ವರ್ಡ್ ಮಾಡಿದ್ದಿ ಎಂದು ಕೇಳಿದರೆ ಆ ಕೇಳಿದ ಮೆಸೇಜನ್ನು ಓದುವುದಿಲ್ಲ, ಅವರು ಮತ್ತೊಂದಿಷ್ಟು ಗ್ರೂಪುಗಳಿಗೆ ಇಂತಹ ಮೈಲುದ್ದದ ಮೆಸೇಜುಗಳನ್ನು ಮುಂದೂಡುವಲ್ಲಿ ಬಿಝಿ ಇರುತ್ತಾರೆ. ಒಂದು ವೇಳೆ ಆಕ್ಷೇಪಗಳನ್ನು ಗಮನಿಸಿದರೂ ಉತ್ತರಿಸುವುದೇ ಇಲ್ಲ. ಯಾಕೆಂದರೆ ದಿನಪೂರ್ತಿ ಆ ಗ್ರೂಪಿನಲ್ಲಿ ಏನು ಚಟುವಟಿಕೆ ನಡೆಯುತ್ತಾ ಇರುತ್ತದೆ ಎಂಬುದನ್ನು ಅವರು ನೋಡಿಯೇ ಇರುವುದಿಲ್ಲ. 


ಮತ್ತೊಂದು ಸ್ವಾರಸ್ಯ ಏನು ಗೊತ್ತ? ಇಂತಹ ಬುದ್ಧಿವಂತರ ಪೈಕಿ ಹಲವರು ಆ ಮೆಸೇಜನ್ನು ಸ್ವಂತ ಟೈಪಿಸಿರುವುದಿಲ್ಲ (ಪ್ರತಿ ಮನುಷ್ಯನೂ ಉತ್ತಮ ಬರಹಗಾರನೂ, ಸಂಹವನಕಾರನೂ ಆಗಿರಬೇಕಿಲ್ಲ, ಆಗಿರದಿದ್ದರೆ ಅದೊಂದು ಕೊರತೆಯೂ ಅಲ್ಲ). ಯಾರೋ, ಎಲ್ಲಿಯೋ, ಯಾವುದೋ ಸಂದರ್ಭಕ್ಕೆ ಪೂರಕವಾಗಿ ಏನೋ ಬರೆದಿರುತ್ತಾರೆ. ಅದು ಯಾವುದೋ ಗ್ರೂಪಿಗೆ, ಸಂದರ್ಭಕ್ಕೆ, ಪ್ರಾಂತ್ಯಕ್ಕೆ ಮಾತ್ರ ಅನ್ವಯವಾಗಿರುತ್ತದೆ. ಆದರೆ, ಅದು ಗ್ರೂಪಿನಿಂದ ಗ್ರೂಪಿಗೆ ಹಾರುತ್ತಾ ಬಂದು ಇಂತಹ ಫಾರ್ವರ್ಡ್ ವೀರರ ಕೈಗೆ ಸಿಕ್ಕಾಗ ಅದು ಮತ್ತಷ್ಟು ವಿಜೃಂಭಿಸಿ ಮತ್ತಷ್ಟು ಅಪ್ರಸ್ತುತ ಗ್ರೂಪಿಗಳಿಗೆ ಮುಂದೂಡಲ್ಪಡುತ್ತದೆ. ಎಷ್ಟೋ ಬರಹಗಳ ಮೇಲೆ ಲಾಂಛನವಾಗಲಿ, ಕೊನೆಗೆ ಬರೆದವರ ಹೆಸರಾಗಲಿ, ಅಧಿಕೃತರ ಸಂಪರ್ಕ ಸಂಖ್ಯೆಯಾಗಲಿ ಯಾವುದೂ ಇರುವುದಿಲ್ಲ. ಆ ಬರಹ ನಿಜವೇ, ವಿಘ್ನಸಂತೋಷಿಗಳ ಕೃತ್ಯವೇ ಎಂಬುದೂ ಖಚಿತವಾಗಿರುವುದಿಲ್ಲ. ಆದರೂ ಫಾರ್ವರ್ಡ್ ಮಾಡಲಾಗುತ್ತದೆ. 


ಬೇಕಾಬಿಟ್ಟಿ ಫಾರ್ವರ್ಡ್ ಮಾಡುವುದರ ಪರಿಣಾಮದ ಬಗ್ಗೆ ಚಿಂತಿಸಿದ್ದೀರ....?

ಒಂದು ವಾಟ್ಸಪ್ ಗ್ರೂಪಿಗೆ ಹಾಕಿದೆ ಬರಹ ಸುಮಾರು 256 ಮಂದಿಯನ್ನು, ಸ್ಟೇಟಸ್ಸಿನಲ್ಲಿ ಹಾಕಿದ ಬರಹ ನಮ್ಮ ಅಷ್ಟೂ ಮಂದಿ ಕಾಂಟ್ಯಾಕ್ಟ್ ಪಟ್ಟಿಯಲ್ಲಿರುವವರನ್ನು, ಫೇಸ್ಬುಕ್ಕಿನಲ್ಲಿ ಹಾಕಿದ ಬರಹ ನಮ್ಮ ಫ್ರೆಂಡ್ ಲಿಸ್ಟಿನಲ್ಲಿರಬಹುದಾದ ಗರಿಷ್ಠ 5 ಸಾವಿರ ಮಂದಿಯನ್ನು, ವೆಬ್ ಸೈಟಿನಲ್ಲಿ ಹಾಕಿದರೆ ಲಕ್ಷಾಂತರ ಮಂದಿಯನ್ನು ಒಂದೆರಡು ಸೆಕೆಂಡ್ ಗಳಲ್ಲಿ ತಲಪುತ್ತದೆ. ಅದೂ ಉಚಿತವಾಗಿ, ಯಾವುದೇ ನಿರ್ಬಂಧ ಇಲ್ಲದೆ. ಆದರೂ ನಾವು ಯೋಚಿಸುವುದೇ ಇಲ್ಲ. ಸುಳ್ಳು ಸುದ್ದಿಗಳನ್ನು ಬಹಿರಂಗವಾಗಿ ಶೇರ್ ಮಾಡಿದರೆ ಪರಿಣಾಮ ಏನಾಗಬಹುದು ಎಂದು. ನಮ್ಮಂಥ ಅತಿ ಬುದ್ಧಿವಂತರು ಇನ್ನಷ್ಟು ಕಡೆ ಇವನ್ನು ಫಾರ್ವರ್ಡ್ ಮಾಡಿದರೆ ನಾನೀಗ ಹೇಳಿದ ಸಂಖ್ಯೆಗೆ ಫಾರ್ವರ್ಡ್ ಮಾಡುವವರ ಸಂಖ್ಯೆಯನ್ನು ಗುಣಿಸಬೇಕು. ಆಗ ನಿಮಗೆ ಭಯಾನಂಕ ಅಂಕಿ ಅಂಶ ಸಿಗುತ್ತದೆ. ಯಾರಲ್ಲಿ ಹೇಳುವುದು ಈ ಸಮಸ್ಯೆಯನ್ನು, ಯಾರಿಗೆ ಹೇಳುವುದು ಈ ಸಮಸ್ಯೆಯನ್ನು... ಗ್ರೂಪುಗಳು ಸೈಲೆಂಟ್ ಇದ್ದರೆ ನಿಮಗೇನು ನಷ್ಟ ? 

ಯಾರೋ ತನ್ನ ಮಾವನಿಗೆ ಭರವಸೆ ಕೊಟ್ಟಿದ್ದನಂತೆ ಮದುವೆಯಾಗುವಾಗ, ನಿಮ್ಮ ಮಗಳ ಹೊಟ್ಟೆಯನ್ನು ನಾನು ಯಾವತ್ತೂ ಖಾಲಿ ಇರಲು ಬಿಡುವುದಿಲ್ಲ ಅಂತ. (ಏನಾದರೂ ದುಡಿದು ತಂದು ಹೊಟ್ಟೆ ತುಂಬಿಸುತ್ತೇನೆ ಅಂತ). ಹಾಗೆ, ಕೆಲವರಿಗೆ ಆತುರ ಈ ಗ್ರೂಪು ಯಾಕೋ ಸೈಲೆಂಟ್ ಇದೆಯಲ್ಲ ಅಂತ ಅಂದ್ಕೊಳ್ಳೋದು, ತಮಗಿಷ್ಟ ಬಂದ ಏನನ್ನಾದರೂ ಫಾರ್ವರ್ಡ್ ಮಾಡಿ ಬಿಡೋದು. ಮತ್ತೆ ಆ ಕಡೆ ತಲೆ ಹಾಕುವುದಕ್ಕಿಲ್ಲ. 



ನೀವು ಯಾವತ್ತಾದರೂ ಯೋಚಿಸಿದ್ದೀರ? ಒಬ್ಬ ಅಡ್ಮಿನ್ ಕಷ್ಟಗಳ ಬಗ್ಗೆ. ಅಡ್ಮಿನ್ ಆದವ ಒಂದು ದಿನ ಸುಮ್ಮನೆ ಮನೆಯಲ್ಲಿ ಕೂತಿರುವಾಗ ಯೋಚಿಸಿರ್ತಾನೆ. ಯಾವುದೋ ಒಂದು ಉದ್ದೇಶಕ್ಕೆ ಹತ್ತಾರು ಜನರನ್ನು ಸೇರಿಸಬೇಕು. ಏಕಕಾಲಕ್ಕೆ ಅರೆಲ್ಲರನ್ನು ತಲಪಲು ಒಂದು ವಾಟ್ಸಪ್ ಗ್ರೂಪು ಮಾಡಬೇಕು. ಗ್ರೂಪಿನ ಮೂಲಕ ಏನಾದರೂ ಸಾಧಿಸಬೇಕು ಅಂತ. ಅದಕ್ಕೋಸ್ಕರ ತನಗೆ ತಿಳಿದ ನಾಲ್ಕಾರು ಮಂದಿಯನ್ನು ಸೇರಿಸಿ ಗ್ರೂಪು ಕಟ್ಟುತ್ತಾನೆ. ಮತ್ತೆ ಅವರಿವರ ರೆಫರೆನ್ಸ್ ಆಧಾರದಲ್ಲಿ ಗ್ರೂಪಿಗೆ ಸದಸ್ಯರು ಸೇರ್ತಾ ಸೇರ್ತಾ ಗ್ರೂಪು ದೊಡ್ಡದಾಗ್ತದೆ. ಅಷ್ಟು ಹೊತ್ತಿಗೆ ಗ್ರೂಪಿಗೆ ಸೇರಿದವರೆಲ್ಲರ ಸಂಖ್ಯೆ ಹೆಚ್ಚಾಗಿ ಗ್ರೂಪು ಲವಲವಿಕೆಯಿಂದ ಕಂಗೊಳಿಸುತ್ತದೆ. ಹಳೆ ವಿದ್ಯಾರ್ಥಿಗಳು, ಸಾಮಾಜಿಕ ಸಂಘಟನೆಗಳು, ಸಂಸ್ಥೆಗಳು, ಕುಟುಂಬದ್ದು, ಹೀಗೆ ಹಾದಿಗೊಂದು ಬೀದಿಗೊಂದು ಗ್ರೂಪುಗಳು ಹುಟ್ಟತ್ತಲೇ ಇವೆ. ಸದಸ್ಯರ ಸಂಖ್ಯೆ ಹೆಚ್ಚಿದಂತೆಲ್ಲ ನಡು ನಡುವೆ ಫಾರ್ವರ್ಡ್ ವೀರರೂ ನುಸುಳುತ್ತಾರೆ. (ಪ್ರತಿ ಗ್ರೂಪಿನಲ್ಲೂ ಕನಿಷ್ಠ 3-4 ಮಂದಿ ಹೇಳಿದ್ದು ಕೇಳದೆ ಫಾರ್ವರ್ಡ್ ಮಾಡುವವರು ಇದ್ದೇ ಇರುತ್ತಾರೆ, ಪರೀಕ್ಷಿಸಿ ಬೇಕಾದರೆ). ಅವರ ನಿಯಂತ್ರಣವೇ ಅಡ್ಮಿನ್ ಗಳಿಗೆ ಸವಾಲಾಗುತ್ತದೆ. ರಿಮೂವ್ ಮಾಡಿದರೆ ಗ್ರೂಪಿನಲ್ಲಿ ಗಲಬೆಯಾಗಬಹುದು, ಶಾಂತಿ ಕದಡಬಹುದು, ಅಥವಾ ಅಡ್ಮಿನ್ ಗೂ ಪಾಪ ಪ್ರಜ್ಞೆ ಕಾಡಬಹುದು. ಹಾಗಂತ ಇಂಥವರನ್ನು ಉಳಿಯಗೊಟ್ಟರೆ ಗ್ರೂಪಿನ ಅಷ್ಟೂ ಇತರ ಮಂದಿಗೆ ಕಿರಿಕಿರಿ, ಬೇಕಾದ ಮೆಸೇಜುಗಳನ್ನು ಒಂದನ್ನೂ ಓದಲಾಗದೆ ಇಂತಹ ಫಾರ್ವರ್ಡ್ ಕಸಗಳಿಂದಲೇ ಗ್ರೂಪು ತುಂಬಿರುತ್ತದೆ. ಯಾರು ಓದುತ್ತಾರೋ, ಬಿಡುತ್ತಾರೋ.... ಗ್ರೂಪು ತುಂಬಿರಬೇಕು ಅಷ್ಟೇ...


ಯಾಕ್ರೀ ಗ್ರೂಪು ದಿನವಿಡೀ ತುಂಬಿರಲೇಬೇಕು? ನೀವೇನು ಅದಕ್ಕೆ ಚಂದಾದಾರರ? ನೀವೇನು ದುಡ್ಡು ಕಟ್ತೀರ? ಇಲ್ವಲ್ಲ... ಗ್ರೂಪಿನ ಆಶಯಕ್ಕೆ, ಉದ್ದೇಶಕ್ಕೆ ಪೂರಕ ವಿಚಾರ ಬಂದಾಗ ಮೇಸೇಜು ಹಾಕಿದರೆ ಸಾಕು, ಪ್ರತಿಕ್ರಿಯೆ ಕೊಟ್ಟರೆ ಸಾಕು. ಬಾಕಿ ಸಮಯ ಮೌನವಾಗೇ ಇರಲಿ. ತಪ್ಪೇನು? ನೀವೇನು ದಂಡ ಕಟ್ಟಬೇಕಾ ಮೌನವಾಗಿದ್ದಿದ್ದಕ್ಕೆ? ಯಾಕೆ ಜನ ಈ ವಿಷಯ ಅರ್ಥ ಮಾಡಿಕೊಳ್ಳುವುದಿಲ್ಲವೋ ದೇವರಿಗೇ ಗೊತ್ತು. ಬಹುತೇಕ ಗ್ರೂಪುಗಳಲ್ಲಿ ಶೇ.75 ಮಂದಿ ಪ್ರತಿಕ್ರಿಯೆ ಕೊಡುವುದಿಲ್ಲ. ಅದರ ಅರ್ಥ ಅವರು ಆಕ್ಟಿವ್ ಅಲ್ಲ ಅಂತಲ್ಲ. ಅವರು ಗಮನಿಸ್ತಾರೆ, ಮಾಹಿತಿ ಪಡೆದುಕೊಳ್ಳುತ್ತಾರೆ. ಆದರೆ ಮೌನ ಪ್ರವೃತ್ತಿಯವರಾದ ಕಾರಣ ಸಹಜವಾಗಿ ಮೌನ ಇರ್ತಾರೆ. ಈ ಫಾರ್ವರ್ಡ್ ಮಾಡುವ ನಾಲ್ಕಾರು ಮಂದಿಯ ಹುಚ್ಚಾಟವನ್ನು ಗ್ರೂಪಿನ ಅಷ್ಟೂ ಮಂದಿ ಇತರ ಸದಸ್ಯರು ಅನಿವಾರ್ಯವಾಗಿ ಸಹಿಸಿಕೊಳ್ಳಲೇ ಬೇಕು. ಬೇರೆ ದಾರಿ ಇಲ್ಲ. ಇದರಿಂದಾಗಿ ತುಂಬ ಮಂದಿ ಮೌನಿ ಸದಸ್ಯರು ಸದ್ದಿಲ್ಲದೆ ಗ್ರೂಪ್ ಬಿಡುತ್ತಾರೆ, ಅಥವಾ ಮ್ಯೂಟ್ ಮಾಡಿಟ್ಟು, ಆಗಾಗ ಕ್ಲಿಯರ್ ಚಾಟ್ ಕೊಟ್ಟು ಕೂರುತ್ತಾರೆ. ಅಲ್ಲಿಗೆ ಗ್ರೂಪು ಕಟ್ಟಿದ ಉದ್ದೇಶವೇ ಹಾಳಾಯಿತು. ಯಾರಿಗೂ, ಏನೂ ತಲಪೋದಿಲ್ಲ. ಬಡ ಅಡ್ಮಿನ್ ಅಳುತ್ತಾ ಕೂರಬೇಕಷ್ಟೆ.... 


ಇದು ನಿತ್ಯದ ಸಮಸ್ಯೆ.... ಸುಶಿಕ್ಷಿತರೇ ಮಾಡುತ್ತಿರುವ ಸಮಸ್ಯೆ, ರಾಶಿ ರಾಶಿ ಮೆಸೇಜುಗಳು, ಸತ್ಯ, ಅಸತ್ಯ, ಮೈಲುದ್ದದ ಪ್ರವಚನ, ಸುಳ್ಳು ವೈದ್ಯಕೀಯ ಮಾಹಿತಿಗಳು, ರಾಜಕೀಯ ಅವಹೇಳನ, ಕೋಮು ನಿಂದನೆ, ಜಾತಿ ರಾಜಕೀಯ, ವೈಯಕ್ತಿಕ ತಮಾಷೆ, ಯಾವ ವಿಚಾರ ಬಂದರೂ ಟಿಕ್ ಟಾಕ್ ಮೂಲಕ ಅದರ ಅಪಹಾಸ್ಯ ಮಾಡುವ ಪ್ರವೃತ್ತಿ, ಸುಳ್ಳು ಸುಳ್ಳೇ ಅಂಕಿ ಅಂಶಗಳನ್ನು ಹರಿಯಬಿಟ್ಟು ಮಜಾ ತಕ್ಕೊಳ್ಳುವುದು, ಸರ್ಕಾರಿ ಆದೇಶಗಳನ್ನು ನಕಲಿ ಮಾಡಿ ರಜೆ ಮತ್ತಿತರ ವಿಚಾರಗಳಲ್ಲಿ ಇಡೀ ಸಮುದಾಯವನ್ನು ಮೂರ್ಖರಾಗಿಸುವುದು, ಎಲ್ಲೋ ನಡೆದ ಅಪಘಾತದ ಫೋಟೋಗಳನ್ನು ಇನ್ನೆಲ್ಲಿಗೋ ಜೋಡಿಸಿ ಜನ ನಂಬುವಂತೆ ಹರಿಯಬಿಡುವುದು, ದೇವರ ಹೆಸರಿನಲ್ಲಿ ಧರ್ಮ ಹೆಸರಿನಲ್ಲಿ ಭಯ ಹುಟ್ಟಿಸುವ ತಪ್ಪು ಸಂದೇಶಗಳನ್ನು ಹರಿಯಬಡುವುದು, ಯಾರ್ಯಾರ ವೈಯಕ್ತಿಕ ಫೋಟೋಗಳನ್ನು ದುರ್ಬಳಕೆ ಮಾಡಿ ಅವರ ತೇಜೋ ವಧೆ ಮಾಡುವುದು.... ಇವೆಲ್ಲ ಆಗುತ್ತಿರುವ ಸುಶಿಕ್ಷಿತರಿಂದ. ಅನಕ್ಷರಸ್ಥರಿಗೆ ಇವನ್ನೆಲ್ಲ ಮಾಡಲು ಬರುವುದಿಲ್ಲ. ಹಾಗಾದರೆ ನಾವು ಕಲಿತ ವಿದ್ಯೆ ನಮಗೇನು ಕಲಿಸಿದೆ? ನಾವೇನು ಸಂಸ್ಕಾರ ಪಡೆದಿದ್ದೇವೆ? ನಮ್ಮ ಮನೆಯನ್ನು ಸ್ವಚ್ಛವಾಗಿರಿಸುವ ನಾವು ಸಮಾಜವನ್ನು ಯಾಕೆ ಕಲುಷಿತ ಮಾಡುತ್ತಿದ್ದೇವೆ?


ಒಂದು ಕೊನೆಯ ಉದಾರಹಣೆ ಕೊಟ್ಟು ನನ್ನ ಕೊರೆಯುವಿಕೆಗೆ ವಿರಾಮ ಹಾಡುತ್ತೇನೆ. 
ಒಂದು ಸಾರ್ವಜನಿಕ ಶೌಚಾಲಯವಿದೆ. ಶುಚಿಯಾಗಿದೆ. ಅದನ್ನು ದಿನಕ್ಕೆ ಸರಾಸರಿ  ಹತ್ತು ಮಂದಿ ಬಳಸುತ್ತಾರೆ ಅಂತ ತಿಳ್ಕೊಳ್ಳಿ. ಮೊದಲ ಆರು ಮಂದಿ ದೇಹಬಾಧೆ ತೀರಿಸಿ ಬಂದು ಚೆನ್ನಾಗಿ ಫ್ಲಶ್ ಮಾಡಿ ಬರುತ್ತಾರೆ. ಅದು ನೀಟಾಗಿಯೇ ಇರುತ್ತದೆ. ಏಳನೇ ಮತ್ತು ಎಂಟನೆಯವರು ಮಾಡುವುದೆಲ್ಲ ಮಾಡಿ ನೀರನ್ನೇ ಹಾಕದೆ ಹೊರಬರುತ್ತಾರೆ. ಈಗ ಹೇಳಿ ಒಂಭತ್ತನೆಯವರು ಮತ್ತು ಹತ್ತನೆಯವರು ಟಾಯ್ಲೆಟ್ ಒಳಗೆ ಹೋದಾಗ ಪರಿಸ್ಥಿತಿ ಹೇಗಿರಬಹುದು? ಅಥವಾ ಒಂದರಿಂದ ಆರನೇ ಸಂಖ್ಯೆ ವರೆಗಿನವರು ಮತ್ತೊಮ್ಮೆ ಟಾಯ್ಲೆಟ್ಟಿಗೆ ಹೋದಾಗ ಅವರಿಗೇನು ಅನ್ನಿಸಬಹುದು? ಇಲ್ಲಿ ಏಳು ಮಂದಿ ಎಂಟನೆಯವರನ್ನು ಬಿಟ್ಟು ಉಳಿದವರು ಯಾರೂ ತಪ್ಪು ಮಾಡಿಲ್ಲ. ಯಾರೋ ಕಟ್ಟಿದ ಟಾಯ್ಲೆಟ್ಟು ಎಲ್ಲರಿಗೆ ಪ್ರಯೋಜನವಾಗಲಿ ಅಂತ.... ಬಳಕೆ ಬಳಕೆದಾರರಿಗೆ ಬಿಟ್ಟದ್ದು. ವಾಟ್ಸಪ್ಪು ಗ್ರೂಪಿನ ದುರುಪಯೋಗಕ್ಕೂ, ಈ ಟಾಯ್ಲೆಟ್ಟಿನ ಉದಾಹರಣೆಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ನನ್ನ ಬಲವಾದ ನಂಬಿಕೆ... 


(ವಿ.ಸೂ. ಯಾವ ಫಾರ್ವರ್ಡ್ ದಾರರೂ ಈ ಲೇಖನ ಓದಿ ಬದಲಾಗುತ್ತಾರೆ ಎಂಬ ಎಳ್ಳಿನಿತೂ ನನಗೆ ನಿರೀಕ್ಷೆಯಿಲ್ಲ. ಅಂಥವರು ಇಷ್ಟುದ್ದದ ಬರಹ ಓದುವುದಿಲ್ಲ ಎಂಬುದೂ ನನಗೆ ತಿಳಿದಿದೆ. ನನ್ನ ಮನಸ್ಸಿನ ಸಮಾಧಾನಕ್ಕೆ, ನೊಂದ ಅಡ್ಮಿನ್ ಗಳ ಪರವಾಗಿ ಇದೊಂದು ಬರಹ ಅಷ್ಟೇ. ವೈಯಕ್ತಿಕವಾಗಿ ಯಾರನ್ನೂ ಉದ್ದೇಶಿಸಿ ಬರೆದಿದ್ದಲ್ಲ. ಇದೊಂದು ಶಿಷ್ಟಾಚಾರ ಮರೆತ ವರ್ಗದ ಮನಸ್ಸಿನ ಸೂಕ್ಷ್ಮತೆ ರಹಿತ ವರ್ತನೆಯ ಪ್ರತಿರೂಪದ ವಿಡಂಬನೆ ಅಷ್ಟೆ) 

 -ಕೃಷ್ಣಮೋಹನ ತಲೆಂಗಳ (26.03.2020)

Popular Posts