ಅಧಿಕೃತ ಅಲ್ಲದ, ಸುಳ್ಳು, ಆತಂಕ ಹುಟ್ಟಿಸುವ ಪೋಸ್ಟುಗಳ ಕಣ್ಮುಚ್ಚಿ forward ಮಾಡೋದೂ ಒಂಥರಾ ಭಯೋತ್ಪಾದನೆಯೇ ಅಲ್ವೆ?
ಎಷ್ಟು
ಜಾಗೃತಿ ಮೂಡಿಸಿದರೂ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಅರಿವು ಮೂಡಿಸುವ ನೆಪದಲ್ಲಿ
ಖಚಿತವಲ್ಲದ, ಭಯ ಹುಟ್ಟಿಸುವ, ಹೆಸರು ವಿಳಾಸಗಳೇ ಇಲ್ಲದ, ಎಲ್ಲೆಲ್ಲಿಂದಲೋ ತೇಲಿ ಬರುವ
ಅನಾಮಿಕ ಸಂದೇಶಗಳನ್ನು forward ಮಾಡುವ ಚಟ ಅವ್ಯಾಹತವಾಗಿ ಮುಂದುವರಿದಿದೆ. ಇದರಿಂದ ಜನ
ಜಾಗೃತಿ ಹೊಂದುತ್ತಿಲ್ಲ, ಆತಂಕಿತರಾಗುತ್ತಿದ್ದಾರೆ. ಯಾವುದು ಸತ್ಯ? ಯಾವುದು ಸುಳ್ಳು
ಎಂದು ಪತ್ತೆ ಹಚ್ಚಲಾಗದೆ ಹೈರಾಣಾಗಿದ್ದಾರೆ.
ಆತ್ಮೀಯ
ಸುಶಿಕ್ಷಿತ ನಾಗರಿಕರೇ, ಎಲ್ಲಿಂದ ಬಂತು? ಯಾರು ಬರೆದರು? ಎಂಬುದೇ ಗೊತ್ತಿಲ್ಲದ
ಪೋಸ್ಟುಗಳು ನಿಮ್ಮ ಮೊಬೈಲಿಗೆ ಬಂತು ಅಂತ ಇಟ್ಕೊಳ್ಳೋಣ. ನೀವ್ಯಾಕೆ ಅದು ಸತ್ಯವ ಅಂತ
ದೃಢಪಡಿಸಲು ಪ್ರಯತ್ನ ಮಾಡುವುದಿಲ್ಲ? ದೃಢಪಡಿಸುವ ದಾರಿ ಗೊತ್ತಿಲ್ಲ ಅಂತ ಇಟ್ಕೊಳ್ಳೋಣ.
ದೃಢಪಡದ ಹೊರತು ಮತ್ಯಾಕೆ ಇನ್ನೂ ಒಂದಷ್ಟು ಗ್ರೂಪುಗಳಿಗೆ forward ಮಾಡಿ ಪಾಪ
ಕಟ್ಕೊಳ್ತೀರಿ? ಇಂತಹ ಅನಾಮಧೇಯ ವಿಚಾರಗಳನ್ನು forward ಮಾಡದೇ ಕುಳಿತರೆ ನಿಮಗಾಗುವ
ನಷ್ಟವಾದರೂ ಏನು?
ಕೊರೋನಾ
ನಿವಾರಣೆಗೆ ಅದು ತಿನ್ನಿ, ಇದು ತಿನ್ನಿ, ಚಹಾ ಕುಡೀರಿ, ದೀಪ ಆರಿದೆ, ನಾಳೆಯಿಂದ
internet ಇರೋದಿಲ್ಲ, ಮಂಗಳೂರಿನಲ್ಲಿ ಒಬ್ಬ ಏದುಸಿರು ಬಿಡ್ತಿದಾನೆ, ಮುಂದಿನ ವಾರ ಭೀಕರ
ಅಪಾಯ ಕಾದಿದೆ..... ಇಂಥದ್ದೇ ವಿಚಾರಗಳು forward ಆಗೋದು ಮತ್ತು ಜನ ಸುಲಭದಲ್ಲಿ
ನಂಬೋದು.
ಮಾಧ್ಯಮದವರ ಕೆಲಸ
ಮಾಧ್ಯಮದವರಿಗೇ ಮಾಡಲು ಬಿಡಿ, ವೈದ್ಯರ ಕೆಲಸ ವೈದ್ಯರಿಗೇ ಮಾಡಲು ಬಿಡಿ. ಏನೇನೋ ಸುಳ್ಳು
ಸುದ್ದಿಗಳನ್ನು ದಿನಪೂರ್ತಿ ಮನೆಯಲ್ಲಿ ಕುಳಿತು forward ಮಾಡ್ತೀರಲ್ಲ? ಈ ದಿನಗಳಲ್ಲೂ
ಮನೆ ಬಿಟ್ಟು field ನಲ್ಲಿರುವ ಮಾಧ್ಯಮ ಮಿತ್ರರು ಅಂತಹ ಸುದ್ದಿಗಳ ಜಾಡು ಹಿಡಿದು
ಸತ್ಯಾಸತ್ಯತೆ ಹೊರತೆಗೆಯಲು ಎಷ್ಟು ಕೆಲಸ ಮಾಡುತ್ತಾರೆಂಬ ಅರಿವು ನಿಮಗಿದೆಯೇ?
ದೇಶ
ಸರಿ ಇಲ್ಲ, ರಾಜಕಾರಣಿಗಳು ಸರಿ ಇಲ್ಲ, ಅಧಿಕಾರಿಗಳು ಸರಿ ಇಲ್ಲ ಅಂತ ಯಾವಾಗಲೂ
ಬೈಯ್ಯುತ್ತಲೇ ಇರ್ತೇವೆ. ಆದರೆ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಜವಾಬ್ದಾರಿಯುತ
ನಾಗರಿಕರಿಗೆ ಹೀಗಾ ನಾವು ವರ್ತಿಸಬೇಕಾಗಿದ್ದು? ಸುಳ್ಳು ಸುದ್ದಿಗಳನ್ನು ಆರಾಮವಾಗಿ ಕಂಡ
ಕಂಡಲ್ಲಿಗೆ forward ಮಾಡಿ ಜನರ ಆತಂಕ ಜಾಸ್ತಿ ಮಾಡಿದರೆ ನಾವೂ ಒಂಥರ ಭಯ ಉತ್ಪಾದಕರೇ
ಅಗೋದಿಲ್ವೆ? ಯೋಚಿಸಿ. ಹೆಸರು, ವಿಳಾಸ ಇಲ್ಲದ postಗಳನ್ನ ಅಲ್ಲಿಯೇ ಡಿಲೀಟ್ ಮಾಡಿ,
forward ಮಾಡಬೇಡಿ ದಯವಿಟ್ಟು.
ಕೊರೋನಾ
ಬಗ್ಗೆ ವೈಜ್ಞಾನಿಕ ಜಾಗೃತಿ ಮೂಡಿಸಿ, ಹೇಗೆ ಮುಂಜಾಗ್ರತೆ ಬೇಕು ಅಂತ ಅಧಿಕೃತ ಮಾಹಿತಿಗಳ
ಸಹಾಯದಿಂದ ತಿಳಿಸಿ... ಮೊದಲೇ ಕಂಗೆಟ್ಟವರನ್ನು ಸುಳ್ಳು ಪೋಸ್ಟುಗಳಿಂದ ಹೆದರಿಸುವ
ಭಯೋತ್ಪಾದಕರಾಗಬೇಡಿ....ಪ್ಲೀಸ್ .
-ಕೃಷ್ಣಮೋಹನ. (29/03/2020)
No comments:
Post a Comment