ನಿಶ್ಯಬ್ಧವನ್ನು ಕೇಳಿ ಪಡೆಯಿರಿ....!






ಅಂಕು ಡೊಂಕು ಇಳಿಜಾರು ರಸ್ತೆಯ ಅಕ್ಕ ಪಕ್ಕ ಸಾಲು ಮರಗಳು. ಮರದಡಿ ತುಂಬಾ ತರಗೆಲೆಗಳು, ಹಿಂದಿನ ಬೋಳುಗುಡ್ಡದ ಮೇಲೆ ಹೆಸರು ಕೇಳರಿಯದ ಹೂಗಳು, ಅದರಾಚೆಗಿನ ದಿಬ್ಬದ ಮೇಲೆ ಒತ್ತೊತ್ತಾಗಿ ಬೆಳೆದ ಮರಗಳ ಅಡಿಯಲ್ಲಿ ಅಂತಹ ಸೆಕೆಯನ್ನೂ ಮೀರಿ ಹಾಯಾಗಿ ನಿದ್ರಿಸಬಹುದಾದಷ್ಟು ಯಥೇಚ್ಛ ನೆರಳು, ಮನುಷ್ಯ ಸಂಚಾರವೇ ಇಲ್ಲದ ಬಿರು ಬಿಸಿಲ ರಸ್ತೆಯ ನಡುವೆ ತಂಪು ತಂಪು ನೀರೆತ್ತಿ ಕುಡಿಯುಬಹುದಾದ ಒಂದು ಬೋರುವೆಲ್ಲು.... ಅಬ್ಬ ಎಷ್ಟು ನಿಶ್ಯಬ್ಧ...

ಕಡಲಿಗೆ ಚಾಲೆಂಜ್ ಕೊಡುವಂತೆ ತಾಗಿ ಎದೆ ಸೆಟೆಸಿ ನಿಂತ ಕರಿಬಂಡೆ, ಪೈಪೋಟಿಗೆ ಬಿದ್ದಂತೆ ಬಂದು ಬಡಿಯುವ ರಕ್ಕಸ ಗಾತ್ರದ ಅಲೆಗಳು, ಕಾಲೂರಿದರೆ ಹೂತು ಹೋಗುವ ಮೃದುವಾದ ಮರಳ ರಾಶಿ, ಸಂಜೆಯಾದ ಸೂಚನೆಯೆಂಬಂತೆ ತಂಪು ಬೀಸು ಗಾಳಿ, ಗುಂಪು ಗುಂಪಾಗಿ ಅಲೆಗಳಲ್ಲಿ ಆಟವಾಡುತ್ತಿರುವ ಜೋಡಿಗಳು, ಕುಟುಂಬಗಳು, ಧ್ಯಾನಕ್ಕೆ ಕುಳಿತಂತೆ ಒಂಟಿಯಾಗಿ ಕಡಲಿಗೆ ಗಾಳ ಹಾಕಿ ನಿರ್ಲಿಪ್ತವಾಗಿ ಕುಳಿತ ಕುರುಚಲು ಗಡ್ಡದ ವ್ಯಕ್ತಿ.... ಎತ್ತರದಿಂದ ದೂರದಿಂದ ವೈಡ್ ಆಂಗಲ್ ನಲ್ಲಿ ನೋಡಿದಾಗ ಎಷ್ಟೊಂದು ನಿಶ್ಯಬ್ಧ...

ಗುಡ್ಡದ ಮೇಲೆ ರಾತ್ರಿ ಕಳೆದ ಮೇಲೆ ಬೆಳ್ಳಂಬೆಳಗ್ಗೆ ನವಿರಾದ ಸೂರ್ಯ ಕಿರಣಗಳ ಸ್ಪರ್ಶ, ಸೊಂಟದೆತ್ತರಕ್ಕೆ ಆವರಿಸಿದ ಚೂಪು ಹುಲ್ಲು, ಪಕ್ಕದ ಝರಿಯಿಂದ ಮುಖಕ್ಕೆ ನೀರು ಎರಚಿದಾಗ ಸಿಕ್ಕುವ ತಂಪಿನ ಅನುಭೂತಿ, ಪಾಚಿಗಟ್ಟಿದ ತೊಗಟೆಗಳ ಒತ್ತು ಒತ್ತಾಗಿ ಬೆಳೆದ ಮರಗಳ ನಡುವಿನಿಂದ ಬೇರ್ಪಡಿಸಲಾಗದಂತೆ ಬಂದು ಸೋಕುವ ಸೌಗಂಧ, ಮೊಬೈಲು ನೆಟ್ವರ್ಕೇ ಇಲ್ಲವೆಂಬ ನಿರಾಳತೆ, ಮತ್ತಷ್ಟು ದೂರ ನಡೆದು ಬುಡದತ್ತ ಹೋಗಬೇಕೆಂಬ ತುಸು ಆತಂಕ, ಸದ್ದಿಲ್ಲದೆ ಗುಡ್ಡಗಳ ಶ್ರೇಣಿಗಳ ಸೆರೆಹಿಡಿಯುವ ಕ್ಯಾಮೆರಾ... ಆದರೂ ಎಷ್ಟು ನಿಶ್ಯಬ್ಧ....

ಟೆರೇಸಿನ ಮೇಲೆ ಮೈಚಾಚಿ ಮಲಗಿದಾಗ ಅಕ್ಕಪಕ್ಕವೆಲ್ಲ ಮಾಯ, ಬಾನು ಮಾತ್ರ ಕಣ್ಣಿಗೆ ಗೋಚರ. ಸಂಜೆಯ ಕೆಂಪಿನ ನಡುವೆ ಒಂದೇ ಒಂದು ನಕ್ಷತ್ರ, ಮೋಡಗಳ ಅಂಚು ಮಾತ್ರ ನಸು ಕೆಂಪು, ಮತ್ತೆಲ್ಲಾ ಬೂದು, ಕಾರಣವೇ ಇಲ್ಲದ ಅವಸರದ ಪಯಣ, ತೆಳುವಾಗಿ ಕಾಣುವ ಚಂದ್ರನ ದಾಟಿ ಮೋಡ ದೂರ ಹೋದರೂ ಚಂದ್ರನಿಗದರ ಪರಿವೆಯಿಲ್ಲ. ವಿ ಆಕಾರದಲ್ಲಿ ಮನೆಯತ್ತ ತೆರಳುವ ಹಕ್ಕಿಗಳ ವೇಗ ಭೂಮಿಯಿಂದ ನೋಡಿದಾಗ ಲೆಕ್ಕಕ್ಕೇ ಸಿಗುವುದಿಲ್ಲ, ರಸ್ತೆ, ವಾಹನ, ಅಂಗಡಿ, ಟ್ರಾಫಿಕ್ಕು ಅದೂ, ಇದೂ ಎಂಬ ಹಾಗೆ ಜಾಗವೇ ಇಲ್ಲದ ಇಕ್ಕಟ್ಟಿನ ನಡುವೆ ಆಕಾಶದತ್ತ ನೋಡಿದಾಗ ಅಬ್ಬ ಎಷ್ಟೊಂದು ಸುವಿಶಾಲ... ಎಷ್ಟು ನಿಶ್ಯಬ್ಧ.

ಮಂಜು ಬಿದ್ದ ಹುಲ್ಲಿನ ಮೇಲಿನ ಚಪ್ಪಲಿ ಹಾಕದ ನಡಿಗೆ, ನದಿ ಒಡಲಿನ ಉರುಟು ಕಲ್ಲುಗಳ ಮೇಲೆ ಜಾರುತ್ತಾ ಸಂಚಾರ, ಅಲೆಯಪ್ಪಿ ತೆರಳಿದ ಬಳಿಕ ಪಾದದಡಿಯಿಂದ ಜಾರಿ ಹೋಗುವ ಮರಳು, ಮುಳ್ಳು ಚುಚ್ಚಿ, ಕಲ್ಲು ತಾಗಿ, ಬೆವರಿಳಿದು, ಎದೆಯುರಿದು ಹತ್ತಿದ ಬೋಳು ಬೆಟ್ಟದ ತುದಿಯಲ್ಲಿ ಹಾರಿಸಿಕೊಂಡು ಹೋಗುವಷ್ಟು ವೇಗವಾಗಿ ಗಾಳಿ ಬೀಸಿದಾಗ ಮಾಯವಾಗುವ ಆಯಾಸ, ತೋಟದ ನಡುವಿನ ಹಸಿರಿನಲ್ಲಿ ಸ್ಪ್ರಿಂಕ್ಲರ್ ಹಾರಿಸುವ ನೀರಿನಲ್ಲಿ ಮೂಡಿದ ಕಾಮನಬಿಲ್ಲನ್ನು ಹಿಡಿಯಲು ಹೋಗುವಾಗ ಒದ್ದೆಯಾಗುವ ಮೈ, ನಾವು ನೆಪ ಮಾತ್ರಕ್ಕೆ ಹಿಡಿದ ಹಗ್ಗದ ತುದಿಯಲ್ಲಿನ ಗಾಳಿ ಪಟ ತನ್ನಿಷ್ಟದಂತೆ ಹಾರಿ ಹೋದಾಗ ಅದರ ಜಾಡು ಹಿಡಿಯಲಾಗದೆ ಹಾರಿಸಿದ ತೃಪ್ತಿಯಲ್ಲಿ ಮರಳುವಾಗ ಸಿಕ್ಕಿದ ಹಿಗ್ಗು....

ಎಷ್ಟೊಂದು ನಿಶ್ಯಬ್ಧದ ಕ್ಷಣಗಳು...

ಸ್ವತಂತ್ರವಾಗಿ ಮಾತನಾಡದ ಮೊಬೈಲು, ಸ್ಟೇಟಸ್ಸು, ಡಿಪಿ, ಕಮೆಂಟು, ಲೈಕು, ಆನ್ ಲೈನು, ಲಾಸ್ಟ್ ಸೀನು ಇವುಗಳಲ್ಲಿ ಸದ್ದಿಲ್ಲದೆಯೂ ಹೊರಡುವ ಸದ್ದು, ವಿಚಿತ್ರವಾದ ಒತ್ತಡ, ವಿನಾಕಾರಣದ ನಿರೀಕ್ಷೆ, ಹುಸಿ ಬಿಂಬಗಳು, ತೋರಿಕೆಯ ನಗು, ಶಿಷ್ಟಾಚಾರದ ಲೈಕು, ಶುಭಾಶಯ, ಫಾರ್ವರ್ಡು.... ಮತ್ತೊಂದಿಷ್ಟು ಫ್ರೀ ಡೇಟಾ ಮುಗಿಯುವ ವರೆಗಿನ ವಹಿವಾಟುಗಳ ಸದ್ದಿನ ನಡುವೆ ನಿಶ್ಯಬ್ಧ ಹುಡುಕಿ ಹುಡುಕಿ ಸಾಕಾಗಿದೆ...

-ಕೃಷ್ಣ ಮೋಹನ ತಲೆಂಗಳ. (25.04.2020)

No comments:

Popular Posts