ಹೌದ? Update ಆಗಿದ್ದೇವ? ಹಾಗೆಂದರೇನು?!

ಅಂಚೆ ಕಚೇರಿಗೆ ಹೋಗಿ ಐದು ಪೈಸೆಯ ಪೋಸ್ಟ್ ಕಾರ್ಡು ಅಥವಾ ನಾಲ್ಕಾಣೆಯ ಇನ್ ಲ್ಯಾಂಡ್ ಲೆಟರ್ ತಂದು ಪತ್ರ ಪೂರ್ತಿ ಬರೆಯುವುದು. ವಾರದ, ತಿಂಗಳ ಅಥವಾ ಕಳೆದ ಪತ್ರದಿಂದ ಈ ಪತ್ರದ ವರೆಗಿನ ಅವಧಿಯ ಅಷ್ಟೂ ಸಮಾಚಾರ, ಕುಶಾಲು, ಕಷ್ಟಸುಖ, ಆರೋಗ್ಯ ಎಲ್ಲದರ ಬಗ್ಗೆ ಸವಿವರವಾಗಿ ಪತ್ರಗಳನ್ನು ಬರೆದು ಪೋಸ್ಟು ಮಾಡುತ್ತಿದ್ದೆವು. 2-3 ದಿನ ಕಳೆದು ಅವರಿಗೆ ತಲಪುತ್ತಿತ್ತು. ಮರು ಉತ್ತರ ಬರುವ ವರೆಗೆ ಒಂದು ಕಾತರವಿತ್ತು, ನಿರೀಕ್ಷೆಯಿತ್ತು... ಯಾವಾಗ ಕಾಗದ ಬರುತ್ತದೆ ಎಂದು. ಉತ್ತರ ಬಂದಾಗ ಅದನ್ನು ಓದುವ ಖುಷಿಯೇ ಬೇರೆ. ಅಲ್ಲಿನ ಕೈಬರಹ, ಅಕ್ಷರದ ಹಿಂದಿರುವ ಕಾಳಜಿಗೆ ಬೆಲೆ ಕಟ್ಟಲಾಗದು. ಎಲ್ಲದಕ್ಕಿಂತ ಮಿಗಿಲಾಗಿ ಪತ್ರ ಓದುವಾಗ ನಡು ನಡುವೆ ಬೇರೆ ಬೇರೆ ಮೆಸೇಜು ಬರುವ ಕಿರಿಕಿರಿ, ಅರ್ಧರ್ಧ ಓದಿ, ಕೇಳಿ ಮಾಡುವ ಅಪಕ್ವ ಉತ್ತರಗಳು ಯಾವ ಅಭಾಸಗಳೂ ಇರಲಿಲ್ಲ. ಪುರುಸೊತ್ತಿನಲ್ಲಿ, ಬೇಕಾದಷ್ಟು ಬಾರಿ ಪತ್ರವನ್ನು ಓದಬಹುದಿತ್ತು. ಪೆಟ್ಟಿಗೆಯಲ್ಲಿ ಎತ್ತಿಟ್ಟರೆ ದಶಕಗಳ ಹಿಂದಿನ ಪತ್ರಗಳು ಆಗಿನ ಇತಿಹಾಸವಾಗಿಯೂ ಕಂಡೀತು, ಕಂಡು ಬರುತ್ತದೆ. ಕೂಡಾ ಉದ್ವೇಗ, ಪ್ರಚೋದನೆ, ವದಂತಿ, ಆತುರ, ಧಾವಂತವನ್ನೆಲ್ಲ ಮೆಟ್ಟಿ ನಿಲ್ಲುವ ತಾಳ್ಮೆಯ ಪ್ರತಿರೂಪಗಳಾದ ಪತ್ರಗಳ ಯುಗ ಇದ್ದದ್ದು ಬಹಳ ಹಿಂದೆಯೇನಲ್ಲ... ಸುಮಾರು 10-15 ವರ್ಷಗಳ ಹಿಂದಿನ ವರೆಗೂ ಬಹುತೇಕ ಜೀವಂತವೇ ಇತ್ತು...

ಈಗದರ ಅಗತ್ಯ ಯಾರಿಗೂ ಕಾಣುತ್ತಿಲ್ಲ, ಕಾರಣ update ಆಗಿದ್ದೇವೆ!
 




ಒಂದು ಕಾಲವಿತ್ತು...
ತುಂಬ ಮನೆಗಳಲ್ಲಿ ಟಿ.ವಿ.ಇರಲಿಲ್ಲ, ಅಸಲಿಗೆ ಕರೆಂಟೇ ಇರಲಿಲ್ಲ. ಊರಿನ ನಾಲ್ಕೈದು ಗಟ್ಟಿ ಕುಳಗಳ ಮನೆಗಳಲ್ಲಿ ಟಿ.ವಿ. ಇತ್ತು. ರಾಮಾಯಣವೋ, ಮಹಾಭಾರತವೋ, ಚಾಣಕ್ಯನೋ, ಕ್ರಿಕೆಟ್ಟೋ ಏನೇ ಇದ್ದರೂ ಟಿ.ವಿ.ನೋಡಬೇಕಾದರೆ ಅವರ ಮನೆಗಳಿಗೆ ಎಡತಾಕಬೇಕು. ಟಿ.ವಿ. ಇರುವ ಮನೆಯವರಿಗೂ ಅಷ್ಟೇ ಟಿ.ವಿ.ನೋಡಲು ಊರವರು ತಮ್ಮ ಮನೆಗೆ ಬಂದು ಸೇರುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತು. (ಅವರ ವೈಯಕ್ತಿಕ ಅನ್ನಾಹಾರ ಸೇವನೆ, ಓಡಾಟಕ್ಕೆ ಕಿರಿಕಿರಿ ಆದರೂ ಅದು ಟಿ.ವಿ.ನೋಡಲು ಬರುವವರ ಮಂಡೆಗೆ ಹೋಗುತ್ತಿರಲಿಲ್ಲ ಅನ್ನುವುದು ಬೇರೆ ವಿಷಯ). ಕೆಲವೊಮ್ಮೆ ಟಿ.ವಿ.ಇರುವ ಮನೆಗಳ ಹಜಾರ ಭರ್ತಿಯಾಗಿ ಕಿಟಕಿಯಿಂದಲೇ ಇಣುಕಿ ಟಿ.ವಿ.ಯಲ್ಲಿ ಮಹಾಭಾರತ ನೋಡಿದ ದಿನಗಳು ನೆನಪಿವೆ (2 ಕಿ.ಮೀ. ನಡೆದುಕೊಂಡು ಹೋಗಿ). ದೂರದರ್ಶನ ಮಾತ್ರ ಟಿ.ವಿ.ಚಾನೆಲ್ ಆಗಿದ್ದ ದಿನದಲ್ಲಿ ವಾರದಲ್ಲಿ ಎರಡೇ ಹಿಂದಿ ಚಿತ್ರಗೀತೆಯ ಕಾರ್ಯಕ್ರಮ ಭಾನುವಾರದ ರಂಗೋಲಿ, ಬುಧವಾರದ ಚಿತ್ರಹಾರ್, ಮತ್ತೆ ಕ್ಲೋಸಪ್ ಅಂತ್ಯಾಕ್ಷರಿ ಅಂತೇನೋ ಕಾರ್ಯಕ್ರಮ ಇತ್ತು. ಕನ್ನಡದಲ್ಲಿ ಶುಕ್ರವಾರದ ಚಿತ್ರಮಂಜರಿ, ಭಾನುವಾರ ಸಂಜೆ 4ರ ಕನ್ನಡ ಸಿನಿಮಾ. ಅದು ಯಾವುದೇ ಹಾಡಾಗಲಿ, ಯಾವುದೇ ಸಿನಿಮಾವಾಗಲಿ ಹಠಕ್ಕೆ ಬಿದ್ದವರಂತೆ ಹೋಗಿ ಎಲ್ಲರೂ ಸಿನಿಮಾ ನೋಡುತ್ತಿದ್ದರು. ಅರ್ಧದಲ್ಲಿ ಎದ್ದು ಹೋಗುತ್ತಿರಲಿಲ್ಲ. ವಾರದಲ್ಲಿ ದೂರದರ್ಶನ ಮನರಂಜನೆಯನ್ನುಲೆಕ್ಕ ಹಾಕಿ ಕೊಡುತ್ತಿತ್ತು. ಚಿತ್ರಗೀತೆ, ಸಿನಿಮಾ, ವಾರ್ತೆ, ಸಂಸ್ಕೃತ ವಾರ್ತೆ, ಕಿವುಡರಿಗೆ ವಾರ್ತೆ, ಹವಾಮಾನ ವರದಿ, ಕಾಣೆಯಾದವರ ವಿವರ, ಶಾಂತಿ, ಮಾಯಾಮೃಗದಂತಹ ಬೆರಳೆಣಿಕೆಯ ಧಾರಾವಾಹಿಗಳು... ಇವು ಯಾವುದೂ ಮತ್ತೆ YOUTUBE ನಲ್ಲಿ ಸಿಕುತ್ತಿರಲಿಲ್ಲ. ಕಾರಣ, ಆಗ ಇಂಟರ್ ನೆಟ್ಟೇ ಇರಲಿಲ್ಲ....
ಈಗ ಗೊತ್ತಲ್ಲ? ಟಿ.ವಿ.ಯಲ್ಲಿ, ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ ಎಲ್ಲಿ ಬೇಕಾದರೂ ಸಿನಿಮಾ ನೋಡಬಹುದು. ಆದರೆ ಎಷ್ಟು ಮಂದಿಗೆ ಅದರದಲ್ಲಿ ಖುಷಿ ಇದೆ? ಆದರೂ ನಾವು ಮನಸ್ಸು ಕೊಟ್ಟು ನೋಡುವುದಿಲ್ಲ, ಕಾರಣ ನಾವು update ಆಗಿದ್ದೇವೆ.
ಇದೆಲ್ಲ ನಡೆದದ್ದು ಹೆಚ್ಚು ಪುರಾತನ ಕಾಲದಲ್ಲಿ ಅಲ್ಲ, ಸುಮಾರು 25-30 ವರ್ಷಗಳ ಹಿಂದಿನ ಚಿತ್ರಣ ಇದು ಅಷ್ಟೇ.

---------

ಊರಿನಲ್ಲಿ ಯಕ್ಷಗಾನ ಬಯಲಾಟ ಆಗುತ್ತಿತ್ತು, ಚೌಕಿ ಪೂಜೆಗೂ ಮುನ್ನ ಸೂಟೆ (ತೆಂಗಿನ ಗರಿಗಳ ದೊಂದಿ) ಹಿಡಿದು ಚಾಪೆ ಸಹಿತ ಮನೆ ಮಂದಿ ಬಯಲಾಟದ ಗದ್ದೆಗೆ ತೆರಳುತ್ತಿದ್ದರು. ಅಲ್ಲಿ ಕೂರಲು ಕುರ್ಚಿ, ಬೆಂಚುಗಳೂ ಇರುತ್ತಿರಲಿಲ್ಲ (ಹರಿಕೆ ಬಯಲಾಟದ ವಿಚಾರ). ನೆಲವೇ ಸೀಟು, ನೆಲದ ಮಟ್ಟಕ್ಕೇ ರಂಗಸ್ಥಳ, ನಡುನಡುವೆ ಪೋಡಿ, ಚಹಾ ವ್ಯವಸ್ಥೆ ಕೂಡಾ ಇರುತ್ತಿರಲಿಲ್ಲ (ಕ್ಯಾಂಟೀನ್ ಗಳು ಇರುತ್ತಿದ್ದವು). ಆದರೂ ಬೆಳಗ್ಗಿನ ವರೆಗೆ ಯಾರೂ ಮಿಸುಕದೆ ನೆಲದಲ್ಲೇ ಕುಳಿತು ಆಟ ನೋಡಿ ಸೂರ್ಯನ ಬೆಳಕು ಹರಿದ ಬಳಿಕವೇ ಮನೆಗೆ ಬರುತ್ತಿದ್ದವು. ಅರ್ಧದಲ್ಲಿ ಬರಲು ವಾಹನ ಸೌಕರ್ಯವಿರಲಿಲ್ಲ. ಅಸಲಿಗೆ ಅರ್ಧದಿಂದ ಎದ್ದು ಮನೆಗೆ ಬರಬಹುದು ಎಂಬ ಐಡಿಯಾವೂ ಗೊತ್ತಿರಲಿಲ್ಲ. ಆಟಕ್ಕೆ ಪ್ರೇಕ್ಷಕರ ಕೊರತೆ ಆಗಿದ್ದು ನಾನು ಯಾವತ್ತೂ ನೋಡಿರಲಿಲ್ಲ. ಕಲಾವಿದರ ಹೆಸರು, ಫೋನ್ ನಂಬರ್, ಫೇಸ್ ಬುಕ್ ಫ್ರೆಂಡ್ ಶಿಪ್ ಯಾವುದೂ ಇರಲಿಲ್ಲ, ನೇರ ಪ್ರಸಾರ ಬಿಡಿ ಯಕ್ಷಗಾನದ ಆಡಿಯೋ, ವಿಡಿಯೋ ಸಿಗುವುದು ಕೂಡಾ ಕನಸಿನ ಮಾತಾಗಿತ್ತು.... ಆದರೂ ಆಟಕ್ಕೆ ಜನರ ಕೊರತೆಯೇ ಇರಲಿಲ್ಲ....
ಇವತ್ತು ಗೊತ್ತಲ್? ಖುರ್ಚಿಯಿದೆ, ಊಟೋಪಚಾರ ಇದೆ, ಹೋಗಲು ಬರಲು ವಾಹನ ವ್ಯವಸ್ಥೆಯಿದೆ, ನೇರಪ್ರಸಾರ ಇದೆ, ಕಲಾವಿದರ ನೇರ ಸಂಪರ್ಕ ಇದೆ.... ಆದರೂ ಕೆಲವೊಮ್ಮ ಆಟಕ್ಕೆ ಪ್ರೇಕ್ಷರ ಕೊರತೆ ಖಂಡಿತಾ ಇದೆ.
ಕಾರಣ ನಾವು UPDATE ಆಗಿದ್ದೇವೆ.
ಈ ಮೇಲಿನ ಸಂದರ್ಭ ತುಂಬ ಹಳೆಯದೇನಲ್ಲ, ಸುಮಾರು 30 ವರ್ಷ ಹಿಂದಿನ ಕಥೆ....

......

ಬೆಳಗ್ಗಿನ ವಂದನಾದಿಂದ ಹಿಡಿದು ರಾತ್ರಿ 11 ಗಂಟೆಯ ಇಂಗ್ಲಿಷ್ ವಾರ್ತೆ ವರೆಗೆ ರೇಡಿಯೋ ಚಾಲೂ ಇರುತ್ತಿತ್ತು. ಬ್ಯಾಟರಿ ಹಾಕಿ ಮೀಡಿಯಂ ವೇವ್ ಸ್ಟೇಷನ್ ಹಚ್ಚಿ ಮಂಗಳೂರಿನ ದಿಕ್ಕಿನೆಡೆಗೆ ರೇಡಿಯೋ ಮುಖ ಮಾಡಿರಿಸಿದರೆ ಸುಸ್ಪಷ್ಟವಾಗಿ ರೇಡಿಯೋ ಕೇಳುತ್ತಿತ್ತು. ಚಿಂತನ, ಗೀತಲಹರಿ, ರೈತರಿಗೆ ಸಲಹೆ, ಚಿಲಿಪಿಲಿ, ಬಾಲವೃಂದ, ಪ್ರದೇಶ ಸಮಾಚಾರ, ವಾರ್ತೆಗಳು, ವನಿತಾವಾಣಿ, ಯುವವಾಣಿ, ಮುನ್ನೋಟ, ಕನ್ನಡ ಚಲನಚಿತ್ರಗಳ ಧ್ವನಿವಾಹಿನಿ, ರಾಷ್ಟ್ರೀಯ ನಾಟಕ, ಮಾತುಕತೆ, ಪತ್ರೋತ್ತರ, ಎಲ್ಲದಕ್ಕಿಂತ ಮುಖ್ಯವಾಗಿ ಬಾನುವಾರ ಸಂಜೆಯ ಯಕ್ಷಗಾನದ ಹಾಡುಗಳು ಮತ್ತು ಬುಧವಾರ ರಾತ್ರಿ 9.30ರ ತಾಳಮದ್ದಳೆ ಇವೆಲ್ಲ ಬೆಳೆಯುತ್ತಾ ಬೆಳೆಯುತ್ತಾ ನಮಗೆ ಏನನ್ನೋ ಕಲಿಸುತ್ತಲೇ ಹೋಯಿತು. ಎಸ್ಪಿ ಬಾಲಸುಬ್ರಹ್ಮಣ್ಯಂ, ಡಾ.ರಾಜ್ ಕುಮಾರ್, ಪಿಬಿ ಶ್ರೀನಿವಾಸ್, ಎಸ್.ಜಾನಕಿ, ಮಹಮ್ಮದ್ ರಫಿ ಇವರೆಲ್ಲ ಅಕ್ಕಪಕ್ಕದ ಮನೆಯವರೋ ಎಂಬಂಥೆ ಆಪ್ತತೆಯನ್ನು ಕಟ್ಟಿ ಕೊಟ್ಟದ್ದು ಆಕಾಶವಾಣಿ. ರೇಡಿಯೋದಲ್ಲಿ ಸ್ವರ ಹೇಗೆ ಬರುತ್ತದೆ, ಅಲ್ಲಿ ಕೆಲಸ ಮಾಡುವವರು ಎಷ್ಟು ಗ್ರೇಟ್ ಅಲ್ವ, ಅವರು ನಿಜವಾಗಿ ನೋಡುವುದಕ್ಕೆ ಹೇಗೆ ಇರಬಹುದು, ಅವರಿಗೆ ಎಷ್ಟು ತಿಳಿವಳಿಕೆ ಇರಬಹುದು, ಅವರ ಸ್ವರಕ್ಕೂ ಅವರು ಕಾಣಿಸಿಕೊಳ್ಳುವುದಕ್ಕೂ ಸಾಮ್ಯತೆ ಇರಬಹುದೇ? ಎಂಬಿತ್ಯಾದಿ ಪುಳಕ ಹುಟ್ಟಿಸುವ ಕುತೂಲಹಗಳು... ಶ್ರವ್ಯ ಮಾಧ್ಯಮ ಅಷ್ಟರ ಮಟ್ಟಿಗೆ ಆವರಿಸಿಕೊಳ್ಳಲು ಕಾರಣ ಸರಳವಾಗಿ, ಸುಲಭವಾಗಿ ಜನರನ್ನು ತಲಪುತ್ತಿದ್ದ ಅದರ ಗುಣ ಹಾಗೂ ಉದ್ವೇಗರಹಿತ, ಶಾಂತಚಿತ್ತ ಸ್ವಭಾವ ಹಾಗೂ ಮಾಹಿತಿ, ಮನರಂಜನೆ, ಶಿಕ್ಷಣಗಳೆಂಬ ಮೂಲ ಉದ್ದೇಶಕ್ಕೆ ಅಂದಿಗೂ ಇಂದಿಗೂ ಬದ್ಧವಾಗಿ ಇರುವುದಕ್ಕೆ ಸಾಧ್ಯವಾದ ಸ್ಪಷ್ಟ ಗುರಿ...
ಇಂದು ರೇಡಿಯೋ ಕೇಳುತ್ತೇವೆ. ಆದರೆ ಕೇಳುವ ಸಮಯ ಬದಲಾಗಿಲ್ವ...? ಯಾಕೆಂದರೆ ನಾವು update ಆಗಿದ್ದೇವೆ.
ಇದೆಲ್ಲ ನಡೆದದ್ದು ತುಂಬ ಮೊದಲೇನಲ್ಲ. ಕೇವಲ 30-35 ವರ್ಷಗಳ ಹಿಂದೆ....

.....

ಈ 25-30 ವರ್ಷಗಳ ಹಿಂದಿನ ಬದುಕೂ ಈಗಿನ ಬದುಕೂ ತುಂಬಾ ತುಂಬ ಬದಲಾಗಿದೆ. ಈಗ 40 ವರ್ಷ ದಾಟಿದವರಿಗೆ ಗೊತ್ತು ಈ ಮನ್ವಂತರ. ಈ ಬದಲಾವಣೆಗಳಿಗೆ ನಾವೆಲ್ಲ ಸಾಕ್ಷಿಗಳು. 30-40ರ ಹರೆಯದವರಿಗೆ ಅಲ್ಪ ಸ್ವಲ್ಪ ಗೊತ್ತು. ಈಗಿನ್ನೂ 20-25 ದಾಟದವರಿಗೆ ಇದೆಲ್ಲ ಹಿರಿಯರಿಂದ ಕೇಳಿ ಗೊತ್ತಿರುವ ವಿಚಾರಗಳೇ ಹೊರತು ಪ್ರತ್ಯಕ್ಷ ನೋಡಿರಲು ಸಾಧ್ಯವಿಲ್ಲ.

ಸ್ವಾಮಿ, ಅದು ನಾವು ಸಣ್ಣವರಿರುವಾಗ ಎಲ್ಲವೂ ಚೆನ್ನಾಗಿತ್ತು... ಈಗ ಕಾಲ ಕೆಟ್ಟು ಹೋಗಿದೆ. ಈಗ ಯಾವುದೂ ಸರಿ ಇಲ್ಲ... ಎಲ್ಲರೂ ಹಾಳಾಗಿದ್ದಾರೆ... ಎಂಬಿತ್ಯಾದಿ ಚರ್ವಿತ ಚರ್ವಣ ವಾದಕ್ಕೋಸ್ಕರ ಇದೆಲ್ಲ ಹೇಳಿದ್ದಲ್ಲವೇ ಅಲ್ಲ.
ಮಾತು ಮಾತಿಗೂ ನಾವು ಅಪ್ಡೇಟ್ ಆಗಿದ್ದೇವೆ, ಸಮಕಾಲೀನರಾಗುತ್ತಿದ್ದೇವೆ ಅನ್ನುತ್ತೇವಲ್ಲ.. update ಆಗುವುದು ಅಂದರೇನು?
ಮನಸ್ಥಿತಿಯಲ್? ಉಡುಪಿನಲ್ಲ? ನಡವಳಿಕೆಯಲ್ಲ? ತಂತ್ರಜ್ನಾನದಲ್ಲ? ಮೇಕಪ್ಪಿನಲ್? ಆಚಾರ ವಿಚಾರದಲ್ಲ? ಯಾವುದರಲ್ಲಿ...?

ತಂತ್ರಜ್ನಾನದ ಬೆಳವಣಿಗೆ ಪ್ರತಿ ದಶಕದಲ್ಲೂ, ಶತಮಾನದಲ್ಲೂ ನಡೆದಿದೆ. ಮುಂದೆಯೂ ನಡೆಯುತ್ತಲೇ ಇರುತ್ತದೆ. ಆಚಾರ ವಿಚಾರ, ಚಿಂತಿಸುವ ರೀತಿ, ಗ್ರಹಿಕೆಯ ವಿಧಾನ ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಆದರೆ 2-3 ದಶಕಗಳ ಹಿಂದೆ ತಿರುಗಿ ನೋಡಿದಾಗ ಸ್ವತಹ ನಾವೇ ಎಷ್ಟು ಬದಲಾಗಿದ್ದೇವೆ ಎಂಬ ಹೋಲಿಕೆ ಆ ದಿನಗಳ ಮತ್ತು ಈ ದಿನಗಳ ನಡುವಿನ ವ್ಯತ್ಯಾಸವನ್ನು ತೋರಿಸಿಕೊಡುತ್ತದೆ ಅಷ್ಟೇ...

ಆಗ.....
ಮೊಬೈಲ್ ಇಲ್ಲದಿದ್ದರೂ ಕಾಗದ ಹಾಕಿ ನೆಂಟರು ಬರುತ್ತಿದ್ದರು. ಒಂದೆರಡು ದಿನ ಉಳಿದುಕೊಂಡು ಹೋಗುತ್ತಿದ್ದರು. ಜನ ಹುಟ್ಟಿದ್ದು, ಸತ್ತದ್ದು ಪತ್ರ ಮುಖೇನವೇ ಗೊತ್ತಾಗುತ್ತಿತ್ತು. ಆರೋಗ್ಯ ಗಂಭೀರವಾದ ಸಂದರ್ಭ ಅಂಚೆ ಕಚೇರಿಗೆ ಹೋಗಿ ಟ್ರಂಕ್ ಕಾಲ್ ಮಾಡುವ ಅಥವಾ ಟೆಲಿಗ್ರಾಂ ಮಾಡುವ ಪದ್ಧತಿ ಇತ್ತು. ಆರೋಗ್ಯಗಂಭೀರ ಸ್ಥಿತಿಗೆ ತಲುಪಿದರೆ 2-3 ಜಿಲ್ಲೆಗೂ ಸೇರಿ ಒಂದೋ, ಎರಡು ದೊಡ್ಡಾಸ್ಪತ್ರೆ ಇರ್ತಾ ಇತ್ತು. ಅಲ್ಲಿಗೆ ಹೋದರೆ ಆತ ಬದುಕಿ ಬರುವುದೇ ಪವಾಡ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ಹೆರಿಗೆಗಳು ಬಹುತೇಕ ಮನೆಯಲ್ಲೇ ಆಗುತ್ತಿತ್ತು... ಹಬ್ಬಗಳು, ಉತ್ಸವಗಳು ಎಲ್ಲರು ಜೊತೆ ಸೇರಿ ನಡೆಯುತ್ತಿತ್ತು, ಜನ ಅವರವರ ಮಾತೃಭಾಷೆಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಲೈಕು ಮತ್ತು ಕಮೆಂಟುಗಳಿಗಾಗಿ ಏನನ್ನೂ ಮಾಡುತ್ತಿರಲಿಲ್ಲ, ಯಾಕಂದರೆ ಆಗ ಸಾಮಾಜಿಕ ಜಾಲತಾಣಗಳು ಇರುತ್ತಿರಲಿಲ್ಲ!

ಪೇಟೆಗಳು ಕಡಿಮೆಯಿದ್ದವು, ಗದ್ದೆ, ತೋಟ ಜಾಸ್ತಿ ಇತ್ತು, ಕೆರೆ, ಬಾವಿ, ಹಳ್ಳ, ಕೊಳ್ಳ ಸಾಕಷ್ಟಿತ್ತು. ಮನೆ ಮನೆಗಳಲ್ಲಿ ವಾಹನಗಳು ಈಗಿನಂತಿರಲಿಲ್ಲ. ವೆಹಿಕಲ್ ಲೋನ್ ಕೊಡುವ ಬ್ಯಾಂಕ್ ಗಳೂ ಇರಲಿಲ್ಲ. ಗುತ್ತಿನ ಮನೆ, ಹಳ್ಳಿಯ ಹಳೆಕಾಲದ ಮನೆಗಳು, ಸೌದೆ ಒಲೆಗಳು, ವಿಶಾಲ ದನದ ಕೊಟ್ಟಿಗೆ ತುಂಬಾ ಹಸುಗಳು, ಊರಲ್ಲಿ ಹತ್ತಾರು ಆಟದ ಮೈದಾನಗಳು, ಗೋಮಾಳಗಳಿದ್ದವು. ಕಂಡ ಕಂಡಲ್ಲಿ ಬೋರ್ ವೆಲ್ ಕೊರೆಸುತ್ತಿರಲಿಲ್ಲ. ಆಸಿಡಿಟಿ, ಬಿಪಿ, ಡಯಾಬಿಟಿಸ್, ಸ್ಟ್ರೆಸ್, ಸಿಸೇರಿಯನ್ ಇವೆಲ್ಲ ಪತ್ತೆಯಾಗುತ್ತಿರಲಿಲ್ಲವೋ... ಕಂಡು ಬರುತ್ತಲೇ ಇರಲಿಲ್ಲವೋ ಗೊತ್ತಿಲ್ಲ. ಪ್ರಮಾಣ ಕಡಿಮೆಯಿತ್ತು.

ಬೆರಳೆಣಿಕೆಯ ಪೇಪರುಗಳಲ್ಲಿ ಮಾತ್ರ ಸುದ್ದಿ ತಿಳಿಯುತ್ತಿತ್ತು. ಮತ್ತೆ ರೇಡಿಯೋ ವಾರ್ತೆಗಳಲ್ಲಿ. ಕ್ರಿಕೆಟ್ ಕಮೆಂಟರಿ ಕೇಳುವುದು ಹವ್ಯಾಸವಾಗಿತ್ತು. ಗ್ರಾಮಾಫೋನ್ ತಟ್ಟೆಗಳು, ಟೇಪ್ ರೆಕಾರ್ಡರ್, ವಾಕ್ ಮ್ಯಾನ್, ಲಾಟೀನು, ಚಿಮಿಣಿ ಎಣ್ಣೆ ದೀಪ, ಟೈಪ್ ರೈಟರ್, ಗ್ಯಾಸ್ ಲೈಟರ್, ಹಳೆ ಕಾಲದ ಸೈಕಲ್ಲು.... ಹೀಗೆ ಎಷ್ಟೊಂದು ನೆನಪುಗಳಿವೆ ಮೂರು ದಶಕಗಳ ಹಿಂದಿನ ಬದುಕಿನಲ್ಲಿ....
ಆಗಿನ ನಿರೀಕ್ಷೆಗಳು, ಗ್ರಹಿಕೆಗಳು, ಜಗತ್ತನ್ನು ನೋಡುತ್ತಿದ್ದ ರೀತಿ, ವಿಡಂಬನೆ ಆಗುತ್ತಿದ್ದ ವಿಧಾನ, ವಿನೋದ, ವಿಮರ್ಶೆ, ಮನರಂಜನೆಗಳ ವ್ಯಾಖ್ಯೆಗಳು ಈಗ ಖಂಡಿತಾ ಬದಲಾಗಿವೆ. ಅದರ ಪಾತ್ರಧಾರಿಗಳು ನಾವೇ ಆದರೂ ಕೂಡಾ!

ಇಂದು ಟಿ.ವಿ. ಇದೆ, ಕಂಪ್ಯೂಟರ್ ಇದೆ, ಇಂಟರ್ ನೆಟ್ ಇದೆ, ದೊಡ್ಡ ದೊಡ್ಡ ನಗರಗಳಿವೆ, ಸಂಪರ್ಕಕ್ಕೆ ಏನು ಬೇಕೋ ಅದೆಲ್ಲ ಇದೆ. ಇಲ್ಲದ್ದನ್ನು ಇದೆಯೆಂದು ತೋರಿಸುವ ವರ್ಚುವಲ್ ರಿಯಾಲಿಟಿ, ಆಗ್ಮಂಟೆಡ್ ರಿಯಾಲಿಟಿ, ವಿಡಿಯೋ ಗೇಂ, ಆನ್ ಲೈನ್ ಆಟಗಳು ಏನೇನೋ ಇವೆ... ಹಾಡು, ಸಂಗೀತ, ಸಿನಿಮಾ, ಯಕ್ಷಗಾನ ವೀಕ್ಷಣೆ ಯಾವುದೂ ಈಗ ಕಷ್ಟದ ಕೆಲಸವೇ ಅಲ್ಲ. ಇಲ್ಲದಿರುವುದು ಸಮಯ ಮಾತ್ರ. ಪುರುಸೊತ್ತಿಲ್ಲ, ಆಸಕ್ತಿ ಇಲ್ಲ, ಸಮಾಧಾನ ಇಲ್ಲ (ಆಗಲೂ ಈಗಲೂ ಬದುಕಿದ್ದವರ ಕುರಿತಾದ ಮಾತುಗಳಿವು). ಮೂವತ್ತು, ನಲುವತ್ತು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಗೂ ಅದೇ ಪಾತ್ರಧಾರಿಗಳು ಇಷ್ಟು ವರ್ಷಗಳ ಬಳಿಕ ಅದೇ ಮನಸ್ಸನ್ನು ಇಟ್ಟುಕೊಂಡು ಆಗಿನಿಂದ ಹೆಚ್ಚು ಸೌಕರ್ಯಗಳೊಂದಿಗೆ ಬದುಕುತ್ತಿರುವಾಗಲೂ ಪುರುಸೊತ್ತಿಲ್ಲ, ಸಮಾಧಾನ ಇಲ್ಲ.

ಹೌದು, ಸಮಾಧಾನ, ಸಂತೃಪ್ತಿ, ಸಾಧನೆ ಇವೆಲ್ಲ ವೈಯಕ್ತಿಕ ಶಬ್ದಕೋಶಗಳಲ್ಲಿ ಅವರವರದ್ದೇ ಅರ್ಥಗಳನ್ನು ಹೊಂದಿವೆ. ಸಾಮಾನ್ಯೀಕರಿಸಲು ಅಸಾಧ್ಯ. ಗ್ರಹಿಕೆ, ಸ್ವೀಕರಿಸುವಿಕೆ ಹಾಗೂ ತೋರ್ಪಡಿಸಿಕೊಳ್ಳುವಿಕೆಯಲ್ಲಿ ಸಮಾಧಾನ, ಸಾಧನೆಯ ತೃಪ್ತಿ ಕಾಡುತ್ತದೆ ಅಷ್ಟೆ.

ಆದರೂ...

ಇಷ್ಟು ಸುಲಭದಲ್ಲಿ ಮೆಸೇಜು, ಮಲ್ಟಿಮೀಡಿಯಾ ವಿಚಾರಗಳ ಹಂಚಿಕೊಳ್ಳುವಿಕೆ ಸಾಧ್ಯವಾದಾಗ್ಯೂ ಯಾವುದನ್ನೂ ನೋಡಲು, ಉತ್ತರಿಸಲು, ಕನಿಷ್ಠ ಪಕ್ಷ ಬೆರಳು ಮೇಲೆತ್ತಲೂ ಪುರುಸೊತ್ತಿಲ್ಲ. ಕೆಲ ವರ್ಷಗಳ ಹಿಂದೆ ಫೇಸ್ ಬುಕ್ಕಿನಲ್ಲಿ ಜನ್ಮದಿನದ ಶುಭಾಶಯ ಹೇಳಿದರೆ ವೈಯಕ್ತಿಕವಾಗಿ ಧನ್ಯವಾದ ಬರ್ತಾ ಇತ್ತು. ಸ್ನೇಹಿತರ ಸಂಖ್ಯೆ ಜಾಸ್ತಿಯಾದಂತೆಲ್ಲ ಲೈಕುಗಳಿಗೆ ಇಳಿಯಿತು. ನಂತರ ಒಂದೇ ಸಂದೇಶದಲ್ಲಿ ಅಷ್ಟೂ ಮಂದಿಗೆ ಥ್ಯಾಂಕ್ಸ್ ಹೇಳುವ ಪರಿಪಾಠ ಬಂತು. ಕೆಲವರಿಗೆ ಅದಕ್ಕೂ ಪುರುಸೊತ್ತಿಲ್ಲ. ಇದು ವ್ಯಂಗ್ಯವಲ್ಲ, ವಸ್ತುಸ್ಥಿತಿ, ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು.

ಇಂದು ಯಾರಿಗೂ ಆಟೋಗ್ರಾಫ್ ಬೇಡ, ಬರ್ಥ್ ಡೇ ಗ್ರೀಟಿಂಗ್ಸ್ ಬೇಡ, ಪತ್ರಗಳು ಬೇಡ, ಹಳ್ಳಿಯ ಬದುಕು ಬೇಡ (ಬೇಸಾಯ, ಕೃಷಿ ಸುಲಭವಿಲ್ಲ, ಲಾಭವಿಲ್ಲ ಇತ್ಯಾದಿ ಕಾರಣಗಳಿವೆ), ಕ್ರೆಡಿಟ್ ಕಾರ್ಡ್ ಬಳಸಿದರೂ, ಓವರ್ ಡ್ರಾಫ್ಟ್ ಮಾಡಿಯಾದರೂ ಖರೀದಿ ಮಾಡಬೇಕು. ಬಳಸಿದ ಪೆನ್ನಿಗೆ ರಿಫೀಲ್ ಹಾಕುವುದಿಲ್ಲ, ಯೂಸ್ ಆಂಡ್ ತ್ರೋ ಮಾಡುತ್ತೇವೆ. ಹಳೆ ನೋಟ್ಸ್ ಪುಸ್ತಕಗಳ ಖಾಲಿ ಹಾಳೆಗಳಿಗೆ ಬೈಂಡ್ ಮಾಡಿ ರಫ್ ವರ್ಕ್ ಬುಕ್ ಮಾಡುವುದಿಲ್ಲ, ಹೊಸದಾಗಿ ರಫ್ ವರ್ಕ್ ಬುಕ್ ಖರೀದಿಸುತ್ತೇವೆ. ಹಳೆ ಕ್ಯಾಲೆಂಡರ್ ಪುಟಗಳನ್ನು ನೋಟ್ ಪುಸ್ತಕಕ್ಕೆ ಬೈಂಡ್ ಹಾಕಲು ಬಳಸುವುದಿಲ್ಲ, ಬೈಂಡ್ ಹಾಕಲು ಪ್ರತ್ಯೇಕ ಹಾಳೆ ಬಳಸುತ್ತೇವೆ. ಶಾಲೆಗೆ ನಡೆದುಕೊಂಡು ಹೋಗುವುದು ಈಗ ಸುರಕ್ಷಿತವಲ್ಲ, ಅದಕ್ಕಾಗಿ ಸ್ಕೂಲ್ ವ್ಯಾನಿನಲ್ಲಿ ತೆರಳುತ್ತೇವೆ.
ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಇಲ್ಲ. ಅದಕ್ಕಾಗಿಯೇ ಸಿ.ಸಿ. ಕ್ಯಾಮೆರಾ, ಒಟಿಪಿ, ಬಯೋಮೆಟ್ರಿಕ್, ಜಿಪಿಎಸ್ ಮತ್ತಿತರ ಚುರುಕಿನ ಸಾಧನಗಳ ಬಳಕೆಯಾಗುತ್ತಿದೆ. ಸಾವಿರಗಟ್ಟಲೆ ಮೆಸೇಜುಗಳು ವಾಟ್ಸಪ್ಪಿನಲ್ಲಿ ತೇಲಿ ಬರುತ್ತಿದ್ದರೂ ಜನರಿಗೆ ಯಾವುದು ಸತ್ಯ, ಯಾವುದು ಸುಳ್ಳೆಂದು ಪತ್ತೆ ಹಚ್ಚಲು ಆಗುತ್ತಿಲ್ಲ...

ಇಷ್ಟು ಮಾತ್ರವಲ್ಲ...
ನಮಗೆ ವ್ಯವಹಾರ, ಬದುಕು ಮತ್ತು ಭಾವನೆಗಳ ನಡುವಿನ ವ್ಯತ್ಯಾಸದ ಅಂತರ ತುಂಬಾ ತೆಳುವಾದಂತೆ ಭಾಸವಾಗುತ್ತಿದೆ. ನವೆಂಬರ್ ಬಂದಾಗ ಕನ್ನಡಾಭಿಮಾನ ಹುಚ್ಚೆದ್ದು ಕುಣಿಯುತ್ತದೆ. ಸ್ಟೇಟಸ್ಸುಗಳಲ್ಲಿ ದೇಶಾಭಿಮಾನ, ಧರ್ಮಾಭಿಮಾನ, ಕಳಕಳಿ ಹುಚ್ಚೆದ್ದು ಕುಣಿಯುತ್ತದೆ. ಎಷ್ಟು ಮಂದಿ ಆಚರಣೆಯಲ್ಲಿ ತರುತ್ತೇವೆ? ನಮ್ಮದೆ ಊರಿನಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಬಾಯ್ತುಂಬ ಅಕ್ಕ, ಅಣ್ಣ, ತಂಗಿ, ತಮ್ಮ ಎನ್ನಲು ನಾಲಗೆ ತಡವರಿಸುತ್ತದೆ. ಸ್ಪೆಲ್ಲಿಂಗ್ ತಪ್ಪಾದರೂ, ಅಪಭ್ರಂಶವಾದರೂ ಅಡ್ಡಿಯಿಲ್ಲ!  Update ಆಗುವ ಹಪಹಪಿಕೆಯಲ್ಲಿ ವಿಚಿತ್ರ ಭಾಷೆಯಲ್ಲಿ ಸ್ಟೇಟಸ್ಸುಗಳಲ್ಲಿ ಶುಭಾಶಯ ಕೋರುತ್ತೇವೆ.

ಸರಿ.... ನಿಮ್ಮದೇ ಮೊಬೈಲು, ನಿಮ್ಮದೇ ಡೇಟಾ, ನಿಮಗೆ ವಾಕ್ ಸ್ವಾತಂತ್ರ್ಯವೂ ಇದೆ. ಆದರೆ, ದೇಶ, ಭಾಷೆ, ಧರ್ಮ, ಸಂಸ್ಕೃತಿ ಬಗ್ಗೆ ಫಾರ್ವರ್ಡೆಡ್ ಸಂದೇಶಗಳನ್ನು ಸ್ಟೇಟಸ್ಸುಗಳಲ್ಲಿ, ಫೇಸ್ಬುಕ್ ವಾಲಲಿನಲ್ಲಿ ಹಂಚಿಕೊಳ್ಳುವ ನಾವು ವಾಸ್ತವಿಕವಾಗಿ ಎಷ್ಟು ಚಿಂತಿಸುತ್ತೇವೆ ಎಂಬ ಬಗ್ಗೆ ಕಾಳಜಿಯೇ ಇಲ್ಲ. ನಾವೇ ನಮ್ಮ ಭಾಷೆಯನ್ನು ಅಪಭ್ರಂಶಗೊಳಿಸಿ ಬಳಸಿದ ಮೇಲೆ ಇನ್ಯಾವುದೋ ಮಹಾಶಯ ಬಂದು ನಮ್ಮ ಭಾಷೆಯನ್ನು ಉದ್ಧಾರ ಮಾಡುತ್ತಾರೆಂದು ನಿರೀಕ್ಷಿಸಲು ಸಾಧ್ಯವೇ?

ಇಂಗ್ಲಿಷೇ ಗೊತ್ತಿಲ್ಲದ ಬಂಧುಗಳಿಗೆ ಸ್ಟೇಟಸ್ಸಿನಲ್ಲಿ ಇಂಗ್ಲಿಷಿನಲ್ಲಿ ಶುಭ ಕೋರಿದ ಸಂದರ್ಭಗಳನ್ನು ಗಮನಿಸಿದ್ದೇನೆ (ಇದು ಖಂಡಿತಾ ಉತ್ಪ್ರೇಕ್ಷೆಯಲ್ಲ, ಸ್ವತಹ ಕಂಡ ವಿಚಾರ). ಸ್ಪೆಲ್ಲಿಂಗೇ ಗೊತ್ತಿಲ್ಲದ ಪದಗಳನ್ನು ಅನಗತ್ಯವಾಗಿ ಬಳಸಿ ಸಂದೇಶಗಳನ್ನು ಹಂಚಿಕೊಂಡು ವಿವರಣೆ ಕೇಳಿದರೆ ಸಿಟ್ಟಿಗೆದ್ದದ್ದು, ನಿನಗ್ಯಾಕೆ ಎನ್ನುವು ಧಾಟಿಯಲ್ಲಿ ಮಾತನಾಡಿದ್ದೂ ಕಂಡಿದ್ದೇನೆ....
ಖಂಡಿತಾ ವಾಕ್ ಸ್ವಾತಂತ್ರ್ಯ ಇದೆ, ಭಾಷೆಗಳ ಬಗ್ಗೆ ಹೆಚ್ಚಿನ ಜ್ನಾನ, ಅಭಿಮಾನ, ಕಲಿಕೆಯ ಮನೋಧರ್ಮ ಎಲ್ಲವೂ ಬೇಕು. ಆದರೆ ಎಲ್ಲಿ, ಯಾವಾಗ, ಹೇಗೆ ಮತ್ತು ಎಷ್ಟು ಔಚಿತ್ಯ ಪೂರ್ಣ ಎಂಬ ಪ್ರಜ್ನೆ ಬೇಡವೇ? ಇದನ್ನು ಯಾರು ಯೋಚಿಸಬೇಕಾದ್ದು, ಯಾರು ಅಳವಡಿಸಿಕೊಳ್ಳಬೇಕಾದ್ದು, ಯಾರು ಹಿತವಚನ ಹೇಳಬೇಕಾದ್ದು?

ಭಾಷಣಗಳು ಪ್ರೇಕ್ಷಕರಿಗೆ, ಬರಹಗಳು ಓದಿದಾತನಿಗೆ, ಸ್ಟೇಟಸ್ಸುಗಳು ಅದಕ್ಕೆ ಲೈಕು ಕೊಡುವವರಿಗೆ ಎಂಬ ಭಾವನೆ ಅಷ್ಟೆ. ಹೇಳುವ ಆತುರದಲ್ಲಿ ಕೇಳುವವರ ಸಂಖ್ಯೆ ಕಡಿಮೆಯಾಗಿದೆ.

ಇಷ್ಟೇ ಇಂದಿಗೂ ಅಂದಿಗೂ ಇರುವ ವ್ಯತ್ಯಾಸ....

ಪ್ರತಿ ಅಸಂಬದ್ಧಗಳಿಗೂ ನಮ್ಮಲ್ಲಿ ಸಮರ್ಥನೆ ಇದೆ, ದಾರಿ ತಪ್ಪಿಸುವವರೂ ಇದ್ದಾರೆ, ಪ್ರಶ್ನಿಸಿದರೆ, ವಿಮರ್ಶೆಗೆ ಹೊರಟರೆ ಸಿಟ್ಟು ಮಾಡಿಕೊಳ್ಳುತ್ತಾರೆ, ಫೇಸ್ ಬುಕ್ಕಿನಲ್ಲಿ ಅವಾಚ್ಯ ಪದಗಳನ್ನೂ ಬಳಸಿ ಮಾಡುವ ಕಿತ್ತಾಟಗಳ ಕೊನೆಗೆ ಯಾರೂ ಯಾವುದೇ ತೀರ್ಮಾನಕ್ಕೆ ಬರುವುದೇ ಇಲ್ಲ. ಅವರವರ ಭಾಷೆಯಲ್ಲೇ ವಾದ ಮಾಡುತ್ತಲೇ ಇರುತ್ತಾರೆ. ಇದರಿಂದ ಏನು ಜಾಗೃತಿ ಆಗಬಹುದು? ಸಿದ್ಧಾಂತ, ಸಂದೇಶಗಳು ಎಲ್ಲಿಂದಲೋ ತೇಲಿ ಬರುತ್ತವೆ, ಅವು ಆಕರ್ಷಣೀಯವಾಗಿ ಕಂಡರೆ ವೈಯಕ್ತಿಕ ಸಂತೋಷ ಇಲ್ಲದಿದ್ದರೂ ಅನುಸರಿಸಿ update ಆದೆವು ಅಂದುಕೊಂಡು ಬೀಗುತ್ತೇವೆ.

ಅಂತಿಮವಾಗಿ ನಮಗೆ ಖುಷಿ ಕೊಡುವುದು ಮುಖಸ್ತುತಿಯೋ, ಹೊಗಳಿಗೆಯೋ, ಕಮೆಂಟುಗಳೋ ಅಲ್ಲ. ನಮ್ಮ ಕೆಲಸ, ನಮ್ಮ ನಡವಳಿಕೆ ನಮಗೇ ಖುಷಿಯಾದರೆ ಅದಕ್ಕೆ ಸಿಗುವ ಸಂತೃಪ್ತಿಗೆ ಬೆಲೆ ಕಟ್ಟಲಾಗದು. ಲೈಕು, ಕಮೆಂಟುಗಳು ಪ್ರಾತಿನಿಧಿಕ ಅಷ್ಟೇ.

-ಕಾಲ ಹಾಳಾಗಿಲ್ಲ
-ಜನಸಮೂಹ ಕೆಟ್ಟು ಹೋಗಿಲ್ಲ...
-ಮನಸ್ಥಿತಿ ಬದಲಾಗಿದೆ ಅಷ್ಟೆ...

Update ಆಗಿರುವುದು ತೋರಿಕೆಯ ವಿಚಾರಗಳೇ ಹೊರತು ಆಂತರ್ಯವಲ್ಲ....

ತಂತ್ರಜ್ನಾನ, ಸಂವಹನ, ಮನಸ್ಥಿತಿ ಮತ್ತು ಸಮಕಾಲೀನರಾಗುವ ಪ್ರಯತ್ನ ಇದೆಯಲ್ಲ?. ಇದರ ನಡುವೆ ಕಾಮನ್ ಸೆನ್ಸ್ ಕಳೆದುಹೋಗದಂತೆ ಜಾಗ್ರತೆಯಿಂದ ಇದ್ದರೆ ಇಡೀ ಸಮೂಹಕ್ಕೇ ಅದು ಪ್ರಯೋಜನ ಆಗಬಲ್ಲದು. ಇದು ಕೊರೋನಾ ಲಾಕ್ ಡೌನ್ ಅವಧಿ ಸಾರಿ ಹೇಳುತ್ತಿರುವ ಪಾಠ...

-ಕೃಷ್ಣಮೋಹನ ತಲೆಂಗಳ

No comments:

Popular Posts