ಯಕ್ಷ ರಂಗದಲ್ಲೊಬ್ಬ ಪುರುಷ ಸುಧಾಚಂದ್ರನ್



ಕೃತಕ ಕಾಲು ತೊಟ್ಟು 20-30 ಧಿಗಿಣ ತೆಗೆಯಬಲ್ಲ ವೇಣೂರಿನ ಮನೋಜ್



 -----------------------

ಲಯಬದ್ಧ ಹಿಮ್ಮೇಳಕ್ಕೆ ಅಷ್ಟೇ ಆಕರ್ಷಕವಾಗಿ ಯಕ್ಷಗಾನದ ಪ್ರವೇಶ ನಾಟ್ಯ ನೀಡಿದ ಈತ, ನಿರಾಯಾಸವಾಗಿ ಧಿಗಿಣ ತೆಗೆದು ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾನೆ. ಸಂಭಾಷಣೆಯನ್ನೂ ನಿರರ್ಗಳವಾಗಿ ಒಪ್ಪಿಸುತ್ತಾನೆ. ಪುಂಡುವೇಷಧಾರಿಯಾಗಿ ಒಂದು ಬಾರಿಗೆ ನಿರಾಯಾಸವಾಗಿ 20ರಿಂದ 30 ಧಿಗಿಣ ತೆಗೆಯಬಲ್ಲ (ಹಾರುವುದು). ಇಂತಹ ವಿಡಿಯೋವೊಂದು ಕರಾವಳಿಯಲ್ಲಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.












ವಿಶೇಷ ಏನು ಗೊತ್ತಾ... ಈತನಿಗೆ ಎಡ ಕಾಲಿಲ್ಲ. ಕೃತಕ ಕಾಲು ಬಳಸಿ ಸಮರ್ಥವಾಗಿ ಯಕ್ಷಗಾನದ ಕುಣಿತ ಈತನ ತಾಕತ್ತು.

ಈತ ಮನೋಜ್ ಕುಮಾರ್. 17 ಹರೆಯದ ಚಿಗುರು ಮೀಸೆಯ ಯುವಕ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ. ವೇಣೂರು ಸರ್ಕಾರಿ ಕಾಲೇಜಿನ ದ್ವಿತೀಯ ಪಿ.ಯು. ವಿದ್ಯಾರ್ಥಿ. 6ನೇ ಕ್ಲಾಸಿನಲ್ಲಿದ್ದಾಗ ಈತನ ಎಡಕಾಲು ಗ್ಯಾಂಗ್ರಿನ್ ಗೆ ತುತ್ತಾಗಿ ಕಾಲನ್ನು ಮೊಣಕಾಲಿನಿಂದ ಕೆಳಗೆ ಶಸ್ತ್ರಕ್ರಿಯೆ ಮೂಲಕ ಕತ್ತರಿಸಲಾಯಿತು.

ಎಳವೆಯಿಂದಲೇ ಯಕ್ಷಗಾನವನ್ನು ಕನಸಾಗಿಸಿದ್ದ ಈತ ಎದೆಗುಂದಲಿಲ್ಲ. ಶಸ್ತ್ರಚಿಕಿತ್ಸೆಗೆ ಸಂದರ್ಭ ಆಸ್ಪತ್ರೆಯಲ್ಲಿದ್ದಾಗ ಈತ ಓದಿದ ಖ್ಯಾತ ನೃತ್ಯಗಾರ್ತಿ, ಕಾಲು ಕಳೆದುಕೊಂಡರೂ ಎದೆಗುಂದದೆ ನೃತ್ಯದಿಂದಲೇ ವಿಶ್ವವಿಖ್ಯಾತರಾದ ಸುಧಾ ಚಂದ್ರನ್ ಕುರಿತ ಪುಸ್ತಕದಿಂದ ಪ್ರೇರಿತನಾದ. ಕೃತಕ ಕಾಲು ಅಳವಡಿಸಿದ ಬಳಿಕ ಹೈಸ್ಕೂಲಿಗೆ ಬಂದಾಗ ಯೋಗ್ಯ ಗುರುಗಳ ಮುಖೇನ ಯಕ್ಷಗಾನ ಕಲಿಕೆ ಆರಂಭಿಸಿದ.

ಐದು ವರ್ಷಗಳಿಂದ ಯಕ್ಷಗಾನದ ನಾಟ್ಯ ತರಬೇತಿ ಪಡೆಯುತ್ತಿರುವ ಮನೋಜ್ ಕಳೆದ ಎರಡು ವರ್ಷಗಳಿಂದ ಮೇಳಗಳಲ್ಲಿ ಸಾಂದರ್ಭಿಕ ಕಲಾವಿದನಾಗಿಯೂ ಪಾತ್ರ ನಿರ್ವಹಿಸಿದ್ದಾನೆ. ಸುಂಕದಕಟ್ಟೆ, ಬಪ್ಪನಾಡು, ಮಂಗಳಾದೇವಿ ಹಾಗೂ ಕಟೀಲು ಮೇಳಗಳಲ್ಲಿ ಹರಿಕೆ ರೂಪದಲ್ಲಿ ಹಾಗೂ ಬದಲಿ ಕಲಾವಿದನಾಗಿ ಸುಮಾರು 30ಕ್ಕೂ ಅಧಿಕ ಕಡೆ ಪ್ರದರ್ಶನ ನೀಡಿದ್ದಾನೆ. ನಿತ್ಯವೇಷ, ದೇವೇಂದ್ರಬಲ, ಯಕ್ಷರಾಜ ಪಿಂಗಳಾಕ್ಷ ಮತ್ತಿತರ ಪಾತ್ರಗಳನ್ನು ನಿರ್ವಹಿಸಿದ್ದಾನೆ. ಸಂಭಾಷಣೆಯನ್ನೂ ಕಲಿಯುತ್ತಿದ್ದಾನೆ.

ಹೈಸ್ಕೂಲಿನಲ್ಲಿ ಪ್ರಾಂಶುಪಾಲರಾಗಿದ್ದ ವೆಂಕಟೇಶ ತುಳುಪುಲೆ ಅವರು ಆರಂಭದ ಗುರುಗಳು, ಬಳಿಕ ರಮೇಶ್ ಶೆಟ್ಟಿ ಪಡ್ಡಂದಡ್ಕ, ಭಾಗವತಿಕೆಯಲ್ಲಿ ಪ್ರಮೋದ ಅಂಡಿಂಜೆ ತರಬೇತಿ ನೀಡಿದ್ದಾರೆ. ವೇಣೂರು ಕಲಾಕಾರ ಹವ್ಯಾಸಿ ಯಕ್ಷಗಾನ ಕಲಾಸಂಘದ ಸಕ್ರಿಯ ಸದಸ್ಯ, ಅಲ್ಲಿ ಪ್ರಭಾಕರ ಪ್ರಭು ಗುರುಗಳು.

ಅಪ್ಪ-ಅಮ್ಮ ಹಾಗೂ ಇಬ್ಬರು ತಂಗಿಯರೊಂದಿಗೆ ಸುಮಾರು 11 ಮಂದಿ ಇರುವ ಕುಟುಂಬ ಈತನದ್ದು. ಆರ್ಥಿಕವಾಗಿ ಸಬಲರೇನಲ್ಲ. ಅಪ್ಪ ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಅಮ್ಮ ಗೃಹಿಣಿ. ಯಕ್ಷಗಾನವನ್ನೇ ವೃತ್ತಿಯಾಗಿಸಿ ಬದುಕು ಸಾಗಿಸಲು ಕಷ್ಟ. ಹವ್ಯಾಸಿಯಾಗಿಯೇ ಮುಂದುವರಿಯುತ್ತೇನೆ. ಬಣ್ಣದ ವೇಷಧಾರಿಯಾಗುವ ಹಂಬಲವೂ ಇದೆ ಎನ್ನುತ್ತಾನೆ.

ಕಾಲೇಜಿಗೂ, ಯಕ್ಷಗಾನ ಪ್ರದರ್ಶನಕ್ಕೂ ಬಸ್ಸಿನಲ್ಲೇ ಪ್ರಯಾಣ, ಊರಿನ ಕಲಾವಿದರಿದ್ದರೆ ಅವರ ಬೈಕಿನಲ್ಲಿ ಹೋಗುತ್ತಾನೆ.

ಲಾಕ್ ಡೌನ್ ಅವಧಿಯಲ್ಲಿ ತನ್ನ ಮನೆ ಅಂಗಳದಲ್ಲಿ ಮನೋಜ್ ಯಕ್ಷಗಾನ ಪ್ರಾಕ್ಟೀಸ್ ಮಾಡುವ ವಿಡಿಯೋವನ್ನು ಶ್ರೀ ಸುಂಕದಕಟ್ಟೆ ಮೇಳದ ಕಲಾವಿದ ಜಯೇಂದ್ರ ಕುಮಾಲ್ ಜಾಲತಾಣಗಳಲ್ಲಿ ಹಂಚಿಕೊಂಡದ್ದು ಈಗ ವೈರಲ್ ಆಗುತ್ತಿದೆ.

----

-ಕೃಷ್ಣಮೋಹನ ತಲೆಂಗಳ


No comments: