ಮಳೆ ಸುಳ್ಳು ಹೇಳುವುದಿಲ್ಲ....!









ಭೋರೆಂದು ಸುರಿದು ಹೋಗುವ ಮಳೆಯೊಳಗೆ ಮುಚ್ಚು ಮರೆಯಿಲ್ಲ. ಬರುವ ಮೊದಲು, ಆವರಿಸಿದಾಗ ಹಾಗೂ ನಿರ್ಗಮಿಸಿ ಹನಿ ಹನಿ ತೊಟ್ಟಿಕ್ಕುವ ವರೆಗೂ ಮಳೆಯ ಗುಂಗು ಕಾಡುವುದು ಹಾಗೆ. ಅಂಗಳದ ತುಂಬ ಹರಡಿದ್ದ ತರಗೆಲೆಗಳನ್ನು ಗುಡಿಸಿ ಸಾರಿಸಿ ಕೊಂಡೊಯ್ದು ತೋಡಿನ ಕಟ್ಟದ ಅಂಚಿನಲ್ಲಿ ಪೇರಿಸಿಡುವ ತಾಕತ್ತು ಇರುವುದು ಮಳೆಗೆ ಮಾತ್ರ....

........

ದೊಡ್ಡದೊಂದು ನಿರೀಕ್ಷೆ ಹುಟ್ಟಿಸಿದ ಬಳಿಕ ಎಷ್ಟು ಸುರಿಯಬೇಕೆಂಬುದು ಮಳೆಯ ಇಷ್ಟ. ಯಾರನ್ನೂ ಗಣಿಸುವುದಿಲ್ಲ. ಬರಬೇಕೋ, ಬೇಡವೋ ಎಂಬುದರಲ್ಲಿ ಮಳೆರಾಯನ ತೀರ್ಮಾನವೇ ಅಂತಿಮ. ಹಾಗಾಗಿ ಕಾರ್ಮುಗಿಲು ಕವಿದು, ಗುಡು ಗುಡುಗಿ ಬಿರುಗಾಳಿ ಎದ್ದರೂ ಕೊನೆಕ್ಷಣದಲ್ಲಿ ಮಳೆ ತನ್ನಾಟ ರದ್ದು ಪಡಿಸಿ ಮೋಡ ಚದುರಿಸಿ ಮ್ಯಾಚ್ ರದ್ದಾಯಿತು ಎಂದು ತಾನೇತಾನಾಗಿ ಘೋಷಿಸಿ ಸುರಿಯದೇ ಆಸೆ ಹುಟ್ಟಿಸಿ ಹೊರಟು ಹೋಗಬಹುದು. ಬಾರದಿದ್ದರೆ ಮಳೆಯ ತಪ್ಪೇನೂ ಇಲ್ಲ. ಮಳೆ ಬಂದೀತೆಂಬ ನಿರೀಕ್ಷೆಯದ್ದೇ ತಪ್ಪು. ಯಾಕೆಂದರೆ ಮಳೆ ಸುಳ್ಳು ಹೇಳುವುದಿಲ್ಲ. ಭ್ರಮೆಗಳಿಗೆ ಮಳೆ ಹೊಣೆಯಲ್ಲ...!

.....

ಮಳೆಗೆ ನೆನಪುಗಳನ್ನು ಮೊಗೆ ಮೊಗೆದು ಹೊರ ತರುವ ಶಕ್ತಿಯಿದೆ. ಭಾರವಾದ ಭಾವಗಳನ್ನು ಭಾಷಾಂತರಿಸಿ ಹದವಾಗಿಸಿ ಸುಲಭ ಮಾಡಿದ ಹಾಗೆ....


ಅಲ್ಲೆಲ್ಲೋ ಮೂಲೆಯಲ್ಲಿದ್ದ ಹಾರ್ಡ್ ಡಿಸ್ಕಿನ ಅಂಚಿನ ಡ್ರೈವಿನಲ್ಲಿ ಕಾಪಿಟ್ಟ ಮಸುಕು ಮಸುಕಾದ ಸನ್ನಿವೇಶಗಳೂ ಹೆಂಚಿನ ಮಾಡಿನಂಚಿನಿಂದ ಧಾರಾಕಾರವಾಗಿ ಸುರಿಯುವ ನೀರಿನ ಧಾರೆಯ ಜೊತೆ ಜೊತೆಗೆ ಮೊಗೆ ಮೊಗೆದು ಮಗುಚಬಹುದು. ಕುಳಿತು ಕುಡಿದವನಿಗೆ ಹುಚ್ಚೆಬ್ಬಿಸುವ ನಶೆಯ ಹಾಗೆ. ಅಂಕೆ, ಮಿತಿಯಿಲ್ಲದೆ ಅಂಗಳದ ಅಂಚಿನ ಮೋರಿಯಲ್ಲಿ ಕೆಂಪು ಕೆಂಪಾಗಿ ರಭಸದ ಜಲಪಾತ ಹುಟ್ಟಿಸಿದ ಹಾಗೆ ಅಲ್ಲಿ ಇಲ್ಲಿ ಜೋಪಾನವಾಗಿ ಕೂಡಿಟ್ಟ ನೆನಪುಗಳ ಕೂಡಿಸಿ, ಗುಣಿಸಿ ಹೊರ ತೆಗೆಯಬಹುದು....

...........

ಅಷ್ಟು ದಪ್ಪದ ಹನಿ ಬಿದ್ದಾಗ ಬಾಳೆ ಗಿಡದ ಬುಡ ಕೊಚ್ಚಿ ಹೋಗಲಿಕ್ಕಿಲ್ಲವೇ? ಗುಡ್ಡದ ದಾರಿಯ ಪಕ್ಕ ಇರುವೆಯ ಗೂಡು ಕೆಂಪು ಮಳೆ ನೀರಿನ ಓಘಕ್ಕೆ ಸಿಕ್ಕಿ ಪುಡಿ ಪುಡಿಯಾಗಲಾರದೇ...? ಮಳೆಗೂ ಮುಂಚೆ ಮನೆ ಸೇರದೆ ಗೇಟಿನ ಆಚೆ ಬಾಕಿಯಾದ ಹಸುವಿಗೆ ರಪ ರಪನೆ ಸೂಜಿಯಂತೆ ಇರಿಯುವ ಹನಿಗಳು ಘಾಸಿ ಮಾಡಲಾಗದೇ...? ಮೊನ್ನೆ ತಾನೇ ಮಣ್ಣು ಹಾಕಿ ರಿಪೇರಿ ಮಾಡಿದ ಮಾರ್ಗದ ಹಂಪುಗಳು ಕರಗಿ ಮೈದಾವಾಗದೇ ಉಳಿದೀತೇ...? ವಾಲಿದ ತೆಂಗಿನ ಮರದ ಗರಿಗಳ ಪಾಡೇನು...? ಜೀವ ಕೂಡಿದ ಮಲ್ಲಿಗೆ ಬಳ್ಳಿಯ ಚಿಗುರಿನ ಕಥೆಯೇನು...? ಪಾರಿಜಾತದ ಮರಕ್ಕೆ ಕಟ್ಟಿದ ತಂತಿಯ ತುದಿಯಲ್ಲಿ ಗಾಳಿ ಬಂದಾಗ ತೆಗೆಯಲು ಬಾಕಿಯಾಗಿ ಸಿಲುಕಿದ ಬನಿಯನ್ನಿನ ಪರಿಸ್ಥಿತಿಯೇನು...? ಒಂದೂ ಮಳೆಗೆ ವಿಷಯವೇ ಅಲ್ಲ. ಚಿಂತೆಯಂತೂ ಮೊದಲೇ ಇಲ್ಲ...

..........

ಆನ್ ಲೈನು, ಸ್ಟೇಟಸ್ಸುಗಳ ಕಿವಿಬಿಡಲಾಗದ ಸದ್ದನ್ನು ಅಲ್ಲಲ್ಲೇ ಮೊಟಕಿ ಮೌನಿಯಾಗಿಸುವುದು ಮಳೆ. ಗುಡುಗು ಬಂದಾಕ್ಷಣ ಕರೆಂಟು ಹೋಗಿ, ಟವರಿನ ಬ್ಯಾಟರಿ ಮುಸುಕು ಹೊದ್ದು ಮಲಗಿ, ನೆಟ್ವರ್ಕ್ ಕಳಚಿ ಒಂಥರಾ ಅವರ್ಣನೀಯ ಆಫ್ ಲೈನಿನ ಸುಖ. ಗಾಳಿಯ ಸದ್ದಿಗೆ, ನಾಲ್ಕು ಮೀಟರಿನಾಚೆಗೂ ಕಾಣದಷ್ಟು ಗಾಢವಾಗಿ ಆವಹಿಸಿದ ಹನಿಗಳ ಗೋಡೆಗೆ, ಕಣ್ಣು ಕೋರೈಸುವ ಮಿಂಚಿನ ಬೆಳಕು, ಗುಡುಗಿನ ಆರ್ಭಟದ ಗೋಡೆ ನಡುವೆ ಒಂದು ಏಕಾಂತ. ಪಡಸಾಲೆಯಲ್ಲಿ ಕೂತರೂ ಮುಖಕ್ಕೆ ಹನಿ ಎರಚುವ ಗಾಳಿ, ತೋಟದಾಚೆ ಇನ್ನೇನು ಬೀಳುತ್ತದೋ ಎಂಬಂತಾ ತೂರಾಡುವ ತೆಂಗಿನ ಮರ. ಕರೆಂಟು ಹೋಯಿತೆಂದು ಉರಿಸಿಟ್ಟ ಚಿಮಿಣಿ ದೀಪದ ಎದೆಗುಂದದ ಬೆಳಕಿನ ಹಳದಿ ಜ್ವಾಲೆಯ ಪಾರಮ್ಯ.... ಕತ್ತಲಾಯಿತೋ ಇಲ್ಲವೋ ಎಂಬಷ್ಟು ಅಂಧಕಾರದ ಗೌಜಿಯೊಳಗೊಂದು ಹೇಳಲಾಗದ ಮೌನ....ಧಾರಾಕಾರ ಮಳೆ ಹುಟ್ಟುಹಾಕುವ ಏಕಾಂತಕ್ಕೆ ವ್ಯಾಲಿಡಿಟಿ ಇಲ್ಲ  ಮಳೆ ನಿಲ್ಲುವ ವರೆಗೆ ಮಾತ್ರ, ಶರತ್ತುಗಳು ಅನ್ವಯ!!

.......................


ಮಳೆ ಬರುವಂತೆ ಮಾಡಿ ಬಾರದಿದ್ದಾಗಲೂ, ಬಂದಂತೆ ಹನಿದು ಬಾರೆನೆಂದು ಕೈಕೊಟ್ಟಾಗಲೂ, ಈಗ ಬರುವೆನೆಂಬಂತೆ ನಟಿಸಿ ತುಸು ಬಿಟ್ಟು ಬಂದಾಗಲೂ, ಬಂದ ಮೇಲೆ ಬರುವನೆಂದುಕೊಡ್ಡದ್ದಕ್ಕಿಂತಲೂ ಜಾಸ್ತಿ ವಿಜೃಂಭಿಸಿ, ತೋಯಿಸಿ ಹೋದರೂ ಮಳೆ ಮಳೆಯೇ... ಬಾರದಿದ್ದರೂ ಮಳೆಯ ಕಲ್ಪನೆಯ ಅಲೆಯೊಂದು ತೋಯುವ ಲಹರಿಯನ್ನು ಹುಟ್ಟು ಹಾಕುವುದು ಸುಳ್ಳಲ್ಲ. ಅಡ್ಡ ಪರಿಣಾಮಗಳಾದ ಗುಡುಗು ಮಿಂಚುಗಳ ನೆನಪು ಆ ಕ್ಷಣಕ್ಕೆ ಕ್ಷಣಿಕವೆಂಬಂತೆ ತೋರುತ್ತದೆ....




 


ಫೋಟೋಗೂ, ವಿಡಿಯೋಗೂ ಕ್ಷಣ ಕಾಲ ಪೋಸು ಕೊಟ್ಟು ಛಾವಣಿಯ ದಂಬೆಯ ಧಾರೆಯಲ್ಲಿ ವಿಶ್ವರೂಪ ದರ್ಶನ ನೀಡಿ, ಭೂಮಿಗೆ ತಾಗುವಂತೆ ಮಲ್ಲಿಗೆ ಬಳ್ಳಿಗಳ ಮಲಗಿಸಿ,... ಅರ್ಧ ಗಂಟೆಯ ಹಿಂದಿನ ಸೆಕೆಯೊಂದು ಭ್ರಮೆಯೋ ಎಂಬಂತೆ ಶಾಕ್ ನೀಡುವ ಮಳೆ ಬಂದಷ್ಟೇ ವೇಗವಾಗಿ ಹೋದರೂ ಕುರುಹು ಮಾತ್ರ ತಕ್ಷಣ ಒಣಗುವುದಿಲ್ಲ. ಹಣ್ಣಾಗಿ ಉದುರಿದ ಹಲಸಿನ ಎಲೆಗಳ ತುದಿಯಲ್ಲಿ ಮುತ್ತಿನ ಮಣಿ, ಕೆಸವಿನ ಎಲೆಯ ನಡುವಿನ ಗುಂಡಿಯಲ್ಲಿ ತೇಲಾಡುವ ಬೆಳ್ಳಿಯ ಉಂಡೆ, ಛಾವಣಿಯ ತುದಿಯಲ್ಲಿ ಲಯಬದ್ಧವಾಗಿ ತೊಟ್ಟಿಕುವ ಹನಿಗಳು, ತೆಂಗಿನ ಗರಿಯೊಂದು ಮಂದ ಮಾರುತಕ್ಕೆ ಸರಿಯಾಗಿ ಉದುರಿಸುವ ಮಳೆ ಹನಿಗಳ ಸಾಕ್ಷಿಗಳು, ಮೊದಲ ಮಳೆಯ ಮಣ್ಣಿನ ವಾಸನೆ, ಪೂರ್ತಿ ತೊನೆದು ಮಂಜಿನ ಹಾಸಿಗೆಯ ಸೃಷ್ಟಿಸುವ ತೋಟದ ಹುಲ್ಲುಗಳೆಲ್ಲ ಸಾರಿ ಸಾರಿ ಹೇಳುತ್ತವೆ.... 
ಏನನೋ... ಮಾತಾಡಿದೆ....!!!

-ಕೃಷ್ಣಮೋಹನ ತಲೆಂಗಳ.

No comments: