ಕಾಣದ ಕಡಲಿನ ಮೊರೆತದ ಜೋಗುಳ....














ಕಡಲು ಕಾಯುವುದಿಲ್ಲ, ನಿರೀಕ್ಷಿಸುವುದಿಲ್ಲ, ನಿರಾಸೆಗೊಳಿಸುವುದಿಲ್ಲ. ಅಸಲಿಗೆ ಕಾಣುವುದು ಮಾತ್ರ ಕಡಲಲ್ಲ. ಕಣ್ಣಂಚಿನ ದೃಷ್ಟಿಯಾಚೆಗೂ ಕಡಲಿನ ಹರವು, ವ್ಯಾಪ್ತಿ ಚಾಚಿದೆ. ಬೀಚಿಗೆಂದು ಹೋಗಿ ಅಚ್ಚುಕಟ್ಟಾಗಿ ಕುಳಿತು ಡಾಂಬರು ಹಾಕಿದ ರಸ್ತೆಯಲ್ಲೇ ಮರಳುವವರಿಗೆ ಕಡಲ ಒಡಲು, ಆಳ, ಬಿರುಸುಗಳ ವಿಶ್ವರೂಪ ದರ್ಶನ ಆಗಿರುವುದಿಲ್ಲ. ಕಾಣದ್ದಕ್ಕಿಂತಲೂ ಹೆಚ್ಚು ಕಾಣಲಿರುವುದೇ ಕಡಲು...

.....

ಕಡಲ ನಡೆ ಕಲಿತವರು, ಅರಿತವರು, ಕಡಲ ಮಡಿಲಿಗೆ ಬಿದ್ದು ಅಡಿಗಡಿಗೂ ಉಬ್ಬರ ಇಳಿತ ಅರಿತವರು ದಿನಂಪ್ರತಿ ಸಲೀಸಾಗಿ ಕಡಲಡಿಗೆ ನಮಿಸಿ ದಡದಾಚೆಗೂ ಈಜಿ. ಮಿಂದು ಮನಸಾರೆ ದಣಿದು, ಏರಿಳಿತಕ್ಕೆ ಮಣಿದು ಕುಣಿದು ಕುಪ್ಪಳಿಸಿ ಮನೆಗೆ ಮರಳುತ್ತಾರೆ. ಕಡಲನ್ನೇ ಕಾಣದವರು, ಮಿತಿ ಮೀರಿ ಕಡಲೊಡಲಿಗೆ ಹಾರಿ, ನಾಡಿ ಮಿಡಿತ ಹಿಡಿಯಲಾಗದೆ ಚಡಪಡಿಸಿ ಕಡಲ ಸುಳಿಗೆ ಸಿಲುಕಿ ಇಲ್ಲವಾಗುವುದೂ ಇದೆ. ಅರಿತವರಿಗೆ ಸರಳ, ವಿರಳವಾಗಿ ಕಂಡವರಿಗೆ ಒಗಟು ಕಡಲು...

.....

ಕಡಲು ಅಬ್ಬರಿಸುತ್ತಿರುತ್ತದೆ, ಅಲ್ಲಿ ಪಿಸುಮಾತುಗಳು ಕೇಳಿಸುವುದಿಲ್ಲ. ಕಡಲು ಭೋರ್ಗರೆದರೂ ಅಲ್ಲೊಂದು ವಿಚಿತ್ರ ಏಕಾಂತವಿದೆ. ಅಲೆಗಳ ಮೊರೆತದ ನಡುವೆ ಎಲ್ಲವನ್ನೂ ಮರೆಯುವಂಥಹ ಏಕಾಗ್ರತೆ ಸೃಷ್ಟಿಸಬಲ್ಲ ಸದ್ದು... ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತದೆ, ಆದರೆ ಈಗ ಬಂದ ಅಲೆ ಆಗಿನದ್ದಲ್ಲ, ಮತ್ತೆ ನಾಳೆ ಬರುವ ಅಲೆ ಇಂದಿನದ್ದಲ್ಲ, ಎಲ್ಲವೂ ಅಲೇಗಳೇ... ಆದರೆ ಅಳತೆಗೆ, ಊಹೆಗೆ, ಲೆಕ್ಕಾಚಾರಕ್ಕೆ ಸಿಕ್ಕದ್ದು ಕಡಲು...

.....

ಕಡಲಿಗೆ ಹೃದಯವೇ ಇಲ್ಲವೇ... ಗೊತ್ತಿಲ್ಲ. ಕಡಲ ನೀರು ಉಪ್ಪು, ಕಣ್ಣೀರಿನ ಹಾಗೆ. ಆನಂದ ಬಾಷ್ಪವೂ, ಕಣ್ಣೀರು ಕಡಲಡಿಯಲ್ಲಿ ಕರಗುತ್ತದೆ. ಅಧಕ್ಕೆ ಭೇದವಿಲ್ಲ. ಒಂದೊದೇ ಮನಸ್ಸುಗಳ ತುಮುಲ ಕಡಲಿಗೆ ಕಾಣಿಸುತ್ತದೆ, ಆದರೆ ಮಾತನಾಡುವುದಿಲ್ಲ. ಸಾವಿರಗಟ್ಟಲೆ ಮಂದಿ ಸಂಜೆಯ ಹೊತ್ತಿಗೆ ಒಟ್ಟು ಸೇರಿದರೂ ಕಡಲಂಚಿನ ಮೂಲೆಯಲ್ಲೊಂದು ಪುಟ್ಟ ಜಾಗ ಸಿಕ್ಕೇ ಸಿಗುತ್ತದೆ. ತಣ್ಣಗೆ ಕುಳಿತು ಕಡಲನ್ನೇ ದಿಟ್ಟಿಸಿ ನೋಡಲು, ಅಲೆಗಳ ಲೆಕ್ಕ ಹಾಕಲು ಹೊರಟು ತಪ್ಪಿ ಹೋಗಿ ಬೆಪ್ಪು ತಕ್ಕಡಿಗಳಾಗಲು... ಅಸಂಖ್ಯಾತ ಚಿಪ್ಪುಗಳ ಹಾಗೆ ಲೆಕ್ಕ ತಪ್ಪಿಸುವ ಜಾಣನೇ ಕಡಲು...

.....

ಕಡಲೊಳಗೆ ಕಸ ಕಡ್ಡಿಗಳೂ ಉಳಿಯುವುದಿಲ್ಲವಂತೆ. ಎಲ್ಲವನ್ನೂ ಪ್ರಾಮಾಣಿಕತೆಯಿಂದ ದಡಕ್ಕೆ ತಂದಿಕ್ಕಿ ನಿಟ್ಟುಸಿರು ಬಿಡುತ್ತದಂತೆ ಸತ್ತು ಹೋದ ದೇಹಗಳನ್ನೂ ಕೂಡಾ ಕಡಲು ಬಚ್ಚಿಡುವುದಿಲ್ಲ... ಕಡಲ ತಡಿಯ ಮರಳಿನ ತೋಯ್ದ ದಾರಿಯಲ್ಲಿ ಮೂಡಿದ ಹೆಜ್ಜೆ ಗುರುಗಳಿಗೂ ಹೆಚ್ಚಿನ ಆಯುಷ್ಯವಿಲ್ಲ. ಕ್ರಮೇಣ ಮಸುಕು ಮಸುಕಾಗಿ ಮತ್ತೆ ಕಾಣದೇ ಹೋಗುತ್ತದೆ. ಅಥವಾ ಧುತ್ತನೆ ಬಂದು ಮುತ್ತಿಕ್ಕಿ ಕರೆದೊಯ್ಯುವ ಅಲೆಗಳ ಹುಚ್ಚಾಟಕ್ಕೆ ಹೆಜ್ಜೆ ಗುರುತುಗಳು ಬಲಿಯಾಗುತ್ತವೆ. ಅಲ್ಲಿನ ಸೂರ್ಯಾಸ್ತ, ಮರಳ ಮೇಲಿನ ಬರಹ, ಪಾದದ ಗುರುತು, ಕ್ಷಣಕಾಲ ಆಗಸದ ಕೆಂಪು ಕೆಂಪಿನ ಚೆಲ್ಲಾಟ, ದೂರದ ಕ್ಷಿತಿಜದಂಚಿನಲ್ಲಿ ಪುಟ್ಟ ಗೆರೆಯಂತೆ ಕಾಣುವ ಹಡಗುಗಳು ಎಲ್ಲ ಈ ಕ್ಷಣಕ್ಕೆ, ಈ ಘಳಿಗೆಗೆ ಮಾತ್ರ ಒಂದು ಚೆಂದದ ದೃಶ್ಯದ ಹಾಗೆ... ಅವನ್ನೆಲ್ಲ ಗಂಟುಮೂಟೆ ಕಟ್ಟಿ ಹೊತ್ತೊಯ್ದು ಬಚ್ಚಿಡಲಾಗುವುದಿಲ್ಲ. ಬೆಳ್ಳಿ ಪರದೆಯ ಮೇಲಿನ ಸಿನಿಮಾದ ಹಾಗೆ ನೋಡಿ ನೆನಪಿಟ್ಟು ಮತ್ತೆ ಮರಳಬೇಕು. ಹಿಡಿತಕ್ಕೆ ಸಿಕ್ಕದ್ದು ಕಡಲು...

.....

ಕಡಲ ತಡಿದ ಬುಡದಲ್ಲಿರುವ ಹೆಬ್ಬಂಡೆಯೂ ನಿರ್ಲಿಪ್ತ ಅಲ್ವ... ಎಷ್ಟು ತಾಕಿದರೂ, ತಡವಿದರೂ, ಅಲೆಗಳು ಮುದ್ದಿಸಿ ಹೋದರೂ ತುಟಿ ಪಿಟಿಕ್ಕೆನ್ನದ ಗಾಂಭೀರ್ಯ. ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದೇ ಬೇಡವೆಂಬಂಥ ಮೊಂಡು ಹಠ. ಹಿಡಿತಕ್ಕೆ, ಸಾಮಿಪ್ಯಕ್ಕೆ, ಸ್ವಾಧೀನಕ್ಕೆ ಎಟುಕದ ಕರಿ ಬಂಡೆ. ಸ್ಥಿತಪ್ರಜ್ನನಂತೆ ತೋರಿಸಿಕೊಳ್ಳುವ ಚಿಂತನೆಗೂ, ಯೋಚನೆಗೂ ಆಹಾರ ನೀಡುವ ಮಹಾರಾಯ. ಕಡಲ ರಕ್ಷಕನ ಹಾಗೆ, ಸಿಕ್ಕರೂ ಸಿಗವನ ಹಾಗೆ, ಜಾಸ್ತಿ ಕರೆದರೆ ಕೆರಳಿ ಕೆಂಪಾಗುವ ಹಾಗೆ, ಸೂರ್ಯ ನಡು ನೆತ್ತಿಯ ಮೇಲಿರುವಾಗ ಕಾಡುವ ಬಿಸಿಲಿನ್ನೂ ಅರೆದು ಕುಡಿಯಬಲ್ಲಷ್ಟು ತಾಕತ್ತು ಇರುವವನ ಹಾಗೆ. ನಿರ್ಲಿಪ್ತ ಬಂಡೆಗಳ ಸಾಂಗತ್ಯಕ್ಕೊಂದ ನಿದರ್ಶನ ಕಡಲು...

.....

ಒಂದು ಮುಂಜಾನೆಯ ನಡಿಗೆ, ಮುಸ್ಸಂಜೆಯ ತಂಗಾಳಿ, ಪುಟ್ಟ ಪುಟ್ಟ ಅಲೆಗಳು ಪಾದ ತೋಯಿಸುವ ಮಕ್ಕಳಾಟ, ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುವ ಮರಳ ನಡುವಿನ ಜೀವಿಗಳು, ಈಗಷ್ಟೇ ಕೆಳಗಿಳಿದು ಹೋದ ಅಲೆಗಳ ನೊರೆ ನೊರೆಯಾದ ಕುರುಹುಗಳು, ಸೂರ್ಯ ಕಳೆದು ಹೋದ ಬಳಿಕವೂ ಕಾಣಿಸುವ ಹೊಂಬಣ್ಣದ ಕಾಂತಿ ನಿರ್ಗಮನದ ಮುಂಚಿನ ನಿಶಾನೆಯ ಹಾಗೆ... ಮೊಗೆದಷ್ಟೂ ನೆನಪುಗಳನ್ನು ಕಾಪಿಡಬಲ್ಲ ಹಾರ್ಡು ಡಿಸ್ಕಿನ ಹಾಗೆ ಕಡಲ ತಡಿ... ಅಡಿಗಡಿಗೂ ಕಾಡುವ ಕನಸು...

-ಕೃಷ್ಣ ಮೋಹನ ತಲೆಂಗಳ.


No comments: