ಕೆಂಪು ಕಳವೆಯಲ್ಲಿ ಪರಿಚಯವಾದ ಧ್ವನಿ ನಿವೃತ್ತಿ ಅಂಚಿನ ವರೆಗೆ.
ಆಕಾಶವಾಣಿ ಕೇಳುಗರಿಗೆ ರೇಡಿಯೋದಲ್ಲಿ ಬರುವ ಧ್ವನಿ ಕಾರ್ಯಕ್ರಮ ಮುಖ್ಯಸ್ಥರದ್ದೋ, ಉದ್ಘೋಷಕರದ್ದೋ, ಟ್ರೆಕ್ಸು, ಪೆಕ್ಸು, ಕ್ಯಾಶುವಲ್ ಆರ್ಟಿಸ್ಟು ಇದ್ಯಾವುದೂ ಗಣನೆಗೆ ಬರುವುದಿಲ್ಲ. ರೇಡಿಯೋದಲ್ಲಿ ಮೂಡಿಬರುವ ಧ್ವನಿ, ನಿರೂಪಣೆಯ ವೈಖರಿ, ಕಾರ್ಯಕ್ರಮದ ಅಂಶಗಳು ಇಷ್ಟೇ ಅವರಿಗೆ ಕೇಳಿಸುವುದು. ಕಾಣಿಸುವುದೇನೂ ಇಲ್ಲ. ಎಲ್ಲ ಕಲ್ಪನೆಗೆ ಬಿಟ್ಟದ್ದು.
ಥ್ಯಾಂಕ್ಸ್ ಟೂ ಸೋಶಿಯಲ್ ಮೀಡಿಯಾ...
ಒಂದು ಕಾಲದಲ್ಲಿ ಆಕಾಶವಾಣಿ ಕೇಂದ್ರದಿಂದ ಯಾರಾದರೂ ನಿವೃತ್ತರಾದರೆ, ವರ್ಗಾವಣೆ ಹೊಂದಿದರೆ, ಕೆಲಸ ಬಿಟ್ಟರೆ ಅದು ಅಧಿಕೃತವಾಗಿ ಜನಸಾಮಾನ್ಯರಿಗೆ ತಿಳಿಯುತ್ತಿರಲಿಲ್ಲ. ತುಂಬ ಸಮಯ ಒಬ್ಬರ ಧ್ವನಿ ಕೇಳುವುದು ನಿಂತು ಹೋದರೆ ಹೋ ಅವರೀಗ ರೇಡಿಯೋದಲ್ಲಿ ಇಲ್ವ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು.
ಕಾರ್ಯಕ್ರಮ ಕೊಡುವವರು ಯಾರು, ಎಲ್ಲಿಯವರು, ನೋಡುವುದಕ್ಕೆ ಹೇಗಿದ್ದಾರೆ, ಕ್ವಾಲಿಫಿಕೇಶನ್ ಏನು... ಇತ್ಯಾದಿ ಇತ್ಯಾದಿ ಏನೂ ಶ್ರೋತೃಗಳಿಗೆ ತಿಳಿಯುತ್ತಿರಲಿಲ್ಲ. ವರುಷಾನುಗಟ್ಟಲೆ ಪರಿಚತವಾದ ಆ ಧ್ವನಿ ಕೇಳುತ್ತಿದ್ದರೂ ಸ್ವತಹ ಎದುರಿಗೇ ಅವರು ಬಂದರೆ ಗುರುತಿಸಲಾಗದೇ ಇರುವುದು ರೇಡಿಯೋದ ವೈಶಿಷ್ಟ್ಯತೆ.
ಇಂದು ಹಾಗಲ್ಲ, ಜಾಲತಾಣಗಳು ಈ ಅಂತರವನ್ನು ಹೋಗಲಾಡಿಸಿವೆ. ಖಾಸಗಿ ಎಫ್ ಎಂ ವಾಹಿನಿಗಳಂತೂ ತಮ್ಮ ಆರ್.ಜೆ.ಗಳನ್ನು ಸೆಲೆಬ್ರಿಟಿಗಳ ಥರ ಬಿಂಬಿಸಿ ಶ್ರೋತೃಗಳಿಗೆ ಹತ್ತಿರವಾಗಿಸುತ್ತವೆ. ಅವರ ಭೇಟಿಗೂ ಅವಕಾಶ ಇರುತ್ತದೆ.
......
ಆಕಾಶವಾಣಿಯಲ್ಲಿ ವರುಷಾನುಗಟ್ಟಲೆ ದುಡಿದು ನಿವೃತ್ತಿಗೆ ಹತ್ತಿರವಾಗುತ್ತಾ ಬಂದರೂ, ನಿವೃತ್ತರಾದರೂ ಜನರಿಗೆ ಅದು ತಿಳಿಯುವುದೇ ಇಲ್ಲ. ಕಾರಣ. ಅಧಿಕೃತವಾಗಿ ಘೋಷಿಸುವುದಿಲ್ಲ, ಇಂಥವರು ಇಂದಿನಿಂದ ನಿವೃತ್ತರಾಗುತ್ತಿದ್ದಾರೆ ಅಂತ. (ಹಿಂದೆಲ್ಲ ಈ ಪದ್ಧತಿ ಇರಲಿಲ್ಲ, ಈಗ ಗೊತ್ತಿಲ್ಲ).
......
ನಿವೃತ್ತಿ ಹೊಸ್ತಿಲಿನಲ್ಲಿರುವ ಸಹಾಯಕ ನಿರ್ದೇಶಕಿ (ಕಾರ್ಯಕ್ರಮ) ಉಷಲತಾ ಸರಪಾಡಿ ಮೇಡಂ ಕುರಿತು ನಂಗೆ ಹೆಚ್ಚೇನೂ ಗೊತ್ತಿಲ್ಲ. ಮೂರು ವರ್ಷಗಳ ಹಿಂದೆ ಕಂಡು, ಈ ನಡುವೆ ಕೇಳಿದ ಕಾರ್ಯಕ್ರಮಗಳ ಮೂಲಕ ಅಷ್ಟೇ...
2017ರಲ್ಲಿರಬೇಕು. ಕೆ.ಟಿ.ಗಟ್ಟಿ ಅವರ ರಚನೆಯ ಕಾದಂಬರಿ ಕೆಂಪು ಕಳವೆ ಆಧರಿತ ಅದೇ ಹೆಸರಿನ ಬಾನುಲಿ ಧಾರಾವಾಹಿ ಧ್ವನಿಮುದ್ರಣ ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿತ್ತು. ನನಗೂ ಒಂದು ಪಾತ್ರವಿತ್ತು. ಅಲ್ಲಿಗೆ ಉಷಲತಾ ಮೇಡಂ (ಸ್ಟುಡಿಯೋಗೆ) ಅವರನ್ನು ಕರೆದುಕೊಂಡು ಬಂದು ಪರಿಚಯಿಸಿದರು ಸ್ವಾಮಿ ಸರ್. ನಾನು ಅದೇ ಮೊದಲು ಅವರನ್ನು ನೋಡಿದ್ದು...
....
ಕೆಂಪು ಕಳವೆ ಧ್ವನಿಮುದ್ರಣದ ವೇಳೆಗೆ ನಾನು ಆ ಕಾದಂಬರಿ ಓದಿರಲಿಲ್ಲ. ಹಾಗಾಗಿ ನನಗೆ ಪೂರ್ತಿ ಕಥಾಹಂದರ ಗೊತ್ತಿರಲಿಲ್ಲ. ಪಾತ್ರಧಾರಿಗಳು ಆಯಾ ಸನ್ನಿವೇಶಕ್ಕನುಗುಣವಾಗಿ ನಮಗೆ ಬಂದ ಪಾತ್ರವನ್ನು ನಿರ್ವಹಿಸಬೇಕಾಗಿತ್ತು ಅಷ್ಟೇ... ಅದು ಶ್ರೋತೃಗಳನ್ನು ಹೇಗೆ ತಲುಪಬಹುದು ಎಂಬ ಬಗ್ಗೆ ತುಂಬ ಕುತೂಹಲ ಇತ್ತು. ಧಾರಾವಾಹಿ ಪ್ರಸಾರದ ದಿನ ನಾನೂ ಕುತೂಲಹದಿಂದ ಕಾಯುತ್ತಿದ್ದ. ಮೊದಲ ಆವೃತ್ತಿಯಿಂದಲೇ ಶುರು ಉಷಲತಾ ಮೇಡಂ ಅವರ ಧ್ವನಿ ಆಲಿಸಿದ್ದು....
ನಂತರ ನಿರಂತರ ಸುಮಾರು 30 ವಾರಗಳ ಕಾಲ ಧಾರಾವಾಹಿಯುದ್ದಕ್ಕೂ ಅವರು ಡಾ.ಸ್ವಾಮಿ ಸರ್ ಜೊತೆ ನಿರೂಪಕಿಯ ಪಾತ್ರ ನಿರ್ವಹಿಸಿ ಅತ್ಯಂತ ಜನಪ್ರಿಯರಾದರು. ಮಂಗಳೂರು ಆಕಾಶವಾಣಿಯ ಶ್ರೋತೃಗಳಿಗೆ ಆರಂಭದಲ್ಲಿ ಅವರು ಹೆಚ್ಚು ನಿಕಟರಾಗಿದ್ದು ಕೆಂಪು ಕಳವೆ ಮೂಲಕ ಅಂತ ನೆನಪು.
ಅವರ ಆ ಧಾರಾವಾಹಿಯ ನಿರೂಪಣೆ ಎಷ್ಟು ಒಗ್ಗಿ ಹೋಗಿತ್ತು ಅಂದರೆ, ಅಷ್ಟೂ ಕಥೆಯನ್ನು ಜೋಡಿಸುತ್ತಾ ಹೋಗುವ ನಿರೂಪಣೆಯನ್ನು ಅವರು ಅನುಭವಿಸಿ ಪ್ರಸ್ತುತಪಡಿಸುವುದು ತುಂಬ ಖುಷಿ ಕೊಡುತ್ತಿತ್ತು... ಕಥೆಯನ್ನು ಹೆಚ್ಚು ಸರಳಗೊಳಿಸುತ್ತಿತ್ತು. ಈ ನಡುವೆ ಒಂದೆರಡು ಬಾರಿ ಹಿರಿಯ ಹಾಗೂ ಅನುಭವಿ ನಿರೂಪಕಿಯರರಾದ ರೂಪಶ್ರೀ ನಾಗರಾಜ್ ಹಾಗೂ ಮಂಜುಳಾ ಸುಬ್ರಹ್ಮಣ್ಯ ಅವರು ಬಂದು ಹೋದರು, ಅವರು ಚೆನ್ನಾಗಿಯೇ ನಿರೂಪಿಸಿದರು. ಉಷಲತಾ ಮೇಡಂ ಧ್ವನಿಗೆ ಒಗ್ಗಿ ಹೋಗಿದ್ದ ನನಗೆ ಅವರೇ ಇದ್ದರೆ ಚೆಂದ ಅನ್ನಿಸಿತ್ತು.
ಅವರು ಪ್ರಸ್ತುತಿಯಲ್ಲಿರುವ ಸಾವಧಾನದ ಭಾವ, ವಾಕ್ಯಗಳ ನಡುವಿನ ನಿಶ್ಯಬ್ಧ ಮತ್ತು ಪ್ರಸ್ತುತಿಯ ಆಪ್ತ ಶೈಲಿ ಕೇಳುಗರನ್ನು ಹೆಚ್ಚು ತಟ್ಟುತ್ತದೆ ಅನ್ನುವುದು ನನ್ನ ಅನಿಸಿಕೆ...
ನಂತರ ಅವರು ನೂರಾರು ಲೈವ್ ಪ್ರಸಾರ, ನೇರ ಫೋನ್ ಇನ್ ಪ್ರಸಾರ, ಸಂದರ್ಶನಗಳನ್ನು ನಡೆಸಿಕೊಟ್ಟಿರಬಹುದು.... ಎಲ್ಲವನ್ನೂ ಕೇಳಲಿಲ್ಲ. ಆದರೆ, ಕೇಳಿದ ಅಷ್ಟೂ ಕಾರ್ಯಕ್ರಮಗಳಲ್ಲಿ ಅವರ ಉದ್ವೇಗರಹಿತ, ಸಮಾಧಾನದ ನಿರೂಪಣೆಯೇ ನನಗೆ ಇಷ್ಟವಾಗಿದ್ದು. ಫೋನ್ ಇನ್ ಕಾರ್ಯಕ್ರಮಗಳಲ್ಲಿ ಸಡನ್ ಸ್ಫೋಟಗೊಂಡಂತೆ ನಕ್ಕದ್ದೂ ಕೇಳಿದ್ದೇನೆ. ಸಾಕಷ್ಟು ವಿಷಯ ಸಂಗ್ರಹ ಇರುತ್ತದೆ. ಹಾಗೂ ಯಾರನ್ನೇ ಆಗಲಿ ಆತ್ಮೀಯವಾಗಿ ಮಾತನಾಡಿಸಿ ವಿಷಯವನ್ನು ಹೊರ ತೆಗೆಯುವ ಚಾಕಚಕ್ಯತೆ ಅವರಲ್ಲಿದೆ. ಆದರೆ ಪ್ರತ್ಯಕ್ಷವಾಗಿ ತುಸು ಗಂಭೀರವಾಗಿ ಇರುತ್ತಾರೆ ಅನಿಸುತ್ತದೆ. ಫೋನ್ ಇನ್ ಕಾರ್ಯಕ್ರಮಗಳಲ್ಲಿ ಶ್ರೋತೃಗಳಲ್ಲಿ ತುಳುವಿನಲ್ಲೂ ಸಂಭಾಷಿಸುವ ಅವರು ಅಧಿಕಾರಿ ವರ್ಗದವರ ಜೊತೆ ಇಂಗ್ಲಿಷಿನಲ್ಲೂ ಸುಲಲಿತವಾಗಿ ಸಂವಹನ ನಡೆಸಿದ್ದಾರೆ.
ಎಷ್ಟೋ ಸಂಚಿಕಗಳಲ್ಲಿ ಅವರು ಹರ್ಷ ವಾರದ ಅತಿಥಿ ನಡೆಸಿಕೊಟ್ಟಿರಬಹುದು. ಆದರೆ ಸಾಲುಮರದ ತಿಮ್ಮಕ್ಕ, ಹರೇಕಳ ಹಾಜಬ್ಬ ಅವರ ಸಂದರ್ಶನಗಳನ್ನು ನಾನು ಮರೆಯುವಂತಿಲ್ಲ. ಒಂದು ವಾಕ್ಯದ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸುವವರ ಬಳಿ ಅನುಯಯದಿಂದ ಮಾತನಾಡಿ, ವಿಷಯಗಳನ್ನು ಹೆಕ್ಕಿ ತೆಗೆಯುವುದು ಒಂದು ಕಲೆ. ಅದು ಮೇಡಂ ಅವರಲ್ಲಿದೆ ಅಂದ ಕಂಡುಕೊಂಡಿದ್ದೇನೆ....ಇದಕ್ಕಿಂತ ಆಚೆಗೆ ಅವರ ಕಾರ್ಯಕ್ರಮಗಳ ಬಗ್ಗೆ ವಿಮರ್ಶಿಸುವಷ್ಟು ಪ್ರೌಢನೇನೂ ನಾನಲ್ಲ....
.....
ಮೂರು ಮೂರೂವರೆ ದಶಕಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ದುಡಿದು ನಿವೃತ್ತರಾದವರಿದ್ದಾರೆ. ಎಳವೆಯಿಂದಲೇ ನಾವು ಅವರ ಧ್ವನಿಗಳನ್ನು ಕೇಳಿ ಬೆಳೆದವರು. ಆದರೆ, ಆ ಹೆಸರುಗಳು, ಅವರ ಧ್ವನಿ ಸದಾ ಕಿವಿಯಲ್ಲಿ ಅನುರಣಿಸುತ್ತಿರುತ್ತದೆ. ಓರ್ವ ಧ್ವನಿಯ ಒಡೆಯ, ಒಡತಿ ಸೇವಾ ನಿವೃತ್ತರಾದ ತಕ್ಷಣ ಶ್ರೋತೃಗಳ ಜೊತೆ ಅವರ ಬಾಂಧವ್ಯ ನಿಲ್ಲುವುದಿಲ್ಲ. ನೂರಾರು ಧ್ವನಿಮುದ್ರಿಕೆಗಳ ಭಂಡಾರ ಆಕಾಶವಾಣಿ ಲೈಬ್ರೆರಿಯಲ್ಲಿ ಭದ್ರವಾಗಿರುತ್ತದೆ. ಅವೆಲ್ಲ ಸಾಂದರ್ಭಿಕವಾಗಿ ಪ್ರಸಾರವಾಗುತ್ತಲೇ ಇರುತ್ತದೆ....
ಕಾರ್ಯಕ್ರಮಗಳ ಸದ್ದು ಕಿವಿಯಲ್ಲಿ ರಂಗಣಿಸುತ್ತಲೇ ಇರುತ್ತದೆ....
ಅಲ್ಲಿನ ಅಧಿಕಾರ, ಪ್ರೋಟೊಕಾಲ್ ಗಳು, ವಯಸ್ಸು, ನಿವೃತ್ತಿ, ವರ್ಗಾವಣೆ, ಸರ್ಕಾರದ ನಿಯಮ ಇದ್ಯಾವುದೂ ನಮ್ಮಂಥ ಕೇಳುಗರಿಗೆ ಸಂಬಂಧಿಸಿದ್ದಲ್ಲ. ನಮಗೇನಿದ್ದರೂ ನಮ್ಮ ರೇಡಿಯೋ ಸೆಟ್ಟಿನಲ್ಲಿ ಮೂಡಿ ಬರುವ ಧ್ವನಿಗಳು ಹಾಗೂ ಕಾರ್ಯಕ್ರಮಗಳ ನಂಟು ಇಷ್ಟೇ ಅಂತಿಮವಾಗಿ ನೆನಪಿನಲ್ಲಿರುವುದು. ಅಂತಹ ಚಂದದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು ಉಷಲತಾ ಮೇಡಂ ಅವರು. ಹಲವರು ಅವರ ಬಗ್ಗೆ ಬರೆದರು. ಹಾಗಾಗಿ ಈ ವೇದಿಕೆ ಬಳಸಿ ನಾನೂ ನನ್ನ ಕಿರು ಅನಿಸಿಕೆ ವ್ಯಕ್ತಪಡಿಸಿದ್ದೇನೆ.
ಉಷಲತಾ ಮೇಡಂಗೆ ನಿವೃತ್ತಿ ಬದುಕು ಸಂತೃಪ್ತಿದಾಯಕವಾಗಿರಲಿ....ಶುಭಾಶಯಗಳು.
-ಕೃಷ್ಣಮೋಹನ ತಲೆಂಗಳ.
No comments:
Post a Comment