ನಗು ಮತ್ತು ಶಾಂತಕ್ಕ....
ಮಂಗಳೂರು ಆಕಾಶವಾಣಿಯ ಡಾ.ಮಾಲತಿ ಆರ್. ಭಟ್ ಎಂದರೆ ತಕ್ಷಣಕ್ಕೆ ಕೇಳಿಸುವುದು ಅವರ ನಗು. ಅವರು ಅನಾಯಾಸವಾಗಿ ನಗಬಲ್ಲರು... ಮಾತುಕತೆಯೆಂಬ ಕೌಟುಂಬಿಕ ಸಂಭಾಷಣೆಯ ಜನಪ್ರಿಯ ಕಾರ್ಯಕ್ರಮದ ಬಳಿಕ ಅವರು ಶಾಂತಕ್ಕ ಎಂದೇ ಫೇಮಸ್ಸು...
ಶ್ಯಾಂ ಭಟ್, ಕೆ.ಆರ್.ರೈ, ಸೂರ್ಯನಾರಾಯಣ ಭಟ್, ಶಂಕರ್ ಎಸ್.ಭಟ್ ಮತ್ತಿತರ ಕೂಡುವಿಕೆಯಲ್ಲಿ ನಡೆಯುತ್ತಿದ್ದ ಮಾತುಕತೆ ಕೌಟುಂಬಿಕ ಸಂಭಾಷಣೆ ಒಂದು ಕಾಲದಲ್ಲಿ ತುಂಬಾ ಫೇಮಸ್ಸು. ಆಕಾಶವಾಣಿಗೆ ಭೇಟಿ ನೀಡುತ್ತಿದ್ದ ಸಂದರ್ಶಕರಲ್ಲಿ ಹೆಚ್ಚಿನವರು ಅಜ್ಜಯ್ಯ ಇದ್ದಾರ, ಶಾಂತಕ್ಕ ಇದ್ದಾರ ಅಂತಲೇ ಕೇಳುತ್ತಿದ್ದರು.
ಇಂತಹ ಮಾಲತಿಯಕ್ಕ ಮೊನ್ನೆ ಏಪ್ರಿಲ್ ನಲ್ಲಿ ಸೇವಾ ನಿವೃತ್ತಿ ಹೊಂದಿದರು. ಬಹುತೇಕ ಮಂಗಳೂರು ಆಕಾಶವಾಣಿಯ ಎಲ್ಲ ವಿಭಾಗಗಳಲ್ಲಿ ಧ್ವನಿಮುದ್ರಣ, ನಿರ್ಮಾಣ, ಪ್ರಸ್ತುತಿಯ ಅನುಭವ ಹೊಂದಿರುವ ಅವರು ಸೇವಾವಧಿಯ 7 ತಿಂಗಳುಗಳನ್ನು ಹೊರತುಪಡಿಸಿ (ಧಾರವಾಡ ಕೇಂದ್ರದಲ್ಲಿ ಸೇವೆ) ಸುಮಾರು 31 ವರ್ಷ ಮಂಗಳೂರು ಆಕಾಶವಾಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
1989ರ ಮೇ 26ರಂದು ಅವರು ಮಂಗಳೂರು ಆಕಾಶವಾಣಿಗೆ ಹಿಂದಿ ಅನುವಾದಕಿಯಾಗಿ ಕರ್ತವ್ಯಕ್ಕೆ ಸೇರಿದರು. 2002ರಿಂದ ಪ್ರಭಾರಿ ಹಿಂದಿ ಅಧಿಕಾರಿಯಾಗಿ ನಿವೃತ್ತಿ ತನಕ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಕರ್ನಾಟಕ ಸ್ಟಾಫ್ ಸೆಲೆಕ್ಷನ್ ಕಮಿಟಿಯಿಂದ ಕರ್ನಾಟಕದಲ್ಲಿ ಆಯ್ಕೆಯಾದ ಮೊದಲ ಹಿಂದಿ ಅನುವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂಎ ಬಿಎಡ್ ವಿದ್ಯಾರ್ಹತೆ ಹೊಂದಿದ್ದು, ಬಳಿಕ ರೇಡಿಯೋ ನಾಟಕ ವಿಷಯದಲ್ಲಿ ಮೈಸೂರು ವಿ.ವಿ.ಯಿಂದ ಪಿಎಚ್ ಡಿ ಪದವಿ ಕೂಡಾ ಪಡೆದಿದ್ದಾರೆ.
.......
ಆರಂಭದ ದಿನಗಳಲ್ಲಿ ಚಿಲಿಪಿಲಿ, ಬಾಲವೃಂದ, ಝೇಂಕಾರ, ಪರಿಮಳ-ನಂದನವನ (ಶೈಕ್ಷಣಿಕ ಕಾರ್ಯಕ್ರಮ) ಮತ್ತಿತರ ವಿಭಾಗಗಳನ್ನು ನೋಡಿಕೊಂಡಿದ್ದರು. ಶೈಕ್ಷಣಿಕ ಕಾರ್ಯಕ್ರಮ ಪರಿಮಳ-ನಂದನವನಕ್ಕಾಗಿ ಸುಮಾರು 10-12 ವರ್ಷ ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ. ಸುಮಾರು 20 ವರ್ಷ ಮಹಿಳೆಯರ ವನಿತಾವಾಣಿ, ಸುಮಾರು 15ಕ್ಕೂ ಅಧಿಕ ವರ್ಷ ಜನಪ್ರಿಯವಾದ ಪತ್ರೋತ್ತರ ಕಾರ್ಯಕ್ರಮ, ಅಧಕ್ಕೂ ಮೊದಲು ಕೆಲ ವರ್ಷ ಯುವ ಪತ್ರೋತ್ತರ, ಸುಮಾರು 15ಕ್ಕೂ ಅಧಿಕ ವರ್ಷ ಜನಪ್ರಿಯವಾದ ಕೌಟುಂಬಿಕ ಸಂಭಾಷಣೆ ಮಾತುಕತೆ, ಸುಮಾರು 20 ವರ್ಷ ಹಿಂದಿ ಪಾಠ, ಸುಮಾರು 2 ವರ್ಷ ಯಕ್ಷಗಾನ ಧ್ವನಿಮುದ್ರಣ (ರಾಮಾಯಣ, ಮಹಾಭಾರತ ಸರಣಿ ಕಾಲದಲ್ಲಿ) ಮತ್ತಿತರ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ವೈದ್ಯರೊಂದಿಗೆ ಭೇಟಿ, ಸಂಸ್ಕೃತ ಪಾಠ ಮತ್ತಿತರ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ. ಸ್ವತಹ ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಪದವಿ ಪಡೆದಿರುವ ಅವರು ಗುರುಗಳಾದ ಶ್ರೀನಾಥ ಮರಾಠೆ ಅವರ ಜೊತೆ ಸುಮಾರು 2 ವರ್ಷ ಕಾಲ ಸಂಗೀತ ಪಾಠ ಕಾರ್ಯಕ್ರಮದಲ್ಲಿ ಶಿಷ್ಯೆಯಾಗಿಯೂ ಕಂಠದಾನ ಮಾಡಿದ್ದಾರೆ.
ಮೊದಲ ಬಾರಿಗೆ ಹಿಂದಿ ಅನುಷ್ಠಾನಕ್ಕೆ ಮಂಗಳೂರು ಆಕಾಶವಾಣಿಗೆ ರಾಷ್ಟ್ರೀಯ ಪ್ರಶಸ್ತಿ ಬಂದದ್ದು ಅವರ ಅವಧಿಯಲ್ಲಿ. ಸತತ 25 ವರ್ಷಗಳ ಕಾಲ ಹಿಂದಿ ಅನುಷ್ಠಾನಕ್ಕೆ ಮಂಗಳೂರು ಆಕಾಶವಾಣಿಗೆ ಪ್ರಶಸ್ತಿ ಲಭಿಸಿದೆ. 25ಕ್ಕೂ ಅಧಿಕ ಹಿಂದಿ ನಾಟಕಗಳನ್ನು ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಮಂಗಳೂರು ಆಕಾಶವಾಣಿಯ ನಾಟಕ ಧ್ವನಿ ಪರೀಕ್ಷೆಯಲ್ಲಿ ಬಿ ಹೈ ಗ್ರೇಡ್ ಕಲಾವಿದೆ ಆಗಿರುವ ಡಾ.ಮಾಲತಿ ಭಟ್ ಅವರು ಸುಮಾರು 20ರಷ್ಟು ನಾಟಕಗಳಿಗೆ ಕಂಠದಾನ ಮಾಡಿದ್ದಾರೆ. ಹಿಂದಿ ಭಾಷೆಗೆ ಸಂಬಂಧಿಸಿದ ವಿಶಿಷ್ಟವಾದ ಇಂಧ್ರಧನುಷ್ ಕಾರ್ಯಕ್ರಮದ ಆಯೋಜನೆ ಅವರ ಅವಧಿಯಲ್ಲಿ ಮಂಗಳೂರು ಆಕಾಶವಾಣಿ ಮೂಲಕ ಮಂಗಳೂರಿನಲ್ಲಿ ನಡೆದಿದೆ. 1996ರಲ್ಲಿ ಇಂಧ್ರ ಧನುಷ್ ಕಾರ್ಯಕ್ರಮದಲ್ಲಿ ಪಣಂಬೂರಿನ ಹಿಂದಿ ಯಕ್ಷಗಾನ ಮಂಚ್ ಮೂಲಕ ಮೊದಲ ಬಾರಿಗೆ ಮಂಗಳೂರಿನಲ್ಲಿ ಹಿಂದಿ ಯಕ್ಷಗಾನ ಪ್ರದರ್ಶನ ನಡೆದಿತ್ತು.
ಎರಡು ವರ್ಷಗಳ ಹಿಂದೆಯಷ್ಟೇ ಡಾ.ನಾಗೇಶ ಪಾಂಡೇಯ ಅವರ ಮಕ್ಕಳ ಕಾದಂಬರಿಯನ್ನು ಡಾ,ಮಾಲತಿ ಭಟ್ ಅನುವಾದಿಸಿದ ಕೃತಿ ಡೊಂಕು ಸೇತುವೆ ಕೃತಿಯನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ.
ಕಾಸರಗೋಡು ಜಿಲ್ಲೆಯ ಶಾಂತಿಮೂಲೆಯ ನಿವಾಸಿ ಅವರು ರಾಮಚಂದ್ರ ಭಟ್ ಅವರ ಪತ್ನಿ. ಮಾಲತಿ ಆರ್. ಭಟ್ ಪೂರ್ಣ ರೂಪ ಮಾಲತಿ ರಾಮಚಂದ್ರ ಭಟ್. ಪುತ್ರ ವಿಜಯ ನಾರಾಯಣ.
ಆಕಾಶವಾಣಿಯಲ್ಲಿ ಎಲ್ಲಿ ಸಿಕ್ಕರೂ ನಗು ನಗುತ್ತಾ ಮಾತನಾಡುತ್ತಿದ್ದರು. ಕೇಂದ್ರಕ್ಕೆ ಭೇಟಿ ನೀಡುವ ಸಂದರ್ಶಕರ ಜೊತೆಗೂ ಸಹ. 12 ವರ್ಷಗಳ ಹಿಂದೆ ನಡೆಸುತ್ತಿದ್ದ ಸಂಡೇ ಟ್ಯೂನ್ಸ್ ಎಂಬ ಕಾರ್ಯಕ್ರಮದಲ್ಲಿ ಹಿಂದಿ ವಾಕ್ಯಗಳನ್ನು ಬಳಸುವ ಸಂದರ್ಭದಲ್ಲಿ ಸ್ಕ್ರಿಪ್ಟ್ ತಿದ್ದಿ ಕೊಡುತ್ತಾ ಇದ್ದದ್ದು ಅವರೇ. ಕಾರ್ಯಕ್ರಮಗಳ ಬಗ್ಗೆ ಸಿಕ್ಕಾಗಲೆಲ್ಲ ಅನಿಸಿಕೆಗಳನ್ನೂ ಹೇಳುತ್ತಿದ್ದರು. ಹೇಗನಿಸಿತು ವೃತ್ತಿ ಬದುಕು ಎಂದು ಕೇಳಿದರೆ....
ಬಾನುಲಿಯಲ್ಲಿನ 31 ವರ್ಷಗಳ ವೃತ್ತಿ ಬದುಕು ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರವರು.
ಅವರ ನಿವೃತ್ತಿಯ ಬದುಕು ಖುಷಿ ಖುಷಿಯಾಗಿರಲಿ... ಎಂದಿನ ಹಾಗೆ ಅವರ ನಗುವಿನ ಥರಹ.
-ಕೃಷ್ಣಮೋಹನ ತಲೆಂಗಳ.
No comments:
Post a Comment