ಈಜು ಬಾರದ ಪಂಡಿತ ವರ್ಶನ್ 2.0
ಈಜು ಬಾರದ ಪಂಡಿತನ
ಪ್ರಕರಣ ನಡೆದು ಸುಮಾರು ಎರಡು ಶತಮಾನದ ಬಳಿಕ ಪಂಡಿತರ ಮರಿ ಮೊಮ್ಮಗ ತಿಮ್ಮ ಹಾಗೂ ಅಂಬಿಗನ ಮರಿ ಮೊಮ್ಮಗನ
ಭೇಟಿ ಮತ್ತೊಮ್ಮೆ ಫರಂಗಿಪೇಟೆಯ ನೇತ್ರಾವತಿ ತೀರದಲ್ಲಿ ಆಗಿದ್ದು ಕಾಕತಾಳೀಯ ಅಷ್ಟೇ. ತಿಮ್ಮ ಈಗ ಭಯಂಕರ
ಕವಿ, ಖ್ಯಾತ ಚಿಂತಕ ಬೇರೆ. ಅಂಬಿಗನ ಮರಿಮೊಮ್ಮಗ ಹೆಸರುವಾಸಿಯೇನಲ್ಲ, ಆದರೆ ಮುತ್ತಜ್ಜನ ಅದೇ ದೋಣಿ
ನಡೆಸುವ ವೃತ್ತಿ ಮುಂದುವರಿಸಿಕೊಂಡು ಬಂದಿದ್ದ. ಆದರೆ, ಈ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಿದ್ದು ದೊಡ್ಡ
ಸುದ್ದಿಯೇನಲ್ಲ...
ತಿಮ್ಮ ತನ್ನ ಸ್ಮಾರ್ಟ್
ಫೋನ್ ಹಿಡಿದುಕೊಂಡು ಬಂದು ನದಿ ದಾಟಿಸಲು ಅಂಬಿಗನಲ್ಲಿ ಕೇಳಿಕೊಂಡಾಗ, ಗಿರಾಕಿಗಳ ಕೊರತೆಯಿಂದ ಬಳಲುತ್ತಿದ್ದ
ಅಂಬಿಗ ನದಿ ದಾಟಿಸಲು ಒಪ್ಪಿದ. ಕುರುಚಲು ಗಡ್ಡ, ಬಟ್ಟೆಯ ಚೀಲ, ಕೈಯ್ಯಲ್ಲಿ ಸಿಗರೇಟು, ಸ್ಮಾರ್ಟ್
ಫೋನಿನಿಂದ ಹೊರಟ ಇಯರ್ ಫೋನ್ ಕಿವಿಯೊಳಗೆ ರಾರಾಜಿಸುತ್ತಿತ್ತು, ತಿಮ್ಮ ಸಾಮಾನ್ಯದ ಆಸಾಮಿಯಲ್ಲ ಎಂದೆನಿಸಿತು
ಅಂಬಿಗನಿಗೆ.
“ಏನಪ್ಪ ಕಾಲ ಇಷ್ಟು
ಬದಲಾಗಿದೆ, ಯಾಕಿನ್ನೂ ದೋಣಿಗೆ ಎಂಜಿನ್ ಹಾಕಿಸಿಲ್ಲ, ಇನ್ನೂ ಹುಟ್ಟು ಹಾಕ್ತಾ ಇದ್ದೀಯಲ್ಲ...?” ತಿಮ್ಮನ
ಗತ್ತಿನ ಪ್ರಶ್ನೆಗೆ ನಸುನಕ್ಕು ಹೇಳಿದ ಅಂಬಿಗ... “ಏನು ಮಾಡೋದು ಸಾಮಿ... ಇದ್ದದ್ರಲ್ಲೇ ಸುಧಾರಿಸಿಕೊಂಡು
ಹೋಗ್ತಿದೇನೆ. ಈಗ ದೋಣಿಯಲ್ಲ ಹೋಗುವವರು ಕಮ್ಮಿ. ಎಲ್ರೂ ಆಚೆ ಕಡೆಯಿಂದ ಸಿಟಿ ಬಸ್ಸಿನಲ್ಲಿ ಹೋಗ್ತಾರೆ...”
ದೋಣಿ ಕಾಲು ಭಾಗ
ನದಿ ದಾಟಿಲ್ಲ, ಅಷ್ಟರಲ್ಲಿ ವಾಚಾಳಿ ತಿಮ್ಮ ಮಾತನಾಡಲಾರಂಭಿಸಿದ. “ಏನಪ್ಪ ಪೇಪರು, ಮ್ಯಾಗಝೀನ್ ಓದ್ತೀಯಾ...?”
“ಇಲ್ಲ ಸ್ವಾಮಿ, ಒಂದು ಮೊಬೈಲಿದೆ, ಅದ್ರಲ್ಲಿ ವಾಟ್ಸಪ್ಪಿನಲ್ಲಿ ಏನಾದ್ರೂ ಬಂದ್ರೆ ನೋಡ್ತೇನೆ ಅಷ್ಟೆ.
ನಾನು ಸಾಲೆಗೇ ಹೋಗಿಲ್ಲ. ಇನ್ನು ಪೇಪರ್ ಓದೋದು ಎಲ್ಲಿಂದ ಬಂತು?” ಅಂಬಿಗನ ಉತ್ತರದಿಂದ ಉಡಾಫೆಯ ನಗು
ಬಂದು ತಿಮ್ಮನಿಗೆ.
“ಹೌದ... ನಾನು ಫೇಮಸ್
ಕವಿ ಗೊತ್ತಾ... ತುಂಬಾ ಅಭಿಮಾನಿಗಳಿದ್ದಾರೆ. ಫೇಸು ಬುಕ್ಕಿನಲ್ಲಿ ಎರಡೂ ಅಕೌಂಟುಗಳಲ್ಲಿ 5000 ಫಾಲೋವರ್ಸ್
ಇದಾರೆ ಗೊತ್ತಾ...?” ಅರ್ಥ ಆಗದಿದ್ದರೂ ದೊಡ್ಡ ಮನುಷ್ಯನ ಮಾತಿಗೆ ಹೂಂಗುಟ್ಟಿದ ಅಂಬಿಗ... “ಸಾಹಿತ್ಯ
ಅಕಾಡೆಮಿ ಅಂದ್ರೆ ಗೊತ್ತಾ? ರಾಜ್ಯೋತ್ಸವ ಪ್ರಶಸ್ತಿ ಗೊತ್ತಾ...? ಡಿಜಿಟಲ್ ಕವನ ಗೊತ್ತಾ....?” ತಿಮ್ಮನ
ಪ್ರಶ್ನೆಗಳಿಗೆಲ್ಲ “ಇಲ್ಲ ಸಾಮಿ” ಅನ್ನೋದೆ ಅಂಬಿಗನ ಉತ್ತರ ಆಗಿತ್ತು... ಪ್ರಶ್ನೆ ಕೇಳಿ ಸುಸ್ತಾಗಿ
ಕುಳಿತ ತಿಮ್ಮ.
ಈಗ ಅಂಬಿಗನ ಸರದಿ...
ಇತಿಹಾಸ ಮರುಕಳಿಸಿದ ಸನ್ನಿವೇಶವದು.
“ಸಾಮೀ... ನಿಮಗೆ
ಈಜು ಬರುತ್ತದೆಯೇ...?”
“ಹೇ ಹೇ... ಇಲ್ಲಪ್ಪ
ಅದೊಂದು ಬರೋದಿಲ್ಲ ನೋಡು... ಈ ಬರವಣಿಗೆಯಲ್ಲಿ ಮುಳುಗಿದ ನನಗೆ ಈಜುಕಲಿಯಲು ಪುರುಸೊತ್ತೇ ಆಗ್ಲಿಲ್ಲ
ನೋಡು... ಅಲ್ಲ ನದಿ ಮಧ್ಯೆ ಬಂದು ಈಜು ಬರುತ್ತಾ ಅಂತ ಕೇಳ್ತಿದ್ದಿಯಲ್ಲ... ಹೆದರರ್ಸಿದ್ರೆ ಅಷ್ಟೇ...
ದೋಣಿಯಲ್ಲಿ ತೂತು ಗೀತು ಇಲ್ಲ ತಾನೆ...?” ತಿಮ್ಮ ಬೆವರಿ ಹೋದ.
“ಇಲ್ಲ ಸಾಮಿ...
ಗಾಳಿಯ ರಭಸ ಜೋರಾಗಿದೆ... ನದಿ ಉಬ್ಬರ ಹೆಚ್ಚಿದೆ... ಏನೂ ಆಗಬಹುದು. ಇದು ನಾಡದೋಣಿ ಬೇರೆ. ದೋಣಿ
ಮಗುಚಿದರೆ ಈಜಿ ದಡ ಸೇರಬಹುದು. ನಂಗೊತ್ತು, ಆದರೆ ನಿಮ್ಮ ಕಥೆ ಏನು...?”
ಈ ಅಯೋಗ್ಯ ತನ್ನ
ಲೇವಡಿ ಮಾಡುತ್ತಿದ್ದಾನಷ್ಟೇ ಎಂದು ಸಮಾಧಾನ ಮಾಡಿಕೊಂಡ ತಿಮ್ಮನ ಅಹಂ ಜಾಗೃತಗೊಂಡಿತು... “ಲೇಯ್ ನನ್ನಲ್ಲಿ
ಸ್ಮಾರ್ಟ್ ಫೋನ್ ಇದೆ ಕಣೋ... ನಾನು ಅಗ್ನಿ ಶಾಮಕ ದಳದವರಿಗೆ ಕರೆ ಮಾಡ್ತೇನೆ.. ಇಲ್ದಿದ್ರೆ ಗೂಗಲ್
ಸರ್ಚ್ ಕೊಟ್ಟು ಹುಡುಕ್ತೇನೆ ಹೇಗೆ ಬದುಕಬೇಕು ಅಂತ... ನೀನು ನಂಗೆ ಹೇಳಿಕೊಡುವುದು ಬೇಡ... ನಿನ್ನ
ಕೆಲ್ಸ ನೋಡ್ಕೋ ಅಷ್ಟೇ...”
ತಿಮ್ಮ ಮಾತು ಮುಗಿಸುವ
ಮೊದಲೇ ಗಾಳಿಯ ರಭಸ ಜಾಸ್ತಿ ಆಯ್ತು. ದೋಣಿ ಓಲಾಡತೊಡಗಿತು. ಇನ್ನೇನು ಮಗಚುತ್ತದೇನೋ ಎಂಬ ಹಾಗಾಯ್ತು.
ಆತಂಕದಿಂದ ತಿಮ್ಮ ಮೊಬೈಲು ಅನ್ಲಾಕ್ ಮಾಡಿದರೆ ಹೃದಯವೇ ನಿಂತಂತಾಯಿತು. ಎರಡೂ ಸಿಮ್ಮು ನೋ ಸಿಗ್ನಲ್
ತೋರಿಸ್ತಾ ಇತ್ತು! “ಓ ಪುಣ್ಯಾತ್ಮಾ... ನಂಗೆ ಈಜು ಬರುವುದಿಲ್ಲ ಮಾರಾಯ... ಒಮ್ಮೆ ನನ್ನನ್ನು ಬದುಕಿಸು...
ಆಗ ತಮಾಷೆ ಮಾಡಿದ್ದೆಲ್ಲ ಕುಶಾಲಿಗೆ, ಅದರ ಸೇಡು ಈಗ ತೀರಿಸಬೇಡು... ಪ್ಲೀಸ್ ಕಣೋ.. ಬದುಕಿಸು...”
ಆಗ ಮೂಲೆಯಲ್ಲಿದ್ದ
ಗೋಣಿಚೀಲದಲ್ಲಿದ್ದ ಲೈಫ್ ಜಾಕೆಟ್ ತೆಗೆದು ತಿಮ್ಮನಿಗೆ ತೊಡಿಸಿದ ಅಂಬಿಗ ಹೇಳಿದ... “ಸಾಮಿ ನಾವು ಬಡವರಿರಬಹುದು,
ಆದರೆ ನಿಯತ್ತಿದೆ. 200 ವರ್ಷಗಳ ಹಿಂದೆ ಇದೇ ಥರ ಈಜು ಬಾರತ ಪಂಡಿತರೊಬ್ಬರು ನನ್ನ ಅಜ್ಜನ ದೋಣಿಯಲ್ಲಿ
ಪಾಂಡಿತ್ಯದ ಬಗ್ಗೆ ಮಾತನಾಡಿ, ಚಂಡಮಾರುತ ಬಂದಾಗ ದೋಣಿ ಮುಳುಗಿ ಸತ್ತೇ ಹೋಗಿದ್ದರು. ನನ್ನ ಕಾಲದಲ್ಲಿ
ಹಾಗಾಗಬಾರದು ಅಂತ ನಾನು ಲೈಫ್ ಜಾಕೆಟ್ ದಿನಾ ತರ್ತೇನೆ... ನೀವು ಹೆದರಬೇಡಿ...” ನಡುಗುತ್ತಿದ್ದ ತಿಮ್ಮನಿಗೆ
ಜಾಕೆಟ್ ತೊಡಿಸಿದ ಅಂಬಿಗ...
ನಂತರ ನಡೆದದ್ದು
ಐತಿಹಾಸಿಕ... ದೋಣಿ ಮುಳುಗಿದರೂ ತನ್ನ ಮೊಬೈಲ್ ಸಹಿತ ಚಿಲ್ಲರೆ ಕಾಸನ್ನು ಪ್ಲಾಸ್ಟಿಕ್ ಚೀಲದಲ್ಲಿ
ತಲೆಯ ಮೇಲೆ ಕಟ್ಟಿ ತಿಮ್ಮನನ್ನೂ ಎಳೆದುಕೊಂಡು ದಡ ಸೇರಿಸಿದ ಅಂಬಿಗ. ಕೈಗೆ ಸಿಕ್ಕಿದ ಅಷ್ಟೂ ನೋಟುಗಳನ್ನು
ಅಂಬಿಗನಿಗೆ ನೀಡಿ ಜೀವ ಉಳಿಸಿಕೊಂಡ ತಿಮ್ಮ..
ಒಂದು ವಾರದ ನಂತರ
ತಿಮ್ಮ ಬರೆದ “ಪ್ರಕ್ಷುಬ್ಧ ನದಿ ಮತ್ತು ಅಂಬಿಗ” ಕವನಕ್ಕೆ ಅಕಾಡೆಮಿ ಪ್ರಶಸ್ತಿ ಬಂತು... ಪಂಡಿತರನ್ನು
ರಕ್ಷಿಸುವ ಕೊನೆಯ ಹಂತದಲ್ಲಿ ಅಂಬಿಗ ಮಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಯ್ತು... ಬಳಿಕ
ಅವರಿಬ್ಬರೂ ಸುಖವಾಗಿ ಬಾಳಿ ಬದುಕಿದರು!
-ಕೃಷ್ಣಮೋಹನ ತಲೆಂಗಳ.
No comments:
Post a Comment