ರೈಲೆಂಬುದೊಂದು ವಾಹನವಲ್ಲ... ನಿರ್ಲಿಪ್ತ ತತ್ವಜ್ನಾನಿ...







ಕೂ... ಎಂಬ ಕೂಗೊಂದು ಮಾತ್ರವಲ್ಲ. ಸುದೀರ್ಘ ಪಯಣಕ್ಕೊಂದು ನಿರ್ಲಿಪ್ತ ಸಂಗಾತಿಯೂ ಹೌದು ರೈಲು ಪ್ರಯಾಣ. ಅತ್ತ ಸುಸ್ತೂ ಅಲ್ಲ, ಇತ್ತ ಸುಲಭವೂ ಅಲ್ಲ. ಹಾಗೆಂದು ಮುಗಿಯುವುದೇ ಬೇಡ ಎಂಬಂಥ ತೀವ್ರ ಹಂಬಲವೊಂದನ್ನೂ ಹುಟ್ಟು ಹಾಕಬಲ್ಲ ತಾಕತ್ತು ರೈಲು ಬಂಡಿಗಳಿವೆ. ಪ್ರಯಾಣದ ರೇಟು ಕೈಗೆಟಕುವಂಥದ್ದು, ದಿನಗಟ್ಟಲೆ ಪ್ರಯಾಣ ಮಾಡಿದರೂ ಆಯಾಸ ತಿಳಿಯದಂಥದ್ದು, ಸಾಕಷ್ಟು ಲಗೇಜುಗಳನ್ನೂ ಕೊಂಡೊಯ್ಯಬಹುದಾದ್ದು ಎಂಬಿತ್ಯಾದಿ ಸಾಧ್ಯತೆಗಳು ಮಾತ್ರ ರೈಲನ್ನು ಇಷ್ಟದ ಅಕ್ಕಪಕ್ಕ ಸುಳಿಯಬಲ್ಲ ಸಾಧನೆವಾಗಿಸಿದ್ದು ಮಾತ್ರವಲ್ಲ, ರೈಲಿನ ಚುಕುಬುಕು ಓಘ... ನೇರ ಹಳಿಗಳೂ ಹೊಸದೊಂದು ಆಧ್ಯಾತ್ಮವನ್ನು ಕಲಿಸಿಕೊಡಬಲ್ಲವು....


......


ನಮ್ಮ ಕಡೆಯಲ್ಲಂತೂ ರೈಲು ಸ್ಟೇಷನ್ನು ಹುಡುಕಿಕೊಂಡು ಹೋಗುವುದೇ ಕಷ್ಟ. ಜನ ರೈಲಿಗಿಂತಲೂ ಪ್ರೈವೇಟ್ ಬಸ್ಸನ್ನೇ ಇಷ್ಟಪಡುತ್ತಾರೆ. ಕೇರಳದವರು, ಮೈಸೂರು, ಬೆಂಗಳೂರು ಕಡೆಯವರಂತೆ ಹುಡುಕಿ ಹುಡುಕಿ ರೈಲು ಪ್ರಯಾಣ ಮಾಡುವುದಿಲ್ಲ, ಕೆಲವೊಮ್ಮೆ ಕರಾವಳಿಯವರಿಗೆ ರೈಲಿನ ರುಚಿ ತಿಳಿದಿಲ್ಲವೋ ಎಂಬಂಥೆ ಭಾಸವಾಗುವುದೂ ಇದೆ. ರೈಲು ಸ್ಟೇಷನ್ನು ದೂರದಲ್ಲೆಲ್ಲೋ ಇರುತ್ತದೆ, ಕನಿಷ್ಠ ಹೊತ್ತಿನಲ್ಲಿ ನಿಂತು ಹೊರಡುತ್ತದೆ... ಸಾಮಾನ್ಯ ಬೋಗಿಯ ಪ್ರಯಾಣ ರಾತ್ರಿ ವೇಳೆ ಎಷ್ಟು ಸೇಫೋ ಏನೋ ಎಂಬಿತ್ಯಾದಿ ಚಿತ್ರ ವಿಚಿತ್ರ ಕಾರಣಗಳಿಂದಲೂ ರೈಲನ್ನು ಮುಗಿಬಿದ್ದು ಏರುವುದಿಲ್ಲ...
ಏನೇ ಆದರೂ ರೈಲನ್ನು ಅರ್ಥ ಮಾಡಿಕೊಂಡವರು, ರೈಲು ಪ್ರಯಾಣವನ್ನು ಸ್ಟಡಿ ಮಾಡಿದವರು, ರೈಲು ಪ್ರಯಾಣವನ್ನು ಧನಾತ್ಮಕವಾಗಿ ತೆಗೆದುಕೊಂಡವರು, ರೈಲಿನ ಟಿಕೆಟ್ ಬುಕ್ಕಿಂಗು, ರೈಲಿನ ಪ್ಲಾಟ್ ಫಾರಂ ಲೆಕ್ಕಾಚಾರಗಳು, ರೈಲಿನ ಓಡಾಟವನ್ನು ಆನ್ ಲೈನಿನಲ್ಲೇ ಕಂಡು ಹಿಡಿದು ಲೆಕ್ಕಾಚಾರ ಹಾಕಿ ಸಮಯಕ್ಕೆ ಸರಿಯಾಗಿ ತಲಪುವವರು, ರೈಲುಗಳನ್ನು ಬದಲಿಸಿ ದೇಶವನ್ನೇ ಸುತ್ತಿದವರಿಗೆಲ್ಲ ರೈಲಿನ ಮೇಲೆ ವಿಚಿತ್ರ ಲವ್ವು ಇದೆ... ಬಲ್ಲವನೇ ಬಲ್ಲ ರೈಲು ಪ್ರಯಾಣದ ಸವಿಯ ಅನ್ನುವ ಹಾಗೆ...

.....

ರಿಸರ್ವ್ ಮಾಡಿದ ಸೀಟಿನಲ್ಲಿ ನಮಗಿಂತಲೂ ಮೊದಲೇ ಬಂದು ಕುಳಿತು ಜಗಳ ಮಾಡ್ತಾರೆ, ಮೂರೇ ಮಂದಿ ಕೂರಲು ಇರುವ ಸೀಟಿನಲ್ಲೂ ನಮ್ಮನ್ನು ನೂಕಿ ಐದಾರು ಮಂದಿ ಜಾಗ ಗಿಟ್ಟಿಸಿರುತ್ತಾರೆ. ಮೇಲೆ ಸರಂಜಾಮು ಇಡುವ ಜಾಗದಲ್ಲೂ ಒತ್ತೊತ್ತಿ ಕುಳಿತು ಬೋಗಿಯೊಳಗೆ ಉಸಿರು ಕಟ್ಟಿಸುತ್ತಾರೆ ಎಂಬಿತ್ಯಾದಿ ಅಪವಾದಗಳನ್ನು ಬಿಟ್ಟೇ ನಾನಿದನ್ನು ಹೇಳುತ್ತಿದ್ದೇನೆ...

......

ತುಂಬ ಸಮಯದ ಬಳಿಕ ರೈಲನ್ನು ಹೊಕ್ಕ ಕೂಡಲೇ ಪುಟ್ಟದೊಂದು ಗೂಡಿಗೆ ಕಾಲಿಟ್ಟ ಹಾಗೆ... ಸಣ್ಣದೊಂದು ಕಿಟಕಿ... ಮೇಲೆ ನಿರ್ವಿಕಾರವಾಗಿ ತಿರುಗುತ್ತಿರುವ ದೊಡ್ಡ ಫ್ಯಾನು, ಕಿಟಕಿಯ ಗಾಜಿನಲ್ಲಿ ಪಾಚಿಕಟ್ಟಿದ ಕಡು ಹಸಿರು, ಕಪ್ಪಿನ ಕಲೆಗಳು, ನಿನ್ನೆಯ ಪ್ರಯಾಣಿಕರು ತಿಂದೆಸೆದ ಕಡಲೆ ಕಾಯಿ ಸಿಪ್ಪೆಯ ಅವಶೇಷಗಳು, ಅದೇ ನೀಲಿ ಬಣ್ಣದ ದಪ್ಪದ ಸೀಟು, ಹಗಲೂ ಉರಿಯುತ್ತಿರುವ ಪುಟ್ಟ ಪುಟ್ಟ ಟ್ಯೂಬು ಲೈಟುಗಳು...

ಅದೇ ರೈಲು ಹೊರಟು ನಾಲ್ಕಾರು ಸೇತುವೆ, ಸುರಂಗಗಳನ್ನು ದಾಟಿದ ಬಳಿಕ ಒಂಥರಾ ಮನೆಯಂಥ ಫೀಲಿಂಗು,... ಅಲ್ಲೆ ಟಿಫಿನ್ ಬಾಕ್ಸ್ ತೆಗೆದು ಉಣ್ಣು, ತಿನ್ನು, ಹರಟೆ ಹೊಡಿ, ಮೊಬೈಲಿನಲ್ಲಿ ಮಾತನಾಡು, ಪುಸ್ತಕ ತೆಗೆದು ಓದು, ಇಸ್ಪೀಟು, ಲುಡೋ ಆಟವಾಡು, ಅಂತ್ಯಾಕ್ಷರಿ ಮಾಡು, ಜನ ಖಾಲಿ ಇದ್ದರೆ ಸೀಟಿನಲ್ಲೇ ಮಲಗಿ ನಿದ್ರೆ ಮಾಡು... ಯಾರೇನೂ ಅಡ್ಡಿ ಮಾಡುವುದಿಲ್ಲ. ಅಲ್ವ....
ಕುಳಿತು ಸುಸ್ತಾದರೆ ಅಷ್ಟೂ ರೈಲಿನುದ್ದಕ್ಕೂ ಬೋಗಿಯಿಂದ ಬೋಗಿಗೆ ಓಡಾಡಬಹುದು, ಮೊಬೈಲು ಚಾರ್ಜ್ ಮಾಡಬಹುದು, ಬಾಗಿಲಿನ ಅಂಚಿನ ಕಂಬಿ ಹಿಡಿದು ನಿಂತು ರಭಸದ ಗಾಳಿಯ ಸುಖ ಅನುಭವಿಸಬಹುದು. ಅವಸರಕ್ಕೆ ಬಾಗಿಲಿನ ಪಕ್ಕದಲ್ಲೇ ಟಾಯ್ಲೆಟ್ಟೂ ಇದೆ. ಮುಖ ತೊಳೆಯಲು ಬೇಸಿನ್ ಕೂಡಾ...

.....

ಮತ್ತೇನು ಬೇಕು.. ರಾತ್ರಿಯಾದರೆ ಸ್ಲೀಪರೆಂಬೋ ಹಾಸಿಗೆ, ತೊಟ್ಟಿನಲ್ಲಿ ತೂಗಿದಂತೆ ಭಾಸವಾಗುವ ರೈಲಿನ ಲಯಬದ್ಧ ವಾಲಾಟ. ಜಂಪ್ ಆಗುವುದಿಲ್ಲ, ವಾರೆಯಾಗುವುದಿಲ್ಲ, ಸಡನ್ ಬ್ರೇಕ್ ಹಾಕಿ ನಿಲ್ಲುವುದಿಲ್ಲ, ಹೇಳದೇ ಕೇಳದೇ ಎಲ್ಲೆಲ್ಲೋ ನಿಲ್ಲುವುದಿಲ್ಲ... ಹೊತ್ತು ಗೊತ್ತಿನ ಪರಿವೆ ಇಲ್ಲದೆ ಗತ್ತಿನಿಂದ ಗಮ್ಯದತ್ತಲೇ ಓಡುವ ರೈಲು ಗುರಿ ಸೇರುವ ತನಕ ನಿಲ್ಲುವುದೇ ಇಲ್ಲ.... ಎಷ್ಟೇ ದೂರವಾದರೂ ಸರಿ.

.....

ಎಲ್ಲೋ ದೂರದ ಎಂಜಿನಿನಲ್ಲಿರುವ ಚಾಲಕ ಯಾರೆಂದೇ ನಮಗೆ ಕಾಣಿಸುವುದಿಲ್ಲ. ಟಿ.ಸಿ.ಗಳು ಎಲ್ಲಿಂದ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ. ಯಾವಾಗ ಬರುತ್ತಾರೆ ಎಂದೇ ಗೊತ್ತಾಗುವುದಿಲ್ಲ... ಪ್ರಯಾಣಿಕರಿಗೂ, ಸಿಬ್ಬಂದಿಗೂ ರೈಲಿನಲ್ಲಿ ಮಾತುಕತೆಯಾಗುವುದು ಅಷ್ಟರಲ್ಲೇ ಇದೆ... ಚಾಯ್ ಚಾಯ್ ಎಂದು ಓಡಾಡುವ ಚಾಯ್ ವಾಲಾಗಳು, ಊಟ ತರುವವರು, ಅದೂ ಇದೂ ಮಾರಾಟಕ್ಕೆ ಬಂದು ರೈಲಿನಲ್ಲಿ ಮಾರ್ಕೆಟು ಸೃಷ್ಟಿಸುವವರು, ಕಡಲೆ ಬೀಜ ತಿನ್ನುವವರು, ಸೀಟಿನಡಿ ಕಸ ಗುಡಿಸಿ ದುಡ್ಡು ಕೇಳುವವರು, ಪೆನ್ನು, ಆಟಿಕೆ, ಪುಸ್ತಕ, ಪೇಪರು, ಅಂಗಿ, ಅಲಂಕಾರಿಕ ವಸ್ತುಗಳೆಲ್ಲವನ್ನೂ ತಂದು ವರ್ಣನೆ ಮಾಡಿ ಖರೀದಿ ಮಾಡುವಷ್ಟು ತಾಕತ್ತಿರುವ ಸೇಲ್ಸುಮ್ಯಾನುಗಳು ಎಲ್ಲರಿಗೂ ಜಾಗ ಕೊಟುವ ಬೋಗಿಗಳು ಹೊರಗಿನಿಂದ ಮಾತ್ರ ನಿರ್ಲಿಪ್ತವಾಗಿರುತ್ತವೆ ಅಷ್ಟೆ...

......

ಸುಮ್ಮನೆ ರೈಲು ಹೋಗುವಾಗ ಕಿಟಕಿಯತ್ತ ಮುಖ ವಾಲಿಸಿ ಹೊರಗೆ ದೃಷ್ಟಿ ಬೀರಿ. ಬಸ್ಸಿನ ಮಾರ್ಗದಲ್ಲಿ ಕಾಣದ್ದು ಎಷ್ಟು ಸಂಗತಿಗಳು, ದೃಶ್ಯಗಳಿಗೆ ಸಾಕ್ಷಿಗಳಾಗಬಹುದು. ರೈಲಿನ ವೇಗ, ಆ ಚುಕುಬುಕು ಸದ್ದು, ರೈಲು ನಿಲ್ದಾಣದಲ್ಲಿ ನಿಲ್ಲುವ ಮೊದಲು ಬಿಡುವ ನಿಟ್ಟುಸಿರು... ಹೊರಡುವ ಮೊದಲಿನ ನಿಧಾನಗತಿಯ ಆರಂಭ, ತೆಳುಪಾದ ಹೊಗೆ, ವಿಚಿತ್ರವಾದ ಹಾರನ್ನು, ನಂತರದ ಅಮಿತ ವೇಗ... ಇವೆಲ್ಲ ಗಂಟೆಗಟ್ಟಲೆ ರೈಲಿನಲ್ಲಿ ಓಡಾಡಿದವನಿಗೆ ಬದುಕಿನ ಭಾಗವೇನೋ ಅನ್ನಿಸುತ್ತದೆ... ಪುಟ್ಟ ಗೂಡು ಹೊಕ್ಕಂತೆ ಭಾಸವಾದ ರೈಲು ಸುದೀರ್ಘ ಸಾಂಗತ್ಯ ಮುಗಿಸಿ ಇಳಿಯುವ ಧಾವಂತದಲ್ಲಿ ಅಷ್ಟೊತ್ತು ಕಟ್ಟಿಕೊಟ್ಟ ಪುಟ್ಟ ಮನೆಯಂಥ ಭಾಗವನ್ನು ತ್ಯಜಿಸಿ ಇಳಿಸಿದಂಥ ಹೇಳಲಾಗದ ಒಂದು ವಿದಾಯ ಗೀತೆಯನ್ನು ನುಡಿಸುತ್ತಿರುತ್ತದೆ...

.....

ಅಷ್ಟಕ್ಕೂ ರೈಲು ಓಡದ ಜಾಗವೆಲ್ಲಿದೆ ಹೇಳಿ... ಮಂಗಳೂರು-ಗೋವಾ ಹೋಗುವಾಗ ಸಿಗುವ ಸೇತುವೆಗಳು, ಸುರಂಗಗಳು, ಮಂಗಳೂರಿನಿಂದ ಬೆಂಗಳೂರಿಗೆ ಸಾಗುವಾಗ ಎಢಕುಮೇರಿ ಘಾಟ್ ಭಾಗದ ರುದ್ರ ರಮಣೀಯ ದೃಶ್ಯಗಳು, ಗೋವಾದಿಂದ ಪೂನಾಗೆ ಹೋಗುವಾಗ ಅತ್ಯಾಕರ್ಷಕ ದೂದ್ ಸಾಗರ್ ಜಲಪಾತದ ಸೆರಗಿನಲ್ಲಿ ರೈಲು ಹಾದುಹೋಗುವ ರೋಮಾಂಚನ, ರಾಮೇಶ್ವರದಲ್ಲಿ ಸಮುದ್ರದ ನಡುವಿನ ಸೇತುವೆಯನ್ನೇ ದಾಟಿ ರೈಲು ಸಾಗುವ ಅಚ್ಚರಿ... ಊಟಿಯಲ್ಲಿ ಘಾಟಿಯನ್ನೇ ದಾರಿಯಾಗಿಸಿ ಸಾಗುವ ಚುಕುಬುಕು ರೈಲು... ಹೀಗೆ ಎಷ್ಟೊಂದು ಲವಲವಿಕೆಯ ದಾರಿಗಳಿವೆ ರೈಲಿನ ಚರಿತ್ರೆಯಲ್ಲಿ... ದಟ್ಟ ಕಾಡು, ಮನುಷ್ಯರೇ ನಡೆದಾಡದ ಬಯಲುಗಳು, ಗುಡ್ಡದ ದೊಡ್ಡ ದೊಡ್ಡ ಗೋಡೆಗಳ ಬಳಸಿ ರೈಲು ಸಾಗುವಾಗ ಬಿಸಿಲಿನಿಂದ ಝಗಮಗಿಸುವ ಬೆಟ್ಟದ ತುತ್ತತುದಿಯಲ್ಲೊಂದು ಪುಟ್ಟದ ದೇವಸ್ಥಾನದ ಧ್ವಜ ಹಾರುವುದು ಕಾಣುತ್ತದೆ... ಅಷ್ಟೆತ್ತರಕ್ಕೆ ಹತ್ತಿ ಪೂಜೆ ಮಾಡುವವರಾರು ಎಂದು ಯೋಚಿಸುವ ಮೊದಲೇ ಮುಂದಿನ ದೃಶ್ಯದಲ್ಲಿ ದೂರದ ಕಾಡಿನ ನಡುವೆಯೊಂದು ಜಲಪಾತ ಬಿಳಿಯ ನೂಲೊಂದು ಇಳಿಬಿಟ್ಟಂತೆ ಕಾಣಿಸತೊಡಗುತ್ತದೆ. ಕ್ಯಾಮೆರಾ ಸಿದ್ಧಪಡಿಸುವಷ್ಟರಲ್ಲಿ ಆ ದೃಶ್ಯ ಮರೆಯಾಗಿರುತ್ತದೆ....

.....

ಸಂಜೆಯ ಹೊತ್ತು ಸುಮ್ಮನೆ ರೈಲಿನ ಬಾಗಿಲಿನ ಮೆಟ್ಟಿಲುಗಳ ಮೇಲೆ ಕುಳಿತಿದ್ದರೆ (ಕಂಬಿ ಭದ್ರವಾಗಿ ಹಿಡಿಯುವುದು ಕಡ್ಡಾಯ), ಕೆಳಗಿನ ಜನಸಂಚಾರ ನೋಡುವುದೇ ಸೊಗಸು... ಸಂಜೆಯ ಹೊತ್ತಿಗೆ ಸಾಲು ಮನೆಗಳ ಮುಂದೆ ಗುಂಪು ಗುಂಪಾಗಿ ಕುಳಿತು ಮಾತನಾಡುವವರು, ರೈಲ್ವೇ ಕ್ರಾಸಿಂಗುಗಳ ಆಚೀಚೆ ಸಾಲುಗಟ್ಟಿ ನಿಂತ ಬೈಕು, ಕಾರು, ರಿಕ್ಷಾಗಳವರು ಈ ರೈಲು ಎಷ್ಟೊತ್ತಿಗೆ ಪಾಸ್ ಆಗುತ್ತದಪ್ಪ ಎಂದು ಕಾಯುತ್ತಿರುವುದು, ರೈಲಿಗೆ ಸರಿಗಟ್ಟುವಂತೆ ಪಕ್ಕದ ರಸ್ತೆಯಲ್ಲಿ ಸಾಗಿ ಹೋದರೂ ಏದುಸಿರು ಬಿಟ್ಟು ರೈಲಿನೊಂದಿಗೆ ಏಗಲಾರದೆ ಹಿಂದುಳಿಯುವ ದೊಡ್ಡ ದೊಡ್ಡ ಲಾರಿಗಳು... ಸಂಜೆಯ ವಾಕಿಂಗಿಗೆ ರೈಲ್ವೇ ಸ್ಟೇಷನ್ನಿಗೆ ಬರುವವರು, ಪಕೋಡಾ ತಯಾರಿ ಮಾಡಿ ಗಿರಾಕಿಗಳಿಗೆ ಸ್ಟೇಷನ್ನಿನಲ್ಲಿ ಕಾಯುವವರು, ವಾಕಿಂಗು ಸ್ಟಿಕ್ಕು ಹಿಡಿದು ಯಾರಿಗೋ ಕಾದ ಹಾಗೆ ರೈಲ್ವೇ ಸ್ಟೇಷನ್ನಿನ ತುಕ್ಕು ಹಿಡಿದ ಬೆಂಚುಗಳಲ್ಲಿ ಕುಳಿತಿರುವ ವೃದ್ಧ ಜೀವಗಳು, ಎಷ್ಟು ಗಿರಾಕಿಗಳು ಸಿಕ್ಕಾರು ಎಂದು ಕಾತರದಿಂದ ಕಾದಿರುವ ಆಟೋವಾಲಾಗಳು, ಸೂರ್ಯ ಕಂತುಹ ಹೊತ್ತಿಗೆ ಕಂಬಳಿ ಹೊದ್ದು ದನಗಳ ಹಿಂಡನ್ನು ಮನೆಗೆ ಅಟ್ಟುವವರು, ಸೇತುವೆಯ ತುದಿಯ ಕಂಬಿಯ ಅಂಚಿನಲ್ಲಿ ಕುಳಿತು ಗಾಳಿ ಹಾಕಿ ಮೀನು ಹಿಡಿಯುವವರು, ಮೈದಾನದಲ್ಲಿ ಕ್ರಿಕೆಟ್ ಮುಗಿಸಿ ಮನೆಗೆ ಹೋಗುವವರು, ಸೈಕಲ್ಲಿನಲ್ಲಿ ಅವಸರವಸರವಾಗಿ ಎತ್ತಲೋ ಸಾಗುವವರು, ಜಡಿಗುಟ್ಟಿ ಸುರಿದ ಮಳೆಗೆ ಗದ್ದೆ ಉಳುವವರು, ಪೈರು ಕೊಯ್ಯುವವರು, ರೈಲ್ವೇ ಹಳಿಯ ಅಂಚಿನಲ್ಲೇ ತೊನೆಯುವ ಜೋಳ, ಬತ್ತದ ಗದ್ದೆಗಳ ಹಸಿರಿನ ತುಂಬಾ ಹಾರುತ್ತಿರುವ ಬಿಳಿ ಕೊಕ್ಕರೆಗಳು.... ಹೀಗೆ ಕಾಣದ ದೃಶ್ಯಗಳಿಲ್ಲ. ಸಿನಿಮಾ ಪರದೆಯ ಮೇಲೆ ಮಿಂಚಿ ಮರೆಯಾಗುವ ಶಾಟ್ ಗಳ ಹಾಗೆ... ಇಡೀ ಜಗತ್ತನ್ನೇ ತೋರಿಸಿಕೊಡಬಲ್ಲುದು, ಇನ್ನೆಲ್ಲೂ ಸಿಗಲಾರದ ಟಿಪಿಕಲ್ ಭಾರತದ ಇಂಚಿಂಚೂ ದರ್ಶನ ರೈಲ್ವೇ ಹಳಿಗಳ ಪಕ್ಕದಲ್ಲೇ ಆಗುತ್ತದೆ... ನೋಡುವ ತಾಳ್ಮೆ, ಗ್ರಹಿಸುವ ಮನಸ್ಸು ಬೇಕಷ್ಟೇ...

.....

ರೈಲು ನಿರ್ವಿಕಾರ ಚಿತ್ತದ ವಸ್ತುವಲ್ವೇ... ನೀವು ಬಳಲಿ ನಿದ್ರೆಗೆ ಶರಣಾದಾಗಲೂ ರೈಲು ದಡ್ ಬಡ್... ಎಂದು ಹೋಗುತ್ತಲಿರುತ್ತದೆ... ಮತ್ತೆ ನಿದ್ರೆ ತಿಳಿದೆದ್ದಾಗಲೂ ಅದೇ ಏಕತಾನತೆಯ ಸದ್ದು... ಅವಸರಕ್ಕೆ ಬಿದ್ದವರ ಹಾಗೆ ಓಡುತ್ತಲೇ ಇರುತ್ತದೆ. ಆ ಧಾವಂತಕ್ಕೆ ಪ್ರಯಾಣಿಕರ ಆತಂಕ, ಸಂತೋಷ, ನಿರೀಕ್ಷೆ, ಕಾತರಗಳ ಹಂಗಿರುವುದಿಲ್ಲ. ಗಮ್ಯ ತಲಪಿ ಮತ್ತೆ ಮರಳುವ ಧಾವಂತವಷ್ಟೇ... ಸೂಚನೆಗಳು ಬಂದಲ್ಲಿ ನಿಲ್ಲಿಸಿ, ಸಿಗ್ನಲ್ ಪಾಲಿಸಿ ಸುರಕ್ಷಿತವಾಗಿ ತಲಪುವ ಕರ್ತವ್ಯ ಪ್ರಜ್ನೆಯಷ್ಟೇ... ಕೆಲವೊಮ್ಮೆ ಯಾವುದೋ ರೈಲಿಗೆ ಕ್ರಾಸಿಂಗ್ ನೀಡಲು ಗಂಟೆಗಟ್ಟಲೆ ನಿಲ್ಲುವುದೂ ಇದೆ. ಪ್ಲಾಟ್ ಫಾರಂ ಇಲ್ಲದಲ್ಲಿ ಒಂದಷ್ಟು ಹೊತ್ತು ನಿಟ್ಟುಸಿರು ಬಿಡುತ್ತಾ ತನ್ನಿಂತಾನೇ ನಿಂತಾಗಲೂ ಹೋ ಡ್ರೈವರೇ ಯಾಕೆ ರೈಲು ನಿಲ್ಲಿಸಿದಿರಿ ಎಂದು ಕೇಳಲು ರೈಲಿನಲ್ಲಿ ಡ್ರೈವರ್ ಸಿಗುವುದಿಲ್ಲ... ಸ್ವಲ್ಪ ಬೇಗ ಹೋಗಿ ಮಾರಯ್ರೇ ಅಂತ ತಲೆ ತಿನ್ನಲು ಕಂಡಕ್ಟರೂ ಕಾಣುವುದಿಲ್ಲ. ಸ್ವಲ್ಪ ಅಜಸ್ಟ್ ಮಾಡಿ ಮುಂದೆ ಹೋಗಿ, ಬದೀಗಿ ಸರೀರಿ, ಮಕ್ಳಿದಾರೆ ಸ್ವಲ್ಪ ಸೀಟು ಕೊಡಿ, ಬಾಗಿಲಿನಲ್ಲಿ ನೇತಾಡಬೇಡಿ, ಕಸ ಎಸೆಯಬೇಡಿ, ಒತ್ತೊತ್ತಾಗಿ ನಿಲ್ಲಿ ಎಂದೆಲ್ಲ ಮಾರ್ಗದರ್ಶನ ಮಾಡುವ ಕಂಡಕ್ಟರು, ಕ್ಲೀನರು ಇಲ್ಲದಿದ್ರೂ ಜನ ತಾವೇ ತಾವಾಗಿ ವರುಷಗಳಿಂದ ರೈಲಿನ ಮನಸ್ಥಿತಿಗೆ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ...

ಎಲ್ಲ ಅವರವರೇ ಅಜಸ್ಟ್ ಮಾಡಿಕೊಳ್ತಾರೆ. ತಾವೇ ಜನರನ್ನು ದೂಡಿ ಕೂರುವುದರಿಂದ ಹಿಡಿದು ನೇತಾಡಿ, ಹಾರಾಡಿ ಪ್ರಯಾಣಿಸುವ ವರೆಗೆ ಟಾಯ್ಲೆಟ್ಟಿಗೆ ನೀರು ಹಾಕದೆ ಬರುವುದು, ಸೀಟಿನಡಿಗೇ ಕಸ ಎಸೆಯುವುದು, ಪ್ರತಿ ಬೋಗಿಯಲ್ಲೂ ಕಸದ ಬುಟ್ಟಿ ಇದ್ದರೂ ಕಿಟಕಿಯಿಂದಲೇ ಹೊರಗೆ ಗ್ಲಾಸು, ಲೋಟೆ ಎಸೆಯುವವರು, ದೊಡ್ಡದಾಗಿ ಕಿರುಚುವವರು, ಮುಂಗಡ ಕಾಯ್ದಿರಿಸಿದ ಸೀಟಿನಲ್ಲಿ ಅಕ್ರಮವಾಗಿ ಕುಳಿತು, ಮತ್ತೆ ಪಾರ್ಟಿ ಬಂದಾಗಲೂ ಏಳದೆ, ಜಗಳ ತೆಗೆದು ಹಾರಾಡುವವರು... ಎಲ್ಲ ರೀತಿಯವರೂ ಇರುತ್ತಾರೆ ರೈಲಿನಲ್ಲಿ.

ಯಾರೂ ಯಾರ ಬಗ್ಗೆಯೂ ತಲೆಕೆಡಿಸದ ಹಾಗೆ... ರೈಲು ಏರಿದ ತಕ್ಷಣ ಕಿವಿಗೆ ಇಯರ್ ಫೋನ್ ಹಾಕಿ ಕುಳಿತು ಪಕ್ಕದಲ್ಲಿ ಬಾಂಬು ಬಿದ್ದರೂ ತಲೆಕೆಡಿಸದೆ ನಿಲ್ದಾಣ ಬಂದಾಗ ಇಳಿದು ಹೋಗುವ ನಿತ್ಯ ಪ್ರಯಾಣಿಕರು ಸಾಕಷ್ಟು ಮಂದಿ ಕಾಣಸಿಗುತ್ತಾರೆ.... ತಾವಾಗಿ ಹರಟೆಹೊಡೆಯುವವರು, ಕಷ್ಟಸುಖ ಕೇಳುವವರು, ಒಂದೇ ಕುಟುಂಬದವರ ಹಾಗೆ ಮಾತನಾಡಿ ಆಹಾರ ಹಂಚುವವರೂ ಇರುತ್ತಾರೆ... ಅವರವರ ಭಾವಕ್ಕೆ... ಭಕುತಿಗೆ....

.......

ಆಗಲೇ ಹೇಳಿದ ಹಾಗೆ ರೈಲೊಂದು ಧ್ಯಾನಸ್ಥ ವಾಹನ. ಭಯಂಕರ ಸದ್ದಿನ ನಡುವೆಯೂ ಒಂದು ಏಕಾಂತ ಸಿಗುತ್ತದೆ. ತಗಡಿನ ಬೋಗಿ, ಕಬ್ಬಿಣದ ಹಳಿಗಳು, ದಾರಿ ಮಾಡಿ ಕೊಡುವ ಸಿಗ್ನಲ್ಲುಗಳು... ಎಲ್ಲವೂ ದೂರದೊಂದು ದಾರಿಯ ಕಡೆಗೆ ನಡೆಸುವ ವಾಹಕಗಳು.

ಸುದೀರ್ಘ ದಾರಿಯ ನಡುವಿನ ಸಣ್ಣ ಪುಟ್ಟ ಲೆಕ್ಕಾಚಾರಗಳೆಲ್ಲ ರೈಲಿನ ಖಾತೆಗೆ ಬೀಳುವುದಿಲ್ಲ. ಹೋಗುವ ಹಳಿಗಳ ನಡುವೆ ವ್ಯಕ್ತಿಯೇ ಮಲಗಿದ್ದರೂ ಸರಿ, ರೈಲಿನ ಚಕ್ರಗಳು ನಿರ್ವಿಕಾರವಾಗಿ ತಲೆಯನ್ನೇ ತುಂಡರಿಸುತ್ತವೆ. ಹರಿಶ್ಚಂದ್ರನದ ಕೊಡಲಿ ಲೋಹಿತಾಶ್ವನ ತಲೆ ಕತ್ತರಿಸಿದ ಹಾಗೆ. ಹಳಿಯ ಮೇಲೆ ದೇಹ ಕಂಡರೂ ಚಾಲಕ ಬ್ರೇಕು ಅದುಮಲು ಆಗುವುದಿಲ್ಲ. ವ್ಯವಸ್ಥೆಯೇ ಹಾಗಿರುತ್ತದೆ....
ಸೇತುವೆ ಮೇಲೆ ನಿಧಾನವಾಗಿ ಸಾಗುವಾಗ ಕಾಣುವ ಸೂರ್ಯಾಸ್ತದ ಹೊಂಬಣ್ಣದ ನೀರು, ಮುರುಡೇಶ್ವರದಲ್ಲಿ ಕಾಣುವ ಅಷ್ಟೆತ್ತರದ ಗೋಪುರ, ಶಿವನ ಜಟೆಯ ದೃಶ್ಯ, ಎಡಕುಮೇರಿಯಾಚಿನ ಹೈವೇಯಲ್ಲಿ ಲಾರಿ, ಬಸ್ಸುಗಳು ಮಕ್ಕಳಾಟಿಕೆಯಂತೆ ತೋರುವ ಖುಷಿ, ಮಳೆ ಬಂದಾಗ ಕಿಟಕಿಯಾಚೆ ಹನಿಗಳು ತೊಟ್ಟಿಕ್ಕುವ ಸೊಗಸು, ಗುಹೆಗಳು ಬಂದಾಗ ತುಂಬುವ ಡೀಸೆಲ್ ಹೊಗೆಯ ಘಾಟು, ಆ ಕತ್ತಲೆ, ಗುಹೆಯ ಕೊನೆಗೆ ಬೆಳ್ಳನೆ ಹೊರಪ್ರಪಂಚದ ಬೆಳಕು ನೀಡುವ ವಿಚಿತ್ರ ಖುಷಿ, ರಾತ್ರಿಯ ನೀರವದಲ್ಲಿ ಕ್ಷಿತಿಜದಲ್ಲಿ ಕಾಣುವ ದಿಗಂತದ ಪುಟ್ಟು ಪುಟ್ಟ ದೀಪಗಳು ಏನು, ಎತ್ತ ಎಂದೇ ಅರಿವಾಗದ ಭಾವ, ಹೆಸರು ಗೊತ್ತಿಲ್ಲದ ಬೆಟ್ಟಗಳು, ಬಾಳೆಗಿಡಗಳ ತೋಟ, ಕಂಡು ಕೇಳರಿಯದ ಹೂಗಳ ಸಾಲು, ಪುಟ್ಟು ಪುಟ್ಟ ಗ್ರಾಮಗಳ ಮಣ್ಣಿನ ಮನೆಗಳು, ಕುರಿಗಳ ಮಂದೆ, ದೂರದಲ್ಲಿ ಅಲೆಗಳೆಬ್ಬಿಸುವ ಸಾಗರದ ಕರೆ.... ಏನೆಲ್ಲ ಕಾಣಿಸುತ್ತವೆ ರೈಲಿನ ದಾರಿಯಲ್ಲಿ...
ಅದೇ ಹೇಳುತ್ತಾರಲ್ಲ... ರೈಲಿನ ಹಳಿಗಳು ಕರೆಂಟಿನ ವಯರುಗಳ ಹಾಗೆ... ಎಂದಿಗೂ ಸಂಧಿಸುವುದಿಲ್ಲ. ಅಕ್ಕಪಕ್ಕವೇ ಇದ್ದರೂ ಒಂದೇ ಅಂತರವಿಟ್ಟು ಹೋಗುತ್ತಲೇ ಇರುತ್ತವೆ... ಎಲ್ಲೋ ಜೋಡಿಗಳಾದರೂ ಒಂದಷ್ಟು ಹೊತ್ತು ಮಾತ್ರ ಪಥ ಬದಲಾವಣೆ ಜಾಗದಲ್ಲಿ ಇರಬಹುದೇನೋ... ಮತ್ತದೇ ಅಂತರ, ಸಾವಿರಗಟ್ಟಲೆ ಮೈಲು ಕ್ರಮಿಸಿದರೂ ಹಳಿಗಳು ಸಂಧಿಸುವುದೇ ಇಲ್ಲ...

ಸ್ಟೇಷನ್ ನಿಂದ ರೈಲು ಏರುವಾಗ ಯಾವುದೇ ಭಾವ ದೀಪ್ತಿ ಇಲ್ಲದಿದ್ದರೂ ಒಂದಷ್ಟು ಹೊತ್ತು ಕುಳಿತು ಖುಷಿ ಪಟ್ಟು ನಮ್ಮ ಸ್ಟೇಷನ್ನು ಬಂದಾಗ ಎಲ್ಲ ಅಚಾಟ್ ಮೆಂಟುಗಳನ್ನೂು ಬಿಟ್ಟು ಇಳಿಯಲೇಬೇಕು. ಇಷ್ಟು ಹೊತ್ತು ಕುಳಿತದ್ದಕ್ಕೆ ಕನಿಷ್ಠ ಥ್ಯಾಂಕ್ಸ್ ಹೇಳಲು ಅಲ್ಲಿ ಯಾರೂ ಇರುವುದಿಲ್ಲ. ಎಲ್ಲರಿಗೂ ಅವರವರ ಸ್ಟೇಷನ್ನುಗಳಲ್ಲಿ ಇಳಿಯುವ ಧಾವಂತ ಇರುತ್ತದೆ. ರೈಲಿನ ಸ್ಟೇಷನ್ನಿಗೆ ನೀವು ತಡವಾಗಿ ಹೋದರೆ ನಿಮಗಾಗಿ ರೈಲು ಕಾಯುವುದಿಲ್ಲ. ರೈಲು ಕಂಡಕ್ಟರು ರೈಲು ಹೊರಡುವ ಮೊದಲು ನಿಮಗೆ ಕರೆ ಮಾಡಿ ಕರೆಯುವುದಿಲ್ಲ. ನಾವು ರೈಲಿಗೆ ಹೊಂದಿಕೊಳ್ಳಬೇಕೇ ವಿನಹ ರೈಲು ನಮ್ಮ ಸಮಯಕ್ಕೆ ಕಾಯುವುದಿಲ್ಲ... ನಮ್ಮನ್ನು ಇಳಿಸಿದ ಬಳಿಕವೂ ರೈಲಿಗೆ ಮತ್ತೆಷ್ಟೋ ದೂರ ಹೋಗುವುದಕ್ಕಿರುತ್ತದೆ.... ನೋಡ ನೋಡುತ್ತಿದ್ದಂತೆ ದೂರವಾಗುವ ರೈಲಿನ ಕೊನೆಯಲ್ಲಿರುವ ಪುಟ್ಟ ದೀಪ, ಗುಣಿಸು ಚಿಹ್ನೆಯ ಪಿಂಕ್ ಬಣ್ಣದ ಮಾರ್ಕ್ ಮಸುಕಾಗುತ್ತಾ ಬಂದಾಗ...ಯಾವುದೇ ಭಾವ ವಿಕಾರವಿಲ್ಲದೆ, ಯಾರಿಗೋಸ್ಕರೂ ಅಳದೆ ರೈಲು ಮುಂದೆ ಮುಂದೆ ಹೋಗುತ್ತಲೇ ಇರುವಾಗ, ಅಲ್ಲಿ ನಾವು ಕುಳಿತಿದ್ದ ಬೋಗಿಯ ಅದೇ ಸೀಟಿನಲ್ಲಿ ಇನ್ಯಾರೋ ಕುಳಿತು ಕಿಟಕಿಯಾಚೆಗಿನ ತಂಗಾಳಿಗೆ ಮುಖ ಒಡ್ಡಿರುತ್ತಾನೆ... ಇದೇ ಬದುಕು... ರೈಲು ಕಲಿಸುವ ಆಧ್ಯಾತ್ಮ...
-ಕೃಷ್ಣಮೋಹನ ತಲೆಂಗಳ.

No comments: