ಬಾರದ ಮಳೆಯ ಪೂರ್ವರಂಗ...!
ಕಾಡುತ್ತಿದ್ದ ಸೆಖೆಯ ನಡುವೆ ಒಮ್ಮಿಂದೊಮ್ಮೆಲೇ ಬಾನಿನ ಮೂಲೆಯಲ್ಲೊಂದು ಕಪ್ಪು ಮೋಡ ಗುಡ್ಡದಾಚೆಯಿಂದ ದಾಟಿ ಬರುತ್ತಿರುತ್ತದೆ. ಸದ್ದಿಲ್ಲದೆ ಬರುವ ಮೋಡಗಳ ಮುದ್ದೆಯ ಹಾಗಿರುವ ಗುಂಪು ಬಂದು ಅರ್ಧ ಆಕಾಶ ಆವರಿಸಿದಾಗಲೇ ಗೊತ್ತಾಗುವುದು ಬಾನು ಕಪ್ಪಾಗುತ್ತಿದೆ ಎಂದು. ಅರ್ಧ ಕತ್ತಲಾದಾಗ ಸಂಶಯ ಶುರುವಾಗುತ್ತದೆ... ಮಳೆ ಬಂದೀತೇ ಅಂತ. ನೋಡ ನೋಡುತ್ತಿದ್ದಂತೆ ಮೋಡಗಳ ದಟ್ಟೈಸುವಿಕೆ ಜಾಸ್ತಿಯಾಗುತ್ತದೆ. ಬಿಸಿಲು ಮರೆಯಾಗುತ್ತಾ ಬರುತ್ತದೆ. ಇಷ್ಟೇ ಹೊತ್ತಿಗೆ, ಇಷ್ಟೇ ವೇಗದಲ್ಲಿ ಎಂಬ ಹಾಗೆ ಲೆಕ್ಕ ಹಾಕಲು ಸಿಕ್ಕದ ಹಾಗೆ ಕತ್ತಲು ಹೊತ್ತಿನ ಪರಿವೆ ಇಲ್ಲದೇ ಕವಿಯುತ್ತಲೇ ಬರುತ್ತದೆ.
ಆಗ ಖಚಿತವಾಗುತ್ತದೆ ಮಳೆ ಬಂದೇ ಬಂದೀತು.. ಅಂತ.
.....
ಅರ್ಧ ಬಾನು ನಸು ಕೇಸರಿ, ಕೆಂಪು, ಗುಲಾಬಿ ಬಣ್ಣದ ಸೋಂಕು, ಮತ್ತೆಲ್ಲ ದುಗುಡ ಹುಟ್ಟಿಸುವ ಕಪ್ಪು... ಕಪ್ಪು ಶೇಡ್ ಹಂಚಿ ಹೋದ ಹಾಗೆ. ಕೆಲ ಕಾಲ ಗಾಳಿ ಸಂಚಾರ ಸ್ತಬ್ಧವಾದ ಹಾಗೆ, ಮುಂದಿನ ಪ್ರಚಂಡ ಬಿರುಗಾಳಿಗೆ ತೊನೆದಾಡಲು ಸಿದ್ಧವಾಗಿ ನಿಂತ ಗಿಡ ಮರಗಳು ನಿಶ್ಚಲವಾಗಿದ್ದ ಹಾಗೆ ಭಾಸವಾಗುತ್ತದೆ. ಅಂಗಳದಲ್ಲಿ ಒಣ ಹಾಕಿದ ಬಟ್ಟೆಗಳು ಒಳ ಸೇರುತ್ತವೆ, ಪೆಟ್ಟಿಗೆ ಅಂಗಡಿಗಳ ಎದುರು ನೇತು ಹಾಕಲ್ಪಟ್ಟ ಸರಕುಗಳು ಕೋಣೆಗೆ ರವಾನೆಯಾಗುತ್ತವೆ. ಮೇಯಲು ಕಟ್ಟಿದ ಹಸು ಕೊಟ್ಟಿಗೆ ಸೇರುತ್ತದೆ. ಅಂಗಳದ ತುದಿಯ ಅಡಕೆ ರಾಶಿಯಾಗಿ ಟಾರ್ಪಲಿನ್ ಹೊದ್ದುಕೊಳ್ಳುತ್ತದೆ... ಮನೆ ಮಕ್ಕಳು ಮಳೆ ನೋಡಲು ವೆರಾಂಡದಲ್ಲಿ ಸೇರುತ್ತಾರೆ.
....
ಅಷ್ಟೊತ್ತಿಗೆ ಎಲ್ಲಿಂದಲೋ ಪಂಪ್ ಮಾಡಿ ಬಿಟ್ಟ ಹಾಗೆ ಭುಸುಗುಟ್ಟಿದ ಹಾಗೆ ಬಿರುಗಾಳಿ. ಒಂದಾದ ಮೇಲೆ ಒಂದರ ಹಾಗೆ ಇಡೀ ಅಂಗಳ, ಮನೆ, ತೋಟವನ್ನೆಲ್ಲ ಗುಡಿಸಿ ಸಾರಿಸುವ ತೀವ್ರತೆಯ ಗಾಳಿ... ಎಲ್ಲಿಂದ ಬರುತ್ತಿದೆ, ಎತ್ತ ತೊನೆಯುತ್ತಿದೆ, ಎಷ್ಟು ಪ್ರಬಲವಾಗಿದೆ ಎಂದು ಅರ್ಥವಾಗುವುಕ್ಕೂ ಮುನ್ನು 10-15 ಸೆಕಂಡುಗಳ ವಾಟ್ಸಪ್ ಸ್ಟೇಟಸ್ಸುಗಳ ಹಾಗೆ.... ಅಗೋ ಬಂತು.. ಇಗೋ ಹೋಯ್ತು... ಮತ್ತೊಂದು ಅಲೆಯ ಹಾಗೆ ಪುನಹ ಗಾಳಿ... ಧೂಳೆದ್ದು, ತರಗೆಲೆ ಬಂದು ಚಾವಡಿಗೆ ಬಿದ್ದು, ಕಿಟಕಿಗಳು ಹೊಡೆದಾಡಿಕೊಂಡು, ಗೇಟಿನಾಚೆಗೆ ಮಡಲೊಂದು ತೆಂಗಿನ ಮರದಿಂದ ಜಾರಿ ಬಿದ್ದು...ಅಡಕೆ ಮರವೊಂದು ಉದ್ದುದ್ದಕ್ಕೆ ಸೀಳಿ ಹೋಳಾಗಿ... ಕರೆಂಟು ವಯರುಗಳು ತಿಕ್ಕಾಡಿಕೊಂಡು ಬೆಂಕಿಯ ನರ್ತನವಾಗಿ ಕರೆಂಟು ಹೋಗುವಷ್ಟರಲ್ಲಿ... ಗಾಳಿ ಬಂದಷ್ಟೇ ವೇಗವಾಗಿ ಮಾಯವಾಗಿರುತ್ತದೆ...!!
....
ಮೋಡ ಯಾವ ಕಡೆಗೆ ಹೋಗಿ ಕಣ್ಮರೆಯಾಯಿತು ಎಂಬುದೇ ಲೆಕ್ಕಕ್ಕೇ ಸಿಕ್ಕುವುದಿಲ್ಲ. ಕುಳಿರ್ಗಾಳಿ ಪಶ್ಚಿಮದ ಕಡೆಯಿಂದ ತೇಲಿ ಬಂದಾಗ ಯಾರೋ ಹೇಳುತ್ತಾರೆ.... "ಎಲ್ಲೋ ಮಳೆಯಾಗಿದೆ..." ಎಂದು. ಸೂರ್ಯ ಮತ್ತೆ ಪ್ರತ್ಯಕ್ಷವಾದಾಗ, ಅರೆ ಗಂಟೆ ತುಂಬಾ ಮುಂದೆ ಹೋಗಿಲ್ಲ ಎಂಬುದೂ ಮನವರಿಕೆ ಆಗಿರುತ್ತದೆ. ಅಸಲಿಗೆ ಒಂದು ಹನಿಯೂ ಮಳೆ ಬಂದಿರುವುದಿಲ್ಲ.... ಆ ಭ್ರಮೆ, ಆ ಸಿದ್ಧತೆ, ಆ ಕನಸಿನೋಪಾದಿಯ ದೃಶ್ಯಗಳು ಮೊಬೈಲ್ ವಿಡಿಯೋದ ಸಾಕ್ಷಿಗಳಾಗಿ ಮಾತ್ರ ಉಳಿಯುತ್ತವ...
ಕಷ್ಟಗಳು, ಸಂಧಿಗ್ಧತೆಗಳು, ಸವಾಲುಗಳು ಕವಿದ ಹೊತ್ತಿನ ಕಾಡುವ ಲಾಕ್ ಡೌನ್ ಅಸಹಾಯಕತೆಯ ಹಾಗೆ....ದಾಟಿ ಬಂದರೆ ಅದು ನೆನಪು, ಮಳೆ ಸುರಿದು ಮುಳುಗಿ ಹೋದರೆ ಇತಿಹಾಸ, ತೇಲಲು ಸಾಧ್ಯವಾದರೆ ಸಮಾಧಾನ...
-ಕೃಷ್ಣಮೋಹನ ತಲೆಂಗಳ.
2 comments:
Abbaa🧟
Abbaa🧟
Post a Comment