ಚೌಕಟ್ಟಿನೊಳಗೆ ಮಳೆಯ ಕಟ್ಟಿಡುವ ಏಳು ವ್ಯರ್ಥ ಪ್ರಯತ್ನಗಳು....
ಮಳೆ ಚಿತ್ರಗಳು ಬಿಡಿ ಬಿಡಿಯಾಗಿ ಪುಟ್ಟ ಪುಟ್ಟ ಕವನಗಳ ಹಾಗೆ, ಈಗ ಧೋ ಅಂತ ಬಂದು ಮತ್ತೆ ಕಾಣೆಯಾಗುವ ಘಳಿಗೆಗಳನ್ನು ಚೌಕಟ್ಟಿನೊಳಗೆ ಕಟ್ಟಿ ಕೂಡಿಟ್ಟಂಥವು. ಇಡಿಯಾಗಿ ಧಾರಾಕರವಾಗಿ ಸಿಕ್ಕದೇ ಹೊದರು ಮೊಗೆಯುವಷ್ಟರಲ್ಲಿ ಮುಷ್ಟಿಯೊಳಗೆ ಅಷ್ಟಿಷ್ಟು ಬಾಕಿಯಾಗುವಂಥವು. ಮಳೆಯೊಳಗೆ ತೋಯ್ದು... ಮತ್ತೆ ನಿಧಾನಕ್ಕೆ ಒಣಗಿ ಸಹಜ ಸ್ಥಿತಿಗೆ ಮರಳುವಂಥವು... ಬದುಕಿಗೂ ಮಳೆಗೆ ಎಷ್ಟೊಂದು ಹೋಲಿಕೆಗಳು. ಅಂಥವುಗಳಲ್ಲಿ ಕೆಲವು
1) ಧಾರಾವಾಗಿ ಬಂದ ಮಳೆ ಅಷ್ಟೇ ವೇಗವಾಗಿ ನಾಲ್ಕೈದು ನಿಮಿಷಗಳಲ್ಲಿ ನಿಂತು ಈ ಗ್ರಾಮ ಬಿಟ್ಟು ಮತ್ತೊಂದು ಗ್ರಾಮಕ್ಕೆ ಹೋಗಿ ಅಲ್ಲಿ ಧೋ ರಾಕಾರವಾಗಿ ಸುರಿಯುತ್ತಿರುತ್ತದೆ. ಇಲ್ಲಿ ಬಿರುಗಾಳಿಯಂತೆ ಬಂದು ಹೋದ ಮಳೆ ಆಚೆ ಮನೆಯ ಗೇಟಿನಾಚೆ ತಲೆಯನ್ನೂ ಹಾಕಿರುವುದಿಲ್ಲ. ಆದರೂ ಕನಸಿನಂತೆ ಬಂದ ಮಳೆಯ ನೀರು ಗಂಡಿಗಳಲ್ಲಿ (ಚರಂಡಿ) ಕೆಂಪು ಕೆಂಪಾಗಿ ಇಳಿದು ಹೋಗುತ್ತಲೇ ಇರುತ್ತದೆ... ಮಳೆ ಬಂದ ಜಾಗದಿಂದ ಮಾರ್ಗದಲ್ಲಿ ಬಂದ ಕಾರುಗಳ ಮಂಡೆಯಲ್ಲಿ ಹನಿ ನೀರು ಒಣಗುತ್ತಿರುತ್ತದೆ... ಬೈಕು ಸವಾರರ ರೈನು ಕೋಟುಗಳು ಗಾಳಿಗೆ ಪಟ ಪಟ ಸದ್ದು ಮಾಡುತ್ತಿರುತ್ತವೆ...
ಮಳೆಗೆ ಯಾರಿಗೂ ಗೊತ್ತಾಗದ ಹಾಗೆ ಬಂದು ಹೋಗಲು ತಿಳಿಯುವುದಿಲ್ಲ. ಕೆಲವನ್ನು ಎಲ್ಲಿಯೂ ಮುಚ್ಚಿಡಲು ಆಗುವುದಿಲ್ಲ.
2) ಹಳೆಯ ಹೆಂಚಿನ ಮನೆ. ಮುಸ್ಸಂಜೆ ಧಾರಾಕಾರ ಮಳೆ. ಚಾವಡಿ ಎದುರಿನ ಉಯ್ಯಾಪ್ರೆಯ ಆಚೆ ಬದಿ ಮಳೆ ನೀರು ಸಿಂಚನವಾಗದಂತೆ ಕಟ್ಟಿದ ಹೆಣೆದ ತೆಂಗಿನ ಮಡಲುಗಳ ತಟ್ಟಿ... (ಗೋಡೆ). ಆದರ ನಡುವೆ ಪುಟ್ಟ ಪುಟ್ಟದಾಗಿ ಹುಟ್ಟಿದ ಗಿಡಗಳು. ಸಂಜೆಯ ಕತ್ತಲಿನ ಜೊತೆಗೆ ಮುಸಲಧಾರೆ ಹೊತ್ತು ತಂದ ಅಂಧಕಾರವ ಹೊಡೆದೋಡಿಸಲು ನಡುಮನೆಯಲ್ಲಿ ಉರಿಯುತ್ತಿರುವ ಒಂದೇ ಲಾಟೀನು ಬೆಳಕು. ಮತ್ತೆ ದೇವರ ಕೋಣೆಯಲ್ಲೊಂದು ಮಿಣುಕು ದೀಪ... ಛಟಾರನೆ ಬಡಿಯುವ ಸಿಡಿಲಿನ ಹೊಡೆತಕ್ಕೆ ಕರೆಂಟು ಹೋಗುವ ಹೆದರಿಕೆ ಇಲ್ಲ, ಯಾಕಂದರೆ ಆ ಮನೆಗೆ ಕರೆಂಟು ಸಂಪರ್ಕ ಆಗಿಯೇ ಇಲ್ಲ... ಗಾಳಿಯ ರಭಸಕ್ಕೆ ಲಾಟೀನಿನೊಳಗಿನ ಜ್ವಾಲೆ ನಸು ಕಂಪಿಸಿ ಅತ್ತಿತ್ತ ವಾಲುಡುವುದನ್ನು ನೋಡುತ್ತಲೇ ರೇಡಿಯೋದಲ್ಲಿ ಹಳೆಯ ಚಿತ್ರಗೀತೆಗಳನ್ನು ಕೇಳುವುದಕ್ಕೂ ಗುಡುಗು ಬಿಡುವುದೇ ಇಲ್ಲ...
ಧೋ ಎಂದು ಆವರಿಸಿದ ಮಳೆಗೂ ತನ್ನನ್ನು ಯಾರೂ ಕಡೆಗಣಿಸುವುದು ಇಷ್ಟವಾಗುವುದಿಲ್ಲ....
3) ಎಡೆ ಬಿಡದೆ ಸುರಿಯುವ ಮಳೆ ನಡುವೆ ಸ್ನಾನ ಮಾಡಲು ಆಲಸ್ಯ. ಮಳೆಯಲ್ಲವೇ, ಎಲ್ಲಿಯೂ ಹೊರಗೆ ಹೋಗಿಲ್ಲ, ಮೈ ಕೊಳೆಯಾಗಿಲ್ಲ ಎಂಬ ನೆವಗಳು. ಆದರೂ ಬಚ್ಚಲು ಮನೆಯ ಒಲೆಯಲ್ಲಿ ಧಗಧಗಿಸಿ ಉರಿಯುವ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸುವುದು. ಆಗಷ್ಟೇ ಹುರಿದ ಹಪ್ಪಳವನ್ನು ತೆಂಗಿನ ಕಾಯಿ ತುಂಡಿನೊಂದಿಗೆ, ಬೆಲ್ಲ ಸೇರಿಸಿ ತಿನ್ನುವುದು, ಮತ್ತೆ ಮತ್ತೆ ಮುಟ್ಟಿದರೆ ಬೆಚ್ಚುವಷ್ಟು ಬಿಸಿ ನೀರನ್ನು ಹೊಯ್ದು ಮೀಯುವುದು... ಮತ್ತೆ ಮೀಯುವವರಿಗಾಗಿ ಒಲೆಯೊಳಗೆ ಮತ್ತಷ್ಟು ಸೌದೆ ಸೇರಿಸುವುದು ಮಳೆ ನೆನಪುಗಳಲ್ಲೊಂದು... ಮಳೆ ಕಾಲಕ್ಕೆಂದೇ ಕಾಪಿಡುವ ಸೌದೆ ರಾಶಿ, ದನದ ಕೊಟ್ಟಿಗೆ ತರಗೆಲೆಗಳು, ಅಡಕೆ ಸೋಗೆಯ ಕಟ್ಟಗಳು, ಹಟ್ಟಿಯ ಅಟ್ಟದಲ್ಲಿರುವ ಬಿಳಿ ಹುಲ್ಲು, ಮತ್ತೆ ಅಡುಗೆ ಮನೆಯ ಹೊಗೆಯಟ್ಟದಲ್ಲಿರುವ ಉಪ್ಪಿನಕಾಯಿ, ಹಪ್ಪಳ, ಸಂಡಿಗೆಗಳ ರಹಸ್ಯ ಕಣಜಗಳೂ ಮಳೆಗಾಲಕ್ಕೆಂದೇ ರೆಡಿಯಾಗುವ ಅಖಾಡಗಳು... ಹಳೆ ಕಾಲದ ಮನೆಗಳಲ್ಲಿ ಮಳೆಗಾಲದ ಋತುವಿಗೆಂದೇ ಸಜ್ಜಾಗಲು ಸಾಕಷ್ಟು ನೆಪಗಳಿದ್ದವು... ಅಷ್ಟೇ ಬಿರುಸಾಗಿ ದಿನಗಟ್ಟಲೆ ಮಳೆಯೂ ಆಗುತ್ತಿತ್ತು...
ಮಳೆಗಾಲ ಕೈಕಟ್ಟಿ ಹಾಕುತ್ತದೆ ಎಂಬುದು ತಪ್ಪು ಕಲ್ಪನೆ... ಮಳೆಗಾಲದಲ್ಲೂ ಮನೆಯೊಳಗೆ ಮಾಡುವಂಥ ಘನಂದಾರಿ ಕೆಲಸಗಳು ಸಾಕಷ್ಟಿರುತ್ತವೆ...
4) ಬೇಸೆಗಯಲ್ಲಿ ಒಣಗೆ ಮರಳ ರಾಶಿ ಕಾಣುವ ಪುಟ್ಟ ತೋಡಿನಲ್ಲೂ ಮಳೆಗಾಲದಲ್ಲಿ ಮಾತ್ರ ಕೆಂಪು ನೀರಿನ ಪ್ರವಾಹ. ಅರ್ಧ ಗಂಟೆ ಭಯಂಕರ ಮಳೆ ಬಂದರೆ ಸಾಕು, ಮುಕ್ಕಾಲು ತೋಡು ತುಂಬಿ ಗಂಟೆಗೆ ಗಂಟೆಗೆ 50 ಕಿ.ಮೀ. ವೇಗದಲ್ಲಿ ಅವಸರವಸರವಾಗಿ ಕೆಂಪು ನೀರು ಹೋಗುತ್ತಲೇ ಇರುತ್ತದೆ, ಜೊತೆಗೆ ಕಸಕಡ್ಡಿ, ತೆಂಗಿನ ಕಾಯಿ, ಮುರಿದ ಬಾಳೆ ಗೀಡದ ಅವಶೇಷ, ಅದೆಂಥದ್ದೋ ಸೊಪ್ಪುಗಳು ಇತ್ಯಾದಿ ಇತ್ಯಾದಿ... ಸಮಸ್ಯೆ ಇರುವುದು ಶಾಲೆಗೆ ಹೋಗಲು ತೋಡಿಗೆ ಅಡ್ಡಲಾದ ಮೂರೇ ಅಡಕೆ ಮರಗಳನ್ನು ಜೋಡಿಸಿ ಕಟ್ಟಿದ ಸಂಕವನ್ನು (ಸೇತುವೆ) ದಾಟಬೇಕು. ಹಿಡಿಯಲು ಕೈಗೆ ಕೈತಾಂಗು ಏನೋ ಇದೆ. ಅದರೇ ನಡುಗುವ ಕಾಲನ್ನು ಮುಂದಿಟ್ಟು ಅರ್ಧ ಸಂಕ ದಾಟಿದ ಬಳಿಕ ಕೆಳಗೆ ನೋಡಿದಾಗ ಎದೆ ಬಡಿತ ನಿಲ್ಲುವ ಅನುಭವ... ಕೆಂಪು ನೀರಿನ ನಡುವೆ ನಿಂತ ನಮ್ಮದೇ ತಲೆ ತಿರುಗಿದ ಹಾಗೆ. ಇನ್ನರ್ಧ ಸಂಕವನ್ನು ಕಣ್ಣು ಮುಚ್ಚಿ ಓಡಿ ಆಚೆಯ ದಡ ತಲುಪಿದಾಗ ಪುನರ್ಜನ್ಮ ಸಿಕ್ಕಿದ ಅನುಭವ... ಬಹುಷಹ ಟ್ರೆಕಿಂಗ್ ಮಾಡಿ ಗುಡ್ಡ ಇಳಿಯುವಾಗಲೂ ಇಂತಹ ಭಯಂಕರ ಹೆದರಿಕೆ ಆಗಲಿಕ್ಕಿಲ್ಲ....
ತೋಡನ್ನು ನಾವು ದಾಟುತ್ತಿದ್ದೇವೆಯೋ... ತೋಡಿನ ನಡುವಿನ ಪ್ರವಾಹದ ನೀರೇ ನಮ್ಮನ್ನು ದಾಟಿಸುತ್ತದೆಯೋ ಎಂಬಂಥ ಗೊಂದಲ ಸೃಷ್ಟಿಸುತ್ತದೆ ಮಳೆ ನೀರು....
ದಾರಿಯಲ್ಲಿ ನಾವಾಗಿ ಸಾಗುವುದಕ್ಕೂ, ದಾರಿಯೇ ನಮ್ಮನ್ನು ಕರೆದೊಯ್ಯುವುದಕ್ಕೂ ವ್ಯತ್ಯಾಸ ಇದೆ ಎಂಬುದನ್ನು ಕೆಲವಮ್ಮೆ ಪ್ರವಾಹ ತೋರಿಸಿಕೊಡುತ್ತದೆ...
5) ಮಳೆ ಬಂದು ಬಿಟ್ಟ ಬಳಿಕದ ಸಂಜೆಯ ಬಿಸಿಲಿಗೆ ಗುಡ್ಡದ ತುದಿಗೆ ಹೋಗಿ ಕಾಮನ ಬಿಲ್ಲು ನೋಡಲು ತುಂಬ ಚಂದ. ಆದರೆ, ಗುಡ್ಡದ ದಾರಿಯ ಬಲ್ಲೆ (ಪೊದರು) ಯನ್ನು ದಾಟಿ ಹೋಗುವುದೇ ಸಮಸ್ಯೆ. ಬಟ್ಟೆಯೆಲ್ಲ ಒದ್ದೆ, ಜೊತೆಗೆ ಪರಚುವ ಮುಳ್ಳುಗಳು ಬೇರೆ... ಜೌಗು ನೆಲದಲ್ಲಿ ಸ್ಲಿಪ್ಪರ್ ಚಪ್ಪಲಿ ಕಿತ್ತು ಹೋಗುವ ಆತಂಕ ಬೇರೆ... ಕೆಸರು ನೀರು ನೆತ್ತಿಯ ವರೆಗೆ ಸ್ಲಿಪ್ಪರ್ (ಹವಾಯಿ) ಚಪ್ಪಲಿಯಿಂದ ಸಿಂಚನವಾಗುವುದು ಗೊತ್ತಾಗುವುದು ಬಟ್ಟೆಯನ್ನು ಒಗೆಯಲು ಹಾಕಿದಾಗಲೇ... ಬೆಟ್ಟದ ತುದಿಯ ಪದವಿನಲ್ಲಿ (ಮೈದಾನ) ಪುಟ್ಟ ಪುಟ್ಟ ಪಳ್ಳಗಳು (ಹಳ್ಳ). ಅಲ್ಲಿ ಮಳೆಗಾಲದಲ್ಲಿ ಮಾತ್ರ ಸೃಷ್ಟಿಯಾಗುವ ನೀರಿನ ಆಶ್ರಯಗಳು... ಅವುಗಳ ನಡುವೆ ಓಲಾಡುವ ತೊಂದುರು (ಕಪ್ಪೆ ಮರಿಗಳು). ಅವುಗಳ ಓಡಾಟ ನೋಡುವುದೇ ಖುಷಿ. ಆಗಷ್ಟೇ ಬಂದು ನಿಂತ ಮಳೆಯ ಕುರುಹಾಗಿ ಗುಡ್ಡದ ತುದಿಯಲ್ಲಿರುವ ಒಂಟಿ ಕಾಸರ್ಕನ ಮರದಿಂದ ತೊಟ್ಟು ತೊಟ್ಟಾಗಿ ಬೀಳುತ್ತಿರುವ ಹನಿಗಳು. ಎಳೆ ಹುಲ್ಲಿನ ತುದಿಯಲ್ಲಿನ ನೀರಿನ ಮುತ್ತು ಹನಿಗಳನ್ನು ಕ್ಲಿಕ್ಕು ಮಾಡಲು ಆಗ ಸ್ಮಾರ್ಟ್ ಫೋನುಗಲು ಇರಲಿಲ್ಲ, ಶೇರ್ ಮಾಡುವಂಥ ಸ್ಟೇಟಸ್ಸೂ ಆಗ ಇರಲಿಲ್ಲವೆನ್ನಿ... ಗುಡ್ಡದ ಕೊರಕಲು ಕಣಿ (ಸಣ್ಣ ಚರಂಡಿ)ಯಲ್ಲಿ ತೆಳುವಾಗಿ ಇಳಿಯುತ್ತಿರುವ ನೀರು ಮಳೆಯದ್ದೋ, ನೀರಿನ ಒರತೆಯದ್ದೋ ಅಂತ ಗ್ಯಾರಂಟಿ ಗೊತ್ತಾಗುತ್ತಿರಲಿಲ್ಲ. ಮಳೆ ಶುರುವಾದ ನಂತರ ಮರದಿಂದ ಉದುರುತ್ತಿದ್ದ ಕುಂಟಲ ಹಣ್ಣು, ಪುನರ್ಪುಳಿ ಹಣ್ಣು, ಅಳಿದುಳಿದ ಮಾವಿನ ಹಣ್ಣುಗಳ ಗೊರಟುಗಳನ್ನು ತಿನ್ನುವುದು ಕಡ್ಡಾಯವಾಗಿ ನಿಷಿದ್ಧವಾದ್ದರಿಂದ ಅವುಗಳು ದರ್ಶನಭಾಗ್ಯಕ್ಕೆ ಮಾತ್ರ ಸೀಮಿತ. ಇನ್ನೇನು ಮರಳುವಷ್ಟರಲ್ಲಿ ದೂರದ ಗುಡ್ಡವೊಂದರಲ್ಲಿ ದೊಡ್ಡ ಮಳೆ ಶುರುವಾಗುವುದು ಈ ಗುಡ್ಡದಿಂದಲೇ ಕಂಡು, ಇಲ್ಲಿಯೂ ಆಕಾಶ ಕಪ್ಪಾಗಿ ನೇರ ಪ್ರಸಾರದಲ್ಲಿ ಮಳೆ ನಮ್ಮ ಹತ್ತಿರಕ್ಕೇ ಬರುವುದು ಕಂಡು, ಕೊಡೆ ಮರೆತದ್ದಕ್ಕೆ ದಂಡರೂಪವಾಗಿ ಮರದಡಿ ನಿಂತರೂ ಪೂರ್ತಿ ನೆನೆದು ಮನೆಗೆ ಮರಳುವುದು ರೋಮಾಂಚನವೋ, ಚಿಂತೆಯೋ ನೆನೆದವರೇ ಹೇಳಬೇಕು....
ಹೇಳದೇ ಕೆಳದೇ ಬರುವುದು ಕಷ್ಟಗಳು, ಅಚ್ಚರಿಗಳು ಮಾತ್ರವಲ್ಲ, ಕೆಲವೊಮ್ಮೆ ಮಳೆಯೂ ಹಾಗೆಯೇ ಮಾಡುತ್ತದೆ....
6) ಮಳೆ ಬಂದಾಗ ರೈನುಕೋಟು ಇಲ್ಲದವರೆಲ್ಲ ಹತ್ತಿರ ಸಿಕ್ಕಿದ ಬಸ್ ಸ್ಟ್ಯಾಂಡಿನೊಳಗೆ ಅಚಾನಕ್ ಆಗಿ ಸೇರಿ ಸಮಾನ ದುಖಿಗಳಾಗಿ ಬಿಡುತ್ತಾರೆ. ಪರಸ್ಪರ ಪರಿಚಯವಲ್ಲದೆ ಅವರೆಲ್ಲ ವಿಷಣ್ಣವದನರಾಗಿ ಧಾರಾಕಾರ ಮಳೆಯು ಪ್ರವಾಹವಾಗಿ ಬಸ್ ಸ್ಟ್ಯಾಂಡಿನೆದುರಿನ ರಸ್ತೆಯಲ್ಲಿ ಹರಿದು ಹೋಗುವುದನ್ನೇ ನೋಡುತ್ತಾ ಈ ಮಳೆಯೆಂದು ನಿಂತೀತೋ ಎಂದು ಕಾಯುತ್ತಲೇ ಇರುತ್ತಾರೆ ತಾಳ್ಮೆಯಿಂದ... ರೈನುಕೋಟು ಸಹಿತ ರಸ್ತೆಗಿಳಿದಾಗ ಹೊನ್ನಶೂಲದಂತೆ ಕೆನ್ನೆಗೆ ಬಂದಿರಿಯುವ ಹನಿಗಳ ಚೂಪಾದ ದಾಳಿಯನ್ನೂ ಕಡೆಗಣಿಸಿ ಟಯರಿನಡಿಗೆ ಸಿಲುಕಿದ ಗುಂಡಿಯಿಂದ ಚಿಮ್ಮಿದ ನೀರಿನ ರಭಸದ ತೀವ್ರತೆಯನ್ನು ಲೆಕ್ಕ ಹಾಕುವುದರಲ್ಲಿ ಮಗ್ನನಾಗಿರುತ್ತಾನೆ. ತೆಳುವಾದ ಮಂಜಿನ ಹಾಗಿನ ಪದರ, ಜೊತೆಗೆ ತಂಪುಗಾಳಿ, ನಡು ಹಗಲೇ ತನ್ನಿರುವಿಕೆಯನ್ನು ತೋರಿಸುವ ಹೆಡ್ ಲೈಟುಗಳು... ಮುಂದಿನ ವಾಹನ ದಾಟಿದ ಆಂದಾಜಿನ ಮೇರೆಗೆ ಅರ್ಧ ಟಯರು ಮುಳುಗಿದರೂ ವೇಗ ತಗ್ಗಿಸಿ ಇಳಿಜಾರು ರಸ್ತೆ ಸಂಧಿಸುವ ತೊರೆಯಂಥಹ ಜಾಗ ದಾಟುವ ಸಂಭ್ರಮ... ಒಟ್ಟಿನಲ್ಲಿ ಮಳೆ ಬಂದರೆ ಖುಷಿ ಪಡುವ ಬೈಕು ಸವಾರರಿಗೇನೂ ಕೊರತೆ ಇಲ್ಲ ಬಿಡಿ...
ಮಳೆ ಏಕಾಂತದಲ್ಲಿ ಪಿಸು ಮಾತಾಡಬಲ್ಲುದು... ಮಾತಿನಲ್ಲಿ ಅಲ್ಲ, ಅನುಭೂತಿಯಲ್ಲಿ....
6) ಮಳೆ ಬಿಡದೆ ಬರುವಾಗ ಶಾಲೆಯಲ್ಲಿ ಪಾಠವೇನೆಂದು ಹಿಂದಿನ ಬೆಂಚಿನವನಿಗೆ ಕೇಳುವುದೇ ಇಲ್ಲ. ಪಾಠ ಮಾಡುವ ವ್ಯರ್ಥ ಪ್ರಯತ್ನ ಬಿಟ್ಟು ಟೀಚರು ಕಥೆ ಹೇಳುವುದೋ, ಚಿತ್ರ ಬಿಡಿಸಲು ತೊಡಗಿಸುವುದೋ ಮಾಡುವುದು ತುಂಬ ಇಷ್ಟದ ವಿಚಾರ. ಮತ್ತೆ ಮಳೆಯೆಂಬ ಕಾರಣಕ್ಕೆ ಅರ್ಧ ಗಂಟೆ ಬೇಗ ಶಾಲೆ ಬಿಟ್ಟರೆ ಆ ಗಾಳಿಗೆ ಕೊಡೆ ಉಲ್ಟಾ ಆಗದ ಹಾಗೆ ಹೇಗೆ ಮನೆ ತಲಪುವುದು ಎಂಬುದೇ ಚಿಂತೆ. ರಸ್ತೆ ಪಕ್ಕದ ನೀರಿನ ಹೊಂಡಗಳಿಗೆ ಇಳಿಯುವುದು ಥಕಪಕ ಕುಣಿಯುವುದು, ಬಸ್ಸು ವೇಗವಾಗಿ ಹೋಗುವಾಗ ಗುಂಡಿಯೊಳಗಿನ ನೀರು ನೆತ್ತಿಯ ಮೇಲೆ ಹಾರುವುದು. ಗಾಳಿ ಸಹಿತ ಬರುವ ಮಳೆಯ ದಿಕ್ಕಿಗೇ ಕೊಡೆಯನ್ನು ಹಿಡಿದು ಸಾವಧಾನದಿಂದ ಸಾಗುವುದನ್ನು ಶಾಲೆಗೆ ಹೋಗುವ ಕಾಲದಲ್ಲಿ ಮಳೆಯೇ ಕಲಿಸಿಕೊಟ್ಟಿದೆ. ಮನೆ ತಲುಪಿದ ಕೂಡಲೇ ಬೈರಾಸಿನಿಂದ ತಲೆ ಒರೆಸುವುದು. ಕೊಡೆ ಬಿಡಿಸಿ ಇಡುವುದು (ಒಣಗಲು), ಈ ಮಳೆ ಹೀಗೆಯೇ ಮುಂದುವರಿದರೆ ನಾಳೆ ಶಾಲೆಗೆ ರಜೆ ಕೊಡಬಹುದೇ ಅಂತ ಕಾಯುುವುದು ಕೂಡಾ ಒಂಥರ ಖುಷಿಯ ಸಂಗತಿ. ಪುಣ್ಯಕ್ಕೆ ಆಗ ಮಳೆಗೆ ರಜೆ ಸಿಕ್ಕರೆ ಸ್ಟೇಟಸ್ಸಿನಲ್ಲಿ ಬರಲು ಆಗ ವಾಟ್ಸಪ್ಪು ಇರಲಿಲ್ಲ, ಬ್ರೇಕಿಂಗ್ ನ್ಯೂಸ್ ಕೊಡುವ ಟಿ.ವಿ.ಗಳೂ ಕೂಡಾ. ತುಂಬ ಸಲ ಶಾಲೆಗೆ ಹೋದ ಮೇಲೆ ಸಿಕ್ಕಿದ ರಜೆ ಪಡೆದು 10 ಗಂಟೆಗೆ ಮಧ್ಯಾಹ್ನಕ್ಕೆ ಕೊಂಡು ಹೋದ ಬುತ್ತಿಯ ಸಹಿತ ಮನೆಗೆ ಬಂದು ಬಿಸಿ ಬಿಸ ಊಟ ಮನೆಯಲ್ಲೇ ಆಗಿ ಬುತ್ತಿ ನಾಯಿಯ ಹೊಟ್ಟೆ ಸೇರಿದ್ದು ಮಳೆಗಾಲದ ವಿಶೇಷಗಳಲ್ಲಿ ಒಂದು...
ಮಳೆ ಹಳೆ ನೆಪುಗಳನ್ನು ಸಂಪುಟದಿಂದ ಹೊರ ತೆಗೆಯಬಲ್ಲುದು... ಇಂದಿಗೂ ಅಂದಿಗೂ ಮಳೆ ಅದುವೇ, ತೀವ್ರತೆ ಮತ್ತು ಮಳೆಗೆ ತಲೆಯೊಡ್ಡುವ ಮನಸ್ಸುಗಳ ವಯಸ್ಸು ಮಾತ್ರ ಬೇರೆ ಅಷ್ಟೇ....
7) ಮಳೆ ಬಂದು ಎಷ್ಟು ದಿನಗಳ ಬಳಿಕ ಬಾವಿಯಾಳದ ನೀರು ಮೇಲೇರುತ್ತದೆ... ತೋಡಿನ ಕಟ್ಟ ಕಡಿದು ಅಬ್ಬಿಯಲ್ಲಿ ನೀರು ಧುಮುಕಲು ಆರಂಭವಾಗಿ ಎಷ್ಟು ದಿನಗಳಾದವು.... ತೋಟದ ಕಣಿ ದಾಟುವ ಪುಟ್ಟ ಪಾಪು (ಕಾಲುಸಂಕ) ಪ್ರವಾಹಕ್ಕೆ ಸಿಲುಕಿ ಹೋದದ್ದು ಯಾವಾಗ... ಸುರಂಗದೊಳಗಿನ ಪೈಪಿನಿಂದ ಉಕ್ಕಿ ಹರಿಯುವ ಒಸರು ಶುರುವಾದ್ದು ಎಷ್ಟು ಹೊತ್ತಿಗೆ... ಸುರಂಗದಿಂದ ಸ್ಫಟಿಕದಂಥ ನೀರು ಮೊಗೆ ಮೊಗೆದು ಬರುವುದಕ್ಕೆ ಶುರುವಾಗಿ ದಿನ ಎಷ್ಟಾಯಿತು.. ಮಳೆಗಾಲದಲ್ಲಿ ಕೆಲವೊಂದು ಆಗುಹೋಗುಗಳು ಅರಿವಿಗೆ ಬರುವ ಮೊದಲೇ ಸಂಭವಿಸಿ ಆಗಿರುತ್ತದೆ. ಥಟ್ಟನೆ ಭೂಮಿಯೊಳಗಿಂದ ಎದ್ದು ನಿಲ್ಲುವ ಥಂಡರ್ ಲಿಲ್ಲಿಯ ಹಾಗೆ, ಕಲ್ಲಿನ ನಡುವೆ ಪರದಾಡುತ್ತಾ ಸಾಗುವ ದೇವರು ಉಗುಳಿದ ಹುಳವೆಂದು ಕರೆಯಲ್ಪಡುವ ಕೆಂಪು ವೆಲ್ವೆಟ್ಟಿನ ಜೇಡನ ಹಾಗಿರುವ ಪ್ರಾಣಿಯ ಹಾಗೆ, ಅಂಗಳದ ನಡುವಿನಿಂದ ಹುಲ್ಲಿನ ರೂಪದಲ್ಲಿ ಮೇಲೆ ಬರುವ ಭದ್ರಮುಷ್ಟಿಯ ಗಡ್ಡೆಯ ಹಾಗೆ... ಮನೆಯಿಂದ ಕೊಟ್ಟಿಗೆಗೆ ಹೋಗಲು ಹಾಕಿದ ಅಡಕೆ ಮರದ ಸಂಕದ ನಡುವೆ ಪಾಚಿಗಟ್ಟಿದ್ದು, ಗುಡ್ಡದ ತಡಮ್ಮೆಯ (ಪುಟ್ಟ ಗೇಟು) ದಾರಿ ಜಾರುವುದಕ್ಕೆ ಶುರುವಾಗಿದ್ದೆಲ್ಲ ಮಳೆ ಚುರುಕಾದ ಹಾಗೆ ಆಗುತ್ತಲೇ ಇರುತ್ತದೆ... ತನಗರಿವಿಲ್ಲದ ಹಾಗೆ. ಅದಕ್ಕೊಂದು ಮಾನದಂಡ, ಸಮಯಪ್ರಜ್ನೆ ಇಲ್ಲವೇನೋ ಎಂಬ ಹಾಗೆ... ಗಾಳಿಗೆ ತೊನೆದಾಡಿ ಮುರಿದ ಅಡಕೆ ಮರಗಳ ಹಾಗೆ, ಬುಡ ಸಮೇತ ಉರುಳಿ ಗೊನೆಯೊಂದಿಗೆ ಭೂಮಿಯಲ್ಲಿ ಮಲಗಿದ ಬಾಳೆ ಗಿಡದ ಹಾಗೆ, ಇಬ್ಭಾಗವಾಗಿ ಕೊಳೆತು ಬಿದ್ದ ಹಲಸಿನ ಹಣ್ಣಿನ ಹಾಗೆ... ಬಿರು ಮಳೆಯ ಕತೆಗಳು ತೋಟದಲ್ಲಿ ಸಾವಿರ ಸಾವಿರ ಸಿಕ್ಕೀತು... ಕಣಿಯಲ್ಲಿ, ಬರೆಯಲ್ಲಿ, ಕಾಲು ದಾರಿಯಲ್ಲಿ, ಗುಡ್ಡದ ಪೊದರಿನೆಡೆಯಲ್ಲಿ, ಜಾಲಿನ ಹೂತೋಟದ ಅಂಚಿನಲ್ಲೆಲ್ಲ ಯಾರೋ ನೆಟ್ಟ ಹಾಗೆ, ಯಾರೋ ಬಿತ್ತಿದ ಹಾಗೆ ಹೇಳ ಹೆಸರಿಲ್ಲದ ಗಿಡಗುಳು, ಹೂಗಳು, ತೊನೆದಾಡುವ ಎಲೆಗಳು... ಹೇಳದೇ ಕೇಳದೇ ಪ್ರತ್ಯಕ್ಷವಾಗುವ ಮಳೆಗಾಲದ ಅಚ್ಚರಿಗಳು....
ನಾವು ನಿಮಿತ್ತ ಮಾತ್ರ, ಪ್ರಕೃತಿಯೇ ಸತ್ಯ ಎಂಬುದಕ್ಕೆ ಮಳೆಯೊಂದು ಸಂದೇಶವಾಹಕ ಅಷ್ಟೇ... ಕೆಲವೊಮ್ಮೆ ಎಷ್ಟೋ ಪೋಷಿಸಿದರೂ ಅರಳದ ಗಿಡಗಳಿಗೆ ಮಳೆಯೆಂಬೋ ಅಮೃತ ಸಿಂಚನ ಬಂದಾಗ ಚಿಗುರುವ ಬಯಕೆಯಾಗುತ್ತದೆ... ಬದುಕೂ ಹಾಗೆ..
ಮನುಷ್ಯ ಪ್ರಯತ್ನಕ್ಕೆ ಮೀರಿದ ಸಂಗತಿಗಳೂ ಹಲವು ಇವೆ ಎಂಬುದಕ್ಕೆ ಇವು ದೃಷ್ಟಾಂತಗಳು ಅನ್ನಿಸುವ ಹಾಗೆ ಮಾಡುತ್ತದೆ...
ಈ ಏಳು ಸಂಗತಿಗಳು ತೋಯ್ದ ಮಳೆ ನೀರಿನಿಂದ ಹೆಕ್ಕಿ ತೆಗೆದ ಒಂದಷ್ಟು ನೆನಪುಗಳಷ್ಟೇ... ಕೊನೆ ವರೆಗೆ ಓದಿದವರು 8ರಿಂದ ಶುರು ಮಾಡಿ ನಿಮ್ಮದೇ ಮಳೆ ಕತೆಗಳನ್ನು ಜೋಡಿಸುತ್ತಾ ಹೋಗಬಹುದು... ಮಳೆಯ ನೆನಪಿನಲ್ಲಿ ಮೌನವಾಗಬಹುದು... ಅಕ್ಷಗಳಲ್ಲಿ ಮಳೆಯನ್ನು ಕಟ್ಟಿಡುವ ಪ್ರಯತ್ನ ಮಾಡಬಹುದು.
-ಕೃಷ್ಣಮೋಹನ ತಲೆಂಗಳ.
No comments:
Post a Comment