ಪರಿಮಳಕ್ಕೆ ಅರಳುವ ನಾಸಿಕ ಮತ್ತು ಕಳೆದುರುಳಿದ ನೆನಪುಗಳು...!











ಹಳೆ ನೆನಪುಗಳನ್ನು ಮತ್ತೊಮ್ಮೆ ಅನಾವರಣಗೊಳಿಸಿ, ಸರಿದು ಹೋದ ಸನ್ನಿವೇಶವನ್ನು ವರ್ಚುವಲ್ ರಿಯಾಲಿಟಿ ಥರ ಕಣ್ಣೆದುರು ಕಟ್ಟಿಕೊಡುವ ಶಕ್ತಿ ಇರುವುದು ಹಾಡುಗಳಿಗೆ ಮಾತ್ರವಲ್ಲ, ಪರಿಮಳಕ್ಕೂ ಇದೆ... ಮೂಗಿಗೆ ಅಡರುವ ಸಣ್ಣದೊಂದು ಗಂಧ (ಒಳ್ಳೆಯದೋ, ಕೆಟ್ಟದೋ ಇರಬಹುದು) ಯಾವುದೋ ಒಂದು ಸಂದರ್ಭವನ್ನು, ಯಾವುದೋ ಒಂದು ಸ್ಥಳವನ್ನು, ಯಾವುದೋ ಒಂದು ವಿಚಾರವನ್ನು ಮತ್ತೆ ಇಂಟರ್ನಲ್ ಮೆಮೊರಿಯಿಂದ ಎಳೆದು ಹೊರ ತಂದು ಕೆಲ ಕಾಲ ತೋರಿಸಿಕೊಡಬಹುದು, ಹಳೆ ಸಿನಿಮಾದ ತುಣುಕೊಂದು ಕಣ್ಣ ಮುಂದೆ ಹಾದು ಹೋದ ಹಾಗೆ... 





ಚಿಕ್ಕವರಿದ್ದಾಗ ನೆನಪಿದೆಯಾ...?  ಹೊಸ ಪಾಠ ಪುಸ್ತಕ ಸಿಕ್ಕಿದಾಗ ಅದರ ಚೆಂದದ ರಕ್ಷಾಪುಟದೊಳಗೆ ಗಾಢವಾಗಿ ತೂರಿ ಬರುತ್ತಿದ್ದ ಹೊಸ ಪುಸ್ತಕದ ಪರಿಮಳವನ್ನು ಆಘ್ರಾಣಿಸುತ್ತಿದ್ದದ್ದು. ಸ್ಟೇಷನರಿಯಿಂದ ಹೊಸ ಕಾಪಿ ಪುಸ್ತಕ ತಂದಾಗ ಅದಕ್ಕಿನ್ನೂ ಬೈಂಡ್ ಹಾಕುವ ಮೊದಲೇ ತನ್ನ ಪರಿಮಳದಿಂದ ಪುಸ್ತಕ ತಾನು ಹೊಸತೆಂದು ಸಾರಿ ಹೇಳುತ್ತಿದ್ದದ್ದು... ಪುಸ್ತಕ ಮಾತ್ರವಲ್ಲ, ಪರಿಮಳ ಸೂಸುವ ಇರೇಸರ್, ಶಾಲೆಗೆ ಹೋಗುವ ದಾರಿಯಲ್ಲಿ ಬಿದ್ದು ಗಾಯವಾದರೆ ಜಜ್ಜಿ ಹಾಕುತ್ತಿದ್ದ ಕಮ್ಯುೂನಿಸ್ಟ್ ಸೊಪ್ಪಿನ ರಸದ ಗಂಧ, ಶಾಲೆಯೆದುರಿನ ಬೋರ್ ವೆಲ್ ನಳಕ್ಕೆ ಕೈಹಿಡಿದು ಮೊಗೆದು ನೀರು ಕುಡಿಯವಾಗ ನೀರಿನ ಜೊತೆ ಬರುತ್ತಿದ್ದ ವಿಚಿತ್ರವಾದ ಬೋರ್ವೆಲ್ ನೀರಿನ ವಾಸನೆ, ಯಾವುದೋ ಟೀಚರೋ, ಮೇಷ್ಟ್ರೋ ಹಾಕಿಕೊಂಡು ಬರುತ್ತಿದ್ದ ಗಾಢವಾದ ಸೆಂಟಿನ ಘಾಟು, ಮಂಗಳವಾರ ಸಂಜೆ ಕೊನೆಯ ಪಿರಿಯಡ್ ನಲ್ಲಿ ಭಜನೆ ಮಾಡುವಾಗ ಉರಿಸುತ್ತಿದ್ದ ಅಗರಬತ್ತಿಯ ಪರಿಮಳ ಹಾಲೆಲ್ಲಾ ತುಂಬುತ್ತಿದ್ದದ್ದು, ಮಧ್ಯಾಹ್ನದ ಊಟದ ಬ್ರೇಕಿನಲ್ಲಿ ಸಾದಾ ಐಸ್ ಕ್ಯಾಂಡಿ ಜೊತೆಗೆ ವಿಶೇಷವಾಗಿ ಬರುತ್ತಿದ್ದ ಬೆಲ್ಲ ಕ್ಯಾಂಡಿ ಹಾಗೂ ದೂಧ್ ಕ್ಯಾಂಡಿ ಪೈಕಿ ಧೂದ್ ಕ್ಯಾಂಡಿಯ ಒಂದು ವಿಶಿಷ್ಟ ಪರಿಮಳ ಶಾಲೆಯನ್ನು ಮಾತ್ರವಲ್ಲ ಇಂಟರ್ವೆಲ್ಲಿನಲ್ಲಿ ಸಾಂಪ್ರದಾಯಿಕ ಸಿನಿಮಾ ಟಾಕೀಸಿನ ಸಂದರ್ಭವನ್ನೂ ನೆನಪಿಸುವಂತೆ ಮಾಡುತ್ತದೆ.... 


........ 




ಪುಟ್ಟ ಕಂದಮ್ಮನ ಸ್ನಾನಕ್ಕೆ ಬಳಸುವ ಬೇಬಿ ಸೋಪು, ನಂತರದ ಬೇಬಿ ಪೌಡರ್ ನ ಘಮ ಘಮ ಅದು ಎಳೆ ಮಗುವಿನ ಸಾನಿಧ್ಯವನ್ನು ತೋರಿಸಿಕೊಡುತ್ತದೆಯಲ್ವೇ... ನೋವಿಗೆ ಹಚ್ಚುವ ತ್ಯಾಂಪಣ್ಣ ಭಂಡಾರಿ ತೈಲ, ಐಡೆಕ್ಸ್, ವಿಕ್ಸ್, ಅಮೃತಾಂಜನ್ ಮತ್ತಿತರ ಬಾಮ್ ಗಳು, ಅಷ್ಟೇ ಯಾಕೆ ಚಿಕ್ಕಂದಿನಲ್ಲಿ ಶೀತ, ಕೆಮ್ಮಿಗೆ ಕುಡಿಯುತ್ತಿದ್ದ ವಿಚಿತ್ರ ಘಾಟಿನ ಸಿರಪ್ಪು, ಗಂಟಲಲ್ಲಿ ಇಳಿಯದ ಟ್ಯಾಬ್ಲೆಟ್ಟು ಅರ್ಧಗಂಟಲಿನಿಂದ ರಿವರ್ಸ್ ಬರುವಾಗ ಆಗುವ ಕಹಿ ವಾಸನೆಯ ಹಿಂಸೆ, ದೊಡ್ಡ ದೊಡ್ಡ ಆಸ್ಪತ್ರೆಯ ಸ್ವಚ್ಛ ವೆರಾಂಡದಲ್ಲಿ ಸಾಗುವಾಗ, ತೀವ್ರ ನಿಘಾ ಘಟಕದ ಹೊರಗೆ ಕಾಯುವಾಗ ಬರುವ ಫಿನಾಯಿಲ್, ಡೆಟ್ಟಾಲ್ ವಾಸನೆಯ ನೆನಪು ನೀವೆಲ್ಲಿಗೆ ಹೋದರೂ ಆ ವಾಸನೆ ಮೂಗಿಗೆ ಅಡರಿದಾಗ ತಪ್ಪಿ ಆಸ್ಪತ್ರೆಗೇ ಬಂದೆವೇನೋ ಅನ್ನಿಸುವ ಹಾಗೆ ಮಾಡುತ್ತದೆ... ನಮ್ಮ ಮೆದುಳಿಗೆ ಆ ವಾಸನೆಯ ಜೊತೆಗೆ ಆ ಸಂದರ್ಭ, ಆ ಸ್ಥಳದ ನೆನಪು ಜೊತೆ ಜೊತೆಯಾಗಿ ಶೇಖರವಾಗಿರಿಸುವ ಚಾಳಿ ಇದೆ ಅನ್ನಿಸುತ್ತದೆ... ಯಾವುದೋ ಗಂಧ ಮೂಗಿಗೆ ಬಡಿದಾಗ, ಅರೇ... ಇದೇ ಪರಿಮಳವನ್ನು ಎಲ್ಲೋ ಆಘ್ರಾಣಿಸಿದ್ದೇನಲ್ವ ಅನ್ನಿಸುವಂತೆ ಮಾಡುತ್ತದೆ. 


...... 



ತುಂಬ ದಿನದ ಬಳಿಕ ಅಥವಾ ಮೊದಲ ಬಾರಿಗೆ ಮಳೆಯಾದಾಗ ಒಣ ಧೂಳು ಮಣ್ಣು ಸೂಸುವ ಪರಿಮಳ, ದನದ ಕೊಟ್ಟಿಗೆಯಿಂದ ಬರುವ ಗೊಬ್ಬರದ ಪರಿಮಳ, ಹಟ್ಟಿಗೆ ಸೊಪ್ಪು ಕೊಚ್ಚಿ ಹಾಕುವಾಗ ಬರುವ ಸೊಪ್ಪು ಜಜ್ಜಿದ ಪರಿಮಳ, ಎಳೆ ಹುಲ್ಲು ಸವರಿ ಹಾಕಿದಾಗ ಬರುವ ತನ್ನದೇ ಆದ ಘಾಟು, ವೀಳ್ಯದೆಲೆ ತಿನ್ನುವವರ ಸಮೀಪ ಹೋದರೆ ಬರುವ ಅದರದ್ದೇ ಆದ ಗಂಧ, ಪ್ರತ್ಯೇಕವಾಗಿ ಹೊಗೆಸೊಪ್ಪು, ಅಡಕೆ, ಎಲೆಗಳ ಪ್ರತ್ಯೇಕ ಪ್ರತ್ಯೇಕ ವಾಸನೆಯೂ ಇದ್ದದ್ದೇ... ಬೆಳಗ್ಗಿನ ಜಾವ ದನಗಳ ನೆತ್ತಿಯ (ಕೋಡುಗಳ ನಡುವೆ) ನಡುವೆ ಆಘ್ರಾಣಿಸಿದರೆ ಆ ಪರಿಮಳಕ್ಕೆ ಔಷಧೀಯ ಶಕ್ತಿ ಇದೆ ಎಂದು ಹಿರಿಯರು ಹೇಳುತ್ತಿದ್ದ ನೆನಪು. ಬೆಳಗ್ಗಿನ ಜಾವವೋ, ಮುಂಜಾನೆಯೋ ಒಂಟಿಯಾಗಿ ನಗರದ ರಸ್ತೆಗಳಲ್ಲೂ ನಡೆಯುವಾಗ ಯಾವುದೋ ಹಿತ್ತಿಲಿನಲ್ಲಿ ಅರಳಿದ ಸಂಪಿಗೆ, ಮಲ್ಲಿಗೆ, ಜಾಜಿಯ ಘಾಟು, ಸುರಗಿ ಹೂವಿನ ಪರಿಮಳ, ಹಳ್ಳಿ ತೋಟದ ನಡುವಿನ ತೋಡಿನ ಪಕ್ಕದ ಬೇಲಿಯಲ್ಲಿ ಅರಳಿರುವ ಕೇದಗೆಯ ಘಾಟು, ಪಾರ್ಕಿನ ಮೂಲೆಯಲ್ಲಿ ಅರಳಿರುವ ಮಂದಾರ, ಸೇವಂತಿಗೆಯ ಕಂಪು, ಅಂಗಳದ ತುದಿಯಲ್ಲಿ ಅರಳಿ ಬಳಿ ಸೆಳೆಯುವ ಪಾರಿಜಾತ, ಮಂಜೊಟ್ಟಿ, ಗೋಸಂಪಿಗೆ, ಸಂಜೆ ಮಲ್ಲಿಗೆಯ ಲಘು ಕಂಪು ಎಷ್ಟೊಂದು ವೈವಿಧ್ಯತೆಯಿದೆ ಹೂಗಳಲ್ಲೂ. ಹೂವೇ ಕಾಣದಿದ್ದರೂ, ಗಿಡ ಎಲ್ಲಿ ಎಂದೇ ಗೊತ್ತಿಲ್ಲದಿದ್ದರೂ ಪರಿಮಳವನ್ನು ಮಾತ್ರ ಅಡಗಿಸಿಡಲಾಗದು, ಪ್ರತಿಭೆಯೊಂದು ತಾನೇ ತಾನಾಗಿ ಬೆಳಕಿಗೆ ಬಂದ ಹಾಗೆ.... 


...... 


ದೇವಸ್ಥಾನಗಳಲ್ಲೂ ದೈವಿಕ ಭಾವ ಹುಟ್ಟಿಸುವುದು ದೇವ ಸಾನಿಧ್ಯ ಎಂಬ ಕಾರಣ ಮಾತ್ರವಲ್ಲ. ಆ ಹೂಗಳ ರಾಶಿಯ ಕಂಪು, ಶ್ರೀಗಂಧದ ಪರಿಮಳ, ಕರ್ಪೂರದ ಕಂಪು, ಧೂಪದ ಆರತಿ, ಅಗರಬತ್ತಿಯ ಹೊಗೆ ಎಲ್ಲ ಸೇರಿ ತನಗರಿವಿಲ್ಲದೇ ವ್ಯಕ್ತಿಯೊಬ್ಬನಲ್ಲಿ ದೈವಿಕ ಏಕಾಗ್ರತೆ ಹುಟ್ಟಿಸಿ ಕೆಲ ಕಾಲ ದೇವಸ್ಥಾನದೊಳಗೆ ತನ್ಮಯನಾಗಿರುವಂತೆ ಮಾಡಬಲ್ಲುದು. ಕಟೀಲು ದೇವಸ್ಥಾನಕ್ಕೆ ಹೋದಾಗ ಎಲ್ಲೆಡೆ ಕಾಡುವ ಮಲ್ಲಿಗೆಯ ಪರಿಮಳ ಹಾಗೂ ಉಂಡು ಕೈತೊಳೆದ ಬಳಿಕವೂ ಕೈಯಿಂದ ಸಾಂಬಾರದ ಪರಿಮಳ ಸೂಸುವಂತೆ ಮಾಡುವ ಸಾರಿನ ನೆನಪು ಎರಡೂ ಸದಾ ಕಾಲ ನೆನಪಿನಲ್ಲಿ ಉಳಿಯಬಲ್ಲ ಆಘ್ರಾಣ ಶಕ್ತಿಯ ದ್ಯೋತಕಗಳು... ಮದುವೆ ಸಮಾರಂಭಗಳಿಗೆಂದೇ ಪಟ್ಟಿಗೆಯಲ್ಲಿ ಎತ್ತಿಟ್ಟ ಉಡುಪುಗಳನ್ನು ಹೊಸದಾಗಿ ತೆಗೆದು ಇಸ್ತ್ರಿ ಹಾಕುವಾಗ ಬರುವ ಜಿರಳೆ ಕಾಯಿಯ ಘಾಟು, ಮತ್ತೆ ಹೊಸ ಪಟ್ಟೆ ಸೀರೆಯ ಘಾಟು.... ಮದುವೆ ಹಾಲಿನಲ್ಲಿ ಪನ್ನೀರಿನ ಪರಿಮಳ, ಗುಲಾಬಿ, ಮಲ್ಲಿಗೆಯ ಮಿಕ್ಸೆಡ್ ಪರಿಮಳ, ಮದುವೆಗೆಂದೇ ತಂದ ಸ್ಪೆಷಲ್ ಸುಗಂಧ ದ್ರವ್ಯ... ಎಲ್ಲ ಸೇರಿ ಮದುವೆ ಮನೆಯೆಂಬ ಪರಿಸರವನ್ನು ಹುಟ್ಟುಹಾಕುತ್ತದೆ. ಹೊಸ ಬಟ್ಟೆ, ಅಚ್ಚುಕಟ್ಟು ಉಡುಪು, ವೇದಘೋಷ, ಉಪಚಾರ, ಫೋಟೋ, ವಿಡಿಯೋ ಸೆಶನ್ ಗಳ ನಡುವೆ ಮದುವೆಯೆಂಬೋ ಕಾರ್ಯಕ್ರಮದ ನೆನಪನ್ನುಕಟ್ಟಿ ಕೊಡುತ್ತದೆ. ವಾಲಗ, ಡೋಲು, ಗಟ್ಟಿಮೇಳಗಳ ನಡುವೆ ಮದುವೆಯ ಕಂಪು ಕೂಡಾ ನಮಗರಿವಿಲ್ಲದೆ ಆವರಿಸುವುದು ಸುಳ್ಳಲ್ಲ.... 


....... 



ಹಸಿವನ್ನು ಉದ್ದೀಪಿಸುವಲ್ಲಿ ಪರಿಮಳದ ಪಾಲೂ ದೊಡ್ಡದಂತೆ ಅಲ್ವ?  ಸ್ವಲ್ಪ ಹಸಿದವನನ್ನು ಪೂರ್ತಿ ಹಸಿಯುವಂತೆ ಮಾಡುವಲ್ಲಿ ಮೂಗಿನ ಕೊಡುಗೆ ಅತಿ ದೊಡ್ಡದು. ಸಮಾರಂಭಗಳಲ್ಲಿ, ಜಾತ್ರೆ, ಉತ್ಸವಗಳಲ್ಲಿ, ಮನೆಗೆ ಅತಿಥಿಗಳು ಬಂದಾಗಲೆಲ್ಲ ಮಾಡುವ ವಿಶಿಷ್ಟ ಖಾದ್ಯಗಳ ಪರಿಮಳ, ಹೊಗೆಯೇಳುವ ಸಾರು, ಸಾಂಬಾರು, ಸಿಹಿ ತಿಂಡಿಗಳ ಪರಿಮಳ, ಎಳೆ ಮಿಡಿ ಉಪ್ಪಿನಕಾಯಿ, ಖಾರ ಪರಿಮಳದ ಸಾರ, ಕುಂಬಳ ಕಾಯಿ ಹುಳಿ, ಹೋಳಿಗೆ, ತುಪ್ಪ, ಶ್ಯಾವಿಗೆ ಪಾಯಸದಿಂದ ಹೊರಬರುವ ಏಲಕ್ಕಿಯ ಗಂಧ, ವೆನಿಲ್ಲಾ ಐಸ್ ಕ್ರೀಮಿನ ಇರುವಿಕೆಯ ಸಾಕ್ಷಿಗಳೆಲ್ಲ ಬೇಗ ಬೇಗ ಊಟದ ಮನೆಯತ್ತ ಕಾಲುಗಳನ್ನು ಕರೆದೊಯ್ಯುತ್ತವೆ ಅಲ್ವ... ಅಷ್ಟೇ ಯಾಕೆ ನಿಮ್ಮಿಷ್ಟದ ಹೊಟೇಲಿನ ಎದುರು ಹಾದುಹೋಗುವಾಗ ಬರುವ ಮಸಾಲೆ ದೋಸೆಯ ಪರಿಮಳ, ಚಟ್ನಿಯ ಘಾಟು, ಇಷ್ಟದ ರಸಂನ ಪಾತ್ರೆಯಿಂದ ಹೊರ ಸೂಸುವ ಹೊಗೆ, ಚಟ್ಟಂಬಟೆ, ಬನ್ಸ್, ಕೆಂಪು ಚಟ್ನಿಗಳ ಪರಿಮಳವೂ ಹೊಟೇಲಿನ ಒಳಗೆ ತಾನೇ ತಾನಾಗಿ ತೆರಳುವಂತೆ ಮಾಡಬಹುದು.... ಮಡಿಕೇರಿ, ಚಿಕ್ಕಮಗಳೂರು ಭಾಗದ ಪೇಟೆಗಳಲ್ಲಿ ನಡೆಯುವಾಗ ಮೂಗಿಗೆ ಅಡರುವ ಕಾಫಿ ಪುಡಿಯ ಪರಿಮಳವಂತೂ ಮಲೆನಾಡಿನ ಪೇಟೆಗಳ ನೆನಪನ್ನು ಕಟ್ಟಿಕೊಡುತ್ತವೆ... ಸ್ಟ್ರಾಂಗ್ ಕಾಫಿಯ ಪರಿಮಳದ ಆಕರ್ಷಣೆ ಚಹಾಕ್ಕೂ ಬರಲಾರದೇನೋ. ಹೊಗೆಯಾಡುವ ಕಾಫಿಯಿಂದೇಳುವ ಹದವಾದ ಪರಿಮಳ ನಾಲಗೆಯ ಚಪಲದ ತುಡಿತವನ್ನು ಹೆಚ್ಚಿಸಲೇಬೇಕು...!


........ 


ಈ ವಾಸನೆಯ ಸಹವಾಸ ಒಂಥರಾ ತ್ರೀ ಡಿ ಪರಿಣಾಮ ಇದ್ದ ಹಾಗೆ. ಇಲ್ಲದ್ದನ್ನೂ ಇದ್ದ ಹಾಗೆ ಕೆಲಕಾಲ ತೋರಿಸಿಕೊಡಬಹುದು. ಎಲ್ಲಿಯೋ, ಯಾವತ್ತೋ ಆಘ್ರಾಣಿಸಿದ ಪರಿಮಳಗಳೆಲ್ಲ ಎಷ್ಟೋ ವರ್ಷಗಳ ಬಳಿಕ ಮತ್ತೆ ಮೂಗಿಗೆ ಅಡರಿದಾಗ ಆಯಾಚಿತವಾಗಿ ಮನಸ್ಸನ್ನು ಚಂಚಲಗೊಳಿಸಬಹುದು. ಯಾವುದೋ ಜಾಗ, ಯಾವುದೋ ಊರು, ಯಾವುದೋ ಕ್ಲಾಸು, ಯಾವುದೋ ವ್ಯಕ್ತಿ, ಯಾವುದೋ ದೇವರು, ಯಾವುದೋ ಆಸ್ಪತ್ರೆ, ಯಾವುದೋ ಹೊಟೇಲು, ಯಾವುದೋ ತೋಟ... ಹೀಗೆ ಯಾವ್ಯಾವುದೋ ನೆನಪುಗಳ ಎಳೆಯನ್ನು ಬಿಡಿಸಿಡಬಹುದು. ಕ್ಷುಲ್ಲಕವೆಂದು ಅನ್ನಿಸಬಹುದಾದ ಆಘ್ರಾಣ ಶಕ್ತಿಗೂ ಸಾಕಷ್ಟು ಶಕ್ತಿ ಇರುತ್ತವೆ ಎಂಬುದಕ್ಕೆ ಅಪರಾಧ ಪತ್ತೆ ದಳದ ಚಾತುರ್ಯ, ಪೊಲೀಸ್ ನಾಯಿಗಳ ಖಚಿತ ತನಿಖಾ ಸಹಾಯಗಳೇ ಸಾಕ್ಷಿ. ನಮ್ಮ ಅರಿವಿಗೇ ಬಾರದ ದುರ್ಗಂಧಗಳು, ಇರುವಿಕೆಯ ಕುರುಹಿನ ಗಂಧಗಳು... ಸಾಕಷ್ಟಿರುತ್ತವೆ. ಮಲ್ಲಿಗೆ, ಸಂಪಿಗೆಗಳಿಗೆ ಮಾತ್ರ ಸುಗಂಧ ಇರುವುದಲ್ಲ. ಅರಿಯುವ ತಾಳ್ಮೆ ಇದ್ದರೆ ಕಾಡಿನಲ್ಲಿ, ಗುಡ್ಡದಲ್ಲಿ ಸಾಕಷ್ಟು ಹೇಳ ಹೆಸರಿಲ್ಲದ (ಅಥವಾ ನಮಗೆ ಹೆಸರು ಗೊತ್ತಿಲ್ಲದ) ಸಾಕಷ್ಟು ಹೂವು, ಹಣ್ಣು, ಬಳ್ಳಿಗಳಿಗೆ ತಮ್ಮದೇ ಆದ ಸೌಮ್ಯ ಗಂಧವಿರುತ್ತದೆ. ಸಾಮಿಪ್ಯ ಸಿಕ್ಕಾಗ, ಆಘ್ರಾಣಿಸುವ ಪುರುಸೊತ್ತಾದಾಗ ಅದು ನಮ್ಮ ಅರಿವಿಗೆ ಬರುತ್ತದೆ... 

..... 


ಅಕ್ಷರಗಳಿಗೆ ಸಿಲುಕದ, ಮರೆಯಾದ, ಬಾಕಿಯಾದ ಗಂಧಗಳಿನ್ನೆಷ್ಟೋ ಇರಬಹುದು... ಬಂದರು ಪ್ರದೇಶಗಳಲ್ಲಿ ಗಾಢ ಮೀನಿನ ವಾಸನೆ, ಬೆಳೆದ ಪೈರಿಗೆ ಸಿಂಪಡಿಸಿದ ಕೀಟನಾಶಕದ ಘಾಟು, ಶಾಲೆಗೆ ಹೋಗುತ್ತಿದ್ದಾಗ ಬೆಳ್ಳಂಬೆಳಗ್ಗೆ ಜೀಪಿನಲ್ಲಿ ಕಡಾಯಿಗಳಲ್ಲಿ ಸಾಗಿಸುತ್ತಿದ್ದ ಕಳ್ಳು (ಗಂಗಸರ) ಘಾಟು, ಕಿತ್ತಳೆ, ಮೂಸಂಬಿ, ಮಾಪಲಹುಳಿ, ನೆಕ್ಕರೆ ಮಾವು, ಹಲಸಿನ ಹಣ್ಣು, ಗೇರುಬೀಜದ ರಸಗಳ ಪ್ರಕೃತಿ ಸಹಜ ಗಂಧಗಳು ಬದುಕಿನ ಭಾಗಗಳೇ ಹೌದು... ಯಾವುದೋ ಗುಡಿ, ಯಾವುದೋ ನದೀ ದಂಡೆ, ಯಾವುದೋ ಬೆಟ್ಟ, ಕಾಡು, ಪ್ರೈಮರಿ ಶಾಲೆ, ಹಳೆ ಹೆಂಚಿನ ಮನೆ, ಊರಿನ ಧರ್ಮಾಸ್ಪತ್ರೆ, ಬಸ್ಟ್ಯಾಂಡು, ಜ್ಯೂಸ್ ಕುಡಿಯುತ್ತಿದ್ದ ಕೋಲ್ಡ್ ಹೌಸು, ಊರಿನ ರೆಸ್ಟೋರೆಂಟು, ಹೂವು ಮಾರುವ ಅಂಗಡಿ, ಜಾತ್ರೆಗೆ ಬರುತ್ತಿದ್ದ ಸಂತೆ, ಮುಂಜಾನೆ ಶಾಲೆಗೆ ಹೋಗುತ್ತಿದ್ದ ಫಸ್ಟ್ ಬಸ್ಸು... ಹೀಗೆ ಅಸಂಖ್ಯಾತ ದೃಶ್ಯಗಳಿಗೂ ಪರಿಮಳಗಳಿಗೂ ಪರೋಕ್ಷ ಕೊಂಡಿ ಇದ್ದೇ ಇರುತ್ತದೆ....


ಅರಿತರೆ, ಪರಿಶೀಲಿಸಿದರೆ, ವಿಂಗಡಿಸಿದರೆ ಸಹಸ್ರ ಸಹಸ್ರ ಗಂಧಗಳು, ಗಂಧಳೊಂದಿಗಿನ ನೆನಪುಗಳು, ಮತ್ತು ಅವುಗಳನ್ನೆಲ್ಲ ಶೇಖರಿಸಿಡಬಲ್ಲ ಮೆದುಳಿನ ಸಾಮರ್ಥ್ಯ ಎಲ್ಲ ವೈಜ್ಞಾನಿಕ ಸತ್ಯ ಮತ್ತು ಭಾವುಕ ಸಾಧ್ಯತೆಯ ದ್ಯೋತಕವೂ ಹೌದಲ್ವೇ... 


ಲೇಖನವನ್ನು ಕೊನೆಯ ವರೆಗೆ ಓದಿದವರಲ್ಲಿ ವಿನಂತಿ: ಮರೆತು ಹೋದ ಪರಿಮಳಗಳಿದ್ದರೂ ನನಗೂ ನೆನಪಿಸಿ... 


 -ಕೃಷ್ಣಮೋಹನ ತಲೆಂಗಳ.

No comments: