ದಾರಿಯೆಂಬೋ ಧ್ಯಾನಸ್ಥ ಸಂತ!






ದಾರಿ ಮತ್ತು ಬದುಕಿನ ಓಘಕ್ಕೆ ಎಷ್ಟೊಂದು ಹೋಲಿಕೆ ಇದೆ ಅಲ್ವ...? ತುದಿ ಕಾಣದ ಮಾರ್ಗ, ಅದರ ಅಂಕುಡೊಂಕು, ಎಲ್ಲೆಲ್ಲಿಗೋ ಕರೆದುಕೊಂಡ ಹೋಗಬಲ್ಲ ವ್ಯಾಪ್ತಿ, ಅನಿರೀಕ್ಷಿತ ತಿರುವುಗಳು, ಏರಿಳಿತ ರಸ್ತೆಯೊಂದರಲ್ಲಿ ಕಾಣಿಸುವ ಹಾಗೆ ಬದುಕಿನಲ್ಲೂ ಆವರಿಸಿರುತ್ತದೆ.... ರಸ್ತೆ ನಿರ್ಜೀವ, ಬದುಕು ಸಜೀವ ಅಷ್ಟೇ ವ್ಯತ್ಯಾಸ....!

 

ಸುಮ್ಮನೆ ಯೋಚಿಸಿ, ನಾಲ್ಕು ಮಾರ್ಗ ಸೇರುವ ಒಂದು ವೃತ್ತವನ್ನು ನೆನಪಿಸಿಕೊಳ್ಳಿ, ಉದಾಹರಣೆಗೆ ಮಂಗಳೂರಿನ ಪಂಪ್ ವೆಲ್ ಜಂಕ್ಷನ್ ನ್ನು ತೆಗೆದುಕೊಳ್ಳಿ. ಒಂದು ಕಡೆಗೆ ಹೋದರೆ ಮಂಗಳೂರು ನಗರ, ಅದರ ವಿರುದ್ಧ ದಿಕ್ಕಿಗೆ ಹೋದರೆ ಬೆಂಗಳೂರು ಅಥವಾ ಮೈಸೂರು, ಇನ್ನೊಂದು ಮಗ್ಗುಲಿಗೆ ಹೋದರೆ ಕನ್ಯಾಕುಮಾರಿ,ಅದರ ವಿರುದ್ಧ  ದಿಕ್ಕಿಗೆ ತೆರಳಿದರೆ ಮುಂಬೈ ತಲುಪಬಹುದು. ಒಂದು ಜಂಕ್ಷನ್ ಅಥವಾ ವೃತ್ತದಿಂದ ಯಾವ ರಸ್ತೆಯಲ್ಲಿ ಹೋಗಬೇಕು ಅಂತ ನಿರ್ಧಾರ ತೆಗೆದುಕೊಳ್ಳಲು ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಕೆಲವೇ ಸೆಕೆಂಡುಗಳು ಸಾಕು, ಅಥವಾ ಒಂದಷ್ಟು ನಿಮಿಷಗಳು ಅಷ್ಟೇ... ಆದರೆ ಅದರ ಪರಿಣಾಮ ಮಾತ್ರ ತುಂಬ ಪ್ರಭಾವಶಾಲಿಯಾಗಿರಬಲ್ಲುದು... ಕನ್ಯಾಕುಮಾರಿಗೆ ಹೋಗಬೇಕೆಂದವ ತಪ್ಪಿ ಮತ್ತೊಂದು ಮಗ್ಗುಲಿನತ್ತ ಪ್ರಯಾಣಿಸಿದರೆ, ತಾನು ದಾರಿ ತಪ್ಪಿರುವುದು ಆತನಿಗೆ ಬಹಳಷ್ಟು ಹೊತ್ತು ಅರಿವಿಗೇ ಬಾರದೇ ಇದ್ದರೆ ಹಾಗೂ ತಪ್ಪುಗಳನ್ನು ಮತ್ತಷ್ಟು ಮುಂದುವರಿಸಿ ಅದೇ ರಸ್ತೆಯಲ್ಲಿ ಹೋಗುತ್ತಲೇ ಇದ್ದರೆ, ತಲುಪಬೇಕಾದ ದಾರಿಯ ಬದಲು ಇನ್ನೆಲ್ಲಿಗೋ ತಲಪುವ ಹಾಗಾಗುತ್ತದೆ... ನಡು ನಡುವೆ ಅರವಿರವರಲ್ಲಿ ದಾರಿ ಕೇಳುತ್ತಿದ್ದರೆ ಮತ್ತೆ ಹಿಂದಕ್ಕೆ ಬರಬಹುದೇನೋ... ಆದರೆ, ಕೊಚ್ಚಿಯೋ, ತಿರುವನಂತಪುರಂ ತಲುಪಿದ ಬಳಿಕ ತಾನು ದಾರಿ ತಪ್ಪಿದ್ದು ಅರಿವಾದರೆ, ಆತ ಮತ್ತೆ ಮಂಗಳೂರು ತಲುಪಲು ಹೊತ್ತೆಷ್ಟು ಬೇಕು ಯೋಚಿಸಿ...!

 

ಬದುಕು ಕೂಡಾ ಹೀಗೆಯೇ ಅಲ್ವ? ನಿಮ್ಮೆದುರು ಕೆಲವಾರು ದಾರಿಗಳಿದ್ದು, ಒಂದನ್ನು ಆರಿಸಿಕೊಳ್ಳಲು ಆಯ್ಕೆ ಇದ್ದಾಗ ನಿಮಗೆ ನಿರ್ಧಾರ ತೆಗೆದುಕೊಳ್ಳಲು ಕೆಲವು ನಿಮಿಷಗಳು ಸಾಲಬಹುದು. ನಂತರ ಅದೇ ದಾರಿಯಲ್ಲಿ ಹೋಗ್ತಾ ಹೋಗ್ತಾ... ನೀವು ಉಳಿದ ಮೂರು ದಾರಿಗಳಿಂದ ದೂರ ದೂರ ಸಾಗುತ್ತೀರುತ್ತೀರಿ. ನಿಮ್ಮದೇ ಆಯ್ಕೆಯ ದಾರಿಯಲ್ಲಿ ಸಾಗಿದರೆ ಫೈನ್... ತಲುಪಬೇಕಾದಲ್ಲಿಗೆ ತಲಪುತ್ತೀರಿ. ಆದರೆ ಮನಸ್ಸಿಗೆ ಮಬ್ಬು ಕವಿದೋ ಅಥವಾ ಪರಿಸ್ಥಿತಿಯ ಒತ್ತಡಗಳಿಗೆ ಕಟ್ಟು ಬಿದ್ದೋ ತಿಳಿದೂ ತಿಳಿದೂ ಅಥವಾ ಅರೆಬರೆ ತಿಳಿದು ಬೇರೊಂದು ದಾರಿಗೆ ಕಾಲಿಟ್ಟು ಹೋಗ್ತಾ ಹೋಗ್ತಾ ವರುಷಗಳು ಕಳೆದ ಬಳಿಕ ಹಿಂದಿರುಗಿ ನೋಡಿದರೆ ನಿರ್ಧಾರ ತೆಗೆದುಕೊಂಡ ವೃತ್ತದಿಂದ ಸಾಕಷ್ಟು ದೂರ ಬಂದಿರುತ್ತೇವೆ...ಕೆಲವೊಮ್ಮೆ ವೃತ್ತಕ್ಕೆ ಮತ್ತೆ ಹೋಗುವಷ್ಟು ಸಮಯ ಇರಲೂಬಹುದು. ಮತ್ತೆ ಕೆಲವೊಮ್ಮೆ ವೃತ್ತದತ್ತ ಮತ್ತೆ ತಲಪುವ ಹೋತ್ತಿಗೆ ಆಯುಷ್ಯವೇ ಮುಗಿದು ಹೋಗಬಹುದು... !

ಅದಕ್ಕೇ ಹೇಳುವುದು, ನಾವೇ ಆರಿಸಿದ ದಾರಿಯಲ್ಲಿ ಹೋಗುವುದಕ್ಕೂ.... ದಾರಿಯೇ ನಮ್ಮನ್ನು ಅನಿಶ್ಚಿತತೆ ಕಡೆಗೆ ಕರೆದೊಯ್ಯುವುದಕ್ಕೂ ಎಷ್ಟೊಂದು ವ್ಯತ್ಯಾಸಗಳಿರುತ್ತವೆ ಅಲ್ವ....?

 

 

………………

 

 

ಹೌದು, ದಾರಿ ನಿರ್ಜೀವ, ನಿರ್ಲಿಪ್ತ. ಅದಕ್ಕೆ ಹೃದಯ, ಮನಸ್ಸು, ಮೆದುಗಳುಗಳಿಲ್ಲ.... ತನ್ನ ಮೇಲೆ ಮದುವೆ ದಿಬ್ಬಣ ಹೋದರೂ, ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ದರೂ, ಮತ್ತದೇ ಆಂಬುಲೆನ್ಸ್ ಮೃತದೇಹವನ್ನು ಹೊತ್ತೊಯ್ದರೂ, ನಿನ್ನೆ ತಾನೇ ಹುಟ್ಟಿದ ಮಗುವನ್ನು ಅಮ್ಮನ ಜೊತೆ ಮನೆಗೆ ಕರೆದೊಯ್ದರೂ ದಾರಿ ತಾನು ಹೋಗುವವರಿಗೆ ಅನುವು ಮಾಡಿಕೊಡುತ್ತದೆ...

ದಾರಿಗೆ ರಾಗ ದ್ವೇಷಗಳಿಲ್ಲ, ಋತುಗಳ ಬಂಧವಿಲ್ಲ, ಹಗಲಿರುಳುಗಳ ಭೇದವಿಲ್ಲ... ಪ್ರಖರ ಹೆಡ್ ಲೈಟ್ ಇದ್ದರೆ ರಾತ್ರಿಯೂ ಸಾಗಬಹುದು. ಆದರೆ, ದಾರಿಯ ಇಕ್ಕೆಲಗಳ ಪರಿಸರ, ರಾತ್ರಿಯಲ್ಲಿ ಕಾಡುವ ಶೂನ್ಯತೆ, ನಿರ್ಜನ ಪರಿಸರ, ಕತ್ತಲಲ್ಲಿ ಎಲ್ಲವೂ ಕಣ್ಣುಕಟ್ಟುವ ಸ್ಥಿತಿಯಲ್ಲಿ ಹೋಗುವವರು ಸಿದ್ಧರಿರಬೇಕು ಅಷ್ಟೇ.... ದಾರಿ ಯಾರಿಗೂ ಪಥ ತಪ್ಪಿಸುವುದಿಲ್ಲ. ದಾರಿಯಲ್ಲಿ ಹೋಗುವವರು ಮಾಹಿತಿ ತಿಳಿಯದಿದ್ದರೆ, ಸೂಕ್ತ ದಾರಿ ಹುಡುಕದಿದ್ದರೆ ಅದು ದಾರಿಯ ತಪ್ಪಲ್ಲ, ಇದೇ ಸರಿಯಾದ ದಾರಿ, ಇದು ತಪ್ಪೆಂದು ಹೇಳಲು ದಾರಿಗೆ ಬಾಯಿ ಬರುವುದಿಲ್ಲ. ಅಸಲಿಗೆ ದಾರಿಯಲ್ಲಿ ಸರಿ ದಾರಿ, ತಪ್ಪು ದಾರಿ ಎಂಬ ಕಲ್ಪನೆಯೇ ಇಲ್ಲ... ನಮಗೆ ಆ ದಾರಿ ಸೂಕ್ತ ಹೌದೋ, ಅಲ್ಲವೋ ಎಂಬುದು ಮಾತ್ರ ಪ್ರಶ್ನೆ... ನಾವು ಆಯ್ಕೆಯಲ್ಲಿ ಎಡವಿದ ಬಳಿಕ ಸರಿ ದಾರಿ, ತಪ್ಪು ದಾರಿ ಎಂದು ದಾರಿಗೆ ಲೇಬಲ್ ಹಚ್ಚುತ್ತೇವೆ....!

 

.................

 

ಮೊದಲೆಲ್ಲ ದಾರಿ ಪಕ್ಕ ವಾಹನ ನಿಲ್ಲಿಸಿ ದಾರಿ ಯಾವುದಯ್ಯಾ?” ಅಂತ ಕೇಳಿ ಹೋಗುವ ಪ್ರಮೇಯವಿತ್ತು... ಈಗ ಹಾಗಲ್ಲ, ಗೂಗಲ್ ಮ್ಯಾಪು ಬಂದಿದೆ, ಸ್ವದೇಶಿ ನಾವಿಕ್ ಮಾರ್ಗಸೂಚಿ ಲಭ್ಯವಿದೆ. ಕೈಯ್ಯಲ್ಲೊಂದು ಮೊಬೈಲು, ಅದಕ್ಕೆ ಜಿಪಿಎಸ್ಸು, ಇದ್ದರೆ ಯಾರು ಯಾರಲ್ಲೂ ಮಾತನಾಡಬೇಕಿಲ್ಲ, ಈ ದಾರಿ ಯಾಕೆ.. ಇದು ತಪ್ಪಿದರೆ ಇನ್ನು ಇಪ್ಪತ್ತು ದಾರಿಯನ್ನು ಗೂಗಲ್ ತೋರಿಸಿಕೊಡುತ್ತದೆ... ! ಇದಲ್ಲದಿದ್ದರೆ, ಇನ್ನೊಂದು ಮಾರ್ಗ ಇದ್ದೇ ಇದೆ, ಹೆದರಬೇಡ ಅಂತ... ಹಾಗಾಗಿ ಮಳೆ, ಗಾಳಿ, ಚಳಿ ಇರಲಿ, ಹಗಲು, ರಾತ್ರಿಯಿರಲಿ ದಾರಿ ಹುಡುಕಿಕೊಂಡು ಹೋಗುವುದು ಸಮಸ್ಯೆಯೇ ಅಲ್ಲ. ಅಷ್ಟರ ಮಟ್ಟಿಗೆ ಸಮಕಾಲೀನರಾಗಿದ್ದೇವೆ... ದಾರಿಯನ್ನೇನೋ ಗೂಗಲ್ ತೋರಿಸುತ್ತದೆ... ಆದರೆ ಎಲ್ಲಿಗೆ, ಯಾವಾಗ ಹೋಗಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು ಅಷ್ಟೆ...!

 

…………………………

 

ಈಗ ಸಿನಿಮಾಗಳಲ್ಲಿ ಡ್ರೋಣ್ ಕ್ಯಾಮೆರಾಗಳು ಸಾಕಷ್ಟು ಸಂಖ್ಯೆಯಲ್ಲಿ ಬಳಕೆಯಾಗುತ್ತವೆ... ನಿತ್ಯ ನಾವು ಹೋಗುವ ಅದೇ ದಾರಿ, ಅದೇ ಸೇತುವೆ, ಅದೇ ಸಮುದ್ರ ಪಕ್ಕದ ಮಾರ್ಗ, ಘಾಟಿಯ ಅಂಕುಡೊಂಕು ರಸ್ತೆಗಳನ್ನು ಸಿನಿಮಾದಲ್ಲಿ ಡ್ರೋಣ್ ಕ್ಯಾಮೆರಾದಲ್ಲಿ ತೋರಿಸುವಾಗ ಎಷ್ಟು ರೋಮಾಂಚನ ಆಗುತ್ತದೆ ಅಲ್ವ.... ಆ ಸೊಬಗು, ಆ ಸಾಧ್ಯತೆ, ಆ ವಿಸ್ತಾರ, ಆ ಸುದೀರ್ಘ ನೋಟ ಇದ್ಯಾವುದೂ ನಾವು ಆ ದಾರಿಯ ಭಾಗವಾಗಿ ಸಾಗುವಾಗ ನಮ್ಮ ಅರಿವಿಗೆ ಬರುವುದೇ ಇಲ್ಲ... ದಾರಿಯಿಂದ ಮೂರನೇ ವ್ಯಕ್ತಿಯಾಗಿ ಎತ್ತರದಲ್ಲಿ ನಿಂತು ಝೂಮ್ ಔಟ್ ಆಗ್ತಾ ಆಗ್ತಾ ಹೋದ ಹಾಗೆ, ತಿಳಿಯುತ್ತದೆ... ನಾವಿರುವ ದಾರಿ ಯಾವುದು, ಅದರಲ್ಲಿ ನಾವೆಷ್ಟು ಸಣ್ಣವರು.. ಸುತ್ತಮುತ್ತ ಹೇಗಿದೆ ಪರಿಸರ... ಅದೇ ದಾರಿಯಲ್ಲಿ ಸಾಗಿದರೆ ಎಲ್ಲಿಗೆ ತಲುಪೀತು... ಹೀಗೆಲ್ಲ.... ಬದುಕು ಕೂಡಾ ಹೀಗೆಯೇ ಅಲ್ವೆ?

 ಕೆಲವೊಮ್ಮೆ ಯಾರೋ ತೋರಿಸಿಕೊಟ್ಟಾಗಲೇ ತಿಳಿಯುವುದು ನಾವು ಹೋಗ್ತಾ ಇರುವ ದಾರಿ ಹೇಗಿದೆ...? ನಾವೀಗ ಎಲ್ಲಿಯ ವರೆಗೆ ತಲುಪಿದ್ದೇವೆ? ಅಂತ....

 

.............

 

 

ದಿನನಿತ್ಯ ಹೋಗುವ ದಾರಿಯಲ್ಲಿ ಪ್ರಯಾಣ ಕಷ್ಟವೇನಲ್ಲ.. ಅದೇ ಗುಂಡಿಗಳು, ರಸ್ತೆ ಉಬ್ಬುಗಳು, ತಿರುವುಗಳು, ಗೇಟು, ಚೆಕ್ ಪೋಸ್ಟು, ಬ್ಯಾರಿಕೇಡು, ರಿಫ್ಲೆಕ್ಟರ್, ಉದ್ದದ ಒಂದು ಸೇತುವೆ, ಮತ್ತೆರಡು ಕಡೆ ಕವಲು ದಾರಿ, ಎರಡೆರಡು ಫ್ಲೈ ಓವರ್ರು, ಕೂಡು ರಸ್ತೆ, ಸಣ್ಣದೊಂದು ತಿರುವು, ಮತ್ತೆರಡು ಏರು ದಾರಿಗಳು.... ಪ್ರೋಗ್ರಾಮಿಂಗ್ ಮಾಡಿಟ್ಟಂತೆ ಸಾಗಬಹುದು.... ಮನಸ್ಸು ಯೋಚಿಸುತ್ತಿದ್ದರೂ ಅಂಗಾಂಗಗಳು ವಾಹನ ಚಲಾಯಿಸಿಯಾವು... ಅಪರಿಚಿತ ದಾರಿ ಹಾಗಲ್ಲ... ಎಲ್ಲವೂ ಕೌತುಕ. ಊಹೆಗೆ ನಿಲುಕದ್ದು. ತಿರುವಿನಾಚೆಗಿನ ರಸ್ತೆ ಕಾಣುವುದಿಲ್ಲ.... ಹೇರ್ ಪಿನ್ ತಿರುವಿನಲ್ಲಿ ವಾಹನ ಎಷ್ಟರ ಮಟ್ಟಿಗೆ ತಿರುಗುತ್ತದೆ ಎಂಬುದು ಅಲ್ಲಿಗೆ ತಲಪುವ ವರೆಗೆ ಅಂದಾಜಾಗುವುದಿಲ್ಲ.... ವಿಪರೀತ ಮಳೆಯಾಗುವಾಗ ರಸ್ತೆಯ ಗುಂಡಿಗೆ ಚಕ್ರ ಇಳಿಯದೆ ಅಲ್ಲೆಷ್ಟು ನೀರು ಹರಿಯುತ್ತದೆ ಎಂಬುದು ಯೋಚನೆಗೆ ನಿಲುಕುವುದಿಲ್ಲ...

 

ಕೆಲವೊಂದು ಅನುಭವಗಳೇ ಹಾಗೆ... ವಾಸ್ತವದ ಜೊತೆ ಗುದ್ದಾಡದೆ ತಿಳಿಯುವುದೇ ಇಲ್ಲ... ಆನ್ ಲೈನ್ ಮೂಲಕ ಈಜು ಕಲಿಯಲು ಸಾಧ್ಯವಿಲ್ಲ, ಡ್ರೈವಿಂಗ್ ಕ್ಲಾಸ್ ತೆಗೆದುಕೊಂಡರೂ ಅದು ಪರಿಣಾಮಕಾರಿಯಾಗಲಿಕ್ಕಿಲ್ಲ... ಅದು ರಂಗಕ್ಕೆ ಇಳಿದೇ ಕಲಿಯಬೇಕಾದ ವಿಚಾರಗಳು... ರಸ್ತೆಗಳ ಮೂಲಕ ಹೋಗುವುದೂ ಅಷ್ಟೇ ಹೋಗಿಯೇ ತಿಳಿಯಬೇಕು...

 

ದೊಡ್ಡದೊಂದು ಚಾರಣದಲ್ಲಿ ಕಡಿದಾದ ಗುಡ್ಡದ ಸೆರಗಿನಲ್ಲಿ ನಡೆಯುವಾಗ, ಪೊದೆ, ಹುಲ್ಲುಗಳ ನಡುವೆ ಒಬ್ಬ ಮಾತ್ರ ತೂರುವಷ್ಟು ಜಾಗದಲ್ಲಿ ಚಪ್ಪಲಿ ಜಾರುತ್ತಾ, ಜೌಗು ಮಣ್ಣನಲ್ಲಿ ಕಾಲು ಹೂತು ಹೋಗುತ್ತಾ, ಮತ್ತೆ ಮೊಣಕಾಲಿಗೆ ಮುಳ್ಳು ತರಚುತ್ತಾ ಹೋಗುವಾಗ ಧುತ್ತನೆ ಸಿಗುವ ತೊರೆಯಲ್ಲಿ,ತಂಪು ನೀರಿನಲ್ಲಿ ಮೊಣಕಾಲ ಗಂಟ ಕಾಲು ಎಳೆದೆಳೆದು ಸಾಗುವ ಸುಖ ಇದೆಯಲ್ಲ, ಆ ಮೊದಲಿನ ತರಚು ದಾರಿಯ ನೆನಪು ಮಾಸುವಂತೆ ಮಾಡುತ್ತದೆ... ಮತ್ತೆ ಸುಡು ಬಿಸಿಲಿಗೆ ಬೋಳು ಬೆಟ್ಟದ ಗೀಚಿಟ್ಟಂತೆ ಕಾಣಿಸುವ ಸವೆದ ಕಾಲು ದಾರಿಯಲ್ಲಿ ಸಾಗುವಾಗ, ಬೆವರಿನ ಸ್ನಾನವಾಗಿ, ಉಸಿರಾಟ ಕಷ್ಟವಾಗಿ ಎದೆ ಉರಿದು, ನಡೆದಷ್ಟೂ ಬೆಟ್ಟ ಎತ್ತರೆತ್ತರವೇ ಇದೆ ಎಂದು ಭಾಸವಾದಾಗ್ಯೂ... ಚಾರಣ ಮುಗಿದು ತುತ್ತತುದಿ ತಲುಪಿದಾಗ ಬೀಸುವ ತಂಪು ಗಾಳಿಗೆ, ಸುತ್ತಲಿನ ಲೋಕವೆಲ್ಲ ಆಳದಲ್ಲಿ ಚೆಂದದ ಬೆಂಕಿ ಪೊಟ್ಟಣದಂತೆ ಕಾಣುವಾಗಿ ಸಿಗುವ ಖುಷಿ ಇದೆಯಲ್ಲ... ನಡೆದ ದಾರಿಯ ಶ್ರಮವನ್ನು ಮರೆಸುತ್ತದೆ... ಗಮ್ಯ ತಲುಪಿದಾಗ ಸಿಕ್ಕುವ ಸಾರ್ಥಕ ಭಾವಕ್ಕೆ ನಡೆದ ದಾರಿಯ ಓರೆಕೋರೆಗಳು, ಕಹಿ ನೆನಪುಗಳನ್ನೂ ಮರೆಸುವ ಶಕ್ತಿ ಇರುತ್ತದೆ...

.....................

 

ಮತ್ತೊಂದು ವಿಚಾರ ಗಮನಿಸಿದ್ದೀರ... ಪ್ರವಾಸವೇ ಇರಲಿ, ಪ್ರಯಾಣವೇ ಇರಲಿ, ದೂರದೂರುಗಳಿಗೆ ಹೋಗುವಾಗ ದಾರಿ ಸುದೀರ್ಘವಾದಂತೆ ಭಾಸವಾಗುತ್ತದೆ. ವಾಪಸ್ ಮರಳುವಾಗ ಅದೇ ದಾರಿ ಬೇಗ ಮುಗಿದಂತೆ, ಹೋದದ್ದಕ್ಕಿಂತ ಕ್ಷಿಪ್ರವಾಗಿ ಮರಳಿದಂತೆ ಅನ್ನಿಸುತ್ತದೆ.. ಯಾಕೋ ಗೊತ್ತಿಲ್ಲ.... ಒಂಟಿಯಾಗಿ ಹೋಗುವಾಗ ದಾರಿ ದೀರ್ಘವಾಗುವುದು, ಗುಂಪಿನಲ್ಲಿ ಕಲೆತು ಹರಟೆ ಹೊಡೆಯುತ್ತಾ ಸಾಗುವಾಗ ದಾರಿಯ ಶ್ರಮ ಮರೆಯುವುದು, ದಾರಿಯ ದೀರ್ಘತೆಯ ಅರಿವು ಆಗದಿರುವುದು ಇವೆಲ್ಲ, ಬಳಲಿಕೆ, ಔದಾಸೀನ್ಯ ಇವಕ್ಕೆಲ್ಲ ಮನಃಸ್ಥಿತಿಯೂ ಕಾರಣ ಎಂಬುದನ್ನು ಮನದಟ್ಟು ಮಾಡಿಸುತ್ತಿದೆ ಅಷ್ಟೇ....

 

.......................

 

ಮಳೆಗಾಲದಲ್ಲಿ ಚಾರ್ಮಾಡಿಯ ಘಾಟ್ ರಸ್ತೆಯಲ್ಲಿ ಸಾಗುವಾಗ ಬೆಟ್ಟದಿಂದ ವಿಶಾಲವಾಗಿ ಇಳಿಯುವ ನೀರಿನ ಝರಿ ರಸ್ತೆಯನ್ನೇ ತೋಯಿಸುತ್ತದೆ.... ಮಡಗಾಂವ್ ನಿಂದ ಪೂನಾದತ್ತ ಸಾಗುವ ಕಾಡ ನಡುವಿನ ಅಂಕುಡೊಂಕು ಹಳಿಗಳ ನಡುವೆ ಬೃಹತ್ ಗಾತ್ರದಲ್ಲಿ ಧುಮುಕುವ ಧೂದ್ ಸಾಗರ್ ಜಲಪಾತ, ಸೇತುವೆ ಮೇಲೆ ಸಾಗುವ ರೈಲಿನ ಮೇಲೆ ಪನ್ನೀರಿನ ಸಿಂಚನ ಮಾಡುತ್ತದೆ.... ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಸಕಲೇಶಪುರವಾಗಿ ಬೆಂಗಳೂರಿಗೆ ರೈಲಿನಲ್ಲಿ ಹೋಗುವ ದಾರಿಯೂ ಹಸಿರು ವನಸಿರಿಯ ದರ್ಶನ ಮಾಡಿಸುತ್ತದೆ... ಕುಂದಾಪುರದಿಂದ ಮುಂದೆ ಬೈಂದೂರಿಗೆ ಹೋಗುವಾಗ ತ್ರಾಸಿ ಭಾಗದಲ್ಲಿ ಸಿಗುವ ಮರವಂತೆ ಬೀಚು ಅತ್ತ ನದಿ, ಇತ್ತ ಕಡಲು, ನಡುವೆ ಸುದೀರ್ಘವಾದ ಒಂದು ರಸ್ತೆ... ಉಡುಪಿ ಜಿಲ್ಲೆಯ ಕಾಪುವಿನಿಂದ ಮಲ್ಪೆ ಬಂದರಿನ ತನಕ ಕಡಲ ತಡಿಯಲ್ಲೇ ಒಂದು ಚೊಕ್ಕದಾದ ರಸ್ತೆಯಿದೆ. ದಾರಿಯುದ್ದಕ್ಕೂ ಪಕ್ಕದಲ್ಲಿ ಕಡಲಿನ ನರ್ತನ.... ಅಷ್ಟೇ ಯಾಕೆ. ಅದೇ ಮಲ್ಪೆ ಬಂದರಿನ ಪಕ್ಕ ಸಮುದ್ರದ ನಡುವೆ ನಡಿಗೆಯ ಭಾಸ ನೀಡುವ ಸೀ ವಾಕ್ ದಂಡೆಯಿದೆ... ಇಂತಹ ಸಹಸ್ರಾರು ದಾರಿಗಳು... ಅವು ದಾರಿಗಳಲ್ಲ.. ಅವೆಲ್ಲ ಅನುಭೂತಿಗಳು...

ದಾರಿ ಮಾತನಾಡುವುದಿಲ್ಲ ಹೌದು... ಆದರೆ ದಾರಿ ಕಟ್ಟಿಕೊಡುವ ಚಿಂತನೆಗಳ ಬುತ್ತಿ ಮಾತನಾಡಿಸುತ್ತದೆ, ದಾರಿ ಚಿಂತಿಸುವುದಿಲ್ಲ.. ಆದರೆ, ದಾರಿಯ ವ್ಯಾಪ್ತಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ... ದಾರಿಗೆ ರಾಗ ದ್ವೇಷಗಳಿಲ್ಲ... ಆದರೆ, ದಾರಿಯ ಸೊಬಗು ನಮಗೆ ದಾರಿಯ ಮೇಲೆ ಮೋಹ ಕಟ್ಟಿಕೊಡುತ್ತದೆ... ದಾರಿಗೆ ನೇರವಾಗಿರುವ ಹಂಗಿಲ್ಲ, ಅಂಕುಡೊಂಕು ಇದ್ದಾಗ್ಯೂ ಅದು ಚಿಂತಿಸುವುದಿಲ್ಲ... ನೇರಕ್ಕೂ, ತಿರುವಿಗೂ ದಾರಿಗೆ ತನ್ನದೇ ಆದ ಕಾರಣಗಳಿರುತ್ತವೆ.... ಸಮಷ್ಟಿಯಾಗಿ ಅದನ್ನು ದಾರಿ ಎನ್ನುತ್ತೇವೆ ಹೊರತು, ಒಂದು ಭಾಗವಾದ ತಿರುವು, ಒಂದು ಏರು, ಒಂದು ಇಳಿಜಾರನ್ನು ಮಾತ್ರ ದಾರಿ ಎನ್ನುವುದಿಲ್ಲ... ಬದುಕು ಕೂಡಾ ಹಾಗೆಯೇ ಅಲ್ವೇ?!

 

……………………………….

 

ಬೇಕೆಂದೇ ದಾರಿ ತಪ್ಪಿಸಿ ಯಾವತ್ತಾದರೂ ಹೋಗಿದ್ದೀರ...? ತಿಳಿಯದೇ ದಾರಿ ತಪ್ಪಿ ಅಲೆದಾಡಿದ್ದಿದೆಯಾ....? ತಪ್ಪಿದ ದಾರಿಯಲ್ಲೂ ಚೆಂದದ ದೃಶ್ಯಗಳು ಕಂಡದ್ದಿದೆಯಾ...? ಮಾತಿಗೆ, ಬರಹಕ್ಕೆ ನಿಲುಕದ್ದು, ಹೇಳಿಕೊಳ್ಳಲು, ವಿವರಿಸಲು ಬಾರದ್ದು, ಕಂಡದ್ದು, ನೋಡಿದ್ದು, ಕಾಣಿಸಿದ್ದು, ಗ್ರಹಿಸಿದ್ದು ದಾರಿಗಳ ವೈರುಧ್ಯಗಳಲ್ಲಿ ಸುತ್ತಿ ಸುತ್ತಿ ಬಂದು ಅಷ್ಟಿಷ್ಟು ಪಡೆದು ಬಂದಾಗ... ನಮಗೆ ತಕ್ಷಣಕ್ಕೆ ಅಂದಾಜೇ ಆಗುವುದಿಲ್ಲ.... ದಾರಿ ನಮಗೆಷ್ಟು ಪಾಠ ಕಲಿಸಿರುತ್ತದೆ ಎಂದು....!

-ಕೃಷ್ಣಮೋಹನ ತಲೆಂಗಳ.


No comments: