Online ಪಾಠಗಳು!
Internet ಚಿತ್ರ
---------------------
ನೀವು ಸರಾಗವಾಗಿ ಬೈಕಿನಲ್ಲಿ ಹೋಗ್ತಾ ಇರ್ತೀರ... ಪೇಟೆಯೆಲ್ಲ ದಾಟಿ ಒಂದು ಸೇತುವೆ ಕಳಿದ ಬಳಿಕ ಬೈಕ್ ದೋಣಿಯಂತೆ ವಾಲುತ್ತಾ ತೂರಾಡಲು ಶುರು ಮಾಡುತ್ತದೆ. ತಕ್ಷಣ ಗೊತ್ತಾಗುತ್ತದೆ. ಬೈಕ್ ಟಯರ್ ಪಂಕ್ಚರ್ ಆಗಿದೆಯೆಂದು. ದುರ್ದೈವ ನೋಡಿ. ಪಂಕ್ಚರ್ ಆಗಿದ್ದು ಪೇಟೆ ಕಳಿದ ಬಳಿಕ, ಇಂದು ಆದಿತ್ಯವಾರ ಬೇರೆ, ಯಾವುದೇ ಪಂಕ್ಚರ್ ಅಂಗಡಿ ತೆರೆದಿರುವುದಿಲ್ಲ. ಮಧ್ಯಾಹ್ನ ಒಂದು ಮದುವೆ ಕಾರ್ಯಕ್ರಮಕ್ಕೆ ತೆರಳಲೇ ಬೇಕು. ಬೈಕನ್ನು ಅಲ್ಲೇ ಪಕ್ಕದಲ್ಲಿ ಇರಿಸೋಣ ಎಂದರೆ ಯಾವ ಪರಿಚಿತರೂ ಇಲ್ಲ, ಕಟ್ಟಡಗಳು ಇಲ್ಲ. ಬೈಕು ಬಿಟ್ಟು ಹೋದರೆ ವಾಪಸ್ ಬರುವಾಗ ಇರುತ್ತದೆಯೇ ಎಂಬ ಧೈರ್ಯ ಇಲ್ಲ. ಮಾತ್ರವಲ್ಲ, ಇನ್ನು ಮದುವೆ ಮನೆ ಕಡೆಗೆ ಬಸ್ ಇದೆಯೋ, ಇದ್ದರೂ ಎಷ್ಟು ಹೊತ್ತಿಗೆ. ಈ ಆದಿತ್ಯವಾರ ಇನ್ನು ಯಾರನ್ನು ಹುಡುಕುವುದು. ಕಳೆದ ವಾರ ಬೈಕ್ ಸರ್ವಿಸಿಗೆ ಇಟ್ಟಾಗ, "ಸಾರ್ ಟಯರ್ ಸವೆದಿದೆ ಸರ್ ಬದಲಿಸೋದು ವಾಸಿ" ಅಂತ ಸರ್ವಿಸ್ ಅಡ್ವೈಸರ್ ನೀಡಿದ ಸಲಹೆಯನ್ನು ಕಡೆಗಣಿಸಬಾರದಿತ್ತು ಅಂತ ಜ್ಞಾನೋದಯ ಆಗುವಾಗ ತುಂಬ ತಡವಾಗಿತ್ತು...
..............
ಗೆಳೆಯ ಅಂತ ಅಂದುಕೊಂಡಿದ್ದ ವ್ಯಕ್ತಿ ಅಸರವಸರವಾಗಿ ಫೋನ್ ಮಾಡ್ತಾನೆ. "ಮಾರಾಯ ತುಂಬ ಅರ್ಜೆಂಟ್ ಇತ್ತು. ಒಂದು 10 ಸಾವಿರ ಈಚೆ ಅಕೌಂಟಿಗೆ ಹಾಕಬಹುದ..?. ಈಗ ಸಂಜೆ ನನಗೊಂದು ಅಮೌಂಟ್ ಬರ್ಲಿಕಿತ್ತು. ನಾಡಿದ್ದು ಬೆಳಗ್ಗೆ ನಿನಗೆ ಗೂಗಲ್ ಪೇ ಮಾಡ್ತೇನೆ. ನಿನ್ನ ಅಕೌಂಟ್ ನಂಬರ್ ಕೊಡು, ತುಂಬ ಅರ್ಜೆಂಟ್. 10 ಇಲ್ಲದಿದ್ದರೆ ಐದಾದರೂ ಸಾಕು, ಎಂತ ಮಾಡುವುದು ಅಂತ ಗೊತ್ತಾಗುವುದಿಲ್ಲ..." ಅಂತ ಅಂದದ್ದೇ ತಡ...
ಇಷ್ಟರ ವರೆಗೆ ದುಡ್ಡು ಕೇಳಿದವನಲ್ಲ, ಪಾಪ ಏನು ಕಷ್ಟವೋ ಏನೋ, ತುಂಬ ನೋಡಿ ಗೊತ್ತಿರುವ ಜನ ಅಂತ ತಕ್ಷಣ ನಿಮ್ಮ ಅಕೌಂಟಲ್ಲಿ ಅಷ್ಟು ದುಡ್ಡಿಲ್ಲದಿದ್ದರೂ ಸ್ನೇಹಿತನ ಹತ್ರ ಯಾಚಿಸಿ, 10 ಸಾವಿರವನ್ನೂ ಆತನಿಗೆ ಗೂಗಲ್ ಪೇ ಮಾಡ್ತೀರಿ ಅಂತ ಇಟ್ಕೊಳ್ಳಿ. ಇದಾಗಿ ವಾರ ಕಳೆಯುತ್ತದೆ, ತಿಂಗಳು ಕಳೆಯುತ್ತದೆ ಮತ್ತೊಂದು ದಿವಸ ನೀವು ದಾಕ್ಷಿಣ್ಯದಲ್ಲೇ ಆತನಿಗೆ ಮೆಸೇಜು ಮಾಡುತ್ತೀರಿ. "ನಂದ್ ಅಮೌಂಟ್ ಯಾವಾಗ ಕೊಡ್ತೀಯಾ? ಸಾಲರಿ ಲೇಟಾಗಿದೆ, ಸ್ವಲ್ಪ ಟೈಟ್ ಇದೆ" ಅಂತ. ಆಶ್ಚರ್ಯ ಆತನಿಗೆ ಮೆಸೇಜೇ ಹೋಗ್ತಿಲ್ಲ, ಬ್ಲಾಕ್ ಆಗಿದೆ ನಂಬರ್!!!
ಇದ್ದಬದ್ದವರತ್ರ ಕೇಳಿದಾಗ, ಆತನ ಜಿಯೋ ನಂಬರ್ ಸಿಗ್ತದೆ. ಅದಕ್ಕೆ ಮಾಡಿದಾಗ, ಆತ, "ಅರೆ ಮರುದಿನವೇ ಹಾಕಿದ್ನಲ್ಲ,? ಸಿಕ್ಕಿಲ್ವ" ಅಂತ ಆಶ್ಚರ್ಯ ನಟಿಸುತ್ತಾನೆ. ನೀವೂ ನಂಬುತ್ತೀರಿ. "ಇಲ್ಲ ಮಾರಾಯ, ದುಡ್ಡು ಬಂದರೆ ನಾನ್ಯಾಕೆ ಕೇಳುತ್ತೇನೆ. ಬಂದಿಲ್ಲ" ಅಂದಾಗ, "ಓಕೆ, ತಕ್ಷಣ ನಿನ್ನ ಅಕೌಂಟ್ ನಂಬರ್ ಕಳ್ಸು ಹಾಕುತ್ತೇನೆ" ಅಂತ ಹೇಳಿ ಪುನಃ ನಿಮ್ಮನ್ನು ನಂಬಿಸುತ್ತಾನೆ. ನೀವು ಸತ್ಯ ನಂಬಿ ಪುನಃ ಆತನಿಗೆ ನಿಮ್ಮ ಅಕೌಂಟ್ ನಂಬರ್ ಕೊಡ್ತೀರಿ...
ಆದರೆ, ವಾರ ಬಿಡಿ ವರ್ಷ
ಕಳೆದರೂ ಆತನ ದುಡ್ಡು ವಾಪಸ್ ಬರುವುದಿಲ್ಲ. ಕೇಳುವುದಕ್ಕೂ, ನಾಲ್ಕು ಜನರಲ್ಲಿ
ಹೇಳಿಕೊಳ್ಳುವುದಕ್ಕೂ ದಾಕ್ಷಿಣ್ಯ. ಅಸಲಿಗೆ ಆತ ಕೇಳಿದ ತಕ್ಷಣ ದುಡ್ಡು ಕೊಟ್ಟದ್ದು ನಿಮ್ಮದೇ
ತಪ್ಪು, ಕಾರಣ ಕೂಡಾ ಕೇಳದೆ, ಯಾರೂ ಇದಕ್ಕೆ ಗ್ಯಾರಂಟಿ ಕೊಟ್ಟವರಿರಲಿಲ್ಲ. ತುಂಬ ಪ್ರಯತ್ನದ ಬಳಿಕ
ದುಡ್ಡು ಪಡೆದವ ತಲೆ ಮರೆಸಿಕೊಂಡು ಓಡಾಡಿದ ಬಳಿಕ ಇನ್ಯಾರತ್ರವೋ ಕೇಳಿದಾಗ, "ಓ ಆತನಿಗೆ ದುಡ್ಡು ಕೊಟ್ಟದ್ದ
ಮಾರಾಯ? ಅವ ಯಾರಿಗೂ ಸಾಲ ವಾಪಸ್ ಮಾಡಿದ ಇತಿಹಾಸವೇ ಇಲ್ಲ..." ಅನ್ನುವ ಉತ್ತರ ಬಂದಾಗ ನೀವು ತಬ್ಬಿಬ್ಬಾಗುತ್ತೀರಿ.
ನಿಮ್ಮ ದುಡ್ಡು ವಾಪಸ್ ಬರುವುದಿಲ್ಲ ಅನ್ನುವುದು ಖಚಿತವಾಗುತ್ತದೆ...
ಇಲ್ಲಿ ಗಮನಿಸಬೇಕಾದ ವಿಷಯಗಳು
11)
ದುಡ್ಡು ಪಡೆದಾತನಿಗೆ ಆರ್ಥಿಕ
ಸಂಕಷ್ಟ ಇದ್ದು ಮರಳಿಸಲು ಸಾಧ್ಯವಾಗದಿದ್ದರೆ ಅದನ್ನು ಪ್ರಾಮಾಣಿಕವಾಗಿ ಹೇಳಬಹುದಿತ್ತು. ಆದರೆ
ಮತ್ತೆ ಸುದ್ದಿಯೇ ಎತ್ತುವುದಿಲ್ಲ
2 2) ಮನಸ್ಸಿದ್ದರೆ 100
ರು.ಗಳಂತಾದರೂ ಸ್ವಲ್ಪ ಸ್ವಲ್ಪವೇ ಸಾಲ ತೀರಿಸಬಹುದಿತ್ತು. ಆದರೆ ಅದಕ್ಕೂ ಇಷ್ಟ ಇಲ್ಲ
3 3) ಅಥವಾ ದುಡ್ಡು
ಕೊಟ್ಟಾತನ ಕೈತುಂಬ ದುಡ್ಡಿದೆ, ಕೊಡದಿದ್ದರೇನು
ಎಂಬ ದಾಷ್ಟ್ಯವೂ ಇರಬಹುದು.
4 4) ಸೌಜನ್ಯ ಇದ್ದವರು, ಮಾನವೀಯತೆ ಇದ್ದವರು ದುಡ್ಡು ಕೊಡಲಾಗದಿದ್ದರೆ ಕನಿಷ್ಠ ಬಾಯಿ ಮಾತಿನಲ್ಲಾದರೂ ಅವಧಿ ಕೇಳಬಹುದು. ಅಥವಾ, ಈ ಥರ ಕಷ್ಟ ಇದೆ, ನಿನ್ನ ದುಡ್ಡು ವಾಪಸ್ ಕೊಡ್ಲಿಕಾಗುವುದಿಲ್ಲ, ಸಾಧ್ಯವಾದರೆ ಭವಿಷ್ಯದಲ್ಲಿ ಯಾವತ್ತಾದರೂ ಕೊಟ್ಟೇನು ಅಂತಾದರೂ ಹೇಳಬಹುದು. ಏನೂ ಮಾಡದೆ ಪಡೆದ ದುಡ್ಡಿನ ಬಗ್ಗೆ ಚಕಾರ ಎತ್ತದೆ ಆರಾಮವಾಗಿ ಕಣ್ಣೆದುರು ತಿರುಗಾಡುವವರನ್ನು ಯಾವ ವರ್ಗಕ್ಕೆಸೇರಿಸಬೇಕೊ ಗೊತ್ತಿಲ್ಲ!!!
ಇದಾದ ನಂತರ ಯಾರೋ ಒಬ್ಬರು ನಿಮ್ಮಲ್ಲಿ ಅತ್ಯಂತ ದುಃಸ್ಥಿತಿಯಲ್ಲಿ ದುಡ್ಡು ಕೇಳುತ್ತಾರೆ ಅಂತ ಇಟ್ಟುಕೊಳ್ಳಿ. ಆಗ ನೀವು ಹೇಳ್ತೀರಿ. "ಮಾರಾಯ, ಈ ಹಿಂದೆ ನಾಲ್ಕೈದು ಮಂದಿ ದುಡ್ಡು ಪಡೆದವರು ಅಸಲು ಬಿಡು, ಒಂದು ಪೈಸೆ ವಾಪಸ್ ಕೊಟ್ಟಿಲ್ಲ, ನನ್ನ ಅಗತ್ಯಕ್ಕೂ ನಾನು ಕೊಟ್ಟ ದುಡ್ಡು ಮರಳಿಲ್ಲ, ಏನು ಮಾಡಬೇಕೋ ಗೊತ್ತಿಲ್ಲ" ಅಂತ ಹಳ್ತೀರಿ...
ಆತ ಸಿಟ್ಟುಗೊಳ್ಳುತ್ತಾನೆ. "ನೋಡು, ದುಡ್ಡಿಲ್ಲದಿದ್ದರೆ ಇಲ್ಲ ಅಂತ ಹೇಳು... ನನಗೆ ನಿಜವಾಗಿ ಅಗತ್ಯ ಇತ್ತು...ನಾನೇನು ನಿನ್ನ ದುಡ್ಡನ್ನು ತಿನ್ತೇನ" ಅಂತ ಹೇಳಿ ಸಿಟ್ಟು ಮಾಡ್ಕೊಂಡು ಹೋಗ್ತಾನೆ... ಈಗ ಹೇಳಿ ಈ ಅನುಭವದಲ್ಲಿ ತಪ್ಪು ಯಾರದ್ದು...???
....................
ನೀವೊಂದು ಪರ ಊರಿಗೆ ಹೊರಟಿದ್ದೀರಿ. ಅಲ್ಲಿ ನಿಮ್ಮ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳುವ ಪ್ಲಾನ್ ಮಾಡಿದ್ದೀರಿ. ಆ ಊರು ನಿಮಗೆ ಅಪರಿಚಿತ. ಒಬ್ಬ ಪ್ರೆಂಡ್ ಜೊತೆ ಮಾತನಾಡಿ, ಆತ ನಿಮ್ಮನ್ನು ಕರೆದುಕೊಂಡುಹೋಗಲು ಬಸ್ ಸ್ಟ್ಯಾಂಡಿಗೇ ಬರುತ್ತೇನೆ ಅಂತ ಹೇಳಿರುತ್ತಾನೆ. ಆತ ಬರುತ್ತಾನೆಂಬ ಧೈರ್ಯದಲ್ಲಿ ನೀವು ರೂಟ್ ಮ್ಯಾಪ್ ಬಿಡಿ, ಆ ಏರಿಯಾದ ಹೆಸರು ಕೂಡಾ ಕೇಳಿರುವುದಿಲ್ಲ. ಹಗಲು ಬಸ್ಸಿನಲ್ಲಿ ಹೋಗಿ ರಾತ್ರಿ ಊರು ತಲುಪಿ ಫೋನ್ ಮಾಡುವಾಗ ಫ್ರೆಂಡಿನ ಮೊಬೈಲ್ ":ನಾಟ್ ರೀಚೇಬಲ್" ಬರ್ತಾ ಇರುತ್ತದೆ! ಎಷ್ಟು ಸಲ ಕರೆ ಮಾಡಿದರು ನಾಟ್ ರೀಚೇಬಲ್. ಕಾರಣ ಏನೇ ಇರಬಹುದು, ಬ್ಯಾಟರಿ ಮುಗಿದಿರಬಹುದು, ಅಥವಾ ಬ್ಯಾಲೆನ್ಸ್ ಖಾಲಿ ಆಗಿರಬಹುದು. ಆದರೆ ಆ ಸ್ನೇಹಿತ ಸಿಕ್ಕದಿದ್ದರೆ ನೀವು ಆ ಅಪರಾತ್ರಿಯಲ್ಲಿ ಏನು ಮಾಡುತ್ತೀರಿ... ಕನಿಷ್ಠ ಆತನ ಏರಿಯಾ ಆದರೂ ಕೇಳಬಹುದಿತ್ತು ಅಂತ ಆಗ ನಿಮಗೆ ಅನಿಸುತ್ತದೆ. ಆದರೆ, ಅಷ್ಟೊತ್ತಿಗೆ ನೀವು ಅಸಹಾಯಕರಾಗಿ ಅಪರಿಚಿತ ಊರಿನಲ್ಲಿ ತಲೆಗೆ ಕೈಹೊತ್ತು ಕುಳಿತಿರುತ್ತೀರಿ.
..........................
ಕೆಲಸ ಹುಡುಕುತ್ತಿರುತ್ತೀರಿ.
ಎಷ್ಟು ದಿನಗಳ ಪ್ರಯತ್ನದ ಬಳಿಕ ನಿಮಗೊಂದು ಸಂದರ್ಶನ ಎದುರಿಸುವ ಅವಕಾಶ ಸಿಕ್ಕಿರುತ್ತದೆ. 20
ಸಾವಿರ ರು. ಸಂಬಳದ ಕೆಲಸ ಅದು. ಸಂದರ್ಶನ ಮುಗಿಸಿ ಬಂದ ದಿನವೇ ನಿಮ್ಮ ಪರಿಚಿತರ ಮೂಲಕ ಇನ್ನೊಂದು
ಕೆಲಸಕ್ಕೆ ಆಫರ್ ಬರುತ್ತದೆ, 30 ಸಾವಿರ ರು.ಸಂಬಳದ ಕೆಲಸ ಅಂತ. ಆನಂದ ತುಂದಿಲರಾದ ನೀವು ಮೊದಲನೇ
ಸಂದರ್ಶನದ ವಿಚಾರ ಮರೆತುಬಿಟ್ಟಿರುತ್ತೀರಿ. ಮೊದಲನೇ ಸಂದರ್ಶನದಲ್ಲಿ ಆಯ್ಕೆಯಾಗಿ "ನಾಳೆಯೇ
ಕೆಲಸಕ್ಕೆ ಬಂದು ಸೇರಿ" ಅಂತ ಪತ್ರ ಬರುತ್ತದೆ. ಆದರೆ, ಎರಡನೇ ಕೆಲಸಕ್ಕೆ ಸಂದರ್ಶನ ನಾಡಿದ್ದು, ನಾಳೆಯ
ಕೆಲಸಕ್ಕೆ ಹೋದ ಬಳಿಕ ಎರಡನೇ ಕೆಲಸ ಸಿಕ್ಕಿದರೆ ಅಷ್ಟು ಬೇಗ ಬಿಡಲು ಸಾಧ್ಯವೇ...? ಅಂದುಕೊಂಡು
ಮೊದಲನೇ ಕೆಲಸಕ್ಕೆ ಹೋಗುವುದೇ ಇಲ್ಲ. ದುರದೃಷ್ಟವಶಾತ್ ಎರಡನೇ ಸಂದರ್ಶನದಲ್ಲಿ ನೀವು ಆಯ್ಕೆ
ಆಗಿರುವುದಿಲ್ಲ.... ಇಲ್ಲಿ ತಪ್ಪು ಯಾರದ್ದು?
.............................
ನಿಮಗೆ ಸಣ್ಣ ಸಣ್ಣ ಕಾರಣಕ್ಕೂ
ಸಿಟ್ಟು ಬರುತ್ತದೆ. ಮನಃಸ್ಥಿತಿ ಸರಿ ಇಲ್ಲದಿದ್ದಾಗ ಎಲ್ಲರ ಮೇಲೂ ರೇಗಾಡುತ್ತೀರಿ. ನಿಮಗೆ ಜಗಳ
ಆರಂಭಿಸಿದರೆ ಮತ್ತೆ ಸುಲಭದಲ್ಲಿ ಬಾಯಿ ಮುಚ್ಚಲು ಬರುವುದಿಲ್ಲ. ನಿಮ್ಮ ವಲಯದಲ್ಲಿ ನಿಮಗೆ
ಮುಂಗೋಪಿ ಅಂತಲೇ ಹೆಸರು ಬಂದಿರುತ್ತದೆ. ಜಗಳ, ವಾದ, ವಿವಾದದ ಬಳಿಕ ನಿಮಗೆ ಜ್ಞಾನೋದಯವಾಗುತ್ತದೆ,
ಸಣ್ಣ ಸಣ್ಣ ವಿಚಾರಗಳಿಗೆ ಪ್ರತಿಕ್ರಿಯೆ ಕೊಡುವುದೇ ನಿಮ್ಮ ತಾಳ್ಮೆ ಕೆಡುವುದಕ್ಕೆ ಕಾರಣ ಅಂತ.
ಆದರೂ ನೀವು ಯಾವುದೋ ಚಿಂತೆಯಲ್ಲಿದ್ದಾಗ ಯಾರಾದರೂ ಅಧಿಕ ಪ್ರಸಂಗ ಮಾತನಾಡಿದರೆ ನಿಮಗೆ ಸಿಟ್ಟು
ಭುಗಿಲೇಳುತ್ತದೆ... ತುಂಬ ಸಲ ನಿರ್ಧಾರ ಮಾಡಿರುತ್ತೀರಿ. ಸಿಟ್ಟು ಬರುವ ವೇಳೆ ಮೌನವಾಗಿರಬೇಕು
ಅಂತ...
ಆದರೂ ಯಾರೋ ಒಬ್ಬ ಪದೇ ಪದೇ ಕೆಣಕಿದಾಗ, ಅಥವಾ ಅಸಹಜ ಸಂದರ್ಭದಲ್ಲಿ ಆತ ಕೆಣಕಿದಂತೆ ಭಾಸವಾದಾಗ, ಸಿಟ್ಟು ಮಾಡಿಕೊಳ್ಳಬಾರದು ಎಂಬ ನಿರ್ಧಾರ ಮಣ್ಣು ಪಾಲಾಗಿರುತ್ತದೆ... ಮತ್ತದೇ ಕೋಪ, ಆತಂಕದ ಬಳಿಕ ಸಿಟ್ಟು ನಮ್ಮನ್ನೇ ಕಬಳಿಸುತ್ತದೆ ಎಂಬ ಜ್ಞಾನೋದಯ... ನಿಮ್ಮ ಸಿಟ್ಟು ನಿಮ್ಮನ್ನೇ ಕಬಳಿಸುತ್ತದೆ ಅಂತ ಗೊತ್ತಿದ್ದರೂ, ಸಿಟ್ಟು ಬರಿಸುವವರು ತಾವು ಸಹಜವಾಗಿಯೇ ಇರುತ್ತಾರೆ ಅನ್ನುವುದು ಪದೇ ಪದೇ ಅನುಭವಕ್ಕೂ ಬಂದರೂ, ಅನುಭವವೇ ಪಾಠ ಶಾಲೆ ಎನ್ನುವ ತತ್ವಜ್ಞಾನವನ್ನು ಸಿಟ್ಟು ಮಣ್ಣು ಮುಕ್ಕಿಸಿರುತ್ತದೆ!!!
........................
ಬದುಕು ಅನುಭವಗಳ ಕಣಜ. ಜೀವನಯಾತ್ರೆಯಲ್ಲಿ ಯಾವ ಪುಟ್ಟ ಅನುಭವ ಕೂಡಾ ವ್ಯರ್ಥವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪಾಠ ಕಲಿಸುತ್ತಲೇ ಇರುತ್ತವೆ. ಹಾಗೆಯೇ ತಪ್ಪುಗಳು ಕೂಡಾ...
ಹೊರ ಹೋಗುವಾಗ, ಕರ್ಚೀಫ್ ತೆಗೆದುಕೊಂಡು ಹೋಗಲು ಬಾಕಿ ಆಗುವುದು, ಮೊಬೈಲ್ ಚಾರ್ಜರ್ ಮನೆಯಲ್ಲೇ ಉಳಿಯುವುದು, ಎಟಿಎಂ ಕಾರ್ಡ್ ಪಿನ್ ಪದೇ ಪದೇ ಮರೆತುಹೋಗುವುದು, ವಾಹನಕ್ಕೆ ಪೆಟ್ರೋಲ್ ತುಂಬಿಸಲು ಬಾಕಿ ಆಗುವುದು, ಎಲ್ಲೋ ನೆಟ್ವರ್ಕ್ ಇಲ್ಲದ ಜಾಗದಲ್ಲಿ ವಾಹನ ಹಾಳಾಗುವುದು, ಪರೀಕ್ಷೆಯ ಹಿಂದಿನ ದಿನವೇ ಆರೋಗ್ಯ ಕೆಡುವುದು, ಅಗತ್ಯ ಕೆಲಸ ಇದ್ದಾಗ ಪದೇ ಪದೇ ಮನೆಯಲ್ಲಿ ಪವರ್ ಕಟ್ ಆಗುವುದು...
ಹೀಗೆ... ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ
ಅನುಭವಗಳ ತನಕ ಪ್ರತಿ ಸನ್ನಿವೇಶವೂ ಒಂದು ಪಾಠ. ನಾವದನ್ನು ಸ್ವೀಕರಿಸುವ ಹಾಗೂ ಅದರಿಂದ ಹೊರ ಬರುವ
ಸಹನೆ ಹಾಗೂ ವಿವೇಚನೆ ಅನುಭವದ ತೂಕವನ್ನು ಹೆಚ್ಚಿಸುತ್ತದೆ. ಒಂದು ದಿನ ನಿಮ್ಮ ಮೊಬೈಲಿನಲ್ಲಿ
ಚಾರ್ಜ್ ಮುಗಿದು ನೀವು ವಾಟ್ಸಪ್, ಫೇನ್ ಬುಕ್ ನೋಡದಿದ್ದರೆ ಎಷ್ಟು ನಿರಾಳವಾಗಿ ಇತರ ಬಾಕಿ ಕೆಲಸ
ಮುಗಿಸುತ್ತೀರಿ ಗೊತ್ತ?ಯಾವುದೋ ಊರಿನಲ್ಲಿ ಬಾಕಿಯಾದ ಕಾರಣಕ್ಕಾದರೂ ಆ ಊರಿನ ಪರಿಚಯ ಆಗುತ್ತದೆ
ಎಂಬುದನ್ನು ಗಮನಿಸಿದ್ದೀರ? ಯಾವುದದೋ ಸಂಪರ್ಕ, ಯಾರದ್ದೋ ಅನುಭವಾಮೃತದ ಸ್ವೀಕಾರ, ಇನ್ಯಾವುದೋ
ವಿಚಾರಕ್ಕೆ ಸಿಕ್ಕುವ ಪಾಠ... ಹೀಗೆ ಅನುಭವ ಸಾಕಷ್ಟುವಿಚಾರಗಳನ್ನು ಕಲಿಸುತ್ತದೆ....
ಆದರೆ ತಪ್ಪುಗಳು
ಮರುಕಳಿಸುವುದು, ಕಲಿತ ಪಾಠ ಮರೆತುಹೋಗುವುದು ಕೆಲವೊಮ್ಮೆ ಸ್ವಯಂಕೃತಾಪರಾಧ, ಕೆಲವೊಮ್ಮೆ
ಪರಿಸ್ಥಿತಿಯ ಆಟ ಅಷ್ಟೇ... ತಿಳಿದು ಮಾಡುವುದು, ಆಗುವುದು ತಪ್ಪು, ತಿಳಿಯದೇ ಆಗುವುದು ಪ್ರಮಾದ.
ವಿವೇಚನೆ ಇಲ್ಲದೆ, ಮರೆವು ಆವರಿಸಿ, ಅಥವಾ ಸನ್ನಿವೇಶಕ್ಕೆ ಪೂರಕವಾಗಿಯೂ ಪರಿಸ್ಥಿತಿಗಳು
ಸೃಷ್ಟಿಯಾಗಬಹುದು. ಹೊಸ ಅನುಭವಗಳನ್ನು ನೀಡಬಹುದು.
ವಾಹನದ ಚಕ್ರ ಯಾವತ್ತೂ ಪಂಕ್ಚರ್ ಆಗಬಹುದು. ಸವೆದ ಟಯರ್ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿದರೆ ನಮ್ಮ ನಿರ್ಲಕ್ಷ್ಯದಿಂದ ಪಂಕ್ಚರ್ ಆಗುವ ಸಾಧ್ಯತೆಯನ್ನು ತಪ್ಪಿಸಬಹುದು. ಪೆಟ್ರೋಲ್ ಆಗಾಗ ಚೆಕ್ ಮಾಡಬಹುದು. ಆದಾಗ್ಯೂ ಎಲ್ಲಿಯೋ ರಸ್ತೆಯಲ್ಲಿ ಮೊಳೆ ಚುಚ್ಚಿ ಟಯರ್ ಪಂಕ್ಚರ್ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ!
ಆದರೆ, ಉದ್ದೇಶಪೂರ್ವಕವಾಗಿ ಮರಳಿಸದ ಮಹಾನುಭಾವರಿಗೆ ಇನ್ನೊಮ್ಮೆ ಸಾಲ ನೀಡುವುದಿಲ್ಲ ಎಂಬ ದೃಢ ನಿರ್ಧಾರಕ್ಕೆ ಬರಬಹುದು. ಅಥವಾ ಇನ್ನಷ್ಟು ಮಂದಿಗೆ ಅಂತಹ ಮಹಾನುಭಾವರ ಬಗ್ಗೆ ನೀವಾಗಿಯೇ ಎಚ್ಚರಿಕೆ ನೀಡಿ ಸಾಲ ಕೊಟ್ಟು ಕೈಸುಟ್ಟುಕೊಳ್ಳಬೇಡಿ ಅಂತ ಸಲಹೆ ನೀಡಬಹುದು.
ಕೆಲಸದ ಆಯ್ಕೆಯ ಸಂದರ್ಭ ಎರಡನ್ನೂ ತೂಗಿ ನೋಡಿ, ಸಾಧ್ಯತೆಗಳನ್ನು ಅಂದಾಜಿಸಿ ಏನೂ ಇಲ್ಲದ್ದಕ್ಕಿಂತ ಏನಾದರೂ ಆಗಿರುವುದು ವಾಸಿ ಎಂಬ ಧಾಟಿಯಲ್ಲಿ ಯೋಚಿಸಿದಾಗ ಅದನ್ನು ಇತ್ಯರ್ಥಪಡಿಸಬಹುದು.
ಪದೇ ಪದೇ ಸಿಟ್ಟಿಗೆಬ್ಬಿಸುವವರ ಉದ್ದೇಶ ಕೆಣಕುವುದೇ ಆಗಿದ್ದರೆ ಅದನ್ನು ಅರ್ಥ ಮಾಡಿಕೊಂಡು ಸುಮ್ಮನಿರುವುದನ್ನು ರೂಢಿಸಬಹುದು, ಅನಾವಶ್ಯಕ ಸಂದರ್ಭಗಳಲ್ಲಿ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬಹುದು.
ಒಂದು
ಪಡೆಯುವ ಸಂದರ್ಭ ಇನ್ನೊಂದು ಕೈತಪ್ಪುತ್ತದೆ ಎಂಬ ವಾಸ್ತವವನ್ನು ಸ್ವೀಕರಿಸಲೂ ಮನಸ್ಸು ಸಿದ್ಧ
ಇರಬೇಕಾದ್ದೂ ಅಷ್ಟೇ ಅಗತ್ಯ....
.................................
ಹೇಳದೇ ಬರುವ
ಸನ್ನಿವೇಶಗಳಲ್ಲಿ ಆತಂಕ ಪಟ್ಟರೂ, ಅತ್ತರೂ, ಗೋಳಾಡಿದರೂ ಪರಿಸ್ಥಿತಿ ತನ್ನಷ್ಟಕ್ಕೆ
ತಿಳಿಯಾಗುವುದಿಲ್ಲ. ತಿಳಿದೂ ತಿಳಿದೂ ಆವರಿಸುವ ಸಂಕಷ್ಟಗಳಲ್ಲಿ ನಮ್ಮ ಮನಃಸ್ಥಿತಿ, ನಿರ್ಧಾರಗಳು
ಬದಲಾಗದೆ ಅಂತಹ ಸಂದರ್ಭಗಳಿಂದ ಪಾರಾಗಲು ಸಾಧ್ಯವಿಲ್ಲ. ಸನ್ನಿವೇಶಗಳು ಯಾಕೆ ಸೃಷ್ಟಿಯಾದವು, ಹೇಗೆ
ಸುತ್ತುವರಿಯಿತು ಎಂಬುದನ್ನು ಚಿಂತಿಸಲು ಸಾಧ್ಯವಾದರೆ ಅರ್ಧದಷ್ಟು ಸಮಸ್ಯೆ ಪರಿಹಾರ ಕಂಡುಕೊಂಡ
ಹಾಗೆಯೇ ಸರಿ....
ಕಷ್ಟ ಆವರಿಸಿತು ಅಂತ ಕೊರಗಿದರೂ, ನಿರ್ಲಿಪ್ತವಾಗಿದ್ದರೂ ಕಷ್ಟ ಕಷ್ಟವಾಗಿಯೇ ಇರುತ್ತದೆ. ವಿವೇಚನೆ ಬಳಿಸಿದರಷ್ಟೇ ಅವುಗಳಿಂದ ಹೊರಬರಲು ದಾರಿ ಸಿಗುತ್ತದೆ.. ಇಂತಹ ಸನ್ನಿವೇಶಗಳನ್ನು ದಾಟಿ ಬಾರದವರು ಬಹುಶಃ ಯಾರೂ ಇರಲಿಕ್ಕಿಲ್ಲ... ಅವುಗಳೆಲ್ಲ ಕಥೆಗಳಾಗುವುದಿಲ್ಲ, ಅನುಭವಗಳೆಲ್ಲ ದಾಖಲೆಗಳಾಗಿ ಉಳಿಯುವುದಿಲ್ಲ. ಅವು ಪಾಠ ಕಲಿಸುತ್ತವೆ ಅಷ್ಟೆ. ಅಂತಿಂಥ ಪಾಠಗಳಲ್ಲಿ, ನಿಜಜೀವನದ ಸಾಕ್ಷಾತ್ "ಆನ್ ಲೈನ್ ಪಾಠಗಳು"... ಅಲ್ಲೇ ಡ್ರಾ, ಅಲ್ಲೇ ಬಹುಮಾನ!!!
-ಕೃಷ್ಣಮೋಹನ ತಲೆಂಗಳ.
No comments:
Post a Comment