ಶ್.... ಸದ್ದು!!!
ಸಮುದ್ರದ ದಡದಲ್ಲಿ ನಿಂತಿರುವಾಗ ಗಾಳಿಯ ಸದ್ದಿನ ಜೊತೆಗೆ ಕೇಳುವ ಮತ್ತೊಂದು ಶಬ್ಧ ಯಾವುದು... ತೆರೆಯ ಬಡಿತ ಅಲ್ವೇ...? ಉದ್ದಕ್ಕೆ ಸಾಲಾಗಿ ಬರುವ ತೆರೆ ದಡಕ್ಕಿಂತ ಒಂದಷ್ಟು ದೂರದಲ್ಲಿ ಹೈಜಂಪ್ ಮಾಡಿದಂತೆ ಜಿಗಿಯುವಾಗಿನ ಸದ್ದು... ದಡದ ಇಳಿಜಾರಿಗೆ ಏರಿ ಮತ್ತೆ ನಿಧಾನಕ್ಕೆ ಹಿಂತಿರುಗುವ ಸದ್ದು ಲಯಬದ್ಧದ ಹಾಗೆ. ಸಮಯ ವ್ಯತ್ಯಾಸ ಇರಬಹುದು ಅಷ್ಟೇ... ಅದೇ ಅಲೆ ಬಂಡೆಗೆ ಅಪ್ಪಳಿಸುವಾಗಿನ ಅಬ್ಬರ, ದೊಡ್ಡದೊಂದು ದಂಡೆಯ ಹಾಗೆ ಎದ್ದೆದ್ದು ಬರುವ ತೆರೆ ಮತ್ತೆ ಹೆಡೆ ಎತ್ತದೆ ತಣ್ಣಗೆ ಅರ್ಧದಲ್ಲಿ ಕೈಸೋತು ಹಿಂದಿರುಗುವಾಗಿನ ತಣ್ಣನೆಯ ಮೊರೆತ... ಎಲ್ಲವೂ ಭಿನ್ನ... ಇದನ್ನು ಗಮನಿಸಬೇಕಾಗಿಲ್ಲ. ಸಮುದ್ರಕ್ಕೆ ಹೋದವರಿಗೆಲ್ಲ ವೇದ್ಯವಾಗುವಂಥದ್ದೆ....
ಮಾನವ ಜೀವಿಯಷ್ಟು ಸದ್ದು ಮಾಡುವ ಜೀವಿ ಮತ್ತೊಂದಿರಲಿಕ್ಕಿಲ್ಲ... ಆದರೂ ನಾವೊಂದು ಬಾರಿಗೆ ಸದ್ದು ನಿಲ್ಲಿಸಿ ನಿಶ್ಯಬ್ಧರಾದಲ್ಲಿಗೆ ಎಷ್ಟೊಂದು ಸಹಜ, ಅಪ್ಯಾಯಮಾನ ಧ್ವನಿ ತರಂಗಗಳನ್ನು ಗಮನಿಸಬಹುದು ಅಲ್ವ...? ಬೇಸ್, ಬಾಸ್, ಇಕೋ, ಆಂಪ್ಲಿಫೈಯರ್ ಯಾವುದೂ ಇಲ್ಲದೆ ಸುಮ್ಮನೆ ಕಣ್ಣು ಮುಚ್ಚಿ ಅನುಭವಿಸಬಹುದಾದಂಥವುಗಳು... ಅವನ್ನೆಲ್ಲ ಕೇಳಲು ಮನಸು ನಿಶ್ಯಬ್ಧವಾಗಿರಬೇಕು, ಕಿವಿಗಳು ತೆರೆದಿರಬೇಕು... ಅನಗತ್ಯ, ಅಬ್ಬರದ ಇತರ ಸದ್ದುಗಳು ಸುಮ್ಮನಿರಬೇಕು.. ಆಗ ಮಾತ್ರ ಅವನ್ನು ಅನುಭವಿಸಲು ಸಾಧ್ಯ!
ಚಾರಣ ಹೋಗುವಾಗ ಹಾಗೆಯೇ... ಯಾವುದೋ ತಿರುವು, ಯಾವುದೋ ಶಿಖರ ತಲುಪಿದ ತಕ್ಷಣ ಒಂದು ಪುಟ್ಟ ಮೊರೆತ ಕೆಳಿಸುತ್ತದೆ. ಸೂಕ್ಷ್ಮವಾಗಿ ಕೇಳಿದಾಗ ಮಾತ್ರ ನೀರಿನ ಝರಿಯ ಧಾರೆ ಬೀಳುವುದು ಒಂದೇ ಶೃತಿಯಲ್ಲಿ ಕೇಳಿಸುತ್ತದೆ. ಅದೇ ಜಾಡು ಹಿಡಿದರೆ ಶೃತಿ ಏರುತ್ತಾ ಹೋಗಿ, ಮತ್ತೆ ಮೊರೆತದಂತಾಗಿ ಬಳಿ ತಲುಪಿದಾಗ ಅಬ್ಬರಿಸುವುದು ಪ್ರತ್ಯಕ್ಷ ಕಾಣಿಸುತ್ತದೆ. ಅದೇ ಕಾಡಿನ ನಡುವಿನ ಇಳಿಜಾರು ದಾರಿಯಲ್ಲಿ ಇಳಿದಿಳಿದು ಹೋಗುವಾಗ, ಬೆಟ್ಟದ ತುತ್ತತುದಿಯಲ್ಲಿ ಆಯಾಸದೊಂದಿಗೆ ತಲುಪಿ ಏದುಸಿರುವ ಬಿಡುತ್ತಾ ಸುತ್ತ ಕಣ್ಣು ಹಾಯಿಸುವಾಗ ಒಂದೇ ಸ್ಥಾಯಿಯಲ್ಲಿ ಕೇಳಿಸುವ ಜೀರುಂಡೆಗಳ ಝೇಂಕಾರವಂತೂ ಅದು ಪ್ರಕೃತಿ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ (ವಗ್ಗದ ಕಾರಿಂಜ ಬೆಟ್ಟದ ತುದಿದೆ ಹೋದವರಿಗೆ ಈ ಅನುಭವ ಆಗಿರುತ್ತದೆ ಬಿಡಿ)... ಪುಟ್ಟದೊಂದು ದೇಹದ ಜೀರುಂಡೆ ಅಥವಾ ಅವುಗಳ ಗುಂಪಿನಿಂದ ಅಷ್ಟು ಸುದೀರ್ಘ ಹಾಗೂ ಪರಿಣಾಮಕಾರಿ ಧ್ವನಿ ಹೊರಡುವುದು ಅಚ್ಚರಿ ಮಾತ್ರವಲ್ಲ ದೇವರೇ ಕೊಟ್ಟ ವರವೂ ಇರಬಹುದು....
ದೊಡ್ಡ ಮಳೆ ಬಂದು ನಿಂತ ಮೇಲೆ ಮಳೆಯ ಕುರುಹು ಹಾಗೆಯೇ ಇರುತ್ತದೆ. ಮರದಿಂದ, ಛಾವಣಿಯ ತುದಿಯಿಂದ ಬೊಟ್ಟು ಬೊಟ್ಟಾಗಿ ಅಂಗಳಕ್ಕೆ ಬಿದ್ದು ತೊಟ್ಟಿಕ್ಕುವ ನೀರಿನ ಸದ್ದು ಎಷ್ಟೊಂದು ಲಯಬದ್ಧವಾಗಿ ಇರುತ್ತದೆ ಅಲ್ವ...? ಲೆಕ್ಕಹಾಕಿ ಹೇಳಬಹುದು ಇಷ್ಟೇ ಹೊತ್ತಿಗೆ ಬೀಳುತ್ತದೆ ಎಂಬುದಾಗಿ... ಮಾಡಿನಲ್ಲಿ ನೀರು ಖಾಲಿಯಾಗುತ್ತಾ ಬಂದ ಹಾಗೆ ತೊಟ್ಟಿಕ್ಕುವ ಸದ್ದು ನಿಧಾನವಾಗುತ್ತಾ ಬಂದು ಬಳಿಕೊಮ್ಮೆ ನಿಂತೇ ಹೋಗುತ್ತದೆ. ಕೇಳುವ ತಾಳ್ಮೆಯಿದ್ದರೆ ಅಷ್ಟೂ ಪ್ರಕ್ರಿಯೆ ಮಳೆ ಬಂದು ಹೋದ ಕಥೆಯನ್ನು ಹೇಳಬಹುದು. ತೋಟದ ಅಂಚಿನ ತೋಡಿನಲ್ಲಿ ಕಲ್ಲಿನ ಎಡೆಯಲ್ಲಿ ನೀರು ನುಸುಳಿ ಹೋಗುವುದಕ್ಕೆ ಜುಳುಜುಳು ಎನ್ನುತ್ತೇವೆ. ತೋಟದ ಆಚಿನಿಂದ ಮಳೆಯೊಂದು ಯುದ್ಧೋಪಾದಿಯಲ್ಲಿ ಬಂದು ಆವರಿಸುವಾಗಿನ ಧೋ... ಎಂಬ ಸದ್ದು... ಮತ್ತೆ ಮಳೆ ಧಾರಾಕಾರವಾಗಿ ಸುರಿಯುವಾಗ ಏನೂ ಕೇಳದಷ್ಟು ಗಾಢವಾಗಿ ಸೃಷ್ಟಿಯಾಗುವ ಮಳೆಯ ಮೊರೆತ, ಹೀಗೆ ಬಂದು ಹಾಗೆ ಹೋಗುವ ಮಳೆಯಿಂದ ಅಂಗಳದ ಮೂಲೆಯ ಕಣಿಯಲ್ಲಿ ನೀರಿಳಿಯುವ ಸದ್ದುಗಳೆಲ್ಲ ಮಳೆಯ ಕಥೆಗೆ ಸಾಕ್ಷಿಗಳು... !
ದೇವಸ್ಥಾನದಲ್ಲಿ ಗಂಟೆಯ ಝೇಂಕಾರ, ರೈಲಿನಲ್ಲಿ ತೊಟ್ಟಿನಲ್ಲಿ ಪವಡಿಸಿದಂತೆ ಭಾಸ ಮಾಡುವ ಡಗ್ ದಡಕ್... ಡಗ್ ದಡಕ್ ಸದ್ದು, ಅದೇ ರೈಲು ಸೇತುವೆ ದಾಟುವಾಗ ಉಂಟಾಗುವ ತುಸು ಆತಂಕದ ಧ್ವನಿ... ಅದೇ ರೈಲಿನ ಕಿಟಕಿಯಂಚಿನಲ್ಲಿ ಕುಳಿತು ಮುಖವೊಡ್ದಿದರೆ ಕಿವಿಯನ್ನೇ ಮುಚ್ಚುವ ಗಾಳಿಯ ರಭಸ, ಪಾತ್ರೆಗೆ ಅಕ್ಕಿ ಸುರಿಯುವಾಗ ಕೇಳುವ ವೇಗದ ಸದ್ದು, ಕಾವಲಿಗೆ ಎಣೆ ಬಳಿಯುವಾಗ, ದೋಸೆ ಹೊಯ್ಯುವಾಗ, ಒಗ್ಗರಣೆ ಸಿಡಿಸುವಾಗಲೆಲ್ಲ ಕೇಳುವ ದೈನಂದಿನ ಸದ್ದುಗಳ ಜೊತೆಗೆ ಪರಿಮಳವೂ ಅಡರಿ ತ್ರೀಡಿ ಇಫೆಕ್ಟ್ ಸೃಷ್ಟಿಸುತ್ತದೆ ಅಲ್ವ....
ಏಕಾಂತವನ್ನೂ, ಅಸಹಜ ಮೌನವನ್ನೂ ಭೇದಿಸುವ ಗಡಿಯಾರದ ಟಿಕ್ ಟಿಕ್ ಸದ್ದು, ಏಕಾಗ್ರತೆಗೆ ಭಂಗ ತರುವ ವಾಟ್ಸಪ್ ಮೆಸೇಜಿನ ಬೀಪ್ ಸದ್ದು, ಹಲ್ಲಿ ಲೊಚಗುಟ್ಟುವುದು, ಅಳಿಲಿನ ಚೀತ್ಕಾರ, ಜೋರಾಗಿ ಗಾಳಿ ಬೀಸುವಾಗ ಬಿದಿರಿನ ಮೆಳೆಗಳು ಉಜ್ಜಿ ಉಂಟಾಗುವ ಕೀರಲು ಧ್ವನಿಗಳು ಕೂಡಾ ಏಕಾಂತವನ್ನು ಭೇದಿಸುವ ಸಾಮರ್ಥ್ಯ ಹೊಂದಿವೆ. ಆಂತಕವನ್ನೋ, ನಿರೀಕ್ಷೆಯನ್ನೋ ಹುಟ್ಟಿಸುವ ಫೋನ್ ರಿಂಗ್ ಟೋನ್, ಟಿ.ವಿ.ಯಲ್ಲೂ, ರೇಡಿಯೋದಲ್ಲೂ ವಾರ್ತೆ ಶುರುವಾಗುವ ಮೊದಲಿನ ಸಿಗ್ನೇಚರ್ ಟ್ಯೂನ್... ಯಾರಿಗೋ ಕರೆ ಮಾಡಿದಾಗ ನಿಮಿಷಗಟ್ಟಲೆ ಕರೆ ಸ್ವೀಕರಿಸದಿದ್ದಾಗ ಅಸಹನೆ ಸೃಷ್ಟಿಸುವ ಚಿತ್ರ ವಿಚಿತ್ರವಾದ ಕಾಲರ್ ಟ್ಯೂನುಗಳು ಎಂಥೆಂಥ ವಿಚಿತ್ರ ಪರಿಣಾಮಗಳನ್ನು ಮನಸ್ಸಿನ ಮೇಲೆ ಮೂಡಿಸುತ್ತವೆ ಅಲ್ವ?
ರಾತ್ರಿ ವೇಳೆ ಕಾಲು ದಾರಿಯಲ್ಲೋ, ತೋಟದಲ್ಲೋ, ಗುಡ್ಡದಲ್ಲೋ ಒಬ್ಬರೇ ನಡೆಯುವಾಗ ಕೇಳಬಹುದಾದ ಗೂಬೆಯ ಕೂಗು, ಯಾವುದೋ ಹಕ್ಕಿಯ ವಿಚಿತ್ರ ಅರಚಾಟ, ಪೊದೆಯ ಸಂದಿಯಲ್ಲಿ ಹಂದಿ ಓಡುವ ಸರಸರದ ಸದ್ದು, ತರಗೆಲೆ ಮೇಲೆ ಹಕ್ಕಿಗಳು ಓಡಾಡುವ ಸದ್ದು, ಮರದಿಂದ ಉದುರುವ ಕಾಯಿಗಳು ಉಂಟು ಮಾಡುವ ಧ್ವನಿ ಎಲ್ಲ ಎಷ್ಟೊಂದು ಆತಂಕ ಹುಟ್ಟುಹಾಕುತ್ತವೆ ಅಲ್ವ...? ಕವಿದ ಕತ್ತಲೆಗೆ ಹಿನ್ನೆಲೆಯಲ್ಲಿ ಕೇಳಿಸುವ ಸದ್ದುಗಳು ಕೂಡಾ ಮನಸ್ಸಿನಲ್ಲಿ ಭ್ರಮೆಗಳನ್ನು ಸೃಷ್ಟಿಸಬಲ್ಲವು. ಅಷ್ಟೇ ಯಾಕೆ ಹವಾಯಿ ಚಪ್ಪಲು, ಚರ್ಮದ ಚಪ್ಪಲಿ ಕೂಡಾ ನಡೆಯುವಾಗ ಉಂಟು ಮಾಡುವ ನಡಿಗೆಯ ಜೊತೆಗಿನ ಸದ್ದು ಕೂಡಾ ಒಂದು ವಿಚಿತ್ರ ಸನ್ನಿವೇಶವವನ್ನು ಹುಟ್ಟು ಹಾಕುವಲ್ಲಿ ಸಮರ್ಥವಾಗುತ್ತವೆ....
ಕೇಳುವ ಸದ್ದುಗಳು ಅಪ್ಯಾಯಮಾನವೇ ಆಗಿರಬೇಕಾಗಿಲ್ಲ.... ಫೋನ್ ಸಂಪರ್ಕ ಸಿಗದೆ ಎಂಗೇಜ್ಡ್ ಟೋನ್ ಬಂದಾಗ, ಕರೆ ಕಟ್ಟಾದಾಗ ಬರುವ ಅಸಹಾಯಕ ಟೋನ್, ಹೊಟೇಲಿನಲ್ಲೋ, ಮನಯಲ್ಲೋ ಊಟ ಮಾಡುತ್ತಿರುವಾಗ ಪಕ್ಕದ ಬೇಸಿನ್ನಿನಲ್ಲಿ ಯಾರೋ ಕ್ಯಾಕರಿಸಿ ಬಾಯಿ ಮುಕ್ಕುಳಿಸುವ ಸದ್ದು, ಢರ್ರನೆ ವಿಕಾರವಾಗಿ ತೇಗುವ ಸದ್ದು, ಗಂಟಲಿಕೆ ಕೈ ಹಾಕಿ ವಾಕರಿಕೆಯ ಹಾಗೆ ಗಂಟಲು ಸರಿಪಡಿಸುವ ಸದ್ದು, ಹಬ್ಬಳದ ಅತಿರೇಕದ ಕರುಂಕುಂರು ಸದ್ದು, ಪಾಯವನ್ನು ಭುರ್ರೆಂದು ಸುರಿದು ಉಣ್ಣುವ ಸದ್ದು, ಮತ್ತೆಲ್ಲಿಂದಲೋ ಹೊರಡಬಹುದಾದ ಅಸಹಜ ಸದ್ದುಗಳೆಲ್ಲ ಊಟದ ರುಚಿಯನ್ನೇ ಹಾಳು ಮಾಡೀತು ಅಲ್ವ.... ಇವುಗಳು ಕೆಲವೊಮ್ಮೆ ವಯೋಸಹಜ, ಅನಾರೋಗ್ಯ ನಿಮಿತ್ತ ಆಗಬಹುದಾದರೂ, ಅಕ್ಕಪಕ್ಕದವರು ಏನಂದುಕೊಂಡಾರೋ ಎಂಬ ಪ್ರಜ್ಞೆ ಇಲ್ಲದೆ ಹೊರಡಿಸುವ ಧಿಮಾಕಿನ ಸದ್ದುಗಳಂತೂ ಇರುಸು ಮುರುಸು ಉಂಟು ಮಾಡುವುದು ಸುಳ್ಳಲ್ಲ!!
ಮುಂಜಾವಿನ ಮಂಜು ಮರಕ್ಕಿಳಿದು ಅಲ್ಲಿಂದ ನೀರಾಗಿ ಬಾಳೆ ಎಲೆ ಮೇಲೆ ಟಪ್, ಟಪ್ ಅಂತ ಉದುರುವ ಸದ್ದು, ತೆಂಗಿನಕಾಯಿ ಕೆರೆಗೆ ಬಿದ್ದು ನೀರು ಚಿಮ್ಮುವ ಸದ್ದು, ಚೊಂಬಿಗೆ ಹಾಲು ಕರೆಯುವಾಗ ಕೇಳಿಸುವ ಸುಶ್ರಾವ್ಯ ಸದ್ದು, ಮೊಸರು ಕಡೆಯುವಾಗ ಕೇಳಿ ಬರುತ್ತಿದ್ದ ಕಡೆಗೋಲು ತಿರುಗುವ ಸದ್ದು, ಕೊಡಕ್ಕೆ ನಳ್ಳಿಯಿಂದ ನೀರು ತುಂಬುತ್ತಾ ತುಂಬುತ್ತಾ ಬರುವಾಗ ಹೃಸ್ವವಾಗುತ್ತಾ ಬರುವ ಓಘವೂ ಕೂಡಾ ಚಿರಪರಿಚಿತ ಹೌದು, ಕಣ್ಣು ಮುಚ್ಚಿದರೂ ಹೇಳಬಹುದು, ಇಂಥದ್ದೇ ಸದ್ದು ಅಂತ... ಅಲ್ವ...?
ಇನ್ನೂ ಬಹಳಷ್ಟು ಸದ್ದುಗಳಿರುತ್ತವೆ... ಯಾಂತ್ರಿಕವಾಗಿ ಕಿವಿ ಕೇಳುತ್ತದೆ.... ಗ್ರಹಿಸುತ್ತದೆ, ಆದರೆ, ಅದರ ಬಗ್ಗೆಯೇ ಯೋಚಿಸುವುದಿಲ್ಲ. ಯೋಚಿಸುತ್ತಾ ಹೋದರೆ ಮನಸ್ಸಿನ ಮೂಲೆಯಲ್ಲಿ ಶೇಖರವಾಗಿ ಇರಬಹುದಾದ ಸದ್ದುಗಳೆ ಸದ್ದು ಮಾಡುತ್ತಾ ಹೊರ ಬಂದು ಕುಣಿಯಲು ಆರಂಭಿಸೀತು...
ಲಕ್ಷಗಟ್ಟಲೆ ಸದ್ದುಗಳದ್ದೂ ಪ್ರತ್ಯೇಕ ಪ್ರತ್ಯೇಕ ಅನುಭೂತಿಗಳು... ಕೇಳುವ ಸಹನೆ, ಉತ್ತಮ ಶ್ರೋತೃವಾಗಬಲ್ಲ ಮನಃಸ್ಥಿತಿ ಇದ್ದರಂತೂ ಅವುಗಳನ್ನು ಅನುಭವಿಸಿ ಖುಷಿ ಪಡಬಹುದು... ಸದ್ದು ಮನಸ್ಸಿನ ಮೇಲೆ ಉಂಟು ಮಾಡಬಲ್ಲ ಪರಿಣಾಮಗಳು ಮನಃಸ್ಥಿತಿಯನ್ನೂ ಅವಲಂಬಿಸಿರುತ್ತದೆ ಅಲ್ವ...?
ನಿಮ್ಮ ಆಹ್ಲಾದಕತೆಯ ಅಥವಾ ಪ್ರಫುಲ್ಲ ಮನಸ್ಸಿಗೆ ಇಂಪಾಗುವ ಯಾವುದೋ, ಯಾರದ್ದೋ ಸದ್ದು, ಧ್ವನಿ ಅದರ ಅಥವಾ ಅವರ ಕುರಿತಾದ ಅಸಹನೆ, ಅಪ್ರಸ್ತುತ ಭಾವದ ಸಂದರ್ಭ ಕರ್ಕಶವಾಗಿಯೂ, ಅಸಹನೀಯವಾಗಿಯೂ, ಋಣಾತ್ಮಕವಾಗಿಯೂ ಕೇಳಿಸೀತು. ಒಂದೊಮ್ಮೆ ಹೃದಯಂಗಮ ಅಂದುಕೊಂಡ ಧ್ವನಿಯೂ ಮತ್ತೊಂದು ಹೊತ್ತಿಗೆ ಸಮಯ ವ್ಯರ್ಥವಾಗಿಸುವ ಅಂಶದಂತೆಯೂ, ಕಿವಿಗೆ ಭಾರವಾಗಿಯೂ ಭಾಸವಾದೀತು... ವಿಚಿತ್ರ ಅಂದರೆ ಅದೇ ಧ್ವನಿ, ಅದೇ ನಾದ, ಅದೇ ಲಯ ಆದರೆ ಕೇಳಿಸುವ ಮನಸ್ಥಿತಿ ಮಾತ್ರ ಬೇರೆ ಬೇರೆ ಅಷ್ಟೇ...!!!
ಅದೇ ಮೊಬೈಲು, ಅದೇ ಇಯರ್ ಫೋನ್, ಅದೇ ಕಟ್ಟಿಟ್ಟಂಥಹ ಮನಸ್ಥಿತಿಯಿಂದ ತುಸು ಹೊರಗೆ ಬಂದರೆ, ಮೊಬೈಲನ್ನು ಪಕ್ಕಕ್ಕಿಟ್ಟು ಸ್ವಲ್ಪ ಪ್ರಕೃತಿಗೂ, ಆಚೀಚಿನ ಸಹಜ ಆಗುಹೋಗುಗಳಿಗೂ ಕಿವಿಗಳಾಗುವ ಸಂದರ್ಭ ಸೃಷ್ಟಿ ಮಾಡಿಕೊಂಡರೆ ಇಲ್ಲಿ ಹೇಳಿದ ಅಥವಾ ಹೇಳಲು ಬಾಕಿಯಾದ ನೂರಾರು ಸ್ವರಗಳಿಗೆ ಕಿವಿಯಾಗಬಹುದು....
ಸಂತೆಯ ನಡುವೆಯೂ ಇಯರ್ ಫೋನ್ ಸಿಕ್ಕಿಸಿಕೊಂಡು ಓಡಾಡುವುದು ಮಾತ್ರ ಕೇಳುಗರಾಗುವ ಲಕ್ಷಣವಲ್ಲ. ಸಹಸ್ರ ಸಹಸ್ರ ಸದ್ದಿನ ನಡುವೆಯೂ ನಮಗೆ ಬೇಕಾದ ಸ್ವರವನ್ನು ಆರಿಸಿ, ಏಕಾಗ್ರತೆಯಿಂದ ಕೇಳಲು, ಅನುಭವಿಸಲು ಸಾಧ್ಯವಾಗುವುದು ಉತ್ತಮ ಶ್ರೋತೃವಾಗಬಲ್ಲ ಸಹನೆಯನ್ನು ರೂಢಿಸಲು ನೆರವಾಗಬಹುದು....
ಸ್ವರವೂ ಭಾವಸ್ಪಂದನೆ ಸೃಷ್ಟಿಸಬಲ್ಲದು, ಕಲ್ಪನೆಗಳನ್ನು ಅರಳಿಸಬಲ್ಲುದು, ಕುತೂಹಲಗಳನ್ನು ಕಟ್ಟಿಕೊಡಬಹುದು.... ಒಂದು ಸಣ್ಣ ತಪಸ್ಸಿಗೆ, ಏಕಾಗ್ರತೆಗೆ ಮಾರ್ಗವಾಗಬಲ್ಲುದು... ಏನಂತೀರಿ...
ಕಿವಿಕೊಟ್ಟು ನೋಡಿ...
ಕೇಳದೆ ನಿಮಗೀಗ... ದೂರದಲ್ಲಿ ಯಾರೋ...!
-ಕೃಷ್ಣಮೋಹನ ತಲೆಂಗಳ.
No comments:
Post a Comment