ಜಾಕ್ ಫ್ರೂಟ್ ಡೈರಿ.....
ಪ್ರಸ್ತಾವನೆ...
ಆತ್ಮೀಯ ಓದುಗರೇ, ನಾನು ಪದವಿ ಶಿಕ್ಷಣ ಪಡೆದ ಮಂಗಳೂರು ವಿ.ವಿ.ಕಾಲೇಜಿನ 1997-2000ನೇ ಸಾಲಿನ UCM 2K (Bcom) ಇದರ ಸಹ ಗ್ರೂಪ್ ಸ್ನೇಹಲೋಕ ವಾಟ್ಸಪ್ ಗ್ರೂಪಿನಲ್ಲಿ ತಮಾಷೆಗಾಗಿ ನಡೆದ ಚರ್ಚೆಯ ವಿಸ್ತೃತ ರೂಪದ ನೀಳ್ಗತೆ ಇದು. ಜಾಲತಾಣಗಳಲ್ಲಿ, ಹಲಸಿನ ಕಾಯಿ ಸಂರಕ್ಷಣೆಗೆ ಬೆಳೆಗಾರರೊಬ್ಬರು ಹಾಕಿದ್ದಾರೆ ಎನ್ನಲಾದ ಫಲಕವೊಂದು ವೈರಲ್ ಆಗಿತ್ತು. ಈ ಕುರಿತು ಸಾಕಷ್ಟು ಜೋಕುಗಳೂ ಹುಟ್ಟಿಕೊಂಡವು. ಅದೇ ವಿಚಾರವನ್ನು ಧಾರಾವಾಹಿ ರೂಪದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದು ಮೊದಲ ಪ್ರಯತ್ನ, ಇದರಲ್ಲಿರುವ ಪಾತ್ರಧಾರಿಗಳೆಲ್ಲ ನನ್ನ ಸಹಪಾಠಿಗಳೇ ಆಗಿದ್ದಾರೆ. ಒಟ್ಟೂ ಕಥೆಯು ಸಂಪೂರ್ಣ ಕಾಲ್ಪನಿಕ ಹಾಗೂ ತಮಾಷೆಗೋಸ್ಕರ ಬರೆದದ್ದು. ಧಾರಾವಾಹಿಯ 12 ಕಂತೂ ಸೇರಿ ಈ ನೀಳ್ಗತೆಯಾಗಿದೆ. ಇದರಲ್ಲಿ ಯಾರನ್ನೂ, ಯಾವುದನ್ನೂ ಗುರಿಯಾಗಿರಿಸಿ, ಹಾಸ್ಯದ ವಸ್ತುವನ್ನಾಗಿಸಿ ಬರೆದದ್ದಲ್ಲ, ಯಾರನ್ನೂ, ಯಾವುದನ್ನೂ ಅವಹೇಳನ ಮಾಡುವ ಉದ್ದೇಶವಿಲ್ಲ. ಲಘುಧಾಟಿಯ ಬರಹವಾಗಿ ಇದನ್ನು ಸ್ವೀಕರಿಸಿ ಓದಬೇಕಾಗಿ ವಿನಂತಿ... ಈ ಬರಹಕ್ಕೆ ವೇದಿಕೆ ಕಲ್ಪಿಸಿದ ಸುಶೀಲ್ ಕುಮಾರ್ ರಚಿಸಿದ ಸ್ನೇಹಲೋಕ ವಾಟ್ಸಪ್ ಬಳಗ, ಬರಹವನ್ನು ತಿದ್ದಿ, ಅದನ್ನು ವ್ಯವಸ್ಥಿತವಾಗಿ UCM-2k ಬ್ಲಾಗಿನಲ್ಲಿ ಪ್ರಕಟಿಸುತ್ತಾ ಬಂದ ಗೆಳೆಯ ಉಮ್ಮರ್ ಫಾರೂಕ್ ಹಾಗೂ ಬರಹಕ್ಕೆ ಪ್ರೋತ್ಸಾಹ ನೀಡಿದ ಎಲ್ಲ ಸಹಪಾಠಿಗಳಿಗೆ ಸದಾ ಕೃತಜ್ಞ.
ವಂದನೆಗಳು
------------------------------------------------------------
ಬಂದ ಆ ಕರೆ ಯಾರದ್ದು...?!!!!!
ಬೆಳಗ್ಗೆ ಕೋಳಿ ಕೂಗಿದ ತಕ್ಷಣ ಎದ್ದ ನಾರಾಯಣರು ಇಷ್ಟ ದೇವರಿಗೆ ಕೈ ಮುಗಿದರು.
ಬಳಿಕ ಹಟ್ಟಿಗೆ ಹೋಗಿ, ತಾನು ಸಾಕಿದ ಕೋಣಗಳ ಜೋಡಿಗಳ ಮೈದಡವಿ ಒಂದಿಷ್ಟು ಹುಲ್ಲು ಹಾಕಿ ಕುಡಿಯಲು ಅಕ್ಕಚ್ಚು ಇರಿಸಿ ಬಂದರು. ಅಷ್ಟುಹೊತ್ತಿಗಾಗಲೇ ಅವರ ಧರ್ಮಪತ್ನಿ ಮಾಡಿಟ್ಟ ಬಿಸಿ ಬಿಸಿ ಕಷಾಯ ಹಾಗೂ ಹಲಸಿನ ಹಣ್ಣಿನ ಗಟ್ಟಿ ಅವರ ದಾರಿ ಕಾಯುತ್ತಿತ್ತು.... ನಾಲ್ಕು ಗಟ್ಟಿ ಹಾಗೂ ಎರಡು ಚೊಂಬು ಕಷಾಯ ಕುಡಿದು ತೋಟದತ್ತ ತಿರುಗಾಡಲು ಹೊರಟರು ನಾರಾಯಣರು ...
ತೋಟವೆಂದರೆ ಸಾಮಾನ್ಯದ್ದಲ್ಲ, ಸುಮಾರು 20 ಎಕರೆಯ ವಿಶಾಲ ತೋಟ. ವಿಧ ವಿಧದ ಹಲಸಿನ ಮರಗಳು, ಸಾಕಷ್ಟು ನೆರಳು ಹಾಗೂ ಹರಡಿದ ಹಲವು ವಯೋಮಾನದ ಮರಗಳು. ಸಾಕಷ್ಟು ಫಸಲು ಕೊಡುತ್ತಿದ್ದವು. ವಿಶ್ವದ ವಿವಿಧೆಡೆಯಿಂದ ಸ್ವತಃ ನಾರಾಯಣರೇ ಆಯ್ದು ತದ ವಿವಿಧ ತಳಿಗಳ ಗಿಡಗಳು ಈಗ ಮರವಾಗಿ ಫಲ ನೀಡುತ್ತಿದ್ದವು. ಅದನ್ನು ನೋಡಿ ನಾರಾಯಣರ ಕಣ್ಣಿನಿಂದ ಆನಂದ ಬಾಷ್ಪ ಸುರಿಯುತ್ತಿತ್ತು...
ಪ್ರತಿದಿನ ಅವರ ಮನೆಯಲ್ಲಿ ಹಲಸಿನ ಏನಾದರೂ ತಿಂಡಿ ಇರಲೇಬೇಕು. ಹಸಲಿನ ಹಣ್ಣಿನ ಗಟ್ಟಿ, ಪಾಯಸ, ಚಿಪ್ಸು, ಪಲ್ಯ, ಗಸಿ ಹೀಗೆ... ಏನಾದರೂ ಪದಾರ್ಥ ಇದ್ದೇ ಇರುತ್ತಿತ್ತು...ಮಧ್ಯಾಹ್ನ ತೋಟ ತಿರುಗಿ ಬಂದ ಬಳಿಕ ಸಣ್ಣ ನಿದ್ರೆಗೆಂದು ಆರಾಮ ಖುರ್ಚಿಯಲ್ಲಿ ನಾರಾಯಣರು ಪವಡಿಸಿದ್ದರು. ಆಗ ಅವರ ಲ್ಯಾಂಡ್ ಲೈನ್ ರಿಂಗಾಯಿತು.
ಹಲೋ... ಅತ್ತಲಿನಿಂದ ಒಂದು ಧ್ವನಿ ಕೇಳಿಸಿತು...
ಇದು ನಾರಾಯಣರಲ್ವ....
ಹೌದು... ಗಡಸು ದನಿಯಲ್ಲಿ ಉತ್ತರಿಸಿದರು ನಾರಾಯಣರು ..
ನಾನು ಭಗೀರಥ ಅಂತ ಕುತ್ತಾರುಪದವಿನಿಂದ... ಎಲ್ಲಾ ಕಡೆ ನಿಮ್ಮದೇ ಹೆಸರು ರಾರಾಜಿಸುತ್ತಿದೆ.. ಅಸಲಿಗೆ ನೀವು ಯಾರು... ನಿಜ ಹೇಳಿ...
ಆ ಧ್ವನಿ ಕೇಳಿದ ತಕ್ಷಣ ನಾರಾಯಣರ ಮೈ ಕಂಪಿಸಲು ಆರಂಭಿಸಿತು... ಕಣ್ಣು ಕೆಂಪಾಯಿತು... ಮುಷ್ಟಿ ಬಿಗಿಯಾಗತೊಡಗಿತು... ರಿಸೀವರ್ ಹಿಡಿದೇ ಧಡಕ್ಕನೆ ಎದ್ದು ನಿಂತರು ನಾರಾಯಣರು ...
---------------------------------------------------------------------------
ನಾರಾಯಣರ ಸವಾಲು
ಫೋನ್ ರಿಸೀವರ್ ಹಿಡಿದಿದ್ದ ನಾರಾಯಣರ ದೇಹ ನಖಶಿಖಾಂತ ಕಂಪಿಸುತ್ತಿತ್ತು...
ನಾರಾಯಣರನ್ನು ನೀವು ಯಾರು ? ಅಂತ ಈ ತನಕ ಕೇಳಿದವರಿರಲಿಲ್ಲ.
ಅಂಥದರಲ್ಲಿ ಈ ಯುವ ಉಪನ್ಯಾಸಕ ತನ್ನನ್ನು ಪ್ರಶ್ನಿಸಿದ್ದು ಅವರಿಗೆ ಭಯಂಕರ ಅಪಮಾನ ಅನ್ನಿಸಿತು. ಅವರು ಸವಾಲು ಹಾಕಿಯೇಬಿಟ್ಟರು.
ಮುಂದಿನ ಭಾನುವಾರ ತಾವು ನನ್ನ ಉಳ್ಳಾಲದ ಬೆಂಗ್ರೆಯಲ್ಲಿರುವ ಮೈದಾನಕ್ಕೆ ಬನ್ನಿ. ಅಲ್ಲಿ ನನ್ನ ಸತ್ವ ಪರೀಕ್ಷೆಯಾಗಲಿ. ಈ ನಾರಾಯಣರು ಯಾರೆಂದು ಊರವರು ಗುರುತಿಸುವಲ್ಲಿ ವಿಫಲರಾದರೆ ನಾನು ನಿಮಗೆ ಒಂದು ಆನೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಒಂದು ಪೆಲತ್ತರಿಯನ್ನು ಮೇಲೆ ಚಿಮ್ಮಿದಾಗ ಎಷ್ಟು ಎತ್ತರವಾಗುತ್ತದೋ ಅಷ್ಟು ಎತ್ತರದ ಹಲಸಿನ ಹಣ್ಣಿನ ರಾಶಿಯನ್ನು ನೀಮಗೆ ಧಾರೆ ಎರೆದು ಕೊಡುತ್ತೇನೆ. ಅದೇ ನೀವು ನಾನೊಬ್ಬ ಅನಾಮಿಕ ವ್ಯಕ್ತಿಯೆಂದು ನಿರೂಪಿಸಿದರೆ ನಾನು ನಿಮ್ಮ ಸೇವಕನಾಗಿ ಬರುತ್ತೇನೆ...
ನಾರಾಯಣರ ಅಬ್ಬರ ಕೇಳಿ ಭಗೀರಥನಿಗೆ ಒಮ್ಮೆ ದಂಗಾಯಿತು. ತಾನು ಯಾಕಾದರೂ ಈ ದೊಡ್ಡ ಮನುಷ್ಯನ ಸುದ್ದಿಗೆ ಹೋದೆನೋ ಅಂತ ಆತಂಕ ಆರಂಭವಾಯಿತು. ಆದರೂ ಚಾಲೆಂಜ್ ಅಂದ ಮೇಲೆ ಚಾಲೆಂಜ್ ಅಲ್ವೇ... ಅದಕ್ಕಾಗಿ ಆಯ್ತು ಸರ್. ನಾನು ಮುಂದಿನ ಭಾನುವಾರ ಬೆಂಗ್ರೆಗೆ ಬರುತ್ತೇನೆ ಅಂತ ಫೋನ್ ಇರಿಸಿದ ಭಗೀರಥ...
.....
ನಂತರ ಭಗೀರಥ ತನ್ನ ಸಹಪಾಠಿ ಉಳ್ಳಾಲದ ಗುಣಶೀಲ ಕುಮಾರನಿಗೆ ಕರೆ ಮಾಡಿದ.
ಗುಣಶೀಲ ಕುಮಾರ ಹಾಗೂ ನಾರಾಯಣರು ಗಳಸ್ಯ ಕಂಠಸ್ಯ ಸ್ನೇಹಿತರು. ಗುಣಶೀಲ ಉತ್ತಮ ಹಾಡುಗಾರನೂ ಹೌದು. ನೃತ್ಯವನ್ನೂ ಮಾಡುತ್ತಿದ್ದ. ತನ್ನದೇ ಆದ ವ್ಯವಹಾರ ಉದ್ದಿಮೆ ನಡೆಸುತ್ತಿದ್ದ.... ನಾರಾಯಣರ ಬಗ್ಗೆ ಆತನಿಗೆ ಚೆನ್ನಾಗಿ ತಿಳಿದಿತ್ತು.... ಗುಣಶೀಲನ ರೇಶ್ಮೆಯಂಥಹ ನಯವಾದ ಕೂದಲನ್ನು ನಾರಾಯಣರು ಯಾವಾಗಲೂ ಹೊಗಳುತ್ತಿದ್ದರು...
ಗುಣಶೀಲನಿಗೆ ಕರೆ ಮಾಡಿದ ಭಗೀರಥ ಅಲವತ್ತುಕೊಂಡ.
ಅವು ಏರ್ ಮಾರಾಯ ಜನ ನಾರಾಯಣರ್. ಏರೆಡ ಕೇಂಡಲ ಪನ್ಪುಜ್ಜೆರ್. ಆ ಜನ ಏರ್... ದಾದ ವಿಷಯ? ಒರ ಪಣ್ ಮಾರಾಯ. ಆ ಜನ ಎನಡ ಇತ್ತೆ ಚಾಲೆಂಜ್ ಪಾಡ್ದ್ಂಡ್....
ಭಗೀರಥನ ಆತಂಕ ಕಂಡು ನಸುನಕ್ಕ ಗಣಶೀಲ ಹೇಳಲು ಶುರು ಮಾಡಿದ....
🚶♂️🚶♂️🚶♂️🚶♂️🚶♂️🚶♂️🚶♂️🚶♂️
ನಾರಾಯಣರು ಉಳ್ಳಾಲಗುತ್ತಿನ ಪ್ರಗತಿಪರ ಹಲಸು ಬೆಳೆಗಾರ. ಆಜಾನುಬಾಹು, ಬನ್ನಂಗಾಯಿ ಹಾಗೂ ಅವಲಕ್ಕಿ ತಿಂದು ಕಟ್ಟುಮಸ್ತಾದ ದೇಹ ಬೆಳೆಸಿಕೊಂಡಿದ್ದರು. ಅವರ 20 ಎಕ್ರೆ ಜಮೀನನಲ್ಲಿ 255 ತಳಿಯ ಹಲಸಿನ ಮರಗಳಿದ್ದವು. ಸ್ವತಹ ಅವರು ವಿವಿಧ ದೇಶಗಳಿಗೆ ಹೋಗಿ ತಂದು ನೆಟ್ಟ ಗಿಡಗಳವು. ಕಷ್ಟಪಟ್ಟು ಹಲಸಿನ ಬೆಳೆ ಹಾಗೂ ಉತ್ಪನ್ನಗಳ ತಯಾರಿಯಲ್ಲಿ ಹೆಸರು ಮಾಡಿದ್ದ ಅವರು ಕೋಟ್ಯಾಧೀಶ್ವರರೂ ಆಗಿದ್ದರು...ಆದರೆ ಸರಳ, ಸಜ್ಜನಿಕೆಯ ಮನುಷ್ಯ.
ಅವರಿಗೆ ಮುಂಬೈ ಹಾಗೂ ಅರಬ್ ದೇಶದಲ್ಲೂ ವ್ಯವಹಾರವಿತ್ತು. ಅವರ ಪ್ರತಿನಿಧಿಗಳು ಅಲ್ಲಿ ನಾರಾಯಣರ ಹಲಸಿನ ಕಾಯಿಯನ್ನು ಅವರ ಸ್ನೇಹಿತ ಪಾಲುದಾರರು ಮಾರಾಟ ಮಾಡುತ್ತಿದ್ದರು. ಮುಂಬೈಯಲ್ಲಿ ದಯಾನಂದ ನಾಯಕ್, ಪವಮಾನ ಶೆಟ್ಟಿ, ವಿನುತಾ, ಭವ್ಯಶ್ರೀ ಅವರು ಪಾಲುದಾರರು, ಗಲ್ಫಿನಲ್ಲಿ ಫಮ್ಮರ್ ಉರೂಕ್ ಹಾಗೂ ರಬ್ದುಲ್ ಅಶೀದ್ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಹಲಸಿನ ಕಾಯಿಯನ್ನು ಉದ್ಯಮಿ ನವನವೀನ ಶೆಟ್ಟಿ ಅವರು ತಮ್ಮ ಟ್ರಕ್ಕುಗಳಲ್ಲಿ ಮುಂಬೈಗೆ ಕೊಂಡು ಹೋಗುತ್ತಿದ್ದರು.
ಮುಂಬೈಯಲ್ಲಿ ಗ್ರಾಹಕರ ಜೊತೆ ಮಾತನಾಡಲು ನಾರಾಯಣರು ಮರಾಠಿ ಕಲಿತಿದ್ದರು. ಮೀಯಪದವಿನ ಆಳ್ವರಸರ ಮನೆತನದ ಮೀನಾಕ್ಷಿ ಆಳ್ವ ಅವರು ಸಫಲ್ಯರಿಗೆ ಮರಾಠಿ ಕಲಿಸಿದ್ದರು....
ಹೀಗೆ ಅವರ ವಹಿವಾಟು ಸರಾಗವಾಗಿ ನಡೆಯುತ್ತಿದ್ದಾಗ, ಒಮ್ಮೆ ದುಷ್ಟಮೋಹನ ಎಂಬ ಪತ್ರಕರ್ತನೆಂದು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿ ನಾರಾಯಣರ ಹಲಸಿನ ಉದ್ಯಮದ ಬಗ್ಗೆ ಅವರತ್ರ ಕೇಳದೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಚಿತ್ರಸಹಿತ ಲೇಖನ ಬರೆದು ಹಾಕಿದ. ಅಲ್ಲಿಂದ ನಾರಾಯಣರಿಗೆ ಉಪದ್ರ ಆರಂಭವಾಯಿತು...
ಜನರಿಗೆ ಅವರ ತೋಟದ ಬಗ್ಗೆ ಮಾಹಿತಿ ತಿಳಿದು ಕಳ್ಳರ ಕಾಟ ಜಾಸ್ತಿಯಾಯಿತು. ಆಗಾಗ ಇಡೀ ಹಲಸಿನ ಕಾಯಿಗಳೇ ತೋಟದಿಂದ ಮಾಯವಾಗಲು ತೊಡಗಿತು. ಇದರಿಂದ ನಾರಾಯಣರು ಕಂಗೆಟ್ಟರು. ಕಾವಲುಗಾರನನ್ನು ಇಟ್ಟರೂ ಪ್ರಯೋಜನವಾಗಲಿಲ್ಲ. ತನ್ನ ಸ್ನೇಹಿತ ಆರಕ್ಷಕ ದಿನೇಶ್ ಕಾಮತ್ ಗೆ ತಮ್ಮ ಗೋಳು ತೋಡಿಕೊಂಡಾಗ ಕಾಮತ್ ಹೇಳಿದರು, ಸ್ವಾಮಿ ನಿಮ್ಮ ಹಲಸಿನ ತೋಟ ಕಾಯಲು ಪೊಲೀಸರಿಗೆ ಪುರುಸೊತ್ತಿಲ್ಲ, ನೀವೇ ವ್ಯವಸ್ಥೆ ಮಾಡಿಕೊಳ್ಳಿ ಅಂತ.
ನಂತರ ಅವರೊಂದು ಉಪಾಯ ಮಾಡಿದರು. ತಮ್ಮ ಮೂವರು ಮಕ್ಕಳಾದ ಶಂಕರನಾರಾಯಣ, ಸತ್ಯನಾರಾಯಣ, ಹರಿನಾರಾಯಣರ ಹೆಸರಿಗೆ ಆಸ್ತಿಯನ್ನು ಸಮವಾಗಿ ಪಾಲು ಮಾಡಿದರು. ಅವರ ಹೆಸರಿಗೆ ಮರಗಳನ್ನು ವಿಂಗಿಡಿಸಿದರು. ನಂತರ ಹಲಸಿನ ಮರದಲ್ಲಿ ಫಲಕ ಬರೆದು ಹಾಕಿದರು. ಈ ಹಲಸಿನ ಕಾಯಿಗಳು ನಾರಾಯಣರ ಮಕ್ಕಳಿಗೆ ಮಾತ್ರ ಮೀಸಲು, ಉಳಿದವರು ಮುಟ್ಟುವಂತಿಲ್ಲ ಅಂತ....
ಅಂದಿನಿಂದ ಕಳವು ನಿಂತಿತು!!!
ಆದರೆ ನಾರಾಯಣರು ಬೋರ್ಡ್ ಹಾಕಿದ ವಿಷಯ ದುಷ್ಟಮೋಹನನ ಮೂಲಕ ಪುನಃ ಪೇಪರಿನಲ್ಲಿ ಸುದ್ದಿಯಾಗಿ ಬಂತು. ನಾರಾಯಣರಿಗೆ ಕೆಂಡಾಮಂಡಲ ಸಿಟ್ಟು ಬಂತು. ತಮ್ಮ ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡು ದುಷ್ಟಮೋಹನನ್ನು ಸುಟ್ಟುಹಾಕುತ್ತೇನೆ ಅಂತ ಹೊರಟರು. ಸಕಾಲಕ್ಕೆ ಮಧ್ಯಪ್ರವೇಶಿಸಿದ ಗುಣಶೀಲ ಕುಮಾರ್ ಅವರನ್ನು ಸಮಾಧಾನ ಪಡಿಸಿದ ಕಾರಣ ದುಷ್ಟಮೋಹನನ ಪ್ರಾಣ ಉಳಿಯಿತು. ನಂತರ ದುಷ್ಟಮೋಹನ ನಾರಾಯಣರ ಸುದ್ದಿಗೇ ಹೋಗಲಿಲ್ಲ.
ನಾರಾಯಣರ ಹಲಸಿನ ಹಣ್ಣಿನ ಶ್ಯಾಂಪೂ ಬಳಸಿಯೇ ಗುಣಶೀಲ ಮಿರಮಿರನೆ ಮಿಂಚುವ ಕೂದಲು ಹೊಂದಿದ್ದಾನೆ ಅಂತ ಊರವರು ಮಾತನಾಡಿಕೊಳ್ಳುತ್ತಿದ್ದರು. ಅಷ್ಟು ಆತ್ಮೀಯತೆ ಅವರ ನಡುವೆ ಇತ್ತು....
.....
ಅಂತೂ ಇಂತೂ... ಭಾನುವಾರ ಬಂತು. ಭಗೀರಥ ಹಾಗೂ ನಾರಾಯಣರ ನಡುವಿನ ಪಂಥಾಹ್ವಾನ ಸಾಬೀತಾಗುವ ದಿನ. ನಿರೀಕ್ಷೆಯಂತೆ ನಾರಾಯಣರ ಕಡೆಯಿಂದ 500 ಜನ ಉಳ್ಳಾಲ ಮೈದಾನದಲ್ಲಿ ಸೇರಿದ್ದರು. ಭಗೀರಥ ಏಕಾಂಗಿ. ನನ್ನನ್ನು ಗೊತ್ತಿಲ್ಲದವರು ಯಾರಿದ್ದೀರಿ... ಕೈ ಎತ್ತಿ ನಾರಾಯಣರು ಅಬ್ಬರಿಸಿದರು... ಯಾರೂ ಕೈ ಎತ್ತಲಿಲ್ಲ....
ನಿರೀಕ್ಷೆಯಂತೆ ಭಗೀರಥ ಪಂಥದಲ್ಲಿ ಸೋತು ಹೋದ. ಉಪನ್ಯಾಸಕನಾದ ತಾನು ನಾರಾಯಣರ ಸೇವಕನಾಗಿರಬೇಕಾದ್ದು ನೆನಸಿ ಆತನಿಕೆ ಅಳು ಬಂತು. ವಿಷಾದದ ಕವನವೊಂದು ಹುಟ್ಟಿಕೊಂಡಿತು. ಸೋಲನ್ನು ನಿರೀಕ್ಷಿಸಿದ್ದ ಭಗೀರಥ ಬರುವಾಗಲೇ ಸರ್ಕಾರದ ಮೂಲಕ ಬರುವ ಕಾಳಸಂತೆಯಲ್ಲಿ ಸಿಗುವ ನೀಲಿ ಬಣ್ಣದ ಚಿಮಿಣಿ ಎಣ್ಣೆಯನ್ನು ಕ್ಯಾನಿನಲ್ಲಿ ತಂದಿದ್ದ... ಅದನ್ನು ಸುರಿದು ಪ್ರಾಣತ್ಯಾಗ ಮಾಡುತ್ತೇನೆ. ಈ ಅವಮಾನ ತಾಳಲಾರೆ ಅಂತ.... ಬಹಿರಂಗವಾಗಿ ಹೇಳಿದ...
.......
ನಾರಾಯಣರು ಮಾತನಾಡಲಿಲ್ಲ... ಭಗೀರಥ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡ.... ಫುಲ್ ನಿಶ್ಯಬ್ಧ ವಾತಾವರಣ.... ಜೇಬಿನಿಂದ ಬೆಂಕಿಪೊಟ್ಟಣ ತೆಗೆದು ಕಡ್ಡಿಯನ್ನು ಕೈಗೆತ್ತಿಕೊಂಡ.......
ಇನ್ನೇನು ಗೀರಬೇಕು....
ಅಷ್ಟರಲ್ಲಿ
ನಿಲ್ಲಿಸಿ....
ಎಂಬ ಕೂಗು ಕೇಳಿತು...!!!!
ಎಲ್ಲರೂ ಗೇಟಿನತ್ತ ನೋಡಿದರು.
ಅಲ್ಲಿ...
ನಾರಾಯಣರ ಪಟ್ಟ ಶಿಷ್ಯ, ಖ್ಯಾತ ಹುಲಿವೇಷಗಾರ ಜಗನ್ನಾಥ ಕೈರಂಗಳ ನಿಂತಿದ್ದ...
ನಿಲ್ಲಿಸಿ...
ಎಂದು ಮತ್ತೊಮ್ಮೆ ಕಿರುಚಿದ ಆತ ನಿಧಾನವಾಗಿ ಭಗೀರಥನತ್ತ ನಡೆದು ಬರಲು ಆರಂಭಿಸಿದ....!
--------------------------
ಭಗೀರಥನಿಗೆ ಏನಾಯ್ತು?!
ನಿಲ್ಲಿಸಿ....
ಜಗನ್ನಾಥನ ಕೂಗಿಗೆ ಅಲ್ಲಿ ಸೇರಿದ್ದವರೆಲ್ಲ ಸ್ತಂಭೀಭೂತರಾದರು.
ಇನ್ನೇನು ಕಡ್ಡಿ ಗೀರಿ ಆತ್ಮಾಹುತಿ ಮಾಡಿಕೊಳ್ಳಬೇಕೆಂದಿದ್ದ ಭಗೀರಥನ ಕೈಯ್ಯಿಂದ ಬೆಂಕಿ ಕಡ್ಡಿ ದೂರ ಚಿಮ್ಮಿತು...ಕಾಕತಾಳೀಯವಾಗಿ ಮಳೆ ಬಂದು ಬೆಂಕಿಯ ಭಯ ಹೋಯ್ತು....
ವೇಗವಾಗಿ ಬಂದ ಜಗನ್ನಾಥ ಕೂಗಿ ಹೇಳಿದ...ನಿನಗೇನು ಹುಚ್ಚ ಮಾರಾಯ? ನಾರಾಯಣರು ಯಾವುದೋ ಆವೇಶದಲ್ಲಿ ಏನೋ ಎರಡು ಮಾತು ಆಡಿದ್ದಾರೆ. ಅದಕ್ಕೆ ನೀವು ಹೀಗೆಲ್ಲ ಆತುರ ಮಾಡುವುದ.... ಮರೆತು ಬಿಡಿ. ನಾರಾಯಣರದ್ದು ಮಗುವಿನಂಥಹ ಮನಸ್ಸು. ಎರಡು ಮಾತು ಆಡುತ್ತಾರೆ, ಆದರೆ ಮತ್ತೆ ಅದನ್ನೇ ಮನಸಲ್ಲಿಟ್ಟುಕೊಳ್ಳುವುದಿಲ್ಲ....
ಇಷ್ಟಕ್ಕೂ ನಿಮಗೆ ಅವರ ಬಗ್ಗೆ ಇನ್ನಷ್ಟು ತಿಳಿಯಬೇಕೆಂದಿದ್ದರೆ ಅವರಿಗೊಂದು ಮನವಿ ಕೊಡೋಣ. ಆ ಮನವಿಯನ್ನು ನಾನು ನಿಮಗೆ ಬರೆದುಕೊಡುತ್ತೇನೆ. ನಿಮ್ಮ ಬಗ್ಗೆ ಮಾಹಿತಿ ನೀಡಿ ಮಾರಾಯರೇ. ಅವರೇ ತಮ್ಮ ಸಾಧನೆಯ ಬಗ್ಗೆ ನಿಮಗೆ ಹೇಳುತ್ತಾರೆ... ಎಂದು ಸಮಾಧಾನ ಮಾಡಿದ.
ಜಗನ್ನಾಥನ ಮಾತಿಗೆ ಭಗೀರಥನ ಬೇಸರ ಕಮ್ಮಿಯಾಯಿತು. ನಾರಾಯಣರೂ ತಮ್ಮ ಆವೇಶಕ್ಕೆ ಸಾರಿ ಕೇಳಿದರು. ಅಲ್ಲಿಗೆ ಈ ಪ್ರಕರಣ ಮುಗಿಯಿತು.
ಇಷ್ಟಕ್ಕೂ ಈ ಜಗನ್ನಾಥ ಯಾರು...
ಮತ್ಯಾರೂ ಅಲ್ಲ ಈ ಚಿಗುರು ಮೀಸೆಯ ತರುಣ, ಗೌರ ವರ್ಣದ ಯುವಕನಿಗೆ ವಿದ್ಯುತ್ ಇಲಾಖೆಯಲ್ಲಿ ಕೆಲಸ. ಅವನೊಂದು ದಿವಸ ಮದುವೆ ಪಾರ್ಟಿಯಲ್ಲಿ ಸ್ವಲ್ಪ ಪಾನೀಯ ಸೇವನೆಯ ಬಳಿಕ ಒಟ್ರಾಸಿ ಹುಲಿ ವೇಷದ ಹಾಡಿಗೆ ತಾಳಹಾಕುತ್ತಿದ್ದದ್ದನ್ನು ಆ ಮದುವೆಗೆ ಅತಿಥಿಯಾಗಿದ್ದ ನಾರಾಯಣರು ಗಮನಿಸಿದ್ದರು. ಅವರಿಗೆ ಈ ಕಲೆಯನ್ನು ಈ ಯುವಕ ಕೊಲ್ಲುತ್ತಾನೆ ಅಂತ ಬೇಸರವಾಯಿತು. ಅದಕ್ಕಾಗಿ, ಯುವಕನ ಭಯಂಕರ ನೃತ್ಯ ಮುಗಿದ ಬಳಿಕ ಪಕ್ಕಕ್ಕೆ ಕರೆದು, ತಮ್ಮ ಶಿಷ್ಯತ್ವ ಸ್ವೀಕರಿಸುವಂತೆ ಹೇಳಿದರು.
ತೊಕ್ಕೊಟ್ಟಿನ ವ್ಯಾಯಾಮ ಶಾಲೆಗೆ ಕರೆದೊಯ್ದು ಜಗನ್ನಾಥನಿಗೆ ಹುಲಿ ವೇಷದ ನೃತ್ಯದಲ್ಲಿ ತರಬೇತಿ ಕೊಟ್ಟದ್ದು ಮಾತ್ರವಲ್ಲ, ತಾಲೀಮಿನ ಅಭ್ಯಾಸವನ್ನೂ ಮಾಡಿಸಿದರು. ಈ ನಡುವೆ ನಾರಾಯಣರ ವಿವಿಧ ವ್ಯವಹಾರಗಳಿಗೆ ಬೇಕಾದ ಮನವಿ ಪತ್ರವನ್ನೂ ಜಗನ್ನಾಥನೇ ಬರೆದು ಕೊಡುತ್ತಿದ್ದ... ಇದರಿಂದಾಗಿ ಜಗನ್ನಾಥನಿಗೂ ನಾರಾಯಣರಿಗೂ ಸಾಕಷ್ಟು ಗೆಳೆತನವಿತ್ತು. ಮಾತ್ರವಲ್ಲ, ನಾರಾಯಣರ ತೋಟದಿಂದ ಜಗನ್ನಾಥನಿಗೆ ಓಸಿಗೆ ಹಲಸಿನ ಹಣ್ಣೂ ಸಿಗುತ್ತಿತ್ತು....
...
ಅದೇ ಸಮಯದಲ್ಲಿ ದೇಶದಲ್ಲಿ *ಡರೋನ-20* ಎಂಬ ಮಹಾಮಾರಿಯ ಕಾಟ ಆರಂಭವಾಯಿತು. ಜನ ಮನೆ ಬಿಟ್ಟು ಹೊರಗೆ ಬಾರದಂತೆ ಕ್ವಾರಂಟೇನ್ ಹೇರಲಾಗಿತ್ತು... ವಿವಿಧ ವ್ಯವಹಾರಗಳು ನೆಲಕಚ್ಚಿದವು. ಸುಮಾರು ಎರಡು ವರ್ಷ ಕಾಲ ಕಾಡಿದ *ಡರೋನ-20* ಹೊಡೆತದಿಂದ ಹೊರಬರಲು ಜನಸಾಮಾನ್ಯರಿಗೆ ಕಷ್ಟವಾಯಿತು. ನಾರಾಯಣರೂ ಬೆಳೆದ ಲಕ್ಷಾಂತರ ಮೌಲ್ಯದ ಹಲಸಿಗೆ ಗಿರಾಕಿಗಳು ಸಿಗದೆ ಅವರು ಪರಿತಪಿಸುವಂತಾಯಿತು....
...
ಈ ಕಷ್ಟದ ಪರಿಸ್ಥಿತಿಯಲ್ಲಿ ನಾರಾಯಣರ ಸ್ನೇಹಿತರು ಅವರಿಗೆ ನೆರವಾದರು. ಬೇರೆ ಬೇರೆ ಗಿಮಿಕ್ ನಡೆಸಿ, ತಂತ್ರಗಳನ್ನು ಹೆಣೆದೆ ಹಲಸಿನ ಕಾಯಿಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಿದರು. ಮುಂಬೈಯಲ್ಲಿ ನಾರಾಯಣರ ಪಾಲುದಾರರಾದ ವಿನಿತಾ ಅವರು ಮೂಲತಹ ಕ್ರೀಡಾಪಟು. ಕಾಲೇಜು ದಿನಗಳಲ್ಲಿ ಅತ್ಯತ್ತಮ ಕ್ರೀಡಾಪಟು ಎಂಬ ಪ್ರಶಸ್ತಿ ಗಳಿಸಿದ್ದರು. ಅವರೊಂದು ಐಡಿಯಾ ಮಾಡಿದರು....
ವಾಲಿಬಾಲ್ ಹಾಗೂ ಫುಟ್ಬಾಲ್, ತ್ರೋಬಾಲ್ ಗಳಲ್ಲಿ ಚೆಂಡಿನ ಬದಲು ದುಂಡಗಿನ ಹಲಸಿನ ಕಾಯಿ ಬಳಸಿ ನೋಡಿ, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ತೋರಿಸಿಕೊಟ್ಟರು. ಶಾಲಾ ಕಾಲೇಜುಗಳಲ್ಲಿ ಚೆಂಡಿನ ಬದಲು ಹಲಸಿನಕಾಯಿ ಬಳಕೆಗೆ ಯುವ ಜನತೆ ಮುಂದಾಯಿತು.
ನಂತರ ಇನ್ನೊಬ್ಬ ಕೇರಳದ ಪೈವಳಿಕೆ ಸಮೀಪ ವಾಸಿಸುತ್ತಿದ್ದ ಭೀಮಾವತಿ ಎಂಬವರು ಹಲಸಿನ ಕಾಯಿಗಳಿಂದ ಪ್ರತಿದಿನ ಬೆಳಗ್ಗೆ ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಸಂದೇಶಗಳನ್ನು ಕ್ರಾಫ್ಟ್ ರೂಪದಲ್ಲಿ ಕೆತ್ತನೆ ಮಾಡಿ ಜನ ಮನ ಗೆಲ್ಲಬಹುದು ಎಂಬುದನ್ನು ನಾರಾಯಣರಿಗೆ ತೋರಿಸಿಕೊಟ್ಟರು. ಮತ್ತೆ ಮಂಗಳೂರಿನಲ್ಲಿದ್ದ ಪ್ರೀತಿಲಕ್ಷ್ಮಿ ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ಹಲಸಿನ ಹಣ್ಣಿನ ಸೋಳೆಗಳನ್ನು ಪ್ಯಾಕ್ ಮಾಡಿ ಅಂಗಡಿಗಳಿಗೆ ತಲುಪಿಸಿ ನಾರಾಯಣರ ಮಾರುಕಟ್ಟೆ ಹೆಚ್ಚಿಸಿದರು.....
ಪಂಡಿತ್ ಹೌಸಿನ ಗುಣಲಕ್ಷ್ಮೀ ಎಂಬವರು ಹಲಸಿನ ಉಪಯೋಗದ ಕುರಿತು ಪತ್ರಿಕೆಗಳಲ್ಲಿ ಲೇಖನ ಬರೆದು ಜನಜಾಗೃತಿ ಮೂಡಿಸಿದರು. ಕಾಸರಗೋಡಿನ ಗ್ರೀಷ್ಮಾ ಎಂಬವರು ಹಣಕಾಸು ವ್ಯವಹಾರದಲ್ಲಿ ನಿಪುಣರಾಗಿದ್ದು ನಾರಾಯಣರಿಗೆ ಹಲಸಿನಿಂದ ಬಂದ ದುಡ್ಡನ್ನು ಹೇಗೆ ಶೇರುಗಳಲ್ಲಿ ಹೂಡಿಕೆ ಮಾಡಬೇಕು ಎಂಬ ಕುರಿತು ವಿವರಿಸಿದರು.
🎡🎡🎡🎡🎡
*ಡರೋನ-20* ಲಾಕ್ ಡೌನ್ ಸಂಕಷ್ಟದ ಬಳಿಕ ಸಹಜವಾಗಿ ನಾರಾಯಣರ ವ್ಯವಹಾರದಲ್ಲಿ ಚೇತರಿಕೆ ಆಯಿತು. ಅವರ ಹೆಸರು ಬಹಳ ಜನಪ್ರಿಯವಾಯಿತು. ಸಹಜವಾಗಿ ಅವರ ಆದಾಯ ಏರಿಕೆಯಾಗಿದ್ದು ಆದಾಯ ತೆರಿಗೆ ಇಲಾಖೆಯವರಿಗೆ ಗೊತ್ತಾಯಿತು.... ಅವರ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ, ಮಂಗಳೂರಿನಲ್ಲಿ ಲೆಕ್ಕ ಪರಿಶೋಧಕ ಅಧಿಕಾರಿಯೂ ಆಗಿದ್ದ ವಿದ್ಯಾರಶ್ಮಿ ಎಂಬವರಿಗೆ ನಾರಾಯಣರ ಲೆಕ್ಕಾಚಾರಗಳ ಬಗ್ಗೆ ಸಂಶಯ ಮೂಡಿತು...
ಅಸಲಿಗೆ ಆಕೆಗೆ ನಾರಾಯಣರು ಯಾರೆಂದೇ ಗೊತ್ತಿರಲಿಲ್ಲ. ಈ ಹಿಂದೆ ಭಗೀರಥ ನಾರಾಯಣರ ಕುರಿತು ಪ್ರಶ್ನೆ ಮಾಡಲು ಹೋಗಿ ಮುಖಭಂಗಕ್ಕೆ ಒಳಗಾದ್ದು ಆಕೆಗೆ ಗೊತ್ತಿರಲೇ ಇಲ್ಲ.... ಇದು ಯಾವುದರ ಅರಿವಿಲ್ಲದೆ ಆಕೆ, ನಾರಾಯಣರಿಗೆ ನೋಟಿಸ್ ಜಾರಿ ಮಾಡಿದಳು....
ನಿಮ್ಮ ವ್ಯವಹಾರಗಳಿಗೆ ನೀವು ಸೂಕ್ತ ತೆರಿಗೆ ಕಟ್ಟಿಲ್ಲ, ನಾವ್ಯಾಕೆ ನಿಮ್ಮ ಮೇಲೆ ಮೊಕದ್ದಮೆ ದಾಖಲಿಸಬಾರದು....? ಅಂತ...
ಪೋಸ್ಟಿನಲ್ಲಿ ಬಂದ ನೋಟಿಸ್ ನೋಡಿದ್ದೇ ತಡ... ಇದ್ಯಾರು ಹೆಣ್ಣು ಮಗಳು ತನ್ನಂಥ ನೇರ ನಡೆ ನುಡಿಯ ವ್ಯಕ್ತಿಯ ವ್ಯವಹಾರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಎಂದು ಸಿಟ್ಟುಗೊಂಡ ನಾರಾಯಣರು ತಮ್ಮ ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡು ಮಂಗಳೂರಿನ ಲೆಕ್ಕಪರಿಶೋಧನಾ ಅಧಿಕಾರಿಯನ್ನು ಸುಟ್ಟು ಬಿಡುತ್ತೇನೆ ಎಂದು ತಮ್ಮ ಹಳೆ ಅಂಬಾಸಿಡರ್ ಕಾರಿನಲ್ಲಿ ಹೊರಟರು...
ಬೀಚಿನಲ್ಲಿ ಸೂರ್ಯೋದಯ ನೋಡುತ್ತಿದ್ದ ಗುಣಶೀಲನಿಗೂ, ವ್ಯಾಯಮ ಶಾಲೆಯಲ್ಲಿ ಹುಲಿಕುಣಿತ ತಾಲೀಮು ಮಾಡುತ್ತಿದ್ದ ಜಗನ್ನಾಥನಿಗೂ ಈ ವಿಚಾರ ತಿಳಿಯಿತು... ನಾರಾಯಣರನ್ನು ಹೀಗೆಯೇ ಇರಲು ಬಿಟ್ಟರೆ ಕೆಲಸ ಕೆಡುತ್ತದೆ ಎಂದು ಅರಿತ ಅವರು. ತಕ್ಷಣ ಒಂದು ಕುದುರೆ ಗಾಡಿ ಏರಿ ಉಳ್ಳಾಲ ಸಂಕ ದಾಟಿ, ಮಹಾಕಾಳಿಪಡ್ಹು ಮೂಲಕ ಮಂಗಳೂರಿನತ್ತ ಧಾವಿಸಿದರು.....
🚜🚜🚜🚜🚜
ನಾರಾಯಣರ ಕಾರು ಫಿಶರೀಸ್ ಕಾಲೇಜು ದಾಟುವ ಹೊತ್ತಿಗೆ ಗುಣಶೀಲ ಮತ್ತು ಜಗನ್ನಾಥ ಇದ್ದ ಗಾಡಿ ಮಂಗಳಾದೇವಿ ದಾಟಿ ಆಗಿತ್ತು....
ನಾರಾಯಣರು ತನ್ನನ್ನು ಕೊಲ್ಲಲು ಬರುತ್ತಿರುವುದು, ನಾರಾಯಣರ ತಾಕತ್ತು ಅರಿಯದ ಅಮಾಯಕ ಲೆಕ್ಕ ಪರಿಶೋಧಕಿ ವಿದ್ಯಾರಶ್ಮಿ ತನ್ನ ಮನೆಯಿಂದ ಕಚೇರಿಗೆ ಹೊರಡಲು ದ್ವಿಚಕ್ರ ವಾಹನಕ್ಕೆ ಕಿಕ್ ಕೊಟ್ಟಳು...
--------------------
ಅಚಿನ್ ಸಲ್ಮೇಡಾ ಫಜೀತಿಗೆ ಸಿಲುಕಿದ್ದು ಹೇಗೆ ?
ನಾರಾಯಣರ ಅಂಬಸಿಡರ್ ಕಾರು ಫಿಶರೀಸ್ ಕಾಲೇಜು ದಾಟಿ ಶರವೇಗದಿಂದ ಧಾವಿಸುತ್ತಿತ್ತು. ತನಗೆ ನೋಟಿಸ್ ನೀಡಿದ ಲೆಕ್ಕ ಪರಿಶೋಧಕಿ ವಿದ್ಯಾರಶ್ಮಿಯನ್ನು ಸುಟ್ಟು ಹಾಕುವುದು ಅವರ ಆವೇಶದ ಸಿಟ್ಟಿಗೆ ಕಾರಣ.
ಇತ್ತ ಕಡೆ ಕುದುರೆ ಸಾರೋಟಿನಲ್ಲಿ ಮಹಾಕಾಳಿಪಡ್ಪು ಮೂಲಕ ಹಂಪನಕಟ್ಟೆ ತಲುಪಲೆಂದು ಜಗನ್ನಾಥ ಹಾಗೂ ಗುಣಶೀಲ ಧಾವಿಸುತ್ತಿದ್ದರು. ಆದರೆ ಅವರ ದುರದೃಷ್ಟಕ್ಕೆ ರೈಲ್ವೇ ಕ್ರಾಸಿಂಗ್ ನಲ್ಲಿ ಗೇಟ್ ಹಾಕಿತ್ತು!!!!
ಎಂತ ಮಾಡುವುದೆಂದು ಅವರಿಗೆ ಗೊತ್ತಾಗಲಿಲ್ಲ. ನೇರವಾಗಿ ಹೋಗಿ ನಾರಾಯಣರನ್ನು ತಡೆಯದಿದ್ದರೆ ಖಂಡಿತಾ ವಿದ್ಯಾರಶ್ಮಿಯ ಹತ್ಯೆಯಾಗುತ್ತದೆ. ರೈಲು ಕ್ರಾಸ್ ಆಗುವ ತನಕ ಕಾಯುವಂತಿರಲಿಲ್ಲ.
ತಕ್ಷಣ ಗುಣಶೀಲನಿಗೆ ಒಂದು ಉಪಾಯ ಹೊಳೆಯಿತು. ಅಲ್ಲಿಯೇ ಇದ್ದ ಟೆಲಿಫೋನ್ ಬೂತಿಗೆ ತೆರಳಿದ. ಮಿಲಾಗ್ರಿಸಿನಲ್ಲಿ ಕಚೇರಿ ಹೊಂದಿದ್ದ ಜತಿನ್ ಗೆ ಕರೆ ಮಾಡಿ ಹೇಳಿದ, ಹೀಗಿಗೇ ವಿಷಯ. ಸಫಲ್ಯರನ್ನು ತಡೆಯದಿದ್ದರೆ ವಿಷಯ ಗುಂಡಾಂತರ ಆಗುವುದು ಎಂದು.
....
ಒಂದು ಕ್ಷಣವೂ ತಡ ಮಾಡದ ಜತಿನ್ ತನ್ನ ಕಚೇರಿಯಿಂದ ಹೊರ ಬಂದ. ಪಕ್ಕದ ಬ್ಯಾಂಕಿನ ಕೆಲ ಸಿಬ್ಬಂದಿಯನ್ನೂ ಸೇರಿಸಿ ಮಿಲಾಗ್ರಿಸಿನಲ್ಲಿ ನಾರಾಯಣರ ಕಾರನ್ನು ತಡೆಯಲು ಕಾಯುತ್ತಾ ನಿಂತ.
.....
ಆದರೆ ವಿಧಿ ನಿರ್ಣಯ ಬೇರೆಯೇ ಇತ್ತು. ಹಿಂದಿನ ದಿನ ರಾತ್ರಿ ಹಲಸಿನ ಹಣ್ಣಿನ ಪಾಯಸವನ್ನು ತುಸು ಹೆಚ್ಚೇ ಸೇವಿಸಿದ್ದ ನಾರಾಯಣರಿಗೆ ಪಂಪ್ ವೇಲ್ ಮಹಾವೀರ ವೃತ್ತ ತಲುಪಿದಾಗ ಹೊಟ್ಟೆ ಗುಡುಗುಡು ಅನ್ನಲು ಶುರುವಾಯಿತು. ಹೊಟ್ಟೆ ನೋವು ಆರಂಭವಾಯಿತು. ತಕ್ಷಣ ಡೌನ್ ಲೋಡ್ ಮಾಡುವುದು ಬೆಟರ್ ಎಂಬ ಅರ್ಜೆಂಟ್ ಹುಟ್ಟಿಕೊಂಡಿತು. ಮತ್ತೇನು ಮಾಡುವುದು?
ಅಲ್ಲಿಯೇ ಸಮೀಪ ಇದ್ದ ಪೆಂಟಗಾನ್ ಹೊಟೇಲಿಗೆ ಹೋಗಿ ಅದಕ್ಕೋಸ್ಕರ ಒಂದು ಸ್ಪೆಷಲ್ ರೂಂ ಬುಕ್ ಮಾಡಿ. ಪ್ರಕೃತಿಯ ಕರೆಗೆ ಓಗೊಟ್ಟರು. ಹೊಟ್ಟೆ ನೋವು ಕಡಿಮೆಯಾಗುತ್ತಿರಲಿಲ್ಲ. ಅದಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿದ್ದ ತನ್ನ ಹಳೆಯ ಸಹಪಾಠಿ ಊರ್ಮಿಳಾ ಅವರಿಗೆ ಕರೆ ಮಾಡಿ, ಬೇಕಾದ ಮಾತ್ರೆಯ ವಿವರ ತಿಳಿದುಕೊಂಡರು. ಚಾಲಕನನ್ನು ಕಳುಹಿಸಿ, ಸ್ವಲ್ಪ ಸುಧಾರಿಸಿದ ಬಳಿಕ ಮರಳಿ ಉಳ್ಳಾಲದ ಮನೆಗೆ ಮರಳಿದರು. ಅಷ್ಟು ಹೊತ್ತಿಗೆ ಅವರಿಗೆ ತಾನು ಹೊರಟ ಕಾರ್ಯ ಮರೆತುಹೋಗಿತ್ತು.
ಜತಿನ್, ಹಾಗೂ ನಂತರ ಮಿಲಾಗ್ರಿಸ್ ತಲುಪಿದ ಗುಣಶೀಲ ಹಾಗೂ ಜಗನ್ನಾಥನಿಗೂ ನಾರಾಯಣರು ಎಲ್ಲಿಗೆ ಹೋದರೆಂದೇ ಗೊತ್ತಾಗಲಿಲ್ಲ. ನಂತರ ಅವರೆಲ್ಲ ವಿದ್ಯಾರಶ್ಮಿಯ ಕಚೇರಿಗೆ ಹೋಗಿ, ಆಕೆಗೆ ನಾರಾಯಣರ ವ್ಯಕ್ತಿತ್ವದ ಬಗ್ಗೆ ಪರಿಚಯ ಮಾಡಿಕೊಟ್ಟರು. ಪತ್ರಕರ್ತ ದುಷ್ಟ ಬರೆದಿದ್ದ ನಾರಾಯಣರ ಆತ್ಮಚರಿತ್ರೆ “ಹುಲುಸಾಗಿ ಬೆಳೆದ ಹಲಸು” ಕೃತಿಯನ್ನು ಕೊಟ್ಟು ಅದನ್ನು ಓದಲು ಹೇಳಿದರು.
ಸುಮ್ಮ ಸುಮ್ಮನೇ ನಾರಾಯಣರ ಕುರಿತು ಟೀಕೆ ಮಾಡದಂತೆ ಸಲಹೆ ನೀಡಿದರು. ನಾರಾಯಣರು ಮುಂಗೋಪಿಯಾದರೂ ನೇರ ನಡೆ ನುಡಿಯ, ಸರಳ ಸಜ್ಜನ ಎಂದು ಮನದಟ್ಟು ಮಾಡಿಸಿದರು. ಅವಳಿಗೂ ಇದು ಅಂದಾಜಾಗಿ. ತಾನಿನ್ನು ನಾರಾಯಣರ ಸುದ್ದಿಗೆ ಬರುವುದಿಲ್ಲ ಎಂದು ತಿಳಿಸಿದಳು.
ಆದರೆ ಸದಾ ಕೆಲಸದಲ್ಲಿ ಬಿಝಿ ಆಗಿರುವ ಆಕೆ ಆ ಪುಸ್ತಕವನ್ನು ತೆಗೆದು ಅಟ್ಟಕ್ಕೆ ಎಸೆದವಳು, ನಂತರ ಓದಲೇ ಇಲ್ಲ!!!
……..
ಇದಾದ ನಂತರ ಸಾಹಿತ್ಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಓರ್ವ ನೃತ್ಯಗಾರ ಅಚಿನ್ ಸಲ್ಮೇಡಾ ಎಂಬಾತ ನಾರಾಯಣರ ಬದುಕಿನ ಕುರಿತು ಸಂಶೋಧನೆಗೆ ಆರಂಭಿಸಿದ. ಆತ, ನಾರಾಯಣರ ಮನೆ ಪಕ್ಕದಲ್ಲಿರುವ ಗುಣಶೀಲನ ಮನೆಯಲ್ಲೇ ವಾಸ್ತವ್ಯ ಹೂಡಿ ನಾರಾಯಣರ ಕುರಿತು ಮಾಹಿತಿ ಸಂಗ್ರಹ ಆರಂಭಿಸಿದ. ಆತನ ಪುಣ್ಯಕ್ಕೆ ನಾರಾಯಣರೂ ಯಾವುದೇ ಆಕ್ಷೇಪ ಹೇಳಲಿಲ್ಲ.
ಆತನ ಅಧ್ಯಯನದ ವಿಷಯ “ಹಲಸಿನ ಕಾಯಿ ಸಂರಕ್ಷಣೆಯಲ್ಲಿ ನಾರಾಯಣರ ಕಾಳಜಿ-ಉಳ್ಳಾಲದಲ್ಲಿ ಒಂದು ಅಧ್ಯಯನ”
ಆತನಿಗೆ ಹಿರಿಯ ಉಪನ್ಯಾಸಕಿ ವಿಭಾ ಪೂಂಜ ಡಾಕ್ಟರೇಟ್ ಗೈಡ್ ಆಗಿದ್ದರು.
ಈ ಅಧ್ಯಯನದಲ್ಲಿ ಸಲ್ಮೇಡಾನಿಗೆ ನಾರಾಯಣರ ಕುರಿತು ಅನೇಕ ವಿಚಾರಗಳು ತಿಳಿದುಬಂತು.
..............
ನಾರಾಯಣರು ತುಂಬ ಅಚ್ಚುಕಟ್ಟು ಮನುಷ್ಯ. ದಿನಾ ಗರಡಿಗೆ ಹೋಗಿ ದೇಹದಂಡನೆ ಮಾಡುತ್ತಿದ್ದರು. ಬಿಳಿ ಶರ್ಟು, ಬೆಳ್ಳನೆ ಶಾಲು, ಪಂಚೆ, ಚರ ಪರ ಸದ್ದು ಮಾಡುತ್ತಿದ್ದ ಚರ್ಮದ ಚಪ್ಪಲಿಗಳು, ತಪ್ಪ ಮುಂಡಾಸು, ಹುರಿಮೀಸೆ, ಆಜಾನುಬಾಹು ನಾರಾಯಣರ ಉಡುಪಿನ ಹಾಗೆ ಅವರ ಮನಸ್ಸೂ ಶುಭ್ರ.
ಅವರು ಹಲಸನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದರೆ ಪ್ರತಿ ಹಲಸಿನ ಕಾಯಿಯನ್ನೂ ಸ್ವಂತ ಮಕ್ಕಳ ಹಾಗೆ ಕಾಣುತ್ತಿದ್ದರು. ಹಲಸಿನ ಕಾಯಿಗೆ ಮಳೆ ನೀರು ಬೀಳದಂತೆ ಟೋಪಿ ಇಡುತ್ತಿದ್ದರು. ಇದನ್ನು ಈಗಲೂ ಅವರ ಶಿಷ್ಯ ಜಗನ್ನಾಥ ಪಾಲಿಸುತ್ತಿದ್ದು, ಅವನ ಮನೆಯಲ್ಲಿ ಈಗಲೂ ನೀವು ಹಲಸಿನ ಕಾಯಿಗೆ ಟೊಪ್ಪಿ ಇಡುವುದನ್ನು ಕಾಣಬಹುದು!
.....
ಅವರಿಗೆ ಹಲಸಿನ ಬಗ್ಗೆ ತಿಳಿದಿರದ ವಿಚಾರಗಳೇ ಇರಲಿಲ್ಲ ಅನ್ನಬಹುದು. ಹಲಸಿನ ತಳಿಗಳು, ಕಸಿ ಕಟ್ಟುವುದು, ರೋಗಬಾಧೆ, ಹಲಸಿನ ಕಟಾವು, ಸಂರಕ್ಷಣೆ, ಮಾರುಕಟ್ಟೆ, ಹಲಸಿನ ಖಾದ್ಯಗಳು ಎಲ್ಲದರ ಬಗ್ಗೆ ತಿಳಿದುಕೊಂಡಿದ್ದರು.
ಅವರ ಮನೆ ಅಂಗಳದಲ್ಲೇ ಒಂದು ತುಳುವೆ ಹಲಸಿನ ಮರದ ಮರ ಇತ್ತು. ಅದು ಅವರ ಜೀವಕ್ಕೆ ಸಮಾನಾದ ಗಿಡ. ಆ ಮರದಲ್ಲಿ ಹಣ್ಣಾದರೆ ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಶೂಟ್ ಮಾಡ್ತೇನೆ ಅಂತಾ ಇದ್ರು. ಸ್ವತಃ ಅವರೇ ಕೊಯ್ದು ಅದನ್ನು ಕೈಯ್ಯಿಂದಲೇ ಬಿಚ್ಚಿ ಎಲ್ಲರಿಗೂ ತಿನ್ನಲು ಕೊಡುತ್ತಿದ್ದರು. ಅದರ ಹಣ್ಣು ಅಷ್ಟೊಂದು ರುಚಿ.
ಆ ಮರದಲ್ಲಿ ವರ್ಷಕ್ಕೆ ನಾಲ್ಕೇ ಹಣ್ಣು ಆಗುತ್ತಿತ್ತು. ಅದನ್ನು ಇನ್ಯಾರಾದರೂ ಮುಟ್ಟಿದರೆ ಅವರಿಗೆ ಕೆಂಡದಂಥ ಸಿಟ್ಟು ಬರುತ್ತಿತ್ತು. ಇದು ಆ ಎಸ್ಟೇಟಿನ ಎಲ್ಲರಿಗೂ ಗೊತ್ತಿತ್ತು. ಗುಣಶೀಲ ಹಾಗೂ ಜಗನ್ನಾಥನಿಗೂ ಗೊತ್ತಿತ್ತು.
ಆದರೆ ಹೊಸದಾಗಿ ಬಂದಿದ್ದ ಅಚಿನ್ ಸಲ್ಮೇಡಾನಿಗೆ ತಿಳಿದಿರಲಿಲ್ಲ. ಒಂದು ದಿನ ನಾರಾಯಣರು ಮಂಗಳೂರಿನ ಬಂಡಸಾಲೆಗೆ ಹೋಗಿದ್ದ ದಿವಸ, ಅಚಿನ್ ಗೆ ತುಂಬ ಹಸಿವಾಗುತ್ತಿತ್ತು. ತಿನ್ನಲು ಏನಿದೆ ಎಂದು ಹುಡುಕಿದರೆ ಮನಯಲ್ಲಿ ಇನ್ನೂ ಅಡುಗೆ ಆಗಿರಲಿಲ್ಲ. ಅವ ಗುಣಶೀಲನ ಮನೆಯಿಂದ ಸೀದಾ ನಾರಾಯಣರ ಮನೆಗೆ ಹೋದ (ಅಷ್ಟು ಸಲುಗೆ ಅವನಿಗಿತ್ತು).
ಆದರೆ ನಾರಾಯಣರು ಮಂಗಳೂರಿಗೆ ಹೋಗಿದ್ದರು. ಅವನಿಗೆ ಅಂಗಳದ ಮರದ ಬುಡದಲ್ಲಿ ನೇತಾಡುತ್ತಿದ್ದ ತುಳುವೆ ಹಲಸಿನ ಹಣ್ಣು ಕಾಣಿಸಿತು. ಸಾವಿರಗಟ್ಟಲೆ ಹಲಸು ಬೆಳೆಯುವ ತೋಟದಲ್ಲಿ ಇದನ್ನೊಂದು ಕೊಯ್ದರೆ ನಾರಾಯಣರು ಏನೂ ಹೇಳಲಿಕ್ಕಿಲ್ಲ ಅಂದುಕೊಂಡು ಆ ಹಲಸನ್ನುಕೊಯ್ದ. ಆತನಿಗೆ ತಿಳಿ ಹೇಳಲು ಅಷ್ಟೊತ್ತಿಗೆ ಕೆಲಸದವರು ಯಾರೂ ಇರಲಿಲ್ಲ....
............
ಅಂಗಳದ ಮೂಲೆಯ ಕಟ್ಟೆಯಲ್ಲಿ ಕುಳಿತು ಹದವಾಗಿ ಹಣ್ಣಾದ ಹಲಸಿನ ಕಾಯಿಯನ್ನು ಬಿಚ್ಚಿ ಇನ್ನೇನು ಸೋಳೆಯನ್ನು ಬಾಯಿಗೆ ಇಡಬೇಕು ಎಂಬಷ್ಟರಲ್ಲಿ ನಾರಾಯಣರ ಕಾರು ನಿಧಾನವಾಗಿ ಗೇಟಿನೊಳಗೆ ಪ್ರವೇಶಿಸಿತು.....!!!
----------------------------
ಪೊಲೀಸ್ ನಾಯಿ ಹೊರಟದ್ದು ಎಲ್ಲಿಗೆ ? ??
ಕಾರು ಕಂಪೌಂಡ್ ದಾಟಿ ಬಂದು ಅಂಗಳ ತಲಪುವಷ್ಟರಲ್ಲಿ ಅಚಿನ್ ಪೂರ್ತಿ ಹಣ್ಣನ್ನು ಹೊಟ್ಟೆಗಿಳಿಸಿ ಆಗಿತ್ತು. ನಿಧಾನವಾಗಿ ಬಾಗಿಲು ತೆರೆಯಿತು. ನಾರಾಯಣರ ಸಿಟ್ಟಿನ ಬಗ್ಗೆ ಅರಿವಿಲ್ಲದ ಅಚಿನ್, 'ನಾರಾಯಣ ಸರ್ ಈ ಎರಡು ಸೋಳೆಗಳು ಎಷ್ಟು ಸವಿಯಾಗಿದೆ ಗೊತ್ತಾ, ನೀವೂ ತಿನ್ನಿ' ಅಂತ ತೆಗೆದುಕೊಂಡು ಕಾರಿನ ಬಳಿ ಹೋದ...!
…..
ಆದರೆ, ಕಾರಿನಿಂದ ಇಳಿದದ್ದು, ನಾರಾಯಣರಲ್ಲ ಅವರ ಡ್ರೈವರ್, ಸಿಂಪತಿ ಆಳ್ವ ಮಾತ್ರ. ವಿಷಯ ಏನು ಅಂದ್ರೆ, ತನಗೆ ಸಂಜೆ ವರೆಗೂ ಮಂಗಳೂರಿನಲ್ಲಿ ಕೆಲಸ ಇದ್ದುದರಿಂದ ನಾರಾಯಣರ ಡ್ರೈವರ್ ಆಳ್ವನ ಹತ್ರ ನೀನು ಮನೆಗೆ ಹೋಗು, ಸಂಜೆ ಬಂದರೆ ಸಾಕು ಅಂತ ಕಳ್ಸಿದ್ದರು. ದೇವರ ದಯದಿಂದ ಕಾರಿನಲ್ಲಿ ನಾರಾಯಣರು ಬಾರದೇ ಇದ್ದುದರಿಂದ ಆ ಕ್ಷಣಕ್ಕೆ ಅಚಿನ್ ಬದುಕಿದ ಅಂಥ ಸಿಂಪತಿಗೆ ಅರ್ಥ ಆಯ್ತು...
ಅಚಿನ್ ನ ಬಾಯಲ್ಲಿ ಅಂಟಿಕೊಂಡಿದ್ದ ಹಲಸಿನ ಹಣ್ಣುಗಳ ತುಂಡು, ಅಲ್ಲಿ ಹರಡಿದ್ದ ಹಣ್ಣಿನ ಸುವಾಸನೆ, ಕೈಯ್ಯಲ್ಲಿದ ಮೇಣದಿಂದ ಸಿಂಪತಿಗೆ ಅರ್ಥ ಆಯ್ತು, ಅಚಿನ್ ಯಾರತ್ರವೂ ಕೇಳದೆ ಹಣ್ಣು ಕೊಯ್ದು ತಿಂದದ್ದು, ಗ್ರಹಚಾರಕ್ಕೆ ಆ ಹೊತ್ತಿಗೆ ನಾರಾಯಣರ ಮೂವರು ಮಕ್ಕಳೂ ಮನೆಯಲ್ಲಿ ಇರಲಿಲ್ಲ.
ಏನೇ ಆದರೂ, ಸಂಜೆ ನಾರಾಯಣರು ಮನೆಗೆ ಬಂದ ಬಳಿಕ ಅವರಿಗೆ ಅಂಗಳದಲ್ಲೇ ಇರುವ ಮರದಿಂದ ತನ್ನ ಪ್ರೀತಿಯ ಹಲಸು ಕಾಣೆಯಾಗಿರುವ ವಿಚಾರ ತಿಳಿದೇ ತಿಳಿಯುತ್ತದೆ, ವಿಚಾರಣೆ ಆರಂಭಿಸುತ್ತಾರೆ, ಆಗ, ಮನೆಯಲ್ಲಿ ಅಚಿನ್ ಇದ್ದದ್ದು ಗೊತ್ತಾದರೆ, ಆತನನ್ನು ಕೊಂದೇ ಬಿಟ್ಟಾರು ಎಂದು ಟೆನ್ಶನ್ ಆಯ್ತು ಸಿಂಪತಿಗೆ....
ತಕ್ಷಣ ಮನೆಯೊಳಗೆ ಹೋಗಿ ಗುಣಶೀಲ ಕುಮಾರನಿಗೆ ಕರೆ ಮಾಡಿದ. ಅಚಿನ್ ನ ಆತ್ಮೀಯ ಮಿತ್ರನೂ ಆಗಿದ್ದ ಗುಣಶೀಲ ಓಡೋಡಿ ಬಂದ. ಅಷ್ಟೊತ್ತಿಗಾಗಲೇ ಸಿಂಪತಿ ಆಳ್ವನಿಂದ ನಾರಾಯಣರ ಬಗ್ಗೆ ತಿಳಿದುಕೊಂಡಿದ್ದ ಅಚಿನ್ ಥರ ಥರ ನಡುಗುತ್ತಿದ್ದ. ಸಣ್ಣಗೆ ಜ್ವರ ಬಂದ ಹಾಗೆ ಭಾಸವಾಗುತ್ತಿತ್ತು ಅವನಿಗೆ, ತಾನು ಇಲ್ಲಿದ ಜೀವಂತವಾಗಿ ಊರಿಗೆ ಹೋದರೆ ಸಾಕಿತ್ತು ಅಂತ ಹರಕೆಯನನ್ನೂ ಹೇಳಿದ್ದ...
ಗುಣಶೀಲನ ಹಾಗೂ ಸಿಂಪತಿಗೆ ಏನು ಮಾಡಬೇಕು ಅಂತಲೇ ಗೊತ್ತಾಗಲಿಲ್ಲ. ಅವರು ಮಂಗಳೂರಿನಲ್ಲಿ ನಾರಾಯಣರ ಪೊಲೀಸ್ ಗೆಳೆಯ ದಿನೇಶ್ ಕಾಮತ್ ಗೆ ಕರೆ ಮಾಡಿದರು. ದಿನೇಶ್ ಹೇಳಿದ, ನಂಗೆ ಇವತ್ತು ಟ್ರಾಫಿಕ್ ಡ್ಯೂಟಿ ಇದೆ, ಬರ್ಲಿಕೆ ಆಗುವುದಿಲ್ಲ, ಉಳ್ಳಾಲದಲ್ಲಿ ನನ್ನ ಕಲೀಗ್ ನಂದಿಕೇಶ್ ಕುಮಾರ್ ಇದ್ದಾರೆ, ಅವರನ್ನು ಕಳುಹಿಸುತ್ತೇನೆ. ಅಂತ.
ಕೆಲಹೊತ್ತಿನಲ್ಲೇ ನಂದಿಕೇಶ್ ಕುಮಾರ್ ಬಂದರು. ಅವರಿಗೆ ಗುಣಶೀಲ ಮತ್ತು ಸಿಂಪತಿ ಆಳ್ವ ನಡೆದ ವಿಚಾರ ವಿವರಿಸಿದರು. ಆದಕ್ಕೆ, ನಂದಿಕೇಶ್ ಹೇಳಿದರು, 'ಆಯ್ತು ಈಗ ಆದದ್ದು ಆಯ್ತಲ್ಲ, ಇನ್ನೀಗ ಅವನ ಹೊಟ್ಟೆಯಿಂದ ಹಲಸನ್ನು ಹೊರ ತೆಗೆಯಲು ಅಸಾಧ್ಯ. ನೀವೊಂದು ಕೆಲಸ ಮಾಡಿ, ಹಲಸು ತಿಂದದ್ದಕ್ಕೆ ಸಾಕ್ಷಿ ಇಲ್ಲದ ಹಾಗೆ ಎಲ್ಲ ಅವಶೇಷಗಳನ್ನು ಇಲ್ಲಿಂದ ಮರೆ ಮಾಚಿ' ಅಂತ. ನಾನು ಇದಕ್ಕಿಂತ ಜಾಸ್ತಿ ಇನ್ನೇನೂ ಹೇಳಲಾರೆ ಅಂತ...
ನಂದಿಕೇಶ್ ಕುಮಾರ್ ಸಲಹೆಯಂತೆ ತೋಟದ ಮೂಲೆಗೆ ಹೋದ ಗುಣಶೀಲ ಹಾಗೂ ಅಚಿನ್, ಹಲಸಿನ ಹಣ್ಣಿನ ಸಿಪ್ಪೆ, ಗೂಂಜಿ, ಬೇಳೆ, ಮಯಣ ಉಜ್ಜಿದ ತೆಂಗಿನ ನಾರಿನ ಬ್ರಶ್ ಎಲ್ಲವನ್ನೂ ಗುಂಡಿ ತೆಗೆದು ಹೂತು ಹಾಕಿದರು. ಆ ಜಾಗದ ನೆನಪಿಗೆ ಹೂತು ಹಾಕಿದ ಜಾಗದಲ್ಲಿ ಒಂದು ಹಲಸಿನ ಗಿಡವನ್ನು ನೆಟ್ಟರು. ನಂತರ ಆತ ಸಿಟೌಟ್ ನಲ್ಲಿ ಕುಳಿತು ಹಲಸು ತಿಂದ ಜಾಗವನ್ನು ಫಿನಾಯಿಲ್ ಹಾಕಿ ತೊಳೆದರು...
ಅಷ್ಟು ಮಾತ್ರವಲ್ಲ, ನಾರಾಯಣರು ಸಿಟೌಟಿನಲ್ಲಿ ಕುಳಿತುಕೊಳ್ಳುವ ಈಸಿಚೇರಿನಲ್ಲಿ ಕುಳಿತು ನೋಡಿದರೆ ಅಂಗಳದ ತುದಿಯಲ್ಲಿರುವ ಹಲಸಿನ ಮರ ಸುಲಭದಲ್ಲಿ ಕಾಣದಂತೆ ಅಡ್ಡವಾಗಿ ಸಿಟೌಟಿನ ಬಲೆಯ ಗೋಡೆಗೆ ಹಲಸಿನ ಚಿತ್ರ ಇರುವ ಕ್ಯಾಲೆಂಡರ್ ತೂಗು ಹಾಕಿದರು....
ಇಷ್ಟೆಲ್ಲ ಆಗುವಾಗ, ಸಂಜೆಯಾಯಿತು. ಸಿಂಪತಿ ಆಳ್ವ ಹೋಗಿ ನಾರಾಯಣರನ್ನು ಕರೆ ತಂದ. ಎಲ್ಲರೂ ಊಹಿಸಿದಂತೆ ಆಯಿತು. ನಾರಾಯಣರಿಗೆ ಹಲಸು ಕಾಣೆಯಾಗಿದ್ದು ತಿಳಿಯಲೇ ಇಲ್ಲ... ಆದಾದ ನಂತರ ಅಚಿನ್ ನಾರಾಯಣರ ಮನೆಗೆ ಹೋಗುವುದನ್ನೇ ಕಡಿಮೆ ಮಾಡಿದ. ಎಲ್ಲಿ ತಾನು ಸಿಕ್ಕಿಬೀಳುತ್ತೇನೋ ಎಂಬ ಭಯ....
ರಾತ್ರಿ ಕನಸಿನಲ್ಲ, ತನ್ನ ಹೊಟ್ಟೆಯಲ್ಲಿ ಹಲಸಿನ ಗಿಡ ಹುಟ್ಟಿ ದ ಹಾಗೆ, ಅದನ್ನು ಗನ್ ಹಿಡಿದು ಬಂದ ನಾರಾಯಣರು ಶೂಟ್ ಮಾಡಿದ ಹಾಗೆ ಕನಸುಗಳು ಬೀಳುತ್ತಿದ್ದವು. ಉಳ್ಳಾಲ ಬಿಟ್ಟು ಊರಿಗೆ ಹೋಗೋಣ ಎಂದು ಒಮ್ಮೊಮ್ಮೆ ಅನ್ನಿಸಿದರೂ, ತನ್ನ ಡಾಕ್ಟರೇಟ್ ಥಿಸೀಸ್ ಮುಗಿಯದೆ ಹೇಗೆ ಹೋಗುವುದು ಅಂತ ಗೊತ್ತಾಗುತ್ತಿರಲಿಲ್ಲ...
.....
ಈ ನಡುವೆ ಗುಣಶೀಲ ಮಾತ್ರ ಎಂದಿನಂತೆ, ನಾರಾಯಣರ ಮನೆಗೆ ಹೋಗಿ ಬರುತ್ತಿದ್ದ, ನಾರಾಯಣರನ್ನೇ ಗಮನಿಸುತ್ತಿದ್ದ, ಹಲಸು ಕಳವಾಗಿದ್ದು ತಿಳಿದಿದೆಯೇ ಅಂತ...
ಇದಾಗಿ ನಾಲ್ಕೇ ದಿನದಲ್ಲಿ ಉಳ್ಳಾಲ ಪುರಸಭೆಯಲ್ಲಿ ನಾಡಹಬ್ಬ ಆಚರಣೆ ನಡೆಯುವುದರಲ್ಲಿತ್ತು, ಅಲ್ಲಿ ಊರವರು, ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇತ್ತು. ಇದೇ ಸಂದರ್ಭವನ್ನು ನಾವು ಹಲಸಿನ ಪ್ರಚಾರಕ್ಕೆ ಬಳಸಿಕೊಳ್ಳೋಣ ಅಂತ ಸಲಹೆ ನೀಡಿದ ಗುಣಶೀಲ. ನಾವು ಹಲಸಿನ ಬಗ್ಗೆ ಒಂದು ಹಾಡು ಹಾಡಿ, ಅಲ್ಲಿ ಪ್ರಸ್ತುತ ಪಡಿಸೋಣ, ಜನರಿಗೂ ಖುಷಿ ಆಗ್ತದೆ, ಅಂತ ಗುಣಶೀಲ...
ಅದೆಲ್ಲ ಸರಿ, ಹಾಡು ಬರೆಯುವವರು ಯಾರಿದ್ದಾರೆ, ಎಂದು ಕೇಳಿದರು ನಾರಾಯಣ ರು. ಭಗೀರಥ ಇದ್ದಾರೆ, ಅವರು ತುಂಬ ಚಂದ ಬರೀತಾರೆ ಹಾಡು. ಸರಿ ಭಗೀರಥನಿಗೆ ಹೇಳಿ ಕಳುಹಿಸಿದರು ನಾರಾಯಣ ರು.
ಇವರ ನಿರೀಕ್ಷೆಯನ್ನು ಭಗೀರಥ ಹುಸಿಗೊಳಿಸಲಿಲ್ಲ..... ಡಾ.ರಾಜ್ ಕುಮಾರ್ ಹಾಡಿದ ಜೇನಿನ ಹೊಳಯೋ... ಹಾಲಿನ ಮಳೆಯೋ ರಾಗದಲ್ಲಿ ಒಂದು ಹಾಡು ಬರೆದು ಕೊಟ್ಟರು... ಅದರ ಕೆಲವು ಸಾಲುಗಳು ಹೀಗಿವೆ:
🎙️🎙️🎙️🎙️🎙️🎙️
( ರಾಗ: ಜೇನಿನ ಹೊಳೆಯೋ... )
ಹಲಸಿನ ಸೊಳೆಯೋ, ಪೆಲತ್ತರಿ ಮಳೆಯೋ
ಇದೆಯೋ, ಅಲ್ಲಾ, ಮುಗಿದಿದೆಯೋ?!
ನಾಣಿಯ ತೋಟದ ಸವಿ ಮಾಧುರ್ಯವೋ,
ಸುಮಧುರ ಹಣ್ಣುಗಳ ಪ್ರಭೆಯೋ.. ಆಹಾ....
ಹಲಸಿನ ಸೊಳೆಯೋ, ಪೆಲತ್ತರಿ ಮಳೆಯೋ...
ಇದೆಯೋ, ಅಲ್ಲ ಮುಗಿದಿದೆಯೋ...
..
//ಚರಣ//
ಸುಮಾರು ತಳಿಗಳ ಹಲಸಿನ ಅಂದ
ಕವಿ ಭಗೀರಥನ ಸ್ಫೂರ್ತಿಯ ಚಂದ
ದಾಸರು, ಸಕಲರು ಹಾಡಿ ಹೊಗಳಿದ
ಹಲಸಿನ ಗೀತೆಯ ಸೊಬಗಿನಿಂದ....
(ಈ ಥರ ಮುಂದುವರಿಯುತ್ತದೆ)
📝📝📝📝📝📝📝
ಪಲ್ಲವಿ ಮತ್ತು ಚರಣ ನೋಡಿ ನಾರಾಯಣರಿಗೆ ಬಹಳ ಖುಷಿಯಾಯ್ತು. ಗುಣಶೀನಲತ್ರ ಹೇಳಿದರು. ನೀನಿದನ್ನು ಡಾ.ರಾಜ್ ಕುಮಾರ್ ಥರ ಹಾಡಬೇಕು. ನಾವದನ್ನ ಟೇಪ್ ರೆಕಾರ್ಡರಿನಲ್ಲಿ ರೆಕಾರ್ಡ್ ಮಾಡ್ಕೊಂಡು ನಾಡಹಬ್ಬದ ದಿವಸ ಅಲ್ಲಿ ಹಾಕುವ, ಮಾತ್ರವಲ್ಲ, ನಮ್ಮ ಅಂಗಳದಲ್ಲಿ ಹದವಾಗಿ ಹಣ್ಣಾದ ತುಳುವೆ ಹಲಸಿನ ಹಣ್ಣನ್ನೂ ಹಾಡಿನ ಜೊತೆಗೆ ಪ್ರದರ್ಶನ ಮಾಡುವ. ಜನರಿಗೆ ಭಯಂಕರ ಖುಷಿ ಆದೀತು... ನಾರಾಯಣರು ಖುಷಿಯಿಂದಲೇ ಹೇಳುತ್ತಲೇ ಹೋದರೆ, ಪಕ್ಕದಲ್ಲಿದ್ದ ಗುಣಶೀನಲನಿಗೆ ಎದೆ ಧಸಕ್ಕೆಂದಿತು....
ಅಲ್ಲ ನಾರಾಯಣರೇ, ಹಣ್ಣಿನ ಪ್ರದರ್ಶನ ಎಲ್ಲ ಯಾಕೆ.... ಅಂತ ತಡವರಿಸುತ್ತಿರಬೇಕಾದರೆ, ನಾರಾಯಣರು ಹಲಸಿನ ಮರದ ಹತ್ತಿರ ಹೊರಟರು, ನಾಲ್ಕೈದು ದಿನ ಆಯ್ತು, ಕಾಯಿ ಹಣ್ಣಾಗಿದಾ ಅಂತ ನೋಡದೆ, ನೋಡುವ ಅಂತ ಹೋದವರೆ, ಮರದ ಬುಡಕ್ಕೆ ತಲುಪಿದವರು ಕಿಟಾರನೆ ಕಿರುಚಿದರು....
ಅವರ ಕೂಗಿಗೆ ಬೆಚ್ಚಿ ನಾರಾಯಣರ ಮಕ್ಕಳು, ಸಿಂಪತಿ ಆಳ್ವ, ಗುಣಶೀಲ ಮರದತ್ತ ಓಡಿದರು... 'ಗುಣಶೀಲ, ಗುಣಶೀಲ ಹಲಸು..ಹಲಸು ಕಾಣಿಸುತ್ತಿಲ್ಲ', ನಾರಾಯಣರ ಮೈ ಕಂಪಿಸುತ್ತಿತ್ತು, ರೋಮಗಳು ಸೆಟೆದಿದ್ದವು...
ಏನೂ ಆಗ್ಲಿಕಿಲ್ಲ ನಾರಾಯಣರೇ... ನಿಮಗೆ ಲೆಕ್ಕ ತಪ್ಪಿದಾ ಅಂತ. ಮೂರೇ ಹಲಸಲ್ವ ಮರದಲ್ಲಿ ಇದ್ದದ್ದು, ಗುಣಶೀಲ ಸಮಾಧಾನ ಮಾಡಲು ನೋಡಿದ...
ಮೂರಾ... ಏನಾಗಿದೆ ಗುಣಶೀಲ, ನಾಲ್ಕು ಹಣ್ಣು ಇದ್ದದ್ದಲ್ವ... ಏನೋ ಎಡವಟ್ಟಾಗಿದೆ. ಇದು ಯಾರಿಂದ ಆಗಿದ್ದು ಅಂತ ತಿಳಿಯದೆ ಬಿಡುವುದಿಲ್ಲ. ಫೋನ್ ಮಾಡು ದಿನೇಶ್ ಕಾಮತ್ ಗೆ ಅಬ್ಬರಿಸಿದರು....
☎️☎️☎️☎️☎️☎️
ಒಳಗೆ ಓಡಿದ ಗುಣಶೀಲ ಪೊಲೀಸ್ ದಿನೇಶ್ ಕಾಮತ್ ಗೆ ಫೋನ್ ಮಾಡಿ, ವಿಷಯ ವಿವರಿಸಿದ... ದಿನೇಶ್ ಬೈದ... ಅಲ್ಲ ಮಾರಾಯ, ಈಗ ಎಂತ ಮಾಡುವುದು, ಇಂಥದ್ದಕ್ಕೆಲ್ಲ ಪೊಲೀಸ್ ಕಂಪ್ಲೆಂಟ್ ಕೊಡುದಾ... ಅಷ್ಟೊತ್ತಿಗೆ ಗುಣಶೀಲನ ಕೈಯ್ಯಿಂದ ಫೋನ್ ಕಿತ್ತುಕೊಂಡ ನಾರಾಯಣರು ಅಬ್ಬರಿಸಿದರು.... ದಿನೇಶಾ ಬಾ.... ಬರುವಾಗ ಪೊಲೀಸ್ ನಾಯಿ ಹಿಡ್ಕೊಂಡು ಬಾ... ನಾನು ಸುಮ್ಮನೆ ಬಿಡುವುದಿಲ್ಲ, ಕಳ್ಳನನ್ನು. ಪೊಲೀಸ್ ನಾಯಿಯಿಂದಲೇ ಕಚ್ಚಿಸುತ್ತೇನೆ.... ಅಷ್ಟು ಹೇಳಿ ಫೋನಿಟ್ಟರು...
🐕🦺🐕🦺🐕🦺🐕🦺🐕🦺🐕🦺
ಬೇರೆ ಉಪಾಯ ಇಲ್ಲದೆ ದಿನೇಶ್ ಪೊಲೀಸ್ ನಾಯಿ ಜೊತೆಗೆ ಬಂದ... ಎಲ್ಲರೂ ಭಯದಿಂದ ನಡುಗುತ್ತಿದ್ದರು. ನಾರಾಯಣರು ಪೊಲೀಸರಿಗೆ ತುಳುವೆ ಮರವನ್ನು ತೋರಿಸಿದರು. ಮರವನ್ನು ಮೂಸಿದ ನಾಯಿಗೆ ಸ್ವಲ್ಪ ಡೌಟಾಯಿತು... ಮನೆಯ ಸಿಟೌಟಿನತ್ತ ಬಂತು.... ನಂತರ ಎಲ್ಲರೂ ನೋಡುತ್ತಿದ್ದ ಹಾಗೆ.... ಸೀದಾ ತೋಟದ ಮೂಲೆಯತ್ತ ಓಡತೊಡಗಿತು... ಪರಿಸ್ಥಿತಿ ಕೈಮೀರುತ್ತಿದೆ ಎಂದು ಸಿಂಪತಿ ಹಾಗೂ ಗುಣಶೀಲನಿಗೆ ಗೊತ್ತಿದ್ದರೂ ಈಗ ಏನೂ ಮಾಡುವಂತಿರಲ್ಲ.... ಹಲಸಿನ ಹಣ್ಣಿನ ಅವಶೇಷ ಹೂತಿದ್ದ ಜಾಗವನ್ನು ಕಾಲಿನಿಂದ ಕೆದಕಿ ತೋರಿಸಿತು ನಾಯಿ....
ಅಲ್ಲಿ ಪೊಲೀಸರು ಅಗೆದಾಗ, ಹಲಸಿನ ಬೀಜಗಳು ಸಿಕ್ಕಿದವು... ಅತೀವ ದುಃಖದಿಂದ ಅವನ್ನು ಕರ್ಚೀಫಿನಲ್ಲಿ ಎತ್ತಿ ಪೊಲೀಸರ ಕೈಗಿತ್ತ ನಾರಾಯಣರು ಹೇಳಿದರು... ದಿನೇಶ, ಮಕ್ಕಳ ಹಾಗೆ ಸಾಕಿದ ಹಲಸಿನ ಗತಿ ನೋಡಪ್ಪ... ಎಷ್ಟು ಖರ್ಚಾದರೂ ಪರ್ವಾಗಿಲ್ಲ, ಕಳ್ಳನನ್ನು ಹಿಡಿಯಲೇ ಬೇಕು... ಅವನನ್ನು ನೇಣು ಗಂಬಕ್ಕೆ ಏರಿಸಬೇಕು....
😡😡😡😡
ಅಷ್ಟು ಹೇಳಿದ್ದೇ ತಡ... ಹಲಸಿನ ಬೀಜಗಳನ್ನು ಮೂಸಿದ ನಾಯಿ... ವೇಗವಾಗಿ ಗುಣಶೀಲನ ಮನೆಯತ್ತ ಓಡತೊಡಗಿತು.... ಅಲ್ಲಿ, ಒಂದು ವಾರ ಕಳೆಯಿತಲ್ಲ, ಇನ್ನು ನಾರಾಯಣರಿಗೆ ವಿಚಾರ ಗೊತ್ತಾಗಲಿಕ್ಕಿಲ್ಲ ಅಂತ ನೆಮ್ಮದಿಯಿಂದ ಮಲಗಿ ಅಚಿನ್ ಪಾಪ, ಆರಾಮದಿಂದ ನಿದ್ರಿಸುತ್ತಿದ್ದ....!
...............................
ನಾರಾಯಣರ 'ಮಂಡೆ ಶರಬತ್ತು' ಆಗಲು ಕಾರಣವೇನು ?
ಏನೋ ಕನಸು ಕಟ್ಟಿದ್ದಂತೆ ಪಕ್ಕನೆ ಎಚ್ಚರವಾಯಿತು ಅಚಿನ್ ಗೆ. ಧಡಕ್ಕನೆ ಎದ್ದು ಕುಳಿತು. ಕಣ್ಣುಜ್ಜಿ ಸುತ್ತ ನೋಡುವಾಗ ಎಲ್ಲ ಕಡೆ ಜನ ನಿಂತಿದ್ದರೂ. ದಿನೇಶ್ ಕಾಮತ್ ಹಿಡಿದಿರುವ ನಾಯಿ ತನ್ನನ್ನೇ ದುರುಗುಟ್ಟಿ ನೋಡುತ್ತಾ ಇದೆ. ನಾರಾಯಣರು ಕೆಂಪು ಕಣ್ಣುಗಳಿಂದ ತನ್ನ ಕಡೆ ಕೋಪದ ದೃಷ್ಟಿ ಬೀರುತ್ತಿದ್ದಾರೆ. ಅವರ ಮಕ್ಕಳು, ಡ್ರೈವರ್ ಸಿಂಪತಿ, ಕೆಲಸದವರೆಲ್ಲ ತನ್ನನ್ನು ಅನುಕಂಪದಿಂದ ನೋಡುತ್ತಿದ್ದಾರೆ. ಅವನಿಗೆ ಕೂಡಲೇ ಫ್ಲಾಶ್ ಆಯಿತು. ಹಲಸಿನ ಹಣ್ಣು ತಿಂದದ್ದು ಗೊತ್ತಾಗಿದೆ. ತನ್ನ ಮೇಲೆ ಸಂಶಯದಿಂದ ಪೊಲೀಸ್ ಕಂಪ್ಲೇಟ್ ಕೊಟ್ಟಿದ್ದಾರೆ. ಅಂತ....
ಏನಾದರೂ ಸುಳ್ಳು ಹೇಳು, ಏನಾದರೂ ಸುಳ್ಳು ಹೇಳು ಅಂತ ನಾರಾಯಣರ ಹಿಂದೆ ನಿಂತಿದ್ದ ಗುಣಶೀಲ ಕೈಸನ್ನೆಯಲ್ಲಿ ತೋರಿಸುತ್ತಲೇ ಇದ್ದ. ಅದು ಕೂಡಲೇ ಅರ್ಥವಾಯಿತು ಅಚಿನ್ ಗೆ. ಎಂತ ಮಾಡುವುದು ಎಂದು ಯೋಚಿಸುತ್ತಾ ಅಭ್ಯಾಸಬಲದಿಂದ ಹಣೆಗೆ ಬೀಳುತ್ತಿದ್ದ ಕೂದಲನ್ನು ಕೈಯ್ಯಿಂದ ಬದಿಗೆ ಸರಿಸಿದ...
ಅಷ್ಟೊತ್ತಿಗೆ ಯಾರೂ ಊಹಿಸದ ಘಟನೆಯೊಂದು ನಡೆದು ಹೋಯಿತು...
ದಿನೇಶನ ಕೈಯ್ಯಿಂದ ಜಾರಿದ ನಾಯಿ ನೇರವಾಗಿ ಅಚಿನ್ ಮೈಮೇಲೆ ನೆಗೆಯಿತು!!!!!!!!
ಅಚಿನ್ ಹಣೆಯನ್ನು ನೆಕ್ಕಿತು... ಆತನ ಮೈಗೆ ಒರಗಿ ಪರಿಚಿತರನ್ನು ನೋಡುವಂತೆ ನೋಡಿ ಸ್ನೇಹದ ಚಿಹ್ನೇ ಬೀರತೊಡಗಿತು. ತಕ್ಷಣ ಅರ್ಥ ಮಾಡಿಕೊಂಡ ಅಚಿನ್ ಕೂಗಿದ, ಹೇ ಜಾಕಿ...
ಹೌದು ಇದು, ಜಾಕಿ ಐದು ವರ್ಷಗಳ ಹಿಂದೆ ಸ್ನೇಹಿತ ದಿನೇಶ್ ತನ್ನನ್ನು ಕೋರಿಕೊಂಡ ಮೇರೆಗೆ ತಾನು ಕೈಯ್ಯಾರೆ ಸಾಕಿದ್ದ ನಾಯಿ ಜಾಕಿಯನ್ನು ಪೊಲೀಸ್ ಇಲಾಖೆಗೆ ದಾನವಾಗಿ ನೀಡಿದ್ದ. ಅದೇ ನಾಯಿ ಐದು ವರ್ಷಗಳ ಬಳಿಕವೂ ತನ್ನನ್ನು ಗುರುತು ಹಿಡಿದಿದೆ.... ಬಹುಶಃ ಇದೇ ನಾಯಿಯನ್ನು ದಿನೇಶ ಬೇಕಂತಲೇ ತಂದಿದ್ದಾನೆ ಅಂತ ಅರ್ಥ ಆಯಿತು ಅಚಿನ್ ಗೆ...
ಜಾಕಿ, ಜಾಕಿ ಅಂತ ಅದರ ಮೈದಡವಿ ಮುದ್ದು ಮಾಡತೊಡಗಿದ... ಅಲ್ಲಿದ್ದವರ ಕಣ್ಣುಗಳಿಂದ ಆನಂದ ಬಾಷ್ಪ ಸುರಿಯಿತು..
🐕🦺🐕🦺🐕🦺🐕🦺
ಆದರೆ, ನಾರಾಯಣರ ಮಂಡೆ ಶರಬತ್ತು ಆಗತೊಡಗಿತು.
ಅಚಿನ್ ಗುರುತು ಹಿಡಿದು ನಾಯಿ ಗುಣಶೀಲನ ಮನೆಗೆ ಬಂದದ್ದು ಹೌದು.. ಆದರೆ, ಹಲಸಿ ಹಣ್ಣು ಹೂತುಹಾಕಿದಲ್ಲಿಗೆ ಅದು ಹೋಗಿದ್ದು ನಿಜ, ನೆಲದಡಿಯಲ್ಲಿ ಅವಶೇಷಗಳೂ ಸಿಕ್ಕಿದ್ದೂ ನಿಜ. ನಂತರ ಗುಣಶೀಲನ ಮನೆಗೆ ಬಂದದ್ದೂ ನಿಜ...
ಅಂದರೆ.... ಅಂದರೆ.... ಇದರರ್ಥ!
😟🤨🤨🤨😠😠😡😡
ನಿಧಾನಕ್ಕೆ ಹಿಂದೆ ತಿರುಗಿದರು ನಾರಾಯಣರು. ಗುಣಶೀಲ ಬೆವರತೊಡಗಿದ. ಕೆಲಸ ಕೆಡುತ್ತದೆ ಅಂತ ಅಂದಾಜಾಯ್ತು... ತಕ್ಷಣ ತಲೆ ಓಡಿಸಿದ....
ಛಂಗನೆ ಮುಂದೆ ನೆಗೆದು ನಾರಾಯಣರನ್ನು ಬಲವಾಗಿ ಆಲಂಗಿಸಿದ... ನಂತರ ಮಾತನಾಡತೊಡಗಿದ:
“ನಾರಾಯಣಣ್ಣ, ನಾರಾಯಣಣ್ಣ.... ಎನನ್ ಮಾಫ್ ಮಲ್ಪೊಡು ಈರ್. ಉಂದೆನ್ ಪೂರ ಮಲ್ದಿನಾಯೆ ಯಾನೇ... ಯಾನಾದೆ ಅವೆನ್ ಈರೆಡ ಪನೋಡಿತ್ತಿಂಡ್. ಆಂಡ ವಾ ಬಾಯಿಡ್ ಪನ್ಪುನೂ, ವಾ ಬಾಯಿಡ್ ಪನ್ಪುನು. ಎಂಕ ನಾಲಾಯಿಯೇ ಬೈಜ್ಜಿ. ವಿಷಯ ದಾದ ಪಂಡ... ಆನಿ ನಮ ಕುಡ್ಲಡ್ ಪೋದುಪ್ಪುನಗ, ಈಗನ ನೆತ್ತೆ ರ್ ಪರೀಕ್ಷೆಗೆ ಕೊರ್ದುತ್ತಿಂಡತ್ತೆ. ಅಯಿತ ರಿಸಲ್ಟ್ ಯಾನ್ ಕೋಡೆ ಕುಡ್ಲಗ್ ಪೋದುಪ್ಪುನಗ ತಿಕ್ಕ್ ದ್ ಡ್. ಅವೆಟ್ಟ್... ಅವೆಟ್ಟ್... ಈರೆಗೆ ಡಯಬಿಟಿಸ್ ಉಂಡುಂದ್ ವರದಿ ಬೈದ್ ಡ್ ನಾರಾಯಣಣ್ಣ.....”
ಜೋರಾಗಿ ಅಳುತ್ತಾ ನಾರಾಯಣರ ಪ್ರತಿಕ್ರಿಯೆ ನೋಡುತ್ತಾ, ಅವರು ಕರಗುತ್ತಿರುವುದನ್ನು ಗಮನಿಸಿ... ಮಾತು ಮುಂದುವರಿಸಿದ ಗುಣಶೀಲ...
😭😭😭😭😭😭
“ಅಂಚಾದ್, ಈರ್ ಕಂಡಾವಟ್ಟೆ ಚೀಪೆದ ದಾ...ಲ ತಿನಿಯೆರೆ ಬಲ್ಲಿಂದ್ ಡಾಕ್ಟ್ರು ಪಣ್ತೆರ್. ಈರೆನ ಜಾಲ್ ದ ತುಳುವೆ ಪೆಲಕ್ಕಾಯಿ ಕಂಡಾವಟ್ಟೆ ಚೀಪೆ. ಅವು ಪಂರ್ದಿ ಬೊಕ್ಕ ಈರ್ ತಿನಾಂದೆ ಕುಲ್ಲಯರ್ ಎಂಕ್ ಗೊತ್ತು... ಅಂಚಾದ್... ಅಂಚಾದ್ ಯಾನೇ... ಎನ್ನ ಕೈಯ್ಯಾರೆ... ಎನ್ನ ಕೈಯ್ಯಾರೆ.. ಮುರಿನಿ ಈರ್ ಕುಡ್ಲೊಗ್ ಪೋದುಪ್ಪುನಗ ಅವನೆ ಕಡ್ತ್ ದ್ ಮಣ್ಣದ್ ಅಡಿಟ್ಟು ಕಂವುತ್ತು ಬುಡಿಯೇ ನಾರಾಯಣಣ್ಣ, ಕಂವುತ್ತು ಬುಡಿಯೇ... ಬೋಡಾಂಡ ಎನ್ನ ಪಾಪಿಷ್ಠ ಕೈ ಕಡ್ಪುಲೆ... ಕಡ್ಬುಲೆ... ಆಂಡ ಈ ಪಂರ್ದ್ ಪೆಲಕ್ಕಾಯಿ ತಿಂದ್ ದ್ ಆರೋಗ್ಯ ಹಾಲ್ ಮಲ್ಪೋನುನ ಎನಡ್ದ್ ತೂಯೆರ ಆವಂದ್ ನಾರಾಯಣಣ್ಣ.....”
😥😥😥😥😥
ಏನು ನಡೀತಾ ಇದೆ ಅಂತಲೇ ನಾರಾಯಣರಿಗೆ ಅರ್ಥ ಆಗಲಿಲ್ಲ... ಗುಣಶೀಲ ಮಾತು ಮುಗಿಸಿದಾಗ ಅವರ ಮನಸ್ಸು ಆರ್ದ್ರವಾಯಿತು.. ಅವರ ಕಣ್ಣುಗಳಿಂದ ನೀರು ಇಳಿಯತೊಡಗಿತು... ಅಲ್ಲಿ ಸೇರಿದ್ದ ಎಲ್ಲರ ಕಣ್ಣು ಮಂಜಾಯಿತು. ಸ್ನೇಹಿತರೆಂದರೆ ಹೀಗಿರಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡರು. ನಾರಾಯಣರ ಜೊತೆ ಅಷ್ಟು ಸಲುಗೆಯಿಂದ ಮಾತನಾಡಲು ಸಾಧ್ಯವಿರುವುದು ಗುಣಶೀಲನಿಗೆ ಮಾತ್ರ....
ಆದರೆ ಸಚಿನ್ ಮಾತ್ರ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದ “ಎಲ್ಲಾ ಮಗಾ, ಈ ಎಂಚಿನ ಬಗುಲೊಂದುಲ್ಲಾ ಪಂಡ್ದೇ ಗೊತ್ತಾಪುಜ್ಜಿ, ಸತ್ಯನ, ಸುಳ್ಳ ಒಂಜಿಲಾ ಅರ್ಥ ಆಪುಜಿ, ಯಾನ್ ಮಾತ್ರ ಬದುಕ್ಯೆ” ಅಂತ!
😢😢😢😢😢
ನಾರಾಯಣರು ಗುಣಶೀಲನ ಮೈದಡವಿ ಮಾತನಾಡತೊಡಗಿದರು....
"ಗುಣ, ಇತ್ತದ ಕಾಲೊಡು ನಮ ಪೆದ್ದಿನ ಜೋಕುಲೇ ನಮ್ಮ ಆರೋಗ್ಯದ ಬಗ್ಗೆ ಗೇನ ದೆತ್ತೊನುಜ್ಜೆರ್ ಮಗಾ... ನಿಕ್ಕೊಂದು ಎನಡ ಏತ್ ಮೋಕೆ. ಎನ್ನ ಆರೋಗ್ಯ ಆಲಾವರೆ ಬಲ್ಲಿ ಪಣ್ಪಿನ ಕಾರಣೊಗು ಎನ್ನ ಮೋಕೆದ ಪೆಲಕ್ಕಾಯಿನ್ ಕೊಯ್ದ್ ಕಂವುತ್ತನ... ಬೊಕ್ಕ ಎಂಕ್ ಬೇಜಾರಾವ್ ಪಂಡ್ದ್ ವಿಸಯೊ ತೆಂಗಾದ್ ದೀಯನ... ಮಲ್ಲೆಜ್ಜಿ... ಒಂಜಿ ಎಡ್ಡೆಪ್ಪುಗು ಬೋಡಾದ್ ಕಳ್ ಪಂಡತ್ತ, ಅವು ತಪ್ಪತ್ತ್.. ದೇವೆರ್ ಎನ್ನ ಆಯುಷ್ಯನ್ ನಿಕ್ಕೇ ಕೊರಾಡ್. ಇನಿಡ್ದ್ ಈ ಎನ್ನ ಇಲ್ಲದಾಯೆನ ಲೆಕ್ಕ... ಯಾನ್ ಎಲ್ಲೆನೇ ವಕೀಲರಾಡೆ ಪೋದ್ ಆಸ್ತಿ ಪಾಲಾಯಿನೈನ್ ಕುಡ ತಿದ್ದುಪಡಿ ಮಲ್ಪಾದ್ ನಾಲ್ ಪಾಲ್ ಮಲ್ಪುವೆ, ಮಿತ್ತದ ಬಿತ್ತಲ್ದ ಬರಿಕ್ಕೆ ಪೆಲಕ್ಕಾಯಿ ತೋಟನ್ ನಿನ್ನ ಪುದರ್ ಗೇ ಬರೆಪ್ಪಾವೆ... ಎಂಕ್ ಒಂತೆ ವಿಶ್ರಾಂತಿ ಬೋಡು. ಎನನ್ ಎನ್ನಾತೆಗೆ ಬುಡ್ಲೆ... ಮಾತೆರ್ಲ... ದಿನೇಶೆರೇ... ಯಾನ್ ಗಡಿಬಿಡಿ ಮಲ್ತ್ ದ್ ಈರೆನ್ ಕುಡ್ಲಡ್ ಲೆಪ್ಪಾಯೆ, ಮಾಫ್ ಮಲ್ಪುಲೆ..”
ವಿನೀತರಾಗಿ ಹೇಳಿದ ನಾರಾಯಣರು ತಮ್ಮ ಮನೆಯತ್ತ ತೆರಳಿದರು...
🚶♂️🚶♂️🚶♂️🚶♂️🚶♂️
ಅಲ್ಲಿ ನಡೆದದ್ದು ಅರಗಿಸಿಕೊಳ್ಳಲಾಗದೆ, ಎಲ್ಲರೂ ಸ್ತಂಭೀಭೂತರಾದರು.... ನಾರಾಯಣರಿಗೆ ನಿಜವಾಗಿ ಡಯಾಬಿಟಿಸ್ ಇದೆಯ, ಇಲ್ಲವಾ, ಸತ್ಯವೋ, ಸುಳ್ಳೋ ಎಂಬುದು ಗುಣಶೀಲನಿಗೇ ಗೊತ್ತು...
..........
ಅದಾಗಿ ಎರಡು ದಿನದ ಬಳಿಕ ನಾರಾಯಣರು ಅಚಿನ್ ನನ್ನುಕರೆಸಿ ತಾವು ಕಷ್ಟಪಟ್ಟು ಹಲಸಿನ ತೋಟ ಕಟ್ಟಿದ ಕಥೆಯನ್ನು ತಾವಾಗಿ ಹೇಳುತ್ತಾ ಹೋದರು. ಅದು ಅವನ ಅಧ್ಯಯನಕ್ಕೆ ಸಾಕಷ್ಟು ಪ್ರಯೋಜನ ನೀಡಿತು..
🍐🍐🍐🍐🍐
“ನೋಡಪ್ಪ, ನನ್ನ ತಂದೆ ಪಿತ್ರಾರ್ಜಿತವಾಗಿ ನನಗೆ ಕೊಟ್ಟದ್ದು ಕೇವಲ ಒಂದು ಎಕರೆ ಜಾಗ. ಈ ಸಮುದ್ರದ ತಟದಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ ಅಂತ ಜನ ಹೇಳ್ತಾ ಇದ್ರು. ಆದರೆ, ನಾನು ಛಲಗಾರ. ಐದು ಎಕರೆ ಜಾಗ ಖರೀದಿ ಮಾಡಿದೆ. ಬೋಳು ಗುಡ್ಡವನ್ನು ತಟ್ಟುಗಳನ್ನಾಗಿ ಮಾಡಿದೆ. ಅವರಿವರಿಂದ ಕಾಡಿ ಬೇಡಿ ಹಲಸಿನ ಗಿಡಗಳನ್ನು ತಂದು ನೆಟ್ಟೆ. ಆಗ ಇಲ್ಲಿ ಬೋರ್ವೆಲ್ ಕೂಡಾ ಇರಲಿಲ್ಲ. ದೂರದಿಂದ ನೀರು ಹೊತ್ತು ತರಬೇಕು. ಈಗ ಮುಂಬೈಯಲ್ಲಿ ನನ್ನ ಉತ್ಪನ್ನಗಳ ಮಾರಾಟದಲ್ಲಿ ನೆರವಾಗುತ್ತಿರುವ ಭವ್ಯಶ್ರೀ ಇದ್ದಾರಲ್ಲ, ಪಾಪ ಒಳ್ಳೆ ಹೆಣ್ಣುಮಗಳು.. ತನ್ನ ಮನೆ ಪಕ್ಕದ ತೋಡಿಗೆ ಇಳಿದು ಅಲ್ಲಿಂದ ಬಕೆಟ್ಟಿನಲ್ಲಿ ನೀರು ತಂದು ದಿನಾ ಗಿಡಗಳಿಗೆ ಹಾಕುತ್ತಿದ್ದಳು. ಮತ್ತೆ, ವ್ಯಾಯಾಮ ಶಾಲೆಗೆ ಬರುತ್ತಿದ್ದ ಜಗನ್ನಾಥ, ಈಗ ಅರಬ್ ದೇಶದಲ್ಲಿರುವ ಫಮ್ಮರ್ ಉರೂಕ್, ರಬ್ದುಲ್ ಅಶೀದ್, ಪವಮಾನ, ವಿನಿತಾ ಶೆಟ್ಟಿ, ದಯಕರ ನಾಯಕ್, ಈಗ ಹೊಲಿಗೆ ಮಿಶನ್ ಉದ್ಯಮ ನಡೆಸುತ್ತಿರುವ ತೊಕ್ಕೊಟ್ಟಿನ ನಿಶಾ ಇವರೆಲ್ಲ ನನಗೆ ಗಿಡಗಳನ್ನು ಸಾಕಲು ದಿನಾ ಬಂದು ನೆರವಾಗುತ್ತಿದ್ದರು. ಇದೇ ಕಾರಣಕ್ಕೆ ಇವತ್ತು ಇವರೆಲ್ಲ ನನ್ನ ಉದ್ಯಮದಲ್ಲಿ ಪಾಲುದಾರರಾಗಿದ್ದಾರೆ.
ಅವತ್ತು ಪಟ್ಟ ಕಷ್ಟಕ್ಕೆ ಇಂದು ಬೆಲೆ ಸಿಕ್ಕಿದೆ, ಆದರೆ, ಜನರಿಗೆ ಹಲಸಿನ ಬೆಲೆ ಗೊತ್ತಿಲ್ಲವಪ್ಪ. ಕೊಳೆತು ಬಿದ್ದರೂ ಜನ ಕ್ಯಾರೇ ಮಾಡುವುದಿಲ್ಲ. ಒಳ್ಳೆ ಬೆಲೆ ಕೊಟ್ಟು ಸಿಗುವುದಿಲ್ಲ. ಬೆಳೆದವನಿಗೆ ತುಂಬ ಕಷ್ಟ ಇದನ್ನು ನಿರ್ವಹಣೆ ಮಾಡಲು. ಆದರೂ ನಾನು ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಮಾಹಿತಿ ಪಡೆದೆ. ತರಬೇತಿ ಪಡೆದು ಹಲಸಿನ ತಿಂಡಿಗಳನ್ನುತಯಾರಿ ಮಾಡಿ ಹಂತಕ್ಕೆ ತಲುಪಿದ್ದೇನೆ. ನನ್ನ ಮಕ್ಕಳಿಗೆ ಇದರಮೌಲ್ಯ ಎಷ್ಟು ಗೊತ್ತಿದೆಯೋ ಗೊತ್ತಿಲ್ಲ. ಕಷ್ಟಪಟ್ಟು ಬೆಳೆಸಿದ ಹಲಸನ್ನು ಯಾರೂ ಕದಿಯಬಾರದು ಅಂತ ನಾನು ಮರದಲ್ಲಿ ಹಾಕಿಸಿದ ಬೋರ್ಡನ್ನು ಆ ದುಷ್ಟ ಪತ್ರಕರ್ತ ಬರೆದು ನನ್ನನ್ನು ಹಾಸ್ಯದ ವಸ್ತುವಾಗಿಸಿದ. ತುಂಬ ಬೇಸರವಾಗುತ್ತಿದೆ, ಏನು ಮಾಡಲಿ. ಮುಂದೆ 21ನೇ ಶತಮಾನ ಬರಲಿದೆ, ಆಗ ಹಲಸಿಗೆ ಒಳ್ಳೆ ಮರ್ಯಾದೆ ಸಿಗಲಿದೆ, ನ್ಯಾಚುರಲ್ ಐಸ್ ಕ್ರೀಂ, ಹಲಸಿನ ಜಾಮಂ ಮತ್ತಿತರ ಐಟಂಗಳ ಅನ್ವೇಷಣೆ ಆಗಲಿದೆ ಅಂತ ನನ್ನ ಒಳಮನಸ್ಸು ಹೇಳುತ್ತಿದೆ.... ” ತಮ್ಮ ತೋಟದಲ್ಲಿ ನಡೆಯುತ್ತಾ ಹೇಳುತ್ತಿದ್ದ ನಾರಾಯಣರು ನಿಧಾನಕ್ಕೆ ಅಲ್ಲಿಯೇ ಕುಸಿದು ಕುಳಿತರು.... ಅಚಿನ್ ಗಾಬರಿಯಿಂದ ಅವರ ಕೈ ಹಿಡಿದುಕೊಂಡ....
.........................
ಗುಣಶೀಲನ ಕೈಯ್ಯಿಂದ ನಾರಾಯಣರು ಮೈಕ್ ಕಿತ್ತುಕೊಳ್ಳಲು ಕಾರಣವೇನು ?
ತೋಟದಲ್ಲಿ ನಡೆಯುತ್ತಿದ್ದಾಗ ನಿಧಾನಕ್ಕೆ ಕುಸಿದ ನಾರಾಯಣರು ಅಲ್ಲಿಯೇ ಕುಳಿತಾಗ ಅಚಿನ್ ಗಾಬರಿಯಿಂದ ಅವರ ಕೈ ಹಿಡಿದುಕೊಂಡ....ಅವನಿಗೆ ಆತಂಕವಾಯಿತು. ಹಾಗೇನು ಇಲ್ಲಪ್ಪ, ತುಸು ಸುಸ್ತು ಅಷ್ಟೆ, ಇನ್ನು ನಡೆಯುವುದು ಬೇಡ, ಮನೆಗೆ ಹೋಗುವ ಎಂದು ವಾಪಸ್ ಅಚಿನ್ ಜೊತೆ ಮನೆಗೆ ಬಂದರು ನಾರಾಯಣರು.
ನಾರಾಯಣರಿಗೆ ಹುಶಾರಿಲ್ವಂತೆ ಅತ ಗುಣಶೀಲನಿಗೆ ಕರೆ ಹೋಯಿತು. ಆತಂಕದಿಂದಲೇ ಬಂದ ಗುಣಶೀಲ, ನಾರಾಯಣರೇ, ನೀವೇನು ಗಾಬರಿ ಆಗಬೇಡಿ. ಸ್ವಲ್ಪ ರೆಸ್ಟ್ ತಗೊಳ್ಳಿ ಅಂದವನೇ ಅವರ ಫ್ಯಾಮಿಲಿ ಡಾಕ್ಟ್ರು, ಡಾ.ಕರುಣಾಕರ ಹೆಬ್ಬಾರ್ ಅವರಿಗೆ ಕರೆ ಮಾಡಿದ. ಡಾ.ಹೆಬ್ಬಾರ್ ಬಂದವರೇ ನಾರಾಯಣರ ಕೂಲಂಕಷ ತಪಾಸಣೆ ಮಾಡಿದರು...
ಜೋರಾಗಿ ನಕ್ಕು ಹೇಳಿದರು, "ನೀವೇನು ಹೆದರಬೇಡಿ ಅಣ್ಣ. ನೀಮಗೆ ಶುಗರ್, ಬಿ.ಪಿ. ಎಂತದೂ ಇಲ್ಲ, ಸ್ವಲ್ಪ ವೀಕ್ನೇಸ್ ಬಂದಿದೆ. ಅಷ್ಟೇ. ಸಕ್ಕರೆ ಅಂಶ ಕಡಿಮೆಯಾಗಿದೆ. ಯಾಕೆ ನೀವು ಸಿಹಿ ಅಂಶ ತಿನ್ನುವುದು ಕಡಿಮೆ ಮಾಡಿದ್ದೀರ ಹೇಗೆ...?
ಪುನಃ ಮಂಡೆ ಶರಬತ್ತಾಯಿತು, ನಾರಾಯಣರಿಗೆ. ಮಂಚದ ಮೇಲೆ ನಿಂತಿದ್ದ ಗುಣಶೀಲನನ್ನು ದುರುಗುಟ್ಟಿ ನೋಡಿದರು. ಗುಣಶೀಲನಿಗೆ ಇದು ಅನಿರೀಕ್ಷಿತ. ಅವತ್ತು ಅಚಿನ್ ನ್ನು ರಕ್ಷಿಸಲು ಸಮಯಕ್ಕಾಗುವಾಗ ಒಂದು ಬಾಯಿಗೆ ಬಂದ ಸುಳ್ಳು ಹೇಳಿದ್ದ. ಈಗ ಅದನ್ನು ಮುಂದುವರಿಸದಿದ್ದರೆ, ಮತ್ತೆ ಸಮಸ್ಯೆ ಆಗುತ್ತದೆ ಅಂತ ಅವನಿಗೆ ಅರ್ಥ ಆಯಿತು...
ಹೆಹೆಹೆ... ಹಿಹಿ, ಡಾಕ್ಟ್ರೇ ಅದೆಂಥದ್ದು ಇಲ್ಲ, ಎರಡು ವಾರಗಳ ಹಿಂದೆ ರಕ್ತದಾನ ಶಿಬಿರದಲ್ಲಿ ನಾರಾಯಣರು ರಕ್ತದಾನ ಮಾಡಿದ್ದರು. ಅದರ ಆಯೋಜಕರು ನನ್ನನ್ನು ಕರೆದು ಅವರಿಗೆ ಸ್ವಲ್ಪ ಶುಗರ್ ಇದೆ ಅಂತ ಹೇಳಿದ್ದರು. ನಾರಾಯಣಣ್ಣನಿಗೆ ಬೇಜರಾದೀತು ಅಂತ ಆರಂಭದಲ್ಲಿ ನಾನು ಅವರಿಗೆ ಹೇಳಲಿಲ್ಲ, ನಂತರ ಹೇಳಲೇಬೇಕಾದ ಸಂದರ್ಭ ಒದಗಿತು. ಹೇಳಿದೆ. ಇದರಿಂದ ಗಾಬರಿಯಾದ ನಾರಾಯಣಣ್ಣ ಕಂಪ್ಲೀಟ್ ಸಿಹಿ ತಿನ್ನೋದೆ ಬಿಟ್ಟಿದ್ದಾರೆ... ಎಂತ ಮಾಡುವುದು ಈ ಈಗ ಸಮಸ್ಯೆ ಆಗ್ತದ... ನನಗೆ ಡೌಟು ಶಿಬಿರದಲ್ಲಿ ಅವರು ನನಗೆ ಕಳಿಸಿದ ಬ್ಲಡ್ ರಿಪೋರ್ಟ್ ನಾರಾಯಣರದ್ದು ಆಗಿರ್ಲಿಕಿಲ್ಲ, ಶಿಬಿರದ ಆಯೋಜಕ ಕರಣ್ ಕುಮಾರ್ ಸಿಕ್ಕಲಿ, ಮಾಡ್ತೇನೆ ಅವನಿಗೆ ಅಂತ... ಹೇಳಿದ..
ನಾರಾಯಣರಿಗೆ ಯಾವುದು ಸತ್ಯವೋ, ಯಾವುದು ಸುಳ್ಳೋ ಒಂದೂ ಅರ್ಥ ಆಗಲಿಲ್ಲ.... ಇದನ್ನು ನಂಬಿದ ಡಾ.ಹೆಬ್ಬಾರ್ ಮಾತ್ರ. ಇಟ್ಸ್ ಓಕೆ... ಗಾಬರಿ ಏನಿಲ್ಲ. ಸಾಕಷ್ಟು ಹಲಸಿನ ಹಣ್ಣು ತಿನ್ನಿ, ಶುಗರ್ ಒಂದು ಲೆವೆಲಿಗೆ ಬರಲಿ. ಎಲ್ಲ ಸರಿ ಆಗ್ತದೆ. ಮತ್ತೆ ಹೋಗುವಾಗ ನನ್ನ ಕಾರಿಗೆ ನಾಲ್ಕು ಹಲಸಿನ ಹಣ್ಣು ತುಂಬಿಸಲು ಮರೆಯಬೇಡಿ...ಹೆಹ್ಹೆಹ್ಹೆ ಅಂತ ಹೇಳಿದರು.
ಹಾಗಾದರೆ ಪಥ್ಯ ಏನೂ ಬೇಡವೇ...? ಅಚಿನ್ ಕೇಳಿದ.
'ಹಾಹಾ ಹೇಳಲು ಬಾಕಿ ಆಯ್ತು ನೋಡಿ.. ಒಂದು ವಾರ ಗೋಳಿಬಜೆ ಮತ್ತು ಮಸಾಲೆದೋಸೆ ಎರಡನ್ನೂ ತಿನ್ನಬೇಡಿ..." ಅಂತ ಹೇಳಿದರು ಡಾ.ಹೆಬ್ಬಾರ್...
🍬🍬🍬🍬🍬
ಇದಾಗಿ ಒಂದು ವಾರದಲ್ಲಿ ನಾರಾಯಣರು ಚೇತರಿಸಿದರು. ಈ ನಡುವೆ ಅಚಿನ್ ತನ್ನ ಡಾಕ್ಟರೇಟಿ ಥಿಸೀಸ್ ಮುಗಿಸಿ ಡಾ.ವಿಭಾ ಪೂಜಾಂಗೆ ಸಲ್ಲಿಸಿ, ಅವಳು ಅದನ್ನು ವಿಲೇವಾರಿ ಮಾಡಿ, ಆತನಿಗೆ ಡಾಕ್ಟರೇಟ್ ಪದವಿ ಕೂಡಾ ಘೋಷಣೆ ಆಗಿತ್ತು. ಈ ಹಿನ್ನೆಲೆಯಲ್ಲಿ ಉಳ್ಳಾಲದ ಗುಣಶೀಲನ ಮನೆಯಲ್ಲಿ ಸಣ್ಣದೊಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಇದಕ್ಕೆ ನಾರಾಯಣರ ಆಪ್ತರನ್ನು ಕರೆಯಲಾಗಿತ್ತು... ನಾರಾಯಣರಿಗೆ ಹಾಗೂ ವಿಭಾ ಪೂಂಜಾಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು....
ಸರಳ ಸಜ್ಜನರಾದ ನಾರಾಯಣರು, ಯಾವುದೇ ಕಾರಣಕ್ಕೂ ತನಗೆ ಸನ್ಮಾನ ಬೇಡ ಎಂದು ಹಠ ಹಿಡಿದರು. ಆದರೆ ಅವರು ಆತ್ಮೀಯರು ಕೇಳಲೇ ಇಲ್ಲ. ಸಮಾರಂಭಕ್ಕೆ ಅರಬ್ ದೇಶ, ಮುಂಬೈ ಹಾಗೂ ಕೇರಳದಿಂದಲೂ ಅವರ ಮಿತ್ರರು ಬಂದಿದ್ದರು..
🧓🧓🧓🧓🧓🧓
ಗುಣಶೀಲನ ಮನೆ ಅಂಗಳದಲ್ಲಿ ಶಾಮೀಯಾನ ಹಾಕಿ ಸಮಾರಂಭ ಏರ್ಪಡಿಸಲಾಗಿತ್ತು. ಬಂದವರಿಗೆ ಹಲಸಿನ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಚಾಕಲೇಟ್ ಹಾಗೂ ಹಲಸಿನ ಮೇಣದ ಚ್ಯೂಯಿಂಗ್ ಗಂ ನೀಡಲಾಗಿತ್ತು.
ನಂತರ ರಾತ್ರಿ ಭೋಜನಕ್ಕೂ ಹಲಸಿನ ಕಾಯಿ ಪಲ್ಯ, ಸಾಂಬಾರ್, ಹಲಸಿ ಹಣ್ಣಿನ ಪಾಯಸ, ಹಲಸಿನ ಸಿಪ್ಪೆಯ ಚಟ್ನಿ, ಹಲಸಿನ ಬೀಜದ ಉಪ್ಪಿನಕಾಯಿ... ಸಹಿತ ವಿವಿಧ ಖಾದ್ಯಗಳನ್ನು ಗಡಿನಾಡಿನ ಕನ್ನಡತಿ ಭೀಮಾವತಿ ನೇತೃತ್ವದಲ್ಲಿ ಸಿದ್ದಪಡಿಸಲಾಗಿತ್ತು....!
……..
ಜೀವನದಲ್ಲಿ ಸನ್ಮಾನವನ್ನೇ ಕಾಣದಿದ್ದ ಹಾಗೂ ವೇದಿಕೆ ಸಮಾರಂಭಗಳನ್ನು ಇಷ್ಟಪಡದ ಮುಜುಗುರದ ಮನುಷ್ಯ ನಾರಾಯಣರಿಗೆ ಇದೆಲ್ಲ ಇರುಸು ಮುರುಸು ಮಾಡುತ್ತಿತ್ತು. ಚಡಪಡಿಸುತ್ತಾ ವೇದಿಕೆಯಲ್ಲಿ ಕುಳಿತರು...
ಆರಂಭದಲ್ಲಿ ಬೇಡ ಬೇಡ ಎಂದರೂ ಕೇಳದೆ ಜಗನ್ನಾಥ ಪ್ರಾರ್ಥನೆ ಹಾಡು ಹಾಡಲು ಹೊರಟ. ಕಾರ್ಯಕ್ರಮ ನಿರೂಪಿಸುತ್ತಿದ್ದ ಗುಣಶೀಲನಿಗೆ ಗಾಬರಿಯಾಯಿತು. "ದಾಯೆಂಬೇ ಅಧಿಕಪ್ರಸಂಗ ಮಲ್ಪುವ. ದುಂಬೇ ನಾರಾಯಣೆರ್ ಬೆಚ್ಚೊಡುಲ್ಲೇರ್. ನಿಕ್ಕ್ ನಯಾ ಪೈಸೆ ಪದ್ಯ ಪಣಿಯೆರೆ ಬರ್ಪುಜಿ, ದಾಯೆ ನಾಚಿಕೆ ಕೆಟ್ಟುವ ಸ್ಟೇಜಿಡ್, ನಿನ್ನ ರಾಗ ಕೇಣಿಯೆರೆ ಆವಂದೆ ಜನಕುಲು ಪೋಂಡ ಯಾನ್ ಜವಾಬ್ದಾರಿ ಅತ್ತ್..." ಅಂತ ಮೊದಲೇ ಎಚ್ಚರಿಕೆ ನೀಡಿದ್ದ ಗುಣಶೀಲ....
ಅತ್ಯುತ್ಸಾಹಿ ಜಗನ್ನಾಥ ತಾನೇ ಪ್ರಾರ್ಥನೆ ಮಾಡುವುದಾಗಿ ಹಠ ಹಿಡಿದ.. ಗುಣಶೀಲ ಅದನ್ನು ಅನೌನ್ಸ್ ಮಾಡಿದ..
“ಏನ್ಸಾರ್... ಈಗ ಜಗನ್ನಾಥ ಪ್ರಾರ್ಥನೆ ಮಾಡ್ತಾನೆ.. ಓಕೆಯ ಸಾರ್... ಹೇಳಿ ಸಾರ್...”
ಜಗನ್ನಾಥನ ಹಾಡುಗಾರಿಕೆ ಸಾಮರ್ಥ್ಯ ತಿಳಿಯದ ಸಭಾಸದರು ಓಕೇ.. ಅಂತ ಕಿರುಚಿದರು.
ಜಗನ್ನಾಥ ಹೋಗಿ ನಾರಾಯಣರ ಕಾಲು ಮುಟ್ಟಿ ಆಶೀರ್ವಾದ ಪಡೆದು, ಗಂಟಲು ಸರಿ ಮಾಡಿ ಶುರು ಮಾಡಿದ...
(ರಾಗ-ಬಿಸಿಲಾದರೇನು... ಮಳೆಯಾದರೇನು, ಚಿತ್ರ-ಬೆಂಕಿಯ ಬಲೆ)
ಎಳತಾದರೇನು, ಹಣ್ಣಾದರೇನು...
ಬಿಡಲಾರೇ ಇನ್ನು, ನಾನಿಲ್ಲವೇನೂ...
ಹಲಸು ನನ್ನ ಜೀವಾ... ಎಂದಿಗೂ...!
!! ರಿಪೀಟ್!!
ತುಳುವೇ, ಬರಿಕ್ಕೆಯಾದರೇನು
ಸೈಜು ಸಣ್ಣದಾದರೇನು...
ಮೇಣ ಇಲ್ಲದಿದ್ದರೇನು,
ತೊಟ್ಟು ತುಂಡಾದರೇನು...
ಸಿಹಿಯಾದ ರುಚಿಯು,
ಬಾಯೊಳಗೆ ಬರಲು
ತಿನ್ನಲು ನಾನಿಲ್ಲವೇನು...?
ಅಂಜದೇ... ಅಳುಕದೇ...
ಹಲಸನು ಬಿಡಲಾರೆ ನಾನು...!
ಜಗನ್ನಾಥ ಇನ್ನೂ ಮುಂದುವರಿಸುವವನಿದ್ದ. ಅಷ್ಟರಲ್ಲಿ ಇಂತಹ ವಿಚಿತ್ರ ಹಾಡಿನಿಂದ ವಿಚಲಿತರಾದ ನಾರಾಯಣರು, ಕೈಸನ್ನೆ ಮಾಡಿದರು.. ಸಾಕು ನಿಲ್ಲಿಸಲಿ ಅಂತ. ಅದನ್ನು ಅರ್ಥ ಮಾಡಿಕೊಂಡು ನಿರೂಪಕ ಗುಣಶೀಲ.. ಮಧ್ಯದಲ್ಲೇ ಅನೌನ್ಸ್ ಮಾಡಿದ.. ಓಕೆ ಸ್ನೇಹಿತರೇ.. ಅದ್ಭುತವಾಗಿ ಹಾಡಿದ ಜಗನ್ನಾಥನಿಗೆ “ದೊಡ್ಡ ಚಪ್ಪಾಳೇ.....”
ಹಾಡು ನಿಂತ ಖುಷಿಯಲ್ಲಿ ಚಪ್ಪಾಳೆಯ ಜೊತೆಗೆ ಶಿಳ್ಳೆಯೂ ಸಿಕ್ಕಿತು...
....
ನಂತರ ಪ್ರಾಸ್ತಾವಿಕ ಭಾಷಣ ಮತ್ತು ಸ್ವಾಗತ ಒಬ್ಬರಿಗೇ ವಹಿಸಲಾಗಿತ್ತು... ಹಿಂದೊಮ್ಮೆ ನಾರಾಯಣರ ಬಗ್ಗೆ ಲೇಖನ ಬರೆದು ಅದರಿಂದ ಅವರಿಗೆ ಇರುಸು ಮುರಿಸು ಉಂಟಾಗಿದ್ದ ಪತ್ರಕರ್ತ ದುಷ್ಟಮೋಹನ ಅದನ್ನು ನಿರ್ವಹಿಸಬೇಕಾಗಿತ್ತು. ಆದರೆ... ಆದರೆ, ಕಾರ್ಯಕ್ರಮ ಮುಗಿದ ಬಳಿಕ ಅತನನ್ನು ತೋಟಕ್ಕೆ ಕರೆದುಕೊಂಡು ಹೋಗಿ ನಾರಾಯಣರ ಅಭಿಮಾನಿಗಳು ಹೊಡೆಯಲಿದ್ದಾರೆ ಎಂಬ ಅನಧಿಕೃತ ಮಾಹಿತಿ ಆತನಿಗೆ ಸಿಕ್ಕಿದ ಕಾರಣ ಹೆದರಿ, ಬರುತ್ತೇನೆ ಅಂತ ಹೇಳಿದವನೂ ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದ. ಸ್ವಾಗತ ಭಾಷಣಕ್ಕೆ ಯಾರೂ ತಯಾರಾಗಿರಲಿಲ್ಲ....
ಎಂತ ಮಾಡುವುದು ಅಂದ ಗುಣಶೀಲನಿಗೆ ಮಂಡೆಬಿಸಿಯಾಯಿತು. ಆಗ ಆತನ ಸಹಾಯಕ್ಕೆ ಬಂದವರು. ಮುಂಬೈಯಿಂದ ಬಂದ ನಾರಾಯಣರ ಸ್ನೇಹಿತ ದಯಕರ ನಾಯಕ್. ಆದರೆ ಈ ದಯಕರ ನಾಯಕ್ ಸಮಸ್ಯೆ ಎಂದರೆ ಅವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ತುಳುವೂ ಅಷ್ಟಕ್ಕಷ್ಟೇ... ಇಂಗ್ಲಿಷ್ ಸರಿಯಾಗಿ ಬರುತ್ತಿತ್ತು. ಆದರೆ ನಾರಾಯಣರಿಗೆ ಇಂಗ್ಲಿಷ್ ನಯಾಪೈಸೆ ಅರ್ಥ ಆಗುತ್ತಿರಲಿಲ್ಲ. ಇತರರಿಗೂ ಅಷ್ಟೇ ಅರೆಬರೆ ಇಂಗ್ಲಿಷ್ ಬರ್ತಾ ಇತ್ತು ಅಷ್ಟೇ... ಆದರೂ ಅತ್ಯುತ್ಸಾಹದಿಂದ ಬಂದ ದಯಕರ್ ಅವರನ್ನು ನಿರಾಸೆಪಡಿಸಲು ಗುಣಶೀಲನಿಗೆ ಇಷ್ಟವಾಗಲಿಲ್ಲ... ದಯಕರ್ ಸ್ವಾಗತ ಭಾಷಣ ಮಾಡುತ್ತಾರೆ ಎಂದಾಗ ಅವರ ಭಾಷಾ ಜ್ಞಾನದ ಬಗ್ಗೆ ಆತಂಕವಿದ್ದ ನಾರಾಯಣರು ಅರೆ ಮನಸ್ಸಿನಿಂದಲೇ ಒಪ್ಪಿದ್ದರು....
ಸ್ನೇಹಿತರೇ.. ಈಗ ನಮ್ಮ ನಿಮ್ಮೆಲ್ಲರನ್ನೂ ಸ್ವಾಗತಿಸಲಿದ್ದಾರೆ. ಮುಂಬೈಯ ಖ್ಯಾತ ಉದ್ಯಮಿ, ನಮ್ಮ ಮಾಜಿ ಸಹಪಾಠಿ ದಯಕರ ನಾಯಕ್, ಅವರು, ದೊಡ್ಡ ಚಪ್ಪಾಳೆ ನೀಡಿ ಸಾರ್....... ಗುಣಶೀಲ ಅನೌನ್ಸ್ ಮಾಡಿದ...
ದಯಕರನ ಭಾಷಣ ಆರಂಭವಾಯಿತು..
“ಪೂರೆರೆಗ್ಲ ಸೊಲ್ಮಲು... ಬೊಕ್ಕ ಎಂಕ್ ಅಂಚ ವಂತೆ ವಂತೆ ತುಳು ಬರ್ಪುಡು... ಲೇಕಿನ್ ಪಾತೆರ್ರೆ ಬಂಗ ಆಪುಂಡು, ತೋಡಾ ತೋಡಾ ಪಾತೆರ್ಡ ನಿಕ್ಲೆಲೆಗ್ಲ ಬಂಗ ಆಪುಡಂತೆ ಅವೆನ್ ಧಿಮಾಕ್ ಗ್ ದೆತ್ತೊನ್ರ. ಅಂಚ ಅಮ್ಚಿ ಮರಾಠಿನ್ ಲಾ, ತುಳುನುಲಾ ಛೋಡ್ಕೇ ಕನ್ನಡೊಡೇ ಪಾತೇರ್ವೆ... ನಿಮ್ಮಗೆಲ್ಲ ನನ್ನ ಅಭಿವಾದನ್... ಇವತ್ತು ನಾವು ತುಂಬ ಸಂತೋಷದ ಸಂದ್ರಭದಲ್ಲಿ ಇದ್ದೇವೆ.... ನಮ್ಮ ಊರಿನ ಎಮ್ಮೆ... ನಮ್ಮ ಊರಿನ ಎಮ್ಮೆಯ ಬೆಳೆಗಾರ ನಾರಾಯಣ ಭಾಯ್ ಅವರು ತಮ್ಮ ತೋಟದಲ್ಲಿ ಹೊಲಸಾಗಿ ಬೆಳೆದ ಹಳಸಿದ ಹಣ್ಣನ್ನು....”
ದಯಕರರ ಮಾತು ಮುಂದುವರಿಯುತ್ತಿದ್ದಂತೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನಾಲ್ಕೈದು ಮಂದಿ ಹೋ... ಅಂತ ಕಿರುಚಿದರು... "ಎಂಚಿ ಸಾವುಯಾ...." ಅಂತ ರಾಗವಾಗಿ ಟೀಕೆ ಬಂತು...
ಇದು ತನ್ನನ್ನುಹೊಗಳಿದ್ದು ಅಂತ ಭಾವಿಸಿ ದಯಕರನ ಸ್ವಾಗತ ಭಾಷಣ ಮುಂದುವರಿಯಿತು..
“ಹೊಲಸಾಗಿ ಹಳಸಿದ ಹಣ್ಣನ್ನು ಬೆಳೆದ ಅಮ್ಚಿ ಪ್ರೈಡ್, ಅಮ್ಚಿ ಊರುದ, ಅಮ್ಚಿ ನೀರ್ ದ ನಾರಾಯಣ ಭಾಯ್ ಅವರನ್ನು ವೇದಿಕೆಗೆ ತಂದು ಹಾಕಿ ಅವರನ್ನು ಕೂತು ಕೊಲ್ಲಿಸಿದ್ದು ನಮಗೆ ಎಮ್ಮೆಯ ಸಂಗತಿ, ಇಂತಹ ಹಳಸಿದ ಹಣ್ಣನ್ನು ತಿನ್ನುದೇ ಅಮ್ಚೀ ಖೂಬ್ ಖೂಬ್.....”
ಕುರ್ಚಿಯಲ್ಲಿ ಚಡಪಡಿಸುತ್ತಿದ್ದ ನಾರಾಯಣರಿಗೆ ಸಿಟ್ಟು ಏರುತ್ತಿತ್ತು.. ಈ ಹುಚ್ಚರೆಲ್ಲ ಸೇರಿ ತನಗೆ ಸನ್ಮಾನ ಮಾಡುತ್ತಿದ್ದಾರ, ಅಥವಾ ತನ್ನ ಮರ್ಯಾದೆ ತೆಗೆಯುತ್ತಿದ್ದಾರ ಅಂತ ಅವರಿಗೆ ಅರ್ಥ ಆಗಲಿಲ್ಲ... ಅವರು ಗುಣಶೀಲನನ್ನುಕರೆದು ಸ್ವಾಗತ ಮಾಡಿದ್ದು ಸಾಕು ಅಂತ ಹೇಳಲು ಹೇಳಿದರು...
ಗುಣಶೀಲ ದಯಕರ್ ಎದುರು ಚೀಟಿ ಬರೆದಿಟ್ಟ ಸ್ವಾಗತ ಸಾಕು ನಿಲ್ಲಿಸಿ... ಅಂತ...
ದುರಂತ ಅಂದರೆ ಗುಣಶೀಲ ಬರೆದ ಕನ್ನಡದ ಚೀಟಿ ದಯಕರ್ ಗೆ ಸರಿಯಾಗಿ ಓದಲು ಬರುತ್ತಿರಲಿಲ್ಲ! ಸಮಯ ಆಗಿದೆ, ನಿಲ್ಲಿಸಿ ಅಂತ ಬರೆದ ಚೀಟಿಯನ್ನು, ಸಮಯ ಇದೆ ಮುಂದುವರಿಸಿ ಅಂತ ಓದಿದ ದಯಕರ ಮತ್ತು ಉಚ್ಛ ಸ್ಥಾಯಿಯಲ್ಲಿ ಹೇಳಲು ಆರಂಭಿಸಿದರು....
“ನಾರಾಯಣರು ಕಷ್ಟಪಟ್ಟು ಬೆಳೆಸಿದ ಹಳಸಿದ ಹಣ್ಣುಗಳನ್ನು ತಿಂದು ನಾವುಗಟ್ಟಮುಟ್ಟಾಗಿದ್ದೇವೆ. ಉನ್ಕೋ, ಔರ್ ಉನ್ಕೇ ಗಾಂವ್ ವಾಲೋಂಕೋ, ಹಾಗೂ ಇಷ್ಟೊಂದು ಎಮ್ಮೆಯ ಸಂಗತಿಯಿಂದ ಕುಳಿತ ಆಪ್ ಸಬೀಕೋ... ಔರ್... ”
ಇನ್ನುತಡೆಯಲಾಗದ ನಿಷ್ಠುರವಾದಿ ನಾರಾಯಣರು ಗುಣಶೀಲನ ಕೈಯ್ಯಿಂದ ಮೈಕ್ ಕಿತ್ತುಕೊಂಡು ಮುಂದೆ ದಯಕರನ ಹತ್ತಿರ ಬರತೊಡಗಿದರು....
-------------------------------
ಮೂರ್ಛೆ ಹೋದ ಅಚಿನ್ PART -08
ಮೈಕ್ ಹಿಡಿದು ದಯಕರ ನಾಯಕ್ ಬಳಿ ಬಂದ ನಾರಾಯಣರು ಹೇಳಿದರು... ನೋಡಪ್ಪ, ನಿಮಗೆಲ್ಲ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತ ನನಗೆ ಗೊತ್ತು, ಆದರೆ ಹಳಸಿದ ಹಣ್ಣು ಕೊಟ್ಟರು ಅಂತ ಮಾತ್ರ ಹೇಳಬೇಡ. ಅದು ಹಳಸಿದ ಹಣ್ಣಲ್ಲ, ಹಲಸಿನ ಹಣ್ಣು.... ಹೊಲಸಾಗಿ ಬೆಳೆದದ್ದಲ್ಲ, ಹುಲುಸಾಗಿ ಬೆಳದದ್ದು... ಇಷ್ಟು ಹೇಳುತ್ತಾ ಹೇಳುತ್ತಾ ನಾರಾಯಣರು ಕಂಗಾಲಾದರು.
ಕೊನೆಗೂ ಸರಿಯಾಗಿ ಮಾಲಾರ್ಪಣೆ, ಅಭಿನಂದನಾ ಕಾರ್ಯಕ್ರಮ ಅಷ್ಟು ಸರಿಯಾಗಿ ಬಾರದೆ ಇದ್ದರಿಂದ ನಾರಾಯಣ್ ರು ವೇದಿಕೆಯಲ್ಲೇ ಕುಸಿದು ಬೀಳುವ ಪರಿಸ್ಥಿತಿ ಎದುರಾಯಿತು. ಕೂಡಲೇ ಅವರನ್ನು ಡಾ.ಕರುಣಾಕರ್ ಹೆಬ್ಬಾರ್ ಪರೀಕ್ಷಿಸಿದಾಗ ಇವರಿಗೆ ವಿಶ್ರಾಂತಿ ಯ ಅವಶ್ಯಕತೆ ಇದೆ ಎಂದು ಸೀದಾ ವೇದಿಕಿಯಿಂದಲೇ ಮನೆಗೆ ಎತ್ತಿನ ಗಾಡಿಯಲ್ಲಿ ಕರ್ಕೊಂಡು ಹೋಗಬೇಕಾಯಿತು. ದೂರದಲ್ಲಿ ಇದನ್ನೆಲ್ಲ ನೋಡುತ್ತಿದ್ದ ಅಚಿನ್ ಗೆ ಒಂದು ಕಡೆ ಬಾರೀ ಖುಷಿ, ಯಾಕೆಂದರೆ ಖುಷಿಯಲ್ಲಿ ತಿಂದ ತುಲ್ವೆ ಸರಿಯಾಗಿ ಹೊಟ್ಟೆಯೊಳಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಇದ್ದದ್ದು.
ಅವರನ್ನು ಮನೆಗೆ ಎತ್ತಿನ ಗಾಡಿಯಲ್ಲಿ ಕರಕೊಂಡು ಮನೆ ಮಂಚದಲ್ಲಿ ಮಲಗಿಸಿ ಡಾ.ಕರುಣಾಕರ್ ಹೆಬ್ಬಾರ್ ಪರೀಕ್ಷೆ ಮಾಡಿದರು. ಪರೀಕ್ಷಿಸಿದಾಗ ರಕ್ತದೊತ್ತಡ ತುಂಬಾ ಏರಿಕೆ ಕಂಡಿತ್ತು. ಹೃದಯಾಘಾತ ಆಗಬಹುದೇನೋ ಎಂದು ಹೆದರಿದ ಕರುಣಾಕರ್ ಗುಣಶೀಲನಿಗೆ ಹೇಳಿದ್ರು, ಎಲ್ಲಿಯಾದರೂ ವಜ್ರಾಕಾಯ ಗಿಡದ ಎಲೆ ಹುಡುಕಿ ತನ್ನಿ, ಇದರ ರಸ ಕುಡಿಸಿದರೆ ಮುಂದೆ ಆಗುವ ಹೃದಯ ಸಂಬಂಧಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಮುಂದೆ ಹಾಕಬಹುದು ಅಂತ.
.....
ನಂತರ ನಡೆದದ್ದೆಲ್ಲ ಫಾಸ್ಟ್ ಫಾರ್ವರ್ಡ್ ಥರ ನಾಟಕೀಯ ಬೆಳವಣಿಗೆಗಳು....
ಹೆಬ್ಬಾರರ ಮಾತನ್ನು ಮನೆಯೊಳಗಿನಿಂದ ಕೇಳಿಸಿದ ನಾರಾಯಣ್ ರ ಪತ್ನಿ ಒಂದೇ ಸಮನೆ ಕಿರುಚಾಡತೊಡಗಿದರು. ಸಭೆಯಿಂದ ಮನೆಗೆ ನಾರಾಯಣ್ ರನ್ನು ಕರೆತರುವ ವೇಳೆ ಆ ಸಭೆಯಲ್ಲಿದ್ದ 60ಕ್ಕಿಂತಲೂ ಹೆಚ್ಚು ಮಂದಿ ನಾರಾಯಣ್ ರ ಮನೆಯನ್ನು ಮೊದಲೇ ತುಂಬಿಕೊಂಡದ್ದರಿಂದ ಒಳಗೆ ನಾರಾಯಣ್ ರ ಪತ್ನಿಯ ಕಿರುಚಾಟ ಸಹಾ ಕೇಳಿದ್ದರಿಂದ ಅಲ್ಲಿ ಹೊರಗಡೆ ನಿಂತ ಜನರು ನಾರಾಯಣ್ ರು ಹೋಗಿಯೇ ಬಿಟ್ರ ಅಂತ ಮಾತನಾಡತೊಡಗಿದರು.
ನಾರಾಯಣ್ ರ ಪತ್ನಿಯ ಬಳಿ ಬಂದು, ಏನೂ ಹೆದರಬೇಡಿ, ಏನೂ ಆಗಲ್ಲ ಎಂದು ಸಮಾಧಾನ ಪಡಿಸಿದ ದಯಕರ ನಾಯಕ್, ನಾರಾಯಣ ಮನೆಯಲ್ಲೇ ತನ್ನ ಸ್ವಾಗತ ಭಾಷಶಣವನ್ನು ಇಂಗ್ಲಿಷಿನಲ್ಲೇ ಮುಂದುವರಿಸತೊಡಗಿದರು. !
ಈ ಇಂಗ್ಲಿಷ್ ವಾಕ್ಯ ಕೇಳಿದ ನಾರಾಯಣ್ ರ ಪತ್ನಿ ಇನ್ನೂ ಜಾಸ್ತಿ ಕೂಗಲು ಶುರು ಮಾಡಿದ್ರು, ಪತ್ನಿಯ ಪ್ರಕಾರ, ದಯಕರರ ಇಂಗ್ಲಿಷ್ ಮಾತುಗಳು ನಾರಾಯಣರಿಗೆ ನಕಾರಾತ್ಮಕ ರೀತಿಯಲ್ಲಿ ಅರ್ಥವಾಗಿ ಅವರ ಉಸಿರೇ ನಿಂತು ಹೋಯಿತು ಎಂಬರ್ಥದಲ್ಲಿ ಕೂಗಾಡತೊಡಗಿದರು!!!
😥😥😥😥😥
ಇವರ ಒಳಗಿನಿಂದ ಕಿರುಚಾಟ ಕೇಳಿದ ಹೊರಗಿನ ಜನತೆ ತುಂಬಾ ಬೇಸರದಿಂದ, ದುಃಖದಿಂದ ಅಂತ್ಯಸಂಸ್ಕಾರದ ಸಿದ್ಧತೆಯಲ್ಲಿ ತೊಡಗಿದರು.
ಗುಣಶೀಲ ಡಾಕ್ಟರ್ ಹೇಳಿದಂತೆ ವಜ್ರಕಾಯದ ಎಲೆಯನ್ನು ತರಲು ಹೊರಗೆ ಹೋದಾಗ ಹೊರಗಿನಿಂದ ಜನರ ಬೇಸರದ, ಕಣ್ಣೀರಿನ ಮುಖ ನೋಡತೊಡಗಿದ ಹಾಗೂ ಮನಸಲ್ಲೇ ಗುನುಗುನಿಸತೊಡಗಿದ, ಯಬ್ಬ ಈ ಊರಿನವರಿಗೆ ನಾರಾಯಣರ ಮೇಲೆ ಎಷ್ಟು ಪ್ರೀತಿ ಅಂತ
ಮನೆಯ ಹೊರಗಿನ ಬಲ ಮೂಲೆಯಲ್ಲಿ ಜನರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡುವುದನ್ನು ಕಂಡು ಗಾಬರಿಯಿಂದ ಆ ಸ್ಥಳಕ್ಕೆ ಓಡಿ ಹೋಗಿ ಯಾಕೋಸ್ಕರ ಚಟ್ಟ ಕಟ್ಟುತ್ತಿದ್ದಾರೆ ಎಂದು ಆ ಜನರಲ್ಲೀಯೇ ಕೇಳಿ ಬಿಟ್ಟ ಗುಣಶೀಲ.
ಜನರು ಬೇಸರದಿಂದ ನಾರಾಯಣ್ ರು ಇಷ್ಟು ಬೇಗ ನಮ್ಮನ್ನೆಲ್ಲಾ ಅಗಲಬಾರದಿತ್ತು, ಊರಿಗೆ ಇವರಿಂದ ತುಂಬಾ ಉಪಕಾರವಾಗಿತ್ತು ಎಂದು ಅಳತೊಡಗಿದರು.
ಇದನ್ನು ನೋಡಿದ ಗುಣಶೀಲ ಒಮ್ಮೆಲೇ ಬೊಬ್ಬೆ ಹಾಕಿ, ಯಾರು ತೀರಿ ಹೋದರು ಹೇಳಿದರು? ಅವರು ತಲೆ ತಿರುಗಿ ಕುಸಿದಿದ್ದಾರೆಯೇ ಹೊರತು ನಮನ್ನು ಬಿಟ್ಟು ಹೋಗಿಲ್ಲ ಮಾರಾಯ್ರೇ... ನೀವೇನು ನಾರಾಯಣರನ್ನು ಜೀವಂತ ಕೊಲ್ಲುತ್ತೀರ ಎಂದು ಬೊಬ್ಬೆ ಹೊಡೆದ.
ಎಲ್ಲರೂ ಒಂದು ಕ್ಷಣ ಮೌನವಾದರು!!!
ಡಾಕ್ಟ್ರೇ ಹೊರಗೆ ಬನ್ನಿ, ಜನರಿಗೆ ನಿಜ ಅಂಶ ಹೇಳಿ ಎಂದು ಕೂಗುತ್ತ ಬೊಬ್ಬೆ ಹೊಡೆದ ಗುಣಶೀಲ.
ಇದನ್ನು ಕೇಳಿದ ದಯಕರ್ ನಾಯಕ್, ನಾರಾಯಣ್ ಪತ್ನಿ, ಡಾಕ್ಟರ್ ಮನೆ ಹೊರಗಡೆ ಬಂದರು. ಡಾಕ್ಟರ್ ಹೇಳಿದರು, ನಿಮ್ಮ ನಾರಾಯಣರಿಗೆ ನಿಮ್ಮ ಪ್ರೀತಿ ಇರೋ ತನಕ ಏನೂ ಆಗಲ್ಲ, ನಿತ್ರಾಣ, ರಕ್ತದೊತ್ತಡ ಜಾಸ್ತಿ ಆಗಿದೆ, ವಜ್ರಾಕಾಯ ಗಿಡದ ಎಲೆಯನ್ನು ಆದಷ್ಟು ಬೇಗ ತನ್ನಿ, ನನ್ನಿಂದಾದ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದನ್ನು ಕೇಳಿದ ಜನರು, ಪತ್ನಿ, ದಯಕರ ನಾಯಕ್ ನಿಟ್ಟುಸಿರುಬಿಟ್ಟರು. ಗುಣಶೀಲರ ಜೊತೆ ಜಗನ್ನಾಥ್ ಹಾಗೂ ಇಬ್ಬರು ಊರಿನ ಜನರು ವಜ್ರಾಕಾಯ ಗಿಡದ ಎಲೆಯನ್ನು ಹುಡುಕಲು ಉಚ್ಚಲಿ ಕೋಟೆಗಾರಿನ ಕಾಡಿಗೆ ಓಡುತ್ತಾ ಹೋದರು. ಇತ್ತ ದಯಕರ ನಾಯಕ್, ಡಾ.ಹೆಬ್ಬಾರ್ ಇಬ್ಬರೂ ನಾರಾಯಣ್ ರ ಪತ್ನಿಗೆ ಹಾಗೂ ಅಲ್ಲಿದ್ದ ಜನರಿಗೆ ಧೈರ್ಯ ತುಂಬಲು ಮುಂದಾದರು.
ಇಲ್ಲಿ ಒಳಗಿನಿಂದ ಮಲಗಿದಲ್ಲೇ ಎಚ್ಚರವಾದ ನಾರಾಯಣ್ ರು ಬಚ್ಚಲು ಕೋಣೆಗೆ ಹೋದರು. ನಾರಾಯಣ್ ರಿಗೆ ಆ ಸಂಧರ್ಭದಲ್ಲಿ ಏನೆಲ್ಲಾ ಆಗಿತ್ತು ಎಂಬುದೇ ಮರೆತು ಹೋಗಿತ್ತು. ಬಚ್ಚಲು ಕೋಣೆ ಬಂದ್ ಮಾಡಿದಾಗ ಹೊರಗಿದ್ದ ಪತ್ನಿ, ನಾಯಕ್, ಹೆಬ್ಬಾರ್ ಕೊಠಡಿಗೇ ಬಂದವರೇ ಅಲ್ಲಿ ನಾರಾಯಣರನ್ನು ಕಾಣದೆ ಆತಂಕಕ್ಕೊಳಗಾದರು. ಯಾರೂ ಬಚ್ಚಲು ಮನೆಯೊಳಗೆ ಹುಡುಕದೆ ಎಲ್ಲಾ ಕಡೆ ಹುಡುಕಲು ಶುರು ಮಾಡಿದರು.
ಬಚ್ಚಲು ರೂಮಿನಿಂದ ನಾರಾಯಣ್ ರು ಹಿಂದಿನ ಬಾಗಿಲಿನಿಂದ ಹೊರಗೆ ಬಂದಾಗ ಎದುರಲ್ಲಿ ಅಚಿನ್ ಒಮ್ಮೆಲೇ ಪ್ರತ್ಯಕ್ಷನಾದ.
🔥🔥🔥🔥🔥🔥
ಸತ್ತೆ ಹೋಗಿದ್ದರು ಎಂದುಕೊಂಡಿದ್ದ ನಾರಾಯಣರು ಏಕಾಏಕಿ ಪ್ರತ್ಯಕ್ಷರಾಗಿದ್ದು ಕಂಡು ಅಚಿನ್ ಅಲ್ಲಿಯೇ ಮೂರ್ಛಾಗತನಾದ.
ಇದನ್ನು ಅರಿಯದ ನಾರಾಯಣ್ ರು ಸೀದಾ ಹೊಲಕ್ಕೆ ಹೋದರು.
ಮನೆಯೊಳಗೆ , ಹೊರಗಡೆ ಹುಡುಕುತ್ತಿದ್ದ ಜನರಿಗೆ ಹೆದರಿಕೆ ಇಮ್ಮಡಿಯಾಗತೊಡಗಿತು.
ಪೊಲೀಸಪ್ಪನಿಗೆ ದೂರು ಕೊಡುವ ಎಂದು ದಯಕರ ನಾಯಕ್ ದಿನೇಶ್ ಕಾಮತ್ ರಿಗೆ ಕಾಲ್ ಮಾಡಿ ಕರೆಸಿದರು.
ಇಲ್ಲಿಂದ ವಜ್ರಾಕಾಯ ಗಿಡದ ಎಲೆಯನ್ನು ತಂದ ಗುಣಶೀಲ, ಜಗನ್ನಾಥ್, ಇನ್ನಿಬ್ಬರು ಮನೆಯ ನಾರಾಯಣ್ ರು ಇರದ ವಿಚಾರ ಕಂಡು ಗಾಬರಿಗೊಳಗಾದರು..
ಮೂರ್ಛೆ ಹೋದ ಅಚಿನ್ ನನ್ನು ಜಗನ್ನಾಥ ನೋಡಿ ಕಣ್ಣಿಗೆ ನೀರು ಹಾಕಿ ಎಬ್ಬಿಸಿದ.
💥💥💥💥💥💥
ಅಚಿನ್ ಗಾಬರಿಂದ ಒಮ್ಮೆಲೇ ಎದ್ದು ನಾರಾಯಣ್ ಭೂತ ಭೂತ ಎಂದು ಹುಚ್ಚರ ಹಾಗೆ ಕಿರುಚಾಡಿದ, ಇವನ ಕಿರುಚಾಟ ಕಂಡು ಜಗನ್ನಾಥ ಮೂರ್ಛೆ ಹೋದ. ಗುಣಶೀಲ, ಡಾಕ್ಟರ್ ಹೊರಗೆ ಬಂದು ಬೊಬ್ಬೆ ಹೊಡೆದ ಸ್ಥಳ ನೋಡಿದಾಗ ಒಳಗಿನಿಂದ ನಾರಾಯಣ್ ರ ಪತ್ನಿ ಮೂರ್ಛೆ ಹೋದರು. ದಯಕರ ನಾಯಕ್ ನಾರಾಯಣ್ ರ ಪತ್ನಿ ಯನ್ನು ಹಿಡಿಯಲು ಒಳಗೆ ಹೋದರು, ಗುಣಶೀಲ, ಡಾಕ್ಟರ್ ಜಗನ್ನಾಥ ಮೂರ್ಛೆ ಹೋದ ಸ್ಥಳಕ್ಕೆ ಧಾವಿಸಿದರು. ಅಚಿನ್ ನ ಬೊಬ್ಬೆ ಹೊಡೆಯುವ ಸ್ಥಿತಿ ಕಂಡು ಒಳಗಿನಿಂದಲೇ ನಡುಕ ಶುರುವಾಗಿ ಗುಣಶೀಲ ಮೂರ್ಛೆ ಬಿದ್ದ. ದಯಕರ ನಾಯಕ್ ಮೇಲೆ ನಾರಾಯಣ್ ರ ಪತ್ನಿಯ ದೇಹದ ಭಾರದಿಂದ ದಯಕರ ನಾಯಕ್ ಕುಸಿದು ಬಿದ್ದರು.
ವೈದ್ಯರಿಗೆ ಆ ಸಂದರ್ಭ ಏನೂ ಮಾಡಲು ಆಗಲೇ ಇಲ್ಲ. ಪರಿಸ್ಥಿತಿ ಕೈ ಮೀರಿತ್ತು.
ಸ್ವಲ್ಪ ಹೊತ್ತಿನ ಬಳಿಕ, ಹಿಂದಿನ ಬಾಗಿಲ ಮೂಲಕ ಹೊಲಕ್ಕೆ ಹೋಗಿದ್ದ ನಾರಾಯಣ್ ರು 2 ಹಣ್ಣಾದ ಹಲಸಿನ ಹಣ್ಣನ್ನು ಬೆನ್ನಿಗೆ ಹಾಕುತ್ತಾ ಮನೆಗೆ ಬರುತ್ತಿದ್ದರು.
ಒಂದು ಕಡೆ ಅಚಿನ್ ರ ಬೊಬ್ಬೆ, ಇನ್ನೊಂದು ಕಡೆ ಗುಣಶೀಲ ರ ಮೂರ್ಛೆ ಬಿದ್ದ ಸ್ಥಿತಿ, ಒಳಗೆ ನೋಡುವಾಗ ದಯಕರ ನಾಯಕ್, ಪತ್ನಿ ಬಿದ್ದ ಸ್ಥಿತಿ ಕಂಡು ಬೆರಗಾದರು. ಹೊರಗಿನಿಂದ ಬಂದ ದಿನೇಶ್ ಕಾಮತ್ ನಾರಾಯಣರನ್ನು ನೋಡಿದಾಗ ಹೆದರಿ ಪೊಲೀಸ್ ನಾಯಿ ಯನ್ನು ಗಟ್ಟಿ ಹಿಡಿದು ಆಶ್ಚರ್ಯದಿಂದ ಡಾಕ್ಟರ್ ಬಳಿ ಬಂದ ..…..
🏠🏠🏠🏠🏠🏠
ಪತ್ನಿ, ಗುಣಶೀಲ ಮೂರ್ಛೆ ಇಂದ ಎದ್ದೇಳುತ್ತಾರ?
ಗುಣಶೀಲ, ಜಗ್ಗನ್ನಾಥ್ ತಂದ ತಂದ ವಜ್ರಾಕಾಯ ಗಿಡದ ಎಲೆಯನ್ನು ಡಾಕ್ಟರ್ ನಾರಾಯಣ್ ರಿಗೆ ಕುಡಿಸುತ್ತಾರ? ಮೇಲೆ ಬಿದ್ದ ನಾರಾಯಣ್ ರ ಪತ್ನಿ ಇಂದ ದಯಕರ ನಾಯಕ್ ಹುಷಾರಾಗುತ್ತಾರ??
-----------------------
ಜಗನ್ನಾಥನು ನವನವೀನರ ಕಿವಿಯಲ್ಲಿ ಉಸುರಿದ ವಿಷಯವೇನು ?
ನಂತರ ಅಲ್ಲಿ ಪರಿಸ್ಥಿತಿ ತಿಳಿಯಾಯಿತು. ತಮಾಷೆ ಅಂದರೆ ಯಾವ ವಜ್ರಕಾಯ ಎಲೆಯನ್ನು ನಾರಾಯಣರ ಚಿಕಿತ್ಸೆಗೆ ಗುಣಶೀಲನ ತಂದಿದ್ದನೋ, ಅದೇ ವಜ್ರಕಾಯ ಎಲೆಯನ್ನು ತಂದು ನಾರಾಯಣರು ಗುಣಶೀಲನ ಮೂಗಿನ ಬಳಿ ಹಿಡಿದಾಗ ಆತ ಮೂರ್ಛೆ ತಿಳಿದು ಏಳುತ್ತಾನೆ. ನಾರಾಯಣರ ಹೆಂಡತಿ, ದಯಕರ ನಾಯಕ್ ಕೂಡಾ ಚೇತರಿಸುತ್ತಾರೆ. ಡಾ.ಹೆಬ್ಬಾರ್ ಅವರು ಪರೀಕ್ಷೆ ಮಾಡಿ ನಾರಾಯಣರು ಈಗ ಚೇತರಿಸಿದ್ದಾರೆ, ಆ ಲೆಕ್ಕದಲ್ಲಿ ನನಗೊಂದು ಚಾ ತರಿಸಿ ಎಂದು ಪ್ರಾಸಬದ್ಧವಾಗಿ ಹೇಳಿ ಘೋಷಿಸುತ್ತಾರೆ... ಅಷ್ಟಾಗುವಾಗ ನಾರಾಯಣರು ಸತ್ತೇ ಹೋದರು ಎಂದು ಅತ್ಯುತ್ಸಾಹದಿಂದ ಪ್ರಚಾರ ಮಾಡಿದವರು ಕಂಗಾಲಾಗುತ್ತಾರೆ...
ಈ ನಡುವೆ ಭೀಮಾವತಿ ಅವರು ಏಲಕ್ಕಿ ಹಾಕಿದ ರುಚಿಕಟ್ಟಾದ ಹಲಸಿನ ಹಣ್ಣಿನ ಜ್ಯೂಸ್ ಮಾಡಿ ಎಲ್ಲರಿಗೂ ಕೊಡುತ್ತಾಳೆ. ಜೊತೆಗೆ ನಂಜಿಕೊಳ್ಳಲು ಪೆಲತ್ತರಿ (ಹಲಸಿನ ಬೀಜ)ಯ ಫ್ರೈ ಕೂಡಾ ಇರುತ್ತದೆ...
ಅಲ್ಲಿಗೆ ಎಲ್ಲರೂ ಮಾಮೂಲಿ ಮನಃಸ್ಥಿತಿಗೆ ಬಂದಾದ ಮೇಲೆ ನಾರಾಯಣರು ಸಭಾ ಕಾರ್ಯಕ್ರಮ ಮುಂದುವರಿಯಲಿ, ಆದರೆ ದಯಕರನ ಕೈಗೆ ಮೈಕ್ ನೀಡಬಾರದು ಎಂದು ಕಟ್ಟಪ್ಪಣೆ ಕೊಡುತ್ತಾರೆ... ಮತ್ತೆ ಎಲ್ಲರೂ ಗುಣಶೀಲನ ಮನೆಗೆ ಹೋಗಿ ಅಲ್ಲಿ ಸಭಾ ಕಾರ್ಯಕ್ರಮ ಮುಂದುವರಿಯುತ್ತದೆ...
🎤🎤🎤🎤
ಪುನಃ ನಾರಾಯಣ ಕಾಲು ಹಿಡಿದು ಆಶೀರ್ವಾದ ಪಡೆದ ದಯಕರ ಹಠಕಟ್ಟಿ ಮೈಕ್ ಹಿಡಿದು ಎರಡು ಸಾಲು ಹೇಳುತ್ತಾರೆ... “ಆತ್ಮೀಯರೇ ಇವತ್ತು ನನ್ನ ಒಂದು ವಿಚಿತ್ರವಾದ ಸ್ವಾಗತ ಭಾಷಣದಿಂದಾಗಿ ಇಡೀ ಕಾರ್ಯಕ್ರಮವೇ ಲಗಾಡಿ ಹೋಗುವುದು ಸ್ವಲ್ಪದರಲ್ಲಿ ತಪ್ಪಿತು... ನಾರಾಯಣರು ರಕ್ತದೊತ್ತಡ ಸಮಸ್ಯೆಯಿಂದ ಅಸ್ವಸ್ಥರಾಗಿದ್ದರೇ ಹೊರತು ಅವರು ಸತ್ತು ಹೋಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ!!!!!!!!”
ಇನ್ನು ಈ ಜನರ ಕೈಯ್ಯಿಂದ ಮೈಕ್ ತಗೊಳ್ಳದಿದ್ದರೆ, ಇವರ ವಚನಾಮೃತ ಕೇಳಿ ನಾರಾಯಣರು ಸತ್ತೇ ಹೋಗುತ್ತಾರೆ ಎಂದು ಹೆದರಿದ ಗುಣಶೀಲ ದಯಕರ ಕೈಯ್ಯಿಂದ ಮೈಕ್ ಕಿತ್ತು... ನಿರೂಪಮೆ ಮುಂದುವರಿಸಿದ... “ಮತ್ತೆ ಹೇಗಿದ್ದೀರಿ ಸಾರ್... ಎಲ್ರೂ ಅರಾಮ ಅಲ್ವ, ಡೋಂಟ್ ವರಿ, ಈಗ ಸಭಾ ಕಾರ್ಯಕ್ರಮ ಮುಂದುವರಿಯುತ್ತದೆ, ಈಗ ಅಚಿನ್ ಹಾಗು ಹತ್ತು ಸಮಸ್ತರಿಂದ ನಾರಾಯಣರು ಹಾಗೂ ಅಚಿನ್ ಗುರು, ಖ್ಯಾತ ಓಟಗಾರ್ತಿ ವಿಭಾ ಪೂಂಜಾ ಅವರಿಗೆ ಸಾರ್ವಜನಿಕ ಸನ್ಮಾನ....”
👨🦳👨🦳👨🦳👨🦳👨🦳👨🦳
ವೇದಿಕೆಯಲ್ಲಿ ಎರಡು ಪರಾ ಮರತ ಕುರ್ಚಿ ಹಾಕಿ ಅಲ್ಲಿ ನಾರಾಯಣರು ಹಾಗೂ ಪೂಂಜರನ್ನು ಕೂರಿಸಿ ಸನ್ಮಾನಿಸಲಾಯಿತು. ವಿಶೇಷವಾಗಿ ಅಂದಿನ ಸನ್ಮಾನದ ವಸ್ತುಗಳೆಲ್ಲ ಹಲಸಿನ ಉತ್ಪನ್ನಗಳಿಂದಲೇ ತಯಾರಾಗಿದ್ದು ಮಾತ್ರ ವಿಶೇಷ. ಅಚಿನ್ ಮಾತ್ರ ತನ್ನ ಕೃತಜ್ಞತೆಯ ದ್ಯೋತಕವಾಗಿ ನಾರಾಯಣರು ಹಾಗೂ ಪೂಂಜರಿಗೆ ಬೆಳ್ಳಿಯ ಹಲಸಿನ ಹಣ್ಣಿನ ಸ್ಮರಣೆಕೆ ನೀಡಿಕಾಲು ಹಿಡಿದು ನಮಸ್ಕರಿಸಿದ. ನಂತರ ಹಲಸಿನ ಬೀಜದ ಮಾಲೆ ಹಾಕಿ, ಹಲಸಿನ ಎಲೆಗಳ ಶಾಲು ಹೊದೆಸಿ, ಹಲಸಿನ ಸಿಪ್ಪೆಯಿಂದ ತಯಾರಿಸಿದ ವಿಶೇಷ ಹಸಿರು ಪೇಟಾವನ್ನು ಇಬ್ಬರಿಗೂ ತೊಡಿಸಲಾಯಿತು..... ಎಲ್ಲರಿಗೂ ಬಹಳ ಸಂತೋಷವಾಯಿತು... ತಮ್ಮದೇ ಊರಿನ ಸಂಸ್ಕೃತಿಯಂತೆ ಸನ್ಮಾನ ನಡೆದದ್ದರಿಂದ....
ಇದೇ ಖುಷಿಯಲ್ಲಿ ವೇದಿಕೆಗೆ ಬಂದ ಜಗನ್ನಾಥ ಹೇಳಿದ... "ನಮ್ಮೆಲ್ಲರ ಆತ್ಮೀಯರಾದ ನಾರಾಯಣರ ಸನ್ಮಾನದ ಈ ಖುಷಿಯಲ್ಲಿ ನಾನು ಅವರಿಂದಲೇ ಕಲಿತ ಹುಲಿವೇಷದ ಎರಡು ಸ್ಟೆಪ್ ಹಾಕಿ ನಿಮ್ಮನ್ನು ರಂಜಿಸಲಿದ್ದೇನೆ. ಹುಲಿಯೊಂದು ತನ್ನ ಹಲ್ಲಿನಿಂದ ಪೆಲಕಾಯಿಯನ್ನು ಕಚ್ಚಿ ಎಸೆಯುವ ರೋಚಕ ದೃಶ್ಯವನ್ನು ನೀವೀಗ ವೇದಿಕೆಯಲ್ಲಿ ಕಾಣಬಹುದು..." ಎನ್ನುತ್ತಾ ಸ್ಟೆಪ್ ಹಾಕಲು ಸಿದ್ಧನಾದ...
ತಕ್ಷಣ ಮಧ್ಯಪ್ರವೇಶಿಸಿದ ಡಾ.ಹೆಬ್ಬಾರ್ ಮೈಕಿನಲ್ಲಿ ಹೇಳಿದರು. “ಅಣ್ಣಾ, ನಿಮಗ್ಯಾರಿಗೂ ನಾರಾಯಣರ ಆರೋಗ್ಯದ ಕಾಳಜಿ ಇಲ್ವ.... ಬೆಚ್ಚಿ ಬೀಳಿಸುವ ದೃಶ್ಯಗಳನ್ನು ನೋಡಿದರೆ ಅವರು ಮತ್ತೆ ಅಸ್ವಸ್ಥರಾಗುತ್ತಾರೆ. ನೀವೆಲ್ಲ ಸೇರಿ ಅವರಿಗೆ ಸನ್ಮಾನ ಮಾಡುವುದೋ, ಉಪದ್ರ ಮಾಡುವುದೋ.... ದಯವಿಟ್ಟು ನಿಮ್ಮ ನೃತ್ಯವನ್ನು ಎಲ್ಲರೂ ಹೋದ ಬಳಿಕ ಮಾಡಿ....”
ಡಾ.ಹೆಬ್ಬಾರ್ ಮಾತಿನಿಂದ ತೀವ್ರ ಬೇಸರಗೊಂಡು ಜಗನ್ನಾಥ ಸಭೆಗೆ ಹೋಗಿ ಕುಳಿತ....
🍐🍐🍐🍐🍐🍐🍐🍐
ಮತ್ತೆ ಸಭೆಗೆ ಟ್ರ್ಯಾಕಿಗೆ ಬಂತು. “ಸಾರ್..... ಈಗ ಅಚಿನ್ ಸಲ್ಮೇಡಾ ಅವರಿಂದ ಅಭಿನಂದನಾ ಭಾಷಣ…” ಗುಣಶೀಲ ನಿರೂಪಿಸಿದ....
ಯಾವತ್ತೂ ನಗು ನಗುತ್ತಾ ತಮಾಷೆಯಿಂದಲೇ ಮಾತನಡುವ ಅಚಿನ್ ಇಂದು ಸ್ವಲ್ಪ ಭಾವುಕನಾಗಿದ್ದ... ಆತನ ಮಾತುಗಳು ಗಂಭೀರವಾಗಿದ್ದವು. “ಆತ್ಮೀಯರೇ... ನಾನು ನನ್ನ ಅಧ್ಯಯನಕ್ಕೋಸ್ಕರ ಈ ಉಳ್ಳಾಲಗುತ್ತಿನ ಎಸ್ಟೇಟಿನಲ್ಲಿ ಕಳೆದ ಆರು ತಿಂಗಳು ಅತ್ಯಂತ ಅಮೂಲ್ಯವಾದದ್ದು. ನಾನು ಹಲಸಿನ ಬಗ್ಗೆ ಮಾತ್ರವಲ್ಲ, ಜೀವನದ ಕುರಿತೂ ಬಹಳಷ್ಟು ತಿಳಿದುಕೊಂಡೆವು. ನಾನು ಅತ್ಯಂತ ಕಷ್ಟಪಟ್ಟು ಬೆಳೆದವನು. ಬಡತನದ ಕುಟುಂಬದಿಂದ ಬಂದವನು. ಬದುಕಿನಲ್ಲಿ ಮೇಲೆ ಬರಲು ಎಷ್ಟು ಕಷ್ಟ ಇದೆ ಎಂಬುದು ಸ್ವತಃ ನನಗೆ ಗೊತ್ತು, ಹೀಗಿರುವಾಗ ಈ ಬಂಜರು ಭೂಮಿಯನ್ನು ಹಲಸಿನ ಕಲ್ಪವೃಕ್ಷವಾಗಿಸುವಲ್ಲಿ ಸುಮಾರು 30 ವರ್ಷಗಳ ಕಾಲ ನಾರಾಯಣರು ಪಟ್ಟ ಕಷ್ಟದ ಅರಿವು ನನಗಿದೆ. ಅವರ ಜೊತೆ ಓಡಾಡುತ್ತಾ, ಅವರ ಕೃಷಿಯ ಬಗ್ಗೆ ತಿಳಿಯುತ್ತಾ ತಿಳಿಯುತ್ತಾ, ಅವರ ಮೇರು ವ್ಯಕ್ತಿತ್ವದ ಕುರಿತು ಸಾಕಷ್ಟು ತಿಳಿದುಕೊಂಡೆ. ಅವರ ಕಟ್ಟುನಿಟ್ಟಿನ ಮನುಷ್ಯ ಹೌದು, ಹಾಗಂತ ಕಠೋರ ಹೃದಯಿ ಅಲ್ಲ, ನೇರ ನಡೆ ನುಡಿಯ ಅವರಲ್ಲಿ ವಂಚನೆ ಇಲ್ಲ, ಎಲ್ಲರೂ ತನ್ನ ಹಾಗೆ ನೇರ ನಡೆ ನುಡಿಯಲ್ಲೇ ಇರಬೇಕೆಂದು ಅವರು ಬಯಸುತ್ತಾರೆ, ಸ್ವಾಭಿಮಾನಿಯೂ ಹೌದು. ಯಾರನ್ನೂ ಮನಸ್ಸಿನಲ್ಲಿ ದ್ವೇಷಿಸುವುದಿಲ್ಲ, ಅನಿಸಿದ್ದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ. ಹಲಸಿನ ಕುರಿತ ಅವರ ಅನುಭವ, ಕೃಷಿಯ ಸೂಕ್ಷ್ಮ ವಿಚಾರಗಳ ಕುರಿತ ಅವರ ಅಧ್ಯಯನ ಜ್ಞಾನ, ಹಲಸಿನ ಉತ್ಪನ್ನಗಳ ಕುರಿತು ಅವರು ಊರಿನವರಿಗೆ ನೀಡುವ ಉಚಿತ ತರಬೇತಿ, ಸುಮಾರು ಎರಡು ಸಾವಿರ ಮಂದಿಗೆ ಅವರು ವಿವಿಧ ಫ್ಯಾಕ್ಟರಿಗಳಲ್ಲಿ ಉದ್ಯೋಗ ನೀಡಿರುವುದು, ಹಲಸಿನ ಉತ್ಪನ್ನಕ್ಕೆ ಅವರು ಕಟ್ಟಿಕೊಟ್ಟ ಮಾರುಕಟ್ಟೆ ಇವೆಲ್ಲ ಈಗಿನ ಯುವಕರಿಗೆ ಮಾದರಿಯೂ ಹೌದು... ”
ನಿರಂತರ ಮಾತಿನಿಂದ ಬಳಲಿದ ಅಚಿನ್, ಭೀಮಾವತಿ ಮಾಡಿದ ಹಲಸಿನ ಹಣ್ಣಿನ ಮಿಲ್ಕ್ ಶೇಕ್ ಕುಡಿದು ಸುಧಾರಿಸಿಕೊಂಡು! ಮಾತು ಮುಂದುವರಿಸಿದ....
“ಸ್ನೇಹಿತರೇ... ಆರು ತಿಂಗಳಿನಿಂದ ಅಧ್ಯಯನಕ್ಕೋಸ್ಕರ ಇಲ್ಲಿದ್ದೇನೆ, ಇಲ್ಲಿ ನಾರಾಯಣ ಮನೆಯ ಅನ್ನದ ಋಣ ನನಗಿದೆ, ಅವರ ಮನೆಯವರಂತೆಯೇ ನಾರಾಯಣರು ಹಾಗೂ ಅವರ ಮತ್ತು ನನ್ನ ಆಪ್ತಸ್ನೇಹಿತ ಗುಣಶೀಲ ನನ್ನನ್ನು ನೋಡಿಕೊಂಡಿದ್ದಾರೆ. ನಾನು ಮತ್ತು ಗುಣಶೀಲ ತುಂಬ ತಮಾಷೆಯಿಂದ ವರ್ತಿಸುತ್ತಿದ್ದೇವೆ ನಿಜ. ಹಾಗಂತ ನಮಗಿಬ್ಬರಿಗೂ ನಾರಾಯಣರ ಮೌಲ್ಯ, ಮಹತ್ವ ಗೊತ್ತು... ಒಂದು ತಿಂಗಳ ಹಿಂದೆ ನನ್ನಿಂದ ಒಂದು ತಪ್ಪಾಗಿ ಹೋಯಿತು.. ನಾನದನ್ನು ಈಗ ನಿಮ್ಮೆಲ್ಲರ ಎದುರು ಹೇಳಲೇಬೇಕು. ಯಾಕಂದರೆ ಆ ತಪ್ಪು ನನ್ನನ್ನು ಚುಚ್ಚುತ್ತಲೇ ಇದೆ. ಹೇಳದೆ ಇಲ್ಲಿಂದ ಹೋದರೆ ನನ್ನ ಮನಸ್ಸಿಗೆ ಸಮಾಧಾನ ಇರುವುದಿಲ್ಲ, ಏನೆಂದರೆ... ಏನೆಂದರೆ....ನಾನೊಂದು ದಿವಸ, ಮನೆಯಲ್ಲಿ ಯಾರೂ ಇಲ್ಲದಾಗ, ಹಸಿವು ತಡೆಯಲಾಗದೆ, ಅಂಗಳದಲ್ಲಿದ್ದ ನಾರಾಯಣರ ನೆಚ್ಚಿನ ಹಲಸಿನ ಹಣ್ಣನ್ನು ಅವರ ಅನುಮತಿ ಇಲ್ಲದೆ ಕೊಯ್ದು, ಬಿಡಿಸಿ ತಿಂದಿದ್ದೇನೆ. ಅದು ತಪ್ಪೆಂದು ಆಗ ನನಗೆ ಅರಿವಾಗಲಿಲ್ಲ, ನಂತರ ನನ್ನ ಮಿತ್ರರು ವಿವರಿಸಿದಾಗ ಗೊತ್ತಾಯ್ತು. ಆದರೆ, ಕೋಪದಿಂದ ನಾರಾಯಣರು ಏನೂ ಮಾಡಿಯಾರೋ ಅಂತ ಆತಂಕದಿಂದ ಗುಣಶೀಲ ಸಹಿತ ನನ್ನ ಸ್ನೇಹಿತರೆಲ್ಲ ಸುಳ್ಳು ಹೇಳಿ ಆ ಸಂದರ್ಭ ನನಗೆ ಶಿಕ್ಷೆಯಾಗುವುದನ್ನು ತಪ್ಪಿಸಿದರು. ಆದರೆ, ನಾರಾಯಣ ಅಂಕಲ್, ಈಗ ನಾನು ನಿಜ ಹೇಳುತ್ತಿದ್ದೇನೆ. ಆ ಹಲಸಿನ ಹಣ್ಣನ್ನು ತಿಂದದ್ದು ನಾನೇ... ನೀವು ನನಗೆ ಯಾವ ಶಿಕ್ಷೆ ನೀಡಿದರೂ ನಾನು ಅನುಭವಿಸಲು ಸಿದ್ಧನಿದ್ದೇನೆ.... ”
ಇದನ್ನೆಲ್ಲ ಸಭೆಯಲ್ಲಿ ನೋಡುತ್ತಿದ್ದ ಜಗನ್ನಾಥ ಪಕ್ಕದಲ್ಲಿದ್ದ ನವನವೀನ ಶೆಟ್ಟಿಯ ಕಿವಿಯಲ್ಲಿ ಉಸುರಿದ “ತೂಲ ಇತ್ತೆ ಧಾರಾವಾಹಿ ಬರೆಪುನಾಯೆ... ಈಡೆಗ್ ಉಂತಾವೆ, ನಾರಾಯಣೆರ್ ಲಕ್ಕ್ ದ್ ಉಂತುದು ತುಂಬು ಬರ್ಪೆರ್, ಆಡೆಗ್ ಇನಿತ ಕಂತ್ ಮುಗಿವುಂಡು, ಮಲ್ಲ ಸಸ್ಪೆನ್ಸ್ ದ ಲೆಕ್ಕ ಸಶೇಷಾಂದ್ ಬರೆಪೆ, ಎಲ್ಲೆ ಓದಿಯೆರೆ ಪೋನಗ ಅಯಿಟ್ ವಾ ಸಸ್ಪೆನ್ಸ್ ಲ ಇಜ್ಜಿ, ಮೂಜಿ ಕಾಸ್ದಾಯೆ... ಪೊಕ್ಕಡೆ ಕುತೂಹಲ ಪುಟ್ಟಾವ್ನು. ಮನದಾನಿ ಅಯಿಟ್ ಎಂಚಿನಲ ಉಪ್ಪುಜ್ಜಿ!!!!!!!”
🤭🤭🤭🤭
“ಈ ಮನಿಪಾಂದೆ ಕುಲ್ಲುವನ, ಅಧಿಕ ಪ್ರಸಂಗ ಪಾತೆರೊಡ್ಚಿ...” ನವನವೀನ ಶೆಟ್ಟಿ ಮಾತು ಮುಗಿಸಲಿಲ್ಲ, ಜಗನ್ನಾಥನ ಊಹೆ ನಿಜವಾಗಿತ್ತು...!!
🤫🤫🤫🤫🤫
“ಸಾಕು ನಿಲ್ಲಿಸು.....!!!!”
ಎಂದು ಗಂಭೀರ ಧ್ವನಿಯಲ್ಲಿ ಅಪ್ಪಣೆ ಕೊಡಿಸಿದ ನಾರಾಯಣರು ಅಚಿನ್ ಕೈಯ್ಯಿಂದ ಮೈಕ್ ಕಸಿದು, ತಾವು ವೇದಿಕೆಯ ಮಧ್ಯಕ್ಕೆ ಬಂದು ನಿಂತು ಸುತ್ತಲೂ ನೋಡಿದರೂ, ಮುಖ್ಯವಾಗಿ ಗುಣಶೀಲನ ಮುಖವನ್ನೇ ನೋಡುತ್ತಾ ಏನೋ ಹೇಳಲು ಬಾಯಿ ತೆರೆದರು.....!!!
------------
ನಾರಾಯಣರು ಭಾಷಣದಲ್ಲಿ ಹೇಳೀದ್ದೇನು ?
ಒಂದು ದೀರ್ಘ ನಿಟ್ಟುಸಿರು ಬಿಟ್ಟು ನಾರಾಯಣರು ಮಾತು ಶುರು ಮಾಡಿದರು...
ನನ್ನೆಲ್ಲಾ ಆತ್ಮೀಯರೇ, ಹಿತೈಷಿಗಳೆ ಹಾಗೂ ಅಭಿಮಾನಿಗಳೇ... ತುಂಬ ಭಾವುಕನಾಗಿದ್ದೇನೆ. ಯಾಕೆಂದರೆ ಅರ್ಜಿ ಹಾಕಿ, ವಶೀಲಿ ಮಾಡಿ, ಕೈಕಾಲು ಹಿಡಿದು ಪಡೆದುಕೊಳ್ಳುವ ಸನ್ಮಾನಕ್ಕಿಂತಲೂ ನಮ್ಮ ಮನಸ್ಸಿಗೆ ಹತ್ತಿರವಾದವರು ಗುರುತಿಸಿ ನೀಡುವ ಗೌರವ ತುಂಬ ತುಂಬ ತೃಪ್ತ ಭಾವವನ್ನು ನೀಡುತ್ತದೆ. ನನಗಿಂದೂ ಅದೇ ಆಗಿದೆ.
ನಾನು ಪ್ರಶಸ್ತಿ,ಸನ್ಮಾನ, ವೇದಿಕೆ, ಭಾಷಣ ಇತ್ಯಾದಿಗಳನ್ನು ಬಯಸಿದವನಲ್ಲ, ಅವುಗಳ ಹಿಂದೆ ಹೋದವನೂ ಅಲ್ಲ. ನನಗೆ ಭಾಷಣ ಮಾಡಿಯೂ ಗೊತ್ತಿಲ್ಲ. ಆದರೆ, ಈ ಹುಡುಗ ಅಚಿನ್ ಮಾತುಗಳನ್ನು ಕೇಳಿದ ಬಳಿಕ ನಾಲ್ಕು ಮಾತನಾಡಬೇಕು ಅನ್ನಿಸುತ...
ಹೌದಪ್ಪ ಅಚಿನ್, ನೀನೇ ಹಲಸಿನ ಹಣ್ಣು ತಿಂದದ್ದು ಅಂತ ನನಗೆ, ನಾಯಿ ನಿನ್ನನ್ನು ಹುಡುಕಿಕೊಂಡು ಹೋದಾಗಲೇ ಗೊತ್ತಿತ್ತು. ಯಾಕೆಂದರೆ ನೀನೇ ಪೊಲೀಸರಿಗೆ ನೀಡಿದ ನಾಯಿಯಾದರೂ ಅದು ಇಲಾಖೆ ಸೇರಿದ ಬಳಿಕ ತನ್ನ ಇಲಾಖೆಗೇ ನಿಷ್ಠವಾಗಿರುತ್ತದೆಯೇ ಹೊರತು ಆರೋಪಿಗಳನ್ನುಪತ್ತೆ ಹಚ್ಚುವುದಿಲ್ಲ ಎಂಬುದು ಸರ್ವಸತ್ಯವೇ ಹೌದು. ಆ ದಿನ ರಾತ್ರಿ ನನ್ನ ಸಿಟ್ಟು ಕಮ್ಮಿಯಾದ ಮೇಲೆ ಗುಣಶೀಲ ಕೂಡಾ ನಡೆದ ವಿಷಯವನ್ನೆಲ್ಲ ನನಗೆ ಹೇಳಿದ....
ಹೌದಪ್ಪ, ಒಂದು ಕ್ಷಣ ನನಗೆ ಸಿಟ್ಟು ಬಂದದ್ದು ಹೌದು. ಆದರೆ, ನಂತರ ತಾಳ್ಮೆಯಿಂದ ಯೋಚಿಸಿದಾಗ ನಾನು ದುಡುಕಿದೆ ಅಂತ ಅನಿಸಿತು. ನಾವು ಬದುಕಿನಲ್ಲಿ ಬೇಸರದಲ್ಲೂ, ಸಿಟ್ಟಿನಲ್ಲೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ತೆಗೆದುಕೊಂಡರೂ ಅದು ವಿವೇಚನೆಯಿಂದ ಕೂಡಿರುತ್ತದೆ ಅಂತ ಹೇಳಲಾಗದು. ಸಿಟ್ಟು ಮತ್ತು ಬೇಸರ ಆವರಿಸಿದಾಗ ನಮ್ಮ ಮನಸ್ಸು ತಾರ್ಕಿಕವಾಗಿ ಯೋಚಿಸುವ ಶಕ್ತಿ ಕಳೆದುಕೊಂಡಿರುತ್ತದೆ. ಆ ಸಿಟ್ಟು ನಮ್ಮನ್ನೂ, ನಮ್ಮ ಎದುರುಗಿರುವವರನ್ನೂ ಸುಟ್ಟು ಬಿಡಲೂಬಹುದು. ಹಾಗಾಗಿ, ಅಂತಹ ಸಂದರ್ಭ ನಮ್ಮಷ್ಟಕ್ಕೇ ಸುಮ್ಮನಿರುವುದು ವಾಸಿ....
ಹಸಿದ ನೀನು ನನ್ನ ತೋಟದಲ್ಲಿ ಬೆಳೆದ ಹಲಸು ತಿಂದಾಗ, ಆಯ್ತಪ್ಪ ತಿನ್ನು ಎನ್ನದೇ ಶಿಕ್ಷಿಸಲು ಹೊರಟದ್ದು ನನ್ನ ಸಂಕುಚಿತ ಮನೋಭಾವ ಆಗಬಹುದು ಅಂತ ಬಳಿಕ ಯೋಚಿಸಿದಾಗ ಅರಿವಾಯಿತು. ಹಾಗಾಗಿ, ತಿಂದವ ನೀನೇ ಅಂತ ಗೊತ್ತಿದ್ದರೂ ಏನೂ ಗೊತ್ತಿಲ್ಲದ ಹಾಗೆ ನಟಿಸಿದೆ. ಗುಣಶೀಲ ಕೂಡಾ ಹೇಳಿದ ನಿನ್ನ ಪ್ರಾಮಾಣಿಕತೆ ಬಗ್ಗೆ...
ಇವತ್ತು ನೀನಾಗಿ ವೇದಿಕೆಯಲ್ಲಿ ನೀನು ಮಾಡಿದ್ದನ್ನು ನೇರ ಹೇಳಿದಾಗ,ನಾನು ನಿನ್ನನ್ನು ಕ್ಷಮಿಸಿದ ನಿರ್ಧಾರ ಸರಿ ಅಂತ ನನಗೆ ಅನ್ನಿಸಿತು, ಹೆಮ್ಮೆಯಾಯಿತು. ಶಾಭಾಸ್... ಇಂತಹ ನೇರ ಮಾತು, ನೇರವಾದ ನಡೆ, ನೇರವಾದ ಬದುಕು ನಿನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬಲಿ ಅಂತ ತುಂಬು ಮನಸ್ಸಿನಿಂದ ಹಾರೈಸುತ್ತೇನೆ...
🍈🍈🍈🍈🍈🍈
ಇನ್ನು ಈ ಉದ್ಯಮದಲ್ಲಿ ನಾನು ಸಾಕಷ್ಟು ಏಳುಬೀಳು ಕಂಡಿದ್ದೇನೆ. ನನ್ನ ಆರಂಭದ ದಿನಗಳಲ್ಲಿ, ಈ ತೋಟವನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಕೈಜೋಡಿಸದವರೂ ಕೂಡಾ ನಾನಿಂದು ಒಂದು ಹಂತಕ್ಕೆ ಬಂದು ಜನಪ್ರಿಯನಾಗಿರುವಾಗ ಹಿಂದಿನಿಂದ ಮಾತನಾಡಿಕೊಳ್ಳುತ್ತಿರುವುದು ನನಗೂ ತಿಳಿದಿದೆ.
ನಾವು ದೊಡ್ಡ ಮನುಷ್ಯರೆನಿಸಿಕೊಂಡಾಗ ನಮ್ಮ ದೊಡ್ಡತನ ಮಾತ್ರ ಎಲ್ಲರಿಗೂ ಕಾಣುತ್ತದೆ, ಅಲ್ಲಿ ವರೆಗೆ ತಲುಪುವಲ್ಲಿ ನಾವು ಹಾಕಿದ ಕಣ್ಣೀರು, ಎದುರಿಸಿದ ಕಷ್ಟ, ಅವಮಾನ, ಅಸಹಾಯಕತೆಗಳು ಎಲ್ಲಿಯೂ ಕಾಣಿಸುವುದಿಲ್ಲ. ಹಾಗಾಗಿ ಮೇಲೆ ಬಂದವನಿಗೆ ಮತ್ತು ಆತನ ಆಪ್ತರಿಗೆ ಮಾತ್ರ ಗೊತ್ತಿರುತ್ತದೆ, ಆತನೆಷ್ಟು ಕೆಳಗಿನಿಂದ ಮೇಲೆ ಬಂದಿದ್ದಾನೆ ಅಂತ...
🥦🥦🥦🥦🥦🥦🥦
ಹಲಸು ತುಂಬ ಮೌಲ್ಯ ಇರುವಂಥ ಬೆಳೆ. ಆದರೆ ಜನರಿಗೆ ಬೆಲೆ ಗೊತ್ತಿಲ್ಲ, ತೋಟದಲ್ಲಿ ಬಿದ್ದು ಕೊಳೆತರೂ ಅದಕ್ಕೆ ವಿಲೇವಾರಿ ಮಾಡುವುದಿಲ್ಲ. ಹಲಸಿನಿಂದ ಸಾಕಷ್ಟು ತಿಂಡಿ ತಿನಿಸು ತಯಾರಿಸಬಹುದು, ಹೊರದೇಶಗಳಿಗೆ ರಫ್ತು ಮಾಡಬಹುದು... ನಾವಿದನ್ನೆಲ್ಲ ಅನುಷ್ಠಾನ ಮಾಡಿದಾಗ, ಹಲಸಿನ ಉತ್ಪನ್ನಗಳ ತಯಾರಿಗೆ ಸಾಕಷ್ಟುವ್ಯವಸ್ಥೆ ಕಲ್ಪಿಸಿದಾಗ ಬೆಳೆಗೂ ಬೆಲೆ ಬರುತ್ತದೆ... ಅಂತಹ ಕಾರ್ಯ ಮುಂದೆ ನಿಮ್ಮಂತಹ ಯುವಕರಿಂದ ಆಗಲಿ ಅಂತ ಆಶಿಸುತ್ತೇನೆ. ದಯಕರ ನಾಯಕ್ ಹಳಸಿದ ಹಣ್ಣು ಅಂತ ಹೇಳಿದ್ದು ಹೌದು... ನನಗೂ ಆತಂಕ ಆದದ್ದು ಹೌದು, ಆದರೆ ನೀವೆಲ್ಲ ಅಷ್ಟು ಪ್ರೀತಿಯಿಂದ ಬಾಂಬೆಯಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೀರಿ, ನನ್ನ ಎಲ್ಲ ಚಟುವಟಿಕೆಗಳಿಗೆ ಕೈಜೋಡಿಸುತ್ತೀರಿ, ದಯಕರನ ಭಾಷೆ ತಪ್ಪಿರಬಹುದು, ಆದರೆ, ಭಾವ ತಪ್ಪಿಲ್ಲ, ಆತನ ಮನಸ್ಸಿನಲ್ಲಿರುವ ಪ್ರೀತಿಯನ್ನು ನಾನು ಕಾಣಬಲ್ಲೆ, ನೀವೆಲ್ಲ ನನ್ನ ಕುಟುಂಬದವರ ಹಾಗೆ. ಇವತ್ತು ನನ್ನ ಪಾಲಿಗೆ ತುಂಬ ಸಂತೋಷದ ದಿವಸ, ನಾನೆಂದಿಗೂ ಮರೆಯಲಾರೆ, ಓರ್ವ ಸಾಮಾನ್ಯ ಬೆಳೆಗಾರನಾಗಿದ್ದ ನನ್ನನ್ನು ಗುರುತಿಸಿ, ಸನ್ಮಾನಿಸಿದ್ದಕ್ಕೆ ಧನ್ಯವಾದಗಳು...ಇನ್ನೊಂದು ಪ್ರಮುಖ ಘೋಷಣೆ ಇದೆ, ನನ್ನ ಅಂಗಳದಲ್ಲಿದ್ದ ಮರದಿಂದ ಹಲಸು ತಿಂದು ಜನಪ್ರಿಯನಾದ ಅಚಿನ್ ಹೆಸರನ್ನೇ ನಾನು ಆ ತಳಿಯ ಹಲಸಿಗೆ ಇರಿಸಲು ನಿರ್ಧರಿಸಿದ್ದೇನೆ. ಇನ್ನು ಮುಂದೆ ಆ ತಳಿಯ ಹಲಸಿಗೆ ಅಚಿನ್ ಹಲಸು ಎಂದೇ ಹೆಸರಾಗಲಿ... ಧನ್ಯವಾದಗಳು, *ಜೈ ಕರ್ನಾಟಕ, ಜೈ ಉಳ್ಳಾಲ....
ನಾರಾಯಣರು ಮಾತು ಮುಗಿಸಿ ಮರಳಿದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು...
🧇🧇🧆🧆🍕🍜🍨🍧
ನಂತರ ಭೀಮಾವತಿ ಹಾಗೂ ಭವ್ಯಶ್ರೀ ನೇತೃತ್ವದಲ್ಲಿ ಹಲಸಿನ ವಿವಿಧ ಖಾದ್ಯಗಳ ಊಟವನ್ನು ಎಲ್ಲರಿಗೂ ಹಂಚಲಾಯಿತು. ಹಲಸಿನ ಎಲೆಯ ಪತ್ರಾವಳಿಯ ಬಟ್ಟಲಿನಲ್ಲಿ ಊಟ, ಹಲಸಿನ ಗಂಜಿ, ಹಲಸಿನ ಸಾರು, ಹಲಸಿನ ಕಾಯಿ ಸಾಂಬಾರು, ಹಲಸಿನ ಸಿಪ್ಪೆಯ ಚಟ್ನಿ, ಹಲಸಿನ ಕಾಯಿ ಹಬ್ಬಳ, ಎಳೆ ಹಲಸಿನ ಉಪ್ಪಿನಕಾಯಿ, ಹಲಸಿನ ಹಣ್ಣು ಹಾಕಿದ ಹಲಸು ಮಜ್ಜಿಗೆ, ಹಲಸಿನ ಜಾಮ್ ನಿಂದ ತಯಾರಿಸಿದ ಪಾಯಸ, ಹಲಸಿನ ಹಣ್ಣಿನ ಹೋಳಿಗೆ, ಹಲಸಿನ ಬೀಜದ ಚಿಪ್ಸ್, ಹಲಸಿನ ಪಿಜ್ಜಾ ಊಟಕ್ಕಿದ್ದರೆ, ಊಟದ ಬಳಿಕ ಹಲಸಿನ ಹಣ್ಣಿನ ನ್ಯಾಚುರಲ್ ಐಸ್ ಕ್ರೀಂ, ಹಾಗೂ ಹಲಸಿನ ಬೀಜದ ಹುಡಿಯ ಬೀಡಾದ ವ್ಯವಸ್ಥೆ ಮಾಡಲಾಗಿತ್ತು.... ಯಾರಿಗೂ ಡೌನ್ ಲೋಡ್ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ, ಮುಂಜಾಗ್ರತಾ ಕ್ರಮವಾಗಿ ಮನೆಯ ಟ್ಯಾಂಕ್ ನಲ್ಲಿ ಅಗತ್ಯ ಪ್ರಮಾಣದ ನೀರು ಶೇಖರಿಸಿ ಇಡಲಾಗಿತ್ತು!!!!
........
ಬಳಿಕ ಹಲಸಿನ ಕುರಿತು ಸೇರಿದವರಿಗೆ ಸಣ್ಣ ಪುಟ್ಟ ಆಟಗಳನ್ನು ಅಚಿನ್ ನೇತೃತ್ವದಲ್ಲ ನಡೆಸಲಾಯಿತು. ತೋಟದಲ್ಲಿ ಅಡಗಿಸಿಟ್ಟ ಹಲಸಿನ ಬೀಜ ಹುಡುಕಿ ತರುವುದು, ಗ್ರೀಸ್ ಹಚ್ಚಿದ ಹಲಸಿನಮರಕ್ಕೆ ಹತ್ತುವ ಸ್ಪರ್ಧೆ, ಹಲಸಿನ ಹೋಳಿಗೆ ತಿನ್ನುವ ಸ್ಪರ್ಧೆ, ಹಲಸಿನ ಕುರಿತ ಗಾದೆಗಳನ್ನು ರಚಿಸುವ ಸ್ಪರ್ಧೆ, ಹಲಸಿನ ಬಗ್ಗೆ ಕವನ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗೆದ್ದವರಿಗೆ ಹಲಸಿನ ಮೇಣದ ಚ್ಯೂಯಿಂಗ್ ಗಂ ಬಹುಮಾನವಾಗಿ ಅಚಿನ್ ವತಿಯಿಂದ ನೀಡಲಾಯಿತು....
ಹೊಟ್ಟೆ ತುಂಬ ತಿಂದ ಬಳಿಕ ಮರ ಹತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಜಗನ್ನಾಥ ಮರ ಏರಿ ಇಳಿಯಲಾಗದೆ ಕಿರುಚಿದಾಗ ಏಣಿ ಇರಿಸಿ ಆತನನ್ನು ಇಳಿಸಿ ಪ್ರೋತ್ಸಾಕ ಬಹುಮಾನ ನೀಡಿ ಮನೆಗೆ ಕಳಹಿಸಲಾಯಿತು...!!!!
ಹಲಸಿನ ಬಗ್ಗೆ ಗಾದೆಗಳನ್ನು ರಚಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಫಮ್ಮರ್ ಉರೂಕ್ ರಚಿಸಿದ ಕೆಲವು ಸ್ಯಾಂಪಲ್ ಗಳು ಹೀಗಿದ್ದವು...
1) ಪೆಲತ್ತರಿ ಚಿಕ್ಕದಾದರೂ ಹಲಸು ದೊಡ್ಡದು!
2) ಕಣ್ಣಾರೆ ಕಂಡರೂ ತಿಂದು ನೋಡು
3) ಕೊಳೆತ ಹಲಸು ಕಪ್ಪಾದರೂ, ಕೊಳೆಯದ ಹಲಸು ಹಳದಿಯೇ
4) ಕೂತು ಹಲಸು ತಿನ್ನುವವನಿಗೆ ಒಂದು ಚಮಚ ಎಣ್ಣೆ ಸಾಲದು
5) ಹಲಸು ತಿಂದವರು ಕೈ ತೊಳೆಯಲೇ ಬೇಕು!
ಕವನ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಗೀರಥ ಅವರ ಕವನ ಹೀಗಿತ್ತು:
ಹಲಸು-ಸೊಗಸು
....
ಅಂದು ನಾನು ಕಂಡ ಹಲಸು
ಹುಲುಸಾಗಿ,
ಸೊಗಸಾಗಿ ಬೆಳೆದು ನಿಂತಾಗ
ಬಳಿ ಬಂದು,
ಕೊಯ್ದು ಬಿಡಿಸಿ ತಿಂದಾಗ
ಮನತುಂಬಿ
ಮನೆಗೆ ತಂದು
ಅತಿಯಾಗಿ ತಿಂದಾಗ
ಹೊಟ್ಟೆಯೊಳಗೇನೋ ಗುಡುಗುಡು!
………………..
ಹೋಳಿಗೆ ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿನುತಾ ಶೆಟ್ಟಿಗೆ ಸ್ವತಃ ಹೋಳಿಗೆ ತಯಾರಿಕೆಯಲ್ಲಿ ಪರಿಣತನಾದ ನವನವೀನ ಶೆಟ್ಟಿ ವತಿಯಿಂದ ಹೋಳಿಗೆಗಳ ಪ್ಯಾಕೆಟ್ ಪ್ರೋತ್ಸಾಹಕ ಬಹುಮಾನವಾಗಿ ನೀಡಲಾಯಿತು...
................
ಸಭೆ, ಗಮ್ಮತ್ತು ಮುಗಿದಾಗ ಕತ್ತಲಾಗಿತ್ತು... ಎಲ್ಲ ವ್ಯವಸ್ಥೆ ಮುಗಿದ ಬಳಿಕ ಅಚಿನ್ ಮತ್ತು ಗುಣಶೀಲ ಕಾಲು ದಾರಿಯಲ್ಲಿ ಮನೆಯತ್ತ ಹೊರಟರು... ರಾತ್ರಿ 7 ಆಗಿತ್ತು.. ಬದಿಯ ಹಲಸಿನ ಮರದ ಮರೆಯಿಂದ ಮುಖಕ್ಕೆ ಮುಸುಕು ಹಾಕಿದ ಓರ್ವ ವ್ಯಕ್ತಿ ಎದುರು ಬಂದು ನಿಂತ...
ಗಾಬರಿಯಿಂದ ಇಬ್ಬರೂ ಹಿಂದೆ ತಿರುಗಿದಾಗ ಕೈಯ್ಯಲ್ಲಿ ಸೈಕಲ್ ಚೈನ್ ಹಾಗೂ ದೊಣ್ಣೆ ಹಿಡಿದ ಇನ್ನಿಬ್ಬರು ದೊಡ್ಡ ಹಲಸಿನ ಮರದಿಂದ ಹಾರಿ ಇವರನ್ನೇ ನೋಡತೊಡಗಿದರು. ಸಿನಿಮಾದಲ್ಲಿ ಮಾತ್ರ ಫೈಟಿಂಗ್ ನೋಡಿ ಗೊತ್ತಿದ್ದ ಇಬ್ಬರದ್ದೂ ಕಾಲೂ ನಡುಗತೊಡಗಿತು...
ಪಕ್ಕದ ಮರದಿಂದ ಗೂಬೆಯೊಂದು ವಿಕಾರವಾಗಿ ಕೂಗುತ್ತಿತ್ತು... ಎದುರಿನ ಮುಸುಕುಧಾರಿ ವ್ಯಕ್ತಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹತ್ತಿರ ಬರತೊಡಗಿದ....
-----------------
ಜಗನ್ನಾಥ ಸಮುದ್ರಕ್ಕೆ ಹಾರಿದ್ದು ಯಾಕೆ ?
ಎದುರಿದ್ದ ಗುಣಶೀಲ ಹಾಗೂ ಆತನ ಹಿಂದೆ ನಡುಗುತ್ತಾ ನಿಂತಿದ್ದ ಅಚಿನ್ ಇಬ್ಬರಿಗೂ ಇಂತಹ ಅನುಭವ ಹೊಸತು. ಏನು ಮಾಡಬೇಕು ಅಂತಲೇ ಗೊತ್ತಾಗಲಿಲ್ಲ. ಅಷ್ಟುಹೊತ್ತಿಗೆ ಎದುರಿಗಿದ್ದ ಮುಸುಕುಧಾರಿ ಹತ್ತಿರ ಬಂದಾಗಿತ್ತು. ಆತ ಡರೋನಾ 20 ನಿವಾರಣೆಗೆ ಬಳಸುವ ಮಾಸ್ಕ್ ಧರಿಸಿದ್ದ, ತಲೆಗೆ ಶಾಲು ಸುತ್ತಿದ್ದ, ಹಾಗಾಗಿ ಯಾರೆಂದು ತಿಳಿಯುತ್ತಿರಲಿಲ್ಲ. ಇನ್ನಿಬ್ಬರು ಮರದಿಂದ ಹಾರಿದವರು ಹತ್ತಿರ ಬರುತ್ತಿದ್ದರು....
ತಕ್ಷಣ ಕಣ್ಣು ಮುಚ್ಚಿ ಏಕಾಗ್ರತೆ ತಂದುಕೊಂಡ ಗುಣಶೀಲನ ತಲೆಯಲ್ಲಿ ಸಿನಿಮಾಗಳಲ್ಲಿ ತಾನು ನೋಡಿದ್ದ ಹೊಡೆದಾಟದ ದೃಶ್ಯಗಳು ನೆನಪಾಗತೊಡಗಿದವು. ತಾವೀಗ ಹೊಡೆದಾಡದಿದ್ದರೆ ಉಳಿಗಾಲವಿಲ್ಲ ಎಂದು ಅರಿತ ಗುಣಶೀಲ ತನ್ನೆಲ್ಲ ಬಲವನ್ನು ಒಟ್ಟುಗೂಡಿಸಿ ಝಾಡಿಸಿ (ಎದುರಿಗೆ ತುಳಿಯುವ ಬದಲು, ಅರ್ಜೆಂಟಲ್ಲಿ) ಹಿಂಭಾಗಕ್ಕೆ ಒದ್ದ....
“ಓ, ದಾನೆಂಬೆ ಮೂಜಿಕಾಸ್ದಾಯ... ಕೆರ್ಪಾನ...”
ಹಿಂದಿನಿಂದ ಅಚಿನ್ ಕಿರುಚಾಟ ಕೇಳಿದಾಗಲೇ ಗುಣಶೀಲನಿಗೆ ಗೊತ್ತಾದ್ದು, ತಾನು ನರ್ವಸ್ ಆಗಿ ಅರ್ಜಂಟಲ್ಲಿ ತುಳಿದದ್ದು ಅಚಿನ್ ಹೊಟ್ಟೆಗೆ ಅಂತ... ಪುಣ್ಯಕ್ಕೆ ಅಚಿನ್ ಗೆ ಹೆಚ್ಚಿನ ಪೆಟ್ಟಾಗಲಿಲ್ಲ....
ತನ್ನೆಲ್ಲ ಬಲವನ್ನು ಒಟ್ಟುಸೇರಿಸಿ ಗುಣಶೀಲ... ಜೋರಾಗಿ ಕಿರುಚುತ್ತಾ ಎದುರಿನ ಮುಸುಕುಧಾರಿಯ ಎದೆಗೆ ಹಾರಿ ಒದೆಯಲು ಹೋದ, ಮುಸುಕುಧಾರಿ ಪಕ್ಕಕ್ಕೆ ಸರಿದಾಗ ಹೋಗಿ ಮಣ್ಣಿನ ರಾಶಿ ಮೇಲೆ ಬಿದ್ದ, ಮೈಯೆಲ್ಲ ಹುಡಿಹುಡಿಯಾದ ಅನುಭವ.... ಸಿನಿಮಾದಲ್ಲಿ ತೋರಿಸುವ ಫೈಟಿಂಗ್ ದೃಶ್ಯಗಳು ನಡೆಯುವಂಥಹ ಮರದ ತೋಪಿನ ನಡುವಿನ ತರಗೆಲೆಗಳು ಇದ್ದ ಜಾಗ ಅದಾಗಿದ್ದರಿಂದ, ಬಿದ್ದರೂ ನೋವಾಗುವಂತಿರಲಿಲ್ಲ....
ಅಷ್ಟೊತ್ತಿಗೆ.... ಅಚಿನ್ ಕೂಡಾ ಹೋಗಿ ಎದುರಿನ ಮುಸುಕುಧಾರಿಯ ಸೊಂಟಕ್ಕೆ ಒದ್ದ... ಮುಸುಕುಧಾರಿ ನೆಲಕ್ಕುರುಳಿದ... ಆಗ ಹಿಂದಿದ್ದವರು ವೇಗವಾಗಿ ಬಂದು ಅಚಿನ್ ನ್ನು ಎರಡು ಕೈಗಳಲ್ಲಿ ಹಿಡಿದುಕೊಂಡರು... ಮೂರನೆಯವ ಕೈಯ್ಯಲ್ಲಿದ್ದ ಹಾಕಿ ಸ್ಟಿಕ್ಕಿನಿಂದ ಅಚಿನ್ ಮೊಣಕಾಲಿಗೆ ಹೊಡೆದ.. ಜೋರಾಗಿ ಕಿರುಚಿದ ಅಚಿನ್. ಅಷ್ಟೊತ್ತಿಗೆ ಭಯದಿಂದ ಸಮೀಪದಲ್ಲಿದ್ದ ಹಲಸಿನ ಮರ ಏರಿದ್ದ ಗುಣಶೀಲ, ಅಲ್ಲಿ ಹಣ್ಣಾಗಿದ್ದ ಹಲಸಿನ ಹಣ್ಣನ್ನುಬಿಚ್ಚಿ ಅದರಿಂದ ಪೆಲತ್ತರಿ (ಹಲಸಿನ ಬೀಜ) ತೆಗೆದು ಒಂದೊಂದೇ ಬೀಜಗಳನ್ನು ದುಷ್ಕರ್ಮಿಗಳ ತಲೆಗೆ ಎಸೆಯತೊಡಗಿದ... ಕತ್ತಲಿನಲ್ಲಿ ಗುಣಶೀಲನನ್ನು ಕಾಣದ ದುಷ್ಕರ್ಮಿಗಳು ಹಲಸಿನ ಬೀಜದ ಏಟು ತಾಳಲಾರದೆ, ಅಚಿನ್ ನ್ನು ಬಿಟ್ಟುರು... ಅಚಿನ್ ತಕ್ಷಣ ಒಂದು ಮರದ ಹಿಂದೆ ಹೋಗಿ ಅವಿತುಕೊಂಡ...
“ಎಲ್ಲಿದ್ದೀರ ಹೇಡಿಗಳಾ... ಮುಂದೆ ಬನ್ನಿ...” ಮೂವರ ಪೈಕಿ ಎತ್ತರದ ವ್ಯಕ್ತಿ ಘರ್ಜಿಸಿತು... ಈ ಧ್ವನಿಯನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಅಂತ ಮರದ ಮೇಲಿದ್ದ ಗುಣಶೀಲನಿಗೆ ಅನ್ನಿಸಿತು...
ತಾನು ಹೆಚ್ಚು ಹೊತ್ತು ಮರದ ಮೇಲೆಯೇ ಕುಳಿತಿರುವಂತಿಲ್ಲ, ಕೆಳಗೆ ಸಿಕ್ಕಿಹಾಕಿಕೊಂಡಿರುವ ಅಚಿನ್ ಗೆ ತೊಂದರೆ ಆದರೆ ಕಷ್ಟ... ಅದಕ್ಕಾಗಿ ಏನಾದರೂ ಮಾಡಬೇಕು ಅಂತ ತೀರ್ಮಾನಿಸಿದ ಗುಣಶೀಲ. ಒಂದು ಉಪಾಯ ಹೊಳೆಯಿತು... ತುಂಬ ಹಣ್ಣಾಗಿ ಕೊಳೆತ ಹಲಸಿನ ಹಣ್ಣನ್ನು ಕೊಯ್ದು ನಿಶ್ಯಬ್ಧವಾಗಿ ಮರದಿಂದ ಇಳಿದು... ಹಿಂದಿನಿಂದಹೋಗಿ ಎತ್ತರದವನ ತಲೆಗೆ ಪ್ಲಾಸ್ಟಿಕ್ ಕವರ್ ಹಾಕಿದ ಹಾಗೆ ಹಲಸಿನ ಹಣ್ಣನ್ನು ಕುಕ್ಕಿದ... ಹಲಸಿನ ಹಣ್ಣು ದುಷ್ಕರ್ಮಿಯ ತಲೆಯಲ್ಲಿ ಫಿಕ್ಸ್ ಆಗಿ... ಆತನಿಗೆ ಉಸಿರು ಕಟ್ಟತೊಡಗಿತು...
ನಂತರ ಸಿನಿಮಾದಲ್ಲಿ ಮಾಡುವ ಹಾಗೆ, ಎದುರುಬಂದ ಅಚಿನ್ ಹಾಗೂ ಗುಣಶೀಲಾ ಇಬ್ಬರೂ ಟೈಗರ್ ಪ್ರಭಾಕರ್ ಶೈಲಿಯಲ್ಲಿ ಕರಾಟೆಯ ಸ್ಟೈಲಿನಲ್ಲಿ ಪೋಸ್ ಕೊಟ್ಟು “ಬನ್ನಿ... ಫೈಟಿಂಗಿಗೆ” ಅನ್ನುವ ಥರ ಪೋಸ್ ಕೊಟ್ಟರು. (ಇಬ್ಬರಿಗೂ ಕರಾಟೆಯನ್ನು ಸಿನಿಮಾದಲ್ಲಿ ಮಾತ್ರ ನೋಡಿ ಗೊತ್ತಿತ್ತು)....
🤼♀️🤼♀️🤼♀️🤼♀️🤼
ಇತ್ತ ಉಸಿರು ಕಟ್ಟಿ ಒದ್ದಾಡುತ್ತಿದ್ದ ದುಷ್ಕರ್ಮಿಯ ತಲೆಯಿಂದ ಹಲಸಿನ ಹಣ್ಣನ್ನು ಇತರ ಇಬ್ಬರೂ ಸೇರಿ ಕಷ್ಟಪಟ್ಟು ತೆಗೆದರು... ತೆಗೆಯುವಾಗ ಆತನ ಮಾಸ್ಕ್ ಕಳಚಿಕೊಂಡಿತು... ಅದು ಮತ್ಯಾರೂ ಅಲ್ಲ, ಸತ್ಯನಾರಾಯಣ!!!!
ನಾರಾಯಣರ ದೊಡ್ಡ ಮಗ... ಜೊತೆಗಿದ್ದವರಿಬ್ಬರೂ ಆತನ ತಮ್ಮಂದಿರು... “ಹೌದು ಕಣೋ, ಇದು ನಾನೇ ಸತ್ಯನಾರಾಯಣ...”
ಸತ್ಯನಾರಾಯಣ ಮಾತು ಮುಂದುವರಿಸಿದ.... “ಏನ್ರೋ ಪರದೇಶಿಗಳ, ನಮ್ಮ ಅಪ್ಪನನ್ನು ಮರುಳು ಮಾಡಿ, ಅವರ ಆಸ್ತಿ ಕಬಳಿಸಲು ಹೊಂಚು ಹಾಕುತ್ತಿದ್ದೀರ....? ಯಾರ್ರೋ ನೀವು? ನಿಮ್ಗೇನ್ರೋ ಸಂಬಂಧ? ನ್ಯಾಯವಾಗಿ ನಮಗೆ ಬರಬೇಕಾದ ಆಸ್ತಿ ಈ ಹಲಸಿನ ತೋಟ... ನೀವು ಅತಿ ವಿನಯ ತೋರಿಸಿ ಅದನ್ನು ವಶಪಡಿಸಿಕೊಳ್ತಾ ಇದ್ದೀರ, ನಮ್ಮ ಅಪ್ಪ ನಿನ್ನ ಹೆಸರಿಗೆ ಒಂದು ತೋಟವನ್ನೇ ಬರೆದುಕೊಟ್ಟಿದ್ದಾರೆ. ಇನ್ನು ಒಂದೊಂದೇ ತೋಟವನ್ನು ನಿನಗೇ ಬರೆದು ಕೊಡ್ತಾ ಹೋದರೆ, ನಾರಾಯಣರ ಮಕ್ಕಳಾದ ನಮಗೇನಿದೆ...? ಅದಕ್ಕೇ ಒಂದು ನಿರ್ಧಾರಕ್ಕೆ ಬಂದಿದ್ದೇವೆ... ಇವತ್ತು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ. ಏನು ಬೇಕಾದರೂ ಆಗಲಿ....”
🥊🥊🥊🥊🥊🥊
ಅವರ ಮಾತು ಮುಗಿಯುವ ಮೊದಲೇ ಕೋಪದಿಂದ ಅಚಿನ್ ವೇಗವಾಗಿ ಘರ್ಜಿಸುತ್ತಾ ಹೋಗಿ ಸತ್ಯನಾರಾಯಣನನ್ನು ನೂಕಿ ಹಾಕಲು ಪ್ರಯತ್ನಿಸಿದ. ಕುಳ್ಳ ಅಚಿನ್ ನನ್ನು ಬಲವಾಗಿ ಹಿಡಿದುಕೊಂಡ ಸತ್ಯನಾರಾಯಣ. ತಮ್ಮಂದಿರು ದೊಡ್ಡ ಬಡಿಗೆಯಿಂದ ಅಚಿನ್ ತಲೆಗೆ ಬಡಿದಾಗ ಅಚಿನ್ ಅಲ್ಲೇ ಕುಸಿದು ಹೋದ... ನಂತರ ಉಳಿದವನು ಗುಣಶೀಲ...
🙏🙏🙏🙏🙏
ಗುಣಶೀಲ ಕೈಮುಗಿದು ಹೇಳಿದ... “ನೋಡಪ್ಪ ಸತ್ಯನಾರಾಯಣ, ಸಣ್ಣವರಾಗಿದ್ದಾಗಿನಿಂದ ಒಟ್ಟಿಗೇ ಬೆಳೆದವರು ನಾವು. ನಿನಗೆ ಗೊತ್ತಲ್ಲ, ನಾನು ಹೇಗೆಂದು. ನಾರಾಯಣ ಅಂಕಲ್ ಮೇಲಿನ ಪ್ರೀತಿಯಿಂದ ಅವರ ಜೊತೆಗಿದ್ದೇನೆಯೇ ಹೊರತು, ಅವರ ಮಕ್ಕಳಾದ ನಿಮಗೆ ಉಪದ್ರ ಮಾಡುವ ಉದ್ದೇಶದಿಂದಲ್ಲ. ಮತ್ತೆ, ಆಸ್ತಿಯನ್ನು ನಾನು ಕೇಳಿ ಅವರು ಕೊಟ್ಟದ್ದಲ್ಲ, ಅವರಾಗೇ ಕೊಟ್ಟದ್ದು. ನೀವೇ ಅವರ ಜೊತೆ ಮಾತನಾಡಿ ಸರಿ ಮಾಡಿಕೊಳ್ಳಿ, ನನಗೆ ಯಾಕೆ ಹೊಡೆಯುತ್ತೀರಿ...?” ಅಷ್ಟು ಹೇಳಿದ್ದೇ ತಡ, “ಹೋಗೋ... ನೀನೇ ಹೋಗಿ ನಮ್ಮ ಅಪ್ಪನತ್ರ ಹೇಳಬೇಕು ನನಗೆ ಆಸ್ತಿ ಬೇಡ ಅಂತ... ಅಲ್ಲಿಯವರೆಗೆ ಬಿಡುವುದಿಲ್ಲ” ಅನ್ನುತ್ತಾ ಗುಣಶೀಲನಿಗೆ ಜೋರಾಗಿ ಬಡಿಗೆಯಿಂದ ಹೊಡೆಯತೊಡಗಿದರು...
“ಢಂ...............”
🔫🔫🔫🔫
ಅಷ್ಟರಲ್ಲಿ ದೊಡ್ಡದಾಗಿ ಬಂದೂಕಿನ ಸದ್ದು ಕೇಳಿಸಿತು... ಮರದ ಮೇಲಿನ ಬಾವಲಿ, ಗೂಬೆಗಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದವು...!!!
ಮೂವರು ಮಕ್ಕಳು ಹಾಗೂ ಗುಣಶೀಲ... ಸದ್ದು ಬಂದತ್ತ ನೋಡಿದಾಗ ಅಲ್ಲಿ ನಾರಾಯಣರು ಬಂದೂಕು ಹಿಡಿದು ನಿಂತಿದ್ದರು! ಅವರು ಗಲಾಟೆ ನಿಲ್ಲಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು.
🔫🔫🔫🔫🔫🔫
ವಿಷಾದದ ಹೆಜ್ಜೆ ಹಾಕುತ್ತಾ ಮುಂದೆ ಬಂದ ನಾರಾಯಣರು ಮಾತನಾಡತೊಡಗಿದರು...
😥😥😥😥😥
“ಓ ದೇವರೇ, ನನ್ನ ಬದುಕಿನಲ್ಲಿ ಯಾವತ್ತೂ ನಾನು ಇಂತಹ ದಿನ ನೋಡುತ್ತೇನೆ ಅಂತ ಭಾವಿಸಿರಲಿಲ್ಲ. ಇದೇನಾಗಿ ಹೋಯಿತು... ನನ್ನ ಮಕ್ಕಳು ಇಷ್ಟು ಕೆಟ್ಟವರಾಗಿ ಹೋದರಾ? ತುಂಡು ಭೂಮಿಗಾಗಿ ಚಿಕ್ಕಂದಿನಿಂದಲೇ ನೋಡುತ್ತಾ ಬಂದ ಓರಗೆಯವನನ್ನು ಕೊಲ್ಲಲು ಹೋಗುವುದಾ...? ಇದೇನಾ ನಾನು ನಿಮಗೆ ಕಲಿಸಿದ ಸಂಸ್ಕಾರ...? ಅಷ್ಟಕ್ಕೂ ಈ ವಿಚಾರದಲ್ಲಿ ಆ ಹುಡುಗರ ತಪ್ಪೇನಿದೆಯಪ್ಪ... ಅವರೇನು ನನ್ನತ್ರ ಕೇಳಿದ್ರಾ ಆಸ್ತಿ ಕೊಡಿ ಅಂತ... ಅಷ್ಟೇ ಅಲ್ಲ.. ಇಷ್ಟು ವಿಶಾಲ ಭೂಮಿಯನ್ನು ಕಷ್ಟಪಟ್ಟು ಅಭಿವೃದ್ಧಿ ಮಾಡಿ ಇವತ್ತು ಈ ಸ್ಥಿತಿಗೆ ತಂದದ್ದು ಯಾರು? ನಾನು, ನನ್ನ ಸ್ವಯಾರ್ಜಿತ ಇದು. ನಿಮಗೆ ಒಂದಿಂಚೂ ಭೂಮಿ ಕೊಡದೇ ಇರಬಹುದಿತ್ತು ನಾನು. ಆದರೆ ಹಾಗೆ ಮಾಡಲಿಲ್ಲ.... ನಿಮಗೂ ಆಸ್ತಿ ಇರಿಸಿದ್ದೇನೆ. ಆದರೆ, ನಿಮ್ಮ ಬೇಜವಾಬ್ದಾರಿ ಬದುಕು, ಕೃಷಿಯ ಕುರಿತ ನಿಮ್ಮ ಕಡೆಗಣನೆ ನೋಡಿ ಬೇಸರವಾಗಿ, ನನ್ನ ನಂತರಕ್ಕೆ ಈ ಹಲಸಿನ ತೋಟ ಹಾಳಾಗಬಾರದು ಅಂತ ಅವನಿಗೊಂದು ಪುಟ್ಟತೋಟ ಬರೆದು ಕೊಟ್ಟೆ... ಈಗ ಆ ದೇವರಂಥ ಮನುಷ್ಯನನ್ನು ಕೊಲ್ಲಲು ಹೊರಟಿದ್ದೀರಲ್ಲೋ ಪಾಪಿಗಳಾ.. ನಾನು ಇನ್ನೇನು ಕಾಣಬೇಕೋ ಈ ಬದುಕಿನಲ್ಲಿ....”
ನಾರಾಯಣರ ಕಣ್ಣಿನಿಂದ ಧಾರಾಕಾರವಾಗಿ ನೀರು ಇಳಿಯತೊಡಗಿತು... ಅಷ್ಟರಲ್ಲಿ ಬಂದೂಕಿನ ಸದ್ದು ಕೇಳಿ ಮನೆಯಿಂದ ಓಡಿ ಬಂದ ಡ್ರೈವರ್ ಸಿಂಪತಿ ಆಳ್ವ... ಹೋಗಿ ಕೈರಂಗಳದ ಜಗನ್ನಾಥನಿಗೆ ಅಲ್ಲಿಗೆ ಬರಲು ಕರೆ ಮಾಡಿ ತಿಳಿಸಿದ....
ನಾರಾಯಣರು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮೌನವಾದರು, ಬಂದೂಕು ಕೈಯ್ಯಲ್ಲೇ ಇತ್ತು.... ಅವರ ಮೂರೂ ಮಕ್ಕಳಿಗೆ ಒಂದಕ್ಷರ ಮಾತನಾಡುವಾ ಧೈರ್ಯ ಇರಲಿಲ್ಲ... ಅಚಿನ್ ಮೂರ್ಛಾಗತನಾಗಿದ್ದ, ಗುಣಶೀಲ ನೆಲದಲ್ಲಿ ಕುಳಿತು ನೋವಿನಿಂದ ಕಂಗಾಲಾಗಿದ್ದ... ನಾರಾಯಣರು ಮಾತು ಮುಂದುವರಿಸಿದರು..
“ಸಾಕಪ್ಪ, ಈ ಬದುಕು ಸಾಕು ನನಗೆ. ನಾನು ಸತ್ತ ಮೇಲೂ ನೀವು ಈ ಇಬ್ಬರು ಹುಡುಗರನ್ನು ಕೊಲ್ಲದೇ ಬಿಡುವುದಿಲ್ಲ ಅಂತ ನನಗಿಂದು ಖಾತರಿ ಆಯ್ತು... ನನ್ನ ಈ ಕೃಷಿ, ಹಸಿರಿನ ಕುರಿತ ನನಗಿದ್ದ ಅಕ್ಕರೆ, ಯಾವುದೂ ನಿಮಗಿಲ್ಲ. ನಾನು ಸತ್ತ ನಂತರ ನೀವು ಈ ಮರಗಳನ್ನು ಕಡಿದು ಮಾರಿ ಗುಂಡಾಂತರ ಮಾಡುವಿರಿ.... ನಿಮಗೆ ಇದು ಯಾವುದರ ಬೆಲೆ ಗೊತ್ತಿಲ್ಲ, ದುಡ್ಡಿನ ಅಮಲು ಹಿಡಿದಿದೆ ನಿಮಗೆ, ಮನುಷ್ಯತ್ವದ ಬೆಲೆ ಗೊತ್ತಿಲ್ಲ, ಆಸ್ತಿಗಾಗಿ ಕೊಲೆ ಮಾಡಲು ಮುಂದಾಗುತ್ತೀರ... ಸಾಕು ಸಾಕು ಈ ಬದುಕು ನನಗೆ, ನನಗಿನ್ನೂ ಯಾವುದನ್ನು ನೋಡಬೇಕಾಗಿಲ್ಲ, ಆಗ ಮಧ್ಯಾಹ್ನ ನನಗೆ ಎಲ್ಲ ಸೇರಿ ಸನ್ಮಾನ ಮಾಡಿದರು... ಈಗ ನೀವು ಮಕ್ಕಳು ಸೇರಿ ನನ್ನ ತಲೆಯನ್ನೇ ಕಡಿದಿರಿ.... ಸಾಕಪ್ಪಾ ಸಾಕು.... ಒಂದು ನೆನಪಿಟ್ಟುಕೊಳ್ಳಿ ಪಾಪಿಗಳಾ... ದುಡ್ಡು ಶಾಶ್ವತ ಅಲ್ಲ, ಪ್ರೀತಿ ವಿಶ್ವಾಸ ಶಾಶ್ವತ. ದುಡ್ಡನ್ನು ಪುನಃ ಸಂಪಾದಿಸಬಹುದು. ಆದರೆ, ಕಳೆದುಕೊಂಡ ವಿಶ್ವಾಸ, ನಂಬಿಕೆ ಪುನಃ ಸಂಪಾದಿಸಲು ಕಷ್ಟ.... ದುಡ್ಡಿನಾಸೆಗೆ ಇವರನ್ನು ಕೊಂದು ಯಾವ ನರಕಕ್ಕೆ ಹೋಗ್ತೀರಿ... ನನ್ನ ಇಷ್ಟು ದಿನದ ನಂಬಿಕೆ, ಧ್ಯೇಯ, ನಿಷ್ಠೆಗಳನ್ನು ಹಾಳು ಮಾಡಿಬಿಟ್ಟಿರಲ್ಲಾ... ಇದು ಇಂದಿಗೇ ಕೊನೆಯಾಗಲಿ, ನಿಮ್ಮನ್ನು ತಡೆಯುವ ತ್ರಾಣ ನನ್ನ ದೇಹದಲ್ಲಿಲ್ಲ, ನಿಮಗೆ ಬೇಕಾದ್ದು ಮಾಡಿಕೊಳ್ಳಿ... ಅವರ ಹಣೆಯಲ್ಲಿ ಬದುಕಬೇಕು ಅಂತ ಬರೆದಿದ್ರೆ ಆ ಹುಡುಗರು ಬದುಕಿಯಾರು... ನನಗಿನ್ನು ಬದುಕುವ ಆಸೆ ಉಳಿದಿಲ್ಲ, ಮರ್ಯಾದೆ ಕಳೆದುಕೊಂಡ ಬದುಕು ಬದುಕೇ ಅಲ್ಲ.....”
🎯🎯🎯🎯🎯🎯
ಮಾತು ಮುಗಿಸಿದ ನಾರಾಯಣರು ಬಂದೂಕು ಬಿಸಾಕಿ ನೇರವಾಗಿ ಸೋಮೇಶ್ವರದತ್ತ ನಡೆಯತೊಡಗಿದರು... ಯಾರಿಗೂ ಅವರನ್ನು ತಡೆಯುವ ಧೈರ್ಯ ಬರಲಿಲ್ಲ... ಅಷ್ಟೊತ್ತಿಗೆ ಅಲ್ಲಿಗೆ ತಲುಪಿದ ಜಗನ್ನಾಥ ಸಹಿತ ಎಲ್ಲರೂ ಅವರ ಹಿಂದೆಯೇ ಟಾರ್ಚ್ ಹಿಡಿದುಕೊಂಡು ಹೊರಟರು.. ಯಾವುದೋ ವಶೀಕರಣಕ್ಕೆ ಒಳಗಾದಂತೆ ನಾರಾಯಣರು ಗಂಟೆಗೆ 40 ಕಿ.ಮೀ. ವೇಗದಲ್ಲಿ ನಡೆಯುತ್ತಾ ಹೋಗಿ ಸೋಮೇಶ್ವರದ ರುದ್ರಪಾದೆ ಏರಿದರು. ಅಷ್ಟೊತ್ತಿಗೆ ರಾತ್ರಿ 8 ಗಂಟೆ ತಣ್ಣನೆ ಗಾಳಿ ಬೀಸುತ್ತಿತ್ತು... ಬಾಕಿದ್ದವರೆಲ್ಲ ಬಂಡೆಯ ಹತ್ತಿರ ತಲಪುವಷ್ಟರಲ್ಲಿ ಆಕಾಶ ನೋಡಿ ಕೈಮುಗಿದ ನಾರಾಯಣರು ನೇರವಾಗಿ ಸಮುದ್ರದೊಳಗೆ ಜಿಗಿದರು....!!!!!
ಜಗನ್ನಾಥ, ಸಿಂಪತಿ ಆಳ್ವಹಾಗೂ ಕೆಲಸದವರು ಬಂಡೆಯ ತುದಿಗೆ ತಲಪುವಷ್ಟರಲ್ಲಿ ಕೆಳಗೆ ಅಬ್ಬರದ ತೆರೆಯ ಸುಳಿಯೊಳಗೆ ನಾರಾಯಣರ ದೇಹ ಹಾರಿ ಹಾರಿ ಮುಳುಗುತ್ತಿತ್ತು.... ಹಿಂದೆ ಮುಂದೆ ನೋಡದೆ ಜಗನ್ನಾಥ ನೇರ ಸಮುದ್ರಕ್ಕೆ ಧುಮುಕಿದ....
🏊♀️🏊♀️🏊♀️🏊♀️🏊♀️🏊♀️🏊♀️
ಈಜು ಪರಿಣಿತ ಜಗನ್ನಾಥ ಇನ್ನೇನು ಹೋಗಿ ನಾರಾಯಣರನ್ನು ಹಿಡಿದು ಎಳೆಯಬೇಕು ಅನ್ನುವಷ್ಟರಲ್ಲಿ ಅವರ ದೇಹ ನೀರಿನೊಳಗೆ ಮುಳುಗತೊಡಗಿತು... ಜಗನ್ನಾಥನೂ ಉಸಿರು ಬಿಗಿ ಹಿಡಿದು ನೀರಿನಾಳಕ್ಕೆ ಇಳಿಯತೊಡಗಿದ.... ಎಷ್ಟೇ ಪ್ರಯತ್ನಿಸಿದರೂ ಒಂದು ಅಡಿ ದೂರದಲ್ಲಿದ್ದ ನಾರಾಯಣರ ದೇಹ ಆತನ ಕೈಗೆ ಸಿಗುತ್ತಲೇ ಇರಲಿಲ್ಲ... ಅಷ್ಟರಲ್ಲಿ ಯಾವುದೋ ಅವ್ಯಕ್ತಿ ಶಕ್ತಿ ಜಗನ್ನಾಥನನ್ನು ಬಲವಾಗಿ ಸಮುದ್ರದಾಳಕ್ಕೆ ಎಳೆಯತೊಡಗಿತು... ಏನು ಮಾಡಬೇಕೆಂದೇ ತೋಚದೆ ಜಗನ್ನಾಥ ಪ್ರಾಣದಾಸೆಯನ್ನೇ ಬಿಟ್ಟು ನಿಧಾನಕ್ಕೆ ಕಣ್ಣು ಮುಚ್ಚತೊಡಗಿದ....
!!!!!!!
---------------
ಜಗನ್ನಾಥನ ಕಿವಿಯಲ್ಲಿ ಅನುರಣಿಸಿದ ಧ್ವನಿ ಏನು ?
ನೀರಿನಾಳಕ್ಕೆ ರಭಸವಾಗಿ ಸೆಳೆಯಲ್ಪಟ್ಟ ಜಗನ್ನಾಥನಿಗೆ ತಾನೀಗ ಸತ್ತೇ ಹೋಗುತ್ತೇನೆ ಅಂತ ಅನ್ನಿಸತೊಡಗಿತು. ಕೊನೆಯ ಪ್ರಯತ್ನವಾಗಿ ಜೋರಾಗಿ...
"ಅಮ್ಮಾ... ಕಾಪಾಡಿ..." ಅಂತ ಕೂಗಿಕೊಂಡ....
ಅಷ್ಟೊತ್ತಿಗೆ ಧಡಕ್ಕನೆ ಎಚ್ಚರವಾಯಿತು ಜಗ್ಗನಿಗೆ ... ಮೈತುಂಬ ಬೆವರು...ಸುತ್ತ ನೋಡಿದರೆ ತಾನು ಮಂಚದ ಕೆಳಗಿದ್ದೇನೆ, ಮೇಲೆ ಫ್ಯಾನ್ ತಿರುಗುತ್ತಿದೆ... ನೀರು ಇಲ್ಲ, ಸಮುದ್ರವೂ ಇಲ್ಲ, ಪಕ್ಕದಲ್ಲಿ ನಾರಾಯಣರ ದೇಹವೂ ಇಲ್ಲ...!!!!!
ಏನೆಂದೇ ಅರ್ಥವಾಗಲಿಲ್ಲ, ಮೈ ಇಡೀ ನಡುಗುತ್ತಿತ್ತು... ಇಲ್ಲೇ ಪಕ್ಕದಲ್ಲೇ ನಾರಾಯಣರ ದೇಹ ತೇಲಿ ಹೋದಂತೆ ಭಾಸವಾಗುತ್ತಿತ್ತು... ಅಂದರೆ... ಅಂದರೆ... ತಾನು ಇಷ್ಟೊತ್ತು ಕಂಡದ್ದು ಕನಸಾ...!!!
ನಂಬಲೇ ಆಗಲಿಲ್ಲ ಜಗ್ಗನಿಗೆ. ಗಡಿಯಾರ ನೋಡಿದ, ಮಧ್ಯರಾತ್ರಿ 12 ಗಂಟೆ...
ಕಣ್ಣೆದುರೇ ಸಿನಿಮಾ ಥರ ಕಂಡ ಇಷ್ಟೆಲ್ಲ ದೃಶ್ಯಗಳು, ನಾರಾಯಣರ ತೋಟ, ಅವರ ಹಳೆ ಗುತ್ತಿನ ಮನೆ, ಮಕ್ಕಳು, ಹುಲಿ ವೇಷ ಕುಣಿತ, ಅಧ್ಯಯನ ವಿದ್ಯಾರ್ಥಿ ಅಚಿನ್, ಸ್ನೇಹಿತ ಗುಣಶೀಲ, ಡ್ರೈವರ್ ಸಿಂಪತಿ ಆಳ್ವ... ಎಲ್ಲ ಪಾತ್ರಗಳು ಸುಳ್ಳ ಹಾಗಾದ್ರೆ. ಅವರ ಮನಸ್ಸು ಒಪ್ಪಲು ತಯಾರಿರಲಿಲ್ಲ...
ಸಮಯ, ಸಂದರ್ಭ ನೋಡದೆ, ಆ ಮಧ್ಯರಾತ್ರಿ ಕೂಡಲೇ ಗೆಳೆಯ ಸಚಿನ್ ಗೆ ಕರೆ ಮಾಡಿದ...
"ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು... ಆಗಾಗ ಕೈ ತೊಳೆಯಿರಿ.. ಕೊರೋನಾದಿಂದ ಪಾರಾಗಲು ಮನೆಯಲ್ಲೇ ತಯಾರಿಸಿದ ಮಾಸ್ಕ ಧರಿಸಿ..." ಎರಡೆರಡು ಬಾರಿ ಸಂದೇಶ ಬಂದ ಬಳಿಕ ಕಾಲ್ ಕಟ್ ಆಯ್ತು. ಪುನಃ ಕರೆ ಮಾಡಿದಾಗ ಸಂದೇಶ ಬಂತು..
"ನೀವು ಕರೆ ಮಾಡಿದ ಚಂದಾದಾರರು ಕೇಕ್ ತರಲು ಹೋಗಿದ್ದಾರೆ, ದಯವಿಟ್ಟು ಅವರಿಗೆ ಕೇಕ್ ಸಿಕ್ಕಿದ ಬಳಿಕ ಪುನಹ ಪ್ರಯತ್ನಿಸಿ...!!!" ಕೋಪದಿಂದ ಫೋನ್ ಕಟ್ ಮಾಡಿದ ಜಗ್ಗ...
ಕಷ್ಟ ಕಾಲದಲ್ಲಿ ಸುಶೀಲ್ ಸಿಕ್ಕಿಯೇ ಸಿಕ್ಕುತ್ತಾನೆ ಅಂದ್ಕೊಂಡು ಸಹಪಾಠಿ ಸುಶೀಲ್ ಕುಮಾರ್ ಗೆ ಕರೆ ಮಾಡಿದ.
ಮೊದಲ ಪ್ರಯತ್ನಕ್ಕೇ ಕರೆ ಸ್ವೀಕರಿಸಿದ ಸುಶೀಲ್, "ಹೇಳಿ ಜಗ್ಗ, ಹೇಗಿದ್ದೀರಿ,? ನಾನ್ ಕಾನ್ ಕಾಲ್ನಲ್ಲಿ ಬಿಝಿ ಇದೆ, ಕ್ಲೈಂಟ್ಸ್ ಜೊತೆ ಬಿಝಿ ಇದ್ದೆ.. ಏನು ಇಷ್ಟೊತ್ತಲ್ಲಿ ಕರೆ ಮಾಡಿದ್ರಿ....?"
ಏದುಸಿರು ಬಿಡ್ತಾ ಜಗ್ಗ ಕೇಳಿದ,
"ಸುಶೀಲ್....ಸುಶೀಲ್, ನೀವು ಆರಾಮ ಇದ್ದೀರಿ ತಾನೆ? ನಿಮಗೇನೂ ಆಗಿಲ್ಲ ತಾನೆ? ನಾರಾಯಣ ಮಕ್ಕಳು ನಿಮ್ಮ ಮೇಲೆ ಆಕ್ರಮಣ ಮಾಡಿದಾಗ ನನಗೆ ಭಯ ಆಗಿತ್ತು... ಈಗ ಹೇಗಿದ್ದೀರಿ...?!
ಅವನ ಮಾತು ತುಂಡರಿಸಿ ಸುಶೀಲ್ ಜೋರಾಗಿ ನಕ್ಕು ಹೇಳಿದ.
"ನೀವು ಏನು ಹೇಳ್ತಾ ಇದ್ದೀರಿ ಗೋತ್ತಾಗ್ತಿಲ್ಲ ಜಗ್ಗ! ನಾನು ಲಾಕ್ ಡೌನ್ ಆದ ಬಳಿಕ ನಾಲ್ಕು ತಿಂಗಳಿನಿಂದ ಎಲ್ಲಿಗೂ ಹೋಗಿಲ್ಲ, ಇನ್ಯಾರು ಅದು ನನ್ನ ಮೇಲೆ ಆಕ್ರಮಣ ಮಾಡುವುದು? ನಾರಾಯಣ ಯಾರು? ನಿಮ್ಮ ಸೆಕ್ಷನಿನವ ಅಲ್ವ? ಕಾಸರಗೋಡಿನಿಂದ ಬರ್ತಾ ಇದ್ದ, ಅವನನ್ನು ನಾನು ನೋಡದೆ ಭರ್ತಿ 20 ವರ್ಷ ಆಯ್ತು... ನಿನಗೇನಾಗಿದೆ...? ತೀರ್ಥ ಗೀರ್ಥ ಏನು ತಗೊಂಡಿಲ್ಲ ತಾನೆ....? ಕಮಾನ್ ಯಾರ್, ಜೋಕ್ ಮಾಡ್ಬೇಡಿ...
ಜಗ್ಗನಿಗೆ ಸ್ವಲ್ಪ ಸ್ವಲ್ಪ ಇಹಲೋಕಕ್ಕೆ ಬಂದ ಹಾಗಾಯಿತು...
"ಹೆಹೆಹೆ ಏನಿಲ್ಲ, ಏನೋ ಕನಸು ಬಿದ್ದಿರ್ಬೇಕು... ಸಾರಿ ಡಿಸ್ಟರ್ಬ್ ಮಾಡಿದೆ ಅಂತ ಕಾಣ್ತದೆ...." ಫೋನ್ ಇಟ್ಟು ಬೆವರೊರೆಸಿಕೊಂಡ....
ಪುನಃ ಮಲಗಿದವನಿಗೆ ನಿದ್ರೆ ಆವರಿಸಲೇ ಇಲ್ಲ. ತಾನು ನಾರಾಯಣರ ಬಗ್ಗೆ ಕಂಡದ್ದೆಲ್ಲ ಸಿನಿಮಾ ದೃಶ್ಯಗಳ ಥರ ಕಣ್ಣಿನೆದುರು ಹಾದು ಹೋಗ್ತಾ ಇತ್ತು.... ಆ ಹಲಸಿನ ಸಾಲು ಸಾಲು ಮರಗಳು, ನೆರಳು, ಹಳೆ ಮನೆ, ನಾರಾಯಣರ ಭವ್ಯ ಕಾಯ, ಅವರ ಅಂಬಾಸಿಡರ್ ಕಾರು, ಅವರು ತನ್ನನ್ನು ವ್ಯಾಯಾಮ ಶಾಲೆಯಲ್ಲಿ ಕರೆದು ಹುಲಿ ವೇಷ ಕುಣಿಯುವ ಬಗ್ಗೆ ತರಬೇತಿ ನೀಡಿದ್ದು, ಅವರ ಕಾರಿನಲ್ಲಿ ಪ್ರವಾಸ ಹೋಗಿದ್ದು, ಅಚಿನ್ ಹಲಸಿನ ಹಣ್ಣು ತಿಂದಾಗ ಅವರಿಗೆ ಸಿಟ್ಟು ಬಂದಿದ್ದು, ಭಗೀರಥ ಚಾಲೆಂಜ್ ಹಾಕಿದ್ದು, ವಿದ್ಯಾರಶ್ಮಿಯನ್ನು ಕೊಲ್ಲಲು ನಾರಾಯಣರು ಹೋದದ್ದು.... ಕೊನೆಗೆ ನಡೆದ ನಾರಾಯಣರ ಸನ್ಮಾನ ಸಮಾರಂಭ, ಅಲ್ಲಿ ದಯಕರ ನಾಯಕ್ ವಿಚಿತ್ರ ಭಾಷಣ ಮಾಡಿದ್ದು... ತಾನು ಹಲಸಿನ ಹೋಳಿಗೆ ತಿಂದದ್ದು.... ಎಲ್ಲ ಕನಸ, ಎಲ್ಲ ಭ್ರಮೆಯ, ಎಲ್ಲ ಸುಳ್ಳ ಹಾಗಾದ್ರೆ... ಜಗ್ಗ ಯಾನೆ ಜಗನ್ನಾಥನ ಮಂಡೆ ಶರಬತ್ತು ಆಗುತ್ತಾ ಹೋಯಿತು... ಯಾವುದು ನಿಜ, ಯಾವುದು ಸುಳ್ಳು ಅಂತ ಅಂದಾಜಾಗಲಿಲ್ಲ.
ತಾನು ಮಾತ್ರ ಕೈರಂಗಳದ ಮನೆಯೊಳಗೆ ಬೆಡ್ ರೂಮಿನಲ್ಲಿ ಇದ್ದೇನೆ, ಸಮುದ್ರದಲ್ಲಿ ಇಲ್ಲ ಅಂತ ಅರಿವಾಗಲು ಅರ್ಧ ಗಂಟೆ ಬೇಕಾಯಿತು... ನೀರು ಕುಡಿದ ಬಳಿಕ ನಿಧಾನಕ್ಕೆ ನಿದ್ರೆ ಆವರಿಸಿತು... .......
ಬೆಳಗ್ಗೆದ್ದು ಜಗ್ಗ ಮಾಡಿದ ಮೊದಲ ಕೆಲಸ ತನ್ನ ಕಸಿನಲ್ಲಿ ಕಂಡ ಪಾತ್ರಗಳಿಗೆಲ್ಲ (ತನ್ನಕ್ಲಾಸ್ಮೇಟುಗಳಿಗೆ) ಸಾಲಾಗಿ ಕರೆ ಮಾಡುತ್ತಾ ಬಂದ...
ಸಚಿನ್ಅ ಲ್ಮೇಡಾನಿಗೆ ಕರೆ ಮಾಡಿ ಕೇಳಿದ, "ನಿನ್ನ ಅಧ್ಯಯನ ಮುಗೀತಾ ಮಾರಾಯ?, ಪಿಎಚ್ಡಿ ಸಿಕ್ತಾ ಹೇಗೆ...?* ಸಚಿನ್ ಹೇಳಿದ, *"ಮರ್ಲು ಉಂಡ ಮಾರಾಯ, ಲಾಕ್ಡೌನ್ ಆದ್, ಬಿಸಿನೆಸ್ ಡಲ್ ಪಂಡ್ದ್ ಬೆಚ್ಚೊಡುಲ್ಲೆ, ಬಿ.ಕಾಂ. ಮಲ್ತ್ ದ್ ಎಂಚಿನ ಪಿಎಚ್ಡಿ ಮಲ್ಪುನು.... ಮಕ್ಕರ್ ಮಲ್ಪರ ದಾನೆ...?*
....
ನಂತರ ಜ್ಯೋತಿಲಕ್ಷ್ಮಿಗೆ....
"ನಿನ್ನ ಸ್ಕೂಟಿಯಲ್ಲಿ ನೀನು ಹಲಸಿನಕಾಯಿ ಸಪ್ಲೈ ಮಾಡ್ತಾ ಇದ್ದಿಯ ಯಾವಾಗಲಾದ್ರು....?"
ಜ್ಯೋತಿಗೆ ಸಿಟ್ಟು ಬಂತು... "ಎಂತವ ನಿಂಗೆ ಮರ್ಲ....? ನನ್ನ ಸ್ಕೂಟಿ ನಿನಗೆ ಪಿಕಪ್ ಥರ ಕಾಣ್ತಿದೆಯ?. ಇಡಾ ಫೋನ್ ಹುಚ್ಚರ ಹಾಗೆ ಮಾಡ್ಬೇಡವ ಆಯ್ತ... ನನ್ನ ಸ್ಕೂಟಿಗೆ ಇನ್ಸಲ್ಟ್ ಮಾಡ್ತಿಯಾ...?"
ದುಷ್ಟ ಮೋಹನನಿಗೆ ಮಾಡಿದ...
"ನೀವೊಮ್ಮೆ ನಿಮ್ಮ ಪೇಪರಿನಲ್ಲಿ ನಾರಾಯಣರ ಹಲಸಿನ ಕಾಯಿ ಬೋರ್ಡಿನ ಬಗ್ಗೆ ಬರೆದಿದ್ದಿರ? ನಿಮ್ಮನ್ನು ಅವರು ಕೊಲ್ಲಲು ಬಂದಿದ್ರಾ, ಪ್ಲೀಸ್ ಹೇಳಿ.... ?"
ಉತ್ತರ ಬಂತು.... "ನಿನಗೆಂತ ಹುಚ್ಚು ಹಿಡಿದಿದ್ಯಾ...? ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ 150 ವಿಚಾರ ಟ್ರೋಲ್ ಆಗ್ತಾ ಇರ್ತದೆ, ಅದನ್ನೆಲ್ಲ ಬರೀತಾ ಹೋದ್ರೆ, ಪೇಪರಿನಲ್ಲಿ ಜಾಗ ಸಾಕಾಗ್ಲಿಕಿಲ್ಲ, ನೀನು ಹೇಳಿದ ಹಲಸಿನ ಹಣ್ಣಿನ ಮರಕ್ಕೆ ಬೋರ್ಡ್ ಹಾಕಿದ ಪೋಸ್ಟು ನೋಡಿದ್ದೇನೆ, ವೈರಲ್ ಆಗಿತ್ತು, ನೋಡಿ ನೆಗಾಡಿದ್ದೇನೆ ಹೊರತು ಅದನ್ನು ಪೇಪರಿನಲ್ಲಿ ಬರಿಲಿಕ್ಕೆಂತ ಉಂಟು, ಎಂತ, ನನ್ನ ಕೆಲಸ ತೆಗೆಸುವ ಪ್ಲಾನ್ ಹೇಗೆ...?"
ನಂತರದ ಸರದಿ ಭೀಮಾವತಿಯದ್ದು... "ಎಂಚ ಉಲ್ಲರ್,? ಈರ್ ಪೆಲಕ್ಕಾಯಿದ ಅಟ್ಟಿಲ್ ಮಲ್ಪೆರೆ ಗೊತ್ತುಂಡ....?
ಅವಳು ಸಿಟ್ಟಲ್ಲಿ ಉತ್ತರವೇ ಕೊಡಲಿಲ್ಲ, ಗುಡ್ ಮಾರ್ನಿಂಗ್ ಅಂತ ಹೇಳಿ ಫೋನ್ ಕಟ್ ಮಾಡಿದ್ಳು.... !!!!
ನಂತರ ತನ್ನ ಕ್ಲಾಸ್ ಮೇಟ್ಸ್ ಎಲ್ಲರಿಗೂ ಕರೆ ಮಾಡಿದ್ರೂ ಇದೇ ಥರ ಉತ್ತರ ಬಂತು...
"ನಿನಗೇನು ಹುಚ್ಚ? ಅಂತಲೇ ಕೇಳತೊಡಗಿದರು...
ಜಗ್ಗನಿಗೆ ಖಚಿತವಾಯಿತು.. ನಾರಾಯಣರ ಬಗ್ಗೆ ತಾನು ಕಂಡದ್ದೆಲ್ಲ ಕನಸು ಅಂತ....!!!
.......
ಆ ದಿವಸ ಕೆಲಸಕ್ಕೆ ಹೋಗಲಿಲ್ಲ ಜಗ್ಗ... ಆತನ ಮನಸ್ಸಿನಲ್ಲಿ ನಾರಾಯಣರ ಕಥೆಯೇ ಕೊರೆಯುತ್ತಾ ಇತ್ತು, ನೇರ ಎದ್ದು ಬೈಕ್ನಲ್ಲಿ ಉಳ್ಳಾಲಕ್ಕೆ ಹೋದ... ಆತನ ಮನಸ್ಸಿನಲ್ಲಿ ಒಂದು ಸಂಶಯ, ತನಗೇನಾದರೂ ಪೂರ್ವಜನ್ಮದ ವಾಸನೆ ಶುರುವಾಗಿರಬಹುದೇ ಅಂತ... ಕನಸಿನಲ್ಲಿ ಕಂಡದ್ದು ಸಾಧಾರಣ ಮುಕ್ಕಾಲು ಭಾಗ ಬೆಳಗ್ಗೆ ಏಳುವಾಗ ಮರೆತು ಹೋಗಿರುತ್ತದೆ, ಆದರೆ, ತನಗೆ ಎಲ್ಲವೂ
ನೆನಪಿದೆ ಸ್ಪಷ್ಟವಾಗಿ... ಅಲ್ಲಿನ ಪಾತ್ರಗಳು, ಸಂಭಾಷಣೆಗಳು, ದೃಶ್ಯಗಳು, ಕೆಂಪು, ಹಳದಿ ಬಣ್ಣದ
ಹಲಸಿನ ಹಣ್ಣುಗಳು ಎಲ್ಲವೂ ನೆನಪಿದೆ... ಇದು ಹೇಗೆ ಸಾಧ್ಯ ಅಂತ ಆಶ್ಚರ್ಯ ಆಯ್ತು... ಅಥವಾ ತನ್ನ ಕ್ಲಾಸ್ ಮೇಟುಗಳು ಹೇಳಿದ ಹಾಗೆ ತನಗೆ ಹುಚ್ಚು ಶುರುವಾಗಿರಬಹುದಾ ಅಂತ ಲೈಟಾಗಿ ಸಂಶಯ ಆರಂಭವಾಯಿತು.... ಸಂಶಯ ಪರಿಹಾರಕ್ಕೆ ಉಳ್ಳಾಲಕ್ಕೆ ಹೋದ....
ಅಲ್ಲಿ ಒಬ್ಬರು ಹಿರಿಯರತ್ರ ಹೋಗಿ ಕೇಳಿದ, "ಅಣ್ಣ ಮೂಲು ಪೆಲಕ್ಕಾಯಿದ ಮಲ್ಲ ಎಸ್ಟೇಟ್ ಉಂಡತ್ತೆ ಅವು ಓಲು...? ಅಂತ.
ಕನ್ನಡಕವನ್ನು ಮೇಲೆ ಮಾಡಿದ ಅಜ್ಜ ಜಗ್ಗನನ್ನು ವಿಚಿತ್ರವಾಗಿ ಆಪಾದಮಸ್ತಕ ನೋಡಿ ಕೇಳಿದರು. "ಈರ್ ಒಲ್ತ್ ಬತ್ತರಣ್ಣ?" ಅಂತ...
"ಯಾನ್ ಮೂಲು ಮುಡಿಪು ಕೈರಂಗೊಳ್ಡ್ ಬತ್ತಿನ... ಪೆಲಕ್ಕಾಯಿದ ತೋಟ ಮಿನಿ ಉಂಡೆ ಮೂಲು...?"* ಪುನಃ ಕೇಳಿದ... "ಪೆಲಕ್ಕಾಯಿದ ತೋಟ ಬುಡಿ, ಮರಕ್ಕುಲೆ ಭಾರಿ ವಿರಳ ಮೂಲು, ಗೇರು ಸಂಶೋಧನಾ ಕೇಂದ್ರ ಉಂಡು, ಗೋಂಕುದಯೆ, ಗೋಂಕು ಗೋಂಕು, ಬೋಡ ತೂಪರ...?"*
ಅಜ್ಜ ಹೇಳುತ್ತಲೇ ಇದ್ದರು.... ನಿರಾಸೆಯಿಂದ ಬೈಕ್ ಸ್ಟಾರ್ಟ್ ಮಾಡಿ ಸೀದಾ ಸುಶೀಲನ ಮನೆಗೆ ಹೋದ ಜಗ್ಗ....
.......
ಸುಶೀಲ್ ಆಗಷ್ಟೇ ಎದ್ದು ತಮ್ಮ ಕ್ಲಾಸ್ ಮೇಟ್ ಗ್ರೂಪಿನಲ್ಲಿ ಬಂದ ಮೆಸೇಜುಗಳಿಗೆಲ್ಲ ಉತ್ತರಿಸಿ ಚಹಾ ಕುಡಿಯುತ್ತಾ ಕೂತಿದ್ದ. ಅಪರೂಪಕ್ಕೆ ಬಂದ ಜಗ್ಗನನ್ನು ಕಂಡು ಖುಷಿಯಾಗಿ ಚಹಾ ಕೊಟ್ಟು ಮಾತನಾಡಿಸಿದ... *"ಎಂತ ಮಾರಾಯ ನೀವು ಮಧ್ಯರಾತ್ರಿ ಫೋನ್ ಮಾಡಿ ನನ್ನನ್ನು ಹೆದರಿಸಿದ್ರಿ... ಆಕ್ರಮಣ ಅಂತ ಹೇಳಿದ್ರೀ, ಏನೇನೋ ಹೇಳಿದ್ರಪ್ಪ... ನಂಗೆ ಗಾಬರಿ ಆಗೋಯ್ತು... ಎಂತ ಸಂಗತಿ ಅಂತ... ಅಕ್ಚುವಲಿ ನಾನು ಲಾಕ್ ಡೌನ್ ಆದ ಮೇಲೆ ನಾಲ್ಕು ತಿಂಗಳಿನಿಂದ ಎಲ್ಲಿಗೂ ಹೋಗಿಲ್ಲ...."*
ಸುಶೀಲ್ ನಿಗೆ ಎಲ್ಲ ವಿಚಾರ ವಿವರಿಸಿ ಹೇಳಿದ ಜಗ್ಗ... ತನ್ನ ಕನಸು, ತಾನು ಅದರಲ್ಲಿ ಕಂಡ ಎಲ್ಲ ಪಾತ್ರಧಾರಿಗಳು... ಎಲ್ಲವನ್ನೂ ವಿವರಿಸಿ ಹೇಳಿದ....
ಎಲ್ಲವನ್ನು ತಾಳ್ಮೆಯಿಂದ ಕೇಳಿದ ಸುಶೀಲ್ ಜಗ್ಗನಲ್ಲಿ ಹೇಳಿದ...
"ನೋಡಿ ಜಗ್ಗ, ನನ್ನ ಪ್ರಕಾರ ಏನಾಗಿದೆ ಗೊತ್ತ. ನೀವು ಯಾವುದೋ ವಾಟ್ಸಪ್ ಗ್ರೂಪು ಅಥವಾ ಫೇಸ್ ಬುಕ್ಕಿನಲ್ಲಿ ಈ ಹಲಸಿನ ಹಣ್ಣಿನ ಮರಕ್ಕೆ ಬೋರ್ಡ್ ಅಳವಡಿಸಿದ ಜೋಕ್ ನೋಡಿದ್ದೀರಿ. ಅದು ನಿಮ್ಮ ಮನಸ್ಸನ್ನು ಆಳವಾಗಿ ಹೊಕ್ಕಿದೆ. ಇದೇ ಸಂದರ್ಭ, ನೀವು ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಗ್ರೂಪಿನಲ್ಲಿ ಯಾವಾಗಲೂ ತಮಾಷೆ ಮಾತನಾಡುತ್ತಾ, ಕಥೆಗಳನ್ನು ಹೇಳುತ್ತಾ ಇರ್ತೀರಲ್ವ. ಆ ಕಾರಣದಿಂದ ನೀವು ಆ ಜೋಕಿನ ಸಂದರ್ಭವನ್ನು ವಿಸ್ತರಿಸಿ, ನಿಮ್ಮದೇ ಆಯಾಮದಲ್ಲಿ ಯೋಚಿಸಿದ್ದೀರಿ.... ದಿನಾ ಗ್ರೂಪಿನಲ್ಲಿ ಚಾಟ್ ಮಾಡುವವರ ಹೆಸರುಗಳೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚಾಗಿದ್ದು, ಅವ್ವೇ ಪಾತ್ರಧಾರಿಗಳಾಗಿ ನಿಮ್ಮ ಕನಸಿನಲ್ಲಿ ಕಂಡಿವೆ ಅಷ್ಟೆ... ಕನಸಾದ ಕಾರಣ ಪಾತ್ರಗಳ ಹೆಸಲು ಆಚೀಚೆ ಆಗಿವೆ ಅಷ್ಟೆ...."
"ನಿಮಗೊಂದು ವಿಚಾರ ಗೊತ್ತ? ನಮ್ಮ ಹೊರ ಮನಸ್ಸಿಗಿಂತಲೂ ವಿಚಿತ್ರ ಒಳಮನಸ್ಸು, ಹೊರ ಮನಸ್ಸಿನಿಂದ ಕೆಲವು ವಿಚಾರಗಳು ಒಳಮನಸ್ಸಿಗೆ ಹೋಗಿ ಅವಿತು ಕೂತಿರ್ತವೆ. ಬಹಳಷ್ಟು ಬಾರಿ ಭ್ರಮೆಗಳಾಗಿಯೋ, ಕನಸಿನ ರೂಪದಲ್ಲೋ ಅವೇ ವಿಚಾರಗಳು ಹೊರ ಬರುತ್ತವೆ... ಆ ಮೂಲಕ ಅವು ಸ್ವಲ್ಪ ನಿರಾಳವಾಗುತ್ತವೆ. ನೀವು ಆ ನಾರಾಯಣರ ಬಗ್ಗೆ ತುಂಬ ಯೋಚಿಸಿದ್ದೀರಿ, ಅಥವಾ ಆ ಪಾತ್ರದ ಬಗ್ಗೆ ತುಂಬ ಚಿಂತಿಸಿದ್ದೀರಿ. ನಾನು, ಸಚಿನ್ ಎಲ್ಲ ಗ್ರೂಪಿನಲ್ಲಿ ಯಾವಾಗಲೂ ಮಾತನಾಡ್ತಾ ಇರ್ತೀವಲ್ಲ, ಹಾಗಾಗಿ ನಮ್ಮ ಸಹಚರ್ಯ ನಿಮ್ಮ ಜೊತೆ ಜಾಸ್ತಿ. ಅದಕ್ಕೇ ಸಹಜವಾಗಿ ನಾವೆಲ್ಲ ಪ್ರಧಾನ ಪಾತ್ರಗಳಾಗಿ ಓಡಾಡಿದ್ದೇವೆ... ಡೋಂಟ್ ವರಿ... ನನಗೆ ಗೊತ್ತಿದ್ದ ಹಾಗೆ, ಅಂತಹ ನಾರಾಯಣರಾಗಲೀ, ಅವರ ಮಕ್ಕಳಾಗಲೀ, ಹಲಸಿನ ತೋಟವಾಗಲಿ ಈ ಉಳ್ಳಾಲದಲ್ಲಿ ಇಲ್ಲ. ಇವೆಲ್ಲ ನಿಮ್ಮ ಒಳಮನಸ್ಸಿನ ಕಲ್ಪನೆಯ ಕೂಸು ಅಷ್ಟೇ... ಸುಮ್ನೆ ಟೆನ್ಶನ್ ಮಾಡಬೇಡಿ... ಕೂಲಾಗಿರಿ... ಈಗ ನನ್ನತ್ರ ಎಲ್ಲ ಹೇಳ್ಕೊಂಡ್ರಲ್ಲ. ನಿಮ್ಮ ಮನಸ್ಸು ಹಗುರವಾಗಿರಬಹುದು... ಏನಂತೀರಿ...?"
....
ನಿಜಕ್ಕೂ ಜಗ್ಗ ಈಗ ಸ್ವಲ್ಪ ಹಗುರವಾಗಿದ್ದ.... ತನಗೆ ಅರಿವಿಲ್ಲದೇ ತನ್ನ ಮನಸ್ಸಿನೊಳಗಿದ್ದ ನಾರಾಯಣರು ದೃಶ್ಯರೂಪದಲ್ಲಿ ಕನಸಿನಲ್ಲಿ ಕಾಣಿಸಿದ್ದು ಅವನಿಗೀಗ ಸ್ಪಷ್ಟವಾಯಿತು... ಸುಶೀಲನಿಗೆ ವಿದಾಯ ಹೇಳಿ ಅಲ್ಲಿಂದ ಹೊರಟ...ಆದರೂ ಆತನ ಕುತೂಹಲ ತಣಿದಿರಲಿಲ್ಲ....
ಉಳ್ಳಾಲದ ಬೀದಿ ಬೀದಿಗಳಲ್ಲಿ ಬೈಕ್ ಓಡಿಸಿ ನೋಡಿದ ಎಲ್ಲಿಯಾದರೂ ಹಲಸಿನ ತೋಟ ಕಾಣಿಸ್ತದ ಅಂತ... ಸಿಗಲಿಲ್ಲ. ಕೊನೆಗೆ ಆತ ಬಂದು ತಲುಪಿದ್ದು ಸೋಮೇಶ್ವರ ಬೀಚಿಗೆ...
ಆಗ ಸಂಜೆಯಾಗಿತ್ತು.... ಕೊರೋನಾ ಹೆದರಿಕೆಯಿಂದ ಅಷ್ಟೇನು ಜನ ಸಂಚಾರ ಇರಲಿಲ್ಲ....
ನೇರವಾಗಿ ಹೋಗಿ ಬೃಹತ್ ಬಂಡೆ ರುದ್ರಪಾದೆ ಏರಿ ಕುಳಿತ... ಮೋಡದ ಮರೆಯಲ್ಲಿ ಸೂರ್ಯಾಸ್ತ ಆಗ್ತಾ ಇತ್ತು.... ನಿನ್ನೆ ರಾತ್ರಿ ನಾರಾಯಣರು ಇದೇ ಬಂಡೆಯಿಂದ ಹಾರಿದ್ದಲ್ಲವೇ... ಅಂತ ಅನ್ನಿಸಿತು.. ಬಂಡೆಯ ತುದಿಗೆ ಹೋಗಿ ಇಣುಕಿದಾಗ ಅಲೆಗಳ ರುದ್ರ ನರ್ತನಕ್ಕೆ ಎದೆ ಝಲ್ಲೆಂದಿತು... ಕನಸಿನಲ್ಲೂ ಅಂತಹ ಪ್ರಪಾತಕ್ಕೆ ಹಾರಲು ಸಾಧ್ಯವಿಲ್ಲ ಅಂತ ಅನ್ನಿಸಿತು... ಆದರೆ ಕಥಾ ಹಂತರ ಕೊರೆಯುತ್ತಲೇ ಇತ್ತು...
ಕೊನೆಗೆ ಗಲ್ಫಿನಲ್ಲಿರುವ ಗೆಳೆಯ ಫಾರೂಕಿಗೆ ಮೆಸೇಜ್ ಮಾಡಿದ..
"ಫಾರೂಕ್ ನನಗೊಂದು ವಿಚಿತ್ರವಾದ ಕಥೆ ತಲೆಯಲ್ಲಿ ಕೂತಿದೆ ಮಾರಾಯ. ಅದನ್ನು ಬರೆಯದೆ ಮನಸ್ಸಿಗೆ ಸಮಾಧಾನ ಇಲ್ಲ.... ನಾನದನ್ನು ಬರೆದು ದಿನಾ ನಿನಗೆ ಮೈಲ್ ಮಾಡ್ತೇನೆ. ನೀನು ಅದನ್ನು ಸರಿ ಮಾಡಿ ನಮ್ಮ ವಾಟ್ಸಪ್ ಗ್ರೂಪಿಗೆ ಹಾಕ್ತೀಯ...? ಈ ಕಥೆಯಲ್ಲಿ ನಮ್ಮ ಗ್ರೂಪಿನ ತುಂಬ ಮಂದಿ ಬಂದು ಹೋಗುತ್ತಾರೆ.. ಆ ಕಥೆ ಬರೆದಾಗ ನನಗೆ ಸ್ವಲ್ಪ ನೆಮ್ಮದಿ ಸಿಗಬಹುದು... ನಂತರ ನೀನು ಆ ಕಥೆಯನ್ನು ನಮ್ಮ ಬ್ಲಾಗ್ ಗೆ ಹಾಕು... ಓದುವವರು ಓದಲಿ... ಏನಂತೀಯ...?"
ಅಂತ ಹೇಳಿ ಸೂಕ್ಷ್ಮವಾಗಿ ಕಥೆಯ ವಿಚಾರ ಬರೆದು ಕಳುಹಿಸಿದ...
ಐದು ನಿಮಿಷದಲ್ಲಿ ಫಾರೂಕ್ ಉತ್ತರ ಬಂತು. ಓಕೆ ಡನ್... ಕಥೆಯನ್ನು ಬ್ಲಾಗಿಗೆ ಹಾಕುವ ಜವಾಬ್ದಾರಿ ನನಗೆ ಬಿಡು... ಕಥೆಯ ಹೆಸರು ಜಾಕ್ ಫ್ರೂಟ್ ಡೈರಿ ಅಂತ ಇಡುವ, ಆಗಬಹುದೇ....?
ಸರಿ... ನನಗೊಂದು ಅರ್ಧ ಗಂಟೆ ಟೈಂ ಕೊಡು ನಾನು ಕಥೆಯ ಮೊದಲ ಕಂತನ್ನು ಈಗಲೇ ಬರೆದು ಕಳುಹಿಸುತ್ತೇನೆ....
ಸೋಮೇಶ್ವರ ಬೀಚಿನ ಸುಂದರ ಸೂರ್ಯಾಸ್ತದ ನಡುವೆ ಜಗ್ಗ ತನ್ನ ಮೊಬೈಲಿನಲ್ಲಿ ಜಾಕ್ ಫ್ರೂಟ್ ಡೈರಿಯ ಮೊದಲ ಕಂತು ಬರೆಯಲು ಶುರು ಮಾಡಿದ...
"ಬೆಳಗ್ಗೆ ಕೋಳಿ ಕೂಗಿದ ತಕ್ಷಣ ನಾರಾಯಣರು ತಮ್ಮ ಇಷ್ಟ ದೇವರಿಗೆ ಕೈ ಮುಗಿದರು.. ಬಳಿಕ ಹಟ್ಟಿಗೆ ಹೋಗಿ, ತಾನು ಸಾಕಿದ ಕೋಣಗಳ ಮೈದಡವಿ, ಒಂದಿಷ್ಟು ಹುಲ್ಲು ಹಾಕಿ ಕುಡಿಯಲು ಅಕ್ಕಚ್ಚು ಇರಿಸಿ ಬಂದರು...."
🖋️🖋️🖋️🖋️
ಟೈಪ್ ಮಾಡ್ತಾ.. ಮಾಡ್ತಾ ತನ್ನನ್ನೇ ಮರೆತ ಜಗ್ಗ, ಅರ್ಧ ಗಂಟೆ ಅಂದುಕೊಂಡದ್ದು, ಟೈಪ್ ಮಾಡಲು ಒಂದು ಗಂಟೆ ಬೇಕಾಯ್ತು... ಅಲ್ಲೇ ಕುಳಿತು ಕಥೆಯನ್ನು ಫಾರೂಕಿಗೆ ಮೈಲ್ ಮಾಡಿ ಮೈಮುರಿದು ಎದ್ದು ನಿಂತಾಗ ರಾತ್ರಿ 7 ಗಂಟೆ, ತುಂಬ ನಿರಾಳ ಎನಿಸಿತು ಅವನಿಗೆ. ತಾನೂ ಒಬ್ಬ ಕತೆಗಾರನಾಗುತ್ತಿದ್ದೇನೆ ಎಂಬ ನವಿರಾದ ಖುಷಿ.... ಜೊತೆಗೆ ಮೂಲೆಯಲ್ಲೆಲ್ಲೋ... ನಾರಾಯಣರ ಆತ್ಮವೇ ಕಥೆ ಬರೆಸುತ್ತಿರಬಹುದೇನೋ ಎಂಬ ಆತಂಕ....
"ಒಕೆ ಡನ್... ನಾಳೆ ಬೆಳಗ್ಗೆ ನಮ್ಮ ವಾಟ್ಸಪ್ ಗ್ರೂಪಿನಲ್ಲಿ ಅಪ್ಲೋಡ್ ಮಾಡ್ತೇನೆ..." ಫಾರೂಕಿನ ಮೆಸೇಜ್ ನೋಡಿ ಬೈಕು ಹತ್ತಿ ಮನೆಗೆ ಹೊರಟ ಜಗ್ಗ..
ಬೈಕ್ ನಿಲ್ಲಿಸಿ ಕೈಕಾಲು ತೊಳೆದು ಒಳಗೆ ಹೋಗುವಾಗ ಜಗಲಿಯಲ್ಲಿ ಟೋಪಿ ಹಾಕಿ ಇರಿಸಿದ್ದ ಹಲಸಿನ ಕಾಯಿಯನ್ನು ಕಂಡಾಗ ಎದೆ ಝಲ್ಲೆಂದಿತು...!!!!
ಕಿವಿಯಲ್ಲಿ ನಾರಾಯಣ ಧ್ವನಿ ಅನುರಣಿಸಿದಂತಾಯಿತು... 'ನನ್ನ ಶಿಷ್ಯರಲ್ಲೊಬ್ಬನಾದ ಜಗನ್ನಾಥ ನನ್ನಷ್ಟೇ ಪ್ರೀತಿಯಿಂದ ಹಲಸಿನ ಕೃಷಿ ಮಾಡ್ತಾನೆ, ನನ್ನ ಹಾಗೆಯೇ ಆತನೂ ಹಲಸಿನ ಕಾಯಿಗೆ ಅಕ್ಕರೆಯಿಂದ ಟೋಪಿ ಇರಿಸಿ ಕಾಪಾಡುತ್ತಾನೆ.....!!!!!!"
(ಮುಕ್ತಾಯ).
ಬರಹ: ಕೃಷ್ಣಮೋಹನ ತಲೆಂಗಳ.
ಸಂಕಲನ ಹಾಗೂ ನೆರವು: ಉಮ್ಮರ್ ಫಾರೂಕ್ ಕುಕ್ಕಾಜೆ
ವಾಟ್ಸಪ್ ಗ್ರೂಪ್ ನೆರವು: ಸುಶೀಲ್ ಕುಮಾರ್ ಉಳ್ಳಾಲ.
ಚಿತ್ರಕೃಪೆ: ಜಗದೀಶ ಕೈರಂಗಳ
No comments:
Post a Comment