ನಿಮ್ಮನ್ನು ನೀವಾಗಿಸುವ ಆ “ಸ್ಥಾನ” ಯಾವುದು?!







ಆ ಆರಿಂಚಿನ ಗಾತ್ರದ ಮೊಬೈಲು, ಅದಕ್ಕೊಂದು ಡೇಟಾ ಕನೆಕ್ಷನ್ನು...  ಇಡೀ ವ್ಯಕ್ತಿತ್ವವೇ ಇದರಲ್ಲಿ ಅಡಗಿದೆಯೇನೋ ಎಂಬಂಥ ಅರ್ಧ ಅಂಗೈಯಗಲದ ವಾಟ್ಸಪ್ಪಿನ ಸ್ಟೇಟಸ್ಸು, ಮತ್ತೊಂದು ಸ್ವಂತದ ಆಸ್ತಿಯಂತಿರುವ ಫೇಸ್ಬುಕ್ಕು ಗೋಡೆ. ಇಲ್ಲಿಯೂ. ಅಲ್ಲಿಯೂ ಸ್ವಂತದ್ದು, ಎರವಲು ಪಡೆದದ್ದು, ನಕಲು ಮಾಡಿದ್ದನ್ನೆಲ್ಲ ಕೂಡಿ ಹಾಕಿ, ಕೈಗೆ ಸಿಕ್ಕಿದ್ದನ್ನೆಲ್ಲ ಶೇರು ಮಾಡಿ, ಮತ್ತೆಷ್ಟು ಮಂದಿಯ ಮೆಚ್ಚುಗೆ, ವಿಮರ್ಶೆ ಬರುತ್ತದೆಂದು ಪದೇ ಪದೇ ನೋಡುವ ವಿಚಿತ್ರ ಚಡಪಡಿಕೆ...!
ಇವೆರಡೆಯ ನಿಮ್ಮ ಇಷ್ಟದ ತಾಣಗಳು?  ಸುಮ್ಮನೆ ಒಮ್ಮೆ ಯೋಚಿಸಿ, ಕೈಲೊಂದು ಮೊಬೈಲು ಹಿಡಿದು ಹಠ ಕಟ್ಟಿ ಅದಕ್ಕೊಂದು ಇಂಟರ್ ನೆಟ್ ಸಂಪರ್ಕ ಕೊಟ್ಟು ಬಾರಿ ಬಾರಿಗೂ ಅದರಲ್ಲೇನು ಬಂತು ಅಂದ ನೋಡ್ಕೊಂಡು, ಮೆಚ್ಚುಗೆಗಳಿಂದ ಹಿಗ್ಗಿಕೊಂಡು, ಯಾರು ಯಾರನ್ನೋ ವ್ಯಂಗ್ಯೋಕ್ತಿಗಳಿಂದ ಚುಚ್ಚಿಕೊಂಡು, ಚುಚ್ಚಿಸಿಕೊಂಡು, ಇಷ್ಟವಿಲ್ಲದ್ದಕ್ಕೆಲ್ಲ ಪ್ರತಿಕ್ರಿಯೆ ಕೊಟ್ಕೊಂಡು, ವಾದ ಮಾಡಿ, ಹೀಯಾಳಿಸಿ, ಕೊನೆಯೇ ಇಲ್ಲದ ಚರ್ಚೆಗಳನ್ನು ನಡೆಸಿ, ಕೊನೆಗೋ ತಾವೇ ಗೆದ್ದೆವೆಂದುಕೊಂಡು ಬೀಗಿ ಮತ್ತೊಂದು ಪೋಸ್ಟು ಹಾಕುತ್ತಾ ಜಾಲಾಡುವ ತಾಣಗಳಲ್ಲಿ ಅಲೆದಾಡುವುದು ಮರೆತು ನಿಮ್ಮಿಷ್ಟದ, ನೀವು ನೀವೇ ಆಗಿರುವ ತಾಣಗಳಿಗೆ ಹೋಗಿ ದಿನಗಳೆಷ್ಟಾಯಿತು? ನೆನಪು ಮಾಡಿ.!

......................

ಚಿಕ್ಕಂದಿನಲ್ಲಿ ಮನೆಯ ಹಿಂದೆಯೊಂದು ನಿರ್ಜನ ಬೆಟ್ಟವಿತ್ತು. ಅಲ್ಲೊಂದು ಗೇರು ಮರ, ಚಾಚಿದ ಕೊಂಬೆ, ಸುತ್ತಲೂ ಹಸಿರು... ವಾರ್ಷಿಕ ಪರೀಕ್ಷೆ ಬಂದರೆ ಅದೇ ಮರದ ಗೆಲ್ಲಿನಲ್ಲಿ ಕುಳಿತು ಓದಿಕೊಳ್ಳುತ್ತಿದ್ದದ್ದು. ಮರ ಗಿಡ, ಹಕ್ಕಿಗಳ ಚಿಲಿಪಿಲಿ, ದೂರದಲ್ಲಿ ಮತ್ತೊಂದು ಬೆಟ್ಟ. ಮರದ ಬುಡದ ಆಚೆಗೆ ಒಂದು ಬಂಡೆಕಲ್ಲಿನ ಬೆಂಚು. ನಡುವೆ ಕುರ್ಚಿಯ ಹಾಗೆ ಒಂದು ಕೊರಕಲ ಜಾಗ. ಅಲ್ಲಿ ಕುಳಿತು ನೋಡಿದರೆ ಕೆಳಗೆ ರಸ್ತೆಯಲ್ಲಿ ಹೋಗುವ ವಾಹನಗಳೆಲ್ಲ ಚೆನ್ನಾಗಿ ಕಾಣಿಸುತ್ತಿತ್ತು. ಕೈಯ್ಯಲ್ಲೊಂದು ದುರ್ಬೀನು ಹಿಡಿದು, ಮೋಡ, ಆಕಾಶ, ದೂರದ ಕಪ್ಪು ಕಲ್ಲಿನ ಕ್ವಾರಿಗಳನ್ನು ನೋಡುವುದು ತಮಾಷೆಯಾಗಿತ್ತು. ಸಮಯದ ಮಿತಿಯಿಲ್ಲದೆ, ಮೊಬೈಲಿನ ಕಿರಿಕಿರಿ ಇಲ್ಲದೆ...
ಆ ಮರದಲ್ಲಿ ಕುಳಿತು ಓದಿದ ಪುಸ್ತಕಗಳದೆಷ್ಟೋ,,, ಮುಗಿಸಿದ ಪರೀಕ್ಷಗಳದೆಷ್ಟೋ... ಮನೆಗೆ ನೆಂಟರು ಬಂದರೂ ನೋಡಬಹುದಾದ ಪ್ರೇಕ್ಷಣೀಯ ಜಾಗವೂ ಅದೇ ಬೋಳು ಬೆಟ್ಟವಾಗಿತ್ತು. ಬೆಟ್ಟದ ತುಂಬ ಓಡಾಟ, ಕುಂಟಲ, ಕೇಪುಳ, ಚೂರಿ ಮುಳ್ಳು, ಗೇರು ಹಣ್ಣುಗಳ ತಿನ್ನುವುದು. ಪ್ರಕೃತಿಯೊಳಗಿದ್ದೇವೆಂಬ ಅರಿವಿಲ್ಲದೇ ಸುತ್ತುವುದೇ ಸೊಗಸಾಗಿತ್ತು. ನಡಿಗೆಯೇ ವಿರಳವಾಗಿ, ಹಸಿರು ಸಂರಕ್ಷಿತ ಪ್ರದೇಶವಾಗಿರುವ ಈ ದಿನಗಳಲ್ಲಿ ಗುಡ್ಡಕ್ಕೆ ಹೋಗುವ ಸಂಪ್ರದಾಯ ಮರೆಯಾಗಿರುವುದು ಗೊತ್ತೇ ಆಗಿಲ್ಲ.... ಜೀವನ ಶೈಲಿ ಬದಲಾಗಿದ್ದರ ದ್ಯೋತಕವೂ ಇರಬಹುದು. ಅದು.

.............

ವಿಶಾಲ ಅಡಕೆ ತೋಟ, ಮನೆಯಿಂದ ತುಸು ದೂರ,. ತೋಟಕ್ಕೊಂದು ಬಿದಿರಿನ ಮುಳ್ಳುಗಳ ಗೇಟು, ಪಕ್ಕದಲ್ಲೊಂದು ಪಂಪು ಶೆಡ್ಡು, ತೋಟಕ್ಕೆ ಹಾದು ಹೋಗಿರುವ ತೋಡು, ತೋಡಿಗೊಂದು ಕಟ್ಟ (ಕಿರು ಅಣೆಕಟ್ಟು). ತೋಡಿನಲ್ಲಿ ತುಂಬಿರುವ ನೀರು, ತೋಟದ ಕಣಿಗಳಲ್ಲಿ ನಿಂತು.... ಕಡು ಬೇಸಿಗೆಯಲ್ಲೂ ಒಂಥರಾ ತಂಪು ತಂಪು. ತೋಟದ ಬೇಲಿಯಲ್ಲಿ ಅರಳಿ ನಿಂತ ಕತ್ತರಿ ದಾಸನ, ಈಟಿನ ಗಿಡಗಳು, ಕಮ್ಯೂನಿಸ್ಟು ಗಿಡಗಳು ಬಹುತೇಕ ಎಲ್ಲ ತೋಟಗಳ ಬೇಲಿಗಳಲ್ಲೂ ಕಾಣಸಿಗುವ ಸಸ್ಯ ಸಂಪತ್ತು!  ಅಂತಹ ತೋಟದ ಪಂಪಿನ ಮನೆಯಲ್ಲಿ ಗಾಢವಾಗಿ ಅಡರುವ ಡೀಸೆಲ್ಲಿನ ಕಂಪು, ನಾಲ್ಕು ಅಡಕೆ ಮರಗಳನ್ನು ಸೇರಿಸಿ ಕಟ್ಟಿದ ಒಂದು ಅಟ್ಟಣಿಗೆ ಅಥವಾ ಮಾಳ. ಕಳ್ಳರು ಅಡಕೆ ಕದ್ದಲು ಬಂದರೆ ಕಾವಲು ಕಾಯಲು ಕಟ್ಟಿದ್ದು. ಅದಕ್ಕೊಂದು ಪುಟ್ಟ ಸೋಗೆಯ ಮಾಡು, ಅಡಕೆ ಮರದ ಸಲಿಕೆಗಳ ನೆಲ.. ಒಬ್ಬ ಮನುಷ್ಯ ತೂರಿ ಮಲಗಬಹುದಾದಷ್ಟೇ ಜಾಗ. ಅದರಲ್ಲೊಂದು ಮೂರು ಬ್ಯಾಟರಿಯ ಉದ್ದದ ಟಾರ್ಚು. ಅಗತ್ಯ ಬಿದ್ದರೆ ಟಾರ್ಚಿನಿಂದಲೇ ಹೊಡೆದು ಆತ್ಮರಕ್ಷಣೆ ಮಾಡಬಹುದಾದಷ್ಟು ಬಲಿಷ್ಠವದು. ಅಂತಹ ನಿಶ್ಯಬ್ಧ ತೋಟದ ನಡುವಿನ ಅಟ್ಟಣಿಗೆಯೆಂಬ ಪುಟ್ಟ ಗೂಡು ಕೂಡಾ ಹಿಂದೊಂದು ಕಾಲದಲ್ಲಿ ಏಕಾಂತ ಕಲ್ಪಿಸಿಕೊಡಬಹುದಾಗಿದ್ದ ಪುಟ್ಟದೊಂದು ಅರಮನೆಯೇ ಹೌದು.

......................

ಮನೆಗೆ ಬರುವ ಪುಟ್ಟ ಕಚ್ಛಾರಸ್ತೆಯಲ್ಲೊಂದು ಮೋರಿ. ಮೋರಿಯಲ್ಲಿ ಬೇಸಗೆ ಮಧ್ಯದ ವರೆಗೂ ಹರಿದು ಬರುವ ಬಿಡುನೀರು (ಒರತೆ ನೀರು). ಆ ಮೋರಿಯ ಸುತ್ತಮುತ್ತಲೆಲ್ಲ ವ್ಯಾಪಿಸಿದ ಭಾರಿ ಗಾತ್ರದ ಕಾಟು (ಕಾಡು) ಮಾವಿನ ಮರ. ಮಾರ್ಚ್, ಏಪ್ರಿಲ್ ಬಂತೆಂದರೆ ಪ್ರತಿನಿತ್ಯ ಅಕ್ಷಯಪಾತ್ರೆಯಿಂದ ಬಿದ್ದಂತೆ ಬೆಳಗ್ಗಿನ ಜಾವ ಬುಟ್ಟಿ ತುಂಬ ಸಿಹಿ-ಹುಳಿ ಮಿಶ್ರಣದ ಮಾವಿನ ಸಂಗ್ರಹ. ಬೆಳಗ್ಗೆ ಮಾವು ಹೆಕ್ಕಲು ಹೋಗುವುದು ಮಕ್ಕಳ ಪಾಲಿಗೆ ಕಡ್ಡಾಯ ಕೆಲಸ. ಅಲ್ಲಿ ಕೆಂಪಿರುವೆ ಕಚ್ಚುವುದು, ಮುಳ್ಳು ತರಚುವುದು, ಹರಿಯುವ ನೀರಿನ ಪಕ್ಕದ ಕೆಸರಿನಲ್ಲಿ ಸ್ಲಿಪ್ಪರ್ ಚಪ್ಪಲಿಯ ಭಾರ ಸಡಿಲಗೊಂಡು ಚಪ್ಪಲಿ ರಿಪೇರಿ ಮಾಡಬೇಕಾಗಿ ಬರುವುದು. ಮುಳ್ಳು ತರಚಿ ಗಾಯವಾದ ಮೊಣಕಾಲು ಉರಿಯುವುದು.... ಇವೆಲ್ಲ ಮಾಮೂಲು. ಮಾವಿನ ಹಣ್ಣಿನ ನೆನಪಾದೊಡನೆ ಜೊತೆಗೆ ಬ್ರಾಕೆಟ್ಟಿನಲ್ಲಿ ಇರುವಂಥಹ ವಿಷಯಗಳವು. ಮೋರಿಯ ಆಚೆಯಿಂದ ಕಾಗದದ ದೋಣಿ ಬಿಟ್ಟು ಮೋರಿಯ ಈಚೆ ದೋಣಿ ಬರುವುದನ್ನು ನೋಡುವುದು, ಮೋರಿಯ ಪಕ್ಕದ ಬಂಡೆಯಲ್ಲಿ ಕುಳಿತು ನೀರಿಗೆ ಕಾಲು ಇಳಿಸಿ ಆಡುವುದು, ಚಪ್ಪಟೆ ಕಲ್ಲನ್ನು ನೀರಿನ ಮೇಲ್ಮೈಗೆ ಸಮಾನಾಂತರವಾಗಿ ಎಸೆದು ಕಪ್ಪೆಯಂತೆ ಜಿಗಿಸುವುದು... ಅವೆಲ್ಲ ಪುಟ್ಟದೊಂದು ಮೋರಿಯ ಕೆಳಗಿನ ನೀರಿನ ಮಹಿಮೆಗಳು... ಅದೇ ಮೋರಿಯಿಂದ ಮೇಲಿನ ಕಾಲು ದಾರಿಯಲ್ಲಿ ಹಾದರೆ ಸಿಗುವ ಬೋಳುಗುಡ್ಡದ ತುದಿಯ ಚಬುಕ್ಕಿನ ಮರಗಳ ಹಿಂಡಿನಾಚೆ ನಿಂತು ನೋಡಿದರೆ ಊರಿಗೆ ಹೊಸದಾಗಿ ಬಂದ ಬಸ್ಸು ಪ್ರತಿದಿನ ಬೆಳಗ್ಗೆ 7.45ಕ್ಕೆ ದೇವಸ್ಥಾನದಿಂದ ಹೊರಟು ಬರುವುದು ಕಾಣಿಸುತ್ತಿತ್ತು. ಅದೇ ತಿರುವಿನಲ್ಲಿ ಬಸ್ಸು ಅದೇ ರೀತಿ ಹಾರನ್ ಹಾಕುವುದು ಮಕ್ಕಳಿಗೆ ಮೊದಲೇ ಗೊತ್ತಾಗುತ್ತಿತ್ತು... ಡ್ರೈವರಿಗೆ ಕಾಣದಿದ್ದರೂ ಗುಡ್ಡದಿಂದ ಬಸ್ಸಿನತ್ತ ಕೈಬೀಸಿ ಟಾಟಾ ಮಾಡುವುದು ಮಾಮೂಲಾಗಿತ್ತು.

..........

ಎರಡು ಅಂಕಣದ ಅಡಕೆ ಸೋಗೆ ಅಥವಾ ಮುಳಿ ಹುಲ್ಲಿನ ಮಾಡಿನ ಮನೆ. ಚಾವಡಿಯ ಮೇಲೆ ಮುಚ್ಚಿಗೆ ಹಾಕಿದ ಅಟ್ಟ. ಅಟ್ಟದ ಮೇಲೆ ಕೈಸಾರಣೆ ಮಾಡಿದ ನೆಲ. ಗಾರೆಯ ಗೋಡೆ, ಅಟ್ಟದಲ್ಲೊಂದು ಪುಟ್ಟ ಕಿಟಕಿ... ಅದಕ್ಕೊಂದು ಮರದ ಬಾಗಿಲು. ನಯವಾಗಿ, ನುಣುಪಾದ ಕೈಸಾರಣೆಯ ನೆಲದಲ್ಲಿ ಕುಳಿತು ಆಡುವ ಖುಷಿ. ಹುಲ್ಲು ಮಾಡಿನ ತಂಪು, ಸುಮಾರು ಒಂದು ಮೀಟರ್ ಅಗಲದ ಕಿಟಕಿಯಿಂದ ಇಣುಕಿದರೆ ಎತ್ತರದಿಂದ ಕಾಣುವ ಜಗತ್ತು, ಪಕ್ಕದ ಕೊಟ್ಟಿಗೆಯಲ್ಲಿನ ದನಗಳು, ಆಚೆ ತುದಿಯ ತೋಟ, ಗದ್ದೆಯ ಅಂಚಿನ ಅಂಬಟೆ ಮರ, ಗುಡ್ಡದ ತುದಿಯ ಬೀಜದ ಮರಗಳು.. ಫ್ರೇಮಿನೊಳಗೆ ಕಟ್ಟಿಟ್ಟ ಚಿತ್ರಗಳ ಹಾಗೆ. ಜೋರು ಮಳೆ ಬರುವಾಗಲಂತೂ ಹಪ್ಪಳ ತಿನ್ನುತ್ತಾ ಕಿಟಕಿಯಿಂದ ಹೊರಗೆ ಇಣುಕಿದರೆ ಭಾರಿ ಗಾಳಿಗೆ ತೋಯ್ದಾಡುವ ಮರಗಳ ನರ್ತನ, ಕಿಟಕಿಯಾಚೆಯಿಂದ ತೂರಿ ಬರುವ ಹನಿಮಿಶ್ರಿತ ಗಾಳಿಯ ಕಚಗುಳಿಗೆ ಬೆಲೆ ಕಟ್ಟಲಾಗದು. ಕತ್ತಲಿನ ಅಟ್ಟ, ಮತ್ತೊಂದು ಲಾಟೀನು, ಜೋರು ಗಾಳಿ ಮಳೆ, ಹೊರ ಜಗತ್ತಿಗೆ ಸಂಪರ್ಕವೇ ಇಲ್ಲದಂಥ ಸನ್ನಿವೇಶ... ತಾನು ತಾನಾಗಿ, ತನ್ನಷ್ಟಕ್ಕೇ, ತನ್ನಂತೇ ತಾನಾಗಿ ಇರುತ್ತಿದ್ದ ಹಲವು ಮನಸುಗಳ ಬಾಲ್ಯದಲ್ಲಿ ಕಂಡ ದಿನಗಳಿವು....

....................

ವಾಸವೇ ಇಲ್ಲದ ಹಳೆಯ ಹೆಂಚಿನ ಮನೆ... ಮನೆ ಎದುರು ನಿಸ್ತೇಜವಾಗಿರುವ ಅಂಗಳ. ಅಲ್ಲಿ ಜನವಸತಿ ಇದ್ದಾಗ ನೆಟ್ಟಾಗ ಗಿಡವಾಗಿದ್ದು, ಈಗ ತನಗೆ ಬೇಕಾದಂತೆ ಬೆಳೆದಿರುವ ದಾಸವಾಳದ ಗಿಡಗಳು (ಅಕ್ಷರಶಃ ಮರಗಳು), ನೀರು ಹೊಯ್ಯದಿದ್ದರೂ ಅರಳಿ ನಿಂತಿರುವ ಅಬ್ಬಲ್ಲಿಗೆ, ಮಂಜೊಟ್ಟಿ ಗಿಡಗಳು, ಸೊರಗಿರುವ ತುಳಸಿ ಗಿಡ, ಅಂಗಳದ ಮೂಲೆಯಲ್ಲಿ ಯಾರದ್ದೂ ಉಪದ್ರ ಇಲ್ಲದೆ ಚಾರದ ಹೊದ್ದಂತೆ ಉದುರಿರುವ ಪಾರಿಜಾತದ ಹೂಗಳು, ಮೇಲೆ ತನ್ನಷ್ಟಕ್ಕೆ ಬೆಳೆದು ರೆಂಬೆ ಚಾಚಿದ ಪಾರಿಜಾತದ ವೃಕ್ಷ. ಯಾವುದೋ ಕಾಲದಲ್ಲಿ ಅದರ ಬುಡದಲ್ಲಿ ಹಾಕಿದ ಚಪ್ಪಟೆ ಕಲ್ಲಿನ ಮೇಲೆ ಬೆಳೆದ ಹುಲ್ಲು, ದನಗಳಿಲ್ಲದ ಹಟ್ಟಿ, ನಾಯಿಯೇ ಇಲ್ಲದ ಗೂಡು, ಹೊಗೆಯಾಡದ ಹೊಗೆ ನಳಿಕೆ, ನೀರು ಬಾರದ ನಳ್ಳಿ...
ಹಿತ್ತಲಿನಲ್ಲಿ ಈಗಲೂ ಫಲ ಕೊಡುತ್ತಿರುವ ಸಪೋಟ, ಪೇರಳೆ ಮರಗಳು, ಒತ್ತೊತ್ತಾಗಿ ಬೆಳೆದ ಕಹಿಬೇವು, ಮದುರಂಗಿಯ ಗಿಡ, ಸಣಕಲಾದ 18 ತಿಂಗಳ ತೆಂಗಿನ ಗಿಡ, ಬೇಲಿಗೆಂದು ನೆಟ್ಟು ಈಗ ದೊಡ್ಡಗಾರಿವು ಕ್ರೋಟನ್ನಿನ ಗಿಡ, ಬೇಲಿಯಾಚೆ ನೀರು ಹರಿದು ಹೋಗುವ ಬಿಡು ನೀರಿನ ಕಣಿ, ಪಕ್ಕದ ಬರೆಯ ಮೇಲಿನ ಗುಡ್ಡದಲ್ಲಿನ ಹಳೆಯ ಮಣ್ಣಿನ ಟಾಂಕಿ... ತುಕ್ಕು ಹಿಡಿದ ಕರೆಂಟು ಕಂಬದ ಸಪೋರ್ಟಿಂಗ್ ತಂತಿ...
ಸಾವಿರ ಕತೆಗಳನ್ನು ಹೇಳುವ ಹಳೆತಾದ ಮನೆಯಲ್ಲೂ ಒಂದು ಕಾತರವಿರುತ್ತದೆ. ಅಲ್ಲೂ ಒಂದು ವಿಚಿತ್ರ ಮೌನ... ಯಾರೂ ತೊಂದರೆ ಕೊಡದ ತನ್ನ ಪಾಡಿಗೆ ತಾನಿರುವ ತಾಣವದು...

........................

ಉಲ್ಳಾಲದಾಚೆಗೆ ಒಂದು ಸಣ್ಣ ಗುಡ್ಡ, ಗುಡ್ಡದ ಮೇಲೆ ಸೋಮನಾಥನ ದೇವಸ್ಥಾನ, ದೇವಸ್ಥಾನದ ಅಂಗಣದ ತುದಿಯಲ್ಲಿ ಪರಶುರಾಮನ ವಿಗ್ರಹ, ಕೆಳಗೆ ಅಬ್ಬರಿಸುವ ಸಮುದ್ರ, ಸಮುದ್ರದ ಅಂಚಿನಲ್ಲಿ ಶತಮಾನಗಳಿಂದ ಸೆಟೆದು ನಿಂತಂತೆ ಕಾಣಿಸುವ ರುದ್ರಪಾದೆ ಎಂಬ ಬಂಡೆ. ಅದರ ಸಂಗಾತಿಗಳಾಗಿ ಸುತ್ತಮುತ್ತ ಒಂದಿಷ್ಟು ಕರಿಗಲ್ಲುಗಳು.... ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಅತ್ತ ಇತ್ತ ಕಾಣಿಸುವ ಸಮುದ್ರದ ಡ್ರೋಣ್ ಕ್ಯಾಮೆರಾದಂಥ ಸೆರೆಹಿಡಿದ ಫೋಟೋದಂಥಹ ನೋಟ, ಮುಖಕ್ಕೆ ರಾಚುವ ತಂಪುಗಾಳಿ. ಕೆಳಗಿಳಿದು ಬಂಡೆಯ ಮೇಲೆ ಹತ್ತಿ ಕೆಳಗಿಣುಕಿದರೆ ಅಬ್ಬರಿಸಿ ಅಬ್ಬರಿಸಿ ಮತ್ತೆ ಮತ್ತೆ ಬಂದು ಬಂಡೆಗಳಿಗೆ ಮುತ್ತಿಕ್ಕುವ ಅಲೆಗಳು... ನಿರ್ಲಿಪ್ತವಾಗಿ ಬಂಡೆ ಮೇಲಿನಿಂದ ಗಾಳ ಹಾಕಿ ಮೀನು ಹಿಡಿಯುವವರು, ತಮ್ಮ ಪಾಡಿಗೆ ಜೋಡಿಗಳಾಗಿ ಸರಸ ಸಲ್ಲಾಪ ನಡೆಸುವವರು, ನೀರಿಗಿಳಿದು ಮಕ್ಕಳನ್ನು ಆಡಿಸುವವರು, ಮರಳಿನಲ್ಲಿ ಮನೆ ಕಟ್ಟುವವರು... ಮರಗಳ ತೋಪಿನಡಿಯ ಕಲ್ಲು ಬೆಂಚಿನಲ್ಲಿ ಕುಳಿತು ಸುಮ್ಮನೇ ಸಮುದ್ರವನ್ನು ನೋಡುತ್ತಾ ಕೂರುವವರು,... ಒಂಟಿಯಾಗಿ ಕಡಲ ತಡಿಯುದ್ದಕ್ಕೂ ನಡೆಯುತ್ತಾ ಒದ್ದೆ ಮರಳಿನಲ್ಲಿ ಕಾಲಿನಚ್ಚು ಮೂಡಿಸುತ್ತಾ ಹೋಗುವವರು....
ಸೋಮೇಶ್ವರದ ಸಮುದ್ರ ತೀರದಲ್ಲಿ ಜನಾಕರ್ಷಣೆಗೆಂದು ಯಾರು, ಏನೂ ಮಾಡಿಲ್ಲ, ಅಲ್ಲಿ ಬೋಟಿಂಗು, ಸೈಲಿಂಗು ಇತ್ಯಾದಿ ಇತ್ಯಾದಿಗಳೆಲ್ಲ ಇಲ್ಲ. ಅಲ್ಲಿ ಹೋಗಿ ಸುಮ್ಮನೆ ಕುಳಿತು ಬಂದರೆ ಆ ಬಂಡೆ, ಕಡಲು, ಮತ್ತು ಗುಡ್ಡಗಳೇ ಒಂದಷ್ಟು ಹೊತ್ತು ನಿಮ್ಮನ್ನು ಆವರಿಸಿ ಬಿಡುತ್ತವೆ... ಕಾಡುವ ಯೋಚನೆಗಳಿಗೆ ಕ್ಯಾನ್ವಾಸಿನಲ್ಲೊಂದು ರೂಪುರೇಷೆ ಬರೆದ ಹಾಗೆ!

.......................

ವೇಗವಾಗಿ ಹೋಗುವ ರೈಲಿನ ಬಾಗಿಲಿನ ಬಳಿ ಬಂದರೆ ಲೋಕವೇ ಬೇರೆ. ಆ ಜನಜಂಗುಳಿ, ಆ ವೇಗ, ಆ ಮಾತು, ಹರಟೆ, ನಗು, ಕಾತರ, ನಿರಾಶೆ, ವ್ಯಾಪಾರ, ಲೆಕ್ಕಾಚಾರ ಎಲ್ಲದಕ್ಕೂ ಹೊರತಾಗಿ ವೇಗವಾಗಿ ಎಲ್ಲವನ್ನೂ ಹಿಂದಿಕ್ಕಿ ಓಡುವ ರೈಲಿನ ನಾಗಾಲೋಟದ ಚಿತ್ರ ಕಟ್ಟಿಕೊಡುವ ಚೌಕಟ್ಟು ಅದು, ರೈಲಿನ ಬಾಗಿಲು. ಸುಮ್ಮನೆ ಬಾಗಿಲಿನ ಮೆಟ್ಟಿಗೆ ಕಾಲಿಳಿಸಿ ಕಂಬಿ ಹಿಡಿದು ಗಾಳಿಗಿ ಮುಖವೊಡ್ಡಿ ಕುಳಿತರೆ ಕಾಣಿಸುವ ಜಗತ್ತೇ ಬೇರೆ. ಹಿಂದಷ್ಟು ಬೋಗಿ, ಮುಂದಷ್ಟು ಬೋಗಿ... ಸಾವಿರಾರು ಮಂದಿಯ ಹೊಟ್ಟೆಯಲ್ಲಿಟ್ಟು ಧಾವಿಸುವ ವಾಹನವಲ್ಲ, ಅನಾದಿ ಕಾಲದಿಂದ ಜೊತೆಗೇ ಬಂದಿದ್ದೆವೇನೋ ಎಂಬಂತೆ ಭಾಸವಾಗಿಸುವ ಲಯಬದ್ಧ ಸದ್ದು, ಎರಚುವ ಗಾಳಿ, ಸಿನಿಮಾ ರೀಲಿನಂತೆ ಕ್ಷಣ ಕ್ಷಣಕ್ಕೂ ಕಣ್ಣಿನೆದುರು ಬದಲಾಗುವ ದೃಶ್ಯಕಾವ್ಯ... ಸಮಯ ಸರಿದದ್ದೇ ಗೊತ್ತಾಗುವುದಿಲ್ಲ ಅಲ್ವ?

…………………


ಯಾವುದೋ ಘಾಟ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಹೋಗುವಾಗ ಪ್ರಪಾತದ ಅಂಚಿನಲ್ಲಿ ವ್ಯೂ ಪಾಯಿಂಟ್ ಎಂದು ಕರೆಯಲಾಗುವ ಜಾಗದಲ್ಲಿ ಸುಮ್ಮನೆ ನಿಶ್ಯಬ್ಧವಾಗಿ ನಿಂತು ಕೆಳಗಿನ ಕಣಿವೆಗೊಮ್ಮೆ ಕಿವಿಯನ್ನು ಆನಿಸಿ ನಿಂತು ಗಮನಿಸಿ... ಜೀರುಂಡೆಯ ಸದ್ದು, ಹಕ್ಕಿಗಳ ಚಿಲಿಪಿಲಿ, ಸಾವಿರಗಟ್ಟಲೆ ಶೇಡುಗಳಲ್ಲಿ ಕಾಣುವ ಹಸಿರೋ ಹಸಿರು, ಆ ಹಸಿರಿನ ನಡುವಿನಿಂದ ಸೂಕ್ಷ್ಮವಾಗಿ ಆಲಿಸಿದರೆ ಮಾತ್ರ ಕೇಳಿಸುವ ಅಬ್ಬಿಯೊಂದು ಧುಮುಕುವ ಸದ್ದು, ಹೆಸರು ಗೊತ್ತಿಲ್ಲದ ಆರ್ಕೀಡ್ ಹೂವುಗಳು, ಛಂಗನೆ ನಗೆಯುವ ಕೋತಿ, ಇಬ್ಬನಿಯನ್ನು ತುದಿಯಲ್ಲಿ ಧರಿಸಿದ ಚೂಪು ಹುಲ್ಲುಗಳು... ಎಲ್ಲಕ್ಕಿಂತ ಮಿಗಿಲಾಗಿ ಸೂರ್ಯೋದಯ ತುಸು ಬೆಚ್ಚಿನ ಕಿರಣದ ನಡುವೆ ಹಾಯೆನಿಸುವ ತಂಪು ಗಾಳಿ... ಯಾವತ್ತೋ, ಎಂದೋ ಒಮ್ಮೆ, ಒಂದಷ್ಟು ಹೊತ್ತು ಮಾತ್ರ ಸವಿಯಬಹುದಾದ ಅನುಭೂತಿ...

..............

ಇದೇನು ಯಾರೂ ಬಯಸಿ ಬರುವ ಅಕ್ಕರೆಯ ತಾಣವಲ್ಲ...
ಅದು ಆಸ್ಪತ್ರೆಯ ತೀವ್ರ ನಿಗಾ ಘಟಕದ ಹೊರಗಿನ ಪಡಸಾಲೆ!
ರೋಗಿ ಆಡ್ಮಿಟ್ ಆಗಿರುತ್ತಾನೆ, ತೀವ್ರ ನಿಗಾ ಚಿಕಿತ್ಸೆಯಲ್ಲಿರುತ್ತಾನೆ, ಸಂಬಂಧಿಕರು ಹೊರಗಿನ ಪಡಸಾಲೆಯಲ್ಲಿ ಕುಳಿತಿರಬೇಕು. ಕೇಳಿದ ಔಷಧಿ ತಂದು ಕೊಡಬೇಕು. ಸಂಬಂಧಿಕರಿಗೆ ರೋಗಿಯ ಆರೋಗ್ಯದ ಬೆಳವಣಿಗೆಯನ್ನು ನೀಡುತ್ತಾ ಇರಬೇಕು. ರಾತ್ರಿ ಒಬ್ಬರಿಗಿಂತ ಹೆಚ್ಚು ಮಂದಿ ಆ ಪಡಸಾಲೆಯಲ್ಲಿ ನಿಲ್ಲುವಂತಿಲ್ಲ, ಪ್ರತ್ಯೇಕ ಕೊಠಡಿ ಪಡೆಯುವಂತಿಲ್ಲ ಮತ್ತಿತರ ನಿಯಮಗಳು. ಆಗೊಮ್ಮೆ, ಈಗೊಮ್ಮೆ ಅವಸವರಸರವಾಗಿ ಓಡಾಡುವ ಡಾಕ್ಟರುಗಳು, ಈ ಬಾಗಿಲನಿಂದ ಹೋಗಿ ಮತ್ತೊಂದು ಬಾಗಿಲಿನಿಂದ ಮಾಯವಾಗುವ ಸ್ಪೆಷ್ಟಲಿಸ್ಟುಗಳು, ಇದೆಲ್ಲ ಏನು ಮಹಾ ಎಂಬಂಥೆ ಮಾಮೂಲಿಯಾಗಿ ಪಟ್ಟಾಂಗ ಹೊಡೆಯುತ್ತಿರುವ ಸೆಕ್ಯೂರಿಟಿ ಗಾರ್ಡುಗಳು... ಎಷ್ಟೊಂದು ದುಗುಡ ಹೊತ್ತ ಮನಸ್ಸುಗಳು ಆ ಪಡಸಾಲೆಯಲ್ಲಿ, ಆಸ್ಪತ್ರೆಗೆ ಬಂದಾತ ಮರಳುತ್ತಾನೆಯೇ... ಗುಣಮುಖನಾದಾನೇ... ಮುಂದಿನ ಕಥೆಯೇನು? ಗತಿಯೇನು? ಯಾವುದೂ ಖಚಿತವಿಲ್ಲ. ಒಂಥರಾ ಹಿಂಸೆ ನೀಡುವ ಮೌನ. ಅಲ್ಲಿ ಹಗಲಿರುಳುಗಳ ಭೇದವಿಲ್ಲ, ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಅಲ್ಲಿರುವ 10-15 ಮಂದಿಯ ಮಡುಗಟ್ಟಿದ ಮನಸ್ಸಿನಲ್ಲಿ ಹೊರಳಾಡುತ್ತಿರುವ ತೊಳಲಾಟಗಳು ದಾಖಲೆಗೆ ಸಿಗುವಂಥದ್ದಲ್ಲ.... ಧನಾತ್ಮಕ, ಋಣಾತ್ಮಕ ಚಿಂತನೆಗಳಿಗೆ ಅತೀತವಾದ ಒಂದು ದಿವ್ಯ ನಿರ್ಲಿಪ್ತ ಪ್ರಜ್ಞೆಗೆ ಅಲ್ಲಿ ಉತ್ತರ ಸಿಗುವುದು ಕಾಲದಿಂದ ಮಾತ್ರ. ಅಲ್ಲಿಯ ತನಕ ಆ ಪಡಸಾಲೆ, ಫಿನಾಯಿಲ್ ಘಾಟು, ಡಾಕ್ಟ್ರು, ಸಿಸ್ಟರುಗಳ ಓಡಾಟ, ಸ್ಟ್ರೆಚರು, ಟೆಸ್ಟಿಂಗು, ವಿಸಿಟಿಂಗ್ ಅವರ್ಸು... ಹೀಗೆ ಒಂದಾದ ಮೇಲೆ ಒಂದು ದೃಶ್ಯಗಳಂತೆ ಬದಲಾಗುತ್ತಲೇ ಇರುತ್ತದೆ... ಒಂದು ನಿರ್ಧಾರ ಆಗುವ ತನಕ!

..............

ಶಾಲೆಯ ಮೂಲೆಯಲ್ಲಿನ ಯಾವುದೋ ಒಂದು ಬೆಂಚು, ವಿಶಾಲ ಕಾಲೇಜಿನ ದೊಡ್ಡ ಲೈಬ್ರೈರಿಯ ಮೂಲೆಯ ಒಂದು ಏಕಾಂತದ ಟೇಬಲ್ಲು, ಕ್ಯಾಂಟೀನಿನ ಫ್ಯಾಮಿಲಿ ರೂಮಿನ ಯಾವುದೋ ಒಂದು ಬೆಂಚು, ದಿನಾ ಶಾಲೆಗೆ ಹೋಗುತ್ತಿದ್ದಾಗ ಕೂರುತ್ತಿದ್ದ ಎಂಜಿನ್ ಬಾಕ್ಸ್ ಪಕ್ಕದ ಅಡ್ಡ ಸೀಟು, ಊರಿನ ಹೊಳೆಯ ಪಕ್ಕದ ಬಟ್ಟೆ ಒಗೆಯುವ ಬಂಡೆ, ಮನೆಯ ಹಿಂದಿನ ಸುರಂಗ, ಗದ್ದೆಯ ಬದುವಿನ ಹಿಂದಿನ ಪುಟ್ಟ ತೋಡಿನಲ್ಲಿ ಮಳೆಗಾಲದಲ್ಲಿ ಮಾತ್ರ ಸೃಷ್ಟಿಯಾಗುವ ಕಿರು ಜಲಪಾತ, ಊರಿನ ಜಾತ್ರೆ ಸಂದರ್ಭ ದೇವಸ್ಥಾನದಲ್ಲಿ ದೇವರ ಬಲಿ ನೋಡಲು ನಿಲ್ಲುವ ಸರಳುಗಳುಳ್ಳ ಕಿಟಕಿಯ ಗೋಪುರದ ಪಡಸಾಲೆ, ಮನುಷ್ಯ ಸಂಚಾರವೇ ಇಲ್ಲದೆ ಶಾಲೆಗೆ ತಲುಪಿಸುವ ಕಾಲು ದಾರಿ, ಪೇಟೆಯ ನಡುವಿನ ಪುಟ್ಟ ಪಾರ್ಕಿನಲ್ಲಿ ಸುರಗಿ ಮರದ ಅಡಿಯಲ್ಲಿದ್ದ ಖಾಯಂ ಬೆಂಚು, ಯಾವುದೋ ಅಂಗಡಿಯ ಹೊರಗಿನ ಎಸ್ ಟಿಡಿ ಬೂತ್,... ಹೀಗೆ ಸಾವಿರ ಸಾವಿರ ತಾಣಗಳಿರಬಹುದು ನಿಮ್ಮನ್ನು ನೀವಾಗಿ ಕಾಣುವಲ್ಲಿ ನೆರವಾಗಿದ್ದು, ವರವಾಗಿದ್ದಿರಬಹುದಾಂಥವುಗಳು.  

…………………..

ಪರಿವಾರ, ವೃತ್ತಿ, ಹವ್ಯಾಸ,... ಹೀಗೆ ಹತ್ತು ಹಲವು ಆಯಾಮಗಳ ಬದುಕಿನಲ್ಲಿ ಎಲ್ಲಾ ಕಡೆ ನಾವು ನಾವಾಗಿರುವುದಿಲ್ಲ. ಐಶಾರಾಮವೇ ಮನುಷ್ಯನಿಗೆ ಸುಖ ನೀಡುವುದಲ್ಲ, ತಣಿಸುವುದಲ್ಲ. ನಮ್ಮನ್ನು ನಾವಾಗಿಸುವ ತಾಣಗಳು ಕೆಲವು ಮಾತ್ರ. ನಿಮ್ಮ ನೆನಪುಗಳ ಬುತ್ತಿಯಲ್ಲಿ, ಪ್ರಸ್ತುತ ಬದುಕಿನಲ್ಲಿ ಇನ್ನಷ್ಟು ತಾಣಗಳಿದ್ದಾವು,.. ಕೆಲವು ಹೇಳಬಲ್ಲವು, ಕೆಲವು ಹೇಳಲು ಕಷ್ಟವಾಗಬಹುದಾದ ಜಾಗಗಳು. ನಮ್ಮೊಳಗೆ ನಾವಿಳಿದು ಚಿಂತಿಸಲು, ಯೋಚಿಸಲು, ಆಫ್ ಲೈನುಗಳಾಗಿ ಒಂದಷ್ಟು ಕಾಲ ಪುನಶ್ಚೇತನಗೊಳ್ಳಲು ಬೇಕಾದ ಅನುಭೂತಿ ಸೃಷ್ಟಿಸಿ, ನಮ್ಮನ್ನು ನಾವಾಗಿಸಿ ಮತ್ತದೇ ಆನ್ ಲೈನ್ ಜಗತ್ತಿನ ಚರ್ವಿತ ಚರ್ವಣದ ಧಾವಂತಕ್ಕೆ ತಳ್ಳಿ ಬಿಡುವಂಥಹ ಅಚ್ಚು ಮೆಚ್ಚಿನ ಕಿಚ್ಚು ಹಿಡಿಸುವ ನೆಚ್ಚಿನ ಆ-ಸ್ಥಾನಗಳು....!!!

-ಕೃಷ್ಣಮೋಹನ ತಲೆಂಗಳ.