ನಮಗೆ ಬೇಕಾದ್ದು ಮಾತ್ರ ನಾವು ಕೇಳಿಸುತ್ತೇವೆ!
ಇತ್ತೀಚೆಗೆ ವಾಟ್ಸಪ್ಪಿನಲ್ಲಿ ಯಾರದ್ದೋ ಸ್ಟೇಟಸ್ಸಿನಲ್ಲಿ ಓದಿದ ಸಾಲುಗಳು ತುಂಬ ಆಪ್ತವಾದವು. “ನೀವು ಎಲ್ಲರಲ್ಲೂ ಎಲ್ಲವನ್ನೂ ಹೇಳಿಕೊಳ್ಳುತ್ತಲೇ ಹೋಗಬೇಡಿ... ಜನರಿಗೆ ಅಷ್ಟೆಲ್ಲ ಪುರುಸೊತ್ತು ಇರುವುದಿಲ್ಲ, ತಮಗೆ ಬೇಕಾದ್ದನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ...” ಹೌದಲ್ವ..?.
ನಾವು ತುಂಬ ಬಿಝಿ,
ಟೈಮಿಲ್ಲ ಅಂತ ಲೆಕ್ಕ. ಆದರೆ ಪ್ರತಿಯೊಬ್ಬರಿಗೂ ತಮ್ಮ ಬಗ್ಗೆ ತಾವು
ಹೇಳಿಕೊಳ್ಳುವ, ತೋರಿಸಿಕೊಳ್ಳುವ ತುಡಿತ. ಎಲ್ಲರೂ ಹೇಳುವವರಾದರೆ ಕೇಳುವವರು ಯಾರು? ದಾಕ್ಷಿಣ್ಯಕ್ಕೆ ಯಾರ ಬಳಿಯೋ
ಪ್ರಾಮಾಣಿಕರಾಗಿ ಸಮಸ್ಯೆಗಳು, ನೋವುಗಳನ್ನು, ಸಂಧಿಗ್ದತೆಗಳನ್ನು ಹೇಳುತ್ತೀರಿ ಅಂತ
ಇಟ್ಟುಕೊಳ್ಳೋಣ. ತೀರಾ ಆಪ್ತ ವಲಯದವರನ್ನು ಹೊರತುಪಡಿಸಿ ಇನ್ಯಾರೂ ನೀವು ಹೇಳಿದ್ದಕ್ಕೆ
ಹೂಂಗುಡುತ್ತಿರುತ್ತಾರೆ ವಿನಃ ಎಲ್ಲವನ್ನೂ ಕೇಳುವುದಿಲ್ಲ, ಕೇಳಲು ಸಾಧ್ಯವೂ ಇಲ್ಲ. ಎಷ್ಟೋ ಬಾರಿ
ಕೇಳಿದ ಬಳಿಕ ಅವರೇನೂ ಮಾಡುವುದಕ್ಕೂ ಆಗುವುದಿಲ್ಲ... ಯಾಕೆಂದರೆ ಅವರೊಳಗೂ ಹೇಳಿಕೊಳ್ಳುವಂಥಹ
ವಿಚಾರಗಳು ಸಾಕಷ್ಟು ಬಾಕಿ ಇರುತ್ತವೆ....
ಇಷ್ಟಕ್ಕೂ, ನಾವೆಲ್ಲರೂ
ಅಷ್ಟೇ. ನಮ್ಮ ಕೆಲಸವಾದ ಬಳಿಕ, ಒಂದು ಸ್ಥಳದಲ್ಲಿ ನಮ್ಮ ಇರುವಿಕೆಯ ಅವಧಿ ತೀರಿದ ಬಳಿಕ ಅದೇ
ವಿಚಾರದ ಬಗ್ಗೆ, ಅಲ್ಲಿರುವವರ ಬಗ್ಗೆ, ಆ ಸ್ಥಳದ ಬಗ್ಗೆ ಎಷ್ಟು ನೆನಪಿಟ್ಟುಕೊಳ್ಳುತ್ತೇವೆ ಹೇಳಿ.
ಅವೆಲ್ಲ ಈ ಕಣ್ಣಿನಲ್ಲಿ ನೋಡಿ ಆ ಕಣ್ಣಿನಲ್ಲಿ ಬಿಡುವಂಥಹ ಸಂದರ್ಭಗಳು. ತೀರಾ ಆಪ್ತರು,
ಆತ್ಮೀಯರೂ, ಮನೆ ಮಂದಿ, ಸ್ನೇಹಿತರ ವಲಯ ಹೊರತುಪಡಿಸಿದರೆ ಮತ್ತೆಲ್ಲ ಬದುಕಿನಲ್ಲಿ ಬಹುತೇಕ
ವ್ಯವಹಾರವೇ. ಮತ್ತೆ ಜಂಕ್ ಫೈಲ್ ಥರ ನೋಡಿದ್ದನ್ನು, ಕಂಡದ್ದನ್ನು ಪ್ರತಿಯೊಂದನ್ನೂ ಮನಸ್ಸಿನಲ್ಲಿ
ಸೇವ್ ಮಾಡುತ್ತಾ ಹೋದರೆ ಬಹುಶಃ ಅದನ್ನು ನಿಭಾಯಿಸಲು ಕಷ್ಟವಾದೀತು... ನಾವೆಷ್ಟು ಆಯ್ಕೆಯಿಂದ
ನೆನಪಿಡುತ್ತೇವೆ ಎಂಬುದು ಈ ಕೆಳಗಿನ ಅಂಶಗಳನ್ನು ಗಮನಿಸಿದರೆ ತಿಳಿದೀತು.
-ನೀವೊಂದು ತರಕಾರಿ ಅಂಗಡಿಗೆ
ಹೋಗುತ್ತೀರಿ. ಚೌಕಾಸಿ ಮಾಡಿ ಉತ್ತಮ ತರಕಾರಿಯನ್ನೇ ಆರಿಸಿ ತರುತ್ತೀರಿ. ನೀವು ಬಂದ ಬಳಿಕವೂ ಸಂಜೆ
ವರೆಗೂ ವ್ಯಾಪಾರಿ ಅಲ್ಲೇ ಇರುತ್ತಾನೆ. ಉಳಿದ ತರಕಾರಿ ಏನಾಯಿತು? ಕೊಳೆತದ್ದು ಎಲ್ಲಿಗೆ ಹೋಯಿತು? ದಿನದ ವ್ಯಾಪಾರದಲ್ಲಿ ಆತನಿಗೆ
ಲಾಭವಾಯಿತಾ, ನಷ್ಟವಾಯಿತಾ? ಎಂದೆಲ್ಲ ಯೋಚಿಸುತ್ತಾ,
ಚಿಂತಿಸುತ್ತಾ ಕೂರುತ್ತೀರ?
-ಒಂದು ನೈಟ್ ಬಸ್ಸಿನಲ್ಲೋ,
ರೈಲಿನಲ್ಲೋ ಅಥವಾ ಟ್ಯಾಕ್ಸಿಯಲ್ಲೋ 10-12 ಗಂಟೆ ಪ್ರಯಾಣ ಮಾಡ್ತೀರಿ... ಕಂಡಕ್ಟರ್, ಡ್ರೈವರ್
ಜೊತೆ ಹರಟೆ ಹೊಡೆಯುತ್ತೀರಿ. ಪ್ರಯಾಣ ಖುಷಿ ಅನುಭವಿಸ್ತೀರಿ... ಪ್ರಯಾಣ ಮುಗಿಯುವ ತನಕ ಎಲ್ಲಿಯೇ
ವಾಹನದಿಂದ ಇಳಿದ ಬಳಿಕವೂ ಪುನಃ ಏರಿದಾಗ “ಅದು ನನ್ನ ಸೀಟು” ಅಂತ ಅಧಿಕಾರ ಸ್ಥಾಪಿಸುತ್ತೀರಿ. ಅದೇ ವಾಹನದಿಂದ
ಇಳಿದ ಬಳಿಕ ಆ ವಾಹನ ಎಲ್ಲಿಗೆ ಹೋಯಿತು? ಕಂಡಕ್ಟರ್ ಮನೆಗೆ
ಹೋಗುತ್ತಾನೆಯೇ? ಈ ಬಸ್ಸಿನ ಇತರ
ಪ್ರಯಾಣಿಕರು ಎಲ್ಲಿ ಇಳಿಯುತ್ತಾರೆ? ಎಂದೆಲ್ಲ ಯೋಚಿಸುತ್ತಾ
ಅಲ್ಲೇ ನಿಲ್ಲುತ್ತೀರ ಅಥವಾ ಮನೆಗೆ ಹೋಗುತ್ತೀರ. ಹೆಚ್ಚೆಂದರೆ ಒಂದು ವಾರ, ನಂತರ ನಿಮಗೆ ವಾಹನದ
ನಂಬರ್, ನೀವು ಕುಳಿತ ಸೀಟಿನ ನಂಬರ್ ಸಹಿತ ಮರೆತುಹೋಗಿರುತ್ತದೆ. ಹಾಗಿದ್ದರೆ 10-12 ಗಂಟೆಯ
ಅವಧಿಯ ವಾಹನದ ಜೊತೆಗಿನ ಆತ್ಮೀಯತೆ ಆ ಪ್ರಯಾಣಕ್ಕೆ ಮಾತ್ರ ಸೀಮಿತ. ನಮಗೆಷ್ಟು ಬೇಕೋ ಅಷ್ಟೇ...
-ಎಲ್ಲೋ ರಸ್ತೆ ಮಧ್ಯೆ
ವಾಹನದಡಿಗೆ ಬಿದ್ದು ನಾಯಿ ಮರಿಯೋ, ಬೆಕ್ಕಿನ ಮರಿಯೋ ಸತ್ತಿರುತ್ತದೆ. ಅಥವಾ ಯಾವುದೋ
ಅಪಘಾತವಾಗಿರುತ್ತದೆ. ಆ ಪರಿಸ್ಥಿತಿ ನೋಡಿ ಮನಸ್ಸು ಮರುಗುತ್ತದೆ. ಬದುಕು ಕಳಕೊಂಡವರ ಆಪ್ತರ
ಬಗ್ಗೆ ಮನಸ್ಸು ಯೋಚಿಸುತ್ತದೆ. ಆ ಸನ್ನಿವೇಶ ಸಂಭವಿಸಿದ ಕ್ಷಣದ ಭೀಕರತೆಯ ಕುರಿತು ಮನಸ್ಸು
ಚಿಂತಿಸುತ್ತದೆ. ಮರುಗಿದ ಸ್ಥಿತಿಯಲ್ಲೇ ಅಲ್ಲಿಂದ ಮುಂದೆ ಹೋಗುತ್ತೀರಿ. ಪ್ರಯಾಣ ಮುಗಿದು ಸ್ವಲ್ಪ
ಹೊತ್ತು ಆ ಘಟನೆ ಬಗ್ಗೆ ನೆನಪು ಇದ್ದೀತೇ ವಿನಃ ಆ ಕಳೇಬರವನ್ನು ಯಾರು ತೆಗೆದರು? ನಂತರ ಅಲ್ಲಿ ಏನಾಯಿತು...? ಅದನ್ನೆಲ್ಲ ಸಂಶೋಧನೆ ಮಾಡುತ್ತಾ
ಕೂರುತ್ತೀರ? ಇಲ್ಲವಲ್ಲ.
-ಸಹ ಪ್ರಯಾಣಿಕರು, ಸಿನಿಮಾ
ಮಂದಿರದಲ್ಲಿ ಪಕ್ಕದಲ್ಲಿ ಕೂರುವವರು, ಹೊಟೇಲಿನಲ್ಲಿ ಎದುರಿನ ಕುರ್ಚಿಯಲ್ಲಿ ಕುಳಿತಿದ್ದವರು,
ಆಸ್ಪತ್ರೆಯಲ್ಲಿ ಇಂಜಕ್ಷನ್ ನೀಡಿದ ನರ್ಸು, ವಾಹನ ಸರ್ವಿಸ್ ಮಾಡಿದ ಸರ್ವಿಸ್ ಅಡ್ವೈಸರು,
ಕಷ್ಟಕಾಲದಲ್ಲಿ ಟಯರ್ ಪಂಕ್ಚರ್ ಆದಾಗ ಪ್ಯಾಚ್ ಮಾಡಿ ಕೊಟ್ಟ ಪುಣ್ಯಾತ್ಮ, ಬೈಕಿನಲ್ಲಿ ಪೆಟ್ರೋಲ್
ತೀರಿ ಹೋದಾಗ ತಮ್ಮ ವಾಹನದಲ್ಲಿ ಕರೆದೊಯ್ದು ಶೀಷೆಯಲ್ಲಿ ಪೆಟ್ರೋಲ್ ತರಿಸಿಕೊಟ್ಟು ಮುಂದೆ ಹೋಗಲು
ಅನುವು ಮಾಡಿಕೊಟ್ಟವರು, ಕಳೆದುಕೊಂಡ ಪರ್ಸನ್ನು ಹುಡುಕಿಕೊಟ್ಟವರು, ಬಸ್ಸಿನಲ್ಲಿ ಸೀಟು ಬಿಟ್ಟು
ಕೊಟ್ಟವರು, ಕೈಯ್ಯಲ್ಲಿ ದುಡ್ಡಿಲ್ಲದಾಗ ಟಿಕೇಟಿಗೆ ಆಂತ ತಾವಾಗಿ ಒಂದಷ್ಟು ನೋಡು
ತೆಗೆದುಕೊಟ್ಟವರು, ಕೇಳಿದ ಕೂಡಲೇ ಸಾಲ ಒದಗಿಸಿದವರು... ಇಂತಹ ಸಾವಿರಾರು ಮಂದಿಯನ್ನೆಲ್ಲ
ನೆನಪಿಟ್ಟು ಮತ್ತೆ ಮತ್ತೆ ಮಾತನಾಡಿಸುತ್ತೀರ, ಪತ್ರ ಬರೆಯುತ್ತೀರ, ಕರೆಸಿ ಸನ್ಮಾನ ಮಾಡುತ್ತೀರ....?
-ಮೊಬೈಲಿನಲ್ಲಿ,
ಜಾಲತಾಣಗಳಲ್ಲಿ ಪ್ರತಿನಿತ್ಯ ತಲೆಚಿಟ್ಟು ಹಿಡಿಯುವಷ್ಟು ಸೂಕ್ತಿ, ಹಿತವಚನ, ನೀತಿಕತೆಗಳನ್ನು
ನೋಡುತ್ತೇವೆ. ಅವನ್ನೆಲ್ಲ ಡೌನ್ ಲೋಡ್ ಮಾಡುತ್ತೇವೆಯಾ? ಮಾಡಿದರೂ ಎಲ್ಲವನ್ನೂ ಓದುತ್ತೇವೆಯಾ? ಓದಿದರೂ ಮನಸ್ಸಿಗೆ ಅರ್ಥ
ಮಾಡಿಕೊಳ್ಳುತ್ತೇವೆಯಾ? ವಿಚಾರ ಅರ್ಥವಾದರೂ ಅವನ್ನು
ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇವೆಯಾ...? ಹೆಚ್ಚೆಂದರೆ ಇಷ್ಟವಾದ
ಸಾಲುಗಳನ್ನು ಕಾಪಿ, ಫಾರ್ವರ್ಡ್ ಅಥವಾ ಮೂಲ ಲೇಖಕನ ಹೆಸರು ಕ್ರಾಪ್ ಮಾಡಿ ಶೇರ್ ಮಾಡಬಹುದು! ಫಾರ್ವರ್ಡ್ ಮಾಡಬಹುದು. “ಅಬ್ಬ ಎಂತಹ ಚಂದದ ಸಾಲು” ಅಂತ ಲೈಕು ಕೊಡಬಹುದು. ಆದರೆ ಅವನ್ನು ನಮ್ಮ ಬದುಕು
ಬದಲಾಗುವುದಿಲ್ಲ. ನಮ್ಮ ತಿಕ್ಕಲುತನಗಳು ಹಾಗೆಯೇ ಇರುತ್ತವೆ. ಸೂಕ್ತಿ ಅದರ ಪಾಲಿಗೆ
ಸ್ಟೇಟಸ್ಸಿನಲ್ಲಿ ಪೋಸು ಕೊಟ್ಟು 24 ಗಂಟೆಗಳ ಬಳಿಕ ಕಣ್ಮರೆಯಾಗುತ್ತದೆ... ಸೂಕ್ತಿಗಳಿಗೆ ಲೈಕು
ಕೊಡುವುದು ಬೇರೆ, ಅಳವಡಿಸಿಕೊಳ್ಳುವುದು ಬೇರೆ...ಹಾಗಿದ್ದರೆ ನಾವು ಬಹುತೇಕರೂ ಅಷ್ಟೇ... ತುಂಬ
ಸ್ಟೇಟಸ್ಸುಗಳನ್ನು ನೋಡುತ್ತೇವೆ, ನೋಡಿದ್ದಕ್ಕೆಲ್ಲ ಕಮೆಂಟು ಹಾಕುತ್ತೇವಾ...? ಇಲ್ವಲ್ಲ. ತುಂಬ ಮಂದಿ ಬೆಳಗ್ಗೆದ್ದು
ಗುಡ್ ಮಾರ್ನಿಂಗ್ ಅಂತ ಬ್ರಾಡ್ ಕಾಸ್ಟ್ ಮೆಸೇಜು ಕಳಿಸ್ತಾರೆ ವಾಟ್ಸಪ್ಪಿನಲ್ಲಿ. ಅವುಗಳಲ್ಲಿ
ಪ್ರತಿಯೊಂದನ್ನೂ ಡೌನ್ ಲೋಡ್ ಮಾಡಿ ಮರು ಗುಡ್ ಮಾರ್ನಿಂಗ್ ಹೇಳುತ್ತೇವಾ...? ಬೇಕಾದ್ದು ಮಾತ್ರ ಕೇಳುತ್ತೇವೆ,
ಬೇಕಾದ್ದು ಮಾತ್ರ ನೆನಪಿಟ್ಟುಕೊಳ್ಳುತ್ತೇವೆ, ಬೇಕಾದಾಗ ಮಾತ್ರ ಪ್ರತಿಕ್ರಿಯೆ ನೀಡುತ್ತೇವೆ… ಗ್ರೂಪುಗಳಲ್ಲಿಯೂ ಅಷ್ಟೇ ತುಂಬ ಮಂದಿ ತಮಗೆ ಬೇಕಾದಾಗ, ಏನಾದರೂ ತಿಳಿದುಕೊಳ್ಳಲು ಅಗತ್ಯವಿದ್ದಾಗ ಮಾತನಾಡುತ್ತಾರೆ. ಮತ್ತೆ ನಾಪತ್ತೆ. ಇತರ ಸಂದರ್ಭಗಳಲ್ಲಿ ವೈಯಕ್ತಿಕ ಸಂದೇಶಗಳಿಗೂ ಉತ್ತರಿಸದೆ ನಿರ್ಭಾವುಕರಾಗಿ ಇರುತ್ತಾರೆ. ಹೌದು ತಾನೆ?.
ತುಂಬ ಸಲ
ಸಿದ್ಧಾಂತಗಳನ್ನು, ಸೂಕ್ತಿಗಳನ್ನು, ಹೀಗಿರಬೇಕು, ಹೀಗಿರಬಾರದು ಅಂತ ಓದಲು, ಬರೆಯಲು, ಶೇರ್
ಮಾಡಲು ಖುಷಿಯಾಗುತ್ತದೆ, ಸುಲಭ ಅನ್ನಿಸುತ್ತದೆ.... ಆಚರಣೆ ವಿಚಾರಕ್ಕೆ ಬಂದಾಗ ಅಂತಹ
ಸೂಕ್ಷ್ಮತೆ, ಅಂತಹ ಬದ್ಧತೆ ಹಾಗೂ ಅಂತಹ ಆಳವಾದ ಶ್ರೋತೃವಾಗಿ, ಸಹನೆಯ ಮೂರ್ತಿಯಾಗಿ,
ಹೇಳಿದ್ದಕ್ಕೆಲ್ಲ ಬದ್ಧರಾಗಿ ಇರುವುದಕ್ಕೆ ತುಂಬ ಕಷ್ಟವಾಗುತ್ತದೆ... ಈ ಸತ್ಯವನ್ನು
ಒಪ್ಪಿಕೊಳ್ಳುವುದಕ್ಕೂ ಸಹ!!! ನೀಮಗೇನನ್ನಿಸುತ್ತದೆ?
-ಕೃಷ್ಣಮೋಹನ ತಲೆಂಗಳ
(06.12.2020)
No comments:
Post a Comment