ತನ್ನಷ್ಟಕ್ಕೆ ಇರುವುದನ್ನು ಕಂಡುಕೊಂಡಿದ್ದೇವೆ ಎಂಬ ಭ್ರಮೆಗಳು...!
ವಿಶಾಲ ಅಂಗಳದ ಕೆಳಗೊಂದು ಅಂಕುಡೊಂಕಾದ ತೋಡು. ಅದರಾಚೆಗೆ ಹಳೆ ಅಡಕೆ ತೋಟ. ತೋಡಿನ ದಂಡೆಯ ಕಲ್ಲುಗಳೆಡೆಯಿಂದ ವಕ್ರ ವಕ್ರವಾಗಿ ಮೇಲೆದ್ದು ಬಾನಗಲಕ್ಕೆ ವ್ಯಾಪಿಸಿದ ಭಾರಿ ಗಾತ್ರದ ಹಲಸಿನ ಮರ. ಅದೊಂದು ಶತಮಾನಗಳಿಂದಲೂ ಅಲ್ಲಿಯೇ ಇದೆಯೇನೋ ಎಂಬ ಹಾಗೆ ಭಾಸವಾಗುವಷ್ಟು ಪುರಾತನ. ಅಜ್ಜ ಸಣ್ಣವರಾಗಿದ್ದಾಗಲೂ ಫಲ ಕೊಡುತ್ತಿತ್ತು, ಈಗಲೂ ಹಾಗೆಯೇ ಇದೆ, ಮತ್ತಷ್ಟು ಬೆಳೆದಿದೆ, ಎತ್ತರ, ವಿಸ್ತಾರ ಲೆಕ್ಕ ಹಾಕಲು ಕಷ್ಟವಾಗುವಷ್ಟು.
ಆಲಿಂಗನಕ್ಕೆ ಸಿಕ್ಕದಷ್ಟು ಅಗಲದ ಬುಡ, ತೊಗಟೆಗಳು ಕಳಚಿ
ಬೀಳುತ್ತಿದ್ದರೂ ಮತ್ತಷ್ಟು ಗಟ್ಟಿಯಾಗಿ ನೆಲವನ್ನು ಅವುಚಿ ನಿಂತ ಹಾಗೆ ಭಾಸವಾಗುವ ಹಾಗೆ. ಜಾರಿ
ಬಿದ್ದ ತೋಡಿನ ಕಟ್ಟಣಪುಣಿಯ ನಡುವೆ ಭೀಮಗಾತ್ರದ ಮರವೊಂದು ಹೇಗೆ ತಾನೆ ಅಷ್ಟು ಗಟ್ಟಿಯಾಗಿ ಎದ್ದು
ನಿಂತಿದೆ ಎಂಬಷ್ಟು ಅಚ್ಚರಿ ಮೂಡಿಸುತ್ತದೆ ಹಳೇ ಹಲಸಿನ ಮರ. ಗಮನಿಸಿದರೆ ಮಾತ್ರ. ಇಲ್ಲವಾದರೆ, ಈ
ಮರದಲ್ಲಿ ಹೊಸತೇನಿದೆ...? ನಾನು ಹುಟ್ಟುವಾಗಲೇ ಇದ್ದದ್ದು, ಈಗಲೂ ಇದೆ, ಮತ್ತಷ್ಟು
ದೊಡ್ಡದಾಗಿದೆ. ಅಸಲಿಗೆ ಇಂತಿಷ್ಟೇ ದೊಡ್ಡದಾಗಿದೆ ಎಂದೂ ಲೆಕ್ಕ ಹಾಕಲಾಗದು. ಆ ಮಟ್ಟಿಗೆ ಅದು
ನಿತ್ಯ ಬದುಕಿನ ಒಂದು ಸಾಮಾನ್ಯ ಅಂಗದ ಹಾಗೆ...
ಅಂಗಳದ ಉದ್ದಕ್ಕೂ ಉದುರಿ ಹಾರಾಡುವ ಹಸಿರು ಎಲೆಗಳು,
ಮತ್ತೆ ಮಳೆಗಾಲದಲ್ಲಿ ಕೊಳೆತು ಬೀಳುವ ಹಲಸಿನ ಹಣ್ಣಿನ ಬೀಜಗಳು, ಮರದ ಮೇಲೆ ಹತ್ತಾರು ಕಾಗೆಗಳ
ಗೂಡು, ಎಂಥೆಂಥದ್ದೋ ಬಂದಳಿಕೆಯ ಬಳ್ಳಿಗಳು, ಬುಡವನ್ನು ಆವರಿಸಿರುವ ಕಾಳುಮೆಣಸಿನ ಬಳ್ಳಿ... ಆಕಾಶ
ಕಾಣದಷ್ಟು ದಟ್ಟವಾಗಿ ಹರಡಿರುವ ಮರದ ಎಲೆಗಳ ಗುಚ್ಛಗಳ ವಿಶಾಲ ನೆರಳಿನಲ್ಲಿ ಹಗಲಿಡೀ ನಿಲ್ಲುವ
ವಾಹನಗಳಿಗೂ ಗೊತ್ತಿಲ್ಲ ಈ ಮರಕ್ಕೆಷ್ಟು ವಯಸ್ಸಾಯಿತು ಎಂಬ ಹಾಗೆ.
...
ನಾನು ತುಂಬ ಸೂಕ್ಷ್ಮ, ನನಗೆ ತುಂಬ ತಿಳಿವಳಿಕೆ ಇದೆ,
ನನಗೆಲ್ಲವೂ ಅರ್ಥ ಆಗ್ತದೆ, ಯಾರು ಹೇಗೆ ಅಂತ ನಾನು ಊಹಿಸಿಯೇ ಹೇಳಬಲ್ಲೆ, ಸರಿತಪ್ಪುಗಳ ಪರಿಜ್ಞಾನ
ನನಗಿದೆ ಎಂದೆಲ್ಲ ನಾವು ಅಂದುಕೊಳ್ಳುತ್ತೇವೆ. ಬಹಳಷ್ಟು ಸಾರಿ ಆತ್ಮವಿಶ್ವಾಸದಿಂದ
ಹೇಳಿಕೊಳ್ಳುತ್ತೇವೆ. ಆದರೆ, ಯಾವತ್ತಾದರೂ ಇಂತಹ ಮರವೊಂದು ಯಾವಾಗ ಇಷ್ಟುದ್ದ ಬೆಳೆಯಿತು? ಫಲ ಕೊಟ್ಟಿತು?, ಎಷ್ಟು ಹಣ್ಣು ಬಿಟ್ಟಿತು? ಅಂತೆಲ್ಲ ಲೆಕ್ಕ ಹಾಕುತ್ತೇವೆಯಾ...? ಇಲ್ಲ ತಾನೆ. ಫೋಟೋ ತೆಗೆದಿಟ್ಟರೆ ಗೋತ್ತಾದೀತು. 10
ವರ್ಷದ ಕೆಳಗೆ ಈ ಮರ ಹೀಗಿತ್ತು, ಈಗ ಇಷ್ಟು ಅಗಲವಾಗಿದೆ ಎಂಬ ಹಾಗೆ.
ಆದರೆ, ಅಷ್ಟೆಲ್ಲ ವ್ಯವಧಾನ ನಮಗೆ ಇರುವುದಿಲ್ಲ. ಅದರ
ಎಲೆ ಚಿಗುರುವುದು, ಎಳೆ ಹಲಸಿನ ಕಾಯಿ ಕಾಣಿಸಿಕೊಂಡು ಬೆಳೆಯುವುದು, ಹಣ್ಣಾಗಿ ಘಮಘಮ ಸೂಸುವುದು,
ಕೊಳೆತು ಉದುರುವುದು, ಎಲೆಗಳೆಲ್ಲ ಹಣ್ಣಾಗಿ ಉದುರಿ ಅಂಗಳದ ತುಂಬ ಹಳದಿ, ಕೆಂಪಿನ ಚಾದರ ಹರಡುವುದು
ಇವೆಲ್ಲ ತನ್ನಷ್ಟಕ್ಕೆ ಆಗುತ್ತಿರುತ್ತದೆ. ನಾವದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಲೆಕ್ಕಹಾಕುವುದಿಲ್ಲ.
ಗುಜ್ಜೆ (ಎಳೆ ಹಲಸು) ಬೇಕಾದಾಗ ಗುಜ್ಜೆ, ಹಣ್ಣು ಬೇಕಾದಾಗ ಹಣ್ಣು ಕೊಯ್ದು ತರುತ್ತೇವೆ,
ತಿನ್ನುತ್ತೇವೆ. ಅಷ್ಟೆ ತಾನೆ? ಎಷ್ಟೋ ಬಾರಿ ತೋಡಿನ ಸೊಂಟದಿಂದ ಹೊರಟ ಮರಕ್ಕೆ ನೀರು, ಗೊಬ್ಬರವನ್ನೂ
ಹಾಕಬೇಕಾಗಿರುವುದಿಲ್ಲ. ತನ್ನಷ್ಟಕ್ಕೇ ಮರ ನೆರಳು ನೀಡಿ, ಫಲ ಕೊಟ್ಟು, ಕಾರಣಾಂತರದಿಂದ ಸತ್ತರೆ
ಕಾಂಡವನ್ನು ಹಲಿಗೆ, ಸೌದೆಗೆ ನೀಡಿ ಇನ್ನಿಲ್ಲವಾಗುತ್ತದೆ. ವಿಪರ್ಯಾಸವೆಂದರೆ ದಶಕಗಳಿಂದ
ತೋಟದಲ್ಲೋ, ಅಂಗಳದಲ್ಲೋ, ಹಿತ್ತಿನಲ್ಲೋ ಇದ್ದ ಮರವನ್ನು ಮನೆ ಕಟ್ಟಲು ಬಾಗಿಲಿಗೆ ಅಂತ ಕಡಿದು
ಅಡ್ಡಡ್ಡ ಸೀಳುವಾಗ ಬಹಳಷ್ಟು ಸಾರಿ ನಮಗೆ ಅಂತಹ ಫೀಲಿಂಗುಗಳೇನೋ ಆಗುವುದಿಲ್ಲ. ಯಾರೂ ಕೂಡಾ
ಮರಕ್ಕೆ RIP ಅಂತ ಬರೆಯುವುದೂ ಇಲ್ಲ. ಹೌದು ತಾನೆ...?
ಬದುಕಿನಲ್ಲಿ ಇಂತಹ ಗಮನಕ್ಕೇ ಬಾರದ ಎಷ್ಟೋ ವಿಚಾರಗಳು,
ಸಹಜವಾಗಿದ್ದೂ ಜನಪ್ರಿಯವಲ್ಲದ ಸಂಗತಿಗಳು, ವ್ಯಕ್ತಿಗಳೂ ಸುತ್ತಮುತ್ತಲೂ ಇದ್ದರೂ ಅದು ನಮ್ಮ ಅರಿವಿಗೆ
ನಿಲುಕುವುದೇ ಇಲ್ಲ... ಮಾತನಾಡದ, ಹೇಳಿಕೊಳ್ಳದ, ಸಮರ್ಥನೆ ನೀಡಿದ, ಜಾಹೀರಾತು ಕೊಡದ ಸಂಗತಿಗಳೆಲ್ಲ
ಸುಲಭವಾಗಿ ಅಗತ್ಯದ ವಸ್ತು ಅಂತ ನಮಗೆ ತೋರುವುದೂ ಇಲ್ಲ. ಮರ ಕಡಿದಾಗ ಕಾಡುವ ಬಿಸಿಲು ಮಾತ್ರ
ಅಂದೊಂದು ಕಾಲದಲ್ಲಿ ಇಲ್ಲಿ ನೆರಳಿತ್ತು ಅಂತ ನೆನಪಿಸಬಹುದೋ ಏನೋ. ದೂರವಾದ ಮೇಲೆ ಬೆಲೆ ತಿಳಿಯುವುದು....
ಅದರ ಹೊರತು ಈ ಮರವನ್ನು ಅಂದೊಮ್ಮೆ ಗಿಡವಾಗಿದ್ದಾಗ
ನೆಟ್ಟದ್ದು ಯಾರು? ಇದಕ್ಕೆ ದಿನಾ ನೀರು ಹೊಯ್ಯುತ್ತಿದ್ದರೆ? ಈ ಮರದಲ್ಲಿ ಈ ಐವತ್ತು ವರ್ಷಗಳಲ್ಲಿ ಎಷ್ಟು ಹಲಸಿನ
ಹಣ್ಣ ಆಗಿರಬಹುದು. ಇದಕ್ಕೊಂದು ಸುವರ್ಣ ಮಹೋತ್ಸವ ಆಚರಿಸಿದರೆ ಹೇಗೆ...? ಈ ಮರಕ್ಕೆ ಚಂದದ ಕಟ್ಟೆ ಕಟ್ಟಿದರೆ ಮಧ್ಯಾಹ್ನದ ಬಿಸಿಲ
ಬೇಗೆಗೆ ಅದರ ಬುಡದಲ್ಲಿ ತಲೆಯಿಟ್ಟು ಮಲಗಬಹುದಲ್ವೇ? ಎಂಬಿತ್ಯಾದಿ ಆಲೋಚನೆಗಳು ನಮಗೆ ಬರುವುದೇ ಇಲ್ಲ.
ಯಾಕೆಂದರೆ ಇವು ಆಗಲೇಬೇಕಾದ ಕಾರ್ಯಗಳಲ್ಲ, ಆಗದೇ ಇದ್ದರೂ ಬದುಕು ಸಾಗುತ್ತದೆ. ಅನಿವಾರ್ಯ ಅಲ್ಲದ
ಹೊರತು ಏನನ್ನೂ ಮಾಡಲು ಉದಾಸೀನವಾಗುವಾಗ, ಮುದಿ ಮರವೊಂದರ ಕುರಿತು ಭಾವುಕವಾಗಿ ಚಿಂತಿಸಲು
ಸಮಯವಾದರೂ ಎಲ್ಲಿರುತ್ತದೆ...?! ತನ್ನ ಪಾಡಿಗೆ ತಾನು ಅಂಗಳದ ಸೈಡಿನಲ್ಲಿ ಇದೆ, ಇರಲಿ ಬಿಡಿ ಎಂಬ
ಹಾಗೆ... ಬಟ್ಟೆ ಒಣಗಿಸಲು ಮರದ ಬೊಡ್ಡೆಗೆ ಕಟ್ಟಿದ ತಂತಿಯ ಅಚ್ಚು ಅಲ್ಲಿ ಮೂಡಿದ್ದು,
ಮಳೆಗಾಲದಲ್ಲಿ ಮುರಿದು ಬಿದ್ದ ಗೆಲ್ಲಿನಿಂದ ವರ್ಷಕ್ಕಾಗುವಷ್ಟು ಸೌದೆ ಮಾಡಿದ್ದು, ಹಪ್ಪಳ ಒತ್ತಿದ್ದೆಲ್ಲ
ತನ್ನ ಪಾಡಿಗೆ ವಿಧಿಲಿಖಿತದಂತೆ ನಡೆದು ಹೋಗಿದೆ ಎಂದೇ ಭಾವಿಸುತ್ತೇವೆ...
ಹುಡುಕಲು ಹೊರಟರೆ ಇಂತಹ ತನ್ನ ಪಾಡಿಗಿರುವ ಹಲಸಿನ
ಮರಗಳಂತಹ ಜೀವಗಳು ಎಷ್ಟು ಇವೆಯೋ ಏನೋ...! ನಾವು ಅರಿತುಕೊಳ್ಳುವುದು, ತಿಳಿದುಕೊಳ್ಳುವುದು ಮತ್ತು ಎಲ್ಲವನ್ನೂ
ನಿಭಾಯಿಸುತ್ತೇವೆ ಎಂಬ ಹುಸಿ ಭ್ರಮೆ ಮತ್ತು ಅತಿ ಆತ್ಮವಿಶ್ವಾಸ ಎಲ್ಲವೂ ಕೆಲವೊಮ್ಮೆ ಬೊಗಳೆಯಾಗಿ
ಬಿಡುತ್ತದೆ... ಉತ್ತರಿಸಲು ಮರದಂಥಹ ಜೀವಗಳಿಗೆ ಬಾಯಿ
ಬರುವುದಿಲ್ಲ. ಬಂದರೂ ಅವು ಮಾತನಾಡುವುದಿಲ್ಲ. ಯಾಕಂದರೆ ಕಾಣಿಸಿಕೊಳ್ಳುವುದಕ್ಕಿಂದ ಕಂಡುಕೊಂಡರೇ
ಹೆಚ್ಚು ಚಂದ ಎಂಬುದು ಸಹಜವಾಗಿರುವ ಎಲ್ಲವುಗಳಿಗೂ, ಎಲ್ಲರಿಗೂ ತಿಳಿದಿರುತ್ತದೆ!
-ಕೃಷ್ಣಮೋಹನ ತಲೆಂಗಳ
(18.03.2021)
No comments:
Post a Comment