ಸುಮದ ಪಲ್ಲಂಗದ ಬುಡದ ಬಾಡಿದ ಹೂಗಳು ಮಸೂರಕ್ಕೆ ಸಿಕ್ಕುವುದೇ ಇಲ್ಲ!


 

ವಿಶಾಲ ಮರ. ಮರದಡಿ ಧಾರಾಳವಾಗಿ ಉದುರಿ ಪವಡಿಸಿದ ಪುಷ್ಪ ರಾಶಿ. ದೂರದಿಂದ ಕಂಡಾಗ ಹೂವಿನ ಹಾಸಿಗೆ ಹಾಸಿದ ಹಾಗೆ... ರಸ್ತೆ ಪಕ್ಕದ ಮರದಡಿಯ ಹಳದಿ, ಕೆಂಪು, ನೇರಳೆ ಹೂಗಳ ದಿಬ್ಬವನ್ನುಹಾದು ಹೋಗುವಾಗಲೆಲ್ಲಾ ಒಂದು ಸಾಮಾನ್ಯೀಕರಿಸಿದ ಭಾವ. ಆಹಾ ಎಷ್ಟು ಚಂದದ ದೃಶ್ಯ. ಎಷ್ಟು ಮೃದು, ಕೋಮಲ, ಎಷ್ಟು ಸುವಾಸನೆಯುಕ್ತ, ಎಷ್ಟು ಪ್ರಫುಲ್ಲ ಎಂಬಂತೆ ಧಾವಂತದಿಂದ ಯೋಚಿಸುವ ಮನಸ್ಸು. ಆ ಮರದ ಬುಡದ ಹೂವಿನ ಸಹಜ ಸಂಗ್ರಹ ನಮ್ಮ ದೃಷ್ಟಿಗೆ ಬೀಳುವುದು ಬಹುಶಃ 3-4 ಸೆಕೆಂಡುಗಳು ಮಾತ್ರ. ಆದರೆ ಅದರ ನೆನಪು ತುಂಬ ಹೊತ್ತು ಕಾಡುತ್ತದೆ...

 

ಒಂದು ಯೋಚಿಸಿದ್ದೀರ? ಒಂದು ಸುಂದರ ದೃಶ್ಯಕಾವ್ಯ ಕಂಡಾಗ ಭಾವುಕವಾಗುವ ಮನಸ್ಸು, ಕವಿಯಾಗುವ ಹೃದಯ ಅದರಾಚೆಗಿನ ವಾಸ್ತವದ ದೃಶ್ಯಾವಳಿಗಳನ್ನು ಕಡೆಗಣಿಸುತ್ತದೆ.. ಅದನ್ನು ಹೊಗಳುವಾಗ, ಉತ್ಪ್ರೇಕ್ಷೆಯಿಂದ ವರ್ಣಿಸುವಾಗ, ದೂರದಿಂದಲೇ ಅವಸರದಿಂದ ಫೋಟೋ ತೆಗೆದು ಸ್ಟೇಟಸ್ಸಿಗೆ ಹಾಗುವಾಗಲೂ ಆ ಚೌಕಟ್ಟಿನೊಳಗಿನ ಸೌಂದರ್ಯದ ಹಿಂದಿನ ವಾಸ್ತವಿಕ ಪರಿಸ್ಥಿತಿಯನ್ನು ನಮ್ಮಿಂದ ಕಟ್ಟಿ ಕೊಡಲಾಗುವುದಿಲ್ಲ. ನಮ್ಮ ಸ್ಟೇಟಸ್ಸು, ವಾಲುಗಳಲ್ಲಿ ನಾವಾಗಿ ತೋರಿಸುವ ಇಂತಹ ದೃಶ್ಯಗಳ ಪೂರ್ಣ ಚಿತ್ರಣ, ಎಲ್ಲ ಆಯಾಮಗಳ ದರ್ಶನ ಮಾಡಿಸುವಲ್ಲಿ ನಾವು ಖಂಡಿತಾ ಸೋಲುತ್ತೇವೆ. ನಮ್ಮ ದೃಷ್ಟಿಗೆ ನಿಲುಕಿದ್ದು, ಆ ಹೊತ್ತಿಗೆ ಕಂಡದ್ದು, ನಮ್ಮ ಕೆಮರಾದ ಮಸೂರಕ್ಕೆ ದಕ್ಕಿದ್ದು ಮತ್ತು ನೋಡಿದವರು ಅದನ್ನು ಮತ್ತೊಂದು ಮಗ್ಗುಲಿನಿಂದ ನೋಡಿದ್ದು.. ಅಲ್ಲಿಗೆ ಒಂದು ಚೌಕಟ್ಟಿಗೆ ತನ್ನದೇ ಆದ ಅರ್ಥ, ಭಾವ, ನಿರೀಕ್ಷೆ, ವಿಮರ್ಶೆ ಎಲ್ಲ ಸಿಕ್ಕಿರುತ್ತದೆ.

 

ತುಸು ಸಾವಧಾನದಿಂದ ಆ ಮರದ ಬುಡದ ಹೂವಿನ ಹಾಸಿಗೆ ಬಳಿಗೆ ಹೋಗಿ ಕುಳಿತು ನೋಡಿಯಂತೆ. ಅವುಗಳಲ್ಲಿ ಬಹುತೇಕ ಹೂಗಳು ಹಳತಾಗಿರುತ್ತವೆ. ಹತ್ತಿರದಿಂದ ಕಂಡಾಗ ಬಾಡಿ, ಒಣಗಿ, ಮುದುಡಿರುವುದು ಗೊತ್ತಾಗುತ್ತದೆ. ದೂರದಿಂದ ಕಂಡ ಹಾಗೆ ಹೂಗಳು ಮುದ್ದೆ ಮುದ್ದೆಯಾಗಿ ಇರಬೇಕೆಂದೂ ಇಲ್ಲ, ದೂರ ದೂರ ಗಾಳಿಗೆ ಚದುರಿ ಚೆಲ್ಲಾಪಿಲ್ಲಿಯಾಗಿರುತ್ತದೆ. ದೂರದಿಂದ ಚೆಂದದ ಪಲ್ಲಂಗದ ಹಾಗೆ ಕಾಣಿಸುತ್ತದೆ. ಹೂಗಳ ನಡುವಿನ ಹುಳಗಳು, ಎಸಳುಗಳಿಗೆ ಮೆತ್ತಿದ ಧೂಳು, ಮುರುಟಿದ ಕುಸುಮ, ಅಡಿಯಲ್ಲಿ ಕೊಳೆತು ಕಮರುತ್ತಿರುವ ನಿನ್ನೆ ಮೊನ್ನೆಯ ಹೂಗಳು ಎಲ್ಲವನ್ನೂ ಕಾಣಬಹುದು. ಅಂದ ಹಾಗೆ ಪಕ್ಕದ ತೆರೆದ ಚರಂಡಿಯಿಂದ ಹೊಮ್ಮುವ ದುರ್ಗಂಧದ ಎದುರು ಮರದಡಿಯ ಹೂವು ಕಂಪು ಸೂಸಿದರೂ ಅದು ನಾಸಿಕವನ್ನು ಸೋಕುವಷ್ಟು ಪ್ರಬಲವಾಗಿರುವುದಿಲ್ಲ ಎಂಬುದು ಅಲ್ಲಿ ಇಳಿದು ನೋಡಿದರೆ ಮಾತ್ರ ತಿಳಿಯುತ್ತದೆ!

 

ಹೌದು ತಾನೆ... ಚೆಂದವನ್ನು, ಧನಾತ್ಮಕ ಅಂಶವನ್ನು ಜೀವನೋತ್ಸೋಹದಿಂದ ಕಾಣಬೇಕು. ಸಹಜವಾಗಿರುವುದನ್ನು ಕಂಡು ಖುಷಿ ಪಡಬೇಕು. ಮತ್ತಷ್ಟು ಜನರಿಗೆ ತೋರಿಸಿ ಸಾರ್ಥಕ್ಯ ಹೊಂದಬೇಕು. ತೀರಾ ಹತ್ತಿರಕ್ಕಿಳಿದು ನೋಡಿದರೆ ಕಾಣುವ ಲೋಪಗಳು, ಭಯಂಕರ ವಿಮರ್ಶೆ ಮಾಡಿದರೆ ಹೊರಬರುವ ದೌರ್ಬಲ್ಯಗಳು, ಸೂಕ್ಷ್ಮವಾದ ವೈಜ್ಞಾನಿಕ ಸಂಶೋಧನೆ, ಅಡ್ಡ ಪರಿಣಾಮಗಳ ಅಧ್ಯಯನ ಮಾಡಿದರೆ ಮನಸ್ಸಿಗೆ ಆಗಬಹುದಾದ ನಿರಾಸೆಗಳು, ಆಘಾತಗಳು, ಇಷ್ಟೆಯಾ ಎಂಬಂಥ ವೈರಾಗ್ಯಗಳು ಇವನ್ನೆಲ್ಲ ನಾವು ಸ್ಟೇಟಸ್ಸಿನಲ್ಲಿ ಹಾಕುವ ಫೋಟೋಗಳಲ್ಲಿ ಕಟ್ಟಿಕೊಡುವುದಿಲ್ಲ...ಇದನ್ನು ನಿರಾಶಾವಾದ ಅಂತಲೂ ಹೇಳಬಹುದು. ಆದರೆ ವಾಸ್ತವಕ್ಕೆ ಆಶಾವಾದ, ನಿರಾಶವಾದದ ಹಂಗಿಲ್ಲ. ವಾಸ್ತವ ವಾಸ್ತವವೇ.

 

ವಿಷಯದ ಒಂದು ಮಗ್ಗುಲು, ಅದರ ಸೊಬಗು, ಜೊತೆಗೆ ಜೇಬಿನಿಂದ ಸೇರಿಸಿಂದ ಕಲ್ಪನೆಗಳಲ್ಲೇ ನಾವು ಅರಮನೆ ಕಟ್ಟಿಕೊಡುತ್ತೇವೆ. ಒಂದಷ್ಟು ಹೊತ್ತು ಕಂಡದ್ದರ ಆಧಾರದಲ್ಲಿ ಸುಮಧುರ ತೀರ್ಪು ನೀಡಿಬಿಡುತ್ತೇವೆ. ಪುರುಸೊತ್ತಿನಲ್ಲಿ ಕುಳಿತು ನೋಡಿದಾಗ, ವಿಮರ್ಶೆಗೆ ಇಳಿದಾಗ ಲೋಪ ಕಂಡಾಗ ಅದೇ ವ್ಯವಸ್ಥೆಯನ್ನು, ಅದೇ ಸೊಬಗನ್ನು ಕಂಡು ನಿರಾಶರಾಗುವುದು, ದೂಷಿಸುವುದು, ಹೀಗಂತ ಗೊತ್ತಿರಲಿಲ್ಲ ಎಂಬಂತೆ ಮಾತನಾಡುವುದೂ ಸಾಮಾನ್ಯವೇ... ಇಲ್ಲಿ ಸಹಜತೆ ಸಹಜವಾಗಿಯೇ ಇರುತ್ತದೆ. ಗ್ರಹಿಕಯಲ್ಲೇ ಇರುವುದು ಲೋಪ.

ರಸ್ತೆ ಪಕ್ಕದ ಹೂವಿನ ಪಲ್ಲಂಗಕ್ಕೆ ಮಾತ್ರವಲ್ಲ, ಈ ತತ್ವ ಬದುಕಿಗೂ ಅನ್ವಯ!

-ಕೃಷ್ಣಮೋಹನ ತಲೆಂಗಳ

(24.03.2021).

No comments: