ಕಾಣದ್ದನ್ನು ಕಂಡ ಭ್ರಮೆಯಲ್ಲಿ ಸತ್ತೇ ಹೋದ ಸತ್ಯ- ಭಾಗ 2

ನಾನು ಸರಿಯಾಗಿದ್ದೇನೆ, ಜಗತ್ತು ಸರಿಯಾಗಿಲ್ಲ. ನನ್ನ ಯೋಚನೆಗಳು ತಪ್ಪಾಗಲೂ ಸಾಧ್ಯವೇ ಇಲ್ಲ, ದುರಾದೃಷ್ಟವಶಾತ್ ನನ್ನನ್ನು ಯಾರೂ ಅರ್ಥವೇ ಮಾಡಿಕೊಳ್ಳುವುದಿಲ್ಲ, ನನಗೆ ಮಾತ್ರ ಎಲ್ಲವೂ ಅರ್ಥವಾಗುತ್ತದೆ…” ಎಂಬಲ್ಲಿಗೇ ಅಸಹನೆಗಳು, ಅಸಹಕಾರಗಳು ಹಾಗೂ ಋಣಾತ್ಮಕ ದೃಷ್ಟಿಕೋನಗಳು ಬೆಳೆಯುತ್ತಲೇ ಹೋಗುತ್ತವೆ.

 

ಅಸಲಿಗೆ ಇಂತಹ ಅತಿ ಆತ್ಮವಿಶ್ವಾಸ, ಇತರರೊಂದಿಗೆ ಹೊಂದಿಕೊಳ್ಳಲಾಗದ ಮನಃಸ್ಥಿತಿ, ತನ್ನದೇ ಸಂಕುಚಿತ ಭಾವದಿಂದ ಎಲ್ಲವನ್ನೂ, ಎಲ್ಲರನ್ನೂ ಅಳೆಯುವ, ತೂಗುವ, ವಿಮರ್ಶಿಸುವ ಹಾಗೂ ಸರಿಯೋ ತಪ್ಪೋ, ತಾನು ಅಂದುಕೊಂಡ ಊಹೆಗಳನ್ನೇ ಸತ್ಯವೆಂದು ಆರೋಪಿಸಿದ ಬಳಿಕ ತೋರಿಸುವ ವರ್ತನೆ ಹಾಗೂ ತಪ್ಪುಗಳ ಕುರಿತು ಪದೇ ಪದೇ ನೀಡುವ ಸಮರ್ಥನೆಗಳು ಪೂರ್ವಾಗ್ರಹಕ್ಕೆ ಅತ್ಯಂತ ಸ್ಪಷ್ಟ ನಿದರ್ಶನವಾಗುತ್ತದೆ.

 

ನಮಗೆಲ್ಲವನ್ನೂ ತಿಳಿಯುವ ಸಾಮರ್ಥ್ಯ ಇದೆಯಾ...?:

 

ಜಗತ್ತಿನಲ್ಲಿ ನಾವು ಕಂಡದ್ದಕ್ಕಿಂತ ಕಾಣದೇ ಇರುವುದು, ಕಾಣಲಾಗದೇ ಇರುವುದು, ಕಂಡರೂ ಅರ್ಥ ಮಾಡಿಕೊಳ್ಳಗಾದೇ ಹೋಗುವ ಸಾಕಷ್ಟು ವಿಚಾರಗಳಿರುತ್ತವೆ. ನಾವು ಕಂಡದ್ದೆಲ್ಲ ನಮಗೆ ಸರಿಯಾಗಿ ಅರ್ಥವೇ ಆಗುವುದಿಲ್ಲ, ಅರ್ಥವಾಗಿದ್ದೇವೆಂದುಕೊಂಡದ್ದೆಲ್ಲ ಸಂಪೂರ್ಣ ಮನದಟ್ಟಾಗಿರುವುದಿಲ್ಲ ವಿಷಯದ ಇನ್ನೊಂದು ಮಗ್ಗುಲು ನಮ್ಮ ಕಣ್ಣಿಗೆ ಬಿದ್ದಿರುವುದಿಲ್ಲ, ನಮ್ಮ ಗ್ರಹಿಕೆಗೆ, ದೃಷ್ಟಿಗೆ, ಸಂದರ್ಭಕ್ಕೆ ತಕ್ಕ ಹಾಗೆ ನಾವು ವಿಚಾರಗಳನ್ನು, ವ್ಯಕ್ತಿಗಳನ್ನು ಕಂಡಿರುತ್ತೇವೆ, ಕಾಣಲು ಪ್ರಯತ್ನಿಸುತ್ತಿರುತ್ತೇವೆ. ಆದರೂ ನಾವು ಕಂಡದ್ದಕ್ಕಿಂತಲೂ ಕಾಣದ್ದರ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಲೇ ಇರುತ್ತೇವೆ. ವ್ಯಕ್ತಿಯ ಬದುಕಿನ ಒಂದು ಮಗ್ಗುಲನ್ನು ಮಾತ್ರ ನೋಡಿ, ವ್ಯಕ್ತಿಯ ಸಾಮಾಜಿಕ  ಓಡಾಟವನ್ನು ಮಾತ್ರ ಗಮನಿಸಿ, ಜಾಲತಾಣಗಳ ಆತನ ಬದುಕೇ ಅಂತಿಮವೆಂದುಕೊಂಡು ಕಾಣದ್ದರ ಬಗ್ಗೆ ಪುಂಖಾನುಪುಂಖವಾಗೀ ಆರೋಪಗಳನ್ನು ಹೊರಿಸುತ್ತೇವೆ, ನಿಂದಿಸುತ್ತೇವೆ, ಲೂಸ್ ಟಾಕ್ ಮಾಡುತ್ತೇವೆ. ಪೂರ್ವಾಗ್ರಹಕ್ಕೆ ಅಹಂ ಮತ್ತು ಆವೇಶದ ಸಾಥ್ ಸಿಕ್ಕಿದಾಗ ಇಂತಹ ಜಡ್ಜ್ ಮೆಂಟಲ್ ಗಳಾಗುವ ಪ್ರವೃತ್ತಿಗೆ ತುಪ್ಪ ಹೊಯ್ದ ಹಾಗಾಗುತ್ತದೆ... ಪೂರ್ವಾಗ್ರಹದ ನಿಂದನೆ ನಮ್ಮ ಅಹಂನ್ನು ವಿಚಿತ್ರವಾಗಿ ತಣಿಸುತ್ತದೆ, ಮತ್ತೆ ಅದೇ ನಮ್ಮ ದೊಡ್ಡ ಸಾಧನೆ ಅಂತ ಭ್ರಮಸುತ್ತೇವೆ.

 

ಇದಕ್ಕೆ ಕೊರೋನಾವನ್ನೇ ಉದಾಹರಣೆ ನೀಡುತ್ತೇನೆ. ಟಿ.ವಿ.ವಾಹಿನಿಗಳಲ್ಲಿ ನೋಡುವಾಗ ಕೊರೋನಾದಿಂದ ನಾನು ಸತ್ತೇ ಹೋಗುತ್ತೇನೆ ಎಂದು ಭಯವಾಗುತ್ತದೆ, ರಸ್ತೆಯಲ್ಲಿ ನೋಡಿದಾಗ ಏನಿಲ್ಲ, ಎಲ್ಲ ಆರಾಮವಾಗಿದ್ದಾರೆ…” ಎಂಬ ಚೀಪ್ ಜೋಕ್ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೀವೇನು ವೈರಸನ್ನು ಕಣ್ಣಾರೆ ಕಂಡಿದ್ದೀರ? ರೋಗಿಗಳ ಬಳಿಗೆ ಹೋಗಿ ನೋಡಿದ್ದೀರ? ನೊಂದವರ ಕಷ್ಟಗಳನ್ನು ಅಧ್ಯಯನ ಮಾಡಿದ್ದೀರ? ಕೊರೋನಾದ ಇದೆಯೋ, ಇಲ್ಲವೋ ಎಂಬ ಬಗ್ಗೆ ಮಾತಾಡುವಷ್ಟು ವೈಜ್ಞಾನಿಕ, ವೈದ್ಯಕೀಯ ತಿಳಿವಳಿಕೆ ನಿಮಗಿದೆಯಾ? ಇಲ್ಲ ಅಂತಾದರೆ ಕೊರೋನಾ ಇಲ್ಲ ಅಂತ ಹೇಗೆ ಹೇಳುತ್ತೀರಿ? ಮಾಧ್ಯಮದವರನ್ನು, ವೈದ್ಯರನ್ನು, ರಾಜಕಾರಣಿಗಳನ್ನು ಬೈದ ಮಾತ್ರಕ್ಕೆ ಕೊರೋನಾವೇ ಇಲ್ಲ ಅಂತ ಅರ್ಥವ. ಬೆಂಕಿಯನ್ನು ಮುಟ್ಟಿದರೆ ಮಾತ್ರ ಕೈ ಸುಡುತ್ತದೆ ಅಂತ ಗೊತ್ತಾಗುವುದಾ ಅಥವಾ, ಕೈಸುಟ್ಟುಕೊಂಡವರ ಅನುಭವ ನೋಡಿಯಾದರೂ ಪಾಠ ಕಲಿಯಲು ಸಾಧ್ಯವಾ...?

ವಿಷಯ ಸರಳ.

ನನಗಿಷ್ಟವಾದ ಹಾಗೆ, ನನ್ನ ಮೂಗಿನ ನೇರಕ್ಕೆ ನೀನು ಮಾತನಾಡಿದರೆ, ರೂಲ್ಸ್ ಮಾಡಿದರೆ ನೀನು ನನಗೆ ಆತ್ಮೀಯ. ನಾನು ಹೇಳಿದ್ದಕ್ಕೆ ಹೌದೌದು ಹೇಳದಿದ್ದರೆ, ನಾನು ದೂರಿದವನನ್ನು ನೀನೂ ದೂರದಿದ್ದರೆ, ನಾನು ನಕ್ಕಾಗ ನೀನು ನಕ್ಕು, ನನಗೆ ಸಿಟ್ಟು ಬಂದಾಗ ನೀನೂ ಮೌನವಾಗಿರದಿದ್ದರೆ ನೀನು ಜನ ಸರಿಯಿಲ್ಲ, ನೀನು ಕಪಟಿ, ನೀನು ಅಯೋಗ್ಯ ಅಂತ ಅರ್ಥ. ನನ್ನ ಮೂಗಿನ ನೇರಕ್ಕೆ, ನನ್ನ ಮೂಡಿನ ನೇರಕ್ಕೆ ನಾನಿರುವಾಗ ನಿನ್ನ ಮೂಡು, ನಿನ್ನ ಒತ್ತಡ, ನಿನ್ನ ತಳಮಳಗಳನ್ನೆಲ್ಲ ಮರೆತು ನಾನು ಹೇಳಿದ್ದಕ್ಕೆಲ್ಲ ಹೌದೌದು ಅಂದಾಗ ಮಾತ್ರ ನೀನು ನೇರ ನಡೆನುಡಿಯವ. ನನಗೆ ಕಿರಿಕಿರಿ ಆಗುವ, ನನ್ನನ್ನು ಪ್ರಶ್ನಿಸುವ, ನನಗೆ ಹಿತವಚನ ಹೇಳಲು ಬಂದರೆ, ನನ್ನ ದೌರ್ಬಲ್ಯಗಳ ವಿಮರ್ಶೆಗೆ ಬಂದರೆ, ಇಷ್ಟೂ ದಿನ ಒಳ್ಳೆಯವನಾಗಿದ್ದ ನೀನು ನನ್ನ ಪಾಲಿಗೆ ಯಾರೂ ಅಲ್ಲದವನಾಗುತ್ತಿ... ನೀನು ಸಮಯಸಾಧಕನೋ, ನೀನು ಹತ್ತರಲ್ಲಿ ಹನ್ನೊಂದನೆಯವನೋ ಆಗಿಬಿಡುತ್ತಿ... ಇದು ನನ್ನ ಜಗತ್ತು, ನನ್ನ ನಿರ್ಧಾರ ಮತ್ತು ಇವನ್ನೆಲ್ಲ ನಿರ್ಧರಿಸುವುದು ನಾನು. ಯಾಕೆಂದರೆ ನನಗೆ ಕಂಡದ್ದೇ ವಾಸ್ತವ, ನಾನು ನಂಬಿದ್ದೇ, ನಾನು ಕಲ್ಪಿಸಿದ್ದೇ ಹಾಗೂ ನನಗೆ ಈ ಕ್ಷಣಕ್ಕೆ ಏನು ಸರಿ ಅನ್ನಿಸುತ್ತದೋ ಅದೇ ವಾಸ್ತವ ಹಾಗೂ ಅದೇ ಅಂತಿಮ ಎಂಬ ಮನಃಸ್ಥಿತಿ ಇದೆಯಲ್ಲ ಅದು ವ್ಯವಸ್ಥೆಯನ್ನೂ, ಸಂಬಂಧವನ್ನೂ ಹಾಳು ಮಾಡುವುದಲ್ಲ, ನಮ್ಮೊಳಗಿನ ಮನಃಶಾಂತಿಯನ್ನೂ ಕ್ರಮೇಣ ಕೊಲ್ಲುತ್ತದೆ...

ಇದಕ್ಕೂ ಕೊರೋನಾವನ್ನೇ ಉದಾಹರಣೆ ಕೊಡುತ್ತೇನೆ... ಕೊರೋನಾ ಎಂಬುದು ವಾಸ್ತವ. ಅದರ ಪರಿಣಾಮ, ಇಡೀ ಜಗತ್ತಿಗೇ ಗೊತ್ತಿದೆ. ಹಾಗೊಂದು ಲಾಕ್ ಡೌನ್ ಹಾಕುತ್ತಾರೆ, ಅಲ್ಲಿಷ್ಟು ನಿರ್ಬಂಧ ವಿಧಿಸುತ್ತಾರೆ, ಓಡಾಡಲು ಬಿಡುವುದಿಲ್ಲ, ಅಂಗಡಿ ಬಾಗಿಲು ಮುಚ್ಚಿಸುತ್ತಾರೆ. ತಕೊಳ್ಳಿ... ಸರ್ಕಾರಕ್ಕೆ ಬೈಯುವುದಕ್ಕೆ ಶುರು. ಇವರಿಗೆ ಸ್ವಯ ಉಂಟ, ಇವರಿಗೆ ತಲೆ ಸರಿ ಉಂಟ.... ಜನಸಾಮಾನ್ಯರೂ ಬದುಕುವುದು ಬೇಡವಾ ಹೀಗೆಲ್ಲ... ಇದೇ ಲೌಕ್ ಡೌನ್ ದೂರದ ಡೆಲ್ಲಿಯಲ್ಲೋ, ಅಮೆರಿಕಾದಲ್ಲೋ ಆದಾಗ ನಮಗೆ ಹೀಗನ್ನಿಸಿದೆಯಾ..?. ಇಲ್ವಲ್ವ. ನಮ್ಮ ಬುಡಕ್ಕೆ ಬಂದಾಗ, ನಮ್ಮ ಬದುಕನ್ನು ಕಾಡಲು ತೊಡಗಿದಾಗ, ನಮ್ಮದೇ ಪರಿಸ್ಥಿತಿ ಹೊತ್ತಿ ಉರಿಯುತ್ತಿರುವಾಗ ನಮಗೆ ಆವೇಶ, ಅಸಹಾಯಕತೆ ಕಾಡುತ್ತದೆ.

 

ಆವೇಶ, ಅಸಹಾಯಕತೆ ಮೂಡುವುದು ಮಾನವ ಸಹಜ, ಆದರೆ ಅದನ್ನು ಮರೆತು ದೂಷಿಸುವಾಗ, ನಿಂದಿಸುವಾಗ, ವಸ್ತುಸ್ಥಿತಿ ಮರೆತು ಶಪಿಸುವಾಗ ವಾಸ್ತವದ ಬಗ್ಗೆ ಯೋಚಿಸಬೇಕು, ನಿನ್ನೆಯ ಅನುಭವದ ನೆನಪುಗಳು, ಕಾಣದ ನಾಳೆ ನಿರೀಕ್ಷೆಗಳು, ಸಾಧ್ಯತೆಗಳ ಮೂಸೆಯಲ್ಲಿ ಇಂದು ಎಂಬುದನ್ನು ಇರಿಸಿ ನೋಡುವ ಸಹನೆ, ವಿವೇಚನೆ ಬೇಕು... ಮೆಚ್ಚಿನ ಆಟಗಾರ ಕ್ರಿಕೆಟ್ಟಿನಲ್ಲಿ ಸೆಂಚುರಿ ಮಿಸ್ ಮಾಡಿದರೆ ಶಾಪ ಹಾಕುತ್ತೇವೆ, ಟಿ.ವಿ.ನೋಡುವಾಗ ಏಕಾಏಕಿ ಕರೆಂಟು ಕಟ್ ಆದರೆ ವಿದ್ಯುತ್ ಇಲಾಖೆಯವರಿಗೆ ಬಯ್ಯುತ್ತೇವೆ, ಕೊರೋನಾದ ಬಗ್ಗೆ ಅಥವಾ ಇನ್ಯಾವುದೋ ವಿಚಾರದ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಇಡೀ ದಿನ ಅದೇ ವಾರ್ತೆ ಬಂದರೆ, ಟಿ.ವಿ. ಆಫ್ ಮಾಡದೆ, ಇಡೀ ದಿನ ಅದನ್ನೇ ನೋಡುತ್ತಾ ಮತ್ತೆ ಅವರಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತೇವೆ... ನಾನು ಇಡೀ ಲೋಕವನ್ನೇ ವಿಮರ್ಶೆ ಮಾಡಬಹುದು, ನಾನು ಅವರಿವರ ಬಗ್ಗೆ ಅಧಿಕಾರಯುತವಾಗಿ ಹೇಳಿಕೆ ಕೊಡಬಹುದು. ಆದರೆ ನನ್ನ ಅನುಕೂಲಗಳಿಗೆ ಅಡ್ಡಿಯಾದಾಗ, ನನ್ನ ವಿಮರ್ಶೆ ನಡೆದಾಗ ಅದು ಎಂಥದ್ದೇ ಪರಿಸ್ಥಿತಿ ಇರಲಿ ನಾನದಕ್ಕೆ ಒಗ್ಗಲಾರೆ, ಬಗ್ಗಲಾರೆ ಮತ್ತು ನನ್ನದೇ ದೌರ್ಬಲ್ಯಗಳಿದ್ದರೂ ಅದನ್ನು ಒಪ್ಪಲಾರೆ ಎಂಬ ದಾಷ್ಟ್ರ್ಯ, ಅಹಂ ಹಾಗೂ ಕೆಟ್ಟ ಹಠ ಇದು ನಮಗೇ ಮಾರಕ, ನಮ್ಮ ಮೂಲಕ ಸಮಾಜಕ್ಕೆ ಸಹ....

ಮಾಸ್ಕೇ ಧರಿಸದೆ, ಅಂತರವನ್ನೇ ಪಾಲಿಸದೆ ಇಡೀ ವ್ಯವಸ್ಥೆಗೆ, ಸರ್ಕಾರಕ್ಕೆ,ವೈದ್ಯರಿಗೆ, ಮಾಧ್ಯಮಗಳಿಗೆ ಬಯ್ಯುವವರ ಬಗ್ಗೆ ಅನುಕಂಪಗಳಿವೆ. ಇದು ವ್ಯವಸ್ಥೆಯ ಕುರಿತು ಮಾತ್ರವಲ್ಲ, ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕೂ ಅನ್ವಯಿಸುತ್ತದೆ.

ನನಗೆ ಸಿಟ್ಟು ಬಂದಾಗ ನಾನೇನು ಮಾಡುತ್ತೇನೋ ಗೊತ್ತಿಲ್ಲ, ನನಗೆ ಎಲ್ಲವೂ ಗೊತ್ತಾಗುತ್ತದೆ, ನನಗೆ ಯಾರೂ ಏನೂ ಹೇಳಬೇಕಾಗಿಲ್ಲ, ನಾನು ಒಮ್ಮೆ ನಿರ್ಧಾರ ತೆಗೆದುಕೊಂಡರೆ ಮುಗಿಯಿತು ಮತ್ತೆ ಹಿಂದಿರುಗಿ ನೋಡುವುದಿಲ್ಲ, ನನಗೆ ಮುಖ ನೋಡಿಯೇ ಯಾರ್ಯಾರು ಹೇಗೆ ಅಂತ ತಿಳಿಯುತ್ತದೆ, ನಾನು ಯಾರನ್ನೂ ಕ್ಯಾರೇ ಮಾಡುವುದಿಲ್ಲ, ನನಗೆ ಯಾರೂ ಲೆಕ್ಕಕ್ಕೇ ಇಲ್ಲ, ನಾನು ತುಂಬ ಸ್ಟ್ರೈಟ್ ಫಾರ್ವರ್ಡ್, ನಾನು ಅನ್ನಿಸಿದ್ದನ್ನು ಆ ಕ್ಷಣವೇ ಹೇಳುತ್ತೇನೆ, ಪರಿಣಾಮಗಳ ಬಗ್ಗೆ ತಲೆಯೇ ಕೆಡಿಸುವುದಿಲ್ಲ ಎಂದೆಲ್ಲ ಪದೇ ಪದೇ ಘೋಷಿಸುವವರು, ಎಲ್ಲ ಸಾಧನೆಯ ವಿಚಾರಕ್ಕೂ ತಮ್ಮದೇ ಉದಾಹರಣೆಗಳನ್ನು ನಿರಂತರವಾಗಿ ಕೊಡುತ್ತಲೇ ಇರುವವರು ವಾಸ್ತವವಾಗಿ ಹಾಗೆಯೇ ಇರುತ್ತಾರಾ ಎಂಬುದು ಪ್ರಶ್ನೆ.

ಇದು ಸ್ವಾಭಿಮಾನವ, ಕೀಳರಿಮೆಯ, ಅತಿ ಆತ್ಮವಿಶ್ವಾಸವಾ ಅಥವಾ ಅತಿ ಬುದ್ಧಿವಂತಿಕೆಯ ಅರ್ಥವಾಗುವುದಿಲ್ಲ.

ಸಾಧನೆ ಎಂಬುದು, ಬದಲಾವಣೆ ಎಂಬುದು, ನಿರ್ಧಾರ ಎಂಬುದು ಘೋಷಣೆ ಯಾಕಾಗಬೇಕು, ಅದು ಪ್ರವೃತ್ತಿಯಲ್ಲಿ ಕಂಡರೆ ಸಾಕು, ನೋಡುವವರು ನಿರ್ಧಾರ ಮಾಡುತ್ತಾರೆ ನೀವು ಹೇಗೆ ಅಂತ. ನಮ್ಮನ್ನು ನಾವೇ ಉದಾಹರಣೆ ಕೊಟ್ಟುಕೊಂಡು ಜಾಹೀರಾತು ಮಾಡಲು ನಾವೇನು ವಾಣಿಜ್ಯ ಉತ್ಪನ್ನಗಳಲ್ಲ. ಜಾರಿಗೇ ಬಾರದ ನಿರ್ಧಾರ, ನಡವಳಿಕೆಯಲ್ಲಿ ಕಾಣದ ಧನಾತ್ಮಕ ಚಿಂತನೆ, ಮಾತಿಗೆ ಸೀಮಿತವಾಗುವ ಅರ್ಥವಾಗುವ ಗುಣ ಇವೆಲ್ಲ ಅವರವ ದೌರ್ಬಲ್ಯಗಳ ಪ್ರತೀಕ ಅಷ್ಟೇ... ವಿಷಯ ಏನು ಗೊತ್ತಾ...? ನಮ್ಮೊಳಗೆ ಸಾಕಷ್ಟು ದೌರ್ಬಲ್ಯಗಳಿರುತ್ತವೆ, ಅದು ನಮ್ಮ ಒಳಮನಸ್ಸಿಗೆ ಗೊತ್ತಿರುತ್ತದೆ. ಹೊರ ಮನಸ್ಸು ಮಾತ್ರ ಬಾಯಲ್ಲಿ ಏನೇನೋ ಸ್ವಯಂ ಹೊಗಳಿಕೆಯ ಮಾತುಗಳನ್ನೇ ಘೋಷಿಸುತ್ತಲೇ ಇರುತ್ತದೆ... ವರ್ತನೆಯಲ್ಲಿ ಯಾವುದೂ ಕಾಣುವುದಿಲ್ಲ.

ನಮ್ಮ ದೌರ್ಬಲ್ಯ ಮುಚ್ಚಲು, ನಮ್ಮ ನಿರ್ಧಾರ ನಮಗೇ ತರಲಾಗದ ಅಸಹಾಯಕತೆಯಿಂದ ಹೊರ ಬರುವ ಭ್ರಮೆಯಲ್ಲಿ ಇನ್ನೊಬ್ಬರನ್ನು ದೂಷಿಸುವುದು, ಇನ್ನೊಬ್ಬರಿಗೆ ಗುಣನಡತೆಪ್ರಮಾಣ ಪತ್ರ ನೀಡುವುದು, ಸರಿಯಾಗಿ ಗೊತ್ತಿಲ್ಲದ ವಿಚಾರಗಳ ಬಗ್ಗೆ ಜಡ್ಜ್ ಮೆಂಟಲ್ ಆಗಿ ಮಾತನಾಡುವ ಸ್ಥಿತಿಗೆ ತಲಪುತ್ತೇವೆ. ಆ ಕ್ಷಣದ ನಮ್ಮ ಭಾವನೆ, ಆ ಕ್ಷಣದ ನಮ್ಮ ಮನಃಸ್ಥಿತಿ, ವ್ಯಘ್ರವಾಗಿರುವ ಯೋಚನೆಗಳು ಇಡೀ ವ್ಯವಸ್ಥೆ, ಇಡೀ ಸಮಾಜ, ಇಡೀ ವ್ಯಕ್ತಿತ್ವವೇ ನಿಷ್ಪ್ರಯೋಜಕ, ನಾನು, ನನ್ನ ಚಿಂತನೆ ಮಾತ್ರ ಸತ್ಯ, ಸರಿ ಹಾಗೂ ಅದು ನಿಷ್ಕಳಂಕ ಎಂಬಂತೆ ಯೋಚಿಸುವ ಹಾಗೆ ಮಾಡುತ್ತದೆ.

 

ಈ ಮನಃಸ್ಥಿತಿಗೂ ಕೊರೋನಾವನ್ನೇ ಉದಾಹರಣೆ ನೀಡುತ್ತೇನೆ. ಪ್ರತಿಯೊಬ್ಬರೂ ಜಾಗ್ರತೆ ಮಾಡಿದರೆ, ಉಲ್ಟಾ ಹೊಡೆಯದಿದ್ದರೆ, ಅಂತರ ಪಾಲಿಸಿದರೆ, ಮಾಸ್ಕ್ ಧರಿಸಿದರೆ, ಸ್ವಯಂ ನಿರ್ಬಂಧ ಹೇರಿದರೆ ಈ ರೋಗದ ನಿಯಂತ್ರಣ ಇಷ್ಟು ದೊಡ್ಡ ತಲೆನೋವು ಆಗುತ್ತಲೇ ಇರಲಿಲ್ಲ. ನಮ್ಮ ಮನಸುಗಳು ಅಷ್ಟೇ ಸ್ವಯಂ ನಿರ್ಬಂಧಕ್ಕೆ ಒಳಪಟ್ಟರೆ, ವಿವೇಚನೆ ಕಳೆದುಕೊಳ್ಳದಿದ್ದರೆ ಸಂವಹನ ಸಮನ್ವಯ ಪದೇ ಪದೇ ತಪ್ಪಿ ಹೋಗುವ ಸಾಧ್ಯತೆಗಳೇ ಇಲ್ಲ.

 

ತನಗೆ ಸಿಟ್ಟು ಬಂದರೆ ಏನು ಮಾಡುತ್ತೇನೆ ಎಂದೇ ಗೊತ್ತಿಲ್ಲದವನು, ಯಾರನ್ನೂ ಕ್ಯಾರ್ ಮಾಡುವುದಿಲ್ಲ ಎನ್ನುವವನು, ಅನಿಸಿದ್ದನ್ನು ಆ ಕ್ಷಣಕ್ಕೆ ಎದುರಿನವನಿಗೆ ನೋವಾದರೂ ಗಮನಿಸದೆ ಹೇಳುವವನು ಇವನ್ನೆಲ್ಲ ಸಾಧನೆ ಎಂಬಂತೆ ಮಾತನಾಡುತ್ತಿದ್ದರೆ ದಯವಿಟ್ಟು ಅವರ ಜೊತೆ ವಾದಕ್ಕೆ ಇಳಿಯಬೇಡಿ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ತನಗೆ ಸಿಟ್ಟು ಬಂದಾಗ ಏನು ಹೇಳುತ್ತೇನೆ, ಏನು ಮಾಡುತ್ತೇನೆ ಎಂದು ತನಗೇ ಗೊತ್ತಿಲ್ಲದಿದ್ದರೆ ಅದು ಅವನ ಸಾಧನೆಯಲ್ಲ, ದೌರ್ಬಲ್ಯ. ತನ್ನ ಬಗ್ಗೆಯೇ ತಿಳಿದುಕೊಳ್ಳದವ ಇನ್ನೊಬ್ಬರನ್ನು ಪೂರ್ತಿ ಅರ್ಥ ಮಾಡಿಕೊಂಡಿದ್ದೇನೆ ಅನ್ನುವುದು, ನನಗೆಲ್ಲ ಅರ್ಥವಾಗುತ್ತದೆ ಎಂದು ಪದೇ ಪದೇ ಹೇಳುವುದು ಅರ್ಥಹೀನ ಅಷ್ಟೇ... ಆವೇಶದಲ್ಲಿ ವಿತಂಡವಾದ ಮಾಡುವವರಿಗೆ ಯಾವುದೇ ಕಾರಣಕ್ಕೆಪ್ರತಿಕ್ರಿಯೆ ನೀಡಬೇಡಿ....

 

ವಿವೇಚನೆ ಕಳೆದುಕೊಂಡು, ಪೂರ್ವಾಗ್ರಹಕ್ಕೆ ಒಳಗಾಗಿ ಮಾತನಾಡುವವರಿಗೂ, ಆವೇಶ ಬಂದಾಗ ಇಹವನ್ನೇ ಮರೆತು ತನ್ನ ತಾಳ್ಮೆ ಕಳೆದುಕೊಂಡು ಬೇರೆಯವರ ತಾಳ್ಮೆ ಕೆಡಿಸುವವರಿಗೂ ಕುಡುಕರಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಈ ಉದಾಹರಣೆ ಉತ್ಪ್ರೇಕ್ಷೆಯೂ ಅಲ್ಲ.

 

ಕುಡಿದವ ಬಾಯಿಗೆ ಬಂದ ಹಾಗೆ ಬಯ್ಯುತ್ತಾನೆ, ತಪ್ಪು ಹುಡುಕಿ ಮಾತನಾಡುತ್ತಾನೆ, ಮನೆಯವರಿಗೇ ಹೊಡೆಯುತ್ತಾನೆ, ಬಡಿಯುತ್ತಾನೆ, ಕಾಲು ಕೆರೆದು ಜಗಳಕ್ಕೆ ಬರುತ್ತಾನೆ. ಅವನ ಮೈಮೇಲೆ ದೈತ್ಯ ಆವಾಹನೆ ಆದ ಹಾಗೆ. ಮರುದಿನ ಬೆಳಗ್ಗೆ ಆತ ಬಹಳ ಸಜ್ಜನ, ಕಾಮ್ ಆಂಡ್ ಕ್ವಯಟ್, ಜಂಟಲ್ ಮ್ಯಾನ್. ಹಿಂದಿನ ದಿನ ನೆರೆಮನೆಯವನಿಗೆ ಬೈಗಳ ಪ್ರಸಾದ ನೀಡಿದವನೂ ಬೆಳಗ್ಗೆದ್ದು ನಗುತ್ತಾ ಗುಡ್ ಮಾರ್ನಿಂಗ್ ಹೇಳುತ್ತಾನೆ. ಕುಡುಕ ಮರುದಿನ ಬೆಳಗ್ಗೆ ಮಾಮೂಲಾಗುತ್ತಾನೆ. ಗುಡ್ ಮಾರ್ನಿಂಗ್ ಹೇಳಿದಲ್ಲಿಗೆ ಕುಡುಕು ಎಲ್ಲ ಮರೆತು ಸಹಜಾ ಆದ ಅಂತ ಅರ್ಥ. ಆತನಿಂದ ಬೈಗಳು ತಿಂದವ ಕುಡಿದಿರುವುದಿಲ್ಲ ತಾನೆ...? ಅವನ ಮನಸ್ಸಿಗೆ ನಾಟಿದ ನಿಂದನೆ ಡಿಲೀಟ್ ಆಗಲು ಆತ ಕಂಪ್ಯೂಟರ್ ಅಲ್ಲ ತಾನೆ?!!!

ಸಿಟ್ಟುಬಂದಾಗ ಆವೇಶಕ್ಕೊಳಗಾಗುವವರೂ ಅಷ್ಟೇ. ತಾವೇನು ಹೇಳುತ್ತೇವೆ, ಹೇಗೆ ನಿಂದಿಸುತ್ತೇವೆ, ವ್ಯವಸ್ಥೆಯನ್ನು, ಚಂದದ ಸಂಬಂಧವನ್ನು ಎಷ್ಟು ಕೀಳಾಗಿ ಕಾಣುತ್ತೇವೆ ಎಂಬ ವಿವೇಚನೆ ಆ ಕ್ಷಣಕ್ಕೆ ಅವರಿಗೆ ಇರುವುದಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಸಿಟ್ಟು ಇಳಿದಾಗ, ಆವೇಶ ತಗ್ಗಿದಾಗ ತಪ್ಪಿನ ಅರಿವಾಗುತ್ತದೆ (ಕೆಲವರಿಗೆ ಅದೂ ಆಗುವುದಿಲ್ಲ). ಆದರೆ ಅಷ್ಟೊತ್ತಿಗೆ ಅವರು ಏನು ಹೇಳಬಾರದೋ ಅದೆಲ್ಲ ಹೇಳಿ ಆಗಿರುತ್ತದೆ. ತುಂಬ ಮಂದಿಗೆ ತಾವು ಸಿಟ್ಟಿನಲ್ಲಿ ಏನು ಹೇಳಿದ್ದೇವೆ ಎಂಬುದೇ ನೆನಪಿರುವುದಿಲ್ಲ. ಇದ್ದರೂ ಒಪ್ಪಿಕೊಳ್ಳಲು ಇಗೋ (ಅಹಂ) ಅಡ್ಡಿಯಾಗುತ್ತದೆ.

ತುಂಬ ಹಿಂದಿನವರು, ಹಳ್ಳಿಯ ಮಂದಿ ಬದುಕಿನಲ್ಲಿ ಒಮ್ಮೆಯೂ ಸಾರಿ ಕೇಳದೆ, ಥ್ಯಾಂಕ್ಸ್ ಹೇಳದೆ ಗುಡ್ ಮಾರ್ನಿಂಗ್, ಗುಡ್ ನೈಟ್ ಹೇಳದೆ ಬದುಕಿದವರು. ಇವುಗಳನ್ನೆಲ್ಲ ಹೇಳದೆಯೂ ಬದುಕಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು. ಡೆಫಿನಿಶನ್, ಕ್ವೋಟ್ಸು, ಸ್ಟೇಟಸು ಮೆಸೇಜ್ ಇಲ್ಲದೆ ಸ್ನೇಹ ಸಂಬಂದ ಉಳಿಸಿಕೊಂಡವರು. ಮನಸ್ಥಿತಿಯೇ ಕೆಟ್ಟಾಗ ಹೇಳುವಾಗ ಗುಡ್ ಮಾರ್ನಿಂಗು, ಸಾರಿ, ಥ್ಯಾಂಕ್ಸುಗಳಿಗೆ ಅರ್ಥವೇ ಇರುವುದಿಲ್ಲ. ಪಾಲಿಸಲೂ ಆಗದ ವಿಚಾರಗಳನ್ನು ಸ್ಟೇಟಸ್ಸಿನಲ್ಲಿ ಹಾಕುವುದು, ಅವರಿವರಿಗೆ ಟಾಂಟ್ ಕೊಡುವ ಮಾತುಗಳನ್ನು ಫೇಸ್ಬುಕ್ಕಿನಲ್ಲಿ ಪೋಸ್ಟು ಮಾಡಿದಲ್ಲಿಗೆ ನಾವು ಬದಲಾದೆವು, ಶ್ರೇಷ್ಠರಾದೆವು, ಪುನೀತರಾದೆವು ಎಂಬಲ್ಲಿಗೆ ಬದುಕು ತಲುಪಿದೆ.

 

ನಾನೆಷ್ಟು ಬದಲಾದೆ, ನಾನೆಲ್ಲಿದ್ದೇನೆ, ನನ್ನ ಅರ್ಹತೆ, ಯೋಗ್ಯತೆ ಏನು? ಎಂದು ಯೋಚಿಸಲು, ಚಿಂತಿಸಲೂ ನಮಗೆ ಪುರುಸೊತ್ತಿಲ್ಲ. ಅವರಿವರ ವಿಮರ್ಶೆಯಲ್ಲೇ ಕಾಲ ಕಳೆದುಹೋಗುತ್ತದೆ...

 

ನೀವು ಪ್ರಚಾರವಿಲ್ಲದೆ ಒಂದು ಕೆಲಸ ಮಾಡಿ, ನಿಮ್ಮದೆ ಸ್ವಂತ ಬುದ್ಧಿಯ ಒಂದು ವಿಚಾರವನ್ನು ನಾಲ್ಕು ಜನರಲ್ಲಿ ಹಂಚಿಕೊಳ್ಳಿ, ನೀವೇ ನಾಲ್ಕು ಸಾಲು ಬರೆದು ಹಾಕಿ... ಬಹುತೇಕ ಮಂದಿ ನಿಮ್ಮ ಸ್ನೇಹಿತರೇ ಅಂತಹ ಪೋಸ್ಟುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ, ಕಮೆಂಟ್ ಮಾಡುವುದಿಲ್ಲ, ಅಷ್ಟೇ ಯಾಕೆ ದಾಕ್ಷಿಣ್ಯಕ್ಕೂ ಇಂಥದ್ದು ಓದಿದೆ ಮಾರಾಯ ಅಂತ ಬಾಯಿ ಬಿಟ್ಟು ಹೇಳುವುದಿಲ್ಲ. ಅದರ ಬದಲು ನೀವೊಬ್ಬ ವಿವಾದಿತ ವ್ಯಕ್ತಿಯಾಗಿ ಬದಲಾದರೆ, ನಿಮ್ಮ ಬಗ್ಗೆ ನಾಲ್ಕಾರು ಮಂದಿ ಆಡಿಕೊಂಡರೆ ಆಲಸ್ಯ ಬಿಟ್ಟು ಎಲ್ಲರೂ ಕೇಳಲು, ಹೇಳಲು, ಸಲಹೆ ನೀಡಲು ಬರುತ್ತಾರೆ. ಫೇಸ್ಬುಕ್ಕಿನಲ್ಲೂ ಅಷ್ಟೇ ಒಬ್ಬ ವ್ಯಕ್ತಿಯನ್ನು, ವ್ಯವಸ್ಥೆಯನ್ನು ಘಂಟಾಘೋಷವಾಗಿ ಯಾರಾದರೂ ಬಯ್ದು, ಟೀಕಿಸಿ ಪೋಸ್ಟು ಹಾಕಿದರೆ ಸಾಕು ನೂರುಗಟ್ಟಲೆ ಜನ ಮುಗಿಬಿದ್ದು ಆ ವ್ಯಕ್ತಿ, ವ್ಯವಸ್ಥೆಯ ಬಗ್ಗೆ ಅತ್ಯಂತ ತುಚ್ಛ ಪದಗಳಿಂದ ನಿಂದಿಸುತ್ತಾರೆ. ನಾಳೆ ಅದೇ ವ್ಯಕ್ತಿ ತಾನು ತಪ್ಪಾಗಿ ನಿನ್ನೆ ಅಂತಹ ಟೀಕೆ ಮಾಡಿದೆ ಎಂದು ಘೋಷಿಸಿದರೆ, ಅದನ್ನು ನೋಡಲು, ವೈರಲ್ ಮಾಡಲು ಅಲ್ಲಿ ಯಾರೂ ಉಳಿದಿರುವುದಿಲ್ಲ.

ನಾವು ಹಾಗೆಯೇ ಕಾಣುವುದಕ್ಕಿಂತ, ಸ್ವಚ್ಛವಾಗಿ ತೋರುವುದಕ್ಕಿಂತಲೂ ಕಾಣದ್ದರ ಬಗ್ಗೆ, ಊಹಿಸಿದ್ದರ ಬಗ್ಗೆ, ಅರ್ಥವಾಗದ್ದರ ಬಗ್ಗೆ ಮಾತನಾಡಬಲ್ಲವರು, ತೀರ್ಪು ನೀಡಬಲ್ಲವರು, ಅಧಿಕಾರಯುತವಾಗಿ ಮಾತನಾಡಬಲ್ಲವರು. ಕೊನೆಗೆ ನಾನು ಹೀಗೆಯೇ, ಯಾರನ್ನೂ ಕ್ಯಾರ್ ಮಾಡುವುದಿಲ್ಲ ಎಂದು ಹೇಳಿಕೊಂಡೇ ಓಡಾಡಬಲ್ಲವರು.

 

ಸುಮ್ಮನೇ ಯೋಚಿಸಿ, ಯಾರೂ ಯಾರನ್ನೂ ಕ್ಯಾರೇ ಮಾಡದೇ ಓಡಾಡಿಕೊಂಡಿದ್ದರೆ ಸಮಾಜ, ಜಗತ್ತು ಹೇಗಿದ್ದೀತು...

 

ಇಂತಹ ಸನ್ನಿವೇಶಗಳಲ್ಲಿ, ಇಂತಹ ಅಪಾರವಾದ ಅರ್ಥೈಸಿಕೊಳ್ಳುವಿಕೆಯಲ್ಲ ತನ್ನನ್ನು ತಾನು ಸಮರ್ಥಿಸುವುದು, ತನ್ನ ನಿಲುವುಗಳನ್ನು ಕಾರ್ಯರೂಪಕ್ಕ ತಾರದೆ ಘೋಷಿಸುವುದರಲ್ಲಿ, ವಾದ ಮಾಡುವುದರಲ್ಲಿ, ಪದೇ ಪದೇ ನಾನು ಹೀಗೆ, ನಾನು ಹೀಗೆ ಅಂತ ಪೋಸ್ಟರು ಹಿಡಿದುಕೊಂಡು ಓಡಾಡುದುವದರಲ್ಲಿ ಅರ್ಥವೇ ಇಲ್ಲ. ಸುಮ್ಮನೇ ಇನ್ನಷ್ಟು ನಿರೀಕ್ಷೆಗಳನ್ನು ಕಟ್ಟಿಕೊಂಡು ಇದ್ದ ಮನಃಶಾಂತಿಯನ್ನೂ ಕಳೆದುಕೊಳ್ಳಬೇಕಾದೀತು ಅಷ್ಟೇ... ತನಗೆ ಸರಿಕಂಡದ್ದು, ಇತರರಿಗೆ ಉಪದ್ರ ಆಗದ್ದು ಮಾಡಿಕೊಂಡು, ವಿತಂಡವಾದಿಗಳಿಗೆ ಉತ್ತರ ನೀಡದೆ, ತನಗೆ ಸರಿ ಅನ್ನಿಸಿದ್ದನ್ನು ಇತರ ನಾಲ್ಕು ಮಂದಿಗೆ ಸಾತ್ವಿಕವಾಗಿ ತಿಳಿಸುವ ಪ್ರಯತ್ನ ಮಾಡಿದರೆ ಸಾಕು. ನನ್ನಿಂದ ಯಾರಿಗೂ ಉಪಕಾರ ಆಗದೇ ಇದ್ದರೆ ಪರವಾಗಿಲ್ಲ, ನಾನು ಯಾರಿಗೂ ತೊಂದರೆ ಆಗಬಾರದು, ನಾನು ಯಾರಿಗೂ ಕಿರಿಕಿರಿ ಆಗಬಾರದು ಅಷ್ಟೇ... ಹಾಗಂತ ಯೋಚಿಸುವುದೇ ಈಗಿನ ಮಟ್ಟಿಗೆ ಸಮಕಾಲೀನತೆ!!!

-ಕೃಷ್ಣಮೋಹನ ತಲೆಂಗಳ (25.04.2021)

 

No comments: