ಕಾಣದ್ದನ್ನು ಕಂಡ ಭ್ರಮೆಯಲ್ಲಿ ಕಂಡದ್ದನ್ನು ಕಡೆಗಣಿಸಿದಲ್ಲಿ ಸತ್ತೇ ಹೋದ ಸತ್ಯ!

ತುಂಬ ಕಡೆ ನೋಡಿರಬಹುದು. ಕೊರೋನಾ ಇಲ್ಲ, ಇದೆಲ್ಲ ಕಪೋಲಕಲ್ಪಿತ, ನನಗೆಲ್ಲ ಗೊತ್ತು. ಕೊರೋನಾ ಹಾಗೆ ಬರುವುದಲ್ಲ... ನಾನು ಮಾಸ್ಕು ಹಾಕುವುದೂ ಇಲ್ಲ, ನನಗದರ ಅಗತ್ಯವೂ ಇಲ್ಲ, ಅದೃಷ್ಟ ಇದ್ದರೆ ನಾನು ಬದುಕುತ್ತೇನೆ... ಸಾಯುವುದೇ ಹಣೆಯಲ್ಲಿ ಬರೆದರೆ ಏನು ತಾನೇ ಮಾಡಲಾದೀತು ಅಂತ ಹೇಳಿಕೊಂಡು ತಿರುಗುವವರು... ನಿಮ್ಮ ಸುತ್ತಮುತ್ತಲೂ ಇದ್ದಾರು...


ಈ ಥರ ಪೂರ್ವಾಗ್ರಹದಿಂದ, ಅಪನಂಬಿಕೆಯಿಂದ ಮತ್ತು ಅಸಮಾಧಾನದಿಂದ ಬದುಕುವವರು ಮತ್ತು ತಮ್ಮ ಅಪೂರ್ಣ ಸಿದ್ಧಾಂತಗಳನ್ನು ಇಡೀ ಜಗತ್ತಿಗೇ ಅನ್ವಯಿಸಿ, ತಾವೂ ಸಮಾಧಾನದಿಂದ ಇರದೆ, ಇತರರನ್ನೂ ಸಮಾಧಾನದಿಂದ ಇರಲು ಬಿಡದೆ ಬದುಕುವವರು (ಇಂತಹ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಅಲ್ಪ ಸ್ವಲ್ಪ ಇರುತ್ತದೆ ಎಂಬುದೂ ಸುಳ್ಳಲ್ಲ) ಸಿಕ್ತುತ್ತಲೇ ಇರುತ್ತಾರೆ ಅಲ್ವ....


ನನಗೆ ಎಲ್ಲ ಗೊತ್ತಿಗೆ ಎಂಬ ಅಹಂನಿಂದಲೇ ನಮಗೆ ಎಲ್ಲ ಗೊತ್ತಾಗುವ ಅವಕಾಶದಿಂದ ನಾವು ವಂಚಿತರಾಗುತ್ತೇವೆ. ಅದು ನಮಗೆ ನಾವು ಮಾಡಿಕೊಳ್ಳುವ ಮೋಸದ ಹಾಗೆ. ಅಷ್ಟೇ...


ನನ್ನ ಮೂಗಿನ ನೇರಕ್ಕೆ ಇದ್ದಷ್ಟು ದಿನ, ನನ್ನನ್ನು ಪ್ರಶ್ನೆ ಮಾಡಲು ಬಾರದಷ್ಟು ದಿವಸ, ನನ್ನನ್ನು ತಿದ್ದಲು ಬಾರದಷ್ಟು ದಿವಸ ನೀನು ನನ್ನ ಪಾಲಿಗೆ ಆದರ್ಶ... ನನಗೆ ನಿನ್ನ ಪ್ರವೃತ್ತಿ ಆಗುವುದಿಲ್ಲ ಎಂದ ಅನ್ನಿಸಿದ ಕ್ಷಣದಿಂದ ನೀನು ನನಗೆ ಕಿರಿಕಿರಿ, ಅನಾವಶ್ಯಕ, ನೀನು ಅಪ್ರಸ್ತುತ ಮತ್ತು ನೀನು ಅಧಿಕಪ್ರಸಂಗಿ...


ಈ ಎರಡೂ ಉದಾಹರಣೆಗಳು ಆಗಾಗ ನಿಮ್ಮ ಅನುಭವಕ್ಕೂ ಬಂದಿರಬಹುದು. ಅಹಂ ಮತ್ತು ಕೆಟ್ಟ ಹಠ ಮತ್ತು ನನ್ನಲ್ಲಿನ್ನು ಬದಲಾಗಲು ಏನೂ ಉಳಿದಿಲ್ಲ ಎಂಬ ಭಯಂಕರ ಆತ್ಮವಿಶ್ವಾಸ ನಮ್ಮೊಳಗಿನ ವಿವೇಚನೆ ಮತ್ತು ಸಹನೆ ಎರಡನ್ನೂ ಸುಟ್ಟು ಹಾಕುತ್ತದೆ. ನಮ್ಮ ಮೂಡಿನ ನೇರಕ್ಕೆ, ಮೂಗಿನ ನೇರಕ್ಕೆ ತೆಗೆದುಕೊಳ್ಳುವ ನಿರ್ಧಾರಗಳೂ ಅಷ್ಟೇ, ಬಹುತೇಕ ಸಂದರ್ಭಗಳಲ್ಲಿ ವಸ್ತುಸ್ಥಿತಿಯನ್ನು ನಾವಾಗಿ ಮರೆ ಮಾಚಿ ನಮ್ಮ ಅಂತರಾತ್ಮವನ್ನು ವಂಚಿಸಿದ ಹಾಗೆ... ಕೆಟ್ಟ ಹಠವೊಂದನ್ನು ಸಾಧಿಸುವ, ಕೆಟ್ಟ ಅಹಂನಿಂದ ಹೊರಬರಲಾಗದ ಪರಿಸ್ಥಿತಿಯನ್ನು ಮತ್ತಷ್ಟು ಸಮರ್ಥಿಸಿದ ಹಾಗೆ, ಆ ಕ್ಷಣದ ಆವೇಶವನ್ನು ಪ್ರಜ್ವಲಿಸುವ ಹಠದಲ್ಲಿ ಅಪ್ರಸ್ತುತ ತೀರ್ಮಾನಗಳಿಗೆ ಬರುತ್ತೇವೆ.


ಆವೇಶ ಇಳಿದಾಗ ಮೂಡುವು ತಿಳಿವಳಿಕೆ, ಆವೇಶ ಮುಗಿದ ಬಳಿಕ ಪಡುವ ಸಂಕಟ ಹಾಗೂ ಆವೇಶದ ಪರಿಣಾಮಗಳ ಅನುಭವದ ಬಳಿಕ ಎಲ್ಲ ಮನದಟ್ಟಾದರೂ, ಮತ್ತೊಂದು ಆವೇಶ ಬಂದಾಗ ನಾವು ಅದೇ ರಾಕ್ಷಸಿ ಪ್ರವೃತ್ತಿಗೆ ಇಳಿಯುತ್ತೇವೆ. ಸಹನೆ ಮತ್ತು ವಿವೇಚನೆ ಎರಡನ್ನೂ ಕಳೆದುಕೊಂಡರೂ ಅಹಂ ತಣಿಯಿತೆಂಬ ಅಲ್ಪ ತೃಪ್ತಿಯ ಹಾಗೆ...


ವಿವೇಚನೆ ಕೈಕೊಟ್ಟಲ್ಲಿ, ವಿವೇಕ ಇಲ್ಲವಾದಲ್ಲಿ, ಊಹೆ, ಶಂಕೆ ಮತ್ತು ಚೌಕಟ್ಟಿನೊಳಗಿನ ಅದೇ ದೃಷ್ಟಿಕೋನಗಳ ಫಲಶೃತಿಗೆ ಮನಃಸ್ಥಿತಿ ಸಿಕ್ಕಾಗ ಅಲ್ಲಿ ವಾಸ್ತವಕ್ಕಿಂತಲೂ, ಸರಿ ತಪ್ಪುಗಳಿಗಿಂತಲೂ ನಮ್ಮ ಅಹಂ ನಮ್ಮ ಕಂಠದಿಂದ ಹೊರಡಿಸಿದ ಹಠವನ್ನ ತಣಿಸುವ ದಾಹ ಮಾತ್ರ ಮುಖ್ಯವಾಗಿರುತ್ತದೆ. ಆವೇಶಕ್ಕೆ ಸುದೀರ್ಘ ಸಂಬಂಧ, ಅರ್ಥೈಸುವಿಕೆ, ಇತಿಮಿತಿಗಳ ವಾಸ್ತವಿಕ ಪ್ರಜ್ನೆ ಎಲ್ಲ ಮರೆತ ಹೋಗುತ್ತದೆ. ಸುಮ್ಮನೆ ನೋಡಿ... ನೀವು ಹೌದೌದು ಅಂತ ಹೇಳುವಷ್ಟೂ ದಿವಸ, ಮರು ಮಾತಿಲ್ಲದೆ ಆದೇಶಗಳನ್ನು ಪಾಲಿಸುತ್ತಿರುವಷ್ಟೂ ದಿನ, ಪ್ರಶ್ನೆ ಮಾಡದೆ, ತಾರ್ಕಿಕ ವಾದಕ್ಕೆ ಇಳಿಯದಷ್ಟೂ ದಿವಸ ಯಾವುದೇ ಸಂಬಂಧ, ಕೆಲಸ, ಪ್ರಕ್ರಿಯೆ ಸರಾಗವಾಗಿಯೇ ಹೋಗುತ್ತಿರುತ್ತದೆ. ವಿಮರ್ಶೆಗೆ, ಪ್ರಶ್ನೆಗೆ ಇಳಿದರೆ, ಸೆಟೆದು ನಿಂತರೆ ಅಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ... ಅಷ್ಟೂ ದಿನದ ಚಂದದ ಸಾಮರಸ್ಯವೂ ಕೆಡುಕಿನ ಹಾಗೆ, ಒಳ್ಳೆಯತನ ನಾಟಕದ ಹಾಗೆ, ಸಾತ್ವಿಕತೆ ಕಪಟದ ಹಾಗೆ, ಹಿತವಚನಗಳು ಪ್ರವಚನಗಳ ಹಾಗೆ ಕೇಳಿಸುತ್ತದೆ, ಅನ್ನಿಸುತ್ತದೆ. ಮಾತ್ರವಲ್ಲ ಎಲ್ಲೋ ಮನಸ್ಸಿನ ಮೂಲೆಯಲ್ಲಿ ಕಟ್ಟಿಟ್ಟ ಸಂಶಯದ ಮೂಟೆಗಳು ಅಸಹನೆಯಾಗಿ ಹೊರ ಬರುತ್ತದೆ. ಆ ಕ್ಷಣದ ಆವೇಶಕ್ಕೆ, ಆ ಕ್ಷಣ ಹುಚ್ಚೆದ್ದು ಕುಣಿಯುವ ಅಹಂಗೆ ತಾರ್ಕಿಕತೆಯಾಗಲೀ, ಕೇಳಿಸುವ ಸಹನೆಯಾಗಲಿ ಎರಡೂ ಇರುವುದಿಲ್ಲ. ಆವೇಶದ ಕ್ಷಣಗಳಲ್ಲಿ ಬಾವಿಗೆ ಹಾರಿದವನಿಗೆ ಮತ್ತೊಂದು ಆವೇಶದಲ್ಲಿ ಮೇಲೆದ್ದು ಬರಲು ಸಾಧ್ಯವೇ ಎಂಬ ಸತ್ಯ ಮರೆತೇ ಹೋಗಿರುತ್ತದೆ.


ಬಹಳಷ್ಟು ಸಲ ಆವೇಶಗಳು ಅರಿವಿಗೆ ಬರುವುದಿದೆ. ಬದಲಾಗುವುದಾಗಿ ಹೇಳುವುದೂ ಇದೆ. ಆದರೆ ಯೋಚಿಸುವುದೇ ಬೇರೆ, ಕಾರ್ಯರೂಪಕ್ಕೆ ತರುವುದೇ ಬೇರೆ. ಹೊಸ ವರ್ಷದ ರೆಸೊಲ್ಯೂಶನ್ ಗಳ ಹಾಗೆ. ಹೇಳುವುದಕ್ಕಿಂತ ಮಾಡುವುದೇ ಸಾಮರ್ಥ್ಯ ಎಂಬುದು ನಮಗೆ ಅರಿವಿಗೆ ಬರುವಾಗ ತಡವಾಗಿರುತ್ತದೆ....


ಅಹಂ ಮತ್ತು ಹಠದ ಮತ್ತೊಂದು ಪರಿಣಾಮ ಸರಿ ತಪ್ಪುಗಳ ವ್ಯತ್ಸಾಗಳನ್ನೇ ಮರೆತುಬಿಡುವುದು. ಚಂದವಂದದ್ದು ಕೆಟ್ಟದಾಗಿಯೂ, ಒಳ್ಳೆಯವರು ದುಷ್ಟರಾಗಿಯೂ, ಸಿಹಿಯು ಕಹಿಯಾಗಿಯೂ ಕಾಣುವುದು. ಸತ್ಯವೆಂಬುದು, ವಾಸ್ತವ ಎಂಬುದು ಇರುವುದಕ್ಕೂ, ನಾವದನ್ನು ನೋಡುವುದಕ್ಕೂ, ಗ್ರಹಿಸುವುದಕ್ಕೂ, ಕಂಡುಕೊಳ್ಳುವುದಕ್ಕೂ ತುಂಬ ವ್ಯತ್ಯಾಸಗಳಿವೆ. ಎಲ್ಲವೂ ಆಯಾ ಸಮಯಕ್ಕೆ ಸರಿಯಾಗಿ ಗ್ರಹಿಕೆಗೆ ನಿಲುಕಿದರೆ ವಿಚಾರ ಇದ್ದ ಹಾಗೆಯೇ ತಲೆಗೆ ಹೊಕ್ಕೀತು. ಆದರೆ, ನೋಡಿದ ದೃಷ್ಟಿಯೇ ತಪ್ಪಾದ ಕೋನದಲ್ಲಿದ್ದರೆ ಗ್ರಹಿಸಿದ್ದೂ ತಪ್ಪಾಗಿ, ಅರ್ಥವಾಗಿದ್ದೂ ತಪ್ಪಾಗಿ ಕೊನೆಗೊಮ್ಮೆ ತಲೆಯಲ್ಲಿ ರಿಜಿಸ್ಟರ್ ಆಗುವುದೂ ತಪ್ಪೇ ಆಗಿರುತ್ತದೆ. ಅದು ಮತ್ತೆ ನಮ್ಮ ಯೋಚನೆಗಳ ಮೇಲೆ ಪರಿಣಾಮ ಬೀರುತ್ತದೆ....


ಇಂತಹ ದೃಷ್ಟಿಕೋನಗಳೇ ಸಾಮಾನ್ಯರನ್ನು ನಮ್ಮ ಕಣ್ಣಿಗೆ ಅಸಾಮಾನ್ಯರ ಹಾಗೆ ಹಾಗೂ ಅಸಾಮಾನ್ಯರನ್ನು ನಿಕೃಷ್ಟರ ಹಾಗೆ ಕಾಣುವಂತೆ ಮಾಡುತ್ತದೆ. ಸಾಮಾನ್ಯರೂ ಸಾಮಾನ್ಯರಾಗಿಯೇ ಇರುತ್ತಾರೆ, ಅಸಾಮಾನ್ಯರು ಅಸಾಮಾನ್ಯರೇ ಆಗಿರುತ್ತಾರೆ, ನಾವು ಅವರನ್ನು ನೋಡುವ, ಅರ್ಥ ಮಾಡುವು, ವಿಮರ್ಶೆ ಮಾಡುವ, ತುಲನೆ ಮಾಡುವ ಆರಾಧಿಸುವ ಹಾಗೂ ಯಾವತ್ತೋ ಒಮ್ಮೆ ಭ್ರಮನಿರಸನದಿಂದ ದೂಷಿಸುವ ಎಲ್ಲವೂ ನಮ್ಮ ನಮ್ಮ ಗ್ರಹಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಬದಲಾಗುಬಹುದು, ಬದಲಾಗುತ್ತದೆ ಕೂಡಾ. ನಮ್ಮ ದೃಷ್ಟಿಕೋನದ ಮೇಲೆ, ನಮ್ಮ ನಿರ್ಧಾರ ಸಾಮರ್ಥ್ಯದ ಮೇಲೆ, ನಮ್ಮ ನಂಬಿಕೆಗಳು ಸರಿಯೆಂಬ ಆತ್ಮವಿಶ್ವಾಸದಲ್ಲೇ ಏರು ಪೇರಾಗುವ ಸಂದರ್ಭಗಳು ಖಂಡಿತಾ ಇರುತ್ತವೆ. ಇದೇ ಕಾರಣಕ್ಕೆ ಒಂದು ವಿಷಯ, ಒಬ್ಬ ವ್ಯಕ್ತಿ, ಒಂದು ಪರಿಸ್ಥಿತಿ ಬೆಳಗ್ಗೊಂದು ರೀತಿ, ಸಂಜೆಯೊಂದು ರಾತ್ರಿ, ನಾಳೆ ಮತ್ತೊಂದು ರೀತಿ ಕಾಣಿಸುತ್ತದೆ. 


ಅದಕ್ಕೇ ಹೇಳಿದ್ದು... ಆತ್ಮವಿಶ್ವಾಸ ಬೇಕು, ಅತಿಯಾಗಬಾರದು. ಗರ್ವ ಬೇಕು, ಅಹಂ ಬೇಕು ಅದು ವಿವೇಚನೆಗೆ ಭಂಗ ತರಬಾರದು, ಘೋಷಣೆಗಳು ಬೇಕು ಅದು ಕಾರ್ಯರೂಪಕ್ಕೆ ಬಾರದ ಚುನಾವಣೆಯ ಪ್ರಣಾಳಿಕೆಯ ಥರ ಆಗಬಾರದು, ನಮ್ಮ ನಿರ್ಧಾರದ ಸಾಮರ್ಥ್ಯದ ಬಗ್ಗೆ ನಮಗೆ ಹೆಮ್ಮೆ ಬೇಕು. ಆದರೆ ಅದು ಪ್ರತಿದಿನ ಅಲ್ಲಾಡುತ್ತಾ ಇರುತ್ತದೆ ಎಂದಾದರೆ ಅದರ ಬಗ್ಗೆ ನಿಗಾ ಬೇಕು....


ತುಂಬ ಸರಳವಾಗಿ ಇದನ್ನು ಹೀಗೆ ಹೇಳಬಹುದು. ಬೆಳಗ್ಗಿನಿಂದ ಸಂಜೆ ವರೆಗೂ ನಮಗೆ ಬಾನಿನುದ್ದಕ್ಕೂ ಕಾಣುವ ಸೂರ್ಯ ಅವನೇ... ಬೆಳಗ್ಗೆ ಪೂರ್ವದಲ್ಲಿ ತಂಪಾಗಿ, ಮಧ್ಯಾಹ್ನ ನೆತ್ತಿಯ ಮೇಲೆ ಸುಡುತ್ತಾ, ಸಂಜೆ ಪಶ್ಚಿಮದಲ್ಲಿ ಮತ್ತೆ ಕೆಂಪಾಗಿ, ತಂಪಾಗಿ ಕಾಣಿಸುತ್ತಾನೆ. ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಆ ಖುಷಿಯನ್ನು ಆಸ್ವಾದಿಸುತ್ತಲೋ, ಮಧ್ಯಾಹ್ನ ಕೊಡೆ ಹಿಡಿದು ನಡೆಯುತ್ತಲೋ, ನೆರಳಿನ ಆಶ್ರಯ ಪಡೆಯುತ್ತಲೋ ಸೂರ್ಯನ ಪ್ರಖರತೆಯನ್ನು, ಸಂಜೆಯ ತಂಪನ್ನು ಸಮಾನವಾಗಿ ಅನುಭವಿಸುತ್ತೇವೆ. ಅದು ಬಿಟ್ಟು ಹೊತ್ತಿನ ಪರಿವೆ ಇಲ್ಲದೆ, ಸೂರ್ಯನ್ನು ದೂಷಿಸುವುದಕ್ಕೂ, ನಮ್ಮ ಮೂಗಿನ ನೇರಕ್ಕೆ ಸೂರ್ಯ ಸಂಚರಿಸುವುದಿಲ್ಲ ಎಂದು ಆವೇಶಕ್ಕೊಳಗಾಗುವುದಕ್ಕೂ ತುಂಬ ವ್ಯತ್ಯಾಸವಿದೆ... ಸೂರ್ಯನೆನ್ನುವುದು ಸತ್ಯ. ಸೂರ್ಯನ ಚಲನೆ, ಕಾಲಮಾನ, ಪ್ರಖರತೆ ಎಲ್ಲ ಪೂರ್ವನಿಗದಿಯಾಗಿರುವ ಸಂಗತಿಗಳು. ಸೂರ್ಯನ್ನು ಇಡಿಯಾಗಿ ಹಾಗೂ ಆಯಾ ಹೊತ್ತಿಗೆ ಅನುಗುಣವಾಗಿ ಅರ್ಥ ಮಾಡಿಕೊಳ್ಳುವುದು, ಅಪಾರ್ಥ ಮಾಡಿಕೊಳ್ಳುವುದು, ಬಿಸಿಲಿನ ಶಾಖಕ್ಕೆ ಬೇಕಾದ ಹಾಗೆ ಬದುಕುವುದು ನಮ್ಮ ಗ್ರಹಿಕೆಗೆ, ನಿರ್ಧಾರಕ್ಕೆ ಬಿಟ್ಟದ್ದು. ಗ್ರಹಿಕೆಯೇ ತಪ್ಪಾಗಿ ಮಧ್ಯಾಹ್ನ ಸೂರ್ಯ ಪ್ರಖರವಾಗಿ ಪ್ರಜ್ವಲಿಸಬಾರದು ಎಂಬ ಸಿದ್ಧಾಂತ ಹಿಡಿದುಕೊಂಡು ಹೊರಟರೆ ವಾಸ್ತವಕ್ಕಿಂತಲೂ ನಮ್ಮ ಗ್ರಹಿಕೆಗೆ ಸಿಕ್ಕಿದ್ದೇ ನಮ್ಮ ಪಾಲಿನ ಸತ್ಯ ಎಂಬುದು ವಿತಂಡವಾದ ಎಂದೇ ಹೇಳಬೇಕಾಗುತ್ತದೆ. ನಾವು ಅಂಗೀಕರಿಸದಿದ್ದರೂ, ನಾವು ಲೇಬಲ್ ಹಚ್ಚದಿದ್ದರೂ, ನಾವು ಕೊಡೆ ಹಿಡಿದರೂ, ಹಿಡಿಯದಿದ್ದರೂ ಸೂರ್ಯನೆಂಬುದು ಒಂದು ಸತ್ಯ. ಬೆಳಗ್ಗೆ ನೋಡಿ ಆತ ಕೆಂಪೆಂದೂ, ಮಧ್ಯಾಹ್ನ ಮಾತ್ರ ನೋಡಿ ಆಂತ ಹಳದಿ ಎಂದು ವಾದಿಸುವುದು ವಿತಂಡವಾದ. ಸಮಷ್ಟಿಯ ದೃಷ್ಟಿಕೋನದ ಕೊರತೆ ಹಾಗೂ ನಾನು ಹೇಳಿದ್ದು, ನಾನು ನೋಡಿದ್ದು, ನಾನು ಅಂದುಕೊಂಡದ್ದು ಮತ್ರ ಸತ್ಯ ಎಂದು ಚೌಕಟ್ಟಿನೊಳಗೆ ಕುಳಿತು ಪ್ರತಿಪಾದಿಸಿದ ಹಾಗೆ. 

ಕೊರೋನಾವೇ ಇಲ್ಲ, ನಾನು ಮಾಸ್ಕು ಧರಿಸುವುದಿಲ್ಲ, ನಾನು ಹೇಳಿದ್ದೇ ಸತ್ಯ ಎಂದು ಆರ್ಭಟಿಸಿದ ಹಾಗೆ... ಜಗತ್ತು ಕಂಡುಕೊಂಡ ಸತ್ಯ, ಪ್ರಾಜ್ನರು ಹೇಳಿಕೊಂಡ ವಾಸ್ತವವನ್ನು ಅಷ್ಟಿಷ್ಟು ನೋಡಿಕೊಂಡು, ಮತ್ತಷ್ಟು ನಾವೇ ಕಲ್ಪಿಸಿಕೊಂಡು, ಮತ್ತಷ್ಟು ಪೂರ್ವಗ್ರಾಹವನ್ನು ಅದಕ್ಕೆ ಬೆರೆಸಿಕೊಂಡು ಇವೆಲ್ಲದರ ಪಾಕವನ್ನು ಅಹಂ ಮತ್ತು ಕೆಟ್ಟ ಹಠದ ಕೈಗೆ ಕೊಡುವ ಬೆಳವಣಿಗೆ ಇದೆಯಲ್ವ... ನಮ್ಮನ್ನು ನಾವು ತಿದ್ದಿಕೊಳ್ಳಲು ಇರುವ ದೊಡ್ಡ ದಾರಿಗೆ ಬಂಡೆ ಕಲ್ಲು ಹಾಕಿದೆ ಹಾಗೆ, ಅಷ್ಟೆ...

-ಕೃಷ್ಣಮೋಹನ ತಲೆಂಗಳ.


No comments: