ಎಲ್ಲಿಯೋ, ಯಾರಿಗೋ ಬಂದ ಕೊರೋನಾ ನನ್ನ ವರೆಗೆ ತಲಪುವುದಿಲ್ಲ ಎಂಬ ಭ್ರಮೆ ಮತ್ತು ಅವಿವೇಕ!



ಕೊರೋನಾ ಎರಡನೇ ಅಲೆ ಗಂಭೀರವಾಗಿದೆ, ಈ ಸಲ ಸಾವು ನೋವು ತ್ವರಿತವಾಗಿದೆ, ಶವಸಂಸ್ಕಾರಕ್ಕೇ ಸ್ಥಳ ಸಿಗುತ್ತಿಲ್ಲ, ರೋಗಿಯಲ್ಲಿ ಕೋವಿಡ್ ಪತ್ತೆಯಾಗಿ ಚಿಕಿತ್ಸೆಗೆ ಕರೆದೊಯ್ಯುವ ಮೊದಲೇ ಸಾವು ಸಂಭವಿಸುತ್ತಿದೆ, ಆಮ್ಲಜನಕದ ಕೊರತೆಯಾಗಿದೆ. ಈ ಸಲ ಬಲಿಯಾದವರಲ್ಲಿ ಯುವಕರೇ ಹೆಚ್ಚು, ಸೋಂಕು ಪ್ರಸಾರ ವೇಗವಾಗಿದೆ...


ಇಂತಹ ಗಂಭೀರ ವಿಚಾರಗಳನ್ನು ಟಿ.ವಿ.ಪೇಪರಿನಲ್ಲಿ ಬಂದಾಗ ಭಯ ಹುಟ್ಟಿಸುವುದು, ಪ್ಯಾನಿಕ್ ಮಾಡುವುದು, ಟಿಆರ್ಪಿಗಾಗಿ ಗಿಮಿಕ್ ಅಂತ ಹೇಳ್ತೀರಿ, ಸರ್ಕಾರ ಹೇಳಿದರೆ ಅಲ್ಲಿ ರಾಜಕೀಯ ಹಿತಾಸಕ್ತಿ ಪ್ರಶ್ನೆ ಬರುತ್ತದೆ.  ಜಾಗ್ರತೆ ಆಗಿರಿ ಅಂತ ವೈದ್ಯರು ಮನವಿ ಮಾಡಿದರೆ ವೈದ್ಯಕೀಯ ಲಾಬಿ, ಲಸಿಕೆಯ ಲಾಬಿ, ಆಸ್ಪತ್ರೆಗಳ ಹಿತಾಸಕ್ತಿ ಎಂಬ ಟೀಕೆ ಬರುತ್ತದೆ....ಹಾಗಿದ್ದರೆ ಇನ್ಯಾರು ಹೇಳಬೇಕು? ಜಾಗೃತಿ ಹುಟ್ಟಿಸುವುದೆಂದರೆ ಹೇಗೆ? ಇನ್ನೆಷ್ಟು ಮಂದಿ ಇಲ್ಲವಾಗಬೇಕು?

ಹೌದು. ಕೊರೋನಾ ಎರಡನೇ ಅಲೆ ನಿಯಂತ್ರಣ, ಚಿಕಿತ್ಸೆ ಮತ್ತು ಶವಸಂಸ್ಕಾರ ಎಲ್ಲವೂ ಕಗ್ಗಂಟಾಗುತ್ತಿದೆ. ನಿಮಗೆ ಮಾಧ್ಯಮಗಳಲ್ಲಿ ಕಾಣುವ ವಿಚಾರಗಳು ಅಹಿತ ಎನಿಸಬಹುದು, ಭಯ ಹುಟ್ಟಿಸಬಹುದು, ಹೇಳುವ ಧಾಟಿ ಅಸಹನೆ ಸೃಷ್ಟಿಸಬಹುದು. ಆದರೆ ಇವೆಲ್ಲ ಸೃಷ್ಟಿಸಿದ ಸೆಟ್ಟುಗಳ ದೃಶ್ಯಗಳಲ್ಲ ತಾನೆ? ಅಂಕಿ ಅಂಶಗಳು, ಸತ್ತವರ ಗೋಳು, ಲಾಕ್ಡೌನ್ ಅಸಹಾಯಕತೆ, ಗುಳೇ ಹೋಗುವುದು, ಮರೆತು ಹೋದ ಶಾಲೆಯ ತರಗತಿಗಳು, ಕುಟುಂಬದ ಹತ್ತಾರು ಮಂದಿ ಸತ್ತದ್ದು, ಒಂದೇ ಆಂಬುಲೆನ್ಸಿನಲ್ಲಿ ಹತ್ತಾರು ಹೆಣಗಳನ್ನು ಕೊಂಡು ಹೋಗಿದ್ದು, ಸ್ಮಶಾನವೇ ಸಾಲದೆ ಹೊಸ ಹೊಸ ಸ್ಮಶಾನಗಳನ್ನು ಸೃಷ್ಟಿಸುತ್ತಿರುವುದು... ಇವೆಲ್ಲ ಕಟ್ಟುಕತೆಗಳ?

ಆಯ್ತು ಮಾಧ್ಯಮದ ವಿಚಾರ ಬಿಡಿ. ಇದೇ ಫೇಸ್ಬುಕ್ಕಿನಲ್ಲಿ ಎಷ್ಟು ಮಂದಿ ತಮ್ಮವರನ್ನು ಕಳೆದುಕೊಂಡ ಗೋಳನ್ನು ಹಂಚಿಕೊಂಡಿಲ್ಲ ಹೇಳಿ? ಎಷ್ಟು ಮಂದಿ ತಮ್ಮ ಕುಟುಂಬದವರಿಂದ ದೂರವಾದ ಸಂಗತಿ ಹೇಳಿಕೊಂಡಿಲ್ಲ? ನೀವೇ ನೋಡಿದ್ದೀರಲ್ಲ. ಹಾಗಿದ್ದರೆ ವೈಯಕ್ತಿಕ ನೋವುಗಳು, ಗೋಳಿನ ಕತೆಗಳು, ಅನುಭವದ ವಿಚಾರಗಳಾದರು ನಮಗೆ ಪಾಠ ಕಲಿಸಬೇಕೇ ಬೇಡವೇ? ಸತ್ತವರು ಬೇಜವಾಬ್ದಾರಿಯಿಂದ ಓಡಾಡಿ ಸತ್ತರೆಂದೋ, ಕೊರೋನಾವನ್ನು ಅರ್ಥ ಮಾಡಿಕೊಳ್ಳದೆ ಸೋತರೆಂದೋ ಹೇಳಲು ಹೊರಟಿರುವುದಲ್ಲ. ಸಾವಿರಾರು ಮಂದಿ ತಮಗರಿವಿಲ್ಲದೇ ಕೊರೋನಾಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಇಲ್ಲಿ ನಿರ್ಲಕ್ಷ್ಯ, ಮಾಹಿತಿ ಕೊರತೆ, ಸಂವಹನದ ಅಪಾರ್ಥಗಳು, ರಾಜಕೀಯ ಲಾಬಿ, ಇತರ ಹಿತಾಸಕ್ತಿಗಳ ಕಾರುಬಾರು ಎಲ್ಲವೂ ಇರಬಹುದು. ಪ್ರತಿ ದುರಂತದಲ್ಲೂ ಲಾಭ ಮಾಡಿಕೊಳ್ಳುವ ವರ್ಗವೇ ಇರುತ್ತದೆ, ಅದನ್ನು ಅಲ್ಲಗಳೆದು ಈ ಮಾತು ಹೇಳುತ್ತಿಲ್ಲ. ಇವೆಲ್ಲದರನ್ನು ಪಕ್ಕಕ್ಕಿಟ್ಟು ನೋಡಿದರೂ ಕೊರೋನಾದ ಅಸ್ತಿತ್ವ, ಅದರೊಳಗೆ ಹೊಕ್ಕು ಬಂದವರ ಅನುಭವ, ಜೀವ ಕಳೆದುಕೊಂಡ ಬಂಧುಗಳ ಸಂಕಟ ಇವು ಯಾವುವೂ ಸುಳ್ಳಲ್ಲ ತಾನೆ?

ಹಾಗಾದರೆ ನನಗೆ, ನಿಮಗೆ ಕೊರೋನಾದ ಬಗ್ಗೆ ಜಾಗ್ರತ ಬರಬೇಕಾದರೆ ಕೊರೋನಾ ನಮ್ಮನ್ನು ಸುತ್ತಿಕೊಂಡೇ ಆಗಬೇಕಾ? ಬೆಂಕಿ ಬಿಸಿ ಅಂತ ಮುಟ್ಟಿ ನೋಡಿದರೆ ಮಾತ್ರ ನಿಮಗೆ ಅರ್ಥ ಆಗುವಾದ ಅಥವಾ ನಿಮ್ಮೆದುರಿಗೇ ಬೆಂಕಿಯನ್ನು ಮುಟ್ಟಿಕೊಂಡವನ ಕೈ ಸುಟ್ಟಾಗ ಅದರಿಂದಲಾದರೂ ಪಾಠ ಕಲಿಯುತ್ತೀರ...?

ಸಂಶಯ ಬೇಕು, ವೈಚಾರಿಕ ಪ್ರಜ್ಞೆ ಬೇಕು, ಪ್ರಶ್ನಿಸುವ ಮನೋಭಾವ ಬೇಕು, ವಿರೋಧಿಸುವ ತಾಕತ್ತು, ತಪ್ಪುಗಳನ್ನು ಎತ್ತಿ ಹಿಡಿಯುವ ಆತ್ಮಸಾಕ್ಷಿ ಎಲ್ಲವೂ ಬೇಕು. ಆದರೆ ಅದು ದುರಭಿಮಾನ, ಅತಿ ಆತ್ಮವಿಶ್ವಾಸ ಆಗಬಾರದು. ಕೊರೋನಾ ಎಲ್ಲೋ ಬಂದಿರುವುದಲ್ಲ, ಯಾರನ್ನೋ ಕೊಂದಿರುವುದಲ್ಲ... ನಮ್ಮೂರಲ್ಲೇ ಇದೆ, ನಮ್ಮ ಪಕ್ಕದಲ್ಲೇ ಇದೆ, ನಮ್ಮವರೇ ಸತ್ತಿದ್ದಾರೆ.

ಬೇರೇನೂ ಬೇಡ ಸತ್ತವರ ಪಟ್ಟಿ ತೆಗೆದು ನೋಡಿ. ಕಳೆದ ವರ್ಷ ಇದೇ ಸಮಯದಲ್ಲಿ ನನಗೆ ಸರಿಯಾಗಿ ನೆನಪಿದೇ ಮೇರು ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಇದೇ ಫೇಸ್ಬುಕ್ಕು ವೇದಿಕೆಯಲ್ಲಿ ಪ್ರತಿದಿನ ಕೊರೋನಾ ಬಗ್ಗೆ ಜಾಗೃತರಾಗಿ ಅಂತ ಎಚ್ಚರಿಸುತ್ತಲೇ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದರು. ಕ್ರಮೇಣ ಅವರೂ ಸೋಂಕಿಗೆ ತುತ್ತಾದರು, ಜೀವನ್ಮರಣ ಹೋರಾಟ ನಡೆಸಿ ಒಂದೊಮ್ಮೆಗೆ ಗೆದ್ದು ಬರುತ್ತಾರೆ ಎನ್ನುವಷ್ಟರಲ್ಲಿ ಹೊರಟೇ ಹೋದರು... ಕೊರೋನಾ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಹಲವು ಮಂದಿ ಜಾಗ್ರತೆಯಲ್ಲಿ ಇದ್ದರೂ ತಮ್ಮ ಇತರ ಅನಾರೋಗ್ಯ ಕಾರಣಗಳಿಂದ ಕೊರೋನಾದಿಂದಾಗಿ ಇಲ್ಲವಾಗಿದ್ದಾರೆ.

ಸುರೇಶ್ ಅಂಗಡಿಯಂತಹ ರಾಜಕಾರಣಿ, ರಾಮುವಿನಂತಹ ನಿರ್ಮಾಪಕ, ಅಷ್ಟೇ ಯಾಕೆ ಸಚಿವರು, ಶಾಸಕರು, ಸಂಸದರು, ಧಾರ್ಮಿಕ ಮುಖಂಡರು, ನೂರಾರು ವೈದ್ಯರು, ಸುದ್ದಿ ಓದುವ ವಾರ್ತಾವಾಚಕರು, ವರದಿಗಾರರು, ಕ್ಯಾಮೆರಾಮನ್ ಗಳು, ಚಾಲಕರು, ಪೊಲೀಸರು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು ಮೃತಪಟ್ಟಿದ್ದಾರೆ. ನಮ್ಮ ಕಣ್ಣೆದುರಿಗೇ ಸತ್ತ ಹಾಗೆ ಜೀವ ಕಳೆದುಕೊಂಡಿದ್ದಾರೆ. ಪಕ್ಷವನ್ನಾಗಲೀ, ಸಂಪತ್ತನ್ನಾಗಲೀ, ಅಧಿಕಾರವನ್ನಾಗಲಿ, ಜಾತಿ, ಕೋಮು, ಧರ್ಮವನ್ನಾಗಲೀ, ಗಂಡು, ಹೆಣ್ಣು ಬೇಧವನ್ನಾಗಲೀ, ದೇಶ, ಪ್ರಾಂತ್ಯಗಳ ಪ್ರತ್ಯೇಕತೆಯನ್ನಾಗಲಿ, ಪ್ರಭಾವ, ತಾಕತ್ತು, ಧೈರ್ಯ, ಆತ್ಮವಿಶ್ವಾಸದ ಗಣನೆಯನ್ನಾಗಲೀ ಕೊರೋನಾ ತೆಗೆದುಕೊಂಡಿಲ್ಲ. ಕೊರೋನಾ ವೈರಸ್ಸಿಗೆ ಇವು ಯಾವುದರ ಭೇದವೂ ಇಲ್ಲ. ದುಡ್ಡು, ಅಧಿಕಾರ, ಪ್ರಭಾವ, ಅತ್ಯಂತ ಸುಧಾರಿತ ವೈದ್ಯಕೀಯ ವ್ಯವಸ್ಥೆ ಪಡೆಯುವ ತಾಕತ್ತು, ಹೆಸರು, ಪದವಿ, ಪ್ರಶಸ್ತಿ, ಬುದ್ಧಿವಂತಿಕೆ ಇದ್ದವರೆಲ್ಲರೂ ಕೂಡಾ ಕೊರೋನಾದಿಂದ ಸತ್ತಿದ್ದಾರೆ. ಇನ್ನು ಜನಸಾಮಾನ್ಯರಾದ ನಮ್ಮ ಪಾಡೇನು... ಯಾರಲ್ಲೂ ಪತ್ರಪಾತ ಮಾಡಿಲ್ಲ ಕೊರೋನಾ... ಇಷ್ಟು ಅರ್ಥವಾದರೆ ಸಾಕು ಸುಶಿಕ್ಷಿತರೆನಿಸಿಕೊಂಡ ನಮಗೆ ಎಚ್ಚರವಾಗಲಿಕ್ಕೆ.

 

ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ, ರೇಡಿಯೋದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲ ಜಾಗ್ರತೆ, ಜಾಗ್ರತೆ ಎಂಬ ಸಂದೇಶ ಬರುತ್ತಲೇ ಇರುತ್ತದೆ, ದಿನಾ ಹೇಳಿದ್ದನ್ನೇ ಹೇಳ್ತಾರೆ ಅಂತ ನಿರ್ಲಕ್ಷ್ಯಿಸುತ್ತಲೇ ಇರುತ್ತೇವೆ.

ಒಂದು ನೆನಪಿಡಿ ಕೊರೋನಾ ದೂರದಿಂದ ಗಾಳಿಯಲ್ಲೋ, ನೀರಿನಲ್ಲೋ, ಫೋನಿನಲ್ಲೋ, ಬಟ್ಟೆಯಲ್ಲೋ ಹರಡುವುದಿಲ್ಲ. ಒಂದು ವೇಳೆ ಹಾಗೇನಾದರೂ ಆಗಿದ್ದರೆ ಈ ಹೊತ್ತಿಗೆ ಅರ್ಧ ದೇಶ ಸ್ಮಶಾನವಾಗಿ ಬಿಡುತ್ತಿತ್ತು. ದೈಹಿಕವಾಗಿ ಅಂತರ ಪಾಲಿಸಿದರೆ, ಮಾಸ್ಕ್ ಧರಿಸಿದರೆ, ಸ್ವಚ್ಛತೆ ಪಾಲಿಸಿದರೆ ಸಾಮಾಜಿಕ ಓಡಾಟದ ಕುರಿತು ಸಂಯಮ ವಹಿಸಿದರೆ ಕೊರೋನಾ ಬಾರದಂತೆ ಪ್ರಯತ್ನ ಮಾಡಬಹುದು. ಬರುವುದೇ ಇಲ್ಲ ಅಂತಲ್ಲ. ಪ್ರಯತ್ನ ಮಾಡಬಹುದು. ಅಷ್ಟನ್ನೂ ಮಾಡಲು ಆಗುವುದಿಲ್ಲ ಎಂದಾದರೆ ಹೇಗೆ? ಲಾಕ್ಡೌನ್ ಆಗಿರುವದಕ್ಕೆ ನಾವೇ ಕಾರಣ. ನಮಗೆ ಸಂಯಮದಿಂದ ಹೇಳಿದರೆ ಅರ್ಥ ಆಗುವುದಿಲ್ಲ, ಸಡಿಲಿಕೆ ನೀಡಿದರೆ ದುರುಪಯೋಗ ಮಾಡುತ್ತೇವೆ, ಕಳ್ಳ ದಾರಿಗಳನ್ನು ಹುಡುಕುತ್ತೇವೆ. ಹಾಗಿರುವಾಗ ಕಡ್ಡಾಯ ಓಡಾಯ ನಿರ್ಬಂಧ ಮಾಡದೆ ಆಡಳಿತಕ್ಕೆ ಇನ್ನೇನು ಉಪಾಯ ಇತ್ತು ಹೇಳಿ...? ಕೆಲಸ ಕಳೆದುಕೊಂಡಿದ್ದೇವೆ, ಸಂಬಳ ಕಡಿತವಾಗಿದೆ, ದಿನದ ಆದಾಯಕ್ಕೂ ಕುತ್ತು ಬಂದಿದೆ... ಎಲ್ಲ ನಿಜ. ಆದರೆ ನಾಳೆ ಬದುಕಿ ಉಳಿದರೆ ತಾನೆ ಕೆಲಸ, ಸಂಬಳ, ಅಂತಸ್ತು ಎಲ್ಲ.

ಇದೊಂದು ರೀತಿ ಸಾರ್ವಜನಿಕ ಶೌಚಾಲಯವನ್ನು ಹಾಳು ಮಾಡಿದ ಹಾಗೆ. ನಮ್ಮ ಮನೆಯ ಶೌಚಾಲಯಕ್ಕೆ ಅಚ್ಚುಕಟ್ಟಾಗಿ ನೀರು ಹಾಕಿ ಬರುತ್ತೇವೆ. ಬಸ್ಟೇಂಡಿನಲ್ಲಿರುವ ಶೌಚಾಲಯದಲ್ಲಿ 100 ಮಂದಿ ಬಳಸಿದಾಗ ಅವರಲ್ಲಿ ಒಬ್ಬ ನೀರು ಹಾಕದೆ ಬಂದರೂ ನಂತರ ಹೋಗುವ ಎಲ್ಲರ ಪಾಲಿಗೆ ಶೌಚಾಲಯ ಅಸಜವಾಗಿ ಬಿಡುತ್ತದೆ. ಎಲ್ಲರೂ ನಿಯಮ ಪಾಲಿಸಿದರೆ, ಸ್ವಯಂ ನಿಯಂತ್ರಣ ಹೊಂದಿದರೆ, ಸಹಕಾರ ನೀಡಿದರೆ ಅತಿ ಕಟ್ಟುನಿಟ್ಟು, ಸಿಸಿ ಕ್ಯಾಮೆರಾ, ನಿಷೇಧಾಜ್ಞೆ ಯಾವುದೂ ಬೇಕಾಗಿಲ್ಲ. ಶೌಚಾಲಯ ಬಳಸುವ ಮನಸ್ಥಿತಿ ನಮ್ಮಲ್ಲಿ ಇರುವ ಕಾರಣಕ್ಕೆ ಕಡ್ಡಾಯಗಳು ನಮ್ಮನ್ನು ಕಾಡುತ್ತಲೇ ಇವೆ.

ಬದುಕಲು ಕೆಲಸ ಬೇಕು, ಸಂಬಳವೂ ಬೇಕು. ಆದರೆ ಸುಮ್ಮನೆ ಐಸಿಯುನಲ್ಲಿ ಮಲಗಿದ ರೋಗಿಗಳ ಬಗ್ಗೆ ಚಿಂತಿಸಿ. ಅವರ ಮನೆಯವರ ಪ್ರಾರ್ಥನೆ ಒಂದೇ ಆಗಿರುತ್ತದೆ, ಐಸಿಯುನಲ್ಲಿರುವ ರೋಗಿ ಒಮ್ಮೆ ಜೀವಂತವಾಗಿ ಮರಳಿದರೆ ಸಾಕು ಎಂಬುದು. ಉಸಿರು ಉಳಿದರೆ ಬದುಕು, ಬದುಕು ನೆಟ್ಟಗೆ ನಿಂತರೆ ಮುಂದಿನ ಯೋಚನೆ...

ಹಾಗಾಗಿ ಉಸಿರು ಕಳೆದುಕೊಳ್ಳುವಲ್ಲಿಯ ವರೆಗೆ ಕೊರೋನಾ ನಮ್ಮನ್ನು ಕಾಡಿದೆ, ಕಾಡುತ್ತಲೇ ಇದೆ. ಇಲ್ಲಿ ಒಂದಿಷ್ಟು ಅಹಿತಕರ ನಿರ್ಧಾರಗಳು, ಬದುಕನ್ನು ಕಟ್ಟಿ ಹಾಕುವ ನಿರ್ಬಂಧಗಳು, ಆತಂಕಗಳು ಕಾಡುವುದು ಸಹಜ. ತಜ್ಞರು, ಸರ್ಕಾರ, ವಿಶ್ಲೇಷಕರು ಎಲ್ಲರೂ ಹೇಳುತ್ತಿದ್ದಾರೆ ಒಂದಷ್ಟು ಸಂಯಮ ವಹಿಸಿದರೆ, ಲಸಿಕೆ ಪಡೆದರೆ, ಜಾಗ್ರತೆ ಮಾಡಿದರೆ, ಈ ಹಂತವನ್ನು ದಾಟಿ ಹೋದರೆ ನಾವು ಕೊರೋನಾವನ್ನು ಗೆಲ್ಲಬಹುದು ಅಂತ. ಈ ಮಾತುಗಳನ್ನು ಪಾಲಿಸದಿದ್ದರೆ, ಈ ಸೂಚನೆಗಳಿಗೆ ಮರ್ಯಾದೆ ಕೊಡದೇ ಹೊದರೆ ನಮ್ಮ ಬಳಿ ಕೊರೋನಾ ಗೆಲ್ಲಲು ಬೇರೇ ಏನು ಉಪಾಯ ಇದೆ ಹೇಳಿ....

ನಮ್ಮೊಳಗಿರುವ ಕೆಟ್ಟ ಆತ್ಮವಿಶ್ವಾಸ ಏನು ಅಂತ ಅಂದರೆ, ನನಗೆ ಕೊರೋನಾ ಬರುವುದಿಲ್ಲ, ನನ್ನ ಬಂಧುಗಳಿಂದ, ನನ್ನ ಕ್ಲೋಸ್ ಫ್ರೆಂಡುಗಳಿಂದ, ಸಹೋದ್ಯೋಗಿಗಳಿಂದ ನನಗೆ ಬರಲು ಸಾಧ್ಯವೇ ಇಲ್ಲ... ಎಲ್ಲೋ ಏನೋ ಆದರೆ, ಯಾರೋ ಸತ್ತರೆ ನಾನೇಕೆ ತಲೆ ಕೆಡಿಸಬೇಕು ಎಂಬ ಹಾಗೆ. ಯಾಕೆ ಇನ್ನೂ ಇ ಸಿನಿಕತನ ಅಂತ ಅರ್ಥ ಆಗುತ್ತಿಲ್ಲ. ಕೊರೋನಾ ಯಾರಿಗೂ ಯಾವಾಗಲೂ ಬರಬಹುದು, ಬೇರೆ ಅನಾರೋಗ್ಯ ಇದ್ದರೆ, ಉಸಿರಾಟದ ಸಮಸ್ಯೆ ಇದ್ದರೆ ಅತ್ಯಂತ ಜಾಗ್ರತೆ ವಹಿಸಬೇಕು... ಇವನ್ನೆಲ್ಲ ನಾನು ಹೊಸದಾಗಿ ಹೇಳಬೇಕಾಗಿಲ್ಲ, ನಿಮಗೆ ಕೇಳಿ ಕೇಳಿ ಬಾಯಿ ಪಾಠ ಬಂದಿರುತ್ತದೆ. ಆದಾಗ್ಯೂ ನನ್ನ ಲೆವೆಲಿಗೆ ಕೊರೋನಾ ಬರುವುದಿಲ್ಲ, ನಾನು ಮಾಸ್ಕ್ ಧರಿಸುವುದಿಲ್ಲ, ಲಸಿಕೆ ಪಡೆಯುವುದಿಲ್ಲ, ಓಡಾಟ ನಿಲ್ಲಿಸುವುದಿಲ್ಲ ಎಂಬ ಉದ್ಧಟತನ ಇದೆಯಲ್ಲ... ಅತ್ಯಂತ ಬೇಜವಾಬ್ದಾರಿಯ ಪರಮಾವಧಿ. ನನಗೆ ಕೊರೋನಾ ಬಾರದೇ ಇರಬಹುದು. ನಾನು ಸರಿ ಇದ್ದೇನೆ, ಮೀಡಿಯಾದವರಿಗೆ, ಡಾಕ್ಟ್ರುಗಳಿಗೆ ಮರ್ಲು ಅಂತ ಬಯ್ಯುತ್ತಾ ಇರುವ ನಮ್ಮದೇ ಭ್ರಮೆಯ ವರ್ತುಲ ಇದೆಯಲ್ವ ಅತ್ಯಂತ ಅಪಾಯಕಾರಿ.

ಇದನ್ನು ಇದಕ್ಕಿಂತ ಸರಳವಾಗಿ ಹೇಳಲು ಸಾಧ್ಯವೇ ಇಲ್ಲ. ಮನುಷ್ಯನಿಗೆ ವಿವೇಚನೆ ಅನ್ನುವುದನ್ನು ದೇವರು ಕರುಣಿಸಿದ್ದು ಸರಿ ತಪ್ಪುಗಳ ಲೆಕ್ಕಾಚಾರ ಮಾಡಲು, ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲು. ಆದರೆ ನಾವು ವಿವೇಚನೆಯನ್ನು ಪಕ್ಕಕ್ಕಿಟ್ಟು ವದಂತಿಗಳನ್ನು, ವಿತಂಡವಾದಗಳನ್ನು, ರಾಜಕೀಯ ಹೇಳಿಕೆಗಳನ್ನು, ವಾಟ್ಸಪ್ಪು, ಫೇಸ್ಬುಕ್ಕಿನಲ್ಲಿ ಬರುವ ಅತಿರೇಕದ, ನಿಜವಲ್ಲದ ಸುದ್ದಿಗಳನ್ನು ನಂಬುವಲ್ಲಿಗೆ, ಫಾರ್ವರ್ಡ್ ಮಾಡುವಲ್ಲಿಗೆ ಸೀಮಿತರಾಗಿದ್ದೇವೆ. ಕರ್ಕಶವಾಗಿ ಹೇಳುತ್ತಾರೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳನ್ನು, ರಸ್ತೆಯಲ್ಲಿ ಹೋಗಲು ಬಿಡುವುದಿಲ್ಲ ಎಂಬ ಕಾರಣಕ್ಕೆ ಪೊಲೀಸರನ್ನು, ವಿಷಯ ಗಂಭೀರವಾದರೆ ಆಸ್ಪತ್ರೆಗೆ ಸೇರಿ ಎಂದುದಕ್ಕೆ ವೈದ್ಯರನ್ನು, ಮನೆಯಲ್ಲೇ ಇರಿ ಎನ್ನುವುದಕ್ಕೆ ಸರ್ಕಾರವನ್ನು ಬಯ್ಯುತ್ತಾ ದಿನ ದೂಡುತ್ತೇವೆ!!! ನಮಗೆ ಅರಿವಿಲ್ಲದೆ ನಮ್ಮ ಮೂಲಕ ಇನ್ನೂ ಹತ್ತಾರು ಮಂದಿಗೆ ಕೊರೋನಾವನ್ನು ದಾಟಿಸಿರುತ್ತೇವೆ.

ಆಸ್ಪತ್ರೆಗೆ ಸೇರಿಸಬೇಡಿ ಅಲ್ಲಿ ಕೊಲ್ಲುತ್ತಾರೆ ಅಂತ ಒಬ್ಬ ಹೆಣ್ಣು ಮಗಳು ಅಳುತ್ತಾ ಹೇಳುವ ದೃಶ್ಯಗಳನ್ನು ಫಾರ್ವರ್ಡ್ ಮಾಡಿ ಇದು ನಿಜವ, ನಿಜವ ಅಂತ ಕೇಳುತ್ತೇವೆ. ಅದೇ ಜಾಲತಾಣದಲ್ಲಿ ಮಾಸ್ಕ್ ಧರಿಸಿ, ಓಡಾಡಬೇಡಿ, ಅಂತರ ಕಾಪಾಡಿ ಅಂತ ಎಷ್ಟೋ ಮಾಹಿತಿಯುಕ್ತ ವಿಚಾರಗಳ ವಿಡಿಯೋ ಬರುತ್ತದೆ, ಅದನ್ನು ನಾವು ಫಾರ್ವರ್ಡ್ ಮಾಡುವುದಿಲ್ಲ. ನೆಗೆಟಿವ್ ಸುದ್ದಿ, ಆರೋಪ, ದೂಷಣೆಗಳೇ ನಮ್ಮ ಗಮನ ಸೆಳೆಯುವುದು. ಸಹನೆಯಿಂದ, ಸಮಾಧಾನದಿಂದ, ಗಂಭೀರವಾಗಿ ನೀಡುವ ಸಲಹೆ, ಹಿತವಚನ, ಮಾಹಿತಿ ನಮಗೆ ರುಚಿಸುವುದಿಲ್ಲ, ಕಿವಿಗೆ ಇಳಿಯುವುದೇ ಇಲ್ಲ. ಇದೇ ನಮ್ಮ ಮನಃಸ್ಥಿತಿಯ ದುರಂತ.

 

ನನಗೆ ಕೊರೋನಾ ಬರುವುದಿಲ್ಲ, ನಾನು ಚಿರಂಜೀವಿ, ಇದೆಲ್ಲ ಯಾರೋ ಸೃಷ್ಟಿಸಿದ ಕಟ್ಟುಕಥೆ…” ಎಂಬ ಭ್ರಮೆ ಇನ್ನೂ ನಿಮ್ಮಲ್ಲಿ ಇದೆ, ಇರುತ್ತದೆ ಎಂದಾದರೆ ಜಗತ್ತಿನಲ್ಲಿ ನಿಮ್ಮನ್ನು, ನಮ್ಮನ್ನು ನಮ್ಮ ಮನೆಯವರನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ. ಕನಿಷ್ಠ ಕೊರೋನಾ ಗೆದ್ದು ಬಂದ ಸ್ನೇಹಿತರ ಜೊತೆ ಮಾತನಾಡಿ, ಆಗ ಗೊತ್ತಾಗುತ್ತದೆ, ಅದೆಷ್ಟರ ಮಟ್ಟಿಗೆ ಕಾಡುತ್ತದೆ ಅಂತ. ಆಗಲಾದರೂ ನಮಗೆ ಗಂಭೀರತೆ ಅರಿವಾಗಬಹುದು. ಎಲ್ಲವನ್ನು ಮಾಡಿಯೇ ತೇಳಿಯಬೇಕಾಗಿಲ್ಲ ನೋಡಿ, ಕೇಳಿ, ಓದಿಯೂ ತಿಳಿಯಬಹುದು.

 

ಈ ಸೋಂಕು ಆವರಿಸಿಕೊಂಡರೆ, ಅದು ಶ್ವಾಸಕೋಶಕ್ಕೆ ದಾಳಿ ಇಟ್ಟರೆ ಅದು ಗಂಭೀರ ಹೌದು. ಇಲ್ಲವಾದಲ್ಲಿ ಔಷಧಿಯಿಂದ ಅಥವಾ ಸಹಜವಾಗಿಯೇ ವಾಸಿಯಾತ್ತದೆ, ಕೊರೋನಾ ಮಾರಣಾಂತಿಕ ಅಂತ ಅಲ್ಲ. ಆದರೆ ವಿವಿಧ ಕಾರಣಗಳಿಂದ ಕೊರೋನಾದಿಂದ ನೂರಾರು ಸಾವುಗಳು ಸಂಭವಿಸುತ್ತಲೇ ಇವೆ. ಶ್ವಾಸಕೋಶಕ್ಕೆ ಹಾನಿ ಮಾಡುತ್ತವೆ. ಅವು ಯಾವುವೂ ಸುಳ್ಳಲ್ಲ. ಅವುಗಳ ಕಾರಣಗಳನ್ನು ದೂಷಿಸುವುದರಿಂದ, ವ್ಯವಸ್ಥೆಗೆ ಸಹಕಾರ ನೀಡದೇ ಇರುವುದರಿಂದ ನಾವೇನೂ ಸಾಧಿಸುವುದಕ್ಕಿಲ್ಲ, ವ್ಯವಸ್ಥೆಯನ್ನು ಮತ್ತಷ್ಟುಹಾಳು ಮಾಡುತ್ತಿದ್ದೇವೆ ಅಷ್ಟೇ...

 

ಕೊರೋನಾ ಬಾರದಂತೆ ತಡೆಯಲು ಕಷ್ಟವೇ ಇಲ್ಲ. ಅಂತರ, ಮಾಸ್ಕ್, ಸ್ವಚ್ಛತೆ ಹಾಗೂ ಲಸಿಕೆ ಪಡೆಯುವುದು ಇಷ್ಟೂ ಕಡಿಮೆ ಖರ್ಚಿನಲ್ಲಿ ಆಗುವಂಥದ್ದು, ಇವುಗಳನ್ನು ಮಾಡುವುದರಿಂದ ನಷ್ಟವೇನೂ ಇಲ್ಲ. ಲಸಿಕೆ ಅಡ್ಡಪರಿಣಾಮ ಯಾರ ಮೇಲೆ ಬೀರಬಹುದು ಎಂಬುದನ್ನೂ ತಜ್ಞರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಹಾಗಾಗಿ ಬಂದ ಮೇಲೆ ಗೋಳಾಡುವ ಬದಲು ಬಾರದಂತೆ, ನಮ್ಮ ಮೂಲಕ ಇನ್ನೊಬ್ಬರಿಗೆ ಹರಡದಂತೆ ಆದಷ್ಟು ಜಾಗ್ರತೆ ಮಾಡೋಣ. ಇವೆಲ್ಲದನ್ನೂ ಮೀರಿದ ಹಣೆಬರಹ, ವಿಧಿ, ಪರಿಸ್ಥಿತಿ ಎಂಬುದು ಪ್ರತ್ಯೇಕ ಇದೆ. ಆದರೆ ವಿವೇಚನೆ ಕಳೆದುಕೊಂಡರೆ ಅದು ನಮ್ಮದೇ ಸ್ವಯಂಕೃತಾಪರಾಧವಾದೀತೆ ವಿನಃ ಅದಕ್ಕೆ ಯಾರನ್ನೂ ದೂರಿ ಪ್ರಯೋಜನ ಇಲ್ಲ. ಪ್ರಾಣ ಅಂತ ಇರುವುದು ಒಂದೇ... ಎಷ್ಟೇ ಪ್ರಭಾವಶಾಲಿಯಾದರೂ ಸತ್ತ ಮೇಲೆ ಮತ್ತೆ ಹುಟ್ಟಿ ಬರಲು ಆಗುವುದಿಲ್ಲ, ನೆನಪಿರಲಿ. ಆ ನಷ್ಟಕ್ಕೆ ಬೆಲೆಯನ್ನೇ ಕಟ್ಟಲಾಗುವುದಿಲ್ಲ.. ಅಲ್ಲಿಯ ತನಕ ಹೋಗದ ಹಾಗಿರಲು ಎಲ್ಲರೂ ಸಹಕಾರ ನೀಡಬೇಕು ಅಷ್ಟೆ. ಅತಿ ಆತ್ಮವಿಶ್ವಾಸ, ಅತಿ ಬುದ್ಧಿವಂತಿಕೆ, ನಾನು ಹೇಳಿದ್ದೇ ಶ್ರೇಷ್ಠ ಎಂಬ ಭ್ರಮೆ ಆರೋಗ್ಯ ನಮ್ಮ ಕೈಯ್ಯಲ್ಲಿ ಇರುವ ತನಕ ಮಾತ್ರ, ಆರೋಗ್ಯವೇ ಕೈ ಕೊಟ್ಟರೆ, ದೇಹ ನಾವು ಹೇಳದಂತೆ ಕೇಳದಿದ್ದರೆ ಯಾವ ಅಹಂಕಾರವೂ ನಮ್ಮನ್ನು ರಕ್ಷಿಸಲಾಗದು, ಆಗ ನಾವು ಯೋಚನೆಗಳು ಮಾತ್ರ, ದೇಹವಾಗಿರುವುದಿಲ್ಲ, ನಮ್ಮ ಯಾವ ವಿತಂಡವಾದಗಳೂ ಅಲ್ಲಿ ಕೆಲಸಕ್ಕೆ ಬರುವುದಿಲ್ಲ, ಅಷ್ಟು ತಿಳಿದಿದ್ದರೆ ಸಾಕು!

-ಕೃಷ್ಣಮೋಹನ ತಲೆಂಗಳ (01.05.2021)

No comments: