ಕಲ್ಲು ಬಿಸಾಡದೇ ಬಿದ್ದ ಮಾವಿನ ಹಣ್ಣು ಹೆಕ್ಕಿ ತಂದ ನೆನಪುಗಳು...
ಪೇಟೆಯಲ್ಲೇ ಹುಟ್ಟಿ ಬೆಳೆದ ತುಂಬ ಮಕ್ಕಳಿಗೆ ಇವತ್ತು ಹಾಲು ಉತ್ಪಾದನೆ ಹೇಗೆ ಆಗುತ್ತದೆ ಎಂದೇ ಗೊತ್ತಿಲ್ಲ! “ನಂದಿನಿಯವರು ಹಾಲು ಕೊಡ್ತಾರೆ” ಅಂತ ಹೇಳ್ತಾರೆ, ಹಾಗಿದ್ರೆ, ನಂದಿನಿ ಫ್ಯಾಕ್ಟರಿಯಲ್ಲಿ ಹಾಲು ತಯಾರಾಗ್ತದೆ ಅಂತ ಮಕ್ಳು ಅಂದುಕೊಂಡಿದ್ದಾರು...!
ಹಾಗಿದ್ದ ಮೇಲೆ ಮಾವಿನ ಹಣ್ಣನ್ನು ನಾವೇ ಮರದಡಿಗೆ ಹೋಗಿ
ಹೆಕ್ಕಿ ತಂದು ಕೆತ್ತಿ ತಿನ್ನುವ ವಿಚಾರ 5ಜಿ ಯುಗದ ಮಕ್ಳಿಗೆ ಗೊತ್ತಿದ್ದೀತೇ? ಗೊತ್ತಿಲ್ಲ. ಟಿ.ವಿ.ಯಲ್ಲಿ, ಯೂಟ್ಯೂಬ್ ಚಾನೆಲ್ಲುಗಳಲ್ಲಿ, ಇನ್
ಸ್ಟಾದಲ್ಲಿ ನೋಡಿರಲೂ ಬಹುದು... ಪರಂಪರೆಯ ವಿಚಾರಗಳನ್ನು... ಸೆಗಣಿ ಬಾಚುವುದು ಹೇಗೆ, ಚಿಮಿಣಿ
ದೀಪ ಉರಿಸುವುದು ಹೇಗೆ, ಕಟ್ಟಿಗೆ ಒಲೆಗೆ ಬೆಂಕಿ ಹಚ್ಚುವುದು ಹೇಗೆ, ಬಚ್ಚಲು ಮನೆಯಲ್ಲಿ ನೀರು
ಕಾಯಿಸುವುದು ಹೇಗೆ, ಅಂಗಳಕ್ಕೆ ಸೆಗಣಿ ಸಾರಿಸುವುದು ಹೇಗೆ... ಇದೇ ಸಾಲಿಗೆ ಸಿಗುವ ಬಾಲ್ಯದ
ಬೇಸಿಗೆಯ ನೆನಪು ಅಂದರೆ ಮಾವಿನ ಹಣ್ಣು ಹೆಕ್ಕಲು ಗುಡ್ಡೆಗೆ ಹೋಗುವುದು...
ಬೇಸಿಗೆಯ “ದೊಡ್ಡ ರಜೆ”ಯ ನಿಘಂಟಿನ ಕಾಯಕಗಳಲ್ಲಿ ಮಾವಿನ ಹಣ್ಣು ಹೆಕ್ಕಲು
ಹೋಗುವುದೂ ಸಹ ಒಂದು. ಗುಡ್ಡೆಯ ದೇರದಲ್ಲಿ (ತುತ್ತತುದಿಯಲ್ಲಿ), ಗದ್ದೆಯ ಕಟ್ಟಪುಣಿಯ ಬದಿಯಲ್ಲಿ,
ಜಾಲಿಗೂ, ತೋಡಿಗೂ ನಡುವಿನ ಕುತ್ತಕಂಡೆ ಬರೆಯ ನಡುವಿನ ಭಾರಿ ಗಾತ್ರದ ಮರದಡಿಯಲ್ಲಿ, ಆಚೆ ಮನೆಯವರ
ಜಾಗಕ್ಕೆ ವಾಲಿಕೊಂಡು ಎರಡೂ ಮನೆಗಳವರ ನಡುವಿನ ಝೀರೋ ಲೈನಿನಲ್ಲಿರುವ ಗಂಡಿ (ಚರಂಡಿಯಲ್ಲಿ) ಬೀಳುವ
ಹಣ್ಣುಗಳನ್ನೆಲ್ಲ ಹೆಕ್ಕುವುದು ಮಕ್ಕಳ ಪಾಲಿಗೆ ಬೆಳ್ಳಂಬೆಳಗ್ಗೆ ಬಂದೊದಗುವ ಕಾರ್ಯಗಳು....
ಮಾವು ಹೆಕ್ಕುವುದು, ಗೇರು ಹಣ್ಣು ಕೊಯ್ಯುವುದು,
ಬಿದ್ದ ಗೇರು ಬೀಜ ಆಯುವುದು ಇವೆಲ್ಲ ಆ ಕಾಲದಲ್ಲಿ ಕೆಲವೊಮ್ಮೆ ಕಿರಿಕಿರಿ ಅನ್ನಿಸ್ತಾ ಇದ್ದದ್ದೂ
ಸುಳ್ಳಲ್ಲ. ಮೈ ಸುಡುವ ಸೆಕೆ, ಬೆವರು, ಗುಡ್ಡದಲ್ಲಿ ತಲೆ ಕಾಯುವಂಥ ಬಿಸಿಲು, ಪರಚುವ ಮುಳ್ಳು,
ಜಾರುವ ಚರಳು ಕಲ್ಲು, ಮುಂಗೈಗೆ ಒರೆಸುವ ತುರಿಸುವ ಬಳ್ಳಿ, ಬೆವರಿಗೆ ಅಂಟುವ ಧೂಳು, ಈ ಸವಾಲುಗಳ
ನಡುವೆ ಮುಳ್ಳು, ಸೊಪ್ಪುಗಳ ಬಲ್ಲೆಯ (ಪೊದೆಗಳ) ನಡುವೆ ಉದುರುವ ಮಾವಿನ ಹಣ್ಣು, ಗೇರು ಹಣ್ಣು
ಹೆಕ್ಕುವ ಕಾಯಕ ತುಸು ಉದಾಸೀನವನ್ನೇ ಉಂಟು ಮಾಡುತ್ತಿತ್ತು. ಆದರೂ ಹೆಕ್ಕಿ ತಂದ ಪುಟ್ಟ
ರಾಶಿಯನ್ನು ಕಂಡಾಗ, ಅದೇ ಹಣ್ಣಿನಿಂದ ಅಜ್ಜಿಯೋ, ಅಮ್ಮನೋ, ಅತ್ತೆಯೋ ಮಾಡುತ್ತಿದ್ದ ಮಾವಿನ
ರಸಾಯನ, ಸಿಹಿ ಗೊಜ್ಜು, ಜ್ಯೂಸ್ ಸೇವಿಸುವಾಗ ಹಣ್ಣು ಹೆಕ್ಕಿದಾಗಿನ ಆಯಾಸ ಮರೆಯುತ್ತಿದ್ದದ್ದೂ
ಸುಳ್ಳಲ್ಲ....
ಮಾತ್ರವಲ್ಲ, ಹೆಕ್ಕಿನ ಹಣ್ಣಿನ ಪೈಕಿ ನಮಗೆ ಇಷ್ಟವಾದ್ದನ್ನು
ಅಲ್ಲೇ (ತೊಳೆಯದೆ) ಕಚ್ಚಿ ತಿಂದು, ಗೊರಟು ಚೀಪಿ... ಅದರ ರಸ ಅಂಗಿಗೆಲ್ಲ (ಅಂಗಿ ಹಾಕುವುದು ಕಡ್ಡಾಯವೇನೂ
ಆಗಿರಲಿಲ್ಲ) ಹರಡಿ, ನಾವೇ ಒಂದು ಮಾವಿನ ಹಣ್ಣಿನ ಪರಿಮಳ ಹೊತು ಸಾಗುವುದು ಸಹ ಒಂದು ಗಮ್ಮತ್ತೇ
ಹೌದು. ಮಾವಿನ ಹಣ್ಣಿನ ಗೊರಟು ಚೀಪಿದ ಮೇಲೆ ಹಲ್ಲಿನ ಸಂಧಿಯೆಡೆ ಅದರ ನಾರು ಸಿಕ್ಕಿ ಫಜೀತಿ
ಮಾಡುವುದು ಕೂಡಾ ಒಂದು ವಿಶಿಷ್ಟ ಅನುಭವವೇ ಹೌದು.
ಆಗೆಲ್ಲ ಕಂಡ ಕಂಡ ವಿಚಾರಕ್ಕೆ ತೊಟ್ಟೆಯನ್ನೇ
(ಪ್ಲಾಸ್ಟಿಕ್ ಚೀಲ) ಬಳಸುತ್ತಿರಲಿಲ್ಲ. ಕೈಕಟ್ಟಿದ ಕುರುವೆ (ಅಡಕೆ ಹೆಕ್ಕಲು ಬಳಸುವ ಕೈ ಇರುವ
ಉರುಟು ಬುಟ್ಟಿ)ಯನ್ನೋ, ಅಡಕೆ ಹಾಳೆಯ ಪಡಿಗೆ, ಚಿಳ್ಳಿಯನ್ನೋ ಹಿಡ್ಕೊಂಡು ಗುಡ್ಡದತ್ತ ಹೋಗಬೇಕು,
ನಿಘಂಟಿನ ಹಣ್ಣು ಬೀಳುವ ಮರಗಳು ಮಕ್ಕಳಿಗೂ ಗೊತ್ತಿರ್ತವೆ. ಅಗಾಧ ವ್ಯಾಪ್ತಿ ಹೊಂದಿರುವ ಹಳೆ ಕಾಲದ
ಭಯಂಕರ ದೊಡ್ಡ ಮರಗಳ ಮೇಲೆಲ್ಲ ಉರಿ ಇರುವೆ (ಕೆಂಪಿರುವೆ, ಕಟ್ಟಿರುವೆ) ಭಯ ಇರುವ ಕಾರಣ ಮರಕ್ಕೆ
ಹತ್ತಿ ಹಣ್ಣು ಕೊಯ್ಯುವುದೂ ಸುಲಭದ ಮಾತಲ್ಲ. ಹಾಗಾಗಿ ಬಿದ್ದದನ್ನೇ ಹೆಕ್ಕುವುದು ಮಕ್ಕಳಿಗೂ
ಕಾಯಕ. ಅಷ್ಟು ಮಾತ್ರವಲ್ಲ. ಬೇಸಿಗೆ ರಜೆಯಲ್ಲಿ ಅತ್ತಿತ್ತಲಿನ ಮಕ್ಕಳ ಪಡೆ ಊರು ಸುತ್ತುವ ವೇಳೆ
ಯಾರ್ಯಾರ ಗುಡ್ಡದ ಹಣ್ಣುಗಳನ್ನು ಓಸಿಗೆ ಹೆಕ್ಕುವ ಅಪಾಯವೂ ಇರುವುದರಿಂದ ಬೆಳಗ್ಗೆ ಬೆಳಗ್ಗೆಯೇ
ಮಾವಿನ ಹಣ್ಣು ಹೆಕ್ಕಲು ಕಳಿಸುತ್ತಿದ್ದರು.
ನಮ್ಮ ಊರಲ್ಲಿದ್ದ ಸಣ್ಣಜ್ಜಿ ಬೇಸಿಗೆ ರಜೆಯಲ್ಲಿ
ಅಜ್ಜನಮನೆಗೆ ಬಂದ ಮಕ್ಕಳನ್ನು ಗದರಿ, ಕೈಗೆ ಬುಟ್ಟಿ ಕೊಟ್ಟು ಬೆಳಗ್ಗೆಯೇ ಹೊಗಿ ಹಣ್ಣು “ಹೆರ್ಕಿಗೊಂಡು ಬನ್ನಿ ನೋಡುವ” ಅಂತ ತಾಕೀತು ಮಾಡಿ ಕಳಿಸುತ್ತಿದ್ದರು....
ಗೊಣಗುತ್ತಲೇ ಮಕ್ಕಳೂ ಹೋಗಿ ಮೂಡ್ಲಾಗಿನ ಗುಡ್ಡೆಯ ಪಕ್ಕದ ಮಣ್ಣಿನ ಭಾರಿ ಅಗರಿನ (ಕಂಪೌಂಡಿನ)
ಕೆಳಗಿನ ಆಳದ ಗಂಡಿಗೆ (ಚರಂಡಿಗೆ) ಇಳಿದು ಹರ ಸಾಹಸ ಪಟ್ಟು ಹಣ್ಣು ಹೆಕ್ಕಿ ತರುತ್ತಿದ್ದೆವು.
ಮಧ್ಯಾಹ್ನಕ್ಕೆ ಗಾಂಧಾರಿ ಮೆಣಸು ನುರಿದು (ಜಜ್ಜಿ), ಒಗ್ಗರಣೆ ಹಾಕಿ ಮಾಡುವ ಗೊಜ್ಜಿ, ಘಮಘಮಿಸುವ
ಗುಳ ಇರುವ (ತಿರುಳಿರುವ) ಮಾವಿನ ಗೊರಟು ಸಹಿತದ ಸಾಸಮೆ (ಗೊಜ್ಜಿನಂಥದ್ದೇ ಪದಾರ್ಥ) ತಿನ್ನುವಾಗಿನ
ಖುಷಿಯೇ ಬೇರೆ. ನಮ್ಮ ಕಡೆ “ಊಟಕ್ಕೆ ಮಾವಿದ್ದರೆ ಒಂದು ಸೇರು ಅಕ್ಕಿಯ ಅನ್ನ ಜಾಸ್ತಿ ಬೇಕು” ಎನ್ನುವ ಮಾತು ಇದೇ ಕಾರಣಕ್ಕೆ ಹುಟ್ಟಿಕೊಂಡದ್ದು. ಮಾವಿನ ಹಣ್ಣಿನ
ಖಾದ್ಯಗಳಿದ್ದರೆ ಅನ್ನ ಹೊಟ್ಟೆಗೆ ಇಳಿಯುವುದು ಗೊತ್ತೇ ಆಗುವುದಿಲ್ಲ ಎಂಬ ಕಾರಣಕ್ಕೆ...
ಮಾವು ಹೆಕ್ಕುವಾಗಿನ ಅನುಭವಗಳೂ ಅಷ್ಟೇ ಚಂದ....
ಮೇಲೆ ನೋಡಿದರೆ ದಟ್ಟ ಪಚ್ಚೆ ಪಚ್ಚೆ ಎಲೆಗಳ ನಡುವೆ ಕಳಿತ ಹಣ್ಣುಗಳಷ್ಟೇನೂ ಕಾಣುವುದಿಲ್ಲ. ಆದರೆ,
ಕೆಳಗೆ ತರಗೆಲೆಗಳ ನಡುವೆ, ಬಲ್ಲೆಯ ಎಡೆಯಲ್ಲಿ ಅಲ್ಲೊಂದು ಇಲ್ಲೊಂದು ಅಂತ 20-30 ಹಣ್ಣುಗಳು ಹೆಕ್ಕಲೇನೋ
ಮೋಸವಿರುವುದಿಲ್ಲ. ಹಣ್ಣು ಹೆಕ್ಕುವ ತಾಣಕ್ಕೆ ತಲುಪಿದಾಗ ಕಾಣುವುದು ಒಂದೋ ಎರಡೋ ಹಣ್ಣುಗಳು
ಮಾತ್ರ.... ಅವನ್ನೂ ಅಷ್ಟೇ... ಹೆಕ್ಕಿ ತಿರುಗಿಸಿ ನೋಡಿದಾಗ ಅರ್ಧ ಕೊಳೆತದ್ದು, ಅರ್ಧ ಬಾವಲಿ
ತಿಂದದ್ದು, ಅರ್ಧ ಕಲ್ಲುರುಣಿ ಆದದ್ದು (ಕಲ್ಲಿನಂಥ ರಚನೆ ಕಾಣುವುದು), ಹೀಗೆ.. ಬೇರೆ ಬೇರೆ
ಕಾರಣಕ್ಕೆ ರಿಜೆಕ್ಟ್ ಆಗುವುದೂ ಇದೆ. ಎಲ್ಲ ಸರಿಯಾಗಿದ್ದು, ನೋಡಲಿಕ್ಕೂ ಚಂದ ಇದ್ದರೂ ಕೈಯ್ಯಲ್ಲಿ
ಚೋಲಿ ಸಿಗಿದಾಗ (ಸಿಪ್ಪೆ ಸುಲಿದಾಗ) ಹುಳಗಳ ನಾಟ್ಯ ವೈಭವದೊಂದಿಗೆ ಅಷ್ಟೂ ಹಣ್ಣು ಅಕ್ಕಚ್ಚಿನ
ಬಾಲ್ದಿ ಸೇರುವ ಸಂದರ್ಭಗಳೂ ಇವೆ....!
ಒಂದು ಹಣ್ಣು ಅಗೋ ಅಲ್ಲಿ ಕಂಡಿತು ಅಂತ ಹೆಕ್ಕಲು
ಹೋದಾಗ, ಅದರ ಬಕ್ಕೆ ಮತ್ತೊಂದು, ಸಮೀಪದ ಪೊದೆಯ ಗೆಲ್ಲಿನ ನಡುವೆ ಇನ್ನೊಂದು, ಅದು ಕೈಗೆ ಸಿಕ್ಕಾಗ
ಕೆಳಗೆ ಮಳೆ ನೀರಿನ ಚರಂಡಿಯ ಕಲ್ಲಿನೆಡೆ ಮತ್ತೊಂದು, ಅಲ್ಲಿಂದ ಮೇಲೆ ನೋಡಿದಾಗ, ತರಗೆಲೆಗಳ ನಡುವೆ
ಇಣುಕುವ ಇನ್ನೆರಡು ಹಣ್ಣುಗಳು, ಆಚೆ ಮನೆಯವರ ಹಿತ್ತಿಲಿಗೆ ಉದುರಿದ ಮತ್ತೂ ನಾಲ್ಕು ಹಣ್ಣು...
ಹೀಗೆ... ಅಲ್ಲೊಂದು, ಇಲ್ಲೊಂದು ಅಂತಲೇ ಬುಟ್ಟಿಗೇ ಸೇರುತ್ತಾ ಸೇರುತ್ತಾ 20-30 ಹಣ್ಣುಗಳು
ದೊಡ್ಡ ದೊಡ್ಡ ಮರದಡಿ ನಿರಾಯಾಸವಾಗಿ ಸಿಗುತ್ತವೆ. ಕಾಡು ಜಾತಿಯ ಇಂತಹ ಕಾಟು ಮಾವುಗಳು ಯಾವುದನ್ನು
ತಯಾರಿಸಲು ಸೂಕ್ತ ಅಂತ ಹಿರಿಯರಿಗೂ ಗೊತ್ತಿರ್ತದೆ. ಅಜ್ಜಿಯಂದಿರು, ಅತ್ತೆಯಂದಿರು, ಚಿಕ್ಕಮ್ಮ,
ದೊಡ್ಡಮ್ಮಂದಿರಿಗೂ ಬೇಸಿಗೆಯಲ್ಲಿ ಹಪ್ಪಳ ಮಾಡುವುದರ ಜೊತೆ ಇಂತಹ ಹಣ್ಣುಗಳ ಖಾದ್ಯಗಳು,
ಮಾಂಬುಳಗಳು, ರಸಾಯನಗಳು, ಸಾರು, ಗೊಜ್ಜು, ಮಾಡುವುದು, ಉಪ್ಪು ನೀರಿನಲ್ಲಿ ಅದ್ದಿ ಇಡುವುದು
(ಕಾಯಿಯನ್ನು) ಇತ್ಯಾದಿ ಬಿಝಿ ಬಿಝಿ ಕೆಲಸಗಳಿರುತ್ತವೆ....
ಹೆಕ್ಕುವುದು, ಅವನ್ನು ತಂದು ಮನೆಗೊಪ್ಪಿಸುವುದಷ್ಟೇ
ಮಕ್ಕಳಿಗಿರುವ ಕೆಲಸ. ಎಂತದ್ದೇ ಆಗಲಿ.... ಗೊತ್ತಿದ್ದೋ , ಗೊತ್ತಿಲ್ಲದೆಯೋ ದೊಡ್ಡ ರಜೆಯಲ್ಲಿ
ಅಜ್ಜನಮನೆಯಲ್ಲಿ ಮಕ್ಕಳೆಲ್ಲ ಒಂದೆಡೆ ಸೇರುವುದು, ಯಾವುದೇ ಡೆಡ್ ಲೈನ್ ಇಲ್ಲದೆ ರಜೆ ಮುಗಿಯುವ
ತನಕ ಆನ್ ಲೈನ್, ಸೋಶಿಯಲ್ ಮೀಡಿಯಾ ಮಣ್ಣು ಮಸಿಗಳ ಹಂಗಿಲ್ಲದೆ ರಜೆ ಮುಗಿಯುವ ತನಕ
ಆರಾಮವಾಗಿರುವುದು, ಜೊತೆಗೆ ಈ ರೀತಿ ಮಾವಿನ ಹಣ್ಣು ಹೆಕ್ಕುವುದು ಒಂದು ಕಾಲದ ಚಂದದ ನೆನಪುಗಳು.
ಇವತ್ತು ಎಷ್ಟು ಮಕ್ಕಳಿಗೆ ರಜೆಯಲ್ಲಿ ಗುಡ್ಡ, ತೋಟ ಅವಕಾಶ ಸಿಗ್ತದೆ? ಎಷ್ಟು ಮಂದಿಗೆ ಮರದಡಿ ಉದುರುವ ಹಣ್ಣನ್ನು ಕಾಣಲು
ಸಾಧ್ಯಾವಾಗುತ್ತದೆ? ಎಷ್ಟು ಮಕ್ಕಳಿಗೆ ಮಾವು ಉದುರಿದಾಗ ಫ್ರೆಶ್ ಆಗಿ ತರಗೆಲೆಗಳಲ್ಲಿ
ನಗು ನಗುತ್ತಾ ಕೂತಿರುವುದನ್ನು ಕಾಣಲು ಸಾಧ್ಯವಾಗುತ್ತದೆ...? ಯೋಚಿಸಿ ನೋಡಿ. ಎಲ್ಲವೂ ಅಚ್ಚುಕಟ್ಟಾಗಿ ಆನ್
ಲೈನಿನಲ್ಲೇ ಮನೆ ಬಾಗಿಲಿಗೇ ಬರುವಾಗ, ಮಾಲುಗಳಲ್ಲಿ, ಸೂಪರ್ ಬಝಾರುಗಳಲ್ಲಿ ನೀಟಾಗಿ ಕೂತಿದ್ದು
ಅಲ್ಲಲ್ಲೇ ಪ್ಯಾಕ್ ಮಾಡಿ ಆನ್ ಲೈನ್ ಪೇ ಮಾಡಿ ತರುವಾಗ ಇಂಥ ಮೂಲ ನೋಟಗಳನ್ನು ಕಾಣಲು
ಸಾಧ್ಯವಾಗುತ್ತದೆ ಅಲ್ವ? ಇಂಥಹ ಸನ್ನಿವೇಶ ಸೃಷ್ಟಿಯಾಗಿದ್ದು ಒಳ್ಳೆಯದೋ, ಕೆಟ್ಟದ್ದೋ
ಗೊತ್ತಿಲ್ಲ. ಕಾಲದ ಓಘ ಹಾಗೂ ವರ್ತಮಾನದ ಅನಿವಾರ್ಯತೆ ಮತ್ತು ವ್ಯಸ್ತ ಎನಿಸಿದ ಬದುಕು ಇಷ್ಟೆಲ್ಲ
ಮಾಡಿದೆ.
ಬಿಸಿಲಿಗೆ ಹೋದರೆ ಸನ್ ಸ್ಟ್ರೋಕು, ಡಸ್ಟ್ ಅಲರ್ಜಿ,
ನಡೆದರೆ ಕಾಲು ನೋವು, ಬೆಳಗ್ಗಿನ ಮೈಂದು (ಮಂಜು) ಸೋಕಿದರೆ ಶೀತ, ತೋಡಿನ ನೀರು ಕುಡಿದರೆ ಜ್ವರ
ಬರುವ ಅಪಾಯದ ಮುನ್ನೆಚ್ಚರಿಕೆ, ವಾರಗಟ್ಟಲೆ ಅಜ್ಜಮನೆಯಲ್ಲಿ ಉಳಿಯಲು ಡ್ರಾಯಿಂಗ್ ಕ್ಲಾಸು, ಮ್ಯುಸಿಕ್,
ಕರಾಟೆ, ಸ್ವಿಮ್ಮಿಂಗ್ ಕ್ಲಾಸುಗಳಿಗೆ ರಜೆಯಾಗುವ ಭೀತಿ, ಹಳ್ಳಿಗಳಲ್ಲಿ ನೆಟ್ವರ್ಕ್ ಸಿಕ್ಕದೆ
ಹೊರಜಗತ್ತಿನಿಂದ ದೂರ ಉಳಿಯುವ ಬೇಸರ, ಮಾತ್ರವಲ್ಲ, ಕಾಡು, ಗುಡ್ಡ ಸುತ್ತಿ ಮಕ್ಕಳಿಗೇನಾದರೂ
ಕಷ್ಟವಾದರೆ ಎಂಬ ಟೆನ್ಶನ್ನು.... ಎಲ್ಲ ಸೇರಿ ಇಂತಹ ಪುಟ್ಟ ಪುಟ್ಟ ಖುಷಿಗಳಿಂದ, ಪ್ರಕೃತಿ ಸಹಜ
ಅನುಭೂತಿಗಳಿಂದ ಇಂದಿನ ಮಕ್ಕಳನ್ನು ದೂರು ಉಳಿಯುವಂತೆ ಮಾಡಿದೆ.... ಹಾಗಂತ ನನಗಂತೂ
ಅನ್ನಿಸುತ್ತದೆ. ಲೇಖನವನ್ನು ಯಾರದರೂ ಕೊನೆ ತನಕ ಓದಿದ್ದರೆ,
ದಯವಿಟ್ಟು ನಿಮ್ಮ ಬಾಲ್ಯದ ಬೇಸಿಗೆ ರಜೆಯ ನೆನಪುಗಳನ್ನು ಕಮೆಂಟ್ ಬಾಕ್ಸಿನಲ್ಲಿ ಕಮೆಂಟಿಸಿ,
ನೆನಪಿಗೊಂದು ಹೊಸು ಮೆಲುಕು ನೀಡಿ... ನಮಸ್ಕಾರ.
-ಕೃಷ್ಣಮೋಹನ ತಲೆಂಗಳ. (28.04.2022)
No comments:
Post a Comment